ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, July 9, 2022

Mahabharata Tatparya Nirnaya Kannada 22: 173-180

 

ಪೂರ್ವಂ ತೇನೋದಿತಂ ಯತ್ತಲ್ಲೋಕಾನ್ ಮೋಹಯತಾSಞ್ಚಸಾ ।

ಶರ್ವಂ ಪ್ರತಿ ತವಾಹಂ ತು ಕುರ್ಯ್ಯಾಂ ದ್ವಾದಶವತ್ಸರಮ್ ॥೨೨.೧೭೩॥

 

ತಪೋSಸುರಾಣಾಂ ಮೋಹಾಯ ಸುರಾಃ ಸನ್ತು ಗತಜ್ವರಾಃ ।

ಇತಿ ತಸ್ಮಾತ್ ತದಾ ಕೃಷ್ಣ ಏಕಾಹೇನ ಬೃಹಸ್ಪತಿಮ್ ॥೨೨.೧೭೪॥

 

ಆಜ್ಞಯಾ ಚಾರಯಾಮಾಸ ಕ್ಷಿಪ್ರಂ ದ್ವಾದಶರಾಶಿಷು ।

ದ್ವಾದಶಾಬ್ದಮಭೂತ್ ತೇನ ತದಹಃ ಕೇಶವೇಚ್ಛಯಾ ॥೨೨.೧೭೫॥

 

'ಅಸುರರನ್ನು ಮೋಹಿಸತಕ್ಕ ಭಗವಂತನಿಂದ ದೇವತೆಗಳು ನಿಶ್ಚಿಂತರಾಗಿರಲಿ' ಎನ್ನುವ ಅಭಿಪ್ರಾಯದಿಂದ, ‘ಅಸುರರನ್ನು ಮೋಹಿಸುವುದಕ್ಕಾಗಿ ನಾನೂ ಕೂಡಾ ಹನ್ನೆರಡು ವರ್ಷ ಪರ್ಯಂತ ನಿನ್ನ ಕುರಿತಾದ ತಪಸ್ಸನ್ನು ಮಾಡುವೆ’ ಎಂದು ರುದ್ರನನ್ನು ಕುರಿತು ಯಾವ ಕಾರಣಕ್ಕೆ ಹೇಳಲ್ಪಟ್ಟಿತ್ತೋ,  ಆ ಕಾರಣದಿಂದ ಹನ್ನೆರಡು ವರ್ಷಗಳ ತಪಸ್ಸನ್ನು ಮಾಡುವ ಸಲುವಾಗಿ  ಶ್ರೀಕೃಷ್ಣನು ಒಂದೇ ದಿವಸದಲ್ಲಿ ಬೃಹಸ್ಪತಿಯನ್ನು ತನ್ನ ಆಜ್ಞೆಯಿಂದ ಕೂಡಲೇ ಹನ್ನೆರಡು ರಾಶಿಗಳಲ್ಲಿ ಓಡಾಡಿಸಿದ. ಅದರಿಂದ ಆ ಒಂದು ದಿವಸವು ಕೇಶವನ ಇಚ್ಛೆಯಿಂದ ಹನ್ನೆರಡು ವರ್ಷಗಳಂತೆ ಪರಿಗಣಿತವಾಯಿತು.

[ಆಚಾರ್ಯರ ಈ ವಿವರಣೆಯಿಂದ  ಅನೇಕ  ವಿರೋಧ ಪರಿಹಾರವಾಗುತ್ತದೆ. ಭಾಗವತದಲ್ಲಿ ‘ಮೂರು ದಿನ ಹೋಗಿ ಬಂದ’ ಎಂದು ಹೇಳಿದಂತೆ ಕಾಣುತ್ತದೆ. ಹರಿವಂಶ ಹಾಗೂ ಇತರ ಕಡೆ ‘ಹನ್ನೆರಡು ವರ್ಷ ತಪಸ್ಸು ಮಾಡಿದ’ ಎಂದು ಹೇಳಿದಂತೆ ಕಾಣುತ್ತದೆ. ಪಾಂಡವರು ಕಾಡಿಗೆ ಹೋದಮೇಲೆ ಶ್ರೀಕೃಷ್ಣ ಹನ್ನೆರಡು ವರ್ಷ ತಪಸ್ಸು ಮಾಡಿದ ಎಂದು ತೆಗೆದುಕೊಂಡರೆ ವನಪರ್ವದ ವಿವರಣೆಗೆ ವಿರೋಧ ಬರುತ್ತದೆ. ಏಕೆಂದರೆ ಪಾಂಡವರು ಕಾಡಿನಲ್ಲಿದ್ದಾಗ ಶ್ರೀಕೃಷ್ಣ ನಡುವೆ ಬಂದು ಹೋಗುವ ವಿವರವನ್ನು ನಾವು ಕಾಣುತ್ತೇವೆ. ಹೀಗಾಗಿ ಕೃಷ್ಣ ತಪಸ್ಸು ಮಾಡಿರುವುದು ಖಗೋಳಶಾಸ್ತ್ರೀಯವಾಗಿ ಹನ್ನೆರಡು ವರ್ಷವಾದರೆ, ಜೀವಶಾಸ್ತ್ರೀಯವಾಗಿ ಒಂದೇ ದಿನ. ಒಂದೊಂದು ರಾಶಿಯಲ್ಲಿ ಒಂದು ವರ್ಷ ಇರತಕ್ಕ ಬೃಹಸ್ಪತಿ, ಒಂದೇ ದಿನದಲ್ಲಿ ಹನ್ನೆರಡು ರಾಶಿಗಳನ್ನು ಸಂಚಾರ ಮಾಡಿದ್ದರಿಂದ ಆ ಒಂದು ದಿನ ಖಗೋಳಶಾಸ್ತ್ರೀಯವಾಗಿ ಹನ್ನೆರಡು ವರ್ಷಕ್ಕೆ ಸದೃಶವಾಯಿತು].  

 

ಏಕಸ್ಮಿನ್ನಹ್ನಿ ಭಗವಾನ್ ರಾಶಿಂರಾಶಿಂ ಚ ವತ್ಸರಮ್ ।

ಕಲ್ಪಯಿತ್ವೋಪವಾಸಾದೀನ್ ಮನಸಾ ನಿಯಮಾನಪಿ             ॥೨೨.೧೭೬॥

 

ಮಾಸಬ್ರತಂ ಸಾರ್ದ್ಧಶತಶ್ವಾಸಕಾಲೈರಕಲ್ಪಯತ್ ।

ಮನಸೈವ ಸ್ವಭಕ್ತಾನಾಂ ದ್ವಾದಶಾಬ್ದವ್ರತಾಪ್ತಯೇ                   ॥೨೨.೧೭೭॥

 

ಆ ಒಂದು ದಿವಸದಲ್ಲಿ ಶ್ರೀಕೃಷ್ಣನು ಕೆಲವೊಂದು ಉಸಿರುಗಳನ್ನು ವರ್ಷವೆಂದು ಕಲ್ಪಿಸಿ, ಉಪವಾಸ ಮೊದಲಾದ ನಿಯಮಗಳನ್ನು ಅನುಸರಿಸಿ ತೋರಿದ. ಹನ್ನೆರಡು ವರ್ಷದ ವ್ರತದ ಲಾಭವನ್ನು ತೋರಿಸುವುದಕ್ಕೋಸ್ಕರ ತನ್ನ ಮನಸ್ಸಿನಲ್ಲಿಯೇ ಶ್ವಾಸಕಾಲಗಳಿಂದ ಮಾಸಾತ್ಮಕ ವ್ರತವನ್ನು ಕಲ್ಪಿಸಿದ.

[ ಹರಿವಂಶದಲ್ಲಿ ಈ ಕುರಿತು ಹೀಗೆ ಹೇಳಿದ್ದಾರೆ: ‘ಏಕಸ್ಮಿನ್ನೇಕದಾ ಮಾಸೇ ಭುಞ್ಜಾನೋ ನಿಯತಾತ್ಮವಾನ್ । ದ್ವಿತೀಯೇ ತ್ವಥ ಪರ್ಯಾಯೇ  ಭುಞ್ಜನ್ನೇಕೇನ ಕೇಶವಃ’ (ಭ. ಪ. ೮೪.೨೫)

ಮೇಲೆ ಹೇಳಿದ ಮಾಸಾತ್ಮಕ ವ್ರತದ ಸಮಯವನ್ನು  ಈರೀತಿ ಹೊಂದಿಸಿ ನೋಡಬಹುದು: ಒಂದು ದಿವಸ ಎಂದರೆ ೨೧,೬೦೦ ಉಸಿರುಗಳು. ಒಂದು ದಿನವನ್ನು ಹನ್ನೆರಡು ವರ್ಷ ಎಂದು ಕಲ್ಪಿಸಿದಾಗ ಒಂದು ವರ್ಷ ಎಂದರೆ ೧೮೦೦ ಉಸಿರು. ಒಂದು ತಿಂಗಳು ಎಂದರೆ ೧೫೦ ಉಸಿರು. ಹೀಗೆ ಆ ಒಂದು ದಿವಸವನ್ನು ಹನ್ನೆರಡು ವರ್ಷವೆಂಬಂತೆ ಪರಿಗಣಿಸಿ, ಉಸಿರಿನ ಮಾಪನದಂತೆ ಮಾಸವನ್ನು ಪರಿಗಣಿಸಿ, ಆ ಮಾಸಮಾಸಗಳಲ್ಲಿ ಭಗವಂತ ಯಾಗ ಮಾಡಿದ. (ಇಲ್ಲಿ ದೇವರು ಹೇಗೆ ಯಾಗ ಮಾಡಿದ ಎನ್ನುವುದು ನಮಗೆ ತಿಳಿಯುತ್ತದೆ. ಭಗವಂತ ಅನುಸರಿಸಿದ ಉಸಿರಿನ ಕಾಲವನ್ನು ನಾವು ಮಾಸ ಕಾಲಕ್ಕೆ ವಿಸ್ತರಿಸಿಕೊಂಡು ಆ ಪ್ರಕಾರ ಅನುಷ್ಠಾನವನ್ನು ಮಾಡಬೇಕು) ]

 

ತತ್ರಾಸ್ಯ ಗರುಡಾದ್ಯಾಶ್ಚ ಪರಿಚರ್ಯ್ಯಾಂ ಸ್ವಪಾರ್ಷದಾಃ ।

ಚಕ್ರುರ್ಹೋಮಾದಿಕಾಶ್ಚೈವ ಕ್ರಿಯಾಶ್ಚಕ್ರೇ ಜನಾರ್ದ್ದನಃ ।

ಸ್ವಾತ್ಮಾನಂ ಪ್ರತಿ ಪಾಪಾನಾಂ ಶಿವಾಯೇತಿ ಪ್ರಕಾಶಯನ್ ॥೨೨.೧೭೮॥

 

ಆ ಸಂದರ್ಭದಲ್ಲಿ ಗರುಡನೇ ಮೊದಲಾದ ಪರಮಾತ್ಮನ ಸೇವಕರು ಭಗವಂತನ ಸೇವೆಯನ್ನು ಮಾಡಿದರು. ಪಾಪಿಷ್ಠರಿಗೆ ‘ಶಿವನನ್ನುದ್ದೇಶಿಸಿ ತಪಸ್ಸು ಮಾಡಿದೆ’ ಎಂದು ತೋರಿಸಲು ಕೃಷ್ಣ ಹೋಮ ಮೊದಲಾದ ಕ್ರಿಯೆಗಳಿಂದ ತನ್ನನ್ನು ತಾನೇ ಪೂಜೆ ಮಾಡಿಕೊಂಡ. (ಆದರೆ ಕಾಣುವವರಿಗೆ ಅದು ಸದಾಶಿವನ ಪೂಜೆ ಎನ್ನುವಂತೆ ಕಾಣುತ್ತಿತ್ತು).

[ಹರಿವಂಶದಲ್ಲಿ ಯಾರು ಭಗವಂತನ ಸೇವೆ ಮಾಡಿದರು ಎನ್ನುವ ವಿವರ ಕಾಣಸಿಗುತ್ತದೆ: ‘ಗರುಡಃ ಕಾಶ್ಯಪಸುತ ಇನ್ಧನಾನಿ ಸಮಾಚಿನೋತ್  । ಹೋಮಾರ್ಥಂ ವಾಸುದೇವಸ್ಯ ಚರತಸ್ತಪ ಉತ್ತಮಮ್ । ಚಕ್ರರಾಜೋSಥ ಪುಷ್ಪಾಣಿ ಸಞ್ಚಿನೋತಿ ತದಾ ಹರೇಃ । ದಿಕ್ಷು ಸರ್ವಾಸು ಸರ್ವತ್ರ  ರರಕ್ಷ ಜಲಜಸ್ತದಾ । ಖಡ್ಗ ಆಹೃತ್ಯ ಯತ್ನೇನ ಕುಶಾನ್ ಸುಬಹು ಶಸ್ತದಾ ।  ಗದಾ ಕೌಮೋದಕೀ ಚೈವ ಪರಿಚರ್ಯಾಂ  ಚಕಾರ ಹ ಧನುಃಪ್ರವರಮತ್ಯುಗ್ರಂ ಶಾಙ್ಗಂ ದಾನವಭೀಷಣಮ್ । ಸ್ಥಿತಂ ಹಿ ಪುರುತಸ್ತಸ್ಯ ಯಥೇಷ್ಟಂ ಭೃತ್ಯವತ್ ಸ್ವಯಮ್’ (೮೩.೨೦-೨೩) ‘ಜುಹೋತಿ ಭಗವಾನ್ ವಿಷ್ಣುರೇಧೋಭಿರ್ಬಹುಭಿಃ ಸದಾ । ಆಜ್ಯಾದಿಭಿಸ್ತದಾ ಹವ್ಯೈರಗ್ನಿಂ ಸಮ್ಪೂಜ್ಯ ಮಾಧವಃ’ (೨೪). ಈ ಮಾತಿನ ಸಾರವನ್ನು ಆಚಾರ್ಯರು ಸಾರ ಸಂಗ್ರಹವಾಗಿ ಸೇವೆಯನ್ನು ಎಲ್ಲರೂ ಕೂಡಾ ಮಾಡಿದರು ಎಂದು ಹೇಳಿದ್ದಾರೆ. ಗರುಡ ಕಟ್ಟಿಗೆಗಳನ್ನು ತಂದ. ಸಾಕ್ಷಾತ್ ಕಾಮದೇವ ಪುಷ್ಪಗಳನ್ನು ತಂದ. ಶಂಖಾಭಿಮಾನಿ ಅನಿರುದ್ಧ ಎಲ್ಲಾ ದಿಕ್ಕುಗಳಲ್ಲಿ ರಕ್ಷಿಸಿದ. ಶಾರ್ಙ್ಗ ಅಭಿಮಾನಿನಿಯಾದ ಲಕ್ಷ್ಮೀದೇವಿಯೂ ಕೂಡಾ ದರ್ಭೆ ಮೊದಲಾದವುಗಳನ್ನು ತಂದು, ಎಲ್ಲಾ ಸೇವಯನ್ನು ಮಾಡಿದಳು].

 

ಏವಂ ಸ್ಥಿತಂ ತಮರವಿನ್ದದಲಾಯತಾಕ್ಷಂ ಬ್ರಹ್ಮೇನ್ದ್ರಪೂರ್ವಸುರಯೋಗಿವರಪ್ರಜೇಶಾಃ ।

ಅಭ್ಯಾಯಯುಃ ಪಿತೃಮುನೀನ್ದ್ರಗಣೈಃ ಸಮೇತಾ ಗನ್ಧರ್ವಸಿದ್ಧವರಯಕ್ಷವಿಹಙ್ಗಮಾದ್ಯಾಃ ॥೨೨.೧೭೯॥

 

ಈರೀತಿಯಾಗಿ ತಪಸ್ಸಿನಲ್ಲಿರುವ, ಕಮಲದಂತೆ ಕಣ್ಗಳುಳ್ಳ ಆ ಪರಮಾತ್ಮನಲ್ಲಿಗೆ ಬ್ರಹ್ಮ-ಇಂದ್ರ ಮೊದಲಾಗಿರುವ ಎಲ್ಲಾ ದೇವತೆಗಳೂ, ಪಿತೃದೇವತೆಗಳು, ಪ್ರಜಾಪತಿಗಳು, ಬ್ರಹ್ಮರ್ಷಿಗಳು ಮೊದಲಾದವರ ಸಮೂಹದಿಂದ ಕೂಡಿದವರಾಗಿ  ಗಂಧರ್ವರು, ಸಿದ್ಧರು, ಯಕ್ಷರು ಎಲ್ಲರೂ ಕೂಡಾ ಬಂದರು.

 

ಶರ್ವೋsಪಿ ಸರ್ವಸುರದೈವತಮಾತ್ಮದೈವಮಾಯಾತಮಾತ್ಮಗೃಹಸನ್ನಿಧಿಮಾಶ್ವವೇತ್ಯ ।

ಅಭ್ಯಾಯಯೌ ನಿಜಗಣೈಃ ಸಹಿತಃ ಸಭಾರ್ಯ್ಯೋ ಭಕ್ತ್ಯಾsತಿಸಮ್ಭ್ರಮಗೃಹೀತಸಮರ್ಹಣಾಗ್ರ್ಯಃ ॥೨೨.೧೮೦॥

 

ಎಲ್ಲಾ ದೇವತೆಗಳ  ಮನದೇವರಾದ, ತನ್ನ ದೈವವೂ ಆಗಿರುವ ಪರಮಾತ್ಮನು ತನ್ನ ಮನೆಯ ಸನ್ನಿಧಿಗೆ (ಕೈಲಾಸ ಪರ್ವತದ ಸನ್ನಿಧಿಗೆ) ಬಂದಿದ್ದಾನೆ ಎಂದು ತಿಳಿದ ರುದ್ರನೂ ಕೂಡಾ, ಭೂತಗಣಗಳಿಂದ ಕೂಡಿಕೊಂಡು, ಪತ್ನಿಯೊಂದಿಗೆ ಅತ್ಯಂತ ಸಂಭ್ರಮದಿಂದ ಎಲ್ಲಾ ಪೂಜಾ ಸಾಮಗ್ರಿಗಳೊಂದಿಗೆ ಬಂದು ಭಕ್ತಿಯಿಂದ ಪರಮಾತ್ಮನನ್ನು ಎದುರುಗೊಂಡ.

[ ಹರಿವಂಶದಲ್ಲಿ ಈ ವಿವರ ಕಾಣಸಿಗುತ್ತದೆ: ‘ದ್ರಷ್ಟುಂ ಹರಿಂ ಲೋಕಹಿತೈಷಿಣಂ ಪ್ರಭುಂ ಯಯೌ ಭವಾನ್ಯಾ ಸಹ ಭೂತಸಙ್ಘೈಃ’ (೮೫.೯)]

No comments:

Post a Comment