ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 10, 2022

Mahabharata Tatparya Nirnaya Kannada 22-181-187

 

ಅಭ್ಯೇತ್ಯ ಪಾದಯುಗಳಂ ಜಗದೇಕಭರ್ತ್ತುಃ ಕೃಷ್ಣಸ್ಯ ಭಕ್ತಿಭರಿತಃ ಶಿರಸಾ ನನಾಮ ।

ಚಕ್ರೇ ಸ್ತುತಿಂ ಚ ಪರಮಾಂ ಪರಮಸ್ಯ ಪೂರ್ಣ್ಣಷಾಡ್ಡ್ಗುಣ್ಯವಿಗ್ರಹವಿದೋಷಮಹಾವಿಭೂತೇಃ ॥೨೨.೧೮೧॥

 

ತುಂಬಿರುವ, ಜ್ಞಾನ ವೈರಾಗ್ಯ ಮೊದಲಾದ ಗುಣಗಳೇ ಮೈವೆತ್ತು ಬಂದಿರುವ, ದೋಷವಿಲ್ಲದ, ಐಶ್ವರ್ಯವನ್ನು ಹೊಂದಿರುವ, ಎಲ್ಲಕ್ಕೂ ಮಿಗಿಲಾದ, ಜಗತ್ತಿಗೇ ಮುಖ್ಯ ಒಡೆಯನಾದ ಕೃಷ್ಣನ ಪಾದಗಳೆರಡನ್ನು ಹೊಂದಿದ ಸದಾಶಿವ,  ಭಕ್ತಿಯಿಂದ ಕೂಡಿಕೊಂಡು, ತಲೆಯಿಂದ  ನಮಸ್ಕರಿಸಿದ (ಸಾಷ್ಟಾಂಗ ನಮಸ್ಕಾರ ಮಾಡಿದ).  ಉತ್ಕೃಷ್ಟವಾದ ಸ್ತುತಿಯನ್ನು ಮಾಡಿದ.

[ಹರಿವಂಶದಲ್ಲಿ ಶಿವಸ್ತುತಿ ಕುರಿತಾಗಿ ಹೀಗೆ ಹೇಳಿದ್ದಾರೆ: ‘ಕ ಇತಿ ಬ್ರಹ್ಮಣೋ ನಾಮ ಈಶೋSಹಂ ಸರ್ವದೇಹಿನಾಮ್ । ಆವಾಂ ತವಾಙ್ಗಸಮ್ಭೂತೌ ತಸ್ಮಾತ್ ಕೇಶವನಾಮವಾನ್’ (೮೮.೪೮).  ಬ್ರಹ್ಮ ಹಾಗು ನನ್ನ ಒಡೆಯ ನೀನು. ಅದರಿಂದಾಗಿ ಕೇಶವ ಎಂದು ನಿನ್ನನ್ನು ಕರೆಯುತ್ತಾರೆ. (ಕ ಎಂದರೆ ಬ್ರಹ್ಮ, ಈಶ ಎಂದರೆ ಶಿವ). ‘ನಮಃ ಸರ್ವಾತ್ಮನಾ ದೇವ ವಿಷ್ಣೋ ಮಾಧವ ಕೇಶವ । ನಮಸ್ಕರೋಮಿ ಸರ್ವಾತ್ಮನ್ ನಮಸ್ತೇSಸ್ತು  ಸದಾ ಹರೇ । ನಮಃ ಪುಷ್ಕರನಾಭಾಯ ವನ್ದೇ ತ್ವಾಮಹಮೀಶ್ವರ’ (೮೮.೬೭). ‘ನಮೋ ವಿಷ್ಣೋ ನಮೋ ವಿಷ್ಣೋ ನಮೋ ವಿಷ್ಣೋ ನಮೋ ಹರೇ । ನಮಸ್ತೇ ವಾಸುದೇವಾಯ ವಾಸುದೇವಾಯ ಧೀಮತೇ’ (೯೦.೨೭) ].

 

ಕೃಷ್ಣೋsಪ್ಯಯೋಗ್ಯಜನಮೋಹನಮೇವ ವಾಂಞ್ಛಸ್ತುಷ್ಟಾವ ರುದ್ರಹೃದಿಗಂ ನಿಜಮೇವ ರೂಪಮ್ ।

ರೂದ್ರೋ ನಿಶಮ್ಯ ತದುವಾಚ ಸುರಾನ್ ಸಮಸ್ತಾನ್ ಸತ್ಯಂ ವದಾಮಿ ಶೃಣುತಾದ್ಯ ವಚೋ ಮದೀಯಮ್ ॥೨೨.೧೮೨॥

 

ವಿಷ್ಣುಃ ಸಮಸ್ತಸುಜನೈಃ ಪರಮೋ ಹ್ಯುಪೇಯಸ್ತತ್ಪ್ರಾಪ್ತಯೇsಹಮನಿಲೋsಥ ರಮಾsಭ್ಯುಪಾಯಾಃ ।

ಏಷ ಹ್ಯಶೇಷನಿಗಮಾರ್ತ್ಥವಿನಿರ್ಣ್ಣಯೋತ್ಥೋ ಯದ್ ವಿಷ್ಣುರೇವ ಪರಮೋ ಮಮ ಚಾಬ್ಜಯೋನೇಃ ॥೨೨.೧೮೩॥

 

ಅವ್ಯಕ್ತತಃ ಸಕಲಜೀವಗಣಾಚ್ಚ ನಿತ್ಯ ಇತ್ಯೇವ ನಿಶ್ಚಯ ಉತೈತದನುಸ್ಮರಧ್ವಮ್ ।

ಇತ್ಯುಕ್ತವತ್ಯಖಿಲದೇವಗಣಾ ಗಿರೇಶೇ ಕೃಷ್ಣಂ ಪ್ರಣೇಮುರತಿವೃದ್ಧರಮೇಶಭಕ್ತ್ಯಾ ॥೨೨.೧೮೪॥

 

ಕೃಷ್ಣನೂ ಕೂಡಾ ಯಾರು ತತ್ತ್ವಜ್ಞಾನಕ್ಕೆ ಯೋಗ್ಯರಲ್ಲವೋ, ಆ ರೀತಿಯ ಜನರಿಗೆ ಮೋಹನ ಮಾಡಬೇಕು ಎಂದು ಬಯಸುತ್ತಾ, ರುದ್ರನ ಹೃದಯದ ಒಳಗಡೆ ಇರುವ, ತನ್ನದೇ ಆದ ಅಂತರ್ಯಾಮಿ ರೂಪವನ್ನೇ ಸ್ತೋತ್ರ ಮಾಡಿದ. ರುದ್ರನು ಆ ಪರಮಾತ್ಮನ ಸ್ತೋತ್ರವನ್ನು ಕೇಳಿ, ಎಲ್ಲ ದೇವತೆಗಳನ್ನು ಕುರಿತು, ಹೀಗೆ ಹೇಳಿದ: ‘ನಾನು ಸತ್ಯವನ್ನು ಹೇಳುತ್ತೇನೆ ಕೇಳಿ. ಈ ನನ್ನ ಮಾತು ಬಹಳ ಪ್ರಮುಖವಾದುದು-ಕೇಳಿ, ಎಲ್ಲಾ ಸಜ್ಜನರೂ ಕೂಡಾ ನಾರಾಯಣನನ್ನು ಚಿಂತಿಸಬೇಕು. ಪರಮಾತ್ಮನನ್ನು ಹೊಂದಲು ರುದ್ರನಾಗಿರುವ ನಾನು, ಮುಖ್ಯಪ್ರಾಣ, ಲಕ್ಷ್ಮೀದೇವಿಯು ಸಾಧನಗಳು ಅಷ್ಟೇ.  ಇದು ಎಲ್ಲಾ ವೇದಾಂತದ ನಿರ್ಣಯದಿಂದ ಬಂದಿರುವುದು. ನನಗಾಗಲೀ, ಬ್ರಹ್ಮನಿಗಾಗಲೀ ನಾರಾಯಣನೇ ಧೇಯ್ಯ’ ಎಂದು.

‘ಪ್ರಕೃತಿಯಿಂದಲೂ, ಸಕಲ ಜೀವಗಣಗಳಿಗಿಂತಲೂ ನಾರಾಯಣನು ಯಾವಾಗಲೂ ಉತ್ಕೃಷ್ಟನಾಗಿದ್ದಾನೆ ಮತ್ತು ನಿತ್ಯನಾಗಿದ್ದಾನೆ. ಇದು ಎಲ್ಲಾ ವೇದದ ನಿಶ್ಚಯ. ಶ್ರೀಹರಿಯ ಸರ್ವೋತ್ತಮತ್ವವನ್ನು ನಿರಂತರವಾಗಿ ಸ್ಮರಣೆ ಮಾಡಿ’ ಎಂದು ಸಮಸ್ತ ದೇವತೆಗಳಿಗೆ ಗಿರೀಶನು ಹೇಳುತ್ತಿರಲು, ಎಲ್ಲಾ ದೇವತೆಗಳ ಸಮೂಹವು ಪರಮಭಕ್ತಿಯಿಂದ ಕೃಷ್ಣನಿಗೆ ನಮಸ್ಕಾರ ಮಾಡಿದರು.

[ಹರಿವಂಶದಲ್ಲಿ ಪರಮಾತ್ಮನ ಸ್ತೋತ್ರದ ಕುರಿತು ಹೀಗೆ ಹೇಳಿದ್ದಾರೆ: ‘ನಮೋ ಹರಾಯ ವಿಪ್ರಾಯ ನಮೋ ಹರಿಹರಾಯಾ ಚ । ನಮೋSಘೋರಾಯ ಘೋರಾಯ ಘೋರಘೋರಪ್ರಿಯಾಯ ಚ (೮೭.೧೭)    ಹರಾಯ ಹರಿರೂಪಾಯ ನಮಸ್ತೇ ತಿಗ್ಮತೇಜಸೇ । ಭಕ್ತಿಪ್ರಿಯಾಯ ಭಕ್ತಾಯ ಭಕ್ತಾನಾಮ್ ವರದಾಯಿನೇ’ (೨೧).

  ಶಿವನು ಅಲ್ಲಿ ನೆರೆದಿರುವ ಎಲ್ಲರನ್ನು ಕುರಿತು ಹೇಳಿರುವ ಮಾತು ಹೀಗಿದೆ: ‘ಹರಿರೇಕಃ ಸದಾ ಧ್ಯೇಯೋ ಭವದ್ಭಿಃ ಸತ್ವಮಾಸ್ಥಿತೈಃ ।  ನಾನ್ಯೋ ಜಗತಿ ದೇವೋSಸ್ತಿ ವಿಷ್ಣೋರ್ನಾರಾಯಣಾದೃತೇ । ಓಮಿತ್ಯೇವಂ ಸದಾ ವಿಪ್ರಾ ಪಠತ ಧ್ಯಾತ ಕೇಶವಮ್’(೮೯.೯)  ಸತ್ವಗುಣವನ್ನು ಹೊಂದಿರುವ ನೀವೆಲ್ಲರೂ ಕೂಡಾ ಪರಮಾತ್ಮನನ್ನು ಮಾತ್ರ ಧ್ಯಾನ ಮಾಡಬೇಕು. ನಾರಾಯಣನಿಗಿಂತ ಮಿಗಿಲಾಗಿರುವ ಒಬ್ಬ ದೇವತೆಯೂ ಇಲ್ಲ. ಓಂಕಾರ ಪ್ರತಿಪಾಧ್ಯನಾಗಿರುವ ನಾರಾಯಣನನ್ನು ಧ್ಯಾನ ಮಾಡಿ, ಅವನನ್ನು ಕುರಿತು ಹಾಡಿರಿ- ಎನ್ನುತ್ತಾನೆ ಶಿವ].

 

ಉಕ್ತೈರನೈಶ್ಚ ಗಿರಿಶವಾಕ್ಯೈಸ್ತತ್ವವಿನಿರ್ಣ್ಣಯೈಃ ।

ಕೃಷ್ಣಸ್ಯೈವ ಗುಣಾಖ್ಯಾನೈಃ ಪುನರಿನ್ದ್ರಾದಿದೇವತಾಃ                   ॥೨೨.೧೮೫॥

 

ಜ್ಞಾನಾಭಿವೃದ್ಧಿಮಗಮನ್ ಪುರಾsಪಿ ಜ್ಞಾನಿನೋsಧಿಕಮ್ ।

ಸರ್ವದೇವೋತ್ತಮಂ ತಂ ಹಿ ಜಾನನ್ತ್ಯೇವ ಸುರಾಃ ಸದಾ             ॥೨೨.೧೮೬॥

 

ತಥಾsಪಿ ತತ್ಪ್ರಮಾಣಾನಾಂ ಬಹುತ್ವಾದ್ ಯೇSತ್ರ ಸಂಶಯಾಃ ।

ಯುಕ್ತಿಮಾತ್ರೇ ತೇsಪಿ ರುದ್ರವಾಕ್ಯಾದಪಗತಾಸ್ತದಾ ॥೨೨.೧೮೭॥

 

ಈರೀತಿಯಾದ ಸದಾಶಿವನ ಮಾತುಗಳಿಂದ, ತತ್ವ ವಿನಿರ್ಣಯ ಮಾಡಿಕೊಡುವ ಬೇರೆ ಮಾತುಗಳಿಂದಲೂ ಕೂಡಾ, ಕೃಷ್ಣನ ಗುಣವನ್ನು ಪ್ರತಿಪಾದನೆ ಮಾಡುವ ಬೇರೆ ವೇದಮಂತ್ರಗಳಿಂದಲೂ ಕೂಡಾ, ಹಿಂದೆಯೂ ಜ್ಞಾನಿಗಳಾಗಿರುವ ಇಂದ್ರ ಮೊದಲಾದ ದೇವತೆಗಳು ಇನ್ನಷ್ಟು ಅರಿವನ್ನು ಪಡೆದರು.

ಪರಮಾತ್ಮನನ್ನು ದೇವತೆಗಳು ಎಲ್ಲಾ ದೇವತೆಗಳಿಗೂ ಮಿಗಿಲು ಎಂದೇ ತಿಳಿಯುತ್ತಾರೆ. ಆದರೂ  ಪಾಶುಪತಾದಿ ಆಗಮಗಳು ಬಹಳವಿದೆ ಮತ್ತು ಅದರಿಂದಾಗಿ ಯುಕ್ತಿಯಿಂದ ಸಂಶಯಗಳು ಬರುತ್ತವೆ. ಇಲ್ಲಿ ದೇವತೆಗಳಿಗೆ ರುದ್ರನ ಮಾತಿನಿಂದ ಅಂತಹ ಕೆಲವು ಸಂಶಯಗಳು ದೂರವಾದವು.

[ಹರಿವಂಶದಲ್ಲಿ ಈ ಕುರಿತ ವಿವರ ಕಾಣಸಿಗುತ್ತದೆ: ಹರೇ ಕುರ್ವತಿ ತತ್ರೈವಮಞ್ಜಲಿಂ ಕುರುಸತ್ತಮ । ಮುನಯೇ ದೇವಗನ್ಧರ್ವಾಃ ಸಿದ್ಧಾಶ್ಚ ಸಹಕಿನ್ನರಾಃ ।  ಅಞ್ಜಲಿಂ ಚಕ್ರಿರೇ ವಿಷ್ಣೌ ದೇವದೇವೇಶ್ವರೇ ಹರೌ’(೮೮.೧೭).  

ದೇವತೆಗಳ ಜ್ಞಾನವೂ, ವಿಶೇಷತಃ ಋಜುಯೋಗಿಗಳ ಜ್ಞಾನವೂ ಕೂಡಾ ಮುಕ್ತಿ ಪರ್ಯಂತ ಹೆಚ್ಚುತ್ತಾ ಹೋಗುತ್ತದೆ ಎನ್ನುವುದನ್ನು ನಾವಿಲ್ಲಿ ತಿಳಿದಿರಬೇಕು. ಈರೀತಿಯ ಪ್ರಸಂಗವನ್ನು ಮಧ್ವವಿಜಯದಲ್ಲಿಯೂ  ನಾವು ಕಾಣಬಹುದು: ಇತಿಹಾಸ-ಸುನ್ದರ-ಪುರಾಣ-ಸೂತ್ರ-ಸತ್-ಪ್ರಿಯ-ಪಙ್ಚರಾತ್ರ-ನಿಜ-ಭಾವ-ಸಂಯುತಮ್ । ಅಶೃಣೋದನನ್ತ - ಹೃದನನ್ತ- ತೋsಚಿರಾತ್ ಪರಮಾರ್ಥಮಪ್ಯಗಣಿತಾಗಮಾವಲೇಃ ॥೦೮.೦೪॥ ಋಜು-ಪುಙ್ಗವಸ್ಯ ಪರಿ-ಜಾನತಃ ಸ್ವಯಂ ಸಕಲಂ ತದಪ್ಯಲಮನನ್ತ-ಜನ್ಮಸು । ಸ್ವ-ಕೃತೋರ್ವನುಗ್ರಹ-ಬಲಾದಮುಷ್ಯ ತಾಂ  ವಿಶಿಶೇಷ ಶೇಷ-ಶಯನಃ ಪುನರ್ಧಿಯಮ್ ॥೦೮.೦೫॥   ಹೀಗೆ ದೇವತೆಗಳಿಗೂ ಕೂಡಾ ಬೇರೆಬೇರೆ ಪ್ರಸಂಗಗಳಲ್ಲಿ ಜ್ಞಾನಾಭಿವೃದ್ಧಿ ಯಾವುದೋ ಒಂದು ಮುಖದಿಂದ ಆಗುತ್ತಿರುತ್ತದೆ].

No comments:

Post a Comment