ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 26, 2022

Mahabharata Tatparya Nirnaya Kannada 22-219-226

ನಿಹತ್ಯ ತೌ ಕೇಶವೋ ರೌಗ್ಮಿಣೇಯಂ ಪುನರ್ವೈದರ್ಭ್ಯಾಂ ಜನಯಾಮಾಸ ಸದ್ಯಃ ।

ಸ ಚೈಕಲವ್ಯೋ ರಾಮಜಿತಃ ಶಿವಾಯ ಚಕ್ರೇ ತಪೋSಜೇಯತಾಂ ಚಾSಪ ತಸ್ಮಾತ್ ॥೨೨.೨೧೯॥

 

ಪೌಣ್ಡ್ರಕ ವಾಸುದೇವ ಮತ್ತು ಕಾಶೀರಾಜನನ್ನು ಕೊಂದ ಬಳಿಕ ಶ್ರೀಕೃಷ್ಣ ರುಗ್ಮಿಣಿಯಲ್ಲಿ ಮಗನನ್ನು (ಪ್ರದ್ಯುಮ್ನನನ್ನು) ಹುಟ್ಟಿಸಿದ. ಇತ್ತ ಬಲರಾಮನಿಂದ ಸೋತ ಏಕಲವ್ಯ ಶಿವನನ್ನು ಕುರಿತು ತಪಸ್ಸನ್ನು ಮಾಡಿ, ಶಿವನಿಂದ ಅಜೇಯತ್ವದ ವರವನ್ನು ಪಡೆದ.

 

ಸ ಶರ್ವದತ್ತೇನ ವರೇಣ ದೃಪ್ತಃ ಪುನರ್ಯೋದ್ಧುಂ ಕೃಷ್ಣಮೇವಾSಸಸಾದ ।

ತಸ್ಯಾಸ್ತ್ರಶಸ್ತ್ರಾಣಿ ನಿವಾರ್ಯ್ಯ ಕೇಶವಶ್ಚಕ್ರೇಣ ಚಕ್ರೇ ತಮಪಾಸ್ತಕನ್ಧರಮ್             ॥೨೨.೨೨೦॥

 

ಏಕಲವ್ಯನು ರುದ್ರ ಕೊಟ್ಟ ವರದಿಂದ ದರ್ಪವನು ಹೊಂದಿ, ಮತ್ತೆ ಯುದ್ಧಮಾಡಲೆಂದು ಕೃಷ್ಣನ ಬಳಿ ಬಂದನು. ಶ್ರೀಕೃಷ್ಣನಾದರೋ, ಅವನ ಶಸ್ತ್ರಾಸ್ತ್ರಗಳನ್ನು ನಿಗ್ರಹಿಸಿ, ಚಕ್ರದಿಂದ ಅವನ ಶಿರಚ್ಛೇದ ಮಾಡಿದ.  

 

ಸ ಚಾSಪ ಪಾಪಸ್ತಮ ಏವ ಘೋರಂ ಕೃಷ್ಣದ್ವೇಷಾನ್ನಿತ್ಯದುಃಖಾತ್ಮಕಂ ತತ್ ।

ಏವಂ ಯದೂನಾಮೃಷಭೇಣ ಸೂದಿತೇ ಪೌಣ್ಡ್ರೇ ತಥಾ ಕಾಶಿನೃಪೇ ಚ ಪಾಪೇ             ॥೨೨.೨೨೧॥

 

ಕಾಶೀಶಪುತ್ರಸ್ತು ಸುದಕ್ಷಿಣಾಖ್ಯಸ್ತಪೋSಚರಚ್ಛಙ್ಕರಾಯೋರುಭಕ್ತ್ಯಾ ।

ಪ್ರತ್ಯಕ್ಷಗಂ ತಂ ಶಿವಂ ಪಾಪಬುದ್ಧಿಃ ಕೃಷ್ಣಾಭಾವಂ ಯಾಚತೇ ದುಷ್ಟಚೇತಾಃ             ॥೨೨.೨೨೨॥

 

ಪಾಪಿಷ್ಠನಾದ  ಏಕಲವ್ಯ ಕೃಷ್ಣನನ್ನು ದ್ವೇಷಿಸಿದ ಫಲವಾಗಿ ನಿತ್ಯದುಃಖವಿರುವ  ಘೋರವಾದ ಅನ್ಧಂತಮಸ್ಸನ್ನು ಹೊಂದಿದನು.  ಈರೀತಿಯಾಗಿ ಯಾದವರಲ್ಲಿಯೇ ಶ್ರೇಷ್ಠನಾದ ಶ್ರೀಕೃಷ್ಣನಿಂದ ಪೌಣ್ಡ್ರಕ ವಾಸುದೇವ, ಪಾಪಿಷ್ಠನಾದ ಕಾಶಿರಾಜನು ಸಾಯಲು, ಸುದಕ್ಷಿಣ ಎನ್ನುವ ಕಾಶಿರಾಜನ ಮಗನು ಶಂಕರನನ್ನು ಕುರಿತು ಬಹಳ ಭಕ್ತಿಯಿಂದ ತಪಸ್ಸನ್ನು ಮಾಡಿದನು. ಪ್ರತ್ಯಕ್ಷನಾದ ಶಿವನಲ್ಲಿ ಪಾಪಬುದ್ಧಿಯವನಾದ ಸುದಕ್ಷಿಣನು ಕೃಷ್ಣನ ನಾಶವನ್ನು ಬೇಡಿದನು.

 

ಕೃತ್ಯಾಮಸ್ಮೈ ದಕ್ಷಿಣಾಗ್ನೌ ಶಿವೋSಪಿ ದೈತ್ಯಾವೇಶಾದದದಾದಾವೃತಾತ್ಮಾ ।

ಸ ದಕ್ಷಿಣಾಗ್ನಿಶ್ಚಾಸುರಾವೇಶಯುಕ್ತಃ ಸಮ್ಪೂಜಿತಃ ಕಾಶಿರಾಜಾತ್ಮಜೇನ             ॥೨೨.೨೨೩॥

 

ವರಾದುಮೇಶಸ್ಯ ವಿವೃದ್ಧಶಕ್ತಿರ್ಯ್ಯಯೌ ಕೃಷ್ಣೋ ಯತ್ರ ಸಮ್ಪೂರ್ಣ್ಣಶಕ್ತಿಃ ।

ಕೃಷ್ಣಸ್ತಸ್ಯ ಪ್ರತಿಘಾತಾರ್ತ್ಥಮುಗ್ರಂ ಸಮಾದಿಶಚ್ಛಕ್ರಮನನ್ತವೀರ್ಯ್ಯಃ             ॥೨೨.೨೨೪॥

 

ದೈತ್ಯಾವೇಷಕ್ಕೆ ಒಳಗಾದ ಶಿವ ದಕ್ಷಿಣಾಗ್ನಿ ಕುಂಡದಲ್ಲಿರುವ  ದಕ್ಷಿಣಾಗ್ನಿಸ್ವರೂಪಭೂತವಾದ ಕೃತ್ಯಾದೇವತೆಯನ್ನು ಸುದಕ್ಷಿಣನಿಗೆ ಕೊಟ್ಟ. (ಪರಮಾತ್ಮನ ಭಕ್ತನಾಗಿರುವ ಶಿವ ದೈತ್ಯಾವೇಷಕ್ಕೆ ಒಳಗಾಗಿ ಈ ರೀತಿ ಮಾಡಿದ. ಇಲ್ಲಿ ಕೃತ್ಯಾದೇವತೆ ಎಂದರೆ ಅದು ದಕ್ಷಿಣಾಗ್ನಿಗೆ  ಅಭಿಮಾನಿ ದೇವತೆ)  ಅಸುರಾವೇಶದಿಂದ ಕೂಡಿದ್ದ ಆ ದಕ್ಷಿಣಾಗ್ನಿಸ್ವರೂಪವಾದ ಕೃತ್ಯಾದೇವತೆಯು ಕಾಶೀರಾಜನ ಮಗನಿಂದ ಚೆನ್ನಾಗಿ ಪೂಜಿಸಲ್ಪಟ್ಟದ್ದಾಗಿ,  ಸದಾಶಿವನ ವರದಿಂದ ಹೆಚ್ಚಿದ ಸಾಮರ್ಥ್ಯವುಳ್ಳದ್ದಾದ  ಕೃಷ್ಣನಿದ್ದೆಡೆಗೆ ಹೋಯಿತು. ಕೃಷ್ಣನಾದರೋ ಅದರ ನಾಶಕ್ಕಾಗಿ ಸುದರ್ಶನ ಚಕ್ರವನ್ನು ಆದೇಶಿಸಿದ.  

 

ಜಾಜ್ವಲ್ಯಮಾನಂ ತದಮೋಘವೀರ್ಯ್ಯಂ ವ್ಯದ್ರಾವಯದ್ ವಹ್ನಿಮಿಮಂ ಸುದೂರಮ್ ।

ಕೃತ್ಯಾತ್ಮಕೋ ವಹ್ನಿರಸೌ ಪ್ರಧಾನವಹ್ನೇಃ ಪುತ್ರಶ್ಚಕ್ರವಿದ್ರಾವಿತೋSಥ ॥೨೨.೨೨೫॥

 

ಸಹಾನುಬನ್ಧಂ ಚ ಸುದಕ್ಷಿಣಂ ತಂ ಭಸ್ಮೀಚಕಾರಾSಶು  ಸಪುತ್ರಭಾರ್ಯ್ಯಮ್ ।

ದಗ್ಧ್ವಾ ಪುರೀಂ ವಾರಣಸೀಂ ಸುದರ್ಶನಃ ಪುನಃ ಪಾರ್ಶ್ವಂ ವಾಸುದೇವಸ್ಯ ಚಾSಗಾತ್

ಸುದಕ್ಷಿಣೋSಸೌ ತಮ ಏವ ಜಗ್ಮಿವಾನ್ ಕೃಷ್ಣದ್ವೇಷಾತ್ ಸಾನುಬನ್ಧಃ ಸುಪಾಪಃ ॥೨೨.೨೨೬॥

 

ಪ್ರಜ್ವಲಿಸುತ್ತಿರುವ, ಎಂದೂ ವ್ಯರ್ಥವಾಗದ ಪೌರುಷವುಳ್ಳ ಆ ಸುದರ್ಶನವು ದಕ್ಷಿಣಾಗ್ನಿ ಸ್ವರೂಪಭೂತವಾದ ಕೃತ್ಯಾಗ್ನಿಯನ್ನು ಅತಿದೂರಕ್ಕೆ  ಓಡಿಸಿತು. ಆ ದಕ್ಷಿಣಾಗ್ನಿಯು ಪ್ರಧಾನ ವಹ್ನಿಯ ಮಗನು.

ಕೃಷ್ಣನನ್ನು ನಾಶಮಾಡಲೆಂದು ಬಂದು, ಸುದರ್ಶನ ಚಕ್ರದಿಂದ ಓಡಿಸಲ್ಪಟ್ಟ ಆ ಕೃತ್ಯಾಗ್ನಿಯು ಬಂಧುಬಾಂಧವರಿಂದ ಕೂಡಿದ, ಹೆಂಡತಿ ಮಕ್ಕಳೊಂದಿಗೆ ಕೂಡಿದ ಸುದಕ್ಷಿಣನನ್ನು ಬಸ್ಮೀಕರಿಸಿತು.  ಕೃತ್ಯಾಗ್ನಿಯನ್ನು ಬೆನ್ನೆತ್ತಿ ಬಂದ ಸುದರ್ಶನ ವಾರಣಸಿ ಪಟ್ಟಣವನ್ನೇ ಸುಟ್ಟು ಮರಳಿ ಪರಮಾತ್ಮನ ಬಳಿ ಬಂದಿತು. ಹೀಗೆ ಕೃಷ್ಣನನ್ನು ದ್ವೇಷಿಸಿದ ಸುದಕ್ಷಿಣ, ತನ್ನ ಬಂಧುಬಾಂಧವರೊಂದಿಗೆ ಅನ್ಧಂತಮಸ್ಸನ್ನೇ ಹೊಂದಿದನು.  


No comments:

Post a Comment