ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 24, 2022

Mahabharata Tatparya Nirnaya Kannada 22-201-210

 

ಕೃಷ್ಣೇ ಪ್ರಯಾತೇ ನಿಲಯಂ ಪುರದ್ವಿಷೋ ರಾತ್ರೌ ಪೌಣ್ಡ್ರೋ ವಾಸುದೇವಃ ಸಮಾಗಾತ್ ।

ಸಹೈಕಲವ್ಯೇನ ನಿಜೇನ ಮಾತುಃ ಪಿತ್ರಾ ತಥಾSಕ್ಷೋಹಿಣಿಕತ್ರಯೇಣ ॥೨೨.೨೦೧॥

 

ಇತ್ತ ಶ್ರೀಕೃಷ್ಣನು ಕೈಲಾಸಕ್ಕೆ ತಪಸ್ಸಿಗೆಂದು ತೆರಳುತ್ತಿದ್ದಂತೆಯೇ ಪೌಣ್ಡ್ರಕ ವಾಸುದೇವನು ಏಕಲವ್ಯ ಹಾಗು ತನ್ನ ತಾಯಿಯ ತಂದೆಯಿಂದಲೂ ಕೂಡಿಕೊಂಡು, ಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ದ್ವಾರಕಾಪಟ್ಟಣಕ್ಕೆ ಬಂದ.

[ಪೌಣ್ಡ್ರಕವಾಸುದೇವ ಸಮಯ ಕಾಯುತ್ತಿದ್ದ. ಯಾವಾಗ ಕೃಷ್ಣ ತಪಸ್ಸಿಗೆ ಹೋದನೋ, ಆಗ ದಾಳಿಮಾಡಲೆಂದು ಬಂದ. ಕೃಷ್ಣ ಇಲ್ಲದಾಗ ಯಾದವರ ನಾಶಮಾಡಬೇಕು ಎನ್ನುವ ಉದ್ದೇಶ ಅವನದ್ದಾಗಿತ್ತು.  

 

ಪುರೀಂ ಪ್ರಭಞ್ಜನ್ತಮಮುಂ ವಿದಿತ್ವಾ ಸರಾಮಶೈನೇಯಯದುಪ್ರವೀರಾಃ ।

ಸಂಯೋಧಯಾಮಾಸುರಥಾಭ್ಯವರ್ಷಚ್ಛರೈರ್ನ್ನಿಷಾದಾಧಿಪ ಏಕಲವ್ಯಃ ॥೨೨.೨೦೨॥

 

ಪೌಣ್ಡ್ರಕ ವಾಸುದೇವ ಪಟ್ಟಣವನ್ನು ಹಾಳುಗೆಡುತ್ತಿದ್ದಾನೆ ಎನ್ನುವುದನ್ನು ತಿಳಿದು, ಬಲರಾಮ, ಸಾತ್ಯಕಿ ಮೊದಲಾದ ಯಾದವ ವೀರರು,  ಪೌಣ್ಡ್ರಕ ವಾಸುದೇವನೊಂದಿಗೆ ಕಾದಾಡಿದರು. ಬೇಡರ ಒಡೆಯನಾದ ಏಕಲವ್ಯನು ಬಾಣಗಳಿಂದ ಎಲ್ಲರನ್ನೂ ಪೀಡಿಸಿದನು.

 

ತದಸ್ತ್ರಶಸ್ತ್ರೈಃ ಸಹಸಾ ವಿಷಣ್ಣಾ ಯದುಪ್ರವೀರಾ ವಿಹತಪ್ರದೀಪಾಃ ।

ಸಹೈವ ರಾಮೇಣ ಶಿನೇಶ್ಚ ನಪ್ತ್ರಾ ಸಮಾವಿಶನ್ ಸ್ವಾಂ ಪುರಮೇವ ಸರ್ವೇ ॥೨೨.೨೦೩॥

 

ರಾತ್ರಿ ನಡೆದ ಯುದ್ಧದಲ್ಲಿ ಏಕಲವ್ಯನ ಬಾಣವರ್ಷದಿಂದ ದೊಂದಿಗಳನ್ನು(ಬೆಳಕನ್ನು) ಕಳೆದುಕೊಂಡ  ಯಾದವರು ದುಃಖಪಡುತ್ತಾ, ಬಲರಾಮ, ಸಾತ್ಯಕಿಯ ಜೊತೆಗೆ ದ್ವಾರಕಾಪಟ್ಟಣದ ಒಳಗೆ ಹೋದರು.

 

ಪುನಃ ಸಮಾದಾಯ ತಥೋರುದೀಪಿಕಾ ಅಗ್ರೇ ಸಮಾಧಾಯ ಚ ರೌಹಿಣೇಯಮ್ ।

ವಿನಿಸ್ಸೃತಾ ಆತ್ತಶಸ್ತ್ರಾಃ ಸ್ವಪುರ್ಯ್ಯಾಃ ಸಿಂಹಾ ಯಥಾ ಧರ್ಷಿತಾಃ ಸದ್ಗುಹಾಯಾಃ ॥೨೨.೨೦೪॥

 

ಪುನಃ, ಬಹಳ ದೊಡ್ಡ ದೀವಟಿಗೆಳನ್ನು ಹಚ್ಚಿಕೊಂಡು, ಬಲರಾಮನನ್ನು ಮುಂದೆ ಮಾಡಿಕೊಂಡು, ಶಸ್ತ್ರಗಳನ್ನೆಲ್ಲ ತೆಗೆದುಕೊಂಡು ಯಾದವರು ಕೆರಳಿದ ಸಿಂಹಗಳು ಗುಹೆಯಿಂದ ಹೊರಬರುವಂತೆ ತಮ್ಮ ಪಟ್ಟಣದಿಂದ ಈಚೆ ಬಂದರು.

 

ಅಥಾsಸಸಾದೈಕಲವ್ಯಂ ರಥೇನ ರಾಮಃ ಶೈನೇಯಃ ಪೌಣ್ಡ್ರಕಂ ವಾಸುದೇವಮ್ ।

ಅಯುದ್ಧ್ಯತಾಂ ತೌ ಸಾತ್ಯಕಿಃ ಪೌಣ್ಡ್ರಕಶ್ಚ ತಥಾSನ್ಯೋನ್ಯಂ ವಿರಥಂ ಚಕ್ರತುಶ್ಚ ॥೨೨.೨೦೫॥

 

ತದನಂತರ ಬಲರಾಮನು ರಥದಲ್ಲಿ ಕುಳಿತು ಏಕಲವ್ಯನನ್ನು ಎದುರುಗೊಂಡ. ಸಾತ್ಯಕಿಯು ಪೌಣ್ಡ್ರಕ ವಾಸುದೇವನನ್ನು ಎದುರುಗೊಂಡ. ಪೌಣ್ಡ್ರಕ ವಾಸುದೇವ ಹಾಗೂ ಸಾತ್ಯಕಿ ಘೋರವಾಗಿ ಯುದ್ಧ ಮಾಡಿದರು. ಸಮಬಲದ ಹೋರಾಟದಲ್ಲಿ ಅವರು ಪರಸ್ಪರ ರಥಹೀನರನ್ನಾಗಿ ಮಾಡಿಕೊಂಡರು.

 

ತತೋ ಗದಾಯುದ್ಧಮಭೂತ್ ತಯೋರ್ದ್ದ್ವಯೋಸ್ತಥಾ ರಾಮಶ್ಚೈಕಲವ್ಯಶ್ಚ ವೀರೌ ।

ಕೃತ್ವಾSನ್ಯೋನ್ಯಂ ವಿರಥಂ ಗದಾಭ್ಯಾಮಯುದ್ಧ್ಯತಾಂ ಜಾತದರ್ಪ್ಪೌ ಬಲಾಗ್ರ್ಯೌ ॥೨೨.೨೦೬॥

 

ರಥಹೀನರಾದ ಅವರಿಬ್ಬರ ನಡುವೆ ಗದಾಯುದ್ಧ ಪ್ರಾರಂಭವಾಯಿತು. ಇತ್ತ ಏಕಲವ್ಯ ಮತ್ತು ಬಲರಾಮ ಪರಸ್ಪರ ರಥವನ್ನು ಮುರಿದುಕೊಂಡು, ಅವರೂ ಕೂಡಾ ಗದಾಯುದ್ಧವನ್ನು ಪ್ರಾರಂಭಿಸಿದರು.

 

ತಸ್ಮಿನ್ ಕಾಲೇ ಕೇಶವೋ ವೈನತೇಯಮಾರು̐ಹ್ಯಾSಯಾದ್ ಯತ್ರ ತೇ ಯುದ್ಧಸಂಸ್ಥಾಃ ।

ದೃಷ್ಟ್ವಾ ಕೃಷ್ಣಂ ಹರ್ಷಸಮ್ಪೂರಿತಾತ್ಮಾ ರಾಮೋ ಹನ್ತುಂ ಚೈಕಲವ್ಯಂ ಸಮೈಚ್ಛತ್ ॥೨೨.೨೦೭॥

 

ಹೀಗೆ ಕೆಲವು ಕಾಲ ಯುದ್ಧನಡೆಯಲು ಕೃಷ್ಣನು ಗರುಡನನ್ನು ಏರಿ ಶಂಖ ಮೊಳಗಿಸುತ್ತಾ ಬಂದನು. ಆಗ ಯುದ್ಧದಲ್ಲಿದ್ದ ಯಾದವರೆಲ್ಲರೂ ಕೃಷ್ಣನನ್ನು ನೋಡಿದರು. ವಿಶೇಷತಃ ಬಲರಾಮ ಕೃಷ್ಣನನ್ನು ಕಂಡು ಆನಂದ ತುಂಬಿದವನಾಗಿ ಏಕಲವ್ಯನನ್ನು ಕೊಲ್ಲಲು ಸಂಕಲ್ಪ ಮಾಡಿದನು.   

 

ಉದ್ಯಮ್ಯ ದೋರ್ಭ್ಯಾಂ ಸ ಗದಾಂ ಜವೇನೈವಾಭ್ಯಾಪತದ್ ರೌಹಿಣೇಯೋ ನಿಷಾದಮ್ ।

ಬಲಂ ಕೋಪಂ ಚಾಸ್ಯ ದೃಷ್ಟ್ವೈಕಲವ್ಯಃ ಪರಾದ್ರವಜ್ಜೀವಿತೇಚ್ಛುಃ ಸುದೂರಮ್ ॥೨೨.೨೦೮॥

 

ಬಲರಾಮನು ಎರಡು ಕೈಗಳಿಂದ ಗದೆಯನ್ನು ಎತ್ತಿ ಹಿಡಿದು, ವೇಗದಿಂದಲೇ ಏಕಲವ್ಯನನ್ನು ಕುರಿತು ಓಡಿಬಂದ. ಬಲ್ಲರಾಮನ ಬಲವನ್ನೂ, ಸಿಟ್ಟನ್ನೂ ಕಂಡ ಏಕಲವ್ಯ ಜೀವ ಉಳಿಸಿಕೊಳ್ಳಲು ಬಯಸಿ ಬಹಳ ದೂರ ಓಡಿ ಹೋದ.

 

ವಿದ್ರಾವಯನ್ ರೌಹಿಣೇಯೋSನ್ವಯಾತ್ ತಂ ಭೀತೋSಪತಚ್ಚೈಕಲವ್ಯೋSಮ್ಬುಧೌ ಸಃ ।

ವೇಲಾನ್ತಂ ತಂ ದ್ರಾವಯಿತ್ವಾSತ್ರ ತಸ್ಥೌ ರಾಮೋ ಗದಾಪಾಣಿರದೀನಸತ್ತ್ವಃ ॥೨೨.೨೦೯॥

 

ಬಲರಾಮನು  ಏಕಲವ್ಯನನ್ನು ಓಡಿಸುತ್ತಾ ಹಿಂಬಾಲಿಸಿದ. ಅಳುಕಿದ ಏಕಲವ್ಯನು ಓಡುತ್ತಾ, ಸಮುದ್ರದಲ್ಲಿ ಬಿದ್ದನು. ಸಮುದ್ರ ತೀರದತನಕ ಓಡಿಸಿಕೊಂಡುಹೋದ ಬಲರಾಮ ತನ್ನ ಗದೆಯನ್ನು ನೆಲಕ್ಕೂರಿ ಹಿಡಿದುಕೊಂಡು ಗಾಂಭೀರ್ಯದಿಂದ ಅಲ್ಲೇ ನಿಂತ.  

 

ಸುಪಾಪೋSಸಾವೇಕಲವ್ಯಃ ಸುಭೀತೋ ರಾಮಂ ಮತ್ವೈವಾನುಯಾತಂ ಪುನಶ್ಚ ।

ಸಮುದ್ರೇSಶೀತಿಂ ಯೋಜನಾನಾಮತೀತ್ಯ ಪಶ್ಚಾದೈಕ್ಷದ್ ದ್ವೀಪಮೇವಾಧಿರು̐ಹ್ಯ ॥೨೨.೨೧೦॥

 

ಅತ್ಯಂತ ಪಾಪಿಷ್ಠನಾದ ಏಕಲವ್ಯನು ಬಹಳ ಭಯಗೊಂಡು, ಬಲರಾಮ ತನ್ನನ್ನು ಹಿಂಬಾಲಿಸಿದ್ದಾನೆ ಎಂದು ತಿಳಿದು, ಸಮುದ್ರದಲ್ಲಿ ೮೦ ಯೋಜನವನ್ನು ದಾಟಿ ಸಮುದ್ರದ ನಡುಗಡ್ಡೆಯನ್ನೇರಿ ಮತ್ತೆ ಹಿಂದೆ ತಿರುಗಿ ನೋಡಿದ.

[ಹರಿವಂಶ(ಭ.ಪ. ೧೦೨.೭) ಈ ಕುರಿತು ಹೀಗೆ ಹೇಳಿದೆ: ‘ಕಿಞ್ಚಿದ್ ದ್ವೀಪಾನ್ತರಂ ರಾಜನ್ ಪ್ರವಿಷ್ಯ ನ್ಯವಸತ್ ತದಾ’ ಏಕಲವ್ಯ ಆ ದ್ವೀಪದಲ್ಲೇ ಕೆಲವುದಿನ ವಾಸ ಮಾಡಬೇಕಾಗಿ ಬಂದಿತು].

No comments:

Post a Comment