ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, July 21, 2022

Mahabharata Tatparya Nirnaya Kannada 22-188-200

ತತಃ ಕೃಷ್ಣಃ ಸುತವರಂ ತ್ವತ್ತ ಆದಾಸ್ಯ ಇತ್ಯಜಃ ।

ಯದುಕ್ತವಾಞ್ಛಿವಂ ಪೂರ್ವಂ ಸತ್ಯಂ ಕರ್ತ್ತುಂ ತದಬ್ರವೀತ್             ॥೨೨.೧೮೮॥

 

ಪುತ್ರಂ ದೇಹೀತಿ ಸೋsಪ್ಯಾಹ ಪೂರ್ವಮೇವ ಸುತಸ್ತವ ।

ಜಾತಃ ಪ್ರದ್ಯುಮ್ನನಾಮಾ ಯಃ ಸ ಮದ್ದತ್ತಃ ಪ್ರವಾದತಃ             ॥೨೨.೧೮೯॥

 

ತದನಂತರ ಶ್ರೀಕೃಷ್ಣನು ‘ನಿನ್ನಿಂದ ಮಗನನ್ನು ಪಡೆಯುತ್ತೇನೆ’ ಎಂದು ಹಿಂದೆ ರುದ್ರನಿಗೆ ತಾನು ಹೇಳಿದ ಮಾತನ್ನು ಜಗತ್ತಿನ ಜನರ ಮುಂದೆ ಸತ್ಯವನ್ನಾಗಿಸಲು-‘ಮಗನನ್ನು ಕೊಡು’ ಎಂದು ರುದ್ರನನ್ನು ಕೇಳಿದ. ಹೀಗೆ ಕೇಳಿದ ಭಗವಂತನನ್ನು ಕುರಿತು ಸದಾಶಿವ ಹೇಳುತ್ತಾನೆ: ‘ಯಾವ ಪ್ರದ್ಯುಮ್ನ ನಾಮಕ ಮಗನು ನಿನಗೆ ಹುಟ್ಟಿರುವನೋ, ಆ ಪ್ರದ್ಯುಮ್ನ ಎಂಬ ಹೆಸರಿನ ಮಗನು ನನ್ನಿಂದ ಕೊಡಲ್ಪಟ್ಟವನೆಂದು ಜನರು ತಿಳಿಯಲಿ’ ಎಂದು.

 

ಪೂರಾ ದಗ್ಧೋ ಮಯಾ ಕಾಮಸ್ತದಾsಯಾಚತ ಮಾಂ ರತಿಃ ।

ದೇಹಿ ಕಾನ್ತಂ ಮಮೇತ್ಯೇವ ತದಾ ತಾಮಹಮಬ್ರವಮ್             ॥೨೨.೧೯೦॥

 

ಉತ್ಪತ್ಸ್ಯತೇ ವಾಸುದೇವಾದ್ ಯದಾ ತಂ ಪತಿಮಾಪ್ಸ್ಯಸಿ ।

ಇತ್ಯತೋsಸೌ ಮಯಾ ದತ್ತ ಇವ ದೇವ ತ್ವದಾಜ್ಞಯಾ             ॥೨೨.೧೯೧॥

 

ಬಹಳ ಹಿಂದೆ ನನ್ನಿಂದ ಕಾಮನು ಸುಟ್ಟುಹೋದಾಗ, ಕಾಮನ ಹೆಂಡತಿಯಾದ ರತಿಯು ‘ತನಗೆ ಗಂಡನನ್ನು ಕೊಡು’  ಎಂದು ನನ್ನನ್ನು ಬೇಡಲು- ಅವಳನ್ನು ಕುರಿತು ನಾನು: ‘ಮುಂದೆ ಶ್ರೀಕೃಷ್ಣ ಪರಮಾತ್ಮನಿಂದ ಈಗ ದೇಹ ಕಳೆದುಕೊಂಡ ನಿನ್ನ ಗಂಡನು ಮತ್ತೆ ಹುಟ್ಟುತ್ತಾನೆ, ಆಗ ನೀನು ಅವನನ್ನು ಗಂಡನಾಗಿ ಹೊಂದುವೆ’ ಎಂದು ಹೇಳಿರುವೆನು. ಹೀಗಾಗಿ ಪ್ರದ್ಯುಮ್ನ ನನ್ನಿಂದ ಕೊಡಲ್ಪಟ್ಟವನಂತೆ  ಆಗುವನು.  ಆ ಮಾತನ್ನು ಕೂಡಾ ನಾನು ನಿನ್ನ ಆಜ್ಞೆಯಂತೆಯೇ ಹೇಳಿರುವುದು- ಎನ್ನುತ್ತಾನೆ ಶಿವ.

[ಹೀಗೆ ‘ಪ್ರದ್ಯುಮ್ನನನ್ನು ನಾನು ಮೊದಲೇ ಕೊಟ್ಟಿರುವೆ ಹಾಗು ಅವನು ಈಗಾಗಲೇ ಹುಟ್ಟಿದ್ದಾನೆ’- ಎನ್ನುತ್ತಾನೆ ಶಿವ. ಹರಿವಂಶದಲ್ಲಿ ಈ ವಿವರ ಕಾಣಸಿಗುತ್ತದೆ:  ಪುತ್ರೋ ದತ್ತೋ ಮಯಾ ದೇವ ಪೂರ್ವಮೇವ ಜಗತ್ಪತೇ’ (೮೮.೫) ‘ಜ್ಯೇಷ್ಠಸ್ತವ ಸುತೋ ದೇವ ಪ್ರದ್ಯುಮ್ನೇತ್ಯಭಿವಿಶ್ರುತಃ’(೧೩)]

 

ದಾಸೋsಸ್ಮಿ ತವ ದೇವೇಶ ಪಾಹಿ ಮಾಂ ಶರಣಾಗತಮ್ ।

ಇತ್ಯುಕ್ತ್ವಾsಭಿಪ್ರಣಮ್ಯೈನಂ ಪುನರಾಹ ಸುರಾನ್ ಹರಃ ॥೨೨.೧೯೨॥

 

‘ಓ ದೇವೇಶ, ನಾನು ನಿನ್ನ ದಾಸನಾಗಿದ್ದೇನೆ. ಶರಣಾಗಿರುವ ನನ್ನನ್ನು ರಕ್ಷಿಸು’ ಎಂದು ಹೇಳಿದ ಸದಾಶಿವನು, ಶ್ರೀಕೃಷ್ಣನಿಗೆ ನಮಸ್ಕರಿಸಿ, ದೇವತೆಗಳನ್ನು ಕುರಿತು ಪುನಃ ಮಾತನಾಡಿದ:

 

[ಪರಮಾತ್ಮನ ಒಂದು ಕ್ರಿಯೆ/ಲೀಲೆ ಬಹಳ ಅರ್ಥ(ಪ್ರಯೋಜನ)ಗಳನ್ನು, ಭಾವಗಳನ್ನು ಒಳಗೊಂಡಿರುತ್ತದೆ. ಅದು ಅನೇಕ ಸಿದ್ಧಿಗಳನ್ನು ಜಗತ್ತಿನಲ್ಲಿ ತೋರಿಸಿರುತ್ತದೆ. ಇದು ಶಾಸ್ತ್ರ ಸಿದ್ಧವಾದ ವಿಷಯ. ಅದರಂತೆ ಇಲ್ಲಿ ತಪಸ್ಸಿಗೆಂದು ಬಂದಿರುವ ಶ್ರೀಕೃಷ್ಣ ಇನ್ನೊಂದು ಕೆಲಸಕ್ಕಾಗಿ ಬಂದಿದ್ದ ಎಂದು ಹೇಳುತ್ತಾರೆ. ಅದನ್ನು ಮಹಾಭಾರತದ ಅನುಶಾಸನ ಪರ್ವದಲ್ಲಿಯೂ(೨೦೩.೩೧) ಹೇಳಿದ್ದಾರೆ: ‘ಅಸುರಃ ಸಾಮ್ಪ್ರತಂ ಕಶ್ಚಿದಹಿತೋ ಲೋಕನಾಶನಃ’ ಅಲ್ಲಿ ಬಂದ ಕಥೆಯನ್ನು ಯಾವ ಸಂದರ್ಭದಲ್ಲಿ ಜೋಡಿಸಿಕೊಳ್ಳಬೇಕು ಎನ್ನುವುದು ಇಲ್ಲಿ ನಮಗೆ ತಿಳಿಯುತ್ತದೆ.]

 

ಯದರ್ತ್ಥಮೇಷ ಆಯಾತಃ ಕೇಶವಃ ಶೃಣುತಾಮರಾಃ ।

ಯೋsಸುರೋ ವಕ್ರನಾಮಾssಸೀದವದ್ಧ್ಯೋ ಬ್ರಹ್ಮಣೋ ವರಾತ್             ॥೨೨.೧೯೩॥

 

ಕೃಷ್ಣನು ಏಕಾಗಿ ಬಂದನೆಂದು ಓ ದೇವತೆಗಳೇ ಕೇಳಿರಿ:  ವಕ್ರ ಎನ್ನುವ ಹೆಸರಿನ ಅಸುರ ಇದ್ದ. ಅವನೋ ಬ್ರಹ್ಮನ ವರದಿಂದ, ಅವಧ್ಯನಾಗಿದ್ದ.  

 

ತದಾಜಾತಾದ್ ವಾಸುದೇವಪುತ್ರಾತ್ ಕಾಮಾದೃತೇ ಕ್ವಚಿತ್ ।

ತಂ ಹನ್ತುಮೇವ ಪುತ್ರಂ ಸ್ವಂ ಪ್ರದ್ಯುಮ್ನಮುದರೇsರ್ಪ್ಯ ಚ             ॥೨೨.೧೯೪॥

 

ಆಯಾತ ಇಹ ತಂ ಚಾಪಿ ದದಾಹ ಸ್ವೋದರಾತ್ ಸುತಮ್ ।

ನಿಸ್ಸಾರಯಿತ್ವಾ ಕಕ್ಷಂ ಚ ದಗ್ಧಂ ಪಶ್ಯತ ದೇವತಾಃ                     ॥೨೨.೧೯೫॥

 

ಬ್ರಹ್ಮದೇವರು ವರವನ್ನು ಕೊಡುವಾಗ ‘ಆಗತಾನೇ ಹುಟ್ಟಿದ ದೇವರ ಮಗುವನ್ನು ಹೊರತುಪಡಿಸಿ ಇನ್ಯಾರಿಂದಲೂ ನನಗೆ ಮರಣ ಬರಬಾರದು’ ಎನ್ನುವ ವರವನ್ನು ವಕ್ರ ಪಡೆದಿದ್ದ. ಅಂತಹ ದೈತ್ಯನನ್ನು ಕೊಲ್ಲಲು ಶ್ರೀಕೃಷ್ಣ ಕಾಮಾವತಾರಿಯಾದ, ಈಗಾಗಲೇ ಹುಟ್ಟಿ ಬೆಳೆದಿದ್ದ ಪ್ರದ್ಯುಮ್ನನನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ನನ್ನ ಆಶ್ರಮಕ್ಕೆ ಬಂದವನಾಗಿ, ತನ್ನ ಹೊಟ್ಟೆಯಿಂದ ಪ್ರದ್ಯುಮ್ನನನ್ನು ಹೊರಗೆ ಇರತಕ್ಕವನನ್ನಾಗಿ ಮಾಡಿ, ಅರಣ್ಯವನ್ನು ವ್ಯಾಪಿಸಿಕೊಂಡಿದ್ದ ವಕ್ರನನ್ನು ಸುಟ್ಟ.’ ಹೀಗೆ ಹೇಳಿದ  ರುದ್ರದೇವರು, ಸುಡಲ್ಪಟ್ಟ ಅರಣ್ಯವನ್ನು ದೇವತೆಗಳಿಗೆ ತೋರಿಸಿದರು.

[ವಕ್ರ ಹಿಮಾಲಯದ ಕಾಡೆಲ್ಲವನ್ನು ಆವರಿಸಿಕೊಂಡಿದ್ದ. ಹಾಗಾಗಿ ಕೃಷ್ಣ ಕಾಡನ್ನು ಸುಟ್ಟ. ಇಲ್ಲಿ ರುದ್ರದೇವರು ದೇವತೆಗಳಿಗೆ  ‘ನೀವೂ ಕೂಡಾ ನೋಡಿ, ಯಾವ ರೀತಿ ಕೃಷ್ಣ ಅರಣ್ಯವನ್ನು ಸುಟ್ಟಿದ್ದಾನೆ’ ಎಂದು ಹೇಳಿ ನಾಶವಾದ ಅರಣ್ಯವನ್ನು ತೋರಿಸುತ್ತಾರೆ].

 

ಜ್ವಾಲಾಮಾಲಾಕರಾಳೇನ ಸ್ವತೇಜೋವರ್ದ್ಧಿತೇನ ಚ ।

ಪ್ರದ್ಯುಮ್ನೇನೈವ ತಂ ದೈತ್ಯಂ ದಗ್ಧ್ವಾ ವನಸಮನ್ವಿತಮ್             ॥೨೨.೧೯೬॥

 

ಪುನಶ್ಚ ಸ್ವೋದರೇ ಪುತ್ರಂ ಸ್ಥಾಪಯಾಮಾಸ ಕೇಶವಃ ।

ಸದ್ಯೋಗರ್ಭಂ ಪುನಸ್ತಂ ಚ ರುಗ್ಮಿಣ್ಯಾಂ ಜನಯಿಷ್ಯತಿ   ॥೨೨.೧೯೭॥

 

ಬೆಂಕಿಯಿಂದ ಕೂಡಿರುವ, ತನ್ನ ತೇಜಸ್ಸಿನಿಂದಲೂ ಕೂಡಿರುವ ಪ್ರದ್ಯುಮ್ನನಿಂದಲೇ, ಕಾಡನ್ನು ಆವರಿಸಿಕೊಂಡಿದ್ದ ದೈತ್ಯನನ್ನು ಸುಟ್ಟು, ಮತ್ತೆ  ತನ್ನ ಹೊಟ್ಟೆಯ ಒಳಗಡೆ ಮಗನನ್ನು ಇಟ್ಟುಕೊಂಡ. ಶ್ರೀಕೃಷ್ಣ ದ್ವಾರಕೆಗೆ ಹಿಂತಿರುಗಿದಮೇಲೆ ‘ಹುಟ್ಟಿದ ತಕ್ಷಣ ಬೆಳೆಯುವ’ ಅವನನ್ನು ಮತ್ತೆ ರುಗ್ಮಿಣಿ ಹೆರುತ್ತಾಳೆ.

[ಅನುಶಾಸನ ಪರ್ವದಲ್ಲಿ ಸಂಕ್ಷೇಪವಾಗಿ ಈಕುರಿತು ಹೇಳಿದ್ದಾರೆ: ‘ಅಸುರಃ ಸಾಮ್ಪ್ರತಂ ಕಶ್ಚಿದಹಿತೋ ಲೋಕನಾಶನಃ’ (೨೦೩.೩೧) ]

 

ಪೂರ್ವವತ್ ಕ್ಷಣಮಾತ್ರೇಣ ಯುವಾ ಚ ಸ ಭವಿಷ್ಯತಿ ।

ದೃಷ್ಟಮೇತನ್ನಾರದಾದ್ಯೈರ್ಮ್ಮುನಿಭಿಃ ಸರ್ವಮೇವ ಚ               ॥೨೨.೧೯೮॥

 

ಆಗ ಪ್ರದ್ಯುಮ್ನ ಮೊದಲಿನಂತೆಯೇ ಹುಟ್ಟಿದ ಕ್ಷಣದಲ್ಲಿ ಯುವಕನಾಗುತ್ತಾನೆ. ಈ ಎಲ್ಲಾ ಅತ್ಯಂತ ಅಭೂತಪೂರ್ವವಾದ ಅದ್ಭುತ ಘಟನೆಗಳಿಗೆ ನಾರದಾದಿ ಮುನಿಗಳೇ ಸಾಕ್ಷಿ (ಅವರಿಂದ ಕಾಣಲ್ಪಟ್ಟಿದೆ).  

 

ಏವಂ ಕ್ರೀಡತ್ಯಯಂ ದೇವಃ ಪೂರ್ಣ್ಣೈಶ್ವರ್ಯ್ಯೇಣ ಕೇವಲಮ್ ।

ಇತ್ಯುಕ್ತೇ ಕೇಶವಂ ನೇಮುರ್ದ್ದೇವಾಃ ಶಕ್ರಪುರೋಗಮಾಃ             ॥೨೨.೧೯೯॥

 

ಈರೀತಿ ಅದ್ಭುತವಾದ ಶಕ್ತಿಗಳಿರುವ ದೇವರು ಜಗದೊಡನೆ ಕ್ರೀಡಿಸುತ್ತಾನೆ. ಹೀಗೆ ರುದ್ರದೇವರು ಎಲ್ಲಾ ದೇವತೆಗಳಿಗೆ ಹೇಳುತ್ತಿರಲು, ಇಂದ್ರನೇ ಮೊದಲಾದ ದೇವತೆಗಳು ಭಗವಂತನಿಗೆ ನಮಸ್ಕರಿಸಿದರು.  

[ಪರಮಾತ್ಮ ಪ್ರದ್ಯುಮ್ನನನ್ನು ತನ್ನ ಉದರದಲ್ಲಿ ಧರಿಸಿ, ರುದ್ರದೇವರನ್ನು ತಪಸ್ಸು ಮಾಡಿ, ಅವರಿಂದ ಮಗನನ್ನು ವರವಾಗಿ ಪಡೆದಂತೆ ತೋರಿ, ಆ ಮೂಲಕ ರುಗ್ಮಿಣಿಯ ಸಹಾಯ ಇಲ್ಲದೇ ಪ್ರದ್ಯುಮ್ನನನ್ನು ಹುಟ್ಟಿಸಿ, ಅವನ ಮೂಲಕ ವಕ್ರನನ್ನು ಕೊಂದು, ಹಿಂತಿರುಗಿ ರುಗ್ಮಿಣಿಯಲ್ಲಿ ಪ್ರದ್ಯುಮ್ನನನ್ನಿಟ್ಟು ವಿಚಿತ್ರಲೀಲೆಯನ್ನು ತೋರಿದ]  

 

ತತೋ ಹರಿರ್ಬ್ರಹ್ಮಸುರೇನ್ದ್ರಮುಖ್ಯೈಃ ಸುರೈಃ ಸ್ತುತೋ ಗರುಡಸ್ಕನ್ಧಸಂಸ್ಥಃ ।

ಪುನಃಪುನಃ ಪ್ರಣತಃ ಶಙ್ಕರೇಣ ಸ್ತುತಸ್ತೃತೀಯೇsಹ್ನಿ ನಿಜಾಂ ಪುರೀಮಗಾತ್ ॥೨೨.೨೦೦॥

 

ತದನಂತರ ಬ್ರಹ್ಮ, ಇಂದ್ರ ಮೊದಲಾದ ದೇವತೆಗಳಿಂದ ಕೊಂಡಾಡಲ್ಪಟ್ಟ ನಾರಾಯಣನು, ಗರುಡನ ಹೆಗಲೇರಿ, ಶಂಕರನಿಂದ ಮತ್ತೆ ಮತ್ತೆ ನಮಸ್ಕೃತನಾಗಿಯೂ, ಸ್ತೋತ್ರಮಾಡಲ್ಪಟ್ಟವನಾಗಿಯೂ, ಮೂರನೇ ದಿವಸದಲ್ಲಿ ತನ್ನ ಪಟ್ಟಣವನ್ನು ಕುರಿತು ತೆರಳಿದನು.

No comments:

Post a Comment