ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, June 27, 2023

Mahabharata Tatparya Nirnaya Kannada 28-01-08

 

೨೮. ಪಾಣ್ಡವರಾಜ್ಯಲಾಭಃ

 

̐

ಪ್ರಭಾತಾಯಾಂ ತು ಶರ್ವರ್ಯ್ಯಾಂ ಗುರುಪುತ್ರಾನುಮೋದಿತಃ ।

ಶಲ್ಯಂ ಸೇನಾಪತಿಂ ಕೃತ್ವಾ ಯೋದ್ಧುಂ ದುರ್ಯ್ಯೋಧನೋSಭ್ಯಯಾತ್ ॥೨೮.೦೧॥

 

ರಾತ್ರಿ ಕಳೆದು ಬೆಳಗಾಗುತ್ತಿರಲು(ಯುದ್ಧದ ಹದಿನೆಂಟನೇ ದಿನದಂದು), ದುರ್ಯೋಧನ ಅಶ್ವತ್ಥಾಮಾಚಾರ್ಯರ ಅನುಮತಿಯನ್ನು ಪಡೆದು, ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿ, ಯುದ್ಧಮಾಡಲು ತೆರಳಿದನು.

 

ತಮಭ್ಯಯುಃ ಪಾಣ್ಡವಾಶ್ಚ ಹೃಷ್ಟಾ ಯುದ್ಧಾಯ ದಂಸಿತಾಃ ।

ತತ್ರಾSಸೀತ್ ಸುಮಹದ್ ಯುದ್ಧಂ ಪಾಣ್ಡವಾನಾಂ ಪರೈಃ ಸಹ ॥೨೮.೦೨॥

 

ಪಾಂಡವರಾದರೋ, ಅತ್ಯಂತ ಸಂತಸದಿಂದ, ತಮ್ಮ ಕವಚಗಳನ್ನು ತೊಟ್ಟು ಯುದ್ಧಕ್ಕೆಂದು ತೆರಳಿದರು. ಆ ಹದಿನೆಂಟನೆಯ ದಿನ ಪಾಂಡವರಿಗೆ ಇತರರಾದ ಕೌರವರ ಜೊತೆಗೆ ಘೋರವಾದ ಯುದ್ಧ ನಡೆಯಿತು.

 

ಅಗ್ರೇ ಭೀಮಃ ಪಾಣ್ಡವಾನಾಂ ಮದ್ಧ್ಯೇ ರಾಜಾ ಯುಧಿಷ್ಠಿರಃ ।

ಪೃಷ್ಠೇ ಗಾಣ್ಡೀವಧನ್ವಾSSಸೀದ್ ವಾಸುದೇವಾಭಿರಕ್ಷಿತಃ ॥೨೮.೦೩॥

 

ಚಕ್ರರಕ್ಷೌ ಯಮೌ ರಾಜ್ಞೋ ಧೃಷ್ಟದ್ಯುಮ್ನಶ್ಚ ಸಾತ್ಯಕಿಃ ।

ನೃಪಸ್ಯ ಪಾರ್ಶ್ವಯೋರಾಸ್ತಾಮಗ್ರೇSನ್ಯೇಷಾಂ ಗುರೋಃ ಸುತಃ ॥೨೮.೦೪॥

 

ಮದ್ಧ್ಯೇ ಶಲ್ಯಃ ಪೃಷ್ಠತೋSಭೂದ್ ಭ್ರಾತೃಭಿಶ್ಚ ಸುಯೋಧನಃ ।

ಚಕ್ರರಕ್ಷೌ ತು ಶಲ್ಯಸ್ಯ ಶಕುನಿಸ್ತತ್ಸುತಸ್ತಥಾ ॥೨೮.೦೫॥

 

ಕೃಪಶ್ಚ ಕೃತವರ್ಮ್ಮಾ ಚ ಪಾರ್ಶ್ವಯೋಃ ಸಮವಸ್ಥಿತೌ ।

ತತ್ರಾಭವನ್ಮಹದ್ ಯುದ್ಧಂ ಭೀಮಸ್ಯ ದ್ರೌಣಿನಾ ಸಹ  ॥೨೮.೦೬॥

 

ಪಾಂಡವರ ಮುಂಭಾಗದಲ್ಲಿ ಭೀಮಸೇನನೂ, ಮಧ್ಯಭಾಗದಲ್ಲಿ ರಾಜನಾದ ಯುಧಿಷ್ಠಿರನೂ ಇದ್ದನು. ಹಿಂಭಾಗದಲ್ಲಿ ಗಾಣ್ಡೀವ ಹಿಡಿದಿರುವ ಧನುರ್ಧಾರಿ ಅರ್ಜುನನು ಶ್ರೀಕೃಷ್ಣನಿಂದ ರಕ್ಷಿಸಲ್ಪಟ್ಟವನಾಗಿ ಇದ್ದನು. ಯುಧಿಷ್ಠಿರನ ಚಕ್ರರಕ್ಷಕರಾಗಿ ನಕುಲ-ಸಹದೇವರಿದ್ದರು. ಧೃಷ್ಟದ್ಯುಮ್ನ ಮತ್ತು ಸಾತ್ಯಕಿಯೂ ಕೂಡಾ ರಕ್ಷಣೆಗಾಗಿ ಯುಧಿಷ್ಠಿರನ ಪಾರ್ಶ್ವಭಾಗದಲ್ಲಿದ್ದರು. ಹಾಗೆಯೇ ಇತರರಾದ ಕೌರವರ ಮುಂಭಾಗದಲ್ಲಿ ಗುರುಸುತ ಅಶ್ವತ್ಥಾಮನೂ, ಮಧ್ಯದಲ್ಲಿ ಶಲ್ಯನೂ, ಬಹಳ ಹಿಂಭಾಗದಲ್ಲಿ ತನ್ನ ತಮ್ಮಂದಿರರಿಂದ ಕೂಡಿದ ಸುಯೋಧನನೂ ಇದ್ದನು. ಶಲ್ಯನ ಚಕ್ರ ರಕ್ಷಣೆಗೆ ಶಕುನಿ ಮತ್ತವನ ಮಗ ನಿಂತಿದ್ದರು. ಕೃಪ ಮತ್ತು ಕೃತವರ್ಮ ಇಬ್ಬರೂ ಪಾರ್ಶ್ವಭಾಗದಲ್ಲಿದ್ದರು. ಅಲ್ಲಿ ಭೀಮಸೇನ ಹಾಗೂ ಅಶ್ವತ್ಥಾಮನಿಗೆ ಬಹಳ ಮಹತ್ತಾದ ಯುದ್ಧವಾಯಿತು.  

 

ರಾಜ್ಞಃ ಶಲ್ಯೇನ ಚ ತಥಾ ಘೋರರೂಪಂ ಭಯಾನಕಮ್ ।

ತತ್ರ ನಾತಿಪ್ರಯತ್ನೇನ ದ್ರೌಣಿರ್ಭೀಮೇನ ಸಾಯಕೈಃ  ॥೨೮.೦೭॥

 

ವಿರಥೀಕೃತಸ್ತಥಾ ಧರ್ಮ್ಮಸೂನುಃ ಶಲ್ಯೇನ ತತ್ಕ್ಷಣಾತ್ ।

ಆಸಸಾದ ತದಾ ಶಲ್ಯಂ ಕಪಿಪ್ರವರಕೇತನಃ ॥೨೮.೦೮॥

 

ಧರ್ಮರಾಜನಿಗೆ ಶಲ್ಯನೊಂದಿಗೆ ಘೋರವಾದ, ಭಯಾನಕ ಯುದ್ಧ ನಡೆಯಿತು. ಅಲ್ಲಿ ಯಾವುದೇ ಪ್ರಯಾಸವಿಲ್ಲದೇ ಭೀಮಸೇನನ ಬಾಣಗಳಿಂದ ಅಶ್ವತ್ಥಾಮ ರಥಹೀನನಾದ. ಹಾಗೆಯೇ ಶಲ್ಯನಿಂದ ತತ್ಕ್ಷಣದಲ್ಲಿ ಧರ್ಮರಾಜನು ರಥಹೀನನಾದ. ಆಗ ಕಪಿಶ್ರೇಷ್ಠ ಹನುಮಂತನನ್ನು ಧ್ವಜದಲ್ಲಿ ಹೊಂದಿರುವ  ಅರ್ಜುನನು ಶಲ್ಯನನ್ನು ಹೊಂದಿದ.

No comments:

Post a Comment