ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, June 15, 2023

Mahabharata Tatparya Nirnaya Kannada 27-187-192

 ಪುನಶ್ಚ ಪಾರ್ತ್ಥೇನ ಮಹಾಸ್ತ್ರಯುದ್ಧಂ ಪ್ರಕುರ್ವತಃ ಸೂರ್ಯ್ಯಸುತಸ್ಯ ಚಕ್ರಮ್ ।

ರಥಸ್ಯ ಭೂಮಿರ್ಗ್ಗ್ರಸತಿ ಸ್ಮ ಶಾಪಾದಸ್ತ್ರಾಣಿ ದಿವ್ಯಾನಿ ಚ ವಿಸ್ಮೃತಿಂ ಯಯುಃ ॥೨೭.೧೮೭ ॥

 

ಪುನಃ ಅರ್ಜುನನೊಂದಿಗೆ ಮಹತ್ತಾದ ಅಸ್ತ್ರಯುದ್ಧ ಮಾಡುತ್ತಿದ್ದ ಕರ್ಣನ ರಥಚಕ್ರವನ್ನು ಭೂಮಿ (ವಿಪ್ರಶಾಪದಿಂದಾಗಿ) ನುಂಗಿತು. ಪರಶುರಾಮದೇವರ ಶಾಪದಿಂದಾಗಿ ಕರ್ಣನಿಗೆ ದಿವ್ಯಾಸ್ತ್ರಗಳು ಮರೆತುಹೋದವು.

 

ಉದ್ಧರ್ತ್ತುಕಾಮೋ ರಥಚಕ್ರಮೇವ ಪಾರ್ತ್ಥಂ ಯಯಾಚೇSವಸರಂ ಪ್ರದಾತುಮ್ ।

ನೇತ್ಯಾಹ ಕೃಷ್ಣೋSಞ್ಜಲಿಕಂ ಸುಘೋರಂ ತ್ರಿನೇತ್ರದತ್ತಂ ಜಗೃಹೇ ಚ ಪಾರ್ತ್ಥಃ ॥೨೭.೧೮೮ ॥

 

ಹೂತುಹೋದ ತನ್ನ ರಥದ ಚಕ್ರವನ್ನು ಮೇಲೆತ್ತಲು ಕರ್ಣ ಅರ್ಜುನನಲ್ಲಿ ಅವಕಾಶವನ್ನು ಬೇಡಿದ. ಕೃಷ್ಣನಿಂದ ‘ಅವಕಾಶ ಕೊಡಬೇಡ ಎಂದು ಹೇಳಲ್ಪಟ್ಟ ಅರ್ಜುನ, ತ್ರಿನೇತ್ರದತ್ತವಾದ, ಭಯಂಕರವಾದ ಅಂಜಲಿಕಾಸ್ತ್ರವನ್ನು ತೆಗೆದುಕೊಂಡ.

 

ಸತ್ಯೇನ ಧರ್ಮ್ಮೇಣ ಚ ಸನ್ನಿಯೋಜ್ಯ ಮುಮೋಚ ಕರ್ಣ್ಣಸ್ಯ ವಧಾಯ ಬಾಣಮ್ ।

ಚಿಚ್ಛೇದ ತೇನೈವ ಚ ತಸ್ಯ ಶೀರ್ಷಂ ಸನ್ಧಿತ್ಸತೋ ಬಾಣವರಂ ಸುಘೋರಮ್ ॥೨೭.೧೮೯ ॥

 

ಅರ್ಜುನನು ತನ್ನಲ್ಲಿರುವ ಸತ್ಯಧರ್ಮವನ್ನು ಆ ಅಂಜಲಿಕಾಸ್ತ್ರದೊಂದಿಗೆ ಕೂಡಿಸಿ ಕರ್ಣನ ಸಂಹಾರಕ್ಕಾಗಿ ಬಾಣವನ್ನು ಬಿಟ್ಟನು. ಕರ್ಣ ಅರ್ಜುನನ ಬಾಣವನ್ನು ಎದುರಿಸಲು ಬಾಣಪ್ರಯೋಗ ಮಾಡುವ ಮೊದಲೇ ಆ ಅಂಜಲಿಕಾಸ್ತ್ರ ಅವನ ತಲೆಯನ್ನು ಕತ್ತರಿಸಿತು.

 

ಅಪರಾಹ್ಣೇSಪರಾಹ್ಣಸ್ಯ ಸೂತಜಸ್ಯೇನ್ದ್ರಸೂನುನಾ ।

ಛಿನ್ನಮಞ್ಜಲಿಕೇನಾSಜೌ ಸೋತ್ಸೇಧಮಪತಚ್ಛಿರಃ ॥೨೭.೧೯೦ ॥

 

ಕರ್ಣನ ಸೇನಾಧಿಪತ್ಯದ ಎರಡನೇ ದಿನದ(ಯುದ್ಧದ ಹದಿನೇಳನೇ ದಿನದ) ಅಪರಾಹ್ಣ ಇಂದ್ರಪುತ್ರ ಅರ್ಜುನ ಸೂರ್ಯಪುತ್ರ ಕರ್ಣನ ತಲೆಯನ್ನು ಕತ್ತರಿಸಿದ. ಕರ್ಣನ ರುಂಡ ವೇಗವಾಗಿ ಆಕಾಶದಲ್ಲಿ ಮೇಲೆ ಹೋಗಿ ಕಳಗೆ ಬಿದ್ದಿತು.

 

ತಸ್ಮಿನ್ ಹತೇ ದೀನಮುಖಃ ಸುಯೋಧನೋ ಯಯೌ ಸಮಾಹೃತ್ಯ ಬಲಂ ಸಶಲ್ಯಃ ।

ಯುಧಿಷ್ಠಿರಃ ಕರ್ಣ್ಣವಧಂ ನಿಶಮ್ಯ ತದಾ ಸಮಾಗತ್ಯ ದದರ್ಶ ತತ್ತನುಮ್ ॥೨೭.೧೯೧ ॥

 

ಕರ್ಣ ಹತನಾಗುತ್ತಿದ್ದಂತೇ ದುಃಖಿತನಾದ ದುರ್ಯೋಧನನು ಶಲ್ಯನಿಂದ ಸಹಿತನಾಗಿ ಸೇನೆಯನ್ನು ಹಿಂದಕ್ಕೆ ತಿರುಗಿಸಿಕೊಂಡು ಹೊರಟುಹೋದನು. ಕರ್ಣಸಂಹಾರವನ್ನು ಕೇಳಿದ ಯುಧಿಷ್ಠಿರ ಅಲ್ಲಿಗೆ ಬಂದು ಕರ್ಣನ ಶರೀರವನ್ನು ಕಂಡನು.

 

ಶಶಂಸ ಕೃಷ್ಣಂ ಚ ಧನಞ್ಜಯಂ ಚ ಭೀಮಂ ಚ ಯೇSನ್ಯೇSಪಿ ಯುಧಿ ಪ್ರವೀರಾಃ ।

ಗತ್ವಾ ಚ ತೇ ಶಿಬಿರಂ ಮೋದಮಾನಾ ಊಷುಃ ಸಕೃಷ್ಣಾಸ್ತದನುಬ್ರತಾಃ ಸದಾ ॥೨೭.೧೯೨ ॥

 

ಯುಧಿಷ್ಠಿರನು ಶ್ರೀಕೃಷ್ಣನನ್ನು, ಅರ್ಜುನನನ್ನು ಹಾಗೂ ಭೀಮಸೇನನನ್ನು ಹೊಗಳಿದನು. ಇತರ ವೀರರನ್ನೂ  ಕೂಡಾ ಯುಧಿಷ್ಠಿರ ಹೊಗಳಿದನು. ಶ್ರೀಕೃಷ್ಣನಿಂದ ಸಹಿತರಾದ, ಸದಾ ಕೃಷ್ಣನನ್ನೇ ಅನುಸರಿಸಿಕೊಂಡಿರುವ ಆ ಪಾಂಡವರು ಶಿಬಿರಕ್ಕೆ ತೆರಳಿ ಸಂತೋಷಹೊಂದಿದವರಾಗಿ ಆವಾಸ ಮಾಡಿದರು.  

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಕರ್ಣ್ಣವಧೋನಾಮ     ಸಪ್ತವಿಂಶೋsಧ್ಯಾಯಃ ॥

[ ಆದಿತಃ ಶ್ಲೋಕಾಃ೪೨೪೯+೧೯೨=೪೪೪೧ ]

 

*********


No comments:

Post a Comment