ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, June 29, 2023

Mahabharata Tatparya Nirnaya Kannada 28-09-18

 

ತಯೋರಾಸೀನ್ಮಹದ್ ಯುದ್ಧಮದ್ಭುತಂ ರೋಮಹರ್ಷಣಮ್ ।

ರಥಮನ್ಯಂ ಸಮಾಸ್ಥಾಯ ದ್ರೌಣಿರ್ಭೀಮಂ ಸಮಭ್ಯಯಾತ್ ॥೨೮.೦೯॥

 

ಶಲ್ಯ ಹಾಗೂ ಅರ್ಜುನರಿಬ್ಬರ ನಡುವೆ ವಿಸ್ಮಯಕರವಾಗಿರುವ, ರೋಮಾಂಚನಕಾರಿ, ಭಯಂಕರವಾದ ಯುದ್ಧವು ನಡೆಯಿತು. ಇತ್ತ ಅಶ್ವತ್ಥಾಮ ಇನ್ನೊಂದು ರಥವನ್ನೇರಿ ಮತ್ತೆ ಭೀಮಸೇನನನ್ನು ಎದುರುಗೊಂಡ.

 

ದುರ್ಯ್ಯೋಧನಶ್ಚ ಭೀಮಸ್ಯ ಶರೈರಾವಾರಯದ್ ದಿಶಃ ।

ತಾವುಭೌ ಶರವರ್ಷೇಣ ವಾರಯಾಮಾಸ ಮಾರುತಿಃ ॥೨೮.೧೦॥

 

ದುರ್ಯೋಧನನೂ ಕೂಡಾ ಭೀಮನ ಸುತ್ತಲೂ ಬಾಣಗಳಿಂದ ಮುಚ್ಚಿದ. ಆಗ ಅಶ್ವತ್ಥಾಮ ಮತ್ತು ದುರ್ಯೋಧನನನ್ನು  ಭೀಮಸೇನ ತನ್ನ ಬಾಣಗಳಿಂದ ತಡೆದ.

 

 

ತಾಭ್ಯಾಂ ತಸ್ಯಾಭವದ್ ಯುದ್ಧಂ ಸುಘೋರಮತಿಮಾನುಷಮ್ ।

ದುರ್ಯ್ಯೋಧನಸ್ಯಾವರಜಾನ್ ದ್ರೌಪದೇಯಾ ಯುಯುತ್ಸುನಾ ॥೨೮.೧೧॥

 

ಶಿಖಣ್ಡ್ಯಾದ್ಯೈರ್ಮ್ಮಾತುಲೈಶ್ಚ ಸಹ ಸರ್ವಾನ್ ನ್ಯವಾರಯನ್ ।

ಸಹದೇವಸ್ತು ಶಕುನಿಮುಲೂಕಂ ನಕುಲಸ್ತದಾ  ॥೨೮.೧೨॥

 

ಧೃಷ್ಟದ್ಯುಮ್ನಶ್ಚ ಹಾರ್ದ್ದಿಕ್ಯಂ ಸಾತ್ಯಕಿಃ ಕೃಪಮೇವ ಚ ।

ತೇಷಾಂ ತದಭವದ್ ಯುದ್ಧಂ ಚಿತ್ರಂ ಲಘು ಚ ಸುಷ್ಠು ಚ ॥೨೮.೧೩॥

 

ಭೀಮಸೇನ ಮತ್ತು ಅವರಿಬ್ಬರ ನಡುವೆ ಅತ್ಯಂತ ಘೋರವಾಗಿರುವ, ಅತಿಮಾನುಷವಾದ ಯುದ್ಧವು ನಡೆಯಿತು. ದುರ್ಯೋಧನನ ತಮ್ಮಂದಿರರನ್ನು ದ್ರೌಪದಿಯ ಮಕ್ಕಳು, ಯುಯುತ್ಸುವಿನೊಂದಿಗೆ ಕೂಡಿಕೊಂಡು, ಹಾಗೇ ಶಿಖಂಡಿ ಮೊದಲಾಗಿರುವ ಸೋದರಮಾವಂದಿರೊಂದಿಗೆ ಸೇರಿ  ತಡೆದರು.  ಸಹದೇವನು ಶಕುನಿಯನ್ನೂ, ನಕುಲನು ಉಲೂಕ ಎನ್ನುವ ಶಕುನಿಯ ಮಗನನ್ನೂ, ಧೃಷ್ಟದ್ಯುಮ್ನ ಕೃತವರ್ಮನನ್ನೂ, ಸಾತ್ಯಕಿಯು ಕೃಪಾಚಾರ್ಯರನ್ನೂ ಎದುರಿಸಿದರು. ಅವರ ನಡುವೆ ನಡೆದ ಆ ಯುದ್ಧ ಆಶ್ಚರ್ಯಕರವೂ, ವೇಗಭರಿತವೂ ಆಗಿತ್ತು. ಪ್ರಾಣವನ್ನು ತೆಗೆಯುವ ಗಟ್ಟಿ ನಿರ್ಧಾರವನ್ನು ಹೊಂದಿತ್ತು.  

 

ಶಲ್ಯಸ್ತು ಶರಸಙ್ಘಾತೈಃ ಪಾರ್ತ್ಥಸ್ಯಾSವಾರಯದ್ ದಿಶಃ ।

ಸೋSಪಿ ವಿವ್ಯಾಧ ವಿಶಿಖೈಃ ಶಲ್ಯಮಾಹವಶೋಭಿನಮ್ ॥೨೮.೧೪॥

 

ಶಲ್ಯನಾದರೋ ಬಾಣಗಳಿಂದ ಅರ್ಜುನನ ದಿಕ್ಕುಗಳನ್ನು ತಡೆದನು. ಆಗ ಅರ್ಜುನ ಯುದ್ಧದಲ್ಲಿ ಶೋಭಿಸುತ್ತಿರುವ ಶಲ್ಯನನ್ನು ಬಾಣಗಳಿಂದ ಹೊಡೆದನು.

 

ತಯೋಃ ಸುಸಮಮೇವಾSಸೀಚ್ಚಿರಂ ದೇವಾಸುರೋಪಮಮ್ ।

ತತಃ ಶರಂ ವಜ್ರನಿಭಂ ಮದ್ರರಾಜಃ ಸಮಾದದೇ ॥೨೮.೧೫॥

 

ಅವರಿಬ್ಬರಿಗೂ ಧೀರ್ಘಕಾಲ, ದೇವತೆಗಳಿಗೆ ಮತ್ತು ಅಸುರರಿಗೆ ಆದ ಯುದ್ಧಕ್ಕೆ ಸದೃಶವಾದ ಯುದ್ಧವು ಸಮವಾಗಿ ನಡೆಯಿತು. ತದನಂತರ ವಜ್ರಾಯುಧಕ್ಕೆ ಸಮನಾದ ಬಾಣವನ್ನು ಶಲ್ಯನು ತೆಗೆದುಕೊಂಡ.

 

ತೇನ ವಿವ್ಯಾಧ ಬೀಭತ್ಸುಂ ಹೃದಯೇ ಸ ಮುಮೋಹ ಚ ।

ಉಪಲಭ್ಯ ಪುನಃ ಸಂಜ್ಞಾಂ ವಾಸವಿಃ ಶತ್ರುತಾಪನಃ  ॥೨೮.೧೬॥

 

ಚಿಚ್ಛೇದ ಕಾರ್ಮ್ಮುಕಂ ಸಙ್ಖೇ ಮದ್ರರಾಜಸ್ಯ ಧೀಮತಃ ।

ಸೋSನ್ಯತ್ ಕಾರ್ಮ್ಮುಕಮಾದಾಯ ಮುಮೋಚಾಸ್ತ್ರಾಣಿ ಫಲ್ಗುನೇ ॥೨೮.೧೭॥

 

ಆ ಬಾಣದಿಂದ ಶಲ್ಯ ಅರ್ಜುನನ ಎದೆಗೆ ಹೊಡೆದ. ಆಗ ಅರ್ಜುನ ಮೂರ್ಛೆಹೊಂದಿದ. ಶತ್ರುಗಳನ್ನು ಕಂಗೆಡಿಸುವ ಆ  ಅರ್ಜುನ ಮತ್ತೆ ಅರಿವನ್ನು ಪಡೆದು, ಬುದ್ಧಿವಂತನಾದ ಶಲ್ಯನ ಬಿಲ್ಲನ್ನು ಯುದ್ಧದಲ್ಲಿ ಕತ್ತರಿಸಿದ. ಶಲ್ಯನಾದರೋ, ಇನ್ನೊಂದು ಬಿಲ್ಲನ್ನು ತೆಗೆದುಕೊಂಡು ಅರ್ಜುನನಲ್ಲಿ ಅಸ್ತ್ರಗಳನ್ನು ಬಿಟ್ಟ.

 

ಸೌರಂ ಯಾಮ್ಯಂ ಚ ಪಾರ್ಜ್ಜನ್ಯಂ ತಾನ್ಯೈನ್ದ್ರೇಣ ಜಘಾನ ಸಃ ।

ಪುನರ್ನ್ನ್ಯಕೃನ್ತತ್ ತಚ್ಚಾಪಮಿನ್ದ್ರಸೂನುರಮರ್ಷಿತಃ ॥೨೮.೧೮॥

 

ಶಲ್ಯನ ಸೂರ್ಯದೇವತಾಕವಾದ, ಯಮದೇವತಾಕವಾದ, ಪರ್ಜನ್ಯದೇವತಾಕವಾದ ಅಸ್ತ್ರಗಳನ್ನು ಅರ್ಜುನನು ಐನ್ದ್ರಾಸ್ತ್ರದಿಂದ ನಾಶಮಾಡಿದ ಮತ್ತು ಮುನಿದ ಆ ಇಂದ್ರನ ಮಗನಾದ ಅರ್ಜುನನು ಶಲ್ಯನ ಬಿಲ್ಲನ್ನು ಮತ್ತೆ ಕತ್ತರಿಸಿದ.

No comments:

Post a Comment