ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, June 6, 2023

Mahabharata Tatparya Nirnaya Kannada 27-160-165

 

ಯದಾ ಸ ರಙ್ಗಃ ಪವಮಾನಸೂನುನಾ ಶೂನ್ಯಃ ಕೃತಸ್ತತ್ರ ಮುಹೂರ್ತ್ತಮಾತ್ರಾತ್ ।

ದುರ್ಯ್ಯೋಧನಸ್ಯಾವರಜಾಃ ಶರೌಘೈರವೀವೃಷನ್ ಭೀಮಮುದಾರಸತ್ತ್ವಮ್ ॥೨೭.೧೬೦ ॥

 

ಭೀಮಸೇನನಿಂದಾಗಿ ಶೂನ್ಯವಾಗಿ ಮಾಡಲ್ಪಟ್ಟಿದ್ದ ಆ ಯುದ್ಧರಂಗದಲ್ಲಿ  ಮಹೂರ್ತಾಕಾಲಾ ನಂತರ ದುರ್ಯೋಧನನ ತಮ್ಮಂದಿರು ಉತ್ಕೃಷ್ಟವಾದ ಬಲವುಳ್ಳ ಭೀಮಸೇನನ ಮೇಲೆ ಬಾಣಗಳ ಮಳೆಗರೆದರು.

 

ತಾನ್ ಮಾರುತಿರ್ಬಾಣವರೈರ್ನ್ನಿಕೃತ್ತಶೀರ್ಷಾನ್ ಯಮಾಯಾನಯದಾಶು ವೀರಃ ।

ತಸ್ಮಿನ್ ದಿನೇ ವಿಂಶತಿರ್ಧಾರ್ತ್ತರಾಷ್ಟ್ರಾ ಹತಾಸ್ತದನ್ಯೇ ಸಮರಾತ್ ಪ್ರದುದ್ರುವುಃ ॥೨೭.೧೬೧ ॥

 

ಉತ್ಕ್ರಷ್ಟವಾದ ಬಾಣಗಳಿಂದ ಭೀಮಸೇನನು ಅವರೆಲ್ಲರ ತಲೆಯನ್ನು ಕತ್ತರಿಸಿ, ಅವರನ್ನು ಯಮನ ಮನೆಗೆ ಕಳುಹಿಸಿಕೊಟ್ಟನು. ಆ ಒಂದೇ ದಿನದಲ್ಲಿ ಭೀಮಸೇನನಿಂದ ಇಪ್ಪತ್ತುಮಂದಿ ಧೃತರಾಷ್ಟ್ರನ ಮಕ್ಕಳು ಸಂಹರಿಸಲ್ಪಟ್ಟರು ಮತ್ತು ಇತರರು ಯುದ್ಧದಿಂದ ಓಡಿಹೋದರು.

 

ಕರ್ಮ್ಮಾಣ್ಯನನ್ಯೌಪಯಿಕಾನಿ ಭೀಮೇ ಕುರ್ವತ್ಯೇವಂ ಭೀತಭೀತೇSರಿಸಙ್ಘೇ ।

ನಿಮೀಲಿತಾಕ್ಷೇ ಚ ಭಯೇನ ಕರ್ಣ್ಣೇ ಕರ್ಣ್ಣಾತ್ಮಜೋ ನಕುಲಂ ಪ್ರತ್ಯಧಾವತ್ ॥೨೭.೧೬೨॥

 

ಈರೀತಿ ಭೀಮಸೇನನು ಇತರರಿಂದ ಅಸಾಧ್ಯವಾದ ಕರ್ಮ ಮಾಡುತ್ತಿರಲು, ಶತ್ರು ಸಮುದಾಯ ಹೆದರುತ್ತಿರಲು, ಭಯದಿಂದ ಕರ್ಣ ಕಣ್ಣು ಮುಚ್ಚುತ್ತಿರಲು, ಕರ್ಣನ ಪುತ್ರನಾದ ವೃಷಸೇನನು ನಕುಲನನ್ನು ಕುರಿತು ತೆರಳಿದನು.  

 

ಮಾದ್ರೀಸುತೋ ವೃಷಸೇನಂ ಶರೌಘೈರವಾರಯತ್ ತಂ ವಿರಥಂ ಚಕಾರ ।

ಕರ್ಣ್ಣಾತ್ಮಜಃ ಸೋSಪ್ಯಸಿಚರ್ಮ್ಮಪಾಣಿಸ್ತಸ್ಯಾನುಗಾಂಸ್ತ್ರಿಸಹಸ್ರಂ ಜಘಾನ ॥೨೭.೧೬೩ ॥

 

ಮಾದ್ರೀಸುತನಾದ ನಕುಲನು ಬಾಣಗಳ ಸಮೂಹದಿಂದ ವೃಷಸೇನನನ್ನು ತಡೆದನು. ಆಗ ಕರ್ಣಪುತ್ರ ವೃಷಸೇನನು ನಕುಲನನ್ನು ರಥಹೀನನನ್ನಾಗಿ ಮಾಡಿದನು. ಆಗ ಕತ್ತಿ-ಗುರಾಣಿಯನ್ನು ಕೈಯಲ್ಲಿ ಹಿಡಿದ ನಕುಲನು ವೃಷಸೇನನ ಮೂರುಸಹಸ್ರ ಸೈನ್ಯವನ್ನು ಸಂಹರಿಸಿದನು.

 

ಕರ್ಣ್ಣಾತ್ಮಜಸ್ತಸ್ಯ ಸಞ್ಛಿದ್ಯ ಚರ್ಮ್ಮ ಭೀಮಾರ್ಜ್ಜುನಾದೀನಪಿ ಬಾಣಸಙ್ಘೈಃ ।

ಅವೀವೃಷತ್ ತಸ್ಯ ಪಾರ್ತ್ಥಃ ಶರೇಣ ಗ್ರೀವಾಬಾಹೂರೂನ್ ಯುಗಪಚ್ಚಕರ್ತ್ತ ॥೨೭.೧೬೪ ॥

 

ಕರ್ಣನ ಮಗನಾದ ಆ ವೃಷಸೇನನು ನಕುಲನ ಗುರಾಣಿಯನ್ನು ಛೇದಿಸಿ, ಭೀಮಾರ್ಜುನ ಮೊದಲಾದವರ ಮೇಲೆ ಬಾಣಗಳ ಮಳೆಗರೆದನು. ಆಗ ಅರ್ಜುನನು ತನ್ನ ಬಾಣದಿಂದ ವೃಷಸೇನನ ಕುತ್ತಿಗೆ, ಬಾಹು ಮತ್ತು ತೊಡೆಯನ್ನು ಏಕಕಾಲದಲ್ಲಿ ಕತ್ತರಿಸಿದನು.

 

ಏಕೇನ ಬಾಣೇನ ಸುತೇ ಹತೇ ಸ್ವೇ ವೈಕರ್ತ್ತನೋ ವಾಸವಿಮಭ್ಯಧಾವತ್ ।

ತಯೋರಭೂದ್ ದ್ವೈರಥಯುದ್ಧಮದ್ಭುತಂ ಸರ್ವಾಸ್ತ್ರವಿದ್ವರಯೋರುಗ್ರರೂಪಮ್ ॥೨೭.೧೬೫ ॥

 

ಅರ್ಜುನನ ಒಂದೇ ಬಾಣದಿಂದ ತನ್ನ ಮಗ ಹತನಾಗಿರುವುದನ್ನು ಕಂಡ ಕರ್ಣನು ಅರ್ಜುನನನ್ನು ಕುರಿತು ಧಾವಿಸಿದನು. ಅಸ್ತ್ರಗಳನ್ನು ತಿಳಿದವರಲ್ಲಿ ಶ್ರೇಷ್ಠರಾದ ಕರ್ಣಾರ್ಜುನರನಡುವೆ ಉಗ್ರವಾದ, ಆಶ್ಚರ್ಯಕರವಾದ ದ್ವಂದ್ವಯುದ್ಧವಾಯಿತು.

No comments:

Post a Comment