ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 3, 2023

Mahabharata Tatparya Nirnaya Kannada 32-107-113

 

ಸ್ವರ್ಗ್ಗೋತ್ತಮಂ ದೇಶಮಪಶ್ಯದೇತಮಭ್ರಾನ್ತಚೇತಾಃ ಸ ಯುಧಿಷ್ಠಿರಸ್ತದಾ ।

ಆಹಾತ್ರ ಧರ್ಮ್ಮಃ ಪುನರಾತ್ಮಸದ್ಯಶಃ ಪ್ರಕಾಶಯನ್ ಪಾಣ್ಡುಸುತಾಭಿಧಂ ಸ್ವಮ್ ॥ ೩೨.೧೦೭ ॥

 

ಆಗ ಎಲ್ಲಾ ಭ್ರಾಂತಿಯನ್ನು ಕಳೆದುಕೊಂಡ ಯುಧಿಷ್ಠಿರನು ಸ್ವರ್ಗದ ಉತ್ಕೃಷ್ಟವಾದ ದೇಶವನ್ನು ಕಂಡನು. ಇದೇ ಸಮಯದಲ್ಲಿ ಯಮಧರ್ಮನು ತನ್ನ ಯಶಸ್ಸನ್ನು ಪ್ರಕಾಶಪಡಿಸತಕ್ಕವನಾಗಿ, ತನ್ನದೇ ಅವತಾರ ರೂಪವಾಗಿರುವ ಯುಧಿಷ್ಠಿರನಲ್ಲಿ ಈ ಮಾತನ್ನು ಹೇಳಿದನು-

 

ಧರ್ಮ್ಮಾದ್ ವಿಶಿಷ್ಟಾ ಹಿ ಸದಾSನೃಶಂಸತಾ ದೃಷ್ಟ್ವಾ ಚ ಸಾ ತ್ವಯ್ಯಧಿಕಾ ತ್ರಿಶೋ ಮಯಾ ।

ಶಕ್ರೋSಪ್ಯುವಾಚೈನಮಿದಂ ಮೃಷಾ ತೇ ಪ್ರದರ್ಶಿತಂ ದ್ರೋಣಕೃತೇ ಮೃಷಾಗಿರಃ ॥ ೩೨.೧೦೮ ॥

 

ಕೃಚ್ಛ್ರಾದಿದಂ ತೇ ಕಥಿತಂ ನಚಾತಿವಿಸ್ರಮ್ಭ ಆಸೀತ್ ತವ ಕೃಷ್ಣವಾಕ್ಯೇ ।

ನಹ್ಯಾಜ್ಞಯಾ ವಾಸುದೇವಸ್ಯ ಕಿಞ್ಚಿತ್ ಪಾಪಂ ಭವೇತ್ ಸರ್ವವಿಧರ್ಮ್ಮೀಣೋSಪಿ ॥ ೩೨.೧೦೯ ॥

 

‘ಧರ್ಮಕ್ಕಿಂತಲೂ ಮಿಗಿಲಾದದ್ದು ದಯೆ. ಅದನ್ನು ಮೂರು ಸಂದರ್ಭಗಳಲ್ಲಿ ನಿನ್ನಲ್ಲಿ ಅಧಿಕವಾಗಿದೆ ಎನ್ನುವುದನ್ನು ನಾನು ನೋಡಿದ್ದೇನೆ’(ಯಕ್ಷಪ್ರಶ್ನೆ, ನಾಯಿ ರಥವೇರುವ ಪ್ರಸಂಗ ಮತ್ತು ನರಕ ದರ್ಶನ ಸಂದರ್ಭಗಳಲ್ಲಿ) ಎಂದನು. ಆಗ ಇಂದ್ರನು ಯುಧಿಷ್ಠಿರನನ್ನು ಕುರಿತು ಹೇಳುತ್ತಾನೆ- ನೀನು ದ್ರೋಣನಿಗಾಗಿ ಏನು ಸುಳ್ಳು ಹೇಳಿದೆ, ಅದಕ್ಕಾಗಿ ಈ ನರಕ ನಿನಗೆ ಪ್ರದರ್ಶಿಸಲ್ಪಟ್ಟಿದೆ. ನಿನ್ನಿಂದ ಆ ದ್ರೋಣನಿಗೆ ಹೇಳಬೇಕಾದ ಮಾತನ್ನು ಮನಸ್ಸಿಲ್ಲದ ಮನಸ್ಸಿನಿಂದ ಕಷ್ಟಪಟ್ಟು ಹೇಳಿದೆ. ನಿನಗೆ ಶ್ರೀಕೃಷ್ಣನ ಮಾತಿನಲ್ಲಿ ಅತ್ಯಂತ ವಿಶ್ವಾಸವಿರಲಿಲ್ಲ. ಶ್ರೀಕೃಷ್ಣನ ಅಣತಿ ಇದ್ದ ಆ ಮಾತು ಕಿಂಚಿತ್ ಕೂಡಾ ಪಾಪಕರವಾಗಿರಲಿಲ್ಲ.

 

ಬ್ರಹ್ಮಾಪರೋಕ್ಷ್ಯೇSಪಿ ವಿಕರ್ಮ್ಮ ಸೂಚಕಂ ಪ್ರಾರಬ್ಧಪಾಪಸ್ಯ ವಿಷಾಶನಂ ಯಥಾ ।

ಪಶ್ಯಾತ್ರ ಭೀಮಪ್ರಮುಖಾನ್ ಸುಖಸ್ಥಾನ್ ಸಮ್ಪೂಜ್ಯಮಾನಾಂಸ್ತ್ರಿದಶೈಃ ಸುರೂಪಾನ್ ॥ ೩೨.೧೧೦ ॥

 

ಕುತಃ ಪರಬ್ರಹ್ಮದೃಶಾಂ ಸುಶುದ್ಧಸತ್ಕರ್ಮ್ಮಣಾಂ ಕೃಷ್ಣಪರಾಯಣಾನಾಮ್ ।

ಪರೇಣ ಯೋಗೇನ ವಿಸೃಷ್ಟತನ್ವಾಂ ದುಃಖಂ ಭವೇದ್ ದೇವವರಾಧಿಪಾನಾಮ್ ॥ ೩೨.೧೧೧ ॥

 

ಬ್ರಹ್ಮಸಾಕ್ಷಾತ್ಕಾರದ ನಂತರವೂ, ಜ್ಞಾನವುಳ್ಳವರು ಮಾಡಿದ ಪಾಪಗಳು ವಿಷಪೂರಿತ ಭೋಜನದಂತೆ ಪ್ರಾರಬ್ಧ ಪಾಪವನ್ನು ಸೂಚಿಸುತ್ತವೆ.’ (ಹೇಗೆ ವಿಷವಾದ ಅನ್ನವನ್ನು ತಿಂದಾಗ ಅದು ಪರಿಣಾಮವನ್ನು ತೋರಿಯೇ ತೋರುತ್ತದೋ ಹಾಗೇ ಪ್ರಾರಾಬ್ಧಕರ್ಮವೂ ಕೂಡಾ. ಶ್ರೀಕೃಷ್ಣನ ಮಾತಿನಲ್ಲಿ ವಿಶ್ವಾಸವಿಡದೇ ಮಾಡಿದ ಪಾಪದಿಂದ ಯುಧಿಷ್ಠಿರನಿಗೆ ನರಕ ದರ್ಶನವಾಯಿತು). ಇಲ್ಲಿ ದೇವತೆಗಳಿಂದ ಗೌರವಕ್ಕೆ ಪಾತ್ರರಾದ, ಸುಖವಾಗಿರುವ, ಒಳ್ಳೆಯ ರೂಪವುಳ್ಳ ಭೀಮ ಮೊದಲಾದವರನ್ನು ನೋಡು. ಪರಬ್ರಹ್ಮನನ್ನು ಕಂಡ, ಶುದ್ಧವಾದ ಕರ್ಮವನ್ನು ಹೊಂದಿರುವ, ಕೃಷ್ಣ ಭಕ್ತರಾಗಿರುವ, ಪರಮಾತ್ಮನ ಧ್ಯಾನದ ಜೊತೆಗೆ ಶರೀರವನ್ನು ಬಿಟ್ಟ, ದೇವತೆಗಳೇ ಆಗಿರುವ ಅವರಿಗೆ ದುಃಖ ಎಲ್ಲಿಂದ?

 

ಏತೇ ಹಿ ದೇವಪ್ರವರಾಃ ಪೃಥಿವ್ಯಾಂ ಜಾತಾ ಭುವೋ ಭಾರಜಿಹೀರ್ಷುಮೀಶಮ್ ।

ಪ್ರತೋಷ್ಯ ತದ್ಭಾವಿತಬುದ್ಧಿಕರ್ಮ್ಮಭಿಃ ಪುನಶ್ಚ ತೇನೈವ ಸಹಾSಪಿರೇ ದಿವಮ್ ॥ ೩೨.೧೧೨ ॥

 

ಇವರು ದೇವತಾಶ್ರೇಷ್ಠರಷ್ಟೇ? ಭೂಮಿಯ ಭಾರವನ್ನು ನಾಶಮಾಡಬೇಕೆಂದಿರುವ ನಾರಾಯಣನನ್ನು ಸಂತೋಷಗೊಳಿಸಿ, ಅವನು ಹೇಳಿದ ಮಾರ್ಗದಿಂದ, ಅವನು ಆಜ್ಞೆಮಾಡಿದ ಕರ್ಮವನ್ನು ಮಾಡಿ, ಅವನನ್ನು ಸಂತೋಷಗೊಳಿಸಿ, ಮತ್ತೆ ಅವನ ಜೊತೆಗೇ ಮೋಕ್ಷವನ್ನು ಹೊಂದಿದ್ದಾರಷ್ಟೇ.

 

ನ ತೇ ನೃಪಾದ್ಯಾಪಿ ಹಿ ಮಾನುಷೋ ಗತೋ ಭಾವಸ್ತತೋ ದ್ವೇಷ್ಟಿ ಸುಯೋಧನಾದೀನ್ ।

ನಿಮಜ್ಜ್ಯ ತದ್ ವಿಷ್ಣುಪದೋದಕೇSತ್ರ ವಿಸೃಜ್ಯ ದೇಹಂ ಭಜ ದೇವಭಾವಮ್ ॥ ೩೨.೧೧೩ ॥

 

ಓ ರಾಜನೇ, ಈಗಲೂ ಕೂಡಾ ನಿನ್ನ ಮಾನುಷ ಸಂಸ್ಕಾರವು ಹೋಗಿಲ್ಲ. ಆ ಕಾರಣದಿಂದ ದುರ್ಯೋಧನ ಮೊದಲಾದವರನ್ನು ದ್ವೇಷಮಾಡುತ್ತಿರುವೆ. ಹೀಗಾಗಿ ಈ ಗಂಗಾನದಿಯಲ್ಲಿ ಸ್ನಾನಮಾಡಿ, ದೇಹವನ್ನು ಬಿಟ್ಟು ದೇವತ್ವವನ್ನು ಹೊಂದು.

No comments:

Post a Comment