ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, February 28, 2019

Mahabharata Tatparya Nirnaya Kannada 12.11-12.14

ಯೇಯೇ ಹಿ ದೇವಾಃ ಪೃಥಿವೀಂ ಗತಾಸ್ತೇ ಸರ್ವೇ ಶಿಷ್ಯಾಃ ಸತ್ಯವತೀಸುತಸ್ಯ ।  
ವಿಷ್ಣುಜ್ಞಾನಂ ಪ್ರಾಪ್ಯ ಸರ್ವೇsಖಿಲಜ್ಞಾಸ್ತಸ್ಮಾದ್ ಯಥಾಯೋಗ್ಯತಯಾ ಬಭೂವುಃ೧೨.೧೧

ಯಾವಯಾವ ದೇವತೆಗಳು ಭೂಮಿಯಲ್ಲಿ ಅವತಾರ ಮಾಡಿದರೋ, ಅವರೆಲ್ಲರೂ ಕೂಡಾ ವೇದವ್ಯಾಸರ ಶಿಷ್ಯರಾಗಿ ಪರಮಾತ್ಮನ ಬಗೆಗಿನ ಜ್ಞಾನವನ್ನು ಹೊಂದಿ, ಎಲ್ಲರೂ ಕೂಡಾ ಅವರ ಯೋಗ್ಯತೆಗನುಗುಣವಾಗಿ ಎಲ್ಲವನ್ನೂ ಬಲ್ಲವರಾದರು.

ಮರೀಚಿಜಾಃ ಷಣ್ ಮುನಯೋ ಬಭೂವುಸ್ತೇ ದೇವಕಂ ಪ್ರಾಹಸನ್ ಕಾರ್ಶ್ಯಹೇತೋಃ ।
ತಚ್ಛಾಪತಃ ಕಾಲನೇಮಿಪ್ರಸೂತಾ ಅವಧ್ಯತಾರ್ತ್ಥಂ ತಪ ಏವ ಚಕ್ರುಃ ॥೧೨.೧೨

ಮರೀಚಿ ಋಷಿಗೆ ಆರುಜನ ಮಕ್ಕಳಿದ್ದರು. ಈ ಋಷಿಗಳು ಗಂಧರ್ವಮುನಿಯಾಗಿರುವ ದೇವಕ ಮುನಿಯನ್ನು ‘ಕೃಶಾಂಗ’  ಎಂಬ ಕಾರಣಕ್ಕೆ ಅಪಹಾಸ್ಯ ಮಾಡಿದರು. ಇದರಿಂದಾಗಿ ದೇವಕನಿಂದ ಶಾಪಗ್ರಸ್ತರಾದ ಅವರು ಕಾಲನೇಮಿಯ ಮಕ್ಕಳಾಗಿ  ಹುಟ್ಟಿದರು ಮತ್ತು ಅವಧ್ಯತ್ವಕ್ಕಾಗಿ ತಪಸ್ಸನ್ನು ಮಾಡಿದರು.
[ಮೊದಲ ಮನ್ವಂತರದಲ್ಲಿ(ಸ್ವಾಯಮ್ಭುವ ಮನ್ವಂತರದಲ್ಲಿ) ಮರೀಚಿ ಮತ್ತು ಊರ್ಜೆಯಲ್ಲಿ  ಸ್ಮರಃ, ಗೀಥಃ, ಪರಿಶ್ವಙ್ಗಃ, ಪತಙ್ಗಃ, ಶುದ್ರಭ್ರುದ್ ಮತ್ತು ಘ್ರುಣಿ ಎನ್ನುವ ಆರು ಮಂದಿ ಮಕ್ಕಳು ಹುಟ್ಟಿದರು. ಒಮ್ಮೆ  ದೇವಕನೆಂಬ ಗಂಧರ್ವಮುನಿ ತನ್ನ ಮಕ್ಕಳೊಂದಿಗೆ ಜಗಳಮಾಡುತ್ತಿರುವುದನ್ನು ಕಂಡ ಇವರು,  ‘ಇಷ್ಟು ಕೃಷನಾಗಿರುವ ಈತ ಇದೇನು ಹೀಗೆ ಜಗಳವಾಡುತ್ತಿದ್ದಾನೆ’ ಎಂದು ಆತನನ್ನು ಅಪಹಾಸ್ಯ ಮಾಡಿದರು. ದೊಡ್ಡವರನ್ನು ಅಪಹಾಸ್ಯ ಮಾಡುವುದು ಅತಿದೊಡ್ಡ ಆಸುರೀ ಪ್ರವೃತ್ತಿ. ಆದ್ದರಿಂದ, ದೇವಕನ ಅಂತರ್ಯಾಮಿಯಾದ ಚತುರ್ಮುಖಬ್ರಹ್ಮ ಆ ಆರು ಮಂದಿ ಮರೀಚಿ ಪುತ್ರರಿಗೆ  ‘ದೈತ್ಯರಾಗಿ ಹುಟ್ಟಿ’ ಎಂದು ಶಾಪಕೊಡುತ್ತಾನೆ. ಈ ಶಾಪದಿಂದಾಗಿ ಅವರು ಕಾಲನೇಮಿಯ ಮಕ್ಕಳಾಗಿ ಹುಟ್ಟುವಂತಾಗುತ್ತದೆ. ಮನುಷ್ಯಯೋನಿಯಲ್ಲಿ ಹುಟ್ಟುವುದೇ ದೇವತೆಗಳಿಗೆ  ದೊಡ್ಡ ಶಾಪ. ಇನ್ನು ದೈತ್ಯಯೋನಿಯಲ್ಲಿ ಹುಟ್ಟುವುದು ಅದಕ್ಕಿಂತಲೂ ಪ್ರಬಲವಾದ ಶಾಪ].

ಧಾತಾ ಪ್ರಾದಾದ್ ವರಮೇಷಾಂ ತಥೈವ ಶಶಾಪ ತಾನ್ ಕ್ಷ್ಮಾತಳೇ ಸಮ್ಭವಧ್ವಮ್ ।   
ತತ್ರ ಸ್ವತಾತೋ ಭವತಾಂ ನಿಹನ್ತೇತ್ಯಾತ್ಮಾನ್ಯತೋ ವರಲಿಪ್ಸೂನ್ ಹಿರಣ್ಯಃ ॥೧೨.೧೩      

ಬ್ರಹ್ಮದೇವನು ಕಾಲನೇಮಿಯಿಂದ ಹುಟ್ಟಿದ ಇವರಿಗೆ  ಅವಧ್ಯತ್ವದ ವರವನ್ನು ನೀಡಿದನು. ಆದರೆ ಇದರಿಂದ ಸಿಟ್ಟುಗೊಂಡ  ಹಿರಣ್ಯಕಶಿಪುವು ‘ನನಗಿಂತ ಬೇರೊಬ್ಬನಿಂದ ವರವನ್ನು ಪಡೆಯಲು ಬಯಸಿದ ನೀವು ಭೂಮಿಯಲ್ಲಿ ಹುಟ್ಟಿ.  ಅಲ್ಲಿ ನಿಮ್ಮ ಅಪ್ಪನೇ ನಿಮ್ಮ ಕೊಲೆಗಾರನಾಗಲಿ’ ಎಂದು ಶಾಪಕೊಟ್ಟನು.
[ದೈತ್ಯರಿಗೆ ತಮ್ಮ ದೇಹದ ಮೇಲೆ ಪ್ರಬಲವಾದ ಅಭಿಮಾನ. ಹಾಗಾಗಿ ದೈತ್ಯರಾಗಿ ಹುಟ್ಟಿದ ಈ ಆರುಮಂದಿ  ಅವಧ್ಯರಾಗಬೇಕು(ಯಾರಿಂದಲೂ ನಮ್ಮ ವಧೆ ಆಗಬಾರದು) ಎಂದು ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡಿ ಅವಧ್ಯತೆಯ ವರವನ್ನು ಪಡೆಯುತ್ತಾರೆ. ಈ ಸುದ್ದಿ ಕಾಲನೇಮಿಯ ದೊಡ್ಡಪ್ಪನಾದ ಹಿರಣ್ಯಕಶಿಪುವಿಗೆ ತಲುಪುತ್ತದೆ. (ಕಾಲನೇಮಿ ಹಿರಣ್ಯಾಕ್ಷನ ಮಗ). ನನ್ನನ್ನು ಬಿಟ್ಟು ಬ್ರಹ್ಮನಲ್ಲಿ ವರವನ್ನು ಪಡೆದ ಈ ಆರುಮಂದಿಯ ಮೇಲೆ ಕೋಪಗೊಂಡ ಹಿರಣ್ಯಕಶಿಪು, ‘ನಿಮ್ಮ ಅಪ್ಪನಿಂದಲೇ ನಿಮಗೆ ಸಾವು ಪ್ರಾಪ್ತವಾಗಲಿ’ ಎಂದು ಶಾಪ ಕೊಡುತ್ತಾನೆ.
ಸತ್ಯವಚನನಾದ ಬ್ರಹ್ಮನ ಮಾತು ಎಂದೂ ಸುಳ್ಳಾಗುವುದಿಲ್ಲ. ಆತ ಅವಧ್ಯರಾಗಿ ಎಂದು ಶಾಪ ಕೊಟ್ಟಿದ್ದಾನೆ. ಆದರೆ ಹಿರಣ್ಯಕಶಿಪು ಅದಕ್ಕೆ ವ್ಯತಿರಿಕ್ತವಾಗಿ ತಂದೆಯಿಂದಲೇ ನಿಮಗೆ ಸಾವು ಎಂದು ಶಪಿಸಿದ್ದಾನೆ. ಹಿರಣ್ಯಕಶಿಪುವಿನ ಶಾಪವೇ ಮುಂದೆ ಅವರ ಮೂಲಶಾಪ ವಿಮೋಚನೆಯ ಮಾರ್ಗವಾಗಿರುವುದರಿಂದ,    ಪರಸ್ಪರ ವಿರುದ್ಧವಾದ ಈ ಎರಡನ್ನೂ ಘಟಿಸುವುದಕ್ಕೊಸ್ಕರ ಅಘಟಿತ ಘಟನಾ ಸಮರ್ಥನಾದ ಭಗವಂತನಿಂದ ಒಂದು ಲೀಲಾನಾಟಕ ನಡೆಯುತ್ತದೆ.]     


ದುರ್ಗ್ಗಾ  ತದಾ ತಾನ್ ಭಗವತ್ಪ್ರಚೋದಿತಾ ಪ್ರಸ್ವಾಪಯಿತ್ವಾ ಪ್ರಚಕರ್ಷ ಕಾಯಾತ್ ।
ಕ್ರಮಾತ್ ಸಮಾವೇಶಯದಾಶು ದೇವಕೀಗರ್ಭಾಶಯೇ ತಾನ್ಯಹನಚ್ಚ ಕಂಸಃ ॥೧೨.೧೪

ಪರಮಾತ್ಮನಿಂದ ಪ್ರಚೋದಿತಳಾದ ದುರ್ಗಾದೇವಿಯು ಕಾಲನೇಮಿಯ ಮಕ್ಕಳಾಗಿ ಹುಟ್ಟಿದ್ದ ಆರುಮಂದಿ ಮರೀಚೀಪುತ್ರರನ್ನು ಧೀರ್ಘನಿದ್ರೆಗೆ ಒಳಪಡಿಸಿ, ಆ ದೇಹದಿಂದ ಅವರ ಅಂಶವನ್ನು ಸೆಳೆದು, ಕ್ರಮವಾಗಿ ದೇವಕಿಯ ಗರ್ಭದ ಒಳಗೆ ಒಬ್ಬೊಬ್ಬರನ್ನಾಗಿ ಪ್ರವೇಶ ಮಾಡಿಸುತ್ತಾಳೆ. ಈರೀತಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಅವರನ್ನು ಕಾಲನೇಮಿಯ ಅಂಶನಾದ ಕಂಸ ಕೊಲ್ಲುತ್ತಾನೆ.
[ಭಾಗವತದಲ್ಲಿ(೧೦.೭೪.೪೭) ಈ ಕಥೆಯ ಕುರಿತಾದ ವಿವರ ಕಾಣಸಿಗುತ್ತದೆ: ಆಸನ್ ಮರೀಚೇಃ ಷಟ್ ಪುತ್ರಾ  ಊರ್ಜಾಯಾಂ ಪ್ರಥಮೇsನ್ತರೇ   ದೇವಕಂ ಜಹಸುರ್ವೀಕ್ಷ್ಯ  ಸುತಾನ್ಛಪಿತುಮುಧ್ಯತಂ ತೇನಾsಸುರಿಮಗುರ್ಯೋನಿಮಮುನಾsವಧ್ಯಕರ್ಮಣಾ ಹಿರಣ್ಯಕಷಿಪೋಃ ಶಾಪಾತ್  ಪುತ್ರಾಸ್ತೇ ಯೋಗಮಾಯಯಾ   ದೇವಕ್ಯಾ ಜಠರೇ ಜಾತಾ ರಾಜನ್ ಕಂಸವಿಹಿಂಸಿತಾಃ’. ಸ್ವಾಯಮ್ಭುವ ಮನ್ವಂತರದಲ್ಲಿ ಮರೀಚಿಗೆ ಆರುಜನ ಮಕ್ಕಳಿದ್ದರು. ಅವರು ದೇವಕಋಷಿಯನ್ನು ಅಪಹಾಸ್ಯ ಮಾಡಿದರು. ಈರೀತಿಯಾದ ದೋಷಯುಕ್ತವಾದ ಕರ್ಮದಿಂದ ಅವರು ಆಸುರೀ ಯೋನಿಯನ್ನು ಹೊಂದಿದರು. ಹಿರಣ್ಯಕಶಿಪುವಿನ ಶಾಪದ ಫಲದಿಂದ, ಯೋಗಮಾಯೆಯಿಂದ ಅವರು ದೇವಕಿಯ ಗರ್ಭದಲ್ಲಿ ಹುಟ್ಟಿದರು ಮತ್ತು ಕಂಸನಿಂದ ಕೊಲ್ಲಲ್ಪಟ್ಟರು. ಕಂಸನಿಂದ ಕೊಲ್ಲಲ್ಪಟ್ಟ ನಂತರ ಅವರು ಮತ್ತೆ ತಮ್ಮ ಅವಧ್ಯ ಶರೀರವನ್ನೇ ಸೇರಿ ನಿದ್ದೆಯಿಂದ ಮೇಲೆದ್ದರು. ಹೀಗೆ ಇಲ್ಲಿ ಭಗವಂತನ ಇಚ್ಛೆಯಂತೆ ಪರಸ್ಪರ ವಿರುದ್ಧವಾದ ಬ್ರಹ್ಮನ ವರ ಮತ್ತು ಹಿರಣ್ಯಕಶಿಪುವಿನ ಶಾಪ ನಿಜವಾದಂತಾಯಿತು.
 ಈ ಆರು ಮಂದಿ ಮುಂದೆ ಹೇಗೆ ಶಾಪ ವಿಮೋಚನೆಯನ್ನು ಹೊಂದಿ ಆತ್ಮದರ್ಶನವನ್ನುಪಡೆದರು ಎನ್ನುವುದನ್ನು ಭಾಗವತ ವಿವರಿಸುತ್ತದೆ.  ಪೀತ್ವಾsಮೃತಂ ಪಯಸ್ತಸ್ಯಾ ಪೀತಶೇಷಂ ಗದಾಭೃತಃ ನಾರಾಯಣಾಂಗಸಂಸ್ಪರ್ಶ ಪ್ರತಿಲಬ್ಧಾತ್ಮದರ್ಶನಾಃ    ತೇ ನಮಸ್ಕೃತ್ಯ ಗೋವಿಂದಂ ದೇವಕೀಂ ಪಿತರಂ ಬಲಂ ಮಿಷತಾಂ ಸರ್ವಭೂತಾನಾಂ ಯಯುರ್ಧಾಮ ವಿಹಾಯಸಾ’ ಕೃಷ್ಣ ಕುಡಿದ ದೇವಕಿಯ ಹಾಲನ್ನು ಅವರೂ ಕೂಡಾ ಕುಡಿದರು. ದೇವರು ಸ್ಪರ್ಶಿಸಿದ ದೇವಕಿಯ ಸ್ತನಪಾನಮಾಡಿದ್ದರಿಂದಾಗಿ ಅವರೆಲ್ಲರಿಗೆ ಆತ್ಮದರ್ಶನ ಮತ್ತೆ ಪ್ರಾಪ್ತವಾಯಿತು.
ಈ ಆರುಮಂದಿ ದೇವಕಿಯಲ್ಲಿ  ಶ್ರೀಕೃಷ್ಣನಿಗಿಂತ ಮೊದಲೇ ಹುಟ್ಟಿದವರು ಮತ್ತು ಕೃಷ್ಣ ಹುಟ್ಟುವ ಮೊದಲೇ ಕಂಸನಿಂದ ಹತರಾದವರು. ಹೀಗಿರುವಾಗ ಶ್ರೀಕೃಷ್ಣ ಸ್ಪರ್ಶಿಸಿದ ದೇವಕಿಯ ಮೊಲೆಹಾಲನ್ನು ಇವರು ಹೇಗೆ ಕುಡಿದರು ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಹೌದು, ಕೃಷ್ಣ ಸ್ಪರ್ಶಿದ ದೇವಕಿಯ ಮೊಲೆಹಾಲನ್ನು ಕುಡಿಯುವ ಭಾಗ್ಯ ಇವರಿಗೆ ಪ್ರಾಪ್ತವಾಯಿತು. ಶ್ರೀಕೃಷ್ಣ ಬೆಳೆದು ದೊಡ್ಡವನಾಗಿ ತನ್ನ ದೈವಿಕಶಕ್ತಿಯನ್ನು ಪ್ರಪಂಚಕ್ಕೆ ತೋರಿಸಿದಾಗ ದೇವಕಿ ಆತನಲ್ಲಿ ತನ್ನ ಒಂದು ಆಸೆಯನ್ನು ವ್ಯಕ್ತಪಡಿಸುತ್ತಾಳೆ. ತಾನು ಈ ಹಿಂದೆ ಕಳೆದುಕೊಂಡ ಆರುಮಂದಿ ಮಕ್ಕಳನ್ನು ನಾನು ಒಮ್ಮೆ ನೋಡಿ ಮುದ್ದಿಸಬೇಕು ಎನ್ನುವ ಆಸೆ ಅವಳದ್ದಾಗಿತ್ತು. ಆಗ ಶ್ರೀಕೃಷ್ಣ ಬಲಿಲೋಕದಲ್ಲಿ ಅವಧ್ಯರಾಗಿದ್ದ  ಆ ಆರು ಜನರ ದೇಹವನ್ನು ನಾಶಪಡಿಸಿ(ಬ್ರಹ್ಮವರವನ್ನು ತನ್ನ ಶಕ್ತಿಯಿಂದ ಉಲ್ಲಂಘಿಸಿ), ಅವರನ್ನು ಶಿಶುರೂಪದಲ್ಲಿ ತಂದು ದೇವಕಿಗೆ  ನೀಡುತ್ತಾನೆ. ಈ ಘಟನೆಯಿಂದ ಅವರೆಲ್ಲರಿಗೂ ಅಂಗಪಾವಿತ್ರ್ಯ ಪ್ರಾಪ್ತವಾಗುತ್ತದೆ ಮತ್ತು ಇದರಿಂದಾಗಿ ಅವರು ಮತ್ತೆ ಆತ್ಮದರ್ಶನವನ್ನು ಪಡೆಯುವಂತಾಗುತ್ತದೆ.
ಪುರಾಣದಲ್ಲಿ ಬರುವ ಈ ಕಥೆಯಲ್ಲಿ ಸ್ವಲ್ಪ ವ್ಯತ್ಯಾಸವನ್ನು ನಾವು ಕಾಣುತ್ತೇವೆ.  ಈ ಆರುಮಂದಿ ಬ್ರಹ್ಮನ ಶಾಪದಿಂದ ಕಾಲನೇಮಿಯ ಮಕ್ಕಳಾಗಿ ದೈತ್ಯಯೋನಿಯಲ್ಲಿ ಹುಟ್ಟಿದರು ಎನ್ನುವುದನ್ನು ನಾವಿಲ್ಲಿ  ತಿಳಿದೆವು. ಆದರೆ ಕೆಲವು ಪುರಾಣಗಳಲ್ಲಿ  ಇವರನ್ನು ಹಿರಣ್ಯಕಶಿಪುವಿನ ಮಕ್ಕಳು ಎಂದು ಹೇಳಿದ್ದಾರೆ. ಬ್ರಾಹ್ಮಪುರಾಣದಲ್ಲಿ(೧೮೧.೩೬) ‘ಹಿರಣ್ಯಕಶಿಪೋಃ ಪುತ್ರಾಃ ಷಡ್ ಗರ್ಭಾ ಇತಿ ವಿಶ್ರುತಾಃ’ ಎಂದೂ, ಅಗ್ನಿಪುರಾಣದಲ್ಲಿ(೧೨.೪)  ಹಿರಣ್ಯಕಶಿಪೋಃ ಪುತ್ರಾಃ  ಷಡ್ ಗರ್ಭಾ ಯೋಗನಿದ್ರಯಾ’   ಎಂದೂ  ಹೇಳಿದ್ದಾರೆ.
ಇಲ್ಲಿ ಹಿರಣ್ಯಕಶಿಪು ಕಾಲನೇಮಿಯ ಆರುಮಂದಿ ಮಕ್ಕಳನ್ನು ತನ್ನ ಮಕ್ಕಳಂತೇ ಕಾಣುತ್ತಿದ್ದ ಎಂಬ ಭಾವದಿಂದ ಹಿರಣ್ಯಕಶಿಪೋಃ ಪುತ್ರಾಃ  ಎಂದು ಹೇಳಿದ್ದಾರೆ ಎಂದು ನಾವು ತಿಳಿಯಬೇಕು.
ಇನ್ನು ಪಾದ್ಮಪುರಾಣದಲ್ಲಿ(ಉತ್ತರಖಂಡ ೨೪೫.೨೬)   ಹಿರಣ್ಯಾಕ್ಷಸ್ಯ ಷಟ್ ಪುತ್ರಾಃ –ಎಂದು, ‘ಇವರು ಹಿರಣ್ಯಾಕ್ಷನ ಮಕ್ಕಳು’  ಎಂದಿದ್ದಾರೆ.  ಇಲ್ಲಿ ಹಿರಣ್ಯ-ಅಕ್ಷ ಎಂದರೆ ಬಂಗಾರದ ಮೇಲೆ ಕಣ್ಣಿಟ್ಟವನು ಎಂದರ್ಥ. ಸದಾ ತನ್ನ ಸುಖಕ್ಕಾಗಿ ಒದ್ದಾಡುವ ಆಸುರೀ ಪ್ರವೃತ್ತಿ ಉಳ್ಳವನು ಹಿರಣ್ಯಾಕ್ಷ. ಹೀಗಾಗಿ ಕಾಮಕ್ಕೆ ಅಭಿಮಾನಿ ದೈತ್ಯನಾದ  ಕಾಲನೇಮಿಯೂ ಹಿರಣ್ಯಾಕ್ಷ. ಈ ಭಾವದೊಂದಿಗೆ ಮೇಲಿನ ಮಾತನ್ನು ನಾವು ಕಾಣಬೇಕಾಗುತ್ತದೆ.
ದೇವೀ ಭಾಗವತದಲ್ಲೂ(೪.೨೨.೮-೨೨) ಈ ಕಥೆಯ ಕುರಿತಾದ ವಿವರಣೆ ಕಾಣಸಿಗುತ್ತದೆ.

No comments:

Post a Comment