ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, April 1, 2019

Mahabharata Tatparya Nirnaya Kannada 12.48-12.54

ತಥಾssಸ ನಿರ್ಋಥಾಭಿಧೋsನುಜಃ ಸ ನಿರ್ಋತೇರಭೂತ್ ।
ಸ ನಾಸಿಕಾಮರುಧ್ಯುತೋ ಯುಯುತ್ಸುನಾಮಕಃ ಕೃತೀ ೧೨.೪೮

ಸ ಚಾsಮ್ಬಿಕೇಯವೀರ್ಯ್ಯಜಃ ಸುಯೋಧನಾದನನ್ತರಃ ।
ಬಭೂವ ವೈಶ್ಯಕನ್ಯಕೋದರೋದ್ಭವೋ ಹರಿಪ್ರಿಯಃ ॥೧೨.೪೯॥


ದುರ್ಯೋಧನನ ಜನನದ ನಂತರ ನಿರ್ಋಥ ಎಂಬ ಹೆಸರಿನ ನಿರ್ಋಥಿ ದೇವತೆಯ ಅನುಜನು  ಪ್ರವಹವಾಯುವಿನಿಂದ ಯುಕ್ತನಾಗಿ, ಸತ್ಕರ್ಮದಲ್ಲಿ ನಿಪುಣನಾಗಿ,  ‘ಯುಯುತ್ಸು’ ಎಂಬ ಹೆಸರಿನವನಾಗಿ ಭೂಮಿಯಲ್ಲಿ ಹುಟ್ಟಿದನು.
ಈ ಯುಯುತ್ಸು ಅಂಬಿಕಾಪುತ್ರನಾದ ಧೃತರಾಷ್ಟ್ರನ ರೇತಸ್ಸಿನಿಂದ ವೈಶ್ಯಸ್ತ್ರೀಯಲ್ಲಿ ಹುಟ್ಟಿದನು. ಈತ ಭಗವಂತನಲ್ಲಿ ಭಕ್ತಿಯುಳ್ಳವ(ಹರಿಪ್ರಿಯ)ನಾಗಿದ್ದನು.

ಯುಧಿಷ್ಠಿರೇ ಜಾತ ಉವಾಚ ಪಾಣ್ಡುರ್ಬಾಹ್ವೋರ್ಬಲಾಜ್ಜ್ಞಾನಬಲಾಚ್ಚ ಧರ್ಮ್ಮಃ ।
ರಕ್ಷ್ಯೋsನ್ಯಥಾ ನಾಶಮುಪೈತಿ ತಸ್ಮಾದ್ ಬಲದ್ವಯಾಢ್ಯಂ ಪ್ರಸುವಾsಶು ಪುತ್ರಮ್ ॥೧೨.೫೦       
ಇತ್ತ, ಯುಧಿಷ್ಠಿರ ಹುಟ್ಟಿದ ನಂತರ ಪಾಂಡುವು- ‘ಬಾಹುಬಲದಿಂದಲೂ, ಜ್ಞಾನಬಲದಿಂದಲೂ ಧರ್ಮವು ರಕ್ಷಣೀಯವಾಗಿದೆ. ಇಲ್ಲವಾದರೆ ಧರ್ಮ ನಾಶವಾಗುತ್ತದೆ. ಆ ಕಾರಣದಿಂದ ಶೀಘ್ರದಲ್ಲಿ ಜ್ಞಾನ ಮತ್ತು ಬಾಹುಬಲವುಳ್ಳ ಮಗನನ್ನು ಪಡೆ’ ಎಂದು ಕುಂತಿಗೆ ಹೇಳಿದನು . 

[ಮಹಾಭಾರತದಲ್ಲಿ (ಆದಿಪರ್ವ ೧೨೯. ೪೬) ಒಂದು ಮಾತಿದೆ: ‘ಅಶ್ವಮೇಧಃ ಕ್ರತುಶ್ರೇಷ್ಠೋ ಜ್ಯೋತಿಃಶ್ರೇಷ್ಠೋ ದಿವಾಕರಃ । ಬ್ರಾಹ್ಮಣೋ ದ್ವಿಪದಾಂ ಶ್ರೇಷ್ಠೋ ದೇವಶ್ರೇಷ್ಠಶ್ಚ ಮಾರುತಃ’
 ‘ಯಾಗಗಳಲ್ಲಿಯೇ ಮಿಗಿಲಾದದ್ದು ಅಶ್ವಮೇಧ ಯಾಗ.  ಬೆಳಕುಗಳಲ್ಲಿಯೇ ಮಿಗಿಲಾದದ್ದು ಸೂರ್ಯನ ಬೆಳಕು. ಮನುಷ್ಯರಲ್ಲಿ ಶ್ರೇಷ್ಠನಾದವನು ಬ್ರಹ್ಮಜ್ಞಾನಿಯಾದ ಬ್ರಾಹ್ಮಣ.  ದೇವತೆಗಳಲ್ಲಿ ಮಿಗಿಲಾದವನು ಮುಖ್ಯಪ್ರಾಣನು’.  ಈ ಮಾತನ್ನು ಆಚಾರ್ಯರು ಎರಡನೇ ಅಧ್ಯಾಯದಲ್ಲೇ(೨.೧೪೮) ಪ್ರಸ್ತಾಪಿಸಿದ್ದಾರೆ. ಇಲ್ಲಿ  ಅದರ ವ್ಯಾಖ್ಯಾನ ನೀಡಿರುವುದನ್ನು ಕಾಣುತ್ತೇವೆ:]

ಯಜ್ಞಾಧಿಕೋ ಹ್ಯಶ್ವಮೇಧೋ ಮನುಷ್ಯದೃಶ್ಯೇಷು ತೇಜಸ್ಸ್ವಧಿಕೋ ಹಿ ಭಾಸ್ಕರಃ ।
ವರ್ಣ್ಣೇಷು ವಿಪ್ರಃ ಸಕಲೈರ್ಗ್ಗುಣೈರ್ವರೋ ದೇವೇಷು ವಾಯುಃ ಪುರುಷೋತ್ತಮಾದೃತೇ ॥೧೨.೫೧

ಅಶ್ವಮೇಧವು ಯಜ್ಞಗಳಲ್ಲಿ ಶ್ರೇಷ್ಠ. ಮನುಷ್ಯಕಾಣುವ ತೇಜಸ್ಸುಗಳಲ್ಲಿ ಸೂರ್ಯ ಮಿಗಿಲು. ಎಲ್ಲಾ ಗುಣಗಳಿಂದ ಶ್ರೇಷ್ಠನಾಗಿರುವ  ಬ್ರಾಹ್ಮಣ ಮನುಷ್ಯರಲ್ಲಿ ಶ್ರೇಷ್ಠ (ಬ್ರಾಹ್ಮಣನಾಗಿದ್ದರೂ, ಗುಣಗಳಿಂದ ಕೂಡಿಲ್ಲದೇ ಹೋದರೆ  ಶ್ರೇಷ್ಠನಾಗುವುದಿಲ್ಲ ಎನ್ನುವುದು ಇದರ ಅಭಿಪ್ರಾಯ).  ಪುರುಷೋತ್ತಮನಾದ ಭಗವಂತನನ್ನು ಹೊರತು,  ಎಲ್ಲಾ ಗುಣಗಳಿಂದ  ಪ್ರಾಣದೇವರು ದೇವತೆಗಳಲ್ಲಿ ಶ್ರೇಷ್ಠ.
[ಹಾಗಿದ್ದಲ್ಲಿ ಕುಂತಿ ಸಮಸ್ತ ಗುಣಶ್ರೇಷ್ಠನಾದ ಭಗವಂತನನ್ನೇ ಪುತ್ರನಿಗೊಸ್ಕರ ಹೊಂದುವೆ ಎಂದರೆ ಅದು ಸಾಧ್ಯವಿಲ್ಲ. ಏಕೆಂದರೆ:]

ವಿಶೇಷತೋsಪ್ಯೇಷ ಪಿತೈವ ಮೇ ಪ್ರಭುರ್ವ್ಯಾಸಾತ್ಮನಾ ವಿಷ್ಣುರನನ್ತಪೌರುಷಃ ।
ಅತಶ್ಚ ತೇ ಶ್ವಶುರೋ ನೈವ ಯೋಗ್ಯೋ ದಾತುಂ ಪುತ್ರಂ ವಾಯುಮುಪೈಹಿ ತತ್ ಪ್ರಭುಮ್॥೧೨.೫೨    

‘ವೇದವ್ಯಾಸರೂಪದಿಂದ ಅನಂತ ಪೌರುಷನಾದ ವಿಷ್ಣುವು ನನ್ನ ತಂದೆಯಾಗಿದ್ದಾನೆ. ಆ ಕಾರಣದಿಂದ ಅವನು ನಿನಗೆ ಶ್ವಶುರ(ಮಾವ).  ಶ್ವಶುರನಿಂದ ಮಗನನ್ನು ಪಡೆಯಲು ಸಾಧ್ಯವಿಲ್ಲ. ಹೀಗಾಗಿ  ಅವನ ನಂತರ ಪ್ರಭುತ್ವ ಇರುವವನು ಮುಖ್ಯಪ್ರಾಣ. ಅವನಲ್ಲೇ ಮಗನನ್ನು ಕೊಡು ಎಂದು ಬೇಡು’ ಎನ್ನುತ್ತಾನೆ ಪಾಂಡು.

ಇತೀರಿತೇ ಪೃಥಯಾssಹೂತವಾಯುಸಂಸ್ಪರ್ಶಮಾತ್ರಾದಭವದ್ ಬಲದ್ವಯೇ ।
ಸಮೋ ಜಗತ್ಯಸ್ತಿ ನ ಯಸ್ಯ ಕಶ್ಚಿದ್ ಭಕ್ತೌ ಚ ವಿಷ್ಣೋರ್ಭಗವದ್ವಶಃ ಸುತಃ ॥೧೨.೫೩॥

ಈರೀತಿಯಾಗಿ ಹೇಳುತ್ತಿರಲು, ಕುಂತಿಯಿಂದ ಕರೆಯಲ್ಪಟ್ಟ ಮುಖ್ಯಪ್ರಾಣನ ಮುಟ್ಟುವಿಕೆಯಿಂದಲೇ, ಮುಖ್ಯಪ್ರಾಣನೇ ಕುಂತಿಗೆ ಮಗನಾಗಿ ಹುಟ್ಟಿದನು. ಈ ಜಗತ್ತಿನಲ್ಲಿ ಯಾರಿಗೆ ಜ್ಞಾನ ಹಾಗು ಕರ್ಮಗಳಲ್ಲಿ ಸಮನಿಲ್ಲವೋ, ಯಾರಿಗೆ ವಿಷ್ಣುವಿನ ಭಕ್ತಿಯಲ್ಲಿ ಸಮನಿಲ್ಲವೋ, ಅಂತಹ, ತನ್ನ ಭಕ್ತಿಯಿಂದ ಭಗವಂತನನ್ನು ವಶೀಕರಿಸಿಕೊಂಡಿರತಕ್ಕ ಮಗನೊಬ್ಬ ಕುಂತಿಯಲ್ಲಿ ಹುಟ್ಟಿದನು. 

ಸ ವಾಯುರೇವಾಭವದತ್ರ ಭೀಮನಾಮಾ ಭೃತಾ ಮಾಃ ಸಕಲಾ ಹಿ ಯಸ್ಮಿನ್
ಸ ವಿಷ್ಣುನೇಶೇನ ಯುತಃ ಸದೈವ ನಾಮ್ನಾ ಸೇನೋ ಭೀಮಸೇನಸ್ತತೋsಸೌ॥೧೨.೫೪॥

ಈರೀತಿ ಕುಂತೀಪುತ್ರನಾಗಿ ಹುಟ್ಟಿದ ಪ್ರಧಾನವಾಯುವು,  ‘ಭೀಮ’ನೆಂಬ ಹೆಸರುಳ್ಳವನಾದನು. ಅಸಮನಾಗಿರುವ ಪರಮಾತ್ಮನ ಭಕ್ತ,  ಜ್ಞಾನ ಹಾಗು ಬಲದಲ್ಲಿ ಸಮನಿಲ್ಲದ  ಮುಖ್ಯಪ್ರಾಣನೇ ಭೀಮ ಎಂಬ ಹೆಸರಿನವನಾದನು.
‘ಭೀಮ’  ಎಂದರೆ ಎಲ್ಲಾ ವಿದ್ಯೆಗಳನ್ನು ಹೊತ್ತವನು. ‘ಸೇನ’ ಎಂದರೆ ಪರಮಾತ್ಮನಿಂದ ಕೂಡಿದವನು.  ಯಾರಲ್ಲಿ ಎಲ್ಲಾ ವಿದ್ಯೆಗಳೂ ಕೂಡಾ ಸಂದಣಿಸಿವೆಯೋ, ಯಾರು ಒಡೆಯನಾಗಿರುವ ವಿಷ್ಣುವಿನಿಂದ ಯಾವಾಗಲೂ ಕೂಡಿದ್ದಾನೋ, ಅವನೇ ಭೀಮಸೇನನಾಗಿದ್ದಾನೆ. 

No comments:

Post a Comment