ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, August 2, 2022

Mahabharata Tatparya Nirnaya Kannada 22-227-232

 

ಕೃಷ್ಣಃ ಕ್ರೀಡನ್ ದ್ವಾರವತ್ಯಾಂ ಸುಪೂರ್ಣ್ಣನಿತ್ಯಾನನ್ದಃ ಕ್ವಚಿದಾಹ ಸ್ಮ ಭೈಷ್ಮೀಮ್ ।

ವಿಡಮ್ಬಯನ್ ಗೃಹಿಣಾಮೇವ ಚೇಷ್ಟಾ ನಿತ್ಯಾವಿರೋಧೋSಪಿ ತಯಾ ವಿದೋಷಯಾ ॥೨೨.೨೨೭॥

 

ಪರಿಪೂರ್ಣವಾದ ನಿತ್ಯಾನಂದವುಳ್ಳ ಶ್ರೀಕೃಷ್ಣಪರಮಾತ್ಮನು  ದ್ವಾರಕೆಯಲ್ಲಿ ತನ್ನ ಲೀಲೆಗಳನ್ನು ತೋರುತ್ತಾ,  ಒಮ್ಮೆ, ಸಾಮಾನ್ಯ ಗೃಹಸ್ಥರ ಚರ್ಯಗಳನ್ನು ಅನುಕರಿಸುವವನಾಗಿ(ಸಾಮಾನ್ಯ ಗೃಹಸ್ಥರು ಹೆಂಡತಿಯೊಡನೆ ಯಾವ ರೀತಿ ಹಾಸ್ಯ ಮೊದಲಾದವುಗಳನ್ನು ಮಾಡುತ್ತಾರೋ, ಆ ರೀತಿಯ ಗೃಹಸ್ಥರ ಕ್ರಿಯೆಗಳನ್ನು ಅನುಕರಿಸುತ್ತಾ), ಪರಸ್ಪರ ನಿತ್ಯ ವಿರೋಧರಹಿತರಾಗಿದ್ದರೂ ಕೂಡಾ,  ರುಗ್ಮಿಣಿ ಜೊತೆಗೆ ಹೀಗೆ ಮಾತನಾಡಲು ಪ್ರಾರಂಭಿಸಿದ:  

 

ತ್ವಯಾ ನ ಕಾರ್ಯ್ಯಂ ಮಮ ಕಿಞ್ಚ ಭದ್ರೇ ಮಯಾSರೀಣಾಂ ಮಾನಭಙ್ಗಾರ್ತ್ಥಮೇವ ।

ಸಮಾಹೃತಾSಸೀತಿ ಸಾ ಚಾವಿಯೋಗಂ ಸದಾ ಕೃಷ್ಣೇನಾSತ್ಮನೋSಪ್ಯೇವ ವೇತ್ರೀ             ॥೨೨.೨೨೮॥

 

ಸ್ತ್ರಿಯಾ ಭೇತವ್ಯಂ ಭರ್ತ್ತುರಿತ್ಯೇವ ಧರ್ಮ್ಮಂ ವಿಜ್ಞಾಪಯನ್ತೀ ದುಃಖಿತೇವಾSಸ ದೇವೀ ।

ತಾಂ ಸಾನ್ತ್ವಯಾಮಾಸ ಗೃಹಸ್ಥಧರ್ಮ್ಮಂ ವಿಜ್ಞಾಪಯನ್ ದೇವದೇವೋSಪ್ಯದುಃಖಾಮ್ ॥೨೨.೨೨೯॥

 

‘ಮಂಗಳಕರಳಾದ ರುಗ್ಮಿಣಿಯೇ, ನಿನ್ನಿಂದ ನನಗೆ ಯಾವ ಕಾರ್ಯ ಪ್ರಯೋಜನವೂ ಇಲ್ಲ. ಆದರೂ ಶತ್ರುಗಳಾಗಿರುವ ಜರಾಸಂಧ ಮೊದಲಾದವರ ಅಹಂಕಾರ ನಾಶಕ್ಕಾಗಿಯೇ ನಿನ್ನನ್ನು ತಂದಿರುವುದು’ ಎಂದು ಕೃಷ್ಣ ಹೇಳಿದಾಗ, ತನಗೆ ನಾರಾಯಣನಿಂದ ವಿಯೋಗ ಇಲ್ಲವೆನ್ನುವುದನ್ನು ತಿಳಿದವಳಾಗಿದ್ದರೂ ಕೂಡಾ, ಹೆಣ್ಣು ಗಂಡನಿಗೆ ವಿಧೇಯಳಾಗಿ ಇರಬೇಕು ಎನ್ನುವ ಧರ್ಮವನ್ನು ಜನರಿಗೆ ತೋರಿಸುವವಳಾಗಿ  ರುಗ್ಮಿಣಿ ದುಃಖಪಟ್ಟವಳಂತೆ ಕಂಡಳು. ಆರೀತಿಯಾಗಿ ದುಃಖಪಡುವಂತೆ ಕಾಣುವ ಅವಳನ್ನು, ಹೆಂಡತಿಗೆ ಒಬ್ಬ ಗಂಡ ಹೇಗೆ ರಕ್ಷಣೆ ಕೊಡಬೇಕು, ಹೇಗೆ ದುಃಖ ನಿವಾರಣೆ ಮಾಡಬೇಕು  ಎನ್ನುವ ಗೃಹಸ್ಥಧರ್ಮವನ್ನು ತೋರಿಸುತ್ತಾ ಶ್ರೀಕೃಷ್ಣ  ಸಮಾಧಾನ ಮಾಡಿದ. [ಭಾಗವತದಲ್ಲಿ ಈ ಕುರಿತು ವಿಸ್ತಾರವಾದ ವಿವರಣೆಯನ್ನು ನಾವು ಕಾಣಬಹುದು.]

 

ಏವಂ ಕ್ರೀಡತ್ಯಬ್ಜನಾಭೇ ರಮಾಯಾಂ ಕೃಷ್ಣಾದಿಷ್ಟೋ ಗೋಕುಲಂ ರೌಹಿಣೇಯಃ ।

ಪ್ರಾಯಾದ್ ದೃಷ್ಟ್ವಾ ತತ್ರ ನನ್ದಂ ಯಶೋದಾಂ ತತ್ಪೂಜಿತಃ ಕೃಷ್ಣವಾರ್ತ್ತಾಂ ಚ ಪೃಷ್ಟಃ ॥೨೨.೨೩೦॥

 

ಈರೀತಿಯಾಗಿ ಲಕ್ಷ್ಮೀಸ್ವರೂಪಳಾದ ರುಗ್ಮಿಣಿಯಲ್ಲಿ ಶ್ರೀಕೃಷ್ಣನು ಕ್ರೀಡಿಸುತ್ತಿರಲು, ಕೃಷ್ಣನ ನಿರ್ದೇಶನದಂತೆ  ಬಲರಾಮನು ಗೋಕುಲಕ್ಕೆ ತೆರಳಿದ. ಅಲ್ಲಿ ನಂದಗೋಪನನ್ನೂ, ಸಾಕುತಾಯಿ ಯಶೋದೆಯನ್ನೂ ಕಂಡು, ಅವರಿಂದ ಸತ್ಕರಿಸಲ್ಪಟ್ಟ. ಅವರಿಂದ ಶ್ರೀಕೃಷ್ಣನ ಕುರಿತಾಗಿ ಕೇಳಲ್ಪಟ್ಟವನಾದ.

 

ಮಾಸೌ ತತ್ರ ನ್ಯವಸದ್ ಗೋಪಿಕಾಭೀ ರೇಮೇ ಕ್ಷೀಬೋ ಯಮುನಾಮಾಹ್ವಯಚ್ಚ ।

ಮತ್ತೋsಯಮಿತ್ಯೇವ ನದೀಮನಾಗತಾಂ ಚಕರ್ಷ ರಾಮೋ ಲಾಙ್ಗಲೇನಾಗ್ರ್ಯವೀರ್ಯ್ಯಃ ॥೨೨.೨೩೧॥

 

ನಂದಗೋಕುಲದಲ್ಲಿ ಗೋಪಿಕೆಯರೊಂದಿಗೆ ಕ್ರೀಡಿಸಿಸುತ್ತಾ ಎರಡು ತಿಂಗಳುಗಳ ಕಾಲ ವಾಸಮಾಡಿದನು. ಒಂದು ದಿನ ಯಮುನಾ ನದಿ ತಟದಲ್ಲಿ ಮದೋನ್ಮತ್ತನಾಗಿದ್ದ ಬಲರಾಮನು ಯಮುನೆಯನ್ನು ಕರೆದನು. ‘ಇವನು ಮತ್ತಿನಲ್ಲಿದ್ದಾನೆ’ ಎಂದು ಬಾರದೇ ಇದ್ದ ಯಮುನಾ ನದಿಯನ್ನು ಬಲರಾಮ ತನ್ನ ನೇಗಿಲಿನಿಂದ ತನ್ನೆಡೆಗೆ ಎಳೆದ.

 

ಪುನಸ್ತಯಾ ಪ್ರಣತಃ ಸಂಸ್ತುತಶ್ಚ ವ್ಯಸರ್ಜ್ಜಯತ್ ತಾಮಥ ನನ್ದಗೋಪಮ್ ।

ಆಪೃಚ್ಛ್ಯ ಚಾಗಾದ್ ದ್ವಾರಕಾಂ ಕೇಶವಾಯ ನ್ಯವೇದಯನ್ನನ್ದಗೋಪಾದಿಭಕ್ತಿಮ್             ॥೨೨.೨೩೨॥

 

ಆಗ ಯಮುನಾದೇವಿಯಿಂದ (ನದಿಯ ಅಭಿಮಾನಿ ದೇವತೆಯಿಂದ) ನಮಸ್ಕರಿಸಲ್ಪಟ್ಟು, ಸ್ತೋತ್ರ ಮಾಡಲ್ಪಟ್ಟವನಾಗಿ, ಅವಳನ್ನು ಬಿಟ್ಟನು. ತದನಂತರ ನಂದಗೋಪನಿಗೆ ‘ಹೋಗಿ ಬರುತ್ತೇನೆ’ ಎಂದು ಹೇಳಿ, ದ್ವಾರಕಾಪಟ್ಟಣಕ್ಕೆ ಬಂದು, ಶ್ರೀಕೃಷ್ಣನಿಗೆ ನಂದಗೋಪಾದಿಗಳ ಭಕ್ತಿಯನ್ನು ಒಪ್ಪಿಸಿದನು.

No comments:

Post a Comment