ಉವಾಚ ವಾಚಂ
ಪುರುಷಪ್ರವೀರಃ ಸತ್ಯಾಂ ಪ್ರತಿಜ್ಞಾಂ ಲೋಕಮದ್ಧ್ಯೇ ವಿಧಾಯ ।
ಯಾಃ ಸಪತಯಸ್ತಾ ಅಪತಯೋ
ಹಿ ಜಾತಾ ಯಾಸಾSಪತಿಃ
ಸಾ ಸಪತಿಶ್ಚ ಜಾತಾ ॥೨೭.೧೫೦ ॥
ಪುರುಷಶ್ರೇಷ್ಠನಾದ ಭೀಮಸೇನನು ಸಮಸ್ತ ಲೋಕದ ಮುಂದೆ ತಾನು ಹಿಂದೆ ಮಾಡಿದ್ದ
ಪ್ರತಿಜ್ಞೆಯನ್ನು ಪೂರೈಸಿ ಹೇಳುತ್ತಾನೆ- ‘ಯಾರು ಪತಿ ಸಹಿತರಾಗಿದ್ದರೋ ಅಂತಹ ಕೌರವರ ಪತ್ನಿಯರು ಇಂದು
ಪತಿರಹಿತರಾದರು. ಯಾವ ದ್ರೌಪದಿಯನ್ನು ಹಿಂದೆ ಪತಿರಹಿತಳು ಎಂದು ಕರೆದಿದ್ದರೋ, ಅವಳು ಪತಿ
ಸಹಿತಳಾಗಿದ್ದಾಳೆ’.
ಪಶ್ಯನ್ತು ಚಿತ್ರಾಂ
ಪರಮಸ್ಯ ಶಕ್ತಿಂ ಯೇ ವೈ ತಿಲಾಃ ಷಣ್ಢತಿಲಾ ಬಭೂವುಃ ।
ಏನಂ ಗೃಹೀತಂ ಚ ಮಯಾ
ಯದೀಹ ಕಶ್ಚಿತ್ ಪುಮಾನ್ ಮೋಚಯತು ಸ್ವವೀರ್ಯ್ಯಾತ್ ॥೨೭.೧೫೧ ॥
ಎಲೋ ವೀರರೇ, ಸರ್ವೋತ್ತಮನಾದ ಶ್ರೀಹರಿಯ ಶಕ್ತಿಯನ್ನು ನೋಡಿರಿ. ಯಾರು ತಮ್ಮನ್ನು ಗಟ್ಟಿಎಳ್ಳು(ವೀರ್ಯವಂತರು)
ಎಂದು ತಿಳಿದಿದ್ದರೋ, ಅವರು ಈಗ ನಪುಂಸಕಪ್ರಾಯರೂ, ವೀರ್ಯಹೀನರೂ(ಷಣ್ಢತಿಲಾಃ) ಆದರು. ಇಲ್ಲಿರುವ ವೀರರ ನಡುವೆ
ಯಾರಾದರೂ ಪುಂಸ್ತ್ವವುಳ್ಳವನು ಇದ್ದರೆ, ನನ್ನಿಂದ
ಹಿಡಿಯಲ್ಪಟ್ಟ ಇವನನ್ನು ಬಿಡಿಸಲಿ.
ಇತಿ ಬ್ರುವಾಣಃ ಪುನರೇವ
ರಕ್ತಂ ಪಪೌ ಸುಧಾಂ ದೇವವರೋ ಯಥಾ ದಿವಿ ।
ಪುನಶ್ಚ ಸಪ್ರಾಣಮಮುಂ
ವಿಸೃಜ್ಯ ನದನ್ ನನರ್ತ್ತಾರಿಬಲೇ ನಿರಾಯುಧಃ ॥೨೭.೧೫೨ ॥
ಈರೀತಿ ಮತ್ತೆ ಮತ್ತೆ ಹೇಳುತ್ತಾ, ಭೀಮಸೇನನು ಹೇಗೆ ದೇವೇಂದ್ರ ಅಮೃತಪಾನ
ಮಾಡುತ್ತಾನೋ ಹಾಗೆ ರಕ್ತವನ್ನು ಪಾನಮಾಡುವವನಂತೆ ತೋರಿಸಿಕೊಂಡನು ಮತ್ತು ಇನ್ನೂ ಉಸಿರಾಡುತ್ತಿರುವ
ದುಃಶಾಸನನನ್ನು ಬಿಟ್ಟು, ಸಿಂಹನಾದವನ್ನು ಮಾಡುತ್ತಾ, ಆಯುಧರಹಿತನಾಗಿ
ಶತ್ರು ಸೈನ್ಯದ ಮಧ್ಯದಲ್ಲಿ ಕುಣಿದಾಡಿದನು.
ಪ್ರತ್ಯನೃತ್ಯನ್ ಪುರಾ
ಯೇSಸ್ಮಾನ್
ಪುನರ್ಗೌರಿತಿ ಗೌರಿತಿ ।
ತಾನ್ ವಯಂ
ಪ್ರತಿನೃತ್ಯಾಮಃ ಪುನರ್ಗ್ಗೌರಿತಿ ಗೌರಿತಿ ॥೨೭.೧೫೩ ॥
ಯಾವ ಕೌರವರು ನಮ್ಮನ್ನು ಕುರಿತು ಗೂಳಿ-ಗೂಳಿ ಎಂದು ಅಣಕಿಸಿ ಕುಣಿದಿದ್ದರೋ, ಅವರನ್ನು ನಾವಿಂದು ಗೂಳಿ-ಗೂಳಿ ಎಂದು ಅಣಕಿಸಿ
ಕುಣಿಯುತ್ತೇವೆ.
ಇತಿ ಬ್ರುವನ್
ನೃತ್ಯಮಾನೋSರಿಮದ್ಧ್ಯ
ಆಸ್ಫೋಟಯಚ್ಛತ್ರುಗಣಾನಜೋಹವೀತ್ ।
ಶಶಾಖ ಚ ದ್ರಷ್ಟುಮಮುಂ
ನ ಕಶ್ಚಿದ್ ವೈಕರ್ತ್ತನದ್ರೌಣಿಸುಯೋಧನಾದಿಷು ॥೨೭.೧೫೪ ॥
ಈರೀತಿ ಹೇಳುತ್ತಾ, ಶತ್ರುಗಳ ಮಧ್ಯದಲ್ಲಿ ಕುಣಿಯುವವನಾಗಿ, ಭೀಮಸೇನ ತೊಡೆತಟ್ಟಿ ಶತ್ರುಗಳ
ಸಮೂಹವನ್ನು ಯುದ್ಧಕ್ಕಾಗಿ ಕರೆದನು. ಕರ್ಣ, ಅಶ್ವತ್ಥಾಮ, ದುರ್ಯೋಧನ, ಮೊದಲಾದವರಲ್ಲಿ ಯಾರೊಬ್ಬನೂ ಈ ಭೀಮಸೇನನನ್ನು ಕಣ್ಣೆತ್ತಿ
ನೋಡಲು ಕೂಡಾ ಸಮರ್ಥರಾಗಲಿಲ್ಲ.
ಭಯಾಚ್ಚ ಕರ್ಣ್ಣಸ್ಯ
ಪಪಾತ ಕಾರ್ಮ್ಮುಕಂ ನಿಮೀಲಯಾಮಾಸ ತದಾSಕ್ಷಿಣೀ
ಚ ।
ಸಮ್ಬೋಧಿತೋ ಮದ್ರರಾಜೇನ
ಯುದ್ಧೇ ಸ್ಥಿತಃ ಕಥಞ್ಚಿತ್ ಸ ತು ಪಾರ್ತ್ಥಭಾಗಃ ॥೨೭.೧೫೫ ॥
ಇದನ್ನು ನೋಡಿ ಭಯದಿಂದಲೇ ಕರ್ಣನ ಬಿಲ್ಲು ಕೈಜಾರಿ ಬಿದ್ದಿತು. ಆಗ ಅವನು ಕಣ್ಣುಗಳನ್ನು ಮುಚ್ಚಿಕೊಂಡನು.
ಶಲ್ಯನಿಂದ ಪದೇ ಪದೇ ಎಚ್ಚರಿಸಲ್ಪಟ್ಟ ಕರ್ಣನು ಪ್ರಾಯಾಸದಿಂದ ಯುದ್ಧದಲ್ಲಿ ಸ್ಥಿರನಾದನು. ಅವನು
ಸಂಹಾರದಲ್ಲಿ ಅರ್ಜುನನ ಭಾಗವಾದ್ದರಿಂದ ಹೇಗೋ ಬದುಕುಳಿದನು.
ದ್ರೌಣಿರ್ವಿಹಾಯೈನಮಪಾಜಗಾಮ
ದೂರಂ ತದಾ ಭೀಮಸೇನೋ ಜಗಾದ ।
ಪೀತಃ ಸೋಮೋ
ಯುದ್ಧಯಜ್ಞೇ ಮಯಾSದ್ಯ
ವದ್ಧ್ಯಃ ಪಶುರ್ಮ್ಮೇ ಹರಯೇ ಸುಯೋಧನಃ ॥೨೭.೧೫೬ ॥
ಅಶ್ವತ್ಥಾಮ ಭೀಮನ ದೃಷ್ಟಿಯಿಂದ ದೂರಕ್ಕೆ ಹೊರಟುಹೋದ. ಆಗ ಭೀಮಸೇನ ಹೇಳುತ್ತಾನೆ-
‘ನನ್ನಿಂದ ಈ ಯುದ್ಧವೆಂಬ ಯಜ್ಞದಲ್ಲಿ ಸೋಮಪಾನ ಮಾಡಲ್ಪಟ್ಟಿತು. ಇನ್ನು ಶ್ರೀಹರಿಯ ಪ್ರೀತಿಗಾಗಿ
ದುರ್ಯೋಧನನೆಂಬ ಯಜ್ಞಪಶುವು ನನ್ನಿಂದ ವಧಾರ್ಹವಾಗಿದೆ’.
ಇತಿ ಬ್ರುವನ್
ಮೃತಮುತ್ಸೃಜ್ಯ ಶತ್ರುಂ ದುರ್ಯ್ಯೋಧನಂ ಚಾSಶು ರುಷಾSಭಿದುದ್ರುವೇ ।
ಆಯಾನ್ತಮೀಕ್ಷ್ಯೈವ
ತಮುಗ್ರಪೌರುಷಂ ದುದ್ರಾವ ಭೀತಃ ಸ ಸುಯೋಧನೋ ಭೃಶಮ್ ॥೨೭.೧೫೭ ॥
ಹೀಗೆ ಹೇಳುತ್ತಾ, ಸತ್ತ ದುಃಶಾಸನನ ದೇಹವನ್ನು ದೂರಕ್ಕೆ ಎಸೆದ ಭೀಮಸೇನ ಶೀಘ್ರದಲ್ಲಿ
ಸಿಟ್ಟಿನಿಂದ ದುರ್ಯೋಧನನನ್ನು ಕುರಿತು ಧಾವಿಸಿದ.
ತನ್ನೆದುರುಬರುತ್ತಿರುವ ಉಗ್ರಪೌರುಷವುಳ್ಳ ಭೀಮಸೇನನನ್ನು ಕಂಡ ದುರ್ಯೋಧನ ಅತ್ಯಂತ
ಭಯಗ್ರಸ್ಥನಾಗಿ ಓಡಿಹೋದ.
ಬಲದ್ವಯಂ ಚಾಪಯಯೌ
ವಿಹಾಯ ಭಯಾದ್ ಭೀಮಂ ಕೃಷ್ಣಪಾರ್ತ್ಥೌ ವಿನೈವ ।
ಆಯೋಧನಂ
ಶೂನ್ಯಮಭೂನ್ಮುಹೂರ್ತ್ತಂ ನನರ್ತ್ತ ಭೀಮೋ ವ್ಯಾಘ್ರಪದೇನ ಹರ್ಷಾತ್ ॥೨೭.೧೫೮ ॥
ಆಗ ಕೃಷ್ಣಾರ್ಜುನರನ್ನು ಬಿಟ್ಟು ಇತರ ಸೇನೆ (ಕೌರವ ಹಾಗೂ ಪಾಂಡವ ಸೇನೆ) ಅಲ್ಲಿಂದ ಪಲಾಯನಮಾಡಿತು.
ಸುಮಾರು ಒಂದು ಮಹೂರ್ತದ ತನಕ ಆ ಪ್ರದೇಶ (ಆ ಮೂವರನ್ನು ಬಿಟ್ಟು) ಜನರಹಿತವಾಯಿತು. ಆಗ ಭೀಮಸೇನ ಹುಲಿಯಂತೆ
ಹೆಜ್ಜೆ ಹಾಕುತ್ತಾ, ಹರ್ಷದಿಂದ ಕುಣಿದಾಡಿದನು.
ಸಙ್ಕಲ್ಪ್ಯ ಶತ್ರೂನ್ ಗೋವದೇವಾSಜಿಮದ್ಧ್ಯೇ ಶಾರ್ದ್ದೂಲವತ್ ತಚ್ಚರಿತಂ ನಿಶಾಮ್ಯ
।
ಜಹಾಸ ಕೃಷ್ಣಶ್ಚ
ಧನಞ್ಜಯಶ್ಚ ಶಶಂಸತುಶ್ಚೈನಮತಿಪ್ರಹೃಷ್ಟೌ ॥೨೭.೧೫೯ ॥
ಆ ಯುದ್ಧಭೂಮಿಯಲ್ಲಿ ತನ್ನ ಶತ್ರುಗಳನ್ನು ಪಶುಗಳಂತೆ ಸಂಕಲ್ಪಿಸಿ, ಹುಲಿಯಂತೆ ಭೀಮ ಮಾಡಿದ ಕರ್ಮವನ್ನು ನೋಡಿ ಕೃಷ್ಣಾರ್ಜುನರು ನಕ್ಕರು. ಅತ್ಯಂತ
ಸಂತುಷ್ಟರಾಗಿ ಭೀಮಸೇನನನ್ನು ಹೊಗಳಿದರು ಕೂಡಾ.
No comments:
Post a Comment