ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 2, 2023

Mahabharata Tatparya Nirnaya Kannada 28-19-25

 

ಶಲ್ಯೋ ಗದಾಂ ಸಮಾವಿದ್ಧ್ಯ ಚಿಕ್ಷೇಪಾರ್ಜ್ಜುನವಕ್ಷಸಿ ।

ತದಾ ಮುಮೋಹ ಬೀಭತ್ಸುಸ್ತತ ಉಚ್ಚುಕ್ರುಶುಃ ಪರೇ ॥೨೮.೧೯॥

 

ಶಲ್ಯನು ಗದೆಯನ್ನು ತಿರುಗಿಸುತ್ತಾ, ಅರ್ಜುನನ ಎದೆಗೆ ಗುರಿಯಿಟ್ಟು ಹೊಡೆದ. ಆಗ ಅರ್ಜುನನು ಮೂರ್ಛೆಹೋದ. ಇದನ್ನು ಕಂಡು ಶತ್ರುಗಳು ಸಂತೋಷದಿಂದ ಗಟ್ಟಿಯಾಗಿ ಕಿರುಚಿದರು. (ಜಯಘೋಷ ಮಾಡಿದರು)

 

ಪ್ರಾಪ್ಯ ಸಞ್ಜ್ಞಾಂ ಪುನಃ ಪಾರ್ತ್ಥಃ ಶಲ್ಯಂ ವಿವ್ಯಾಧ ವಕ್ಷಸಿ ।

ಸ ವಿಹ್ವಲಿತಸರ್ವಾಙ್ಗಃ ಶಿಶ್ರಿಯೇ ಧ್ವಜಮುತ್ತಮಮ್ ॥೨೮.೨೦॥

 

ಮೂರ್ಛೆಯಿಂದ ಎದ್ದ ಅರ್ಜುನನು ಚೇತರಿಸಿಕೊಂಡು ಮತ್ತೆ  ಶಲ್ಯನ ವಕ್ಷಸ್ಥಳದಲ್ಲಿ ಹೊಡೆದನು. ಶಲ್ಯನಾದರೋ, ನೊಂದ ಅವಯವವುಳ್ಳವನಾಗಿ  ಧ್ವಜದ ದಂಡವನ್ನು ಹಿಡಿದು ನಿಂತನು,

 

ಸಮಾಶ್ವಸ್ತಃ ಪುನರ್ಬಾಣಂ ಯಮದಣ್ಡನಿಭಂ ರಣೇ ।

ಮುಮೋಚ ಪಾರ್ತ್ಥಸ್ಯ ಸ ಚ ನಿರ್ಬಿಭೇದ ಸ್ತನಾನ್ತರಮ್ ॥೨೮.೨೧॥

 

ಪುನಃ ಚೇತರಿಸಿಕೊಂಡ ಶಲ್ಯನು ಯಮನ ದಂಡದಂತೆ ತೀಕ್ಷ್ಣವಾಗಿರುವ ಬಾಣವನ್ನು ಅರ್ಜುನನ ಮೇಲೆ ಬಿಟ್ಟನು. ಆ ಬಾಣವು ಅರ್ಜುನನ ಎದೆಭಾಗವನ್ನು(ಸ್ತನಗಳ ನಡುವಿನ ಭಾಗವನ್ನು) ಛೇದಿಸಿತು.

 

ತೇನ ವಿಹ್ವಲಿತಃ ಪಾರ್ತ್ಥೋ ಧ್ವಜಯಷ್ಟಿಂ ಸಮಾಶ್ರಿತಃ ।

ಸಮಾಶ್ವಸ್ತಃ ಪ್ರಚಿಚ್ಛೇದ ಮದ್ರರಾಜಸ್ಯ ಕಾರ್ಮ್ಮುಕಮ್ ॥೨೮.೨೨॥

 

ಅದರಿಂದ ನೊಂದ ಅರ್ಜುನನು ಧ್ವಜದಂಡವನ್ನು ಹಿಡಿದುಕೊಂಡ. ಸ್ವಲ್ಪ ಹೊತ್ತು ವಿಶ್ರಾಂತಿಪಡೆದು ಚೇತರಿಸಿಕೊಂಡ ಅರ್ಜುನನು ಶಲ್ಯನ ಬಿಲ್ಲನ್ನು ಮತ್ತೆ ಕತ್ತರಿಸಿದ.

 

ಛತ್ರಂ ಧ್ವಜಂ ಚ ತರಸಾ ಸಾರಥಿಂ ಚ ನ್ಯಪಾತಯತ್ ।

ತದಾSನ್ಯಂ ರಥಮಾಸ್ಥಾಯ ಧರ್ಮ್ಮರಾಜಃ ಶರೋತ್ತಮೈಃ ॥೨೮.೨೩॥

 

ಚತುರ್ಭಿಶ್ಚತುರೋ ವಾಹಾಞ್ಛಲ್ಯಸ್ಯ ನಿಜಘಾನ ಹ ।

ಶಲ್ಯೋSನ್ಯಂ ರಥಮಾಸ್ಥಾಯ ಸರ್ವಾಂಸ್ತಾಞ್ಛರವೃಷ್ಟಿಭಿಃ ॥೨೮.೨೪॥

 

ಛಾದಯಾಮಾಸ ರಾಜಾನಂ ವಿರಥಂ ಚ ಚಕಾರ ಹ ।

ನಿಹತ್ಯಾಶ್ವಾನ್ ಸಾತ್ಯಕೇಶ್ಚ ಧೃಷ್ಟದ್ಯುಮ್ನಸ್ಯ ಚಾಭಿಭೂಃ ।

ಚಾಪೇ ಚ್ಛಿತ್ವಾ ಚ ಯಮಯೋರ್ದ್ದಧ್ಮೌ ಶಙ್ಖಂ ಮಹಾಸ್ವನಮ್ ॥೨೮.೨೫॥

 

ಆಗಲೇ ಅರ್ಜುನನು ಶಲ್ಯನ ಛತ್ರವನ್ನೂ, ಧ್ವಜವನ್ನೂ ಕತ್ತರಿಸಿ, ಅವನ ಸಾರಥಿಯನ್ನೂ ಕೊಂದುಹಾಕಿದ. ಆಗ (ಹಿಂದೆ ಶಲ್ಯನಿಂದ ರಥಹೀನನಾಗಿದ್ದ) ಧರ್ಮರಾಜನು ಬೇರೊಂದು ರಥವನ್ನೇರಿ ಬಂದು ನಾಲ್ಕು ಉತ್ಕೃಷ್ಟ ಬಾಣಗಳಿಂದ ಶಲ್ಯನ ನಾಲ್ಕು ಕುದುರೆಗಳನ್ನು ಕೊಂದುಹಾಕಿದ.  ಶಲ್ಯನು ಇನ್ನೊಂದು ರಥವನ್ನೇರಿ ಬಂದು  ಅವರೆಲ್ಲರನ್ನೂ ಬಾಣಗಳಿಂದ ಮುಚ್ಚಿದ. ಧರ್ಮರಾಜನನ್ನು ಶಲ್ಯ ಮತ್ತೆ ರಥಹೀನನನ್ನಾಗಿ ಮಾಡಿದನು. ಸಾತ್ಯಕಿಯ ಮತ್ತು ಧೃಷ್ಟದ್ಯುಮ್ನನ ಅಶ್ವಗಳನ್ನೂ ಶಲ್ಯ ಕೊಂದುಹಾಕಿದ. ನಕುಲ ಸಹದೇವರ ಬಿಲ್ಲುಗಳನ್ನು ಕತ್ತರಿಸಿದ ಶಲ್ಯನು ಮಹಾಧ್ವನಿಯುಳ್ಳ ಶಂಖವನ್ನೂದಿದನು.

No comments:

Post a Comment