ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 23, 2023

Mahabharata Tatparya Nirnaya Kannada 30-28-32

 

ಸಮುಜ್ಜ್ವಲಾ ಪಾಣ್ಡವಕೀರ್ತ್ತಿನಾರೀ ಪದಂ ವಿಧಾಯಾಸುರಪಕ್ಷಮೂರ್ದ್ಧಸು ।

ವರಾಭಯೇ ಚೈವ ಸತಾಂ ಕರಾಭ್ಯಾಂ ಕೃಷ್ಣಪ್ರಸೂತಾ ಜಗದಣ್ಡಮಾವೃಣೋತ್ ॥ ೩೦.೨೮ ॥

 

ಶ್ರೀಕೃಷ್ಣನಿಂದ ಹುಟ್ಟಿದ ಪಾಂಡವರ ಕೀರ್ತಿ ಎಂಬ ಹೆಣ್ಣುಮಗಳು ಚೆನ್ನಾಗಿ ಬೆಳಗುತ್ತಾ, ಅಸುರರ ತಲೆಯಮೇಲೆ ಕಾಲನ್ನು ಇಡುತ್ತಾ, ಸಜ್ಜನರಿಗೆ ಕೈಗಳಿಂದ ವರವನ್ನೂ, ಅಭಯವನ್ನೂ ನೀಡುತ್ತಾ, ಜಗತ್ತನ್ನು ಆವರಿಸಿದಳು.

 

ಪಾತಾಳಪಾದಾಂ ಪೃಥಿವೀನಿತಮ್ಬಾಮಾಕಾಶಮದ್ಧ್ಯಾಂ ಕರಸನ್ತತಾಶಾಮ್ ।

ಗ್ರಹರ್ಕ್ಷತಾರಾಭರಣದ್ಯುವಕ್ಷಸಂ ವಿರಿಞ್ಚಲೋಕಸ್ಥಲಸನ್ಮುಖಾಮ್ಬುಜಾಮ್ ॥ ೩೦.೨೯ ॥

 

ವಿಕುಣ್ಠನಾಥಾಭಯಹಸ್ತಮಾದರಾನ್ಮೂಧ್ನಾ ವಹನ್ತೀಂ ವರಭಾರತಾಖ್ಯಾಮ್ ।

ನಿಶಮ್ಯ ತಾಮೀಕ್ಷ್ಯ ಸಮಸ್ತಲೋಕಾಃ ಪವಿತ್ರಿತಾ ವೇದಿಭವಾಮಿವಾನ್ಯಾಮ್ ॥ ೩೦.೩೦ ॥

 

ಅವಳ ಪಾದ ಪಾತಾಳದಲ್ಲಿತ್ತು. ಅವಳ ನಿತಂಬ(ಕಟಿಪ್ರದೇಶ) ಭೂಮಿಯಲ್ಲಿ, ಆಕಾಶದಲ್ಲಿ ದೇಹದ ನಡುವಿನ ಭಾಗವಿತ್ತು. ಆಕೆ ತನ್ನ ಕೈಯಿಂದ ಎಲ್ಲಾ ದಿಕ್ಕನ್ನೂ  ವ್ಯಾಪಿಸಿದ್ದಳು. ಗೃಹ, ನಕ್ಷತ್ರಗಳೇ ಅವಳ ಆಭರಣಗಳು, ಸ್ವರ್ಗವೇ ಅವಳ ಎದೆ, ಬ್ರಹ್ಮಲೋಕದಲ್ಲಿ ಅವಳ ಮುಖ, ಪರಮಾತ್ಮನ ಅಭಯಹಸ್ತವನ್ನು ಅವಳು ತಲೆಯಲ್ಲಿ ಧರಿಸಿದ್ದಳು. ಭಾರತ ಎಂಬ ಹೆಸರಿನ ಈ  ಪಾಂಡವ ಕೀರ್ತಿನಾರಿಯನ್ನು ಇನ್ನೊಬ್ಬ ದ್ರೌಪದಿಯೋ ಎಂಬಂತೆ ನೋಡಿ ಎಲ್ಲರೂ ಪೂತರಾದರು.

[ಇದು ಭಾರತೀ ದೇವಿಯ ವ್ಯಾಪ್ತಿಯೂ,  ವಾಙ್ಮಯ ವ್ಯಾಪಿಸಿದ ಬಗೆಯೂ ಹೌದು. ಮಹಾಭಾರತದ ಅರಿವು ಪಾತಾಳದಲ್ಲಿಯೂ, ಭೂಮಿಯಲ್ಲಿಯೂ, ಆಕಾಶದಲ್ಲಿಯೂ ಹೀಗೆ ಎಲ್ಲಾ ಕಡೆ  ಪ್ರಚಲಿತವಾಗಿದೆ].

 

ಪ್ರಪಾಲಯತ್ಸ್ವೇವ ಧರಾಂ ಸಕೃಷ್ಣೇಷ್ವದ್ಧೈವ ಪಾರ್ತ್ಥೇಷು ಕಲಿರ್ಬಲಿಶ್ಚ ।

ಸಪಾಪದೈತ್ಯೌ ಕ್ವಚ ರಾಷ್ಟ್ರವಿಪ್ಲವಂ ಸಞ್ಚಕ್ರತುಸ್ತಚ್ಛ್ರುತಮಾಶು ಪಾರ್ತ್ಥೈಃ ॥ ೩೦.೩೧ ॥

 

ಹೀಗೆ ಕೃಷ್ಣನಿಂದ ಕೂಡಿರುವ ಪಾಂಡವರು ಭೂಮಿಯನ್ನು ಪಾಲಿಸುತ್ತಿರಲು, ಕಲಿ ಮತ್ತು ಬಲಿ ಎಂಬ ದೈತ್ಯರು ಇತರ ಪಾಪಿಷ್ಠ ದೈತ್ಯರೊಂದಿಗೆ ಕೂಡಿ, ರಾಷ್ಟ್ರ ವಿಪ್ಲವವನ್ನು ಮಾಡಿದರು. ಪಾಂಡವರಿಂದ ಈ ಘಟನೆಯು ಕೇಳಲ್ಪಟ್ಟಿತು.

 

ನೃಪೇಣ ಕೃಷ್ಣೇನ ಚ ಸಾಧು ಚೋದಿತೋ ಭೀಮಸ್ತದಾ ತೌ ಸಗಣೌ ವಿಜಿತ್ಯ ।

ಬಲಿಂ ಪ್ರವಿದ್ರಾಪ್ಯ ಕಲಿಂ ನಿಬದ್ಧ್ಯ ಸಮಾನಯತ್ ಕೃಷ್ಣನೃಪೇನ್ದ್ರಯೋಃ ಪುರಃ ॥ ೩೦.೩೨ ॥

 

ಧರ್ಮರಾಜನಿಂದಲೂ, ಕೃಷ್ಣನಿಂದಲೂ ಚೆನ್ನಾಗಿ ಪ್ರಚೋದಿಸಲ್ಪಟ್ಟ ಭೀಮಸೇನನು, ಕಲಿ-ಬಲಿಗಳನ್ನು ಅವರ ಗಣದೊಂದಿಗೆ ಗೆದ್ದು, ಬಲಿಯನ್ನು ಓಡಿಸಿ, ಕಲಿಯನ್ನು ಕಟ್ಟಿ, ಎಳೆದುತಂದು  ಧರ್ಮರಾಜ ಹಾಗೂ ಶ್ರೀಕೃಷ್ಣರ ಎದುರುಗಡೆ ನಿಲ್ಲಿಸಿದ.

Sunday, August 20, 2023

Mahabharata Tatparya Nirnaya Kannada 30-21-27

 

ಸಮಸ್ತಭೃತ್ಯಾಶ್ರಿತವೇತನಾನಾಂ ಮಾದ್ರೇಯ ಆಸೀತ್ ಪ್ರಥಮಃ ಪ್ರದಾತಾ ।

ಸ ದುರ್ಮ್ಮುಖಸ್ಯಾSವಸಥೇSವಸಚ್ಚ ಸಮದ್ರರಾಜಾತ್ಮಜಯಾSಗ್ರ್ಯವರ್ತ್ತೀ ॥ ೩೦.೨೧ ॥

 

ಮಾದ್ರಿಯ ಮೊದಲ ಮಗ ನಕುಲನು  ಎಲ್ಲಾ ಕೆಲಸದವರಿಗೆ ಸಂಬಳ ಕೊಡುವುದು, ಸರಕಾರದ ಅನುದಾನ, ಇತ್ಯಾದಿಯನ್ನು ಹಿರಿಯರಿಗೆ ಅನುಗುಣವಾಗಿ ನಿರ್ವಹಿಸುತ್ತಾ, ದುರ್ಮುಖ ಎನ್ನುವ ದುರ್ಯೋಧನನ ತಮ್ಮನ ಮನೆಯಲ್ಲಿ, ಮದ್ರರಾಜನ ಮಗಳಾಗಿರುವ ತನ್ನ ಹೆಂಡತಿಯಿಂದ ಕೂಡಿಕೊಂಡು ಆವಾಸಮಾಡಿದನು.

 

ಸನ್ಧಾನಭೇದಾನುಗತಪ್ರವೃತ್ತಿಸ್ತಿಷ್ಠಂಶ್ಚ ದುರ್ಮ್ಮರ್ಷಣಶುಭ್ರಸದ್ಮನಿ ।

ನೃಪಾಙ್ಗರಕ್ಷಃ ಪ್ರಗೃಹೀತಖಡ್ಗಸ್ತಸ್ಯಾನುಜೋ ಮಾಗಧಕನ್ಯಯಾSSಸೀತ್ ॥ ೩೦.೨೨ ॥

 

ನಕುಲನ ತಮ್ಮ ಸಹದೇವ, ಧರ್ಮರಾಜ ಇತರ ರಾಜರೊಂದಿಗೆ ಸಂಧಾನ ಮಾಡಿಕೊಳ್ಳುವಾಗ ಅಥವಾ  ಇಬ್ಬರು ರಾಜರ ನಡುವೆ ಭೇದವನ್ನು ಮಾಡಬೇಕಾದರೆ, ಅವನ ಹಿಂದೆಯೇ ಬಿಚ್ಚುಗತ್ತಿಯನ್ನು ಹಿಡಿದು ಅಂಗರಕ್ಷಕನಾಗಿ ಕಾರ್ಯವಿರ್ವಹಿಸುತ್ತಿದ್ದ. ಅವನು ದುರ್ಮರ್ಷಣನ ಮನೆಯಲ್ಲಿ ತನ್ನ ಪತ್ನಿಯಾದ  ಜರಾಸಂಧನ ಮಗಳ ಜೊತೆ ವಾಸವಾಗಿದ್ದ.

 

ಸೇನಾಪತಿಃ ಕೃಪ ಆಸೀದ್ ಯುಯುತ್ಸುಃ ಸ ಸಞ್ಜಯೋ ವಿದುರಶ್ಚಾSಮ್ಬಿಕೇಯಮ್ ।

ಪಾರ್ತ್ಥೇರಿತಾಃ ಪರ್ಯ್ಯಚರನ್ ಸ್ವಯಂ ಚ ಸರ್ವೇ ಯಥಾ ದೈವತಮಾದರೇಣ ॥ ೩೦.೨೩ ॥

 

ಸೇನಾಧಿಪತಿ ಕೃಪಾಚಾರ್ಯರೇ ಆಗಿದ್ದರು. ಯುಯುತ್ಸು, ಸಂಜಯ, ವಿದುರ, ಈ ಮೂವರು ಪಾಂಡವರಿಂದ ಪ್ರೇರಿಸಲ್ಪಟ್ಟವರಾಗಿ ಹಾಗೂ ತಮ್ಮ ಇಚ್ಛೆಯಿಂದಲೂ ಕೂಡಾ ಧೃತರಾಷ್ಟ್ರನನ್ನು ಸೇವಿಸಿದರು. ಪಾಂಡವರೆಲ್ಲರೂ ಪ್ರೀತಿವಿಶೇಷದಿಂದ ತಾವೂ ಕೂಡಾ ಧೃತರಾಷ್ಟ್ರನನ್ನು ಸೇವಿಸಿದರು ಮತ್ತು ಮುಖ್ಯವಾಗಿ ಈ ಮೂವರನ್ನು ಆ ಕೆಲಸಕ್ಕೆಂದೇ ನೇಮಿಸಿದ್ದರು.

 

ದ್ವಿರೂಪಕೃಷ್ಣಪ್ರಹಿತೇಷು ಪಾಣ್ಡುಷು ಕ್ಷಿತಿಂ ಪ್ರಶಾಸತ್ಸು ನ ಕಶ್ಚನಾSತುರಃ ।

ನಚಾಕ್ರಮಾನ್ಮೃತ್ಯುರಭೂನ್ನ ನಾರ್ಯ್ಯೋ ವಿಭರ್ತ್ತೃಕಾ ನೋ ವಿಧುರಾ ನರಾಶ್ಚ ॥ ೩೦.೨೪ ॥

 

ನಾರಾಯಣನ ಎರಡು ರೂಪಗಳಿಂದ ಪಾಲಿಸಲ್ಪಟ್ಟ ಪಾಂಡವರು ಭೂಮಿಯನ್ನು ಆಳುತ್ತಿರಲು, ಅಲ್ಲಿ ಯಾರೊಬ್ಬರೂ ರೋಗಿಷ್ಟರಾಗಿರಲಿಲ್ಲ. ಅಲ್ಲಿ ವಿಪರೀತ  ಕ್ರಮದಲ್ಲಿ ಸಾವು ಸಂಭವಿಸುತ್ತಿರಲಿಲ್ಲ (ದೊಡ್ಡವರ ಮುಂದೆ ಚಿಕ್ಕವರು ಸಾಯುವುದು, ಇತ್ಯಾದಿ ಆಗುತ್ತಿರಲಿಲ್ಲ)  ವಿದುರ-ವಿದವೆಯರಿರಲಿಲ್ಲ. (ಅಂದರೆ ಗಂಡ ಹೆಂಡತಿ ಇಬ್ಬರೂ ಒಟ್ಟಿಗೇ ಸಾಯುತ್ತಿದ್ದರು ಎಂದರ್ಥವಲ್ಲ. ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ತಮ್ಮ ಕರ್ತವ್ಯವನ್ನು ಮುಗಿಸಿ ಗಂಡ ಅಥವಾ ಹೆಂಡತಿ ಸತ್ತರೆ, ಅವರನ್ನು ವಿಧವೆ/ವಿದುರ ಎಂದು ಶಾಸ್ತ್ರ ಹೇಳುವುದಿಲ್ಲ).

 

ಶಬ್ದಾದಯಶ್ಚಾSಸುರತೀವ ಹೃದ್ಯಾ ನಿಕಾಮವರ್ಷೀ ಚ ಸುರೇಶ್ವರೋSಭೂತ್ ।

ಪ್ರಜಾ ಅನಾಸ್ಪೃಷ್ಟಸಮಸ್ತತಾಪಾ ಅನನ್ಯಭಕ್ತ್ಯಾSಚ್ಯುತಮರ್ಚ್ಚಯನ್ತಿ ॥ ೩೦.೨೫ ॥

 

ಶಬ್ದ-ಸ್ಪರ್ಶ-ರೂಪ-ರಸ-ಗಂಧ ಈ ವಿಷಯಗಳೆಲ್ಲವೂ ಕೂಡಾ ಅತ್ಯಂತ ರಮಣೀಯವಾಗಿದ್ದವು. ದೇವೇಂದ್ರನು ಬಯಸಿದ್ದನ್ನು ಕೊಡುತ್ತಿದ್ದನು. ಪ್ರಜೆಗಳು ತಾಪದ ಮುಟ್ಟುವಿಕೆಗೆ ಒಳಗಾಗಿರಲಿಲ್ಲ. (ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ಎನ್ನುವ ಮೂರೂ ತಾಪದಿಂದ ಪ್ರಜೆಗಳು ಮುಕ್ತರಾಗಿದ್ದರು). ಅವರೆಲ್ಲರೂ ಪರಮಾತ್ಮನನ್ನೇ ಅನನ್ಯವಾಗಿ ಪೂಜಿಸುತ್ತಿದ್ದರು.  

 

ಪೃಥ್ವೀ ಚ ಗಾವಃ ಸಸರಸ್ವತೀಕಾ ನಿಕಾಮದೋಹಾ ಅಭವನ್ ಸದೈವ ।

ಅಬ್ದಾಬ್ಧಿನದ್ಯೋ ಗಿರಿವೃಕ್ಷಜಙ್ಗಮಾಃ ಸರ್ವೇSಪಿ ರತ್ನಪ್ರಸವಾ ಬಭೂವುಃ ॥ ೩೦.೨೬ ॥

 

ಭೂಮಿ, ಹಸುಗಳು, ವೇದ ಸಮೃದ್ಧಿಯನ್ನು ನೀಡಿದವು. ಮೋಡ, ಸಮುದ್ರ, ನದಿಗಳು, ಗಿರಿ-ಬೆಟ್ಟ-ವೃಕ್ಷಗಳು, ಪ್ರಾಣಿಗಳು, ಎಲ್ಲವೂ ಕೂಡಾ ರತ್ನವನ್ನೇ ಹೆತ್ತವು. (ಅಂದರೆ ಹಸುಗಳು ಯಥೇಚ್ಛ ಹಾಲನ್ನು ಕೊಡುತ್ತಿದ್ದವು. ಮೋಡದಿಂದ ಉತ್ತಮ ಮಳೆಯಾಗುತ್ತಿತ್ತು. ಭೂಮಿಯಲ್ಲಿ ಒಳ್ಳೇ ಬೆಳೆ ಬರುತ್ತಿತ್ತು, ಇತ್ಯಾದಿ. ಹೀಗೆ ಎಲ್ಲವೂ ಸಮೃದ್ಧಿಯಾಗಿತ್ತು ಎಂದರ್ಥ.)  

 

ಕೃಷ್ಣಾಶ್ರಯಾತ್ ಸರ್ವಮಿದಂ ವಶೇ ತೇ ವಿಧಾಯ ಸಮ್ಯಕ್ ಪರಿಪಾಲಯನ್ತಃ ।

ದಿವೀವ ದೇವಾ ಮುಮುದುಃ ಸದೈವ ಮುನೀನ್ದ್ರಗನ್ಧರ್ವನೃಪಾದಿಭಿರ್ವೃತಾಃ ॥ ೩೦.೨೭ ॥

 

ಕೃಷ್ಣನ ಆಶ್ರಯದಲ್ಲಿ ಪಾಂಡವರು ಇಡೀ ಜಗತ್ತನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಚೆನ್ನಾಗಿ ಪಾಲನೆ ಮಾಡುತ್ತಾ, ಸ್ವರ್ಗದಲ್ಲಿ ದೇವತೆಗಳು ಹೇಗೋ, ಹಾಗೇ ಶ್ರೇಷ್ಠ ಮುನಿಗಳಿಂದಲೂ, ಗಂಧರ್ವರಿಂದಲೂ, ರಾಜರು ಮೊದಲಾದವರಿಂದಲೂ ಕೂಡಿದವರಾಗಿ ಆನಂದಿಸಿದರು.   

Mahabharata Tatparya Nirnaya Kannada 30-16-20

 

ವಾಸಿಷ್ಠವೃಷ್ಣಿಪ್ರವರೌ ಪ್ರಪಶ್ಯತಾಂ ತಾಭ್ಯಾಂ ಚ ಭೀಮೇನ ಮುನೀಶ್ವರೈಶ್ಚ ।

ಸಂಶಿಕ್ಷಿತಾನಾಂ ಪ್ರಥಮಾದ್ ಯುಗಾಚ್ಚ ಗುಣಾಧಿಕಃ ಕಲಿರಾಸೀತ್ ಪ್ರಜಾನಾಮ್ ॥ ೩೦.೧೬ ॥

 

ಶ್ರೀಕೃಷ್ಣ ಹಾಗೂ ವೇದವ್ಯಾಸರು ನಿರಂತರವಾಗಿ ಹಸ್ತಿನಪುರದ ಮೇಲೆ ತಮ್ಮ ಗಮನವನ್ನಿಟ್ಟಿದ್ದರು. ಅವರಿಬ್ಬರಿಂದಲೂ,  ಭೀಮಸೇನನಿಂದಲೂ, ಶ್ರೇಷ್ಠ ಮುನಿಗಳಿಂದಲೂ ಚೆನ್ನಾಗಿ ಶಿಕ್ಷಿತರಾದ ಪ್ರಜೆಗಳು ಕೃಷ್ಣ ಹಾಗೂ ವೇದವ್ಯಾಸರನ್ನು ನೋಡುತ್ತಿದ್ದರು. ಅವರಿಬ್ಬರ ಮಾರ್ಗದರ್ಶನ ಅವರಿಗೆ ಸಿಗುತ್ತಿತ್ತು. ಜೊತೆಗೆ  ಭೀಮಸೇನ ಹಾಗೂ ಋಷಿ-ಮುನಿಗಳ ಮಾರ್ಗದರ್ಶನವೂ ಅವರಿಗೆ ಸಿಗುತ್ತಿತ್ತು. ಅದರಿಂದಾಗ ಪ್ರಜೆಗಳ ಪಾಲಿಗೆ ಕಲಿಯುಗವು ಕೃತಯುಗಕ್ಕಿಂತಲೂ ಕೂಡಾ ಗುಣದಿಂದ ಶ್ರೇಷ್ಠವಾದುದಾಯಿತು.

 

ಶುಭಂ ಮಹತ್ ಸ್ವಲ್ಪಫಲಂ ಕೃತೇ ಹಿ ವಿಪರ್ಯ್ಯಯೇಣಾಶುಭಮೇಷ ದೋಷಃ ।

ತದ್ಧೀನಮಪ್ಯುಚ್ಚಶುಭಂ ಕೃತಾದ್ ಯುಗಾಚ್ಚಕ್ರೇ ಕಲಿಂ ಮಾರುತಿರಚ್ಯುತಾಶ್ರಯಾತ್ ॥ ೩೦.೧೭ ॥

 

ಕೃತಯುಗದಲ್ಲಿ ಬಹಳ ಪುಣ್ಯಮಾಡಿದರೆ ಸ್ವಲ್ಪ ಫಲ ಆದರೆ ಇದರ ವಿರುದ್ಧ ಪಾಪ. ಅಂದರೆ ಸ್ವಲ್ಪ ಪಾಪಕ್ಕೂ  ಅಲ್ಲಿ ಹೆಚ್ಚು ಫಲ. ಆದರೆ ಕಲಿಯುಗ ಕೃತಯುಗಕ್ಕೆ ವಿರುದ್ಧ. ಇಲ್ಲಿ ಸ್ವಲ್ಪ ಪುಣ್ಯಕ್ಕೆ ಬಹಳ ಫಲ. ಬಹಳ ಪಾಪಕ್ಕೆ ಸ್ವಲ್ಪ ಫಲ. ಭೀಮಸೇನನು ಶ್ರೀಕೃಷ್ಣನ ಆಶ್ರಯದಿಂದ ಕೃತಯುಗಕ್ಕಿಂತ ಕಲಿಯುಗವನ್ನು ಮಿಗಿಲಾಗಿ ಮಾಡಿದ.  

 

ಧನಞ್ಜಯಃ ಪ್ರೋದ್ಯತದಣ್ಡ ಆಸೀತ್ ಸದಾSನ್ಯಚಕ್ರೇಷು ನಿಜಾಗ್ರಜೇರಿತಃ ।

ವಿಭೀಷಯಿತ್ವಾ ನೃಪತೀನ್ ಸರತ್ನಾನ್ ಪದೋರ್ನ್ನೃಪಸ್ಯಾಗ್ರಭುವೋ ನ್ಯಪಾತಯತ್ ॥ ೩೦.೧೮ ॥

 

ಧನಂಜಯನು ಯುಧಿಷ್ಠಿರನಿಂದ ಪ್ರೇರಿತನಾಗಿ ಯಾವಾಗಲೂ ಬೇರೆ ರಾಷ್ಟ್ರದವರಲ್ಲಿ ದಂಡ-ಸಂಧಿ ಮೊದಲಾದವುಗಳನ್ನು ನೋಡಿಕೊಳ್ಳುತ್ತಿದ್ದ. ಎಲ್ಲಾ ರಾಜರಲ್ಲಿ ಭಯವಿರಿಸಿಕೊಂಡು, ಎಲ್ಲರನ್ನೂ ಧರ್ಮರಾಜನಿಗೆ ವಿನೀತರಾಗಿರುವಂತೆ ಅವನು ನೋಡಿಕೊಳ್ಳುತ್ತಿದ್ದ.

 

ಸದೈವ ಕೃಷ್ಣಸ್ಯ ಮುಖಾರವಿನ್ದಾದ್ ವಿನಿಸ್ಸೃತಂ ತತ್ವವಿನಿರ್ಣ್ಣಯಾಮೃತಮ್ ।

ಪಿಬನ್ ಸುತಾದ್ಯಾಧಿಮಸೌ ಕ್ರಮೇಣ ತ್ಯಜಂಶ್ಚ ರೇಮೇ ವಿರತಾತಿಭೋಗಃ ॥ ೩೦.೧೯ ॥

 

ಯಾವಾಗಲೂ ಶ್ರೀಕೃಷ್ಣನ ಮುಖಕಮಲದಿಂದ ಹೊರಬಂದ ತತ್ವನಿರ್ಣಯವೆಂಬ ಅಮೃತವನ್ನು ಕುಡಿಯುತ್ತಾ, ಮಕ್ಕಳನ್ನು ಕಳೆದುಕೊಂಡ ಹಾಗೂ ಇತರ ದುಃಖವನ್ನು ಕ್ರಮವಾಗಿ ಬಿಡುತ್ತಾ, ನಿವೃತ್ತ ಭೋಗವುಳ್ಳವನಾಗಿ ಅರ್ಜುನ ವಿಹರಿಸಿದನು.

 

ದುಃಶಾಸನಸ್ಯಾSವಸಥಂ ಸುಭದ್ರಾಚಿತ್ರಾಙ್ಗದಾಸಹಿತೋSದ್ಧ್ಯಾವಸಂಶ್ಚ ।

ಸಚನ್ದ್ರಿಕಾಕಾನ್ತಿರನೂನಬಿಮ್ಬೋ ನಭಸ್ಥಿತಶ್ಚನ್ದ್ರ ಇವಾತ್ಯರೋಚತ ॥ ೩೦.೨೦ ॥

 

ಈರೀತಿಯಾದ ಜೀವನವನ್ನು ನಡೆಸುವ ಅರ್ಜುನನು ಸುಭದ್ರೆ ಹಾಗೂ ಚಿತ್ರಾಂಗದೆಯರಿಂದ ಕೂಡಿಕೊಂಡು ದುಃಶಾಸನನ ಮನೆಯಲ್ಲಿ ವಾಸಮಾಡುತ್ತಾ, ಬೆಳದಿಂಗಳಿನಿಂದ ಕೂಡಿದ ಪೂರ್ಣಮಂಡಲವುಳ್ಳ ಚಂದ್ರನಂತೆ ಶೋಭಿಸಿದನು. [ಚಿತ್ರಾಂಗದೆ ಹಿಂದಿನ ಅವತಾರದಲ್ಲಿ ತಾರೆಯಾಗಿದ್ದಾಗ ಸುಗ್ರೀವನ ಅಂಗಸಂಗವನ್ನು ಮಾಡಿದ್ದ ದೋಷದಿಂದ ಈತನಕ ಗಂಡನಿಂದ ದೂರವಿರಬೇಕಾಗಿ ಬಂದಿತ್ತು].

Saturday, August 19, 2023

Mahabharata Tatparya Nirnaya Kannada 30-11-15

ಸರ್ವೋತ್ತುಙ್ಗೋ ನಾಮತಃ ಪ್ರಾಣವಾಯೋರಂಶೋ ನಿಶಾಯಾಂ ಗುರುಪುತ್ರಸೂದಿತಃ ।

ಮಾತಾSಸ್ಯ ದೇವೀತಿ ಚ ರೌಹಿಣೇಯೀ ಭೀಮಪ್ರಿಯಾSSಸೀದ್ ಯಾ ಪುರಾSಸ್ಯೈವ ರಾಕಾ ॥ ೩೦.೧೧ ॥

 

ಮುಖ್ಯಪ್ರಾಣನ ಮಗನಾಗಿರುವ ಪ್ರಾಣ ಎನ್ನುವ ಒಬ್ಬ ವಾಯು ಸರ್ವೋತ್ತುಙ್ಗ ಎನ್ನುವ ಹೆಸರಿನಿಂದ ಭೀಮಸೇನ ಹಾಗೂ ದೇವಿಯಲ್ಲಿ ಹುಟ್ಟಿದ್ದ. ಅವನು ಅಶ್ವತ್ಥಾಮನಿಂದ ಸಂಹರಿಸಲ್ಪಟ್ಟಿದ್ದ. ಅವನ ತಾಯಿ ದೇವಿ ರೋಹಿಣಿಯ ಮಗಳು, ಬಲರಾಮನ ತಂಗಿ. ಅವಳು ಮೂಲರೂಪದಲ್ಲಿ ಹುಣ್ಣಿಮೆಯ ಅಭಿಮಾನಿ ದೇವತೆಯಾದ ರಾಕಾ. ಅವಳೂ ಭೀಮಸೇನನ ಜೊತೆಯಲ್ಲಿದ್ದಳು.  

 

ಅನ್ಯಾಶ್ಚಾSಸುರ್ವಾಸುದೇವ್ಯೋ ದಿಶೋ ಯಾ ಆಪಶ್ಚ ಪೂರ್ವಂ ವಿಂಶತಿರಗ್ರ್ಯರೂಪಾಃ ।

ತಾಭಿರ್ಯ್ಯುತೋ ದೈವತೈರಪ್ಯಲಭ್ಯಾನಭುಙ್ಕ್ತ ಭೋಗಾನ್ ವಿಬುಧಾನುಗಾರ್ಚ್ಚಿತಃ ॥ ೩೦.೧೨ ॥

 

ಹಾಗೆಯೇ, ವಸುದೇವನ ಪುತ್ರಿಯರಾದ,  ಯಾರು ದಿಕ್ಕುಗಳ ಅಭಿಮಾನಿ ದೇವತೆಯರೋ, ಯಾರು ಆಪಭಿಮಾನಿ ದೇವತೆಯರೋ, ಅಂತಹ ಶ್ರೇಷ್ಠ ಸ್ವರೂಪವುಳ್ಳ ಇತರ ಇಪ್ಪತ್ತು ಜನ ಮಡದಿಯರಿಂದ  ಕೂಡಿಕೊಂಡ ಭೀಮಸೇನ, ದೇವತೆಗಳಿಂದಲೂ ಕೂಡಾ ಹೊಂದಲು ಸಾಧ್ಯವಾಗದ ಭೋಗಗಳನ್ನು ಭೋಗಿಸಿದ.

 

ರರಕ್ಷ ಧರ್ಮ್ಮಾನಖಿಲಾನ್ ಹರೇಃ ಸ ನಿಧಾಯ ವಿಪ್ರಾನನುಶಾಸ್ಯ ಯುಕ್ತಾನ್ ।

ಸದ್ವೈಷ್ಣವಾನ್ ವಿದುಷಃ ಪಞ್ಚಪಞ್ಚ ಸವೇತನಾನ್ ಗ್ರಾಮಮನು ಸ್ವಕೀಯಾನ್ ॥ ೩೦.೧೩ ॥

 

ಆ ಭೀಮಸೇನನು ಪ್ರತಿಯೊಂದು ಗ್ರಾಮದಲ್ಲಿಯೂ, ತಮ್ಮವರಾದ ಪರಮಾತ್ಮನಿಗೆ ಸಂಬಂಧಪಟ್ಟ ಎಲ್ಲಾ ಧರ್ಮಗಳಲ್ಲಿ ಆಸಕ್ತರಾದ,  ವಿದ್ವಾಂಸರಾದ,  ಐದೈದು ಬ್ರಾಹ್ಮಣರನ್ನು ಸಂಬಳಕೊಟ್ಟು ನೇಮಿಸಿದ. ಅವರು ಅಲ್ಲಿ ಧರ್ಮ ಲೋಪವಾಗದಂತೆ ನೋಡಿಕೊಳ್ಳುತ್ತಿದ್ದರು.

 

ದಧಾರ ದಣ್ಡಂ ತದವರ್ತ್ತಿಷು ಸ್ವಯಂ ಜಗ್ರಾಹ ಚಾನ್ವೇವ ಮುದಾSಥ ತದ್ಗಾನ್ ।

ತದ್ವೃತ್ತಮನ್ಯೈರಪಿ ವಿಪ್ರವರ್ಯ್ಯೈಃ ಸಂಶೋಧಯನ್ ಸರ್ವಮಸೌ ಯಥಾ ವ್ಯಧಾತ್ ॥ ೩೦.೧೪ ॥

 

ಭೀಮಸೇನನು  ತಾನು ನಿಯಮಿಸಿದ ಬ್ರಾಹ್ಮಣರ ವರದಿಯಂತೆ, ಯಾರು ಧರ್ಮ ಮಾರ್ಗದಲ್ಲಿ ನಡೆಯುತ್ತಿಲ್ಲವೋ ಅವರಿಗೆ ಶಿಕ್ಷೆಯನ್ನು ವಿಧಿಸುತ್ತಿದ್ದ. ಯಾರು ಪರಮಾತ್ಮನ ಧರ್ಮಕ್ಕೆ ಅನುಗುಣವಾಗಿದ್ದರೋ ಅವರನ್ನು ಅವನು ಅನುಗ್ರಹಿಸುತ್ತಿದ್ದ. ತಾನೂ ಕೂಡಾ ಅವರ ಎಲ್ಲಾ ಸಂಗತಿಗಳನ್ನು ಪರಿಶೀಲಿಸುತ್ತಿದ್ದ. ಆ ಐದು ಜನ  ಬ್ರಾಹ್ಮಣರನ್ನು ಇನ್ನಿಷ್ಟು ಜನ ವಿಪ್ರರಿಂದ ನೋಡಿಸುತ್ತಿದ್ದ ಕೂಡಾ.

 

ನಾವೈಷ್ಣವಃ ಕಶ್ಚಿದಭೂತ್ ಕುತಶ್ಚಿನ್ನೈವಾನ್ಯನಿಷ್ಠೋ ನಚ ಧರ್ಮ್ಮಹನ್ತಾ ।

ನ ವಿದ್ಧ್ಯವರ್ತೀ ನಚ ದುಃಖಿತೋSಭೂನ್ನಾಪೂರ್ಣ್ಣವಿತ್ತಶ್ಚ ತದೀಯರಾಷ್ಟ್ರೇ ॥ ೩೦.೧೫ ॥

 

ವಿಷ್ಣುಭಕ್ತನಲ್ಲದವನು ಅಲ್ಲಿ ಇರುತ್ತಿರಲಿಲ್ಲ. ಯಾರೂ ಪರಮಾತ್ಮನನ್ನು ಬಿಟ್ಟು ಬೇರೊಬ್ಬನನ್ನು ಭಕ್ತಿ ಮಾಡುತ್ತಿರಲಿಲ್ಲ. ಯಾರೂ ಕೂಡಾ ಅಧಾರ್ಮಿಕರಾಗಿರಲಿಲ್ಲ. ವಿಧಿಮಾರ್ಗದಲ್ಲಿ ಇಲ್ಲದವರು ಯಾರೂ ಇರಲಿಲ್ಲ, ಅದರಿಂದಾಗಿ ದುಃಖವೂ ಇರಲಿಲ್ಲ. ಅಲ್ಲಿ ಎಲ್ಲರಲ್ಲೂ ಕೂಡಾ ಅಗತ್ಯಕ್ಕೆ ಬೇಕಾದಷ್ಟು ಹಣ ಇರುತ್ತಿತ್ತು.


Thursday, August 17, 2023

Mahabharata Tatparya Nirnaya Kannada 30-06-10

 

ಪ್ರಷ್ಟಾ ಚ ದಾತಾSಖಿಲರಾಜನಮ್ಯೋ ಯಷ್ಟಾ ಚ ಧರ್ಮ್ಮಾತ್ಮಜ ಏವ ತತ್ರ ।

ಬಭೂವ ಪಾಣ್ಡೋರ್ಗ್ಗೃಹಮಾವಸಂಶ್ಚ ರಾಜಾಧಿರಾಜೋ ವನಿತಾನಿವೃತ್ತಃ ॥ ೩೦.೦೬ ॥

 

ಧರ್ಮರಾಜ ಪಾಂಡುವಿನ ಮನೆಯಲ್ಲಿ ವಾಸಮಾಡುತ್ತಿದ್ದ. ಸ್ತ್ರೀಭೋಗದಿಂದ ನಿವೃತ್ತನಾದ ಅವನು  ಪ್ರಶ್ನೆಮಾಡುವವನಾಗಿಯೂ, ಎಲ್ಲಾ ರಾಜರಿಂದ ನಮಸ್ಕಾರಕ್ಕೆ ಒಳಗಾದವನಾಗಿಯೂ, ಯಾಗ ಮಾಡುವವನಾಗಿಯೂ ಇರುತ್ತಿದ್ದ.  

 

ಭೀಮಸ್ತು ದೌರ್ಯ್ಯೋಧನಮೇವ ಸದ್ಮ ಪ್ರಪೇದಿವಾನೂರ್ಜ್ಜಿತವೀರ್ಯ್ಯಲಬ್ಧಮ್ ।

ಕೃಷ್ಣಾಸಹಾಯಃ ಸುರರಾಜಯೋಗ್ಯಾನಭುಙ್ಕ್ತ ಭೋಗಾನ್ ಯುವರಾಜ ಏವ ॥ ೩೦.೦೭ ॥

 

ಯುವರಾಜನಾದ ಭೀಮಸೇನನು ತನ್ನ ಉತ್ಕೃಷ್ಟವಾದ ಪರಾಕ್ರಮದಿಂದ ಪಡೆದುಕೊಂಡ ದುರ್ಯೋಧನನ ಮನೆಯನ್ನು ಹೊಂದಿದವನಾಗಿ, ಅಲ್ಲಿ ದ್ರೌಪದಿಯಿಂದ ಕೂಡಿಕೊಂಡು ಅಲೌಕಿಕವಾದ (ದೇವೇಂದ್ರ ಮಾತ್ರ ಹೊಂದಬಲ್ಲ) ಭೋಗಗಳನ್ನು ಭೋಗಿಸಿದನು.

 

ಕೃಷ್ಣಾ ಚ ಪಾರ್ತ್ಥಾಂಶ್ಚತುರೋ ವಿಹಾಯ ಸುವ್ಯಕ್ತಸಾರಸ್ವತಶುದ್ಧಭಾವಾ ।

ರರಾಜ ರಾಜಾವರಜೇನ ನಿತ್ಯಮನನ್ಯಯೋಗೇನ ಶಿಖೇವ ವಹ್ನೇಃ ॥ ೩೦.೦೮ ॥

 

ಭಾರತೀದೇವಿಯ ಅಸ್ತಿತ್ವವು ಸಂಪೂರ್ಣವಾಗಿ ಅಭಿವ್ಯಕ್ತಿಹೊಂದಿದ ದ್ರೌಪದಿಯು, ಇತರ ಪಾಂಡವರನ್ನು ಬಿಟ್ಟು, ಅಗ್ನಿಯ ಜ್ವಾಲೆಯಂತೆ, ಬೇರೆಯವರ ಸಂಪರ್ಕವಿಲ್ಲದೇ, ಧರ್ಮರಾಜನ ತಮ್ಮನಾಗಿರುವ ಭೀಮಸೇನನೊಂದಿಗೆ ಶೋಭಿಸಿದಳು.

 

ಪ್ರೀತ್ಯೈವ ವಿಜ್ಞಾನಯುಜಾSನ್ಯಪಾರ್ತ್ಥೈಃ ಸಂವಾದತಃ ಪರಿಹೃತಾ ಗತಭಾವಿಕಾಲೇ ।

ಅಪಿ ಸ್ವಕೀಯಂ ಪತಿಮೇವ ಭೀಮಮವಾಪ್ಯ ಸಾ ಪರ್ಯ್ಯಚರನ್ಮುದೈವ ॥ ೩೦.೦೯ ॥

 

ಪ್ರಜ್ಞೆಯನ್ನು ಹೊಂದಿರುವ ಅವಳಿಂದ ಪ್ರೀತಿಯಿಂದಲೇ, ಉಳಿದ ಪಾಂಡವರೊಡನೆ ಸಂವಾದಮಾಡಿ, ಅವರಿಂದ ದೂರ ಇದ್ದಳು. ಹೀಗೆ ತನ್ನ ಸ್ವಕೀಯ ಪತಿಯಾದ ಭೀಮಸೇನನನ್ನು ಹೊಂದಿ ದ್ರೌಪದಿ ಆನಂದದಿಂದಿದ್ದಳು.  

 

ರರಾಜ ರಾಜಾವರಜಸ್ತಯಾ ಸ ದ್ವಿರೂಪಯಾ ಸೋಮಕಕಾಶಿಜಾತಯಾ ।

ಶ್ರಿಯಾ ಭುವಾ ಚೈವ ಯಥಾSಬ್ಜನಾಭೋ ನಿಹತ್ಯ ಸರ್ವಾನ್ ದಿತಿಜಾನ್ ಮಹಾಬ್ಧೌ ॥ ೩೦.೧೦ ॥

 

ಯಾವ ರೀತಿ ಶ್ರೀಮನ್ನಾರಾಯಣನು ಎಲ್ಲಾ ರಾಕ್ಷಸರನ್ನು ಕೊಂದು, ಕ್ಷೀರಸಾಗರದಲ್ಲಿ ಶ್ರೀದೇವಿ- ಭೂದೇವಿಯರಿಂದ ಕೂಡಿ ಶೋಭಿಸಿರುವನೋ ಹಾಗೆಯೇ, ದ್ರೌಪದಿ ಮತ್ತು ಕಾಳಿ ಎನ್ನುವ ಎರಡು ರೂಪದಲ್ಲಿರುವ ಭಾರತೀದೇವಿಯೊಂದಿಗೆ ಭೀಮಸೇನನು ಶೋಭಿಸಿದನು.

Sunday, August 6, 2023

Mahabharata Tatparya Nirnaya Kannada 30-01-05

 

೩೦. ಯಾಗಸಮಾಪ್ತಿಃ

̐

 

ಅಥ ಕೃಷ್ಣಮನುಸ್ಮೃತ್ಯ ಭೀಷ್ಮೇ ಸ್ವಾಂ ವಸುತಾಂ ಗತೇ ।

ಕೃತ್ವಾ ಕಾರ್ಯ್ಯಾಣಿ ಸರ್ವಾಣಿ ಗಙ್ಗಾಮಾಶ್ವಾಸ್ಯ ದುಃಖಿತಾಮ್ ॥ ೩೦.೦೧ ॥

 

ಆಶ್ವಾಸಿತಶ್ಚ ಕೃಷ್ಣಾಭ್ಯಾಂ ಧರ್ಮ್ಮಜೋ ದುಃಖಿತಃ ಪುನಃ ।

ಪರಾಶರಸುತೇನೋಕ್ತಃ ಕೃಷ್ಣೇನಾನನ್ತರಾಧಸಾ                        ॥ ೩೦.೦೨ ॥

 

ಧರ್ಮೋಪದೇಶ ಮಾಡಿದ ನಂತರ ಭೀಷ್ಮಾಚಾರ್ಯರು ಕೃಷ್ಣನನ್ನು ಸ್ಮರಣೆಮಾಡಿ, ಸ್ವರೂಪ ಸಹಜವಾದ ವಸುತ್ವವನ್ನು ಹೊಂದಲು, ಧರ್ಮರಾಜನು ಎಲ್ಲಾ ಕರ್ತವ್ಯಗಳನ್ನು ಮಾಡಿ, ಭೀಷ್ಮಾಚಾರ್ಯರ ಮರಣದಿಂದ ನೊಂದ ಗಂಗೆಯನ್ನು ಸಮಾಧಾನಗೊಳಿಸಿ, ವೇದವ್ಯಾಸರು ಮತ್ತು ಶ್ರೀಕೃಷ್ಣನಿಂದ ಆಶ್ವಾಸನೆಗೊಳಗಾದ. ಆದರೂ ಧರ್ಮರಾಜನು ಮತ್ತೆ ದುಃಖಿತನಾದ. ಆಗ ಅನಂತ ಬಲವುಳ್ಳ ಕೃಷ್ಣನಿಂದಲೂ, ವೇದವ್ಯಾಸರಿಂದಲೂ ಬೋಧಿಸಲ್ಪಟ್ಟ-   

 

ಅಪಾಪೇ ಪಾಪಶಙ್ಕಿತ್ವಾದಶ್ವಮೇಧೈರ್ಯ್ಯಜಾಚ್ಯುತಮ್ ।

ಕುರು ರಾಜ್ಯಂ ಚ ಧರ್ಮ್ಮೇಣ ಪಾಲಯಾಪಾಲಕಾಃ ಪ್ರಜಾಃ ॥ ೩೦.೦೩ ॥

 

‘ಯಾವುದು ಪಾಪವಲ್ಲವೋ, ಅದನ್ನು ಪಾಪ ಎಂದು ಸಂದೇಹಪಡುತ್ತಿರುವುದರಿಂದ ನೀನು  ಅಶ್ವಮೇಧಗಳಿಂದ ಪರಮಾತ್ಮನನ್ನು ಪೂಜಿಸು. ರಾಜ್ಯವನ್ನು ಧರ್ಮದಿಂದ ರಕ್ಷಿಸು. ಪಾಲಕರಿಲ್ಲದ ಪ್ರಜೆಗಳನ್ನು ಚೆನ್ನಾಗಿ ಪೋಷಿಸು.’ 

 

ಇತ್ಯುಕ್ತಃ ಸ ತಥಾ ಚಕ್ರೇ ತ್ಯಕ್ತ್ವಾ ಭೋಗಾಂಶ್ಚ ಕೃತ್ಸ್ನಶಃ ।

ಗೋವ್ರತಾದಿವ್ರತೈರ್ಯ್ಯುಕ್ತಃ ಪಾಲಯಾಮಾಸ ಮೇಧಿನೀಮ್ ॥ ೩೦.೦೪ ॥

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ಸಮಗ್ರವಾಗಿ ಭೋಗಗಳನ್ನು ಬಿಟ್ಟು, ಗೋವ್ರತ ಮೊದಲಾದ ವ್ರತಗಳಿಂದ ಕೂಡಿಕೊಂಡು, ಭೂಮಿಯನ್ನು ಪಾಲನೆ ಮಾಡಿದ.

[ಗೋವ್ರತದ ಕುರಿತು ಮಹಾಭಾರತ, ಪುರಾಣಗಳಲ್ಲಿ ಅನೇಕ ವಿವರಣೆಯನ್ನು ಕಾಣಬಹುದು. ಯೋSಗ್ರೇ ಭಕ್ತ್ಯಾ ಕಿಞ್ಚಿದಪ್ರಾಶ್ಯ ದದ್ಯಾದ್ ಗೋಭ್ಯೋ ನಿತ್ಯಂ ಗೋವ್ರತೀ ಸತ್ಯವಾದೀ’ (ಮಹಾಭಾರತ ಅನುಶಾಸನಪರ್ವ ೧೦೮.೩೦). ‘ಯತ್ರಕುತ್ರಶಯೋ ನಿತ್ಯಂ ಯೇನಕೇನಚಿದಾಶಿತಃ । ಯೇನಕೇನಚಿದಾಚ್ಛನ್ನಃ ಸ ಗೋವ್ರತ ಇಹೋಚ್ಯತೇ’ (ಮಹಾಭಾರತ, ಉದ್ಯೋಗಪರ್ವ, ೯೯.೧೫),  ಗೋಮೂತ್ರೇಣಾSಚರೇತ್ ಸ್ನಾನಂ ವೃತ್ತಿಂ ಕುರ್ಯಾಚ್ಚ ಗೋರಸೈಃ (ಅಗ್ನಿಪುರಾಣ ೨೯೧.೧೨),  ಉತ್ಥಿತಾಸೂತ್ಥಿತಸ್ತಿಷ್ಠೇದುಪವಿಷ್ಟಾಸು ಚ ಸ್ಥಿತಃ । ಅಭುಕ್ತಾಸು ಚ ನಾಶ್ನೀಯಾದಪೀತಾಸು ಚ ನೋ ಪಿಬೇತ್ |  ತ್ರಾಣಂ ಚೈವಾSತ್ಮನಾಕಾರ್ಯಂ ಭಯಾರ್ತಾಶ್ಚಸಮುದ್ಧರೇತ್ | ಆತ್ಮಾನಮಪಿ ಸಂತ್ಯಜ್ಯಗೋವ್ರತಂ ತತ್ ಪ್ರಕೀರ್ತಿತಮ್’(ಪುರಾಣ) ‘ಯಥಾ ಮನುರ್ಮಹಾರಾಜೋ ರಾಮೋ ದಾಶರಥಿರ್ಯಥಾ। ತಥಾ ಭರತಸಿಂಹೋSಪಿ ಪಾಲಯಾಮಾಸ ಮೇದಿನೀಮ್’ (ಆಶ್ವಮೇದಿಕ ಪರ್ವ ೧೫.೦೨). ಗೋಮೂತ್ರ ಬೆರೆಸಿದ ನೀರಿನಿಂದ ಸ್ನಾನ, ಹಾಲು, ಮೊಸರು, ತುಪ್ಪ, ಇತ್ಯಾದಿ ಗೋರಸಗಳಿಂದಲೇ ಜೀವನ, ಗೋವುಗಳು ಎದ್ದಾಗ ಎದ್ದಿರಬೇಕು, ಗೋವುಗಳು ತಿನ್ನದಿದ್ದರೆ ತಿನ್ನಬಾರದು, ಗೋವುಗಳು ನೀರನ್ನು ಕುಡಿಯದಿದ್ದರೆ ನೀರನ್ನು ಕುಡಿಯಬಾರದು, ತಾನು ಅವುಗಳನ್ನು ಯಾವಾಗಲೂ ರಕ್ಷಿಸಬೇಕು, ಅವುಗಳು ಅಳುಕಿದಾಗ ಅವುಗಳನ್ನು ಚೆನ್ನಾಗಿ ಸಮಾಧಾನ ಮಾಡಬೇಕು. ತನಗಿಂತ ಮಿಗಿಲಾಗಿ ಗೋವುಗಳನ್ನು ಅನುಸರಿಸಬೇಕು. ಇದನ್ನು ಗೋವ್ರತ ಎನ್ನುತ್ತಾರೆ. ಇಂತಹ ಗೋವ್ರತವನ್ನು ಪಾಲನೆ ಮಾಡುತ್ತಲೇ ಯುಧಿಷ್ಠಿರ ರಾಜ್ಯವನ್ನು ಪಾಲನೆ ಮಾಡಿದ].

 

ದದೌ ದೇಯಾನಿ ಮುಖ್ಯಾನಿ ಯಥಾಕಾಮಮಖಣ್ಡಿತಮ್ ।

ನೈವಾರ್ತ್ಥೀ ವಿಮುಖಃ ಕಶ್ಚಿದಭೂದ್ ಯೋಗ್ಯಃ ಕದಾಚನ ॥ ೩೦.೦೫ ॥

 

ಕೊಡಬೇಕಾಗಿರುವ ಮುಖ್ಯವಾದ ದಾನಗಳನ್ನು ಸ್ವೀಕರಿಸುವವರ ಬಯಕೆಗೆ ಅನುಗುಣವಾಗಿ ನಿರಂತರವಾಗಿ ಕೊಟ್ಟ. ಬೇಡಲು ಬಂದ ಯೋಗ್ಯನಾದ ಯಾರೂ ಕೂಡಾ ಯುಧಿಷ್ಠಿರನಿಂದ ದಾನವನ್ನು ಪಡೆಯದೇ ವಿಮುಖರಾಗಿ ಹೋಗುತ್ತಿರಲಿಲ್ಲ.

Tuesday, August 1, 2023

Mahabharata Tatparya Nirnaya Kannada 29-55-63

ಅಥಾSಹ ಭೀಮಃ ಪ್ರವರಃ ಸುತತ್ವದೃಶಾಂ ಸಮಸ್ತಾನಭಿಭಾಷ್ಯ ಹರ್ಷಾತ್ ।

ಸ್ಮಯನ್ ನ ಕಾಮಾದತಿರಿಕ್ತಮಸ್ತಿ ಕಿಞ್ಚಿಚ್ಛುಭಂ ಕ್ವಾವರತಾಂ ಸ ಯಾಯಾತ್ ॥ ೨೯.೫೫ ॥

 

ತದನಂತರ ತತ್ವವೇದಿಗಳಲ್ಲಿ ಅಗ್ರಗಣ್ಯನಾದ ಭೀಮಸೇನನು ಸಂತಸದಿಂದ ಎಲ್ಲರನ್ನೂ ಕುರಿತು ಮುಗುಳ್ನಗುತ್ತಾ ಮಾತನಾಡಿದ- ಕಾಮಕ್ಕಿಂತ ಮಿಗಿಲಾದ ಯಾವುದೇ ಪುಣ್ಯವಿಲ್ಲ. ಹೀಗಿರುವಾಗ ಅದು  ನೀಚತ್ವವನ್ನು ಹೇಗೆ ಹೊಂದೀತು?

 

ಕಾಮ್ಯಂ ಹಿ ಕಾಮಾಭಿಧಮಾಹುರಾರ್ಯ್ಯಾಃ ಕಾಮ್ಯಾಃ ಪುಮರ್ತ್ಥಾಃ ಸಹ ಸಾಧನೈರ್ಯ್ಯತ್ ।

ಅಕಾಮ್ಯತಾಂ ಯಾತ್ಯಪುಮರ್ತ್ಥ ಏವ ಪುಮರ್ತ್ಥಿತತ್ವಾದ್ಧಿ ಪುಮರ್ತ್ಥ ಉಕ್ತಃ ॥ ೨೯.೫೬ ॥

 

ಜ್ಞಾನಿಗಳು ಕಾಮ್ಯವನ್ನೇ(ಕಾಮಿಸಲು ಯೋಗ್ಯವಾದುದ್ದನ್ನೇ) ಕಾಮವೆಂದು ಹೇಳುತ್ತಾರೆ. ಎಲ್ಲಾ ಪುರುಷಾರ್ಥಗಳನ್ನು ನಾವು ಬಯಸುತ್ತೇವೆ. (ಧರ್ಮವನ್ನು, ಅರ್ಥವನ್ನು, ಕಾಮವನ್ನು, ಅದರ ಸಾಧನೆ ಸಲಕರಣೆಗಳ ಜೊತೆಗೆ ನಾವು ಬಯಸುತ್ತೇವೆ). ಹಾಗಾಗಿ ಕಾಮ ಶ್ರೇಷ್ಠ. ಪುರುಷಾರ್ಥಕ್ಕೆ ಅಸ್ತಿತ್ವ ಬಂದಿರುವುದೇ ಕಾಮನೆಯಿಂದ. ಕಾಮನೆಯನ್ನು ಬಿಟ್ಟರೆ ಅಸ್ತಿತ್ವದ ಹೇತುವನ್ನೇ ಬಿಟ್ಟಂತೆ. ಹೀಗಾಗಿ ಕಾಮ್ಯತ್ವವಿದ್ದರೆ ಮಾತ್ರ ಪುರುಷಾರ್ಥವು. [ಅರ್ಥಾತ್- ಧರ್ಮ ಮಾಡಬೇಕು ಎಂದು ಬಯಸಬೇಕು, ವಿದ್ಯೆ ಬೇಕೆಂದು ಬಯಸಬೇಕು, ಮೋಕ್ಷವನ್ನು ಬಯಸಬೇಕು,ಪರಮಾತ್ಮನನ್ನು ಬಯಸಬೇಕು.. ಹೀಗೆ ಬಯಕೆ ಇಲ್ಲದಿದ್ದರೆ ಏನೂ ಇಲ್ಲ.]

 

ವಿಜ್ಞಾನಭಕ್ತ್ಯಾದಿಕಮಪ್ಯತೀವ ಸತ್ಸಾಧನಂ ಕಾಮಬಹಿಷ್ಕೃತಂ ಚೇತ್ ।

ನ ಸಾಧನಂ ಸ್ಯಾತ್ ಪರಮೋSಪಿ ಮೋಕ್ಷೋ ನ ಸಾದ್ಧ್ಯತಾಂ ಯಾತಿ ವಿನಾ ಹಿ ಕಾಮಾತ್ ॥ ೨೯.೫೭ ॥

 

ವಿಜ್ಞಾನ, ಭಕ್ತಿ, ಮೊದಲಾದವೂ ಕೂಡಾ ಪುರುಷಾರ್ಥದ ಸಾಧನಗಳು. ಆದರೆ ಅದು ಕಾಮದಿಂದ  ಬಹಿಷ್ಕೃತಗೊಂಡಿದ್ದರೆ ಸಾಧನ ಆಗುವುದೇ ಇಲ್ಲ. ಕೊನೆಯಲ್ಲಿ ಮೊಕ್ಷವನ್ನೂ ಕೂಡಾ ಬಯಸದೇ ಪಡೆಯಲು ಸಾಧ್ಯವಿಲ್ಲ.

 

ಪರಾತ್ ಪರೋSಪ್ಯಾದಿಪುಮಾನ್ ಹರಿಶ್ಚ ಸ್ವಸ್ಯೇತರೇಷಾಮಪಿ ಕಾಮ್ಯ ಏವ ।

ಅಕಾಮಿತೋSವಾಗ್ಗತಿಮೇವ ದದ್ಯಾತ್ ಕಾಮಃ ಪುಮರ್ತ್ಥೋSಖಿಲ ಏವ ತೇನ ॥ ೨೯.೫೮ ॥

 

ಎಲ್ಲರಿಗಿಂತಲೂ ಮಿಗಿಲಾದ ಆದಿಪುರುಷನಾದ ನಾರಾಯಣನೂ ಕೂಡಾ ತನಗೆ ಹಾಗೂ  ಪುರುಷಾರ್ಥವನ್ನು ಇಚ್ಛಿಸುವ ಇತರರಿಗೂ ಕಾಮ್ಯನೇ ಆಗಿದ್ದಾನೆ. (ಪರಮಾತ್ಮನು ನನ್ನ ಪ್ರೀತಿಗೆ ಆಸ್ಪದನು, ನನ್ನ ಆನಂದಕ್ಕೆ ಅವನು ಕಾರಣನಾದ್ದರಿಂದ ಅವನನ್ನು ನಾನು ಪ್ರೀತಿಸುತ್ತೇನೆ. ತನಗೆ ತಾನೇ ಕಾಮ್ಯನಾಗಿರುವುದರಿಂದ ಪರಮಾತ್ಮನು ಪರಮಾತ್ಮನಿಗೇ ಪ್ರಿಯನು). ಕಾಮ್ಯನಾದ ಪರಮಾತ್ಮನು ತನ್ನನ್ನು ಬಯಸದೇ ಇರುವವರಿಗೆ ಅಧಮವಾದ ಗತಿಯನ್ನು ಕೊಡುತ್ತಾನೆ. ಹೀಗಾಗಿ (ಕಾಮ್ಯಕ್ಕೆ ಕಾಮ ವಾಚ್ಯತ್ವವಿರುವುದರಿಂದ) ಕಾಮವು ಉತ್ತಮ ಪುರುಷಾರ್ಥವಾಗಿದೆ.    

 

ಇಚ್ಛೈವ ಕಾಮೋSಸ್ತು ತಥಾSಪಿ ನೈತಾಮೃತೇ ಹಿ ಚಿತ್ತ್ವಂ ಘಟಕುಡ್ಯವತ್ ಸ್ಯಾತ್ ।

ಸಾರಸ್ತತಃ ಸೈವ ಚಿದಾತ್ಮಿಕಾSಪಿ ಸಾ ಚೇತನಾ ಗೂಢತನುಃ ಸದೈವ ॥ ೨೯.೫೯ ॥

 

ಕಾಮ ಎಂದರೆ ಬಯಕೆ(ಇಚ್ಛೆ) ಎಂದಿಟ್ಟುಕೊಂಡರೂ ಕೂಡಾ, ಈ ಇಚ್ಛೆಯನ್ನು ಬಿಟ್ಟು ಚೈತನ್ಯವು ಇರಲಾರದು. ಇಚ್ಛೆ ಇಲ್ಲದ ಚೈತನ್ಯ ಮಡಿಕೆ-ಗೋಡೆಗೆ ಸಮ. (ಜಡ ಹಾಗೂ ಚೇತನಕ್ಕೆ ಇರುವ ದೊಡ್ಡ ವ್ಯತ್ಯಾಸ-ಬಯಕೆ), ಆಕಾರಣದಿಂದ ಅದೇ ಸಾರ. ಆ ಇಚ್ಛೆಯು ಜೀವಸ್ವರೂಪಾತ್ಮಕವಾಗಿ ಗೂಢವಾಗಿ ಯಾವಾಗಲೂ ಒಳಗಿರುತ್ತದೆ.

[‘ಇಚ್ಛೈವ ಕಾಮೋsಸ್ತು’ ಎನ್ನುವುದನ್ನು ಮಹಾಭಾರತದ ಶಾಂತಿಪರ್ವದಲ್ಲಿ ಬರುವ ಆಪದ್ಧರ್ಮಪರ್ವದಲ್ಲಿ ನಿರೂಪಣೆ ಮಾಡಿರುವುದನ್ನು ನಾವು ಕಾಣಬಹುದು:  ಕಾಮೋ ಹಿ ವಿವಿಧಾಕಾರಃ ಸರ್ವಂ ಕಾಮೇನ ಸಂತತಮ್ । ನಾಸ್ತಿ ನಾSಸೀನ್ನ ಭವಿತಾ ಭೂತಂ ಕಾಮಮೃತೇ ಪರಮ್’ (ಶಾಂತಿಪರ್ವ ೧೬೫. ೩೮)]

 

ನ ಪ್ರಶ್ನಯೋಗ್ಯಃ ಪೃಥಗೇವ ಕಾಮಸ್ತೇನೈಷ ರಾಜನ್ ಯದಿ ತಾರತಮ್ಯಮ್ ।

ಇಚ್ಛಸ್ಯಯಂ ತೇ ತ್ರಿವಿಧೋ ಹಿ ವೇದ್ಯೋ ಧರ್ಮ್ಮಾರ್ತ್ಥಯುಕ್ತಃ ಪರಮೋ ಮತೋSತ್ರ ॥ ೨೯.೬೦ ॥

 

ಏಕಾವಿರೋಧೀ ಯದಿ ಮದ್ಧ್ಯಮೋSಸೌ ದ್ವಯೋರ್ವಿರೋಧೀ ತು ಸ ಏವ ನೀಚಃ ।

ತಸ್ಮಾತ್ ಸ್ವಬುದ್ಧಿಪ್ರಮದಾಭಿರೇವ ಕಾಮಂ ರಮೇಥಾ ಅನುರೂಪಕಾಮಃ ॥ ೨೯.೬೧ ॥

 

ಕಾಮ ಪ್ರತ್ಯೇಕವಾಗಿ ಪ್ರಶ್ನೆಗೆ ಯೋಗ್ಯವಾದದ್ದೇ ಅಲ್ಲ. ಎಲೈ ರಾಜನೇ, ಒಂದು ವೇಳೆ ತಾರತಮ್ಯವನ್ನು ಬಯಸುವುದಾದರೆ ಮೂರು ತರದ ಕಾಮವಿದೆ ಎಂದು ತಿಳಿದುಕೊಳ್ಳಬೇಕು. ಆ ಮೂರರಲ್ಲಿ ಧರ್ಮ ಹಾಗೂ ಅರ್ಥಗಳಿಂದ ಕೂಡಿರುವ ಕಾಮ ಶ್ರೇಷ್ಠ.[ಕಾಮ ಎನ್ನುವುದು ಧರ್ಮ-ಅರ್ಥಗಳಿಗೆ ಸಾಧನವಾಗಿದ್ದರೆ ಅದು ಶ್ರೇಷ್ಠ]  ಪುರುಷಾರ್ಥದಲ್ಲಿ ಒಂದಕ್ಕೆ ವಿರುದ್ಧವಾಗಿದ್ದರೆ  - ಅದು ಮಧ್ಯಮ. ಎರಡಕ್ಕೆ ವಿರುದ್ಧವಿದ್ದರೆ ಅದು ನೀಚವೇ. ನಮ್ಮ ಯೋಗ್ಯತೆಗೆ ತಕ್ಕ ಕಾಮನೆಗಳನ್ನಿಟ್ಟುಕೊಂಡು, ಬುದ್ಧಿಯೆಂಬ ಹೆಣ್ಣುಗಳಿಂದ ಚೆನ್ನಾಗಿ ಕ್ರೀಡಿಸಬೇಕು.  [‘ಕಾಮ ಎನ್ನುವುದು ಬೇಕೇ ಬೇಕು. ಕಾಮವೆನ್ನುವುದೇ ಪುರುಷಾರ್ಥ’  ಎಂದು ಹೇಳಿದ ಭೀಮಸೇನ ಮುಂದೆ ಹೇಳುತ್ತಾನೆ- ‘ರಮಸ್ವ ಯೋಷಿದ್ಭಿರುಪೇತ್ಯ ಕಾಮಂ ಕಾಮೋ ಹಿ ರಾಜನ್ ಪರಮೋ ಭವೇನ್ನಃ’(ಶಾಂತಿಪರ್ವ ೧೬೫.೩೮)  ಈ ಮಾತಿನ ತಾತ್ಪರ್ಯವನ್ನು ಆಚಾರ್ಯರು  ವಿವರಿಸಿದ್ದಾರೆ.

‘ಹೆಂಡತಿ ಪ್ರಾಣ ಹಿಂಡುತಿ’ ಎಂದು ಹಾಡಿದ ಪುರಂದರದಾಸರು ‘ಹೆಂಡತಿ; ಎಂದರೆ ಬುದ್ಧಿ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಭಾಗವತದಲ್ಲಿ- ‘ಬುದ್ಧಿಂ ತು ಪ್ರಮದಾಂ ವಿದ್ಯಾತ್’ (ಭಾಗವತ ೪.೨೯.೫)) ಎಂದು ಹೇಳಿರುವುದನ್ನು ಕಾಣುತ್ತೇವೆ. ಪರಮಾತ್ಮನಲ್ಲಿ ಅನ್ಯತಾ ಬುದ್ಧಿ ಏನಿದೆ, ಅದನ್ನೇ ಗೂಢಭಾಷೆಯಲ್ಲಿ ಸ್ತ್ರೀ ಎಂದು ಕರೆಯುತ್ತಾರೆ. ಹೀಗಾಗಿ ಸ್ತ್ರೀಯರನ್ನು ಬಿಡಬೇಕು ಎಂದರೆ- ಪರಮಾತ್ಮನಲ್ಲಿ ವಿಪರೀತವಾದ ಪ್ರಜ್ಞೆಯನ್ನು ಬಿಡಬೇಕು ಎಂದರ್ಥ.  ನಾವು ಈ ಅರ್ಥದ ಹಿನ್ನೆಲೆಯಲ್ಲಿ ಭೀಮಸೇನನ ಮಾತನ್ನು ನೋಡಬೇಕು].

 

ರಾಜನ್ ನ ಕಾಮಾದಪರಂ ಶುಭಂ ಹಿ ಪರೋ ಹಿ ಕಾಮೋ ಹರಿರೇವ ಯೇನ ।

‘ಪ್ರಾಜ್ಞಃ ಸುಹೃಚ್ಚನ್ದನಸಾರಲಿಪ್ತೋ ವಿಚಿತ್ರಮಾಲ್ಯಾಭರಣೈರುಪೇತಃ ।

ಇದಂ ವಚೋ ವ್ಯಾಸಸಮಾಸಯುಕ್ತಂ ಸಮ್ಪ್ರೋಚ್ಯ ಭೀಮೋ ವಿರರಾಮ ವೀರಃ’ ॥ ೨೯.೬೨ ॥

 

ರಾಜನ್, ಕಾಮಕ್ಕಿಂತ ಮಿಗಿಲಾದ ಮಂಗಳಕರವಾದದ್ದು ಇಲ್ಲವೇ ಇಲ್ಲ. ಪರಮಾತ್ಮನೇ ಕಾಮ ಸಾಧನನಷ್ಟೇ. ಭಗವಂತ ಪ್ರಾಜ್ಞಃ. ಸುಹೃತ್, ಚಂದನ ಲೇಪಿತ, ವಿಚಿತ್ರವಾದ ಆಭರಣ ಮೊದಲಾದವುಗಳಿಂದ ಕೂಡಿಕೊಂಡು(ಧರ್ಮಗ್ರಂಥಗಳ ಅನುಭವಕ್ಕೆ ಅನುಗುಣವಾಗಿ) ಅವನು ರಮಿಸುತ್ತಾನೆ. ಇಂತಹ ಪರಮಾತ್ಮನೇ ಕಾಮಗಳಲ್ಲಿ ಅತ್ಯುತ್ತಮ ಕಾಮನಾಗಿರುವುದರಿಂದ, ಕಾಮಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ. (ಪರಮಾತ್ಮನೇ ಕಾಮ್ಯವಾಗಿರುವುದರಿಂದ, ಪರಮಾತ್ಮನ ಭಕ್ತರೇ ಅವನ ಮಿತ್ರರು. ‘ದ್ವಾ ಸುಪರ್ಣಾ ಸಯುಜಾಸಖಾಯಾ  ಎನ್ನುವ ಉಪನಿಷತ್ತಿನ ಮಾತು, ಭಾಗವತದಲ್ಲಿ ಬರುವ ‘ತಸ್ಯಾವಿಜ್ಞಾತನಾಮಾSSಸೀತ್ ಸಖಾSವಿಜ್ಞಾತಚೇಷ್ಟಿತಃ’(೪.೨೫.೧೦) ಎನ್ನುವ ಪುರಂಜನ ರಾಜನ ಕಥೆ, ಇವೆಲ್ಲವೂ ನಮ್ಮ ಆತ್ಮೀಯ ಸ್ನೇಹಿತ, ನಮ್ಮೊಂದಿಗಿರುವ ಕೃಷ್ಣನೇ ನಮ್ಮ ಪರಮಧ್ಯೇಯ ಎನ್ನುವುದನ್ನು ತಿಳಿಸುತ್ತದೆ) ಇದೇ ರೀತಿಯ ಮಾತನ್ನು ಸಂಕ್ಷಿಪ್ತವಾಗಿಯೂ, ಮತ್ತೆ ವಿಸ್ತಾರವಾಗಿಯೂ ಹೇಳಿದ ಭೀಮಸೇನನು ತನ್ನ ಮಾತನ್ನು ಕೊನೆಗೊಳಿಸಿದನು.

 

ಪ್ರಶಸ್ಯ ಭೀಮಮನ್ಯಾಂಶ್ಚ ರಾಜಾ ಮೋಕ್ಷಮಥಾಸ್ತುವತ್ ।

ಸ್ವಯುಕ್ತೇರಪ್ರತೀಪತ್ವಾನ್ನಿರಾಚಕ್ರೇ ನ ಮಾರುತಿಃ ॥ ೨೯.೬೩ ॥

 

ಧರ್ಮರಾಜನು ಉಳಿದವರನ್ನೂ, ಭೀಮಸೇನನನ್ನೂ ಹೊಗಳಿ, ಮೋಕ್ಷವನ್ನು ಸ್ತೋತ್ರಮಾಡಿದ(ಮೋಕ್ಷವೇ ಶ್ರೇಷ್ಠ ಎಂದು ಪ್ರತಿಪಾದನೆ ಮಾಡಿದ) ಅಲ್ಲಿ ಹೇಳಿದ ಎಲ್ಲಾ ಯುಕ್ತಿಗಳು ತನ್ನ ಯುಕ್ತಿಗೆ ವಿರುದ್ಧವಾಗದಿರುವುದರಿಂದ, ಭೀಮಸೇನ ಯುಧಿಷ್ಠಿರನ ಮಾತನ್ನು ನಿರಾಕರಣೆ ಮಾಡಲಿಲ್ಲ.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸಮಸ್ತಧರ್ಮ್ಮಸಙ್ಗ್ರಹೋನಾಮ ಏಕೋನತ್ರಿಂಶೋSದ್ಧ್ಯಾಯಃ ॥

[ ಆದಿತಃ ಶ್ಲೋಕಾಃ ೪೬೮೨+೬೩=೪೭೪೫ ]

*********