ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 19, 2023

Mahabharata Tatparya Nirnaya Kannada 30-11-15

ಸರ್ವೋತ್ತುಙ್ಗೋ ನಾಮತಃ ಪ್ರಾಣವಾಯೋರಂಶೋ ನಿಶಾಯಾಂ ಗುರುಪುತ್ರಸೂದಿತಃ ।

ಮಾತಾSಸ್ಯ ದೇವೀತಿ ಚ ರೌಹಿಣೇಯೀ ಭೀಮಪ್ರಿಯಾSSಸೀದ್ ಯಾ ಪುರಾSಸ್ಯೈವ ರಾಕಾ ॥ ೩೦.೧೧ ॥

 

ಮುಖ್ಯಪ್ರಾಣನ ಮಗನಾಗಿರುವ ಪ್ರಾಣ ಎನ್ನುವ ಒಬ್ಬ ವಾಯು ಸರ್ವೋತ್ತುಙ್ಗ ಎನ್ನುವ ಹೆಸರಿನಿಂದ ಭೀಮಸೇನ ಹಾಗೂ ದೇವಿಯಲ್ಲಿ ಹುಟ್ಟಿದ್ದ. ಅವನು ಅಶ್ವತ್ಥಾಮನಿಂದ ಸಂಹರಿಸಲ್ಪಟ್ಟಿದ್ದ. ಅವನ ತಾಯಿ ದೇವಿ ರೋಹಿಣಿಯ ಮಗಳು, ಬಲರಾಮನ ತಂಗಿ. ಅವಳು ಮೂಲರೂಪದಲ್ಲಿ ಹುಣ್ಣಿಮೆಯ ಅಭಿಮಾನಿ ದೇವತೆಯಾದ ರಾಕಾ. ಅವಳೂ ಭೀಮಸೇನನ ಜೊತೆಯಲ್ಲಿದ್ದಳು.  

 

ಅನ್ಯಾಶ್ಚಾSಸುರ್ವಾಸುದೇವ್ಯೋ ದಿಶೋ ಯಾ ಆಪಶ್ಚ ಪೂರ್ವಂ ವಿಂಶತಿರಗ್ರ್ಯರೂಪಾಃ ।

ತಾಭಿರ್ಯ್ಯುತೋ ದೈವತೈರಪ್ಯಲಭ್ಯಾನಭುಙ್ಕ್ತ ಭೋಗಾನ್ ವಿಬುಧಾನುಗಾರ್ಚ್ಚಿತಃ ॥ ೩೦.೧೨ ॥

 

ಹಾಗೆಯೇ, ವಸುದೇವನ ಪುತ್ರಿಯರಾದ,  ಯಾರು ದಿಕ್ಕುಗಳ ಅಭಿಮಾನಿ ದೇವತೆಯರೋ, ಯಾರು ಆಪಭಿಮಾನಿ ದೇವತೆಯರೋ, ಅಂತಹ ಶ್ರೇಷ್ಠ ಸ್ವರೂಪವುಳ್ಳ ಇತರ ಇಪ್ಪತ್ತು ಜನ ಮಡದಿಯರಿಂದ  ಕೂಡಿಕೊಂಡ ಭೀಮಸೇನ, ದೇವತೆಗಳಿಂದಲೂ ಕೂಡಾ ಹೊಂದಲು ಸಾಧ್ಯವಾಗದ ಭೋಗಗಳನ್ನು ಭೋಗಿಸಿದ.

 

ರರಕ್ಷ ಧರ್ಮ್ಮಾನಖಿಲಾನ್ ಹರೇಃ ಸ ನಿಧಾಯ ವಿಪ್ರಾನನುಶಾಸ್ಯ ಯುಕ್ತಾನ್ ।

ಸದ್ವೈಷ್ಣವಾನ್ ವಿದುಷಃ ಪಞ್ಚಪಞ್ಚ ಸವೇತನಾನ್ ಗ್ರಾಮಮನು ಸ್ವಕೀಯಾನ್ ॥ ೩೦.೧೩ ॥

 

ಆ ಭೀಮಸೇನನು ಪ್ರತಿಯೊಂದು ಗ್ರಾಮದಲ್ಲಿಯೂ, ತಮ್ಮವರಾದ ಪರಮಾತ್ಮನಿಗೆ ಸಂಬಂಧಪಟ್ಟ ಎಲ್ಲಾ ಧರ್ಮಗಳಲ್ಲಿ ಆಸಕ್ತರಾದ,  ವಿದ್ವಾಂಸರಾದ,  ಐದೈದು ಬ್ರಾಹ್ಮಣರನ್ನು ಸಂಬಳಕೊಟ್ಟು ನೇಮಿಸಿದ. ಅವರು ಅಲ್ಲಿ ಧರ್ಮ ಲೋಪವಾಗದಂತೆ ನೋಡಿಕೊಳ್ಳುತ್ತಿದ್ದರು.

 

ದಧಾರ ದಣ್ಡಂ ತದವರ್ತ್ತಿಷು ಸ್ವಯಂ ಜಗ್ರಾಹ ಚಾನ್ವೇವ ಮುದಾSಥ ತದ್ಗಾನ್ ।

ತದ್ವೃತ್ತಮನ್ಯೈರಪಿ ವಿಪ್ರವರ್ಯ್ಯೈಃ ಸಂಶೋಧಯನ್ ಸರ್ವಮಸೌ ಯಥಾ ವ್ಯಧಾತ್ ॥ ೩೦.೧೪ ॥

 

ಭೀಮಸೇನನು  ತಾನು ನಿಯಮಿಸಿದ ಬ್ರಾಹ್ಮಣರ ವರದಿಯಂತೆ, ಯಾರು ಧರ್ಮ ಮಾರ್ಗದಲ್ಲಿ ನಡೆಯುತ್ತಿಲ್ಲವೋ ಅವರಿಗೆ ಶಿಕ್ಷೆಯನ್ನು ವಿಧಿಸುತ್ತಿದ್ದ. ಯಾರು ಪರಮಾತ್ಮನ ಧರ್ಮಕ್ಕೆ ಅನುಗುಣವಾಗಿದ್ದರೋ ಅವರನ್ನು ಅವನು ಅನುಗ್ರಹಿಸುತ್ತಿದ್ದ. ತಾನೂ ಕೂಡಾ ಅವರ ಎಲ್ಲಾ ಸಂಗತಿಗಳನ್ನು ಪರಿಶೀಲಿಸುತ್ತಿದ್ದ. ಆ ಐದು ಜನ  ಬ್ರಾಹ್ಮಣರನ್ನು ಇನ್ನಿಷ್ಟು ಜನ ವಿಪ್ರರಿಂದ ನೋಡಿಸುತ್ತಿದ್ದ ಕೂಡಾ.

 

ನಾವೈಷ್ಣವಃ ಕಶ್ಚಿದಭೂತ್ ಕುತಶ್ಚಿನ್ನೈವಾನ್ಯನಿಷ್ಠೋ ನಚ ಧರ್ಮ್ಮಹನ್ತಾ ।

ನ ವಿದ್ಧ್ಯವರ್ತೀ ನಚ ದುಃಖಿತೋSಭೂನ್ನಾಪೂರ್ಣ್ಣವಿತ್ತಶ್ಚ ತದೀಯರಾಷ್ಟ್ರೇ ॥ ೩೦.೧೫ ॥

 

ವಿಷ್ಣುಭಕ್ತನಲ್ಲದವನು ಅಲ್ಲಿ ಇರುತ್ತಿರಲಿಲ್ಲ. ಯಾರೂ ಪರಮಾತ್ಮನನ್ನು ಬಿಟ್ಟು ಬೇರೊಬ್ಬನನ್ನು ಭಕ್ತಿ ಮಾಡುತ್ತಿರಲಿಲ್ಲ. ಯಾರೂ ಕೂಡಾ ಅಧಾರ್ಮಿಕರಾಗಿರಲಿಲ್ಲ. ವಿಧಿಮಾರ್ಗದಲ್ಲಿ ಇಲ್ಲದವರು ಯಾರೂ ಇರಲಿಲ್ಲ, ಅದರಿಂದಾಗಿ ದುಃಖವೂ ಇರಲಿಲ್ಲ. ಅಲ್ಲಿ ಎಲ್ಲರಲ್ಲೂ ಕೂಡಾ ಅಗತ್ಯಕ್ಕೆ ಬೇಕಾದಷ್ಟು ಹಣ ಇರುತ್ತಿತ್ತು.


No comments:

Post a Comment