ಅಥಾSಹ ಭೀಮಃ ಪ್ರವರಃ ಸುತತ್ವದೃಶಾಂ ಸಮಸ್ತಾನಭಿಭಾಷ್ಯ ಹರ್ಷಾತ್ ।
ಸ್ಮಯನ್ ನ
ಕಾಮಾದತಿರಿಕ್ತಮಸ್ತಿ ಕಿಞ್ಚಿಚ್ಛುಭಂ ಕ್ವಾವರತಾಂ ಸ ಯಾಯಾತ್ ॥ ೨೯.೫೫ ॥
ತದನಂತರ ತತ್ವವೇದಿಗಳಲ್ಲಿ ಅಗ್ರಗಣ್ಯನಾದ ಭೀಮಸೇನನು ಸಂತಸದಿಂದ ಎಲ್ಲರನ್ನೂ ಕುರಿತು ಮುಗುಳ್ನಗುತ್ತಾ
ಮಾತನಾಡಿದ- ಕಾಮಕ್ಕಿಂತ ಮಿಗಿಲಾದ ಯಾವುದೇ ಪುಣ್ಯವಿಲ್ಲ. ಹೀಗಿರುವಾಗ ಅದು ನೀಚತ್ವವನ್ನು ಹೇಗೆ ಹೊಂದೀತು?
ಕಾಮ್ಯಂ ಹಿ
ಕಾಮಾಭಿಧಮಾಹುರಾರ್ಯ್ಯಾಃ ಕಾಮ್ಯಾಃ ಪುಮರ್ತ್ಥಾಃ ಸಹ ಸಾಧನೈರ್ಯ್ಯತ್ ।
ಅಕಾಮ್ಯತಾಂ ಯಾತ್ಯಪುಮರ್ತ್ಥ
ಏವ ಪುಮರ್ತ್ಥಿತತ್ವಾದ್ಧಿ ಪುಮರ್ತ್ಥ ಉಕ್ತಃ ॥ ೨೯.೫೬ ॥
ಜ್ಞಾನಿಗಳು
ಕಾಮ್ಯವನ್ನೇ(ಕಾಮಿಸಲು ಯೋಗ್ಯವಾದುದ್ದನ್ನೇ) ಕಾಮವೆಂದು ಹೇಳುತ್ತಾರೆ. ಎಲ್ಲಾ ಪುರುಷಾರ್ಥಗಳನ್ನು
ನಾವು ‘ಬಯಸುತ್ತೇವೆ’. (ಧರ್ಮವನ್ನು, ಅರ್ಥವನ್ನು, ಕಾಮವನ್ನು, ಅದರ ಸಾಧನೆ ಸಲಕರಣೆಗಳ ಜೊತೆಗೆ ನಾವು ಬಯಸುತ್ತೇವೆ).
ಹಾಗಾಗಿ ಕಾಮ ಶ್ರೇಷ್ಠ. ಪುರುಷಾರ್ಥಕ್ಕೆ ಅಸ್ತಿತ್ವ ಬಂದಿರುವುದೇ ಕಾಮನೆಯಿಂದ. ಕಾಮನೆಯನ್ನು
ಬಿಟ್ಟರೆ ಅಸ್ತಿತ್ವದ ಹೇತುವನ್ನೇ ಬಿಟ್ಟಂತೆ. ಹೀಗಾಗಿ ಕಾಮ್ಯತ್ವವಿದ್ದರೆ ಮಾತ್ರ ಪುರುಷಾರ್ಥವು.
[ಅರ್ಥಾತ್- ಧರ್ಮ ಮಾಡಬೇಕು ಎಂದು ಬಯಸಬೇಕು, ವಿದ್ಯೆ ಬೇಕೆಂದು ಬಯಸಬೇಕು, ಮೋಕ್ಷವನ್ನು ಬಯಸಬೇಕು,ಪರಮಾತ್ಮನನ್ನು ಬಯಸಬೇಕು.. ಹೀಗೆ
ಬಯಕೆ ಇಲ್ಲದಿದ್ದರೆ ಏನೂ ಇಲ್ಲ.]
ವಿಜ್ಞಾನಭಕ್ತ್ಯಾದಿಕಮಪ್ಯತೀವ
ಸತ್ಸಾಧನಂ ಕಾಮಬಹಿಷ್ಕೃತಂ ಚೇತ್ ।
ನ ಸಾಧನಂ ಸ್ಯಾತ್ ಪರಮೋSಪಿ ಮೋಕ್ಷೋ ನ ಸಾದ್ಧ್ಯತಾಂ
ಯಾತಿ ವಿನಾ ಹಿ ಕಾಮಾತ್ ॥ ೨೯.೫೭ ॥
ವಿಜ್ಞಾನ, ಭಕ್ತಿ, ಮೊದಲಾದವೂ ಕೂಡಾ ಪುರುಷಾರ್ಥದ
ಸಾಧನಗಳು. ಆದರೆ ಅದು ಕಾಮದಿಂದ
ಬಹಿಷ್ಕೃತಗೊಂಡಿದ್ದರೆ ಸಾಧನ ಆಗುವುದೇ ಇಲ್ಲ. ಕೊನೆಯಲ್ಲಿ ಮೊಕ್ಷವನ್ನೂ ಕೂಡಾ ಬಯಸದೇ
ಪಡೆಯಲು ಸಾಧ್ಯವಿಲ್ಲ.
ಪರಾತ್ ಪರೋSಪ್ಯಾದಿಪುಮಾನ್ ಹರಿಶ್ಚ
ಸ್ವಸ್ಯೇತರೇಷಾಮಪಿ ಕಾಮ್ಯ ಏವ ।
ಅಕಾಮಿತೋSವಾಗ್ಗತಿಮೇವ ದದ್ಯಾತ್ ಕಾಮಃ
ಪುಮರ್ತ್ಥೋSಖಿಲ ಏವ ತೇನ ॥ ೨೯.೫೮ ॥
ಎಲ್ಲರಿಗಿಂತಲೂ
ಮಿಗಿಲಾದ ಆದಿಪುರುಷನಾದ ನಾರಾಯಣನೂ ಕೂಡಾ ತನಗೆ ಹಾಗೂ ಪುರುಷಾರ್ಥವನ್ನು ಇಚ್ಛಿಸುವ ಇತರರಿಗೂ ಕಾಮ್ಯನೇ
ಆಗಿದ್ದಾನೆ. (ಪರಮಾತ್ಮನು ನನ್ನ ಪ್ರೀತಿಗೆ ಆಸ್ಪದನು, ನನ್ನ ಆನಂದಕ್ಕೆ ಅವನು ಕಾರಣನಾದ್ದರಿಂದ
ಅವನನ್ನು ನಾನು ಪ್ರೀತಿಸುತ್ತೇನೆ. ತನಗೆ ತಾನೇ ಕಾಮ್ಯನಾಗಿರುವುದರಿಂದ ಪರಮಾತ್ಮನು ಪರಮಾತ್ಮನಿಗೇ
ಪ್ರಿಯನು). ಕಾಮ್ಯನಾದ ಪರಮಾತ್ಮನು ತನ್ನನ್ನು ಬಯಸದೇ ಇರುವವರಿಗೆ ಅಧಮವಾದ ಗತಿಯನ್ನು ಕೊಡುತ್ತಾನೆ.
ಹೀಗಾಗಿ (ಕಾಮ್ಯಕ್ಕೆ ಕಾಮ ವಾಚ್ಯತ್ವವಿರುವುದರಿಂದ) ಕಾಮವು ಉತ್ತಮ ಪುರುಷಾರ್ಥವಾಗಿದೆ.
ಇಚ್ಛೈವ ಕಾಮೋSಸ್ತು ತಥಾSಪಿ ನೈತಾಮೃತೇ ಹಿ ಚಿತ್ತ್ವಂ ಘಟಕುಡ್ಯವತ್ ಸ್ಯಾತ್ ।
ಸಾರಸ್ತತಃ ಸೈವ ಚಿದಾತ್ಮಿಕಾSಪಿ ಸಾ ಚೇತನಾ ಗೂಢತನುಃ ಸದೈವ ॥
೨೯.೫೯ ॥
ಕಾಮ ಎಂದರೆ ಬಯಕೆ(ಇಚ್ಛೆ)
ಎಂದಿಟ್ಟುಕೊಂಡರೂ ಕೂಡಾ, ಈ ಇಚ್ಛೆಯನ್ನು ಬಿಟ್ಟು ಚೈತನ್ಯವು ಇರಲಾರದು. ಇಚ್ಛೆ ಇಲ್ಲದ ಚೈತನ್ಯ ಮಡಿಕೆ-ಗೋಡೆಗೆ
ಸಮ. (ಜಡ ಹಾಗೂ ಚೇತನಕ್ಕೆ ಇರುವ ದೊಡ್ಡ ವ್ಯತ್ಯಾಸ-ಬಯಕೆ), ಆಕಾರಣದಿಂದ ಅದೇ ಸಾರ. ಆ ಇಚ್ಛೆಯು
ಜೀವಸ್ವರೂಪಾತ್ಮಕವಾಗಿ ಗೂಢವಾಗಿ ಯಾವಾಗಲೂ ಒಳಗಿರುತ್ತದೆ.
[‘ಇಚ್ಛೈವ ಕಾಮೋsಸ್ತು’ ಎನ್ನುವುದನ್ನು ಮಹಾಭಾರತದ ಶಾಂತಿಪರ್ವದಲ್ಲಿ
ಬರುವ ಆಪದ್ಧರ್ಮಪರ್ವದಲ್ಲಿ ನಿರೂಪಣೆ ಮಾಡಿರುವುದನ್ನು ನಾವು ಕಾಣಬಹುದು: ‘ಕಾಮೋ ಹಿ ವಿವಿಧಾಕಾರಃ ಸರ್ವಂ ಕಾಮೇನ ಸಂತತಮ್ । ನಾಸ್ತಿ
ನಾSಸೀನ್ನ
ಭವಿತಾ ಭೂತಂ ಕಾಮಮೃತೇ ಪರಮ್’
(ಶಾಂತಿಪರ್ವ ೧೬೫. ೩೮)]
ನ ಪ್ರಶ್ನಯೋಗ್ಯಃ
ಪೃಥಗೇವ ಕಾಮಸ್ತೇನೈಷ ರಾಜನ್ ಯದಿ ತಾರತಮ್ಯಮ್ ।
ಇಚ್ಛಸ್ಯಯಂ ತೇ
ತ್ರಿವಿಧೋ ಹಿ ವೇದ್ಯೋ ಧರ್ಮ್ಮಾರ್ತ್ಥಯುಕ್ತಃ ಪರಮೋ ಮತೋSತ್ರ ॥ ೨೯.೬೦ ॥
ಏಕಾವಿರೋಧೀ ಯದಿ ಮದ್ಧ್ಯಮೋSಸೌ ದ್ವಯೋರ್ವಿರೋಧೀ ತು ಸ ಏವ
ನೀಚಃ ।
ತಸ್ಮಾತ್
ಸ್ವಬುದ್ಧಿಪ್ರಮದಾಭಿರೇವ ಕಾಮಂ ರಮೇಥಾ ಅನುರೂಪಕಾಮಃ ॥ ೨೯.೬೧ ॥
ಕಾಮ ಪ್ರತ್ಯೇಕವಾಗಿ
ಪ್ರಶ್ನೆಗೆ ಯೋಗ್ಯವಾದದ್ದೇ ಅಲ್ಲ. ಎಲೈ ರಾಜನೇ, ಒಂದು ವೇಳೆ ತಾರತಮ್ಯವನ್ನು ಬಯಸುವುದಾದರೆ ಮೂರು ತರದ ಕಾಮವಿದೆ ಎಂದು
ತಿಳಿದುಕೊಳ್ಳಬೇಕು. ಆ ಮೂರರಲ್ಲಿ ಧರ್ಮ ಹಾಗೂ ಅರ್ಥಗಳಿಂದ ಕೂಡಿರುವ ಕಾಮ ಶ್ರೇಷ್ಠ.[ಕಾಮ
ಎನ್ನುವುದು ಧರ್ಮ-ಅರ್ಥಗಳಿಗೆ ಸಾಧನವಾಗಿದ್ದರೆ ಅದು ಶ್ರೇಷ್ಠ] ಪುರುಷಾರ್ಥದಲ್ಲಿ ಒಂದಕ್ಕೆ ವಿರುದ್ಧವಾಗಿದ್ದರೆ - ಅದು ಮಧ್ಯಮ. ಎರಡಕ್ಕೆ ವಿರುದ್ಧವಿದ್ದರೆ ಅದು ನೀಚವೇ.
ನಮ್ಮ ಯೋಗ್ಯತೆಗೆ ತಕ್ಕ ಕಾಮನೆಗಳನ್ನಿಟ್ಟುಕೊಂಡು, ಬುದ್ಧಿಯೆಂಬ ಹೆಣ್ಣುಗಳಿಂದ ಚೆನ್ನಾಗಿ
ಕ್ರೀಡಿಸಬೇಕು. [‘ಕಾಮ ಎನ್ನುವುದು ಬೇಕೇ ಬೇಕು.
ಕಾಮವೆನ್ನುವುದೇ ಪುರುಷಾರ್ಥ’ ಎಂದು ಹೇಳಿದ ಭೀಮಸೇನ
ಮುಂದೆ ಹೇಳುತ್ತಾನೆ- ‘ರಮಸ್ವ ಯೋಷಿದ್ಭಿರುಪೇತ್ಯ ಕಾಮಂ ಕಾಮೋ ಹಿ ರಾಜನ್ ಪರಮೋ ಭವೇನ್ನಃ’(ಶಾಂತಿಪರ್ವ
೧೬೫.೩೮) ಈ ಮಾತಿನ ತಾತ್ಪರ್ಯವನ್ನು ಆಚಾರ್ಯರು
ವಿವರಿಸಿದ್ದಾರೆ.
‘ಹೆಂಡತಿ ಪ್ರಾಣ
ಹಿಂಡುತಿ’ ಎಂದು ಹಾಡಿದ ಪುರಂದರದಾಸರು ‘ಹೆಂಡತಿ; ಎಂದರೆ ಬುದ್ಧಿ ಎನ್ನುವ ಅರ್ಥದಲ್ಲಿ
ಹೇಳಿದ್ದಾರೆ. ಭಾಗವತದಲ್ಲಿ- ‘ಬುದ್ಧಿಂ ತು ಪ್ರಮದಾಂ ವಿದ್ಯಾತ್’ (ಭಾಗವತ ೪.೨೯.೫)) ಎಂದು
ಹೇಳಿರುವುದನ್ನು ಕಾಣುತ್ತೇವೆ. ಪರಮಾತ್ಮನಲ್ಲಿ ಅನ್ಯತಾ ಬುದ್ಧಿ ಏನಿದೆ, ಅದನ್ನೇ ಗೂಢಭಾಷೆಯಲ್ಲಿ
ಸ್ತ್ರೀ ಎಂದು ಕರೆಯುತ್ತಾರೆ. ಹೀಗಾಗಿ ಸ್ತ್ರೀಯರನ್ನು ಬಿಡಬೇಕು ಎಂದರೆ- ಪರಮಾತ್ಮನಲ್ಲಿ
ವಿಪರೀತವಾದ ಪ್ರಜ್ಞೆಯನ್ನು ಬಿಡಬೇಕು ಎಂದರ್ಥ. ನಾವು
ಈ ಅರ್ಥದ ಹಿನ್ನೆಲೆಯಲ್ಲಿ ಭೀಮಸೇನನ ಮಾತನ್ನು ನೋಡಬೇಕು].
ರಾಜನ್ ನ ಕಾಮಾದಪರಂ
ಶುಭಂ ಹಿ ಪರೋ ಹಿ ಕಾಮೋ ಹರಿರೇವ ಯೇನ ।
‘ಪ್ರಾಜ್ಞಃ
ಸುಹೃಚ್ಚನ್ದನಸಾರಲಿಪ್ತೋ ವಿಚಿತ್ರಮಾಲ್ಯಾಭರಣೈರುಪೇತಃ ।
ಇದಂ ವಚೋ
ವ್ಯಾಸಸಮಾಸಯುಕ್ತಂ ಸಮ್ಪ್ರೋಚ್ಯ ಭೀಮೋ ವಿರರಾಮ ವೀರಃ’ ॥ ೨೯.೬೨ ॥
ರಾಜನ್, ಕಾಮಕ್ಕಿಂತ ಮಿಗಿಲಾದ ಮಂಗಳಕರವಾದದ್ದು ಇಲ್ಲವೇ ಇಲ್ಲ. ಪರಮಾತ್ಮನೇ
ಕಾಮ ಸಾಧನನಷ್ಟೇ. ಭಗವಂತ
ಪ್ರಾಜ್ಞಃ. ಸುಹೃತ್, ಚಂದನ
ಲೇಪಿತ, ವಿಚಿತ್ರವಾದ ಆಭರಣ ಮೊದಲಾದವುಗಳಿಂದ ಕೂಡಿಕೊಂಡು(ಧರ್ಮಗ್ರಂಥಗಳ
ಅನುಭವಕ್ಕೆ ಅನುಗುಣವಾಗಿ) ಅವನು ರಮಿಸುತ್ತಾನೆ. ಇಂತಹ ಪರಮಾತ್ಮನೇ ಕಾಮಗಳಲ್ಲಿ ಅತ್ಯುತ್ತಮ ಕಾಮನಾಗಿರುವುದರಿಂದ,
ಕಾಮಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ. (ಪರಮಾತ್ಮನೇ ಕಾಮ್ಯವಾಗಿರುವುದರಿಂದ, ಪರಮಾತ್ಮನ
ಭಕ್ತರೇ ಅವನ ಮಿತ್ರರು. ‘ದ್ವಾ ಸುಪರ್ಣಾ ಸಯುಜಾಸಖಾಯಾ’ ಎನ್ನುವ ಉಪನಿಷತ್ತಿನ ಮಾತು, ಭಾಗವತದಲ್ಲಿ
ಬರುವ ‘ತಸ್ಯಾವಿಜ್ಞಾತನಾಮಾSSಸೀತ್ ಸಖಾSವಿಜ್ಞಾತಚೇಷ್ಟಿತಃ’(೪.೨೫.೧೦) ಎನ್ನುವ ಪುರಂಜನ ರಾಜನ
ಕಥೆ, ಇವೆಲ್ಲವೂ ನಮ್ಮ ಆತ್ಮೀಯ ಸ್ನೇಹಿತ, ನಮ್ಮೊಂದಿಗಿರುವ ಕೃಷ್ಣನೇ ನಮ್ಮ ಪರಮಧ್ಯೇಯ
ಎನ್ನುವುದನ್ನು ತಿಳಿಸುತ್ತದೆ) ಇದೇ ರೀತಿಯ ಮಾತನ್ನು ಸಂಕ್ಷಿಪ್ತವಾಗಿಯೂ, ಮತ್ತೆ
ವಿಸ್ತಾರವಾಗಿಯೂ ಹೇಳಿದ ಭೀಮಸೇನನು ತನ್ನ ಮಾತನ್ನು ಕೊನೆಗೊಳಿಸಿದನು.
ಪ್ರಶಸ್ಯ
ಭೀಮಮನ್ಯಾಂಶ್ಚ ರಾಜಾ ಮೋಕ್ಷಮಥಾಸ್ತುವತ್ ।
ಸ್ವಯುಕ್ತೇರಪ್ರತೀಪತ್ವಾನ್ನಿರಾಚಕ್ರೇ
ನ ಮಾರುತಿಃ ॥ ೨೯.೬೩ ॥
ಧರ್ಮರಾಜನು ಉಳಿದವರನ್ನೂ,
ಭೀಮಸೇನನನ್ನೂ ಹೊಗಳಿ,
ಮೋಕ್ಷವನ್ನು ಸ್ತೋತ್ರಮಾಡಿದ(ಮೋಕ್ಷವೇ ಶ್ರೇಷ್ಠ ಎಂದು ಪ್ರತಿಪಾದನೆ ಮಾಡಿದ) ಅಲ್ಲಿ ಹೇಳಿದ ಎಲ್ಲಾ
ಯುಕ್ತಿಗಳು ತನ್ನ ಯುಕ್ತಿಗೆ ವಿರುದ್ಧವಾಗದಿರುವುದರಿಂದ, ಭೀಮಸೇನ ಯುಧಿಷ್ಠಿರನ ಮಾತನ್ನು
ನಿರಾಕರಣೆ ಮಾಡಲಿಲ್ಲ.
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ
ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸಮಸ್ತಧರ್ಮ್ಮಸಙ್ಗ್ರಹೋನಾಮ ಏಕೋನತ್ರಿಂಶೋSದ್ಧ್ಯಾಯಃ ॥
[ ಆದಿತಃ ಶ್ಲೋಕಾಃ ೪೬೮೨+೬೩=೪೭೪೫ ]
*********
No comments:
Post a Comment