ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 6, 2023

Mahabharata Tatparya Nirnaya Kannada 30-01-05

 

೩೦. ಯಾಗಸಮಾಪ್ತಿಃ

̐

 

ಅಥ ಕೃಷ್ಣಮನುಸ್ಮೃತ್ಯ ಭೀಷ್ಮೇ ಸ್ವಾಂ ವಸುತಾಂ ಗತೇ ।

ಕೃತ್ವಾ ಕಾರ್ಯ್ಯಾಣಿ ಸರ್ವಾಣಿ ಗಙ್ಗಾಮಾಶ್ವಾಸ್ಯ ದುಃಖಿತಾಮ್ ॥ ೩೦.೦೧ ॥

 

ಆಶ್ವಾಸಿತಶ್ಚ ಕೃಷ್ಣಾಭ್ಯಾಂ ಧರ್ಮ್ಮಜೋ ದುಃಖಿತಃ ಪುನಃ ।

ಪರಾಶರಸುತೇನೋಕ್ತಃ ಕೃಷ್ಣೇನಾನನ್ತರಾಧಸಾ                        ॥ ೩೦.೦೨ ॥

 

ಧರ್ಮೋಪದೇಶ ಮಾಡಿದ ನಂತರ ಭೀಷ್ಮಾಚಾರ್ಯರು ಕೃಷ್ಣನನ್ನು ಸ್ಮರಣೆಮಾಡಿ, ಸ್ವರೂಪ ಸಹಜವಾದ ವಸುತ್ವವನ್ನು ಹೊಂದಲು, ಧರ್ಮರಾಜನು ಎಲ್ಲಾ ಕರ್ತವ್ಯಗಳನ್ನು ಮಾಡಿ, ಭೀಷ್ಮಾಚಾರ್ಯರ ಮರಣದಿಂದ ನೊಂದ ಗಂಗೆಯನ್ನು ಸಮಾಧಾನಗೊಳಿಸಿ, ವೇದವ್ಯಾಸರು ಮತ್ತು ಶ್ರೀಕೃಷ್ಣನಿಂದ ಆಶ್ವಾಸನೆಗೊಳಗಾದ. ಆದರೂ ಧರ್ಮರಾಜನು ಮತ್ತೆ ದುಃಖಿತನಾದ. ಆಗ ಅನಂತ ಬಲವುಳ್ಳ ಕೃಷ್ಣನಿಂದಲೂ, ವೇದವ್ಯಾಸರಿಂದಲೂ ಬೋಧಿಸಲ್ಪಟ್ಟ-   

 

ಅಪಾಪೇ ಪಾಪಶಙ್ಕಿತ್ವಾದಶ್ವಮೇಧೈರ್ಯ್ಯಜಾಚ್ಯುತಮ್ ।

ಕುರು ರಾಜ್ಯಂ ಚ ಧರ್ಮ್ಮೇಣ ಪಾಲಯಾಪಾಲಕಾಃ ಪ್ರಜಾಃ ॥ ೩೦.೦೩ ॥

 

‘ಯಾವುದು ಪಾಪವಲ್ಲವೋ, ಅದನ್ನು ಪಾಪ ಎಂದು ಸಂದೇಹಪಡುತ್ತಿರುವುದರಿಂದ ನೀನು  ಅಶ್ವಮೇಧಗಳಿಂದ ಪರಮಾತ್ಮನನ್ನು ಪೂಜಿಸು. ರಾಜ್ಯವನ್ನು ಧರ್ಮದಿಂದ ರಕ್ಷಿಸು. ಪಾಲಕರಿಲ್ಲದ ಪ್ರಜೆಗಳನ್ನು ಚೆನ್ನಾಗಿ ಪೋಷಿಸು.’ 

 

ಇತ್ಯುಕ್ತಃ ಸ ತಥಾ ಚಕ್ರೇ ತ್ಯಕ್ತ್ವಾ ಭೋಗಾಂಶ್ಚ ಕೃತ್ಸ್ನಶಃ ।

ಗೋವ್ರತಾದಿವ್ರತೈರ್ಯ್ಯುಕ್ತಃ ಪಾಲಯಾಮಾಸ ಮೇಧಿನೀಮ್ ॥ ೩೦.೦೪ ॥

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ಸಮಗ್ರವಾಗಿ ಭೋಗಗಳನ್ನು ಬಿಟ್ಟು, ಗೋವ್ರತ ಮೊದಲಾದ ವ್ರತಗಳಿಂದ ಕೂಡಿಕೊಂಡು, ಭೂಮಿಯನ್ನು ಪಾಲನೆ ಮಾಡಿದ.

[ಗೋವ್ರತದ ಕುರಿತು ಮಹಾಭಾರತ, ಪುರಾಣಗಳಲ್ಲಿ ಅನೇಕ ವಿವರಣೆಯನ್ನು ಕಾಣಬಹುದು. ಯೋSಗ್ರೇ ಭಕ್ತ್ಯಾ ಕಿಞ್ಚಿದಪ್ರಾಶ್ಯ ದದ್ಯಾದ್ ಗೋಭ್ಯೋ ನಿತ್ಯಂ ಗೋವ್ರತೀ ಸತ್ಯವಾದೀ’ (ಮಹಾಭಾರತ ಅನುಶಾಸನಪರ್ವ ೧೦೮.೩೦). ‘ಯತ್ರಕುತ್ರಶಯೋ ನಿತ್ಯಂ ಯೇನಕೇನಚಿದಾಶಿತಃ । ಯೇನಕೇನಚಿದಾಚ್ಛನ್ನಃ ಸ ಗೋವ್ರತ ಇಹೋಚ್ಯತೇ’ (ಮಹಾಭಾರತ, ಉದ್ಯೋಗಪರ್ವ, ೯೯.೧೫),  ಗೋಮೂತ್ರೇಣಾSಚರೇತ್ ಸ್ನಾನಂ ವೃತ್ತಿಂ ಕುರ್ಯಾಚ್ಚ ಗೋರಸೈಃ (ಅಗ್ನಿಪುರಾಣ ೨೯೧.೧೨),  ಉತ್ಥಿತಾಸೂತ್ಥಿತಸ್ತಿಷ್ಠೇದುಪವಿಷ್ಟಾಸು ಚ ಸ್ಥಿತಃ । ಅಭುಕ್ತಾಸು ಚ ನಾಶ್ನೀಯಾದಪೀತಾಸು ಚ ನೋ ಪಿಬೇತ್ |  ತ್ರಾಣಂ ಚೈವಾSತ್ಮನಾಕಾರ್ಯಂ ಭಯಾರ್ತಾಶ್ಚಸಮುದ್ಧರೇತ್ | ಆತ್ಮಾನಮಪಿ ಸಂತ್ಯಜ್ಯಗೋವ್ರತಂ ತತ್ ಪ್ರಕೀರ್ತಿತಮ್’(ಪುರಾಣ) ‘ಯಥಾ ಮನುರ್ಮಹಾರಾಜೋ ರಾಮೋ ದಾಶರಥಿರ್ಯಥಾ। ತಥಾ ಭರತಸಿಂಹೋSಪಿ ಪಾಲಯಾಮಾಸ ಮೇದಿನೀಮ್’ (ಆಶ್ವಮೇದಿಕ ಪರ್ವ ೧೫.೦೨). ಗೋಮೂತ್ರ ಬೆರೆಸಿದ ನೀರಿನಿಂದ ಸ್ನಾನ, ಹಾಲು, ಮೊಸರು, ತುಪ್ಪ, ಇತ್ಯಾದಿ ಗೋರಸಗಳಿಂದಲೇ ಜೀವನ, ಗೋವುಗಳು ಎದ್ದಾಗ ಎದ್ದಿರಬೇಕು, ಗೋವುಗಳು ತಿನ್ನದಿದ್ದರೆ ತಿನ್ನಬಾರದು, ಗೋವುಗಳು ನೀರನ್ನು ಕುಡಿಯದಿದ್ದರೆ ನೀರನ್ನು ಕುಡಿಯಬಾರದು, ತಾನು ಅವುಗಳನ್ನು ಯಾವಾಗಲೂ ರಕ್ಷಿಸಬೇಕು, ಅವುಗಳು ಅಳುಕಿದಾಗ ಅವುಗಳನ್ನು ಚೆನ್ನಾಗಿ ಸಮಾಧಾನ ಮಾಡಬೇಕು. ತನಗಿಂತ ಮಿಗಿಲಾಗಿ ಗೋವುಗಳನ್ನು ಅನುಸರಿಸಬೇಕು. ಇದನ್ನು ಗೋವ್ರತ ಎನ್ನುತ್ತಾರೆ. ಇಂತಹ ಗೋವ್ರತವನ್ನು ಪಾಲನೆ ಮಾಡುತ್ತಲೇ ಯುಧಿಷ್ಠಿರ ರಾಜ್ಯವನ್ನು ಪಾಲನೆ ಮಾಡಿದ].

 

ದದೌ ದೇಯಾನಿ ಮುಖ್ಯಾನಿ ಯಥಾಕಾಮಮಖಣ್ಡಿತಮ್ ।

ನೈವಾರ್ತ್ಥೀ ವಿಮುಖಃ ಕಶ್ಚಿದಭೂದ್ ಯೋಗ್ಯಃ ಕದಾಚನ ॥ ೩೦.೦೫ ॥

 

ಕೊಡಬೇಕಾಗಿರುವ ಮುಖ್ಯವಾದ ದಾನಗಳನ್ನು ಸ್ವೀಕರಿಸುವವರ ಬಯಕೆಗೆ ಅನುಗುಣವಾಗಿ ನಿರಂತರವಾಗಿ ಕೊಟ್ಟ. ಬೇಡಲು ಬಂದ ಯೋಗ್ಯನಾದ ಯಾರೂ ಕೂಡಾ ಯುಧಿಷ್ಠಿರನಿಂದ ದಾನವನ್ನು ಪಡೆಯದೇ ವಿಮುಖರಾಗಿ ಹೋಗುತ್ತಿರಲಿಲ್ಲ.

No comments:

Post a Comment