ಸಮಸ್ತಭೃತ್ಯಾಶ್ರಿತವೇತನಾನಾಂ
ಮಾದ್ರೇಯ ಆಸೀತ್ ಪ್ರಥಮಃ ಪ್ರದಾತಾ ।
ಸ ದುರ್ಮ್ಮುಖಸ್ಯಾSವಸಥೇSವಸಚ್ಚ ಸಮದ್ರರಾಜಾತ್ಮಜಯಾSಗ್ರ್ಯವರ್ತ್ತೀ ॥ ೩೦.೨೧ ॥
ಮಾದ್ರಿಯ ಮೊದಲ ಮಗ
ನಕುಲನು ಎಲ್ಲಾ ಕೆಲಸದವರಿಗೆ ಸಂಬಳ ಕೊಡುವುದು, ಸರಕಾರದ ಅನುದಾನ, ಇತ್ಯಾದಿಯನ್ನು ಹಿರಿಯರಿಗೆ ಅನುಗುಣವಾಗಿ ನಿರ್ವಹಿಸುತ್ತಾ, ದುರ್ಮುಖ
ಎನ್ನುವ ದುರ್ಯೋಧನನ ತಮ್ಮನ ಮನೆಯಲ್ಲಿ, ಮದ್ರರಾಜನ ಮಗಳಾಗಿರುವ ತನ್ನ ಹೆಂಡತಿಯಿಂದ ಕೂಡಿಕೊಂಡು ಆವಾಸಮಾಡಿದನು.
ಸನ್ಧಾನಭೇದಾನುಗತಪ್ರವೃತ್ತಿಸ್ತಿಷ್ಠಂಶ್ಚ
ದುರ್ಮ್ಮರ್ಷಣಶುಭ್ರಸದ್ಮನಿ ।
ನೃಪಾಙ್ಗರಕ್ಷಃ
ಪ್ರಗೃಹೀತಖಡ್ಗಸ್ತಸ್ಯಾನುಜೋ ಮಾಗಧಕನ್ಯಯಾSSಸೀತ್ ॥ ೩೦.೨೨ ॥
ನಕುಲನ ತಮ್ಮ ಸಹದೇವ,
ಧರ್ಮರಾಜ ಇತರ ರಾಜರೊಂದಿಗೆ ಸಂಧಾನ ಮಾಡಿಕೊಳ್ಳುವಾಗ ಅಥವಾ ಇಬ್ಬರು ರಾಜರ ನಡುವೆ ಭೇದವನ್ನು ಮಾಡಬೇಕಾದರೆ, ಅವನ
ಹಿಂದೆಯೇ ಬಿಚ್ಚುಗತ್ತಿಯನ್ನು ಹಿಡಿದು ಅಂಗರಕ್ಷಕನಾಗಿ ಕಾರ್ಯವಿರ್ವಹಿಸುತ್ತಿದ್ದ. ಅವನು
ದುರ್ಮರ್ಷಣನ ಮನೆಯಲ್ಲಿ ತನ್ನ ಪತ್ನಿಯಾದ ಜರಾಸಂಧನ ಮಗಳ ಜೊತೆ ವಾಸವಾಗಿದ್ದ.
ಸೇನಾಪತಿಃ ಕೃಪ ಆಸೀದ್
ಯುಯುತ್ಸುಃ ಸ ಸಞ್ಜಯೋ ವಿದುರಶ್ಚಾSಮ್ಬಿಕೇಯಮ್ ।
ಪಾರ್ತ್ಥೇರಿತಾಃ ಪರ್ಯ್ಯಚರನ್
ಸ್ವಯಂ ಚ ಸರ್ವೇ ಯಥಾ ದೈವತಮಾದರೇಣ ॥ ೩೦.೨೩ ॥
ಸೇನಾಧಿಪತಿ
ಕೃಪಾಚಾರ್ಯರೇ ಆಗಿದ್ದರು. ಯುಯುತ್ಸು, ಸಂಜಯ, ವಿದುರ, ಈ ಮೂವರು ಪಾಂಡವರಿಂದ
ಪ್ರೇರಿಸಲ್ಪಟ್ಟವರಾಗಿ ಹಾಗೂ ತಮ್ಮ ಇಚ್ಛೆಯಿಂದಲೂ ಕೂಡಾ ಧೃತರಾಷ್ಟ್ರನನ್ನು ಸೇವಿಸಿದರು.
ಪಾಂಡವರೆಲ್ಲರೂ ಪ್ರೀತಿವಿಶೇಷದಿಂದ ತಾವೂ ಕೂಡಾ ಧೃತರಾಷ್ಟ್ರನನ್ನು ಸೇವಿಸಿದರು ಮತ್ತು
ಮುಖ್ಯವಾಗಿ ಈ ಮೂವರನ್ನು ಆ ಕೆಲಸಕ್ಕೆಂದೇ ನೇಮಿಸಿದ್ದರು.
ದ್ವಿರೂಪಕೃಷ್ಣಪ್ರಹಿತೇಷು
ಪಾಣ್ಡುಷು ಕ್ಷಿತಿಂ ಪ್ರಶಾಸತ್ಸು ನ ಕಶ್ಚನಾSತುರಃ ।
ನಚಾಕ್ರಮಾನ್ಮೃತ್ಯುರಭೂನ್ನ
ನಾರ್ಯ್ಯೋ ವಿಭರ್ತ್ತೃಕಾ ನೋ ವಿಧುರಾ ನರಾಶ್ಚ ॥ ೩೦.೨೪ ॥
ನಾರಾಯಣನ ಎರಡು ರೂಪಗಳಿಂದ
ಪಾಲಿಸಲ್ಪಟ್ಟ ಪಾಂಡವರು ಭೂಮಿಯನ್ನು ಆಳುತ್ತಿರಲು, ಅಲ್ಲಿ ಯಾರೊಬ್ಬರೂ ರೋಗಿಷ್ಟರಾಗಿರಲಿಲ್ಲ. ಅಲ್ಲಿ
ವಿಪರೀತ ಕ್ರಮದಲ್ಲಿ ಸಾವು ಸಂಭವಿಸುತ್ತಿರಲಿಲ್ಲ (ದೊಡ್ಡವರ
ಮುಂದೆ ಚಿಕ್ಕವರು ಸಾಯುವುದು, ಇತ್ಯಾದಿ ಆಗುತ್ತಿರಲಿಲ್ಲ) ವಿದುರ-ವಿದವೆಯರಿರಲಿಲ್ಲ. (ಅಂದರೆ ಗಂಡ ಹೆಂಡತಿ ಇಬ್ಬರೂ
ಒಟ್ಟಿಗೇ ಸಾಯುತ್ತಿದ್ದರು ಎಂದರ್ಥವಲ್ಲ. ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ತಮ್ಮ
ಕರ್ತವ್ಯವನ್ನು ಮುಗಿಸಿ ಗಂಡ ಅಥವಾ ಹೆಂಡತಿ ಸತ್ತರೆ, ಅವರನ್ನು ವಿಧವೆ/ವಿದುರ ಎಂದು ಶಾಸ್ತ್ರ
ಹೇಳುವುದಿಲ್ಲ).
ಶಬ್ದಾದಯಶ್ಚಾSಸುರತೀವ ಹೃದ್ಯಾ ನಿಕಾಮವರ್ಷೀ
ಚ ಸುರೇಶ್ವರೋSಭೂತ್ ।
ಪ್ರಜಾ
ಅನಾಸ್ಪೃಷ್ಟಸಮಸ್ತತಾಪಾ ಅನನ್ಯಭಕ್ತ್ಯಾSಚ್ಯುತಮರ್ಚ್ಚಯನ್ತಿ ॥ ೩೦.೨೫ ॥
ಶಬ್ದ-ಸ್ಪರ್ಶ-ರೂಪ-ರಸ-ಗಂಧ
ಈ ವಿಷಯಗಳೆಲ್ಲವೂ ಕೂಡಾ ಅತ್ಯಂತ ರಮಣೀಯವಾಗಿದ್ದವು. ದೇವೇಂದ್ರನು ಬಯಸಿದ್ದನ್ನು ಕೊಡುತ್ತಿದ್ದನು.
ಪ್ರಜೆಗಳು ತಾಪದ ಮುಟ್ಟುವಿಕೆಗೆ ಒಳಗಾಗಿರಲಿಲ್ಲ. (ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ಎನ್ನುವ ಮೂರೂ ತಾಪದಿಂದ
ಪ್ರಜೆಗಳು ಮುಕ್ತರಾಗಿದ್ದರು). ಅವರೆಲ್ಲರೂ ಪರಮಾತ್ಮನನ್ನೇ ಅನನ್ಯವಾಗಿ ಪೂಜಿಸುತ್ತಿದ್ದರು.
ಪೃಥ್ವೀ ಚ ಗಾವಃ
ಸಸರಸ್ವತೀಕಾ ನಿಕಾಮದೋಹಾ ಅಭವನ್ ಸದೈವ ।
ಅಬ್ದಾಬ್ಧಿನದ್ಯೋ ಗಿರಿವೃಕ್ಷಜಙ್ಗಮಾಃ
ಸರ್ವೇSಪಿ
ರತ್ನಪ್ರಸವಾ ಬಭೂವುಃ ॥ ೩೦.೨೬ ॥
ಭೂಮಿ, ಹಸುಗಳು, ವೇದ ಸಮೃದ್ಧಿಯನ್ನು
ನೀಡಿದವು. ಮೋಡ, ಸಮುದ್ರ, ನದಿಗಳು, ಗಿರಿ-ಬೆಟ್ಟ-ವೃಕ್ಷಗಳು, ಪ್ರಾಣಿಗಳು, ಎಲ್ಲವೂ ಕೂಡಾ ರತ್ನವನ್ನೇ ಹೆತ್ತವು. (ಅಂದರೆ ಹಸುಗಳು
ಯಥೇಚ್ಛ ಹಾಲನ್ನು ಕೊಡುತ್ತಿದ್ದವು. ಮೋಡದಿಂದ ಉತ್ತಮ ಮಳೆಯಾಗುತ್ತಿತ್ತು. ಭೂಮಿಯಲ್ಲಿ ಒಳ್ಳೇ
ಬೆಳೆ ಬರುತ್ತಿತ್ತು, ಇತ್ಯಾದಿ. ಹೀಗೆ ಎಲ್ಲವೂ ಸಮೃದ್ಧಿಯಾಗಿತ್ತು ಎಂದರ್ಥ.)
ಕೃಷ್ಣಾಶ್ರಯಾತ್ ಸರ್ವಮಿದಂ
ವಶೇ ತೇ ವಿಧಾಯ ಸಮ್ಯಕ್ ಪರಿಪಾಲಯನ್ತಃ ।
ದಿವೀವ ದೇವಾ ಮುಮುದುಃ
ಸದೈವ ಮುನೀನ್ದ್ರಗನ್ಧರ್ವನೃಪಾದಿಭಿರ್ವೃತಾಃ ॥ ೩೦.೨೭ ॥
ಕೃಷ್ಣನ ಆಶ್ರಯದಲ್ಲಿ
ಪಾಂಡವರು ಇಡೀ ಜಗತ್ತನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಚೆನ್ನಾಗಿ ಪಾಲನೆ ಮಾಡುತ್ತಾ, ಸ್ವರ್ಗದಲ್ಲಿ ದೇವತೆಗಳು
ಹೇಗೋ, ಹಾಗೇ ಶ್ರೇಷ್ಠ ಮುನಿಗಳಿಂದಲೂ, ಗಂಧರ್ವರಿಂದಲೂ, ರಾಜರು ಮೊದಲಾದವರಿಂದಲೂ ಕೂಡಿದವರಾಗಿ ಆನಂದಿಸಿದರು.
No comments:
Post a Comment