ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, April 22, 2019

Mahabharata Tatparya Nirnaya Kannada 12.82-12.88


ಯಾಹ್ಯುತ್ಪಾತಾಃ ಸನ್ತಿ ತತ್ರೇತ್ಯುದೀರಿತೋ ಜಗಾಮ ಶೀಘ್ರಂ ಯಮುನಾಂ ಸ ನನ್ದಃ ।
ರಾತ್ರಾವೇವಾsಗಚ್ಛಮಾನೇ ತು ನನ್ದೇ ಕಂಸಸ್ಯ ಧಾತ್ರೀ ತು ಜಗಾಮ ಗೋಷ್ಠಮ್ ॥೧೨.೮೨

‘ನಿನ್ನ ಹೆಂಡತಿ ಇರುವ ದಿಕ್ಕಿನಲ್ಲಿ ನಾನಾ ರೀತಿಯ ಉತ್ಪಾತಗಳು ಕಾಣುತ್ತಿವೆ’ ಎಂದು ವಸುದೇವನಿಂದ ಹೇಳಲ್ಪಟ್ಟ ನಂದನು, ಯಮುನಾನದಿಯನ್ನು ಕುರಿತು ಬೇಗನೇ ಹೊರಟನು. (ಹೀಗೆ ಹೋಗುತ್ತಿರುವಾಗ  ರಾತ್ರಿಯಾಯಿತು) ರಾತ್ರಿಯಲ್ಲಿಯೇ ನಂದಗೋಪ ಬರುತ್ತಿರಲು, ಕಂಸನ ಸಾಕುತಾಯಿಯಾದ ಪೂತನೆ (ನಂದಗೋಪ ತಲಪುವ ಮೊದಲೇ) ಯಶೋದೆಯಿರುವ ಸ್ಥಳವನ್ನು ಕುರಿತು ತೆರಳಿದಳು. 

ಸಾ ಪೂತನಾ ನಾಮ ನಿಜಸ್ವರೂಪಮಾಚ್ಛಾಧ್ಯ ರಾತ್ರೌ ಶುಭರೂಪವಚ್ಚ ।
ವಿವೇಶ ನನ್ದಸ್ಯ ಗೃಹಂ ಬೃಹದ್ವನಪ್ರಾನ್ತೇ ಹಿ ಮಾರ್ಗ್ಗೇ ರಚಿತಂ ಪ್ರಯಾಣೇ  ॥೧೨.೮೩   

ತೀರೇ ಭಗಿನ್ಯಾಸ್ತು ಯಮಸ್ಯ ವಸ್ತ್ರಗೃಹೇ ಶಯಾನಂ ಪುರುಷೋತ್ತಮಂ ತಮ್ ।
ಜಗ್ರಾಹ ಮಾತ್ರಾ ತು ಯಶೋದಯಾ ತಯಾ ನಿದ್ರಾಯುಜಾ ಪ್ರೇಕ್ಷ್ಯಮಾಣಾ ಶುಭೇವ ೧೨.೮೪     

ಆ ಪೂತನೆಯೆಂಬ ರಾಕ್ಷಸಿ ತನ್ನ ನಿಜರೂಪವನ್ನು ಮುಚ್ಚಿ, ರಾತ್ರಿಯಲ್ಲಿ ಸುಂದರವಾದ ರೂಪವನ್ನು ಹೊಂದಿ,  ನಂದಗೋಪನ  ಮನೆಯನ್ನು ಪ್ರವೇಶಿಸಿದಳು.
ಆಕೆ ಬೃಹದ್ವನಪ್ರಾಂತ್ಯ  ಹಾಗು ಮಧುರಾ ಪಟ್ಟಣದ ಮಧ್ಯದಲ್ಲಿ, ಪ್ರಯಾಣಿಸುವ  ದಾರಿಯಲ್ಲಿ, ಯಮನ ತಂಗಿಯಾದ ಯಮುನಾನದಿಯ ತೀರದಲ್ಲಿ ನಿರ್ಮಿಸಲ್ಪಟ್ಟ ಶಿಬಿರದಲ್ಲಿ(ವಸ್ತ್ರಗೃಹದಲ್ಲಿ) ಮಲಗಿರುವ,  ಪುರುಷೋತ್ತಮನಾದ ಕೃಷ್ಣನನ್ನು ಕಂಡಳು.  ಬಹಳ ನಿದ್ರೆಯಿಂದ ಕೂಡಿರುವ ಯಶೋದೆಯ ಮುಂದೆ ಬಹಳ ಯೋಗ್ಯಳಂತೆ  ತನ್ನನ್ನು ತೋರಿಸಿಕೊಂಡ ಪೂತನೆ,  ಅವಳಿಂದ ಮಗುವನ್ನು(ಶ್ರೀಕೃಷ್ಣನನ್ನು) ತೆಗೆದುಕೊಂಡಳು.

ತನ್ಮಾಯಯಾ ಧರ್ಷಿತಾ ನಿದ್ರಯಾ ಚ ನ್ಯವಾರಯನ್ನೈವ ಹಿ ನನ್ದಜಾಯಾ
ತಯಾ ಪ್ರದತ್ತಂ ಸ್ತನಮೀಶಿತಾsಸುಭಿಃ ಪಪೌ ಸಹೈವಾsಶು ಜನಾರ್ದ್ದನಃ ಪ್ರಭುಃ ॥೧೨.೮೫  

ಪೂತನೆಯ ಮಾಯೆಯಿಂದ ಮೊಸಗೊಳಿಸಲ್ಪಟ್ಟು, ನಿದ್ರೆಯಿಂದ ಕೂಡಿದ ನಂದಗೋಪನ ಹೆಂಡತಿಯಾದ ಯಶೋದೆಯು ಆಕೆಯನ್ನು ತಡೆಯಲಿಲ್ಲ. ಸರ್ವೋತ್ತಮನಾದ ಜನಾರ್ದನನು ಅವಳಿಂದ ಕೊಡಲ್ಪಟ್ಟ ಮೊಲೆಯನ್ನು ಅವಳ ಪ್ರಾಣದೊಂದಿಗೇ ಕುಡಿದುಬಿಟ್ಟ.

ಮೃತಾ ಸ್ವರೂಪೇಣ ಸುಭೀಷಣೇನ ಪಪಾತ ಸಾ ವ್ಯಾಪ್ಯ ವನಂ ಸಮಸ್ತಮ್ ।
ತದಾssಗಮನ್ನನ್ದಗೋಪೋsಪಿ ತತ್ರ ದೃಷ್ಟ್ವಾ ಚ ಸರ್ವೇsಪ್ಯಭವನ್ ಸುವಿಸ್ಮಿತಾಃ ॥೧೨.೮೬॥       

ಆಗ ಅವಳು ಭಯಂಕರವಾದ ಸ್ವರೂಪದಿಂದ ಕೂಡಿ, ಇಡೀ ಕಾಡನ್ನು ವ್ಯಾಪಿಸಿ ಸತ್ತು ಬಿದ್ದಳು. ಆಗಲೇ ನಂದಗೊಪನೂ ಕೂಡಾ ತನ್ನ ಶಿಬಿರಕ್ಕೆ ಬಂದು ತಲುಪಿದನು. ಅಲ್ಲಿ ಸೇರಿದ ಎಲ್ಲರೂ ಪೂತನೆಯ ಭೀಕರವಾದ ರೂಪವನ್ನು ಕಂಡು ಅಚ್ಚರಿಗೊಂಡರು.

ಸ ತಾಟಕಾ ಚೋರ್ವಶಿಸಮ್ಪ್ರವಿಷ್ಟಾ ಕೃಷ್ಣಾವದ್ಧ್ಯಾನಾನ್ನಿರಯಂ ಜಗಾಮ ।
ಸಾ ತೂರ್ವಶೀ ಕೃಷ್ಣಭುಕ್ತಸ್ತನೇನ ಪೂತಾ ಸ್ವರ್ಗ್ಗಂ ಪ್ರಯಯೌ ತತ್ಕ್ಷಣೇನ ॥೧೨.೮೭     

ಊರ್ವಶಿಯಿಂದ ಆವಿಷ್ಠಳಾದ ಆ ತಾಟಕೆಯು ಕೃಷ್ಣನ ತಿರಸ್ಕಾರದಿಂದ ತಮಸ್ಸನ್ನು ಸೇರಿದಳು. ಊರ್ವಶಿಯು ಕೃಷ್ಣ ಮೊಲೆಯನ್ನು ಉಂಡದ್ದರಿಂದ ಪವಿತ್ರಳಾಗಿ ಆ ಕ್ಷಣದಲ್ಲಿಯೇ ಸ್ವರ್ಗವನ್ನು ಕುರಿತು ತೆರಳಿದಳು.

[ಭಾಗವತದಲ್ಲಿ(೧೦.೭.೩೬) ಹೇಳುವಂತೆ:  ಪೂತನಾ ಲೋಕಬಾಲಘ್ನೀ ರಾಕ್ಷಸೀ ರುಧಿರಾಶನಾ ಜಿಘಾಮ್ಸಯಾsಪಿ ಹರಯೇ ಸ್ತನಂ  ದತ್ವಾssಪ  ಸದ್ಗತಿಮ್’.  ಪೂತನೆ ಒಬ್ಬ ರಾಕ್ಷಸಿ. ಜನರನ್ನು ಹಾಗು ಮಕ್ಕಳನ್ನು ಕೊಲ್ಲುವುದು, ರಕ್ತ-ಮಾಂಸವನ್ನು ತಿನ್ನುವುದು ಅವಳ ಕೆಲಸವಾಗಿತ್ತು. ಕೊಲ್ಲುವ ಬಯಕೆಯಿಂದಲೇ ಆಕೆ ಕೃಷ್ಣನಿಗೆ  ಮೊಲೆಯನ್ನು ಕೊಟ್ಟಿದ್ದರೂ,  ಭಗವಂತನಿಗೆ ಮೊಲೆಯುಣಿಸಿದ್ದರಿಂದ  ಸದ್ಗತಿಯನ್ನು ಹೊಂದಿದಳು!  ಯಾತುಧಾನ್ಯಪಿ ಸಾ ಸ್ವರ್ಗಮವಾಪ ಜನನೀಗತಿಮ್’ (೩೯) ‘ಯಾತುಧಾನಿಯೂ ಕೂಡಾ ಕೃಷ್ಣನ ತಾಯಿಗೆ ಸಿಗಬಹುದಾದ  ಉತ್ತಮ ಗತಿಯನ್ನು ಹೊಂದಿದಳು!’.  ಭಾಗವತದ ಈ ಮಾತು ಸ್ವಲ್ಪಗೊಂದಲವನ್ನುಂಟು ಮಾಡುತ್ತದೆ. ಆದರೆ ಈ ಮೇಲಿನ ಮಾತುಗಳ ಎಲ್ಲಾ ಅರ್ಥವನ್ನು ಆಚಾರ್ಯರು ಮೇಲಿನ ಶ್ಲೋಕದಲ್ಲಿ ಸಂಗ್ರಹರೂಪದಲ್ಲಿ ವ್ಯಾಖ್ಯಾನಿಸಿ, ನಿರ್ಣಯ ನೀಡಿ ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಪೂತನಾ ಅಂದರೆ ಪೂತನೆಯಲ್ಲಿ ಆವಿಷ್ಠಳಾಗಿರುವ ಊರ್ವಶಿ ಎಂದರ್ಥ. ‘ಯಾತುಧಾನಿ’ ಎಂದರೆ ಪೂತನೆಯ ಸಹವರ್ತಮಾನ ಊರ್ವಶೀ ಎಂದರ್ಥ. ಒಟ್ಟಿನಲ್ಲಿ ಹೇಳಬೇಕೆಂದರೆ: ರಾಮಾವತಾರದ ತಾಟಕೆಯೇ ಈ ಪೂತನ. ಪೂತನೆಯಲ್ಲಿ ವಿಶೇಷ ಏನೆಂದರೆ, ಆಕೆಯ ಶರೀರದಲ್ಲಿ ಶಾಪಗ್ರಸ್ತವಾದ ಪುಣ್ಯಜೀವ ಊರ್ವಶಿ ಆವಿಷ್ಠಳಾಗಿದ್ದಳು. ಅಂದರೆ ಎರಡು ಜೀವ ಒಂದು ದೇಹ.  ಶ್ರೀಕೃಷ್ಣನನ್ನು ಕೊಲ್ಲಬೇಕು ಎನ್ನುವ ಕೆಟ್ಟ ಉದ್ದೇಶ ಹೊಂದಿದ ತಾಟಕೆ ನರಕವನ್ನು ಸೇರಿದರೆ, ಅದೇ ದೇಹದಲ್ಲಿದ್ದು ಭಕ್ತಿಯಿಂದ ಕೃಷ್ಣನಿಗೆ ಹಾಲನ್ನುಣಿಸಬೇಕು ಎಂದು ಬಯಸಿದ ಊರ್ವಶಿಗೆ ಸ್ವರ್ಗ ಪ್ರಾಪ್ತಿಯಾಯಿತು.   
ಇದನ್ನೇ ಭಾಗವತದಲ್ಲಿ(೨.೯.೨೭) ‘ತೋಕೇನ ಜೀವಹರಣಂ ಯದುಲೂಪಿಕಾ...’ ಎಂದು ವರ್ಣಿಸಿದ್ದಾರೆ. ಇಲ್ಲಿ ಪೂತನಿಯ ಸಂಹಾರವನ್ನು ವಿವರಿಸುವಾಗ ‘ಉಲೂಪಿಕಾ’ ಎನ್ನುವ ಪದ ಪ್ರಯೋಗ ಮಾಡಲಾಗಿದೆ. (ಇತ್ತೀಚೆಗೆ ಮುದ್ರಣಗೊಂಡ ಹಲವು ಪುಸ್ತಕಗಳಲ್ಲಿ ಈ ಪದವನ್ನು ಪಕ್ಷಿ/ಗೂಬೆ ಎನ್ನುವ ಅರ್ಥದಲ್ಲಿ  ‘ಉಲೂಕಿಕಾ’ ಎಂದು ತಪ್ಪಾಗಿ ಮುದ್ರಿಸಿರುವುದನ್ನು ಕಾಣುತ್ತೇವೆ. ಆದರೆ ಪ್ರಾಚೀನ ಪಾಠದಲ್ಲಿ ಆ ರೀತಿ ಪದ ಪ್ರಯೋಗವಿರುವುದಿಲ್ಲ.  ಉಲೂಪಿಕಾ ಎನ್ನುವುದು  ಅನೇಕ ಆಯಾಮಗಳಲ್ಲಿ ಅರ್ಥವನ್ನು ಕೊಡುವ, ಭಾಗವತದ ಪ್ರಕ್ರಿಯೆಗೆ ಪೂರಕವಾದ ಪದಪ್ರಯೋಗ). ರ-ಲಯೋಃ ಅಭೇಧಃ ಎನ್ನುವಂತೆ ಇಲ್ಲಿ ಲೂಪ ಎಂದರೆ ರೂಪ. ಹಾಗಾಗಿ ಉಲೂಪ ಎಂದರೆ ಉತ್ಕೃಷ್ಟವಾದ ರೂಪ ಎಂದರ್ಥ. ಪೂತನಿ ಕೃಷ್ಣನಿಗೆ ವಿಷದ ಹಾಲನ್ನು ಉಣಿಸಿ ಸಾಯಿಸಬೇಕು ಎನ್ನುವ ಇಚ್ಛೆಯಿಂದ ಸುಂದರ ಸ್ತ್ರೀರೂಪ ತೊಟ್ಟು ಬಂದಿದ್ದಳು. ಅವಳು ಉಲೂಪ. ಆದರೂ ಉಲೂಪಿಕ. ಏಕೆಂದರೆ ಸಂಸ್ಕೃತದಲ್ಲಿ ಕನ್ಪ್ರತ್ಯಯವನ್ನು ನಿಂದನೀಯ ಎನ್ನುವ ಅರ್ಥದಲ್ಲಿ ಬಳಕೆ ಮಾಡುತ್ತಾರೆ. ವಸ್ತುತಃ ಪೂತನಿ ಸುಂದರ ಸ್ತ್ರೀ ಅಲ್ಲ; ಅವಳು ರಾಕ್ಷಸೀ ಎನ್ನುವುದನ್ನು ಉಲೂಪಿಕಾ ಪದ ವಿವರಿಸುತ್ತದೆ. ಇಷ್ಟೇ ಅಲ್ಲದೆ, ಇದೇ ಪದದಲ್ಲಿ ಇನ್ನೊಂದು ದೇವ ಗುಹ್ಯ ಅಡಗಿದೆ. ಪೂತನಿಯ ಒಳಗೆ ರಾಕ್ಷಸೀ ಜೀವದ ಜೊತೆಗೆ ಇನ್ನೊಂದು ಶಾಪಗ್ರಸ್ತವಾದ ಪುಣ್ಯ ಜೀವ ಕೂಡಾ ಶ್ರೀಕೃಷ್ಣನಿಗೆ ಹಾಲು ಉಣಿಸಿ ತನ್ನ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಕಾದು ಕುಳಿತಿತ್ತು. ಆ ಜೀವ ಇನ್ನಾರೂ ಅಲ್ಲ. ಆಕೆ ಉತ್ಕೃಷ್ಟವಾದ ರೂಪವುಳ್ಳ ಊರ್ವಶಿ.  ಹೀಗೆ ಎರಡು ಜೀವಗಳು ಒಂದೇ ದೇಹದಲ್ಲಿ ಸೇರಿಕೊಂಡು ಕೃಷ್ಣನನ್ನು ಬಯಸುತ್ತಿದ್ದವು. ರಾಕ್ಷಸೀಜೀವ ಕೃಷ್ಣನಿಗೆ ವಿಷ ಉಣಿಸಿ ಸಾಯಿಸಬೇಕು ಎಂದು ಬಯಸಿದರೆ, ಪುಣ್ಯಜೀವಿ ಊರ್ವಶಿ ಕೃಷ್ಣನಿಗೆ ತನ್ನ ಎದೆ ಹಾಲನ್ನು ಉಣಿಸಿ ತನ್ನ ಜನ್ಮ ಉದ್ಧಾರ ಮಾಡಿಕೊಳ್ಳಬೇಕು ಎನ್ನುವ ತುಡಿತದಿಂದ ಕಾದು ಕುಳಿತಿದ್ದಳು. ಒಂದೇ ದೇಹ, ಒಂದೇ ಕ್ರಿಯೆ ಆದರೆ ಎರಡು ಬಯಕೆ. ಇವೆಲ್ಲವನ್ನೂ ಇಲ್ಲಿ ಉಲೂಪಿಕ ಎನ್ನುವ ಏಕಪದ ಎರಡು ಆಯಾಮದಲ್ಲಿ ವಿವರಿಸುತ್ತದೆ. ಇದು ಸಂಸ್ಕೃತ ಭಾಷೆಯ ಸೊಬಗು. ವಿಷದ ಹಾಲು ಕುಡಿಸಿ ಸಾಯಿಸಬೇಕು ಎಂದು ಬಂದ ಪೂತನಿಯ ಪ್ರಾಣ ಹರಣ ಮಾಡಿದ ಶ್ರೀಕೃಷ್ಣ, ಉತ್ಕೃಷ್ಟವಾದ ರೂಪವಿರುವ ಪುಣ್ಯಜೀವಿ ಊರ್ವಶಿಯನ್ನು ಶಾಪಮುಕ್ತಗೊಳಿಸಿ  ಉದ್ಧಾರ ಮಾಡಿದ. ಈ ರೀತಿ ಶ್ರೀಕೃಷ್ಣ ಧರ್ಮ ಸಂಸ್ಥಾಪನೆಯ ಕಾರ್ಯ ಪ್ರಾರಂಭ ಮಾಡಿರುವುದೇ ದುಷ್ಟ ಪೂತನಿಯ ಜೀವ ಹರಣದೊಂದಿಗೆ].

ಸಾ ತುಮ್ಬುರೋಃ ಸಙ್ಗತ ಆವಿವೇಶ ರಕ್ಷಸ್ತನುಂ ಶಾಪತೋ ವಿತ್ತಪಸ್ಯ ।
ಕೃಷ್ಣಸ್ಪರ್ಶಾಚ್ಛುದ್ಧರೂಪಾ ಪುನರ್ದ್ದಿವಂ ಯಯೌ ತುಷ್ಟೇ ಕಿಮಲಭ್ಯಂ ರಮೇಶೇ ॥೧೨.೮೮

ಊರ್ವಶಿಯು ತುಮ್ಬುರು ಎನ್ನುವ ಗಂಧರ್ವನ ಸಂಗಮವನ್ನು ಹೊಂದಲು, ಕುಬೇರನ ಶಾಪಕ್ಕೊಳಗಾಗಿ  ರಾಕ್ಷಸಿ ಶರೀರವನ್ನು  ಪ್ರವೇಶಿಸುವಂತಾಯಿತು. ಅವಳು  ಶ್ರೀಕೃಷ್ಣನ ಸ್ಪರ್ಶದಿಂದ ಶುದ್ಧವಾದ ಸ್ವರೂಪವುಳ್ಳವಳಾಗಿ ಸ್ವರ್ಗಕ್ಕೆ ತೆರಳಿದಳು. ರಮಾಪತಿ ಭಗವಂತ  ಸಂತುಷ್ಟನಾದರೆ  ಏನು ತಾನೇ ಅಸಾಧ್ಯ?

Mahabharata Tatparya Nirnaya Kannada 12.76-12.81


ಅಥ ಪ್ರಭಾತೇ ಶಯನೇ ಶಯಾನಮಪಶ್ಯತಾಮಬ್ಜದಲಾಯತಾಕ್ಷಮ್ ।
ಕೃಷ್ಣಂ ಯಶೋದಾ ಚ ತಥೈವ ನನ್ದ ಆನನ್ದಸಾನ್ದ್ರಾಕೃತಿಮಪ್ರಮೇಯಮ್ ॥೧೨.೭೬      

ತದನಂತರ, ಬೆಳಗ್ಗೆ ತಮ್ಮ ಹಾಸಿಗೆಯಲ್ಲಿ ಮಲಗಿರುವ ತಾವರೆಯ ಯಸಳಿನಂತೆ ಕಣ್ಗಳುಳ್ಳ, ಆನಂದವೇ ಘನೀಭರಿಸಿ ದೇಹತಾಳಿರುವ,  ಸಂಪೂರ್ಣವಾಗಿ ತಿಳಿಯಲು ಅಶಕ್ಯನಾದ  ಕೃಷ್ಣನನ್ನು ನಂದ-ಯಶೋದೆಯರು ಕಂಡರು.

ಮೇನಾತ ಏತೌ ನಿಜಪುತ್ರಮೇನಂ ಸ್ರಷ್ಟಾರಮಬ್ಜಪ್ರಭವಸ್ಯ  ಚೇಶಮ್
ಮಹೋತ್ಸವಾತ್ ಪೂರ್ಣ್ಣಮನಾಶ್ಚ ನನ್ದೋ ವಿಪ್ರೇಭ್ಯೋsದಾಲ್ಲಕ್ಷಮಿತಾಸ್ತದಾ ಗಾಃ ॥೧೨.೭೭

ನಂದ-ಯಶೋದೆಯರಿಬ್ಬರೂ,  ಕಮಲದಲ್ಲಿ ಹುಟ್ಟಿದ ಬ್ರಹ್ಮನಿಗೂ ಕೂಡಾ ಸೃಷ್ಟಿಕರ್ತೃನಾದ, ಸರ್ವಸಮರ್ಥನಾದ ಶ್ರೀಕೃಷ್ಣನನ್ನು  ‘ತಮ್ಮ ಮಗ’ ಎಂದು ತಿಳಿದುಕೊಂಡರು. ನಂದನು ಬಹಳ ಸಂತಸಗೊಂಡವನಾಗಿ, ಮಗುವಿನ ಜನನ ಸಂದರ್ಭದಲ್ಲಿ ಲಕ್ಷಕ್ಕೂ ಮಿಕ್ಕಿ ಗೋವುಗಳನ್ನು ಬ್ರಾಹ್ಮಣರಿಗಾಗಿ ನೀಡಿದನು.
[ಭಾಗವತದಲ್ಲಿ(೧೦.೬.೩) ಈ ಕುರಿತಾದ ವಿವರವನ್ನು ಕಾಣಬಹುದು: ‘ಧೇನೂನಾಮ್ ನಿಯುತಂ ಪ್ರಾದಾದ್ ವಿಪ್ರೇಭ್ಯಃ ಸಮಲಙ್ಕೃತಮ್’]

ಸುವರ್ಣ್ಣರತ್ನಾಮ್ಬರಭೂಷಣಾನಾಂ ಬಹೂನಿ ಗೋಜೀವಿಗಣಾಧಿನಾಥಃ ।
ಪ್ರಾದಾದಥೋಪಾಯನಪಾಣಯಸ್ತಂ ಗೋಪಾ ಯಶೋದಾಂ ಚ ಮುದಾ ಸ್ತ್ರಿಯೋsಗಮನ್೧೨.೭೮         

ಗೋವುಗಳಿಂದ ಜೀವಿಸುವವರಾದ ಗೊಲ್ಲರ ಸಮೂಹಕ್ಕೆ ಒಡೆಯನಾಗಿರುವ ನಂದಗೊಪನು  ಬಂಗಾರ, ರತ್ನ, ಬಟ್ಟೆ, ಆಭರಣ, ಮೊದಲಾದವುಗಳಿಂದ ಅಲಂಕೃತಗೊಂಡ ಅನೇಕ ಗೋವುಗಳನ್ನು ಕೊಟ್ಟನು. ಉಡುಗರೆಯನ್ನು ಕೈಯಲ್ಲಿ  ಹಿಡಿದುಕೊಂಡ ಗೋಪಾಲಕರು ನಂದಗೊಪನನ್ನು ಹೊಂದಿದರೆ, ಹೆಣ್ಣುಮಕ್ಕಳು  ಯಶೋದೆಯನ್ನು ಕುರಿತು ಸಂತಸದಿಂದ ತೆರಳಿದರು.

ಗತೇಷು ತತ್ರೈವ ದಿನೇಷು ಕೇಷುಚಿಜ್ಜಗಾಮ ಕಂಸಸ್ಯ ಗೃಹಂ ಸ ನನ್ದಃ ।
ಪೂರ್ವಂ ಹಿ ನನ್ದಃ ಸ ಕರಂ ಹಿ ದಾತುಂ ಬೃಹದ್ವನಾನ್ನಿಸ್ಸೃತಃ ಪ್ರಾಪ ಕೃಷ್ಣಾಮ್ ॥೧೨.೭೯

ಸಹಾsಗತಾ ತೇನ ತದಾ ಯಶೋದಾ ಸುಷಾವ ದುರ್ಗ್ಗಾಮಥ ತತ್ರ ಶೌರಿಃ
ನಿಧಾಯ ಕೃಷ್ಣಂ ಪ್ರತಿಗೃಹ್ಯ ಕನ್ಯಕಾಂ ಗೃಹಂ ಯಯೌ ನನ್ದ ಉವಾಸ ತತ್ರ ॥೧೨.೮೦

ಕಂಸನಿಗೆ ಕಪ್ಪ-ಕಾಣಿಕೆ ಕೊಡುವುದಕ್ಕಾಗಿ ನಂದಗೋಪನು ಮಧುರಾಪಟ್ಟಣದ ಮಾರ್ಗವಾಗಿ ಬೃಹದ್ವನಪ್ರಾಂತ್ಯದಿಂದ ಹೊರಟು, ಯಮುನಾ ನದಿತೀರಕ್ಕೆ ಬಂದಿದ್ದನು. ಆತನ ಜೊತೆಗೇ ಬಂದಿದ್ದ ಯಶೋದೆ ಯಮುನೆಯ ತೀರದಲ್ಲೇ ದುರ್ಗೆಯನ್ನು ಹೆತ್ತಿದ್ದಳು. ಆಗಲೇ ವಸುದೇವನು ಕೃಷ್ಣನನ್ನು ತಂದು  ಯಶೋದೆಯ ಸಮೀಪದಲ್ಲಿ ಇಟ್ಟು, ಅಲ್ಲಿದ್ದ ಹೆಣ್ಣುಮಗುವನ್ನು(ದುರ್ಗೆಯನ್ನು) ಹಿಡಿದುಕೊಂಡು ಹಿಂತಿರುಗಿದ್ದ.

ನಿರುಷ್ಯ ತಸ್ಮಿನ್ ಯಮುನಾತಟೇ ಸ ಮಾಸಂ ಯಯೌ ದ್ರಷ್ಟುಕಾಮೋ ನರೇನ್ದ್ರಮ್  
ರಾಜ್ಞೇsಥ ತಂ ದತ್ತಕರಂ ದದರ್ಶ ಶೂರಾತ್ಮಜೋ ವಾಕ್ಯಮುವಾಚ ಚೈನಮ್ ॥೧೨.೮೧      

ಯಮುನಾ ತಟದಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ವಾಸಮಾಡಿದ ನಂದಗೋಪ, ಕಂಸನನ್ನು ಕಾಣಬೇಕೆಂಬ ಇಚ್ಛೆಯುಳ್ಳವನಾಗಿ ಮಧುರೆಗೆ ತೆರಳಿದನು.  ಅಲ್ಲಿ ಕಂಸನಿಗೆ ದತ್ತಕರವನ್ನು ಕೊಟ್ಟ ನಂದಗೋಪನನ್ನು ವಸುದೇವನು ಕಂಡನು. ವಸುದೇವನು ನಂದಗೊಪನನ್ನು ಕುರಿತು ಮಾತನ್ನು ಹೇಳಿದನು.


Thursday, April 18, 2019

Mahabharata Tatparya Nirnaya Kannada 12.73-12.75


ಶ್ರುತ್ವಾ ತಯೋಕ್ತಂ ತು ತದೈವ ಕಂಸಃ ಪಶ್ಚಾತ್ತಾಪಾದ್ ವಸುದೇವಂ ಸಭಾರ್ಯ್ಯಮ್
ಪ್ರಸಾದಯಾಮಾಸ ಪುನಃಪುನಶ್ಚ ವಿಹಾಯ ಕೋಪಂ ಚ ತಮೂಚತುಸ್ತೌ ।
ಸುಖಸ್ಯ ದುಃಖಸ್ಯ ಚ ರಾಜಸಿಂಹ ನಾನ್ಯಃ ಕರ್ತ್ತಾ ವಾಸುದೇವಾದಿತಿ ಸ್ಮ ॥೧೨.೭೩॥    

ದುರ್ಗೆ ಹೇಳಿದ ಮಾತನ್ನು ಕೇಳಿದ ಕಂಸನು ‘ನಾನು  ತಪ್ಪು ಮಾಡಿಬಿಟ್ಟೆ’ ಎಂಬ ಪಶ್ಚಾತ್ತಾಪದಿಂದ,  ವಸುದೇವ-ದೇವಕಿಯನ್ನು ಮತ್ತೆ-ಮತ್ತೆ ಸಾಂತ್ವಾನಗೊಳಿಸುತ್ತಾನೆ. ಅವರೂ ಕೂಡಾ ಅವನ ಮೇಲಿನ ಕೋಪವನ್ನು  ಬಿಟ್ಟು, “ರಾಜಶ್ರೇಷ್ಠನೇ, ಸುಖಕ್ಕೂ ದುಃಖಕ್ಕೂ ಕೂಡಾ ಕಾರಣನಾದವನು ನಾರಾಯಣನೇ ಹೊರತು ಬೇರೆ  ಅಲ್ಲಾ” ಎನ್ನುವ ತಿಳುವಳಿಕೆಯ ಮಾತನ್ನಾಡುತ್ತಾರೆ.

ಆನೀಯ ಕಂಸೋsಥ ಗೃಹೇ ಸ್ವಮನ್ತ್ರಿಣಃ ಪ್ರೋವಾಚ ಕನ್ಯಾವಚನಂ ಸಮಸ್ತಮ್ ।
ಶ್ರುತ್ವಾ ಚ ತೇ ಪ್ರೋಚುರತ್ಯನ್ತಪಾಪಾಃ ಕಾರ್ಯ್ಯಂ ಬಾಲಾನಾಂ ನಿಧನಂ ಸರ್ವಶೋsಪಿ॥೧೨.೭೪    

ಅನಂತರ ಕಂಸನು ತನ್ನ ಮನೆಯಲ್ಲಿ ಮಂತ್ರಿಗಳನ್ನು ಕರೆಸಿ, ಆ ಕನ್ನಿಕೆ  ಹೇಳಿದ ಎಲ್ಲಾ ಮಾತುಗಳನ್ನೂ ಕೂಡಾ ಅವರಿಗೆ ಹೇಳುತ್ತಾನೆ. ಅತ್ಯಂತ ಪಾಪಿಷ್ಠರಾದ ಆ ಮಂತ್ರಿಗಳು ಕಂಸನ ಮಾತನ್ನು ಕೇಳಿ, ‘ಎಲ್ಲಾ ಕಡೆಯಲ್ಲಿರುವ ಬಾಲಕರ ಸಂಹಾರ ಮಾಡಲ್ಪಡಬೇಕು’ ಎನ್ನುವ ಸಲಹೆ ನೀಡುತ್ತಾರೆ.

ತಥೇತಿ ತಾಂಸ್ತತ್ರ ನಿಯುಜ್ಯ ಕಂಸೋ ಗೃಹಂ ಸ್ವಕೀಯಂ ಪ್ರವಿವೇಶ ಪಾಪಃ ।
ಚೇರುಶ್ಚ ತೇ ಬಾಲವಧೇ ಸದೋಧ್ಯತಾ ಹಿಂಸಾವಿಹಾರಾಃ ಸತತಂ ಸ್ವಭಾವತಃ ೧೨.೭೫

ಪಾಪಿಷ್ಠನಾದ ಕಂಸನು ‘ಹಾಗೆಯೇ ಆಗಲಿ’ ಎಂದು ಹೇಳಿ, ಮಂತ್ರಿಗಳನ್ನು ಬಾಲಕರ ಸಂಹಾರಕ್ಕೆ ನೇಮಿಸಿ, ತನ್ನ ಒಳಮನೆಯನ್ನು ಪ್ರವೇಶ ಮಾಡಿದನು. ಸ್ವಾಭಾವಿಕವಾಗಿ (ಸ್ವಭಾವದಿಂದಲೇ) ನಿರಂತರ  ಹಿಂಸೆಯೇ ಕ್ರೀಡೆಯಾಗಿ ಹೊಂದಿರುವ ಅವನ ಮಂತ್ರಿಗಳು ಬಾಲಕರ ವದದಲ್ಲಿ ಸದಾ ಉತ್ಸಾಹದಿಂದ ಕೂಡಿದವರಾಗಿ ತಿರುಗಾಡಿದರು.

[ಕಂಸ ತನ್ನ ಮಂತ್ರಿಗಳಿಗೆ ಎಲ್ಲಾ ಬಾಲಕರನ್ನೂ ಕೊಲ್ಲುವುದಕ್ಕೆ ಆಜ್ಞೆ ನೀಡಿದನೇ ಎನ್ನುವ ಪ್ರಶ್ನೆಗೆ  ಬ್ರಹ್ಮಾಂಡಪುರಾಣದಲ್ಲಿ(೧೮೩.೭) ಉತ್ತರವನ್ನು ಕಾಣಬಹುದು.  ಯತ್ರೋದ್ರಿಕ್ತಂ ಬಲಂ ಬಾಲೇ ಸ ಹಂತವ್ಯಃ ಪ್ರಯತ್ನತಃ’.  ‘ಎಲ್ಲಿ ಹೆಚ್ಚಿನ ಬಲವಿದೆಯೋ ಅಲ್ಲಿ ಪ್ರಯತ್ನಪಟ್ಟು ಕೊಲ್ಲಬೇಕು’  ಎನ್ನವ ಆಜ್ಞೆಯನ್ನು ಕಂಸ ನೀಡಿದನು. (ಆದರೆ ಆತನ ದುಷ್ಟಮಂತ್ರಿಗಳು ತಮಗಿಷ್ಟಬಂದಂತೆ ಬಾಲಕರ ಸಂಹಾರ ಮಾಡಿದರು)]

Mahabharata Tatparya Nirnaya Kannada 12.69-12.72


ಗರ್ಭಂ ದೇವಕ್ಯಾಃ ಸಪ್ತಮಂ ಮೇನಿರೇ ಹಿ ಲೋಕಾಃ ಸೃತಂ ತ್ವಷ್ಟಮಂ ತಾಂ ತತಃ ಸಃ ।
ಮತ್ವಾ ಹನ್ತುಂ ಪಾದಯೋಃ ಸಮ್ಪ್ರಗೃಹ್ಯ ಸಮ್ಪೋಥಯಾಮಾಸ ಶಿಲಾತಳೇ ಚ ॥೧೨.೬೯

ಸಾ ತದ್ಧಸ್ತಾತ್ ಕ್ಷಿಪ್ರಮುತ್ಪತ್ಯ ದೇವೀ ಖೇsದೃಶ್ಯತೈವಾಷ್ಟಭುಜಾ ಸಮಗ್ರಾ
ಬ್ರಹ್ಮಾದಿಭಿಃ ಪೂಜ್ಯಮಾನಾ ಸಮಗ್ರೈರತ್ಯದ್ಭುಥಾಕಾರವತೀ ಹರಿಪ್ರಿಯಾ ॥೧೨.೭೦

ಕಂಸನೂ ಸೇರಿದಂತೆ ಎಲ್ಲರೂ ದೇವಕಿಯ ಏಳನೇ ಮಗುವು ಗರ್ಭಸ್ತ್ರಾವಕ್ಕೆ ಒಳಗಾಗಿ ಸತ್ತಿದೆ ಎಂದು ತಿಳಿದಿದ್ದರು. ಆ ಕಾರಣದಿಂದ ಕಂಸನು ದುರ್ಗೆಯನ್ನೇ ಎಂಟನೇ ಮಗು ಎಂದು ತಿಳಿದು ಕೊಲ್ಲುವುದಕ್ಕಾಗಿ, ಮಗುವನ್ನು ತನ್ನ ಕಾಲಿನಿಂದ  ಹಿಡಿದು ಬಂಡೆಗಲ್ಲಿಗೆ  ಚಚ್ಚಲೆಂದು ಹೋದನು.
ಆದರೆ ದುರ್ಗೆಯು ಆತನ ಹಿಡಿತದಿಂದ ಬಿಡಿಸಿಕೊಂಡು ತಕ್ಷಣ ಮೇಲಕ್ಕೆರಗಿ, ಆಕಾಶದಲ್ಲಿ ಎಂಟು ತೋಳ್ಗಳುಳ್ಳ ದೇವಿಯಾಗಿ ಕಂಡಳು. ಬ್ರಹ್ಮಾದಿ ಸಮಗ್ರ ದೇವತೆಗಳಿಂದ ಪೂಜಿಸಲ್ಪಡತಕ್ಕ ಹರಿಪ್ರಿಯಳು ಅತ್ಯದ್ಭುತಾಕಾರವುಳ್ಳವಳಾಗಿ ಆಕಾಶದಲ್ಲಿ ಕಾಣಿಸಿಕೊಂಡಳು.
[ಹೀಗೆ ಆಕಾಶದಲ್ಲಿ ಅಷ್ಟ ತೋಳ್ಗಳುಳ್ಳವಳಾಗಿ ಪ್ರಕಟಗೊಂಡ ದುರ್ಗೆಯ ವರ್ಣನೆಯನ್ನು ಭಾಗವತದಲ್ಲಿ(೧೦.೫.೧೧) ಕಾಣುತ್ತೇವೆ: ದಿವ್ಯಸ್ರಗಂಬರಾಲೇಪರತ್ನಾಭರಣಭೂಷಿತಾ ಧನುಃಶೂಲೇಷುಚರ್ಮಾಸಿಶಙ್ಖಚಕ್ರಗದಾಧರಾ ಸಿದ್ಧಚಾರಣಗಂಧರ್ವೈರಪ್ಸರಃಕಿನ್ನರೋರಗೈಃ  ಉಪಾಹೃತೋರುಬಲಿಭಿಃ ಸ್ತೂಯಮಾನೇದಮಬ್ರವೀತ್]

ಉವಾಚ ಚಾSರ್ಯ್ಯಾ ತವ ಮೃತ್ಯುರತ್ರ ಕ್ವಚಿತ್ ಪ್ರಜಾತೋ ಹಿ ವೃಥೈವ ಪಾಪ
ಅನಾಗಸೀಂ ಮಾಂ ವಿನಿಹನ್ತುಮಿಚ್ಛಸ್ಯಶಕ್ಯಕಾರ್ಯ್ಯೇ ತವ ಚೋಧ್ಯಮೋSಯಮ್ ॥೧೨.೭೧

ಆಕಾಶದಲ್ಲಿ ದಿವ್ಯರೂಪದಿಂದ ಕಾಣಿಸಿಕೊಂಡ ದುರ್ಗಾದೇವಿಯು ಕಂಸನನ್ನು ಕುರಿತು ಹೇಳಿದಳೂ ಕೂಡಾ: ‘ನಿನ್ನ ಮೃತ್ಯುವು ಇನ್ನೆಲ್ಲಿಯೋ ಹುಟ್ಟಿದ್ದಾನೆ. ಪಾಪಿಷ್ಠನೇ, ಸುಮ್ಮನೇ ಯಾವುದೇ ತಪ್ಪುಮಾಡಿಲ್ಲದ ನನ್ನನ್ನು ಕೊಲ್ಲಲು ಬಯಸುತ್ತಿದ್ದೀಯೇ. ಶಕ್ಯವಿಲ್ಲದ ಕಾರ್ಯದಲ್ಲಿ ನಿನ್ನ ಈ ಕೆಲಸವೂ ವ್ಯರ್ಥವಾಗಿದೆ’.

 ಉಕ್ತ್ವೇತಿ ಕಂಸಂ ಪುನರೇವ ದೇವಕೀತಲ್ಪೇsಶಯದ್ ಬಾಲರೂಪೈವ ದುರ್ಗ್ಗಾ
ನಾಜ್ಞಾಸಿಷುಸ್ತಾಮಥ ಕೇಚನಾತ್ರ ಋತೇ ಹಿ ಮಾತಾಪಿತರೌ ಗುಣಾಢ್ಯಾಮ್ ॥೧೨.೭೨

ಈರೀತಿಯಾಗಿ ಕಂಸನನ್ನು ಕುರಿತು ಮಾತನಾಡಿದ,  ಗುಣಗಳಿಂದ ತುಂಬಿದ ದುರ್ಗೆಯು,  ಮತ್ತೆ ಬಾಲರೂಪವನ್ನು ಧರಿಸಿ ದೇವಕಿಯ ಮಂಚದಲ್ಲಿಯೇ ಬಂದು ಮಲಗಿದಳು. ಅವಳನ್ನು ತಂದೆ-ತಾಯಿಗಳ ಹೊರತುಪಡಿಸಿ, ಇನ್ಯಾರೂ ತಿಳಿಯಲಿಲ್ಲ(ಮಗು ಇನ್ಯಾರಿಗೂ ಕಾಣಿಸುತ್ತಿರಲಿಲ್ಲ).

[ಈ ಮಗುವನ್ನು ಮುಂದೆ ರೋಹಿಣಿ ತನ್ನ ಮಗುವಂತೇ ಬೆಳೆಸುತ್ತಾಳೆ. ಈ ವಿಷಯ ಅತ್ಯಂತ ರಹಸ್ಯವಾಗಿಯೇ ಉಳಿಯುತ್ತದೆ. ವೇದವ್ಯಾಸರೂ ಕೂಡಾ ಈ ವಿಷಯವನ್ನು ರಹಸ್ಯವಾಗಿಯೇ ವಿವರಿಸಿರುವುದನ್ನು ನಾವು ಕಾಣುತ್ತೇವೆ. ಹಾಗಾಗಿ ಒಂದೇ ಗ್ರಂಥದಲ್ಲಿ ನಮಗೆ ಇದರ ಸ್ಪಷ್ಟವಿವರ ಕಾಣಸಿಗುವುದಿಲ್ಲ. ಆದರೆ ಬೇರೆಬೇರೆ ಗ್ರಂಥಗಳಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ. ಎಲ್ಲವನ್ನೂ ಕೂಡಿಸಿ ನೋಡಿದಾಗ ವಿಷಯ ಸ್ಪಷ್ಟವಾಗುತ್ತದೆ.
ಆಚಾರ್ಯರು ಮೇಲಿನ ಶ್ಲೋಕದಲ್ಲಿ ನೀಡಿರುವ ನಿರ್ಣಯಕ್ಕೆ ಸಂಬಂಧಿಸಿದ ಪ್ರಮಾಣ ನಮಗೆ ಹರಿವಂಶದ ವಿಷ್ಣುಪರ್ವದಲ್ಲಿ(೪.೪೬.೭) ಕಾಣಸಿಗುತ್ತದೆ. ‘ಸಾ ಕನ್ಯಾ ವವೃಧೇ ತತ್ರ  ವೃಷ್ಣೀಸಙ್ಫಸುಪೂಜಿತಾ ಪುತ್ರವತ್ ಪಾಲ್ಯಮಾನಾ ಸಾ  ವಸುದೇವಾಜ್ಞಯಾ ತದಾ ವಿದ್ಧಿ ಚೈನಾಮಥೋತ್ಪನ್ನಾಮಂಶಾದ್ ದೇವಿಂ  ಪ್ರಜಾಪತೇಃ ಏಕಾನಙ್ಗಾಂ ಯೋಗಕನ್ಯಾಂ  ರಕ್ಷಾರ್ಥಂ ಕೇಶವಸ್ಯ ತು’.
ಸೃಷ್ಟಿಕರ್ತ(ಜಗತ್ಪಿತ)  ಭಗವಂತನ ಮಡದಿಯಾದ ಜಗನ್ಮಾತೆ ಶ್ರೀಲಕ್ಷ್ಮಿಯ ದುರ್ಗಾರೂಪದ ಅವತಾರವಾದ ಈ ಕನ್ನಿಕೆ ಮುಂದೆ ವೃಷ್ಣೀ ವಂಶದ ಜನರ ನಡುವೆಯೇ ಬೆಳೆಯುತ್ತಾಳೆ. ವಸುದೇವನ ಆಜ್ಞೆಯಂತೆ ರೋಹಿಣಿ ಆಕೆಯನ್ನು ತನ್ನ ಮಗುವಂತೆ ಬೆಳೆಸುತ್ತಾಳೆ. ಇವಳಿಗೆ ಏಕಾನಙ್ಗಾ ಎಂದು ಹೆಸರು.
 ಏಕಾನಙ್ಗೇತಿ ಯಾಮಾಹುರ್ನರಾ ವೈ ಕಾಮಾರೂಪಿಣೀಂ ತಥಾ ಕ್ಷಣಮುಹೂರ್ತಾಭ್ಯಾಂ ಯಯಾ ಜಜ್ಞೇ ಸಹೇಶ್ವರಃ ಯತ್ಕೃತೇ ಸಗಣಂ ಕಂಸಂ  ಜಘಾನ ಪುರುಷೋತ್ತಮಃ ಸಾ ಕನ್ಯಾ ವವೃಧೇ ತತ್ರ  ವೃಷ್ಣಿಸದ್ಮನಿ ಪೂಜಿತಾ ಪುತ್ರವತ್ ಪಾಲ್ಯಮಾನಂ ವೈ ವಸುದೇವಾಜ್ಞಯಾ ತದಾ ಏಕಾನಙ್ಗೇತಿ ಯಾಮಾಹುರುತ್ಪನ್ನಾಂ ಮಾನವಾ ಭುವಿ ಯೋಗಕನ್ಯಾಂ ದುರಾಧರ್ಷಾಂ ರಕ್ಷಾರ್ಥಂ ಕೇಶವಸ್ಯ ಹ ಯಾಂ ವೈ ಸರ್ವೇ ಸುಮನಸಃ  ಪೂಜಯಂತಿ ಸ್ಮ ಯಾದವಾಃ  ದೇವವತ್ ದಿವ್ಯವಪುಷಾ  ಕೃಷ್ಣಾಃ ಸಂರಕ್ಷಿತೋ ಯಯಾ’ (ಹರಿವಂಶ, ವಿಷ್ಣು ಪರ್ವ ೧೦೧.೧೧-೧೫). ಅವಳು ಕೃಷ್ಣ ಹುಟ್ಟಿದ ಒಂದು ಕ್ಷಣ ಹಾಗು ಮಹೂರ್ತದ ನಂತರ  ಹುಟ್ಟಿದವಳು. (ಹೀಗಾಗಿ ಕೃಷ್ಣಜಯಂತಿ ದಿನದಂದು ದುರ್ಗಾ ಜಯಂತಿ ಕೂಡಾ ಹೌದು!).  ಹೀಗೆ ಅವತರಿಸಿದ ದುರ್ಗೆ ವೃಷ್ಣೀ ವಂಶದಲ್ಲಿ ಆರಾಧಿತಳಾಗಿ ಬೆಳೆದಳು.  ಈಕೆ ಸಾಕ್ಷಾತ್ ಲಕ್ಷ್ಮೀ ಎನ್ನುವ ಅರಿವಿದ್ದ ಜನರು  ಅವಳನ್ನು ಆರಾಧನೆ ಮಾಡಿ ಬೆಳೆಸಿದರು.
‘ದದೃಶುಸ್ತಾಂ ಪ್ರಿಯಾಂ  ಮಧ್ಯೇ ಭಗಿನೀಂ ರಾಮಕೃಷ್ಣಯೋಃ ರುಗ್ಮಪದ್ಮವ್ಯಗ್ರಕರಾಂ ಶ್ರಿಯಂ ಪದ್ಮಾಲಯಾಮಿವ’(೧೮).  ರಾಮ ಹಾಗು ಕೃಷ್ಣರ ಮದ್ಯದಲ್ಲೇ, ಅವರ ತಂಗಿಯಂತೆ ಇವಳೂ ಕೂಡಾ ಬೆಳೆದದ್ದನ್ನು ಜನರು ನೋಡಿದರು. ಆಕೆ ಸಾಕ್ಷಾತ್ ಲಕ್ಷ್ಮೀ ಎನ್ನುವ ಅರಿವೂ ಸಜ್ಜನರಿಗಿತ್ತು.
ಮಹಾಭಾರತದಲ್ಲೂ(ಸಭಾಪರ್ವ: ೫೯.೮-೯) ಕೂಡಾ  ಈ ಕುರಿತಾದ ವಿವರ ಕಾಣಸಿಗುತ್ತದೆ: ‘ತತಃ ಪ್ರಾಪ್ತಾ ಯಶೋದಾಯಾ ದುಹಿತಾ ವೈ  ಕ್ಷಣೇನ ಹಿ   ಜಾಜ್ವಲ್ಯಮಾನಾ ವಪುಷಾ ಪ್ರಭಯಾsತೀವ ಭಾರತ ಏಕಾನಙ್ಗೇತಿ ಯಾಮಾಹುಃ ಕನ್ಯಾಂ ವೈ ಕಾಮರೂಪಿಣೀಮ್’. ‘ಈಕೆಯನ್ನು ಏಕಾನಙ್ಗಾ  ಎಂದು ಕರೆಯುತ್ತಿದ್ದರು. ಯಶೋದೆಯಲ್ಲಿ ಹುಟ್ಟಿದ ಈಕೆ, ಹುಟ್ಟಿದಾಗ ಬೆಳಕಿನ ಮೊತ್ತವೇ ಮಗುವಾಗಿ ಬಂದಿದೆ ಎನ್ನುವನ್ತಿದ್ದಳು’ ಎಂದಿದೆ ಭಾರತ.
ಇನ್ನು ಬ್ರಹ್ಮವೈವರ್ತ ಪುರಾಣದಲ್ಲೂ(೮.೫೧) ಕೂಡಾ ಈ ಕುರಿತಾದ ವಿವರ ಕಾಣಸಿಗುತ್ತದೆ:  ‘ವಸುದೇವೋ ದೇವಕೀ ಚ ತಾಮಾದಾಯ ಮುದಾsನ್ವಿತೌ ಜಗ್ಮತುಃ ಸ್ವಗೃಹಂ ಚೈವ  ಕನ್ಯಾಂ ಕೃತ್ವಾ ಸ್ವವಕ್ಷಸಿ ಮೃತಾಮಿವಪುನಃ ಪ್ರಾಪ್ಯ ಬ್ರಾಹ್ಮಣೇಭ್ಯೋ ದದೌ ಧನಮ್ ಸಾ ಪರಾ ಭಗಿನೀ ವಿಪ್ರ ಕೃಷ್ಣಸ್ಯ ಪರಮಾತ್ಮನಃ ಏಕಾನಙ್ಗೇತಿ ವಿಖ್ಯಾತಾ ಪಾರ್ವತ್ಯಂಶಸಮುದ್ಭವಾ  ವಸುಸ್ತಂ ದ್ವಾರಕಾಯಾಂ ತು ರುಗ್ಮಿಣ್ಯುದ್ವಾಹಕರ್ಮಣಿ  ದದೌ ದುರ್ವಾಸಸೇ ಭಕ್ತ್ಯಾ ಶಙ್ಕರಾಂಶಾಯ ಭಕ್ತಿತಃ’.
ಸಾಮಾನ್ಯವಾಗಿ ಲೋಕದದೃಷ್ಟಿಯಲ್ಲಿ ದುರ್ಗೆ ಎಂದರೆ ಪಾರ್ವತಿ. ಆದರೆ ಪಾರ್ವತಿಯ ಅಂತರ್ಯಾಮಿಯಾಗಿ ಕೇಶವನ ಪತ್ನಿಯಾದ ದುರ್ಗೆ[1] ಇರುವುದರಿಂದಲೇ ಆಕೆಗೂ ಕೂಡಾ ದುರ್ಗಾ ಎನ್ನುವ ಹೆಸರು ಬಂದಿದೆ. ಮೇಲಿನ ಶ್ಲೋಕದಲ್ಲಿ   ‘ಪಾರ್ವತಿ’ ಎಂದರೆ ಪಾರ್ವತಿ ಅಂತರ್ಗತ ತಮೋಭಿಮಾನಿನಿಯಾದ ಶ್ರಿದುರ್ಗೆ ಎಂದೇ ತೆಗೆದುಕೊಳ್ಳಬೇಕು. ಈ ರೀತಿ ಭಕ್ತಿಯಿಂದ ಕೊಡಲ್ಪಟ್ಟ ಪಾರ್ವತಿಯ ಅಂತರ್ಯಾಮಿಯಾದ ದುರ್ಗೆಯ ರೂಪವಾದ  ಏಕಾನಙ್ಗಾಳನ್ನು ದುರ್ವಾಸರು ಭಕ್ತಿಯಿಂದ  ಪೂಜಿಸಿದರು ಎನ್ನುತ್ತದೆ ಪುರಾಣ.
ಒಟ್ಟಿನಲ್ಲಿ ಹೇಳಬೇಕೆಂದರೆ: ಅಷ್ಟ ತೊಳುಗಳುಳ್ಳವಳಾಗಿ ಆಕಾಶದಲ್ಲಿ ಕಾಣಿಸಿಕೊಂಡ ದುರ್ಗಾರೂಪಿ ಶ್ರೀಲಕ್ಷ್ಮಿ, ಮತ್ತೆ ಮಗುವಿನ ರೂಪದಲ್ಲಿ ದೇವಕಿಯ ಪಕ್ಕದಲ್ಲೇ ಬಂದು ಮಲಗಿದಳು. ಜಗತ್ತಿನ ಕಣ್ಣಿಗೆ ಅದೃಶ್ಯಳಾಗಿ ಕೇವಲ ಮಾತಾ-ಪಿತೃಗಳಿಗೆ ಮತ್ತು ಶ್ರೀಕೃಷ್ಣನ ಪ್ರೀತಿಗೆ ಪಾತ್ರರಾದವರಿಗೆ ಮಾತ್ರ ಕಾಣಿಸುತ್ತಿದ್ದಳು. ‘ಏಕಾನಙ್ಗಾ’ ಎನ್ನುವ ಹೆಸರಿನಿಂದ ಜಗತ್ಪ್ರಸಿದ್ಧಳಾಗಿದ್ದಳು. ದುರ್ವಾಸರೂ ಸೇರಿದಂತೆ, ಯಾದವರು, ದೇವತೆಗಳು ಈಕೆ ಸಾಕ್ಷಾತ್ ಲಕ್ಷ್ಮೀ ಎಂದು ತಿಳಿದು ಆರಾಧನೆ ಮಾಡಿದರು. ಏಕಾನಙ್ಗಾ ರಾಮ-ಕೃಷ್ಣರ ಜೊತೆ ತಂಗಿಯಂತೆ ಓಡಾಡಿಕೊಂಡಿದ್ದಳು. ಹುಟ್ಟಿದಾಗ ಈಕೆಗೆ ಕಂಸ ಅವಿಧೇಯತೆಯನ್ನು ತೋರಿಸಿದ ಎನ್ನುವ ಮುಖ್ಯವಾದ ಕಾರಣದಿಂದ  ಕಂಸನನ್ನು ಭಗವಂತ ಸಂಹಾರ ಮಾಡಿದ].




[1] ಶ್ರೀ-ಭೂ-ದುರ್ಗಾ ಇವು ಮಹಾಲಕ್ಷ್ಮೀಯ ಮೂರು ಆವೇಶ ರೂಪಗಳು.  ಈ ಮೂರು ರೂಪಗಳು ಕ್ರಮವಾಗಿ ಸತ್ವ-ರಜಸ್ಸು ಹಾಗು ತಮೋಗುಣಗಳ ಅಭಿಮಾನಿ ರೂಪಗಳಾಗಿವೆ.

Monday, April 15, 2019

Mahabharata Tatparya Nirnaya Kannada 12.64-12.68


ಪಿತೃಕ್ರಮಂ ಮೋಹನಾರ್ತ್ಥಂ ಸಮೇತಿ ನ ತಾವತಾ ಶುಕ್ಲತೋ ರಕ್ತತಶ್ಚ ।
ಜಾತೋsಸ್ಯ ದೇಹಸ್ತ್ವಿತಿ ದರ್ಶನಾಯ ಸಶಙ್ಖಚಕ್ರಾಬ್ಜಗದಃ ಸ ದೃಷ್ಟಃ ॥೧೨.೬೪॥

ಅನೇಕ ಸೂರ್ಯ್ಯಾಭಕಿರೀಟಯುಕ್ತೋ ವಿದ್ಯುತ್ಪ್ರಭೇ ಕುಣ್ಡಲೇ ಧಾರಯಂಶ್ಚ ।
ಪೀತಾಮ್ಬರೋ ವನಮಾಲೀ ಸ್ವನನ್ತಸೂರ್ಯ್ಯೋರುದೀಪ್ತಿರ್ದ್ದದೃಶೇ ಸುಖಾರ್ಣ್ಣವಃ ॥೧೨.೬೫॥

ತಂದೆ ಹಾಗು ತಾಯಿಯರಲ್ಲಿ ಪ್ರವೇಶ ಎಂಬ ಕ್ರಮವನ್ನು ದುರ್ಜನರ ಮೋಹಕ್ಕಾಗಿ ಭಗವಂತ ಹೊಂದುತ್ತಾನೆ. ಆದರೆ ರೇತಸ್ಸಿನಿಂದಾಗಲೀ ರಕ್ತದಿಂದಾಗಲೀ ತಾನು ಹುಟ್ಟಲಿಲ್ಲ ಎಂದು ತೋರಲೋಸುಗ ಶಂಖ-ಚಕ್ರ-ಪದ್ಮ-ಗದೆಯನ್ನು ಹಿಡಿದವನಾಗಿ ಆತ ಕಾಣಲ್ಪಟ್ಟನು.
ಅನೇಕ ಸೂರ್ಯರ ಕಾಂತಿಯನ್ನು ಬೀರುವ ಕಿರೀಟದಿಂದ ಕೂಡಿದವನಾಗಿ, ಮಿಂಚಿನ ಬಣ್ಣವುಳ್ಳ ಕುಂಡಲವನ್ನು ಹೊತ್ತವನಾಗಿ, ಹಳದಿ ಬಣ್ಣದ ಬಟ್ಟೆಯುಟ್ಟು, ವನಮಾಲೆಯನ್ನು ಧರಿಸಿ, ಅನಂತವಾಗಿರುವ ಸೂರ್ಯನಂತೆ ಕಾಂತಿಯುಳ್ಳವನಾಗಿ, ಸುಖಕ್ಕೆ ಕಡಲಾಗಿ ಭಗವಂತ ಕಾಣಲ್ಪಟ್ಟನು.

[ಭಾಗವತದಲ್ಲಿ(೧೦.೪.೧೦-೧೧) ಈ ಕುರಿತಾದ ಸುಂದರವಾದ ವಿವರಣೆಯನ್ನು ಕಾಣಬಹುದು: ‘ತಮದ್ಭುತಂ ಬಾಲಕಮಂಬುಜೇಕ್ಷಣಂ  ಚತುರ್ಭುಜಂ  ಶಙ್ಖಗದಾಧ್ಯುದಾಯುಧಮ್ ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ ಪೀತಾಮ್ಬರಂ ಸಾಂದ್ರಪಯೋದಸೌಭಗಮ್ ಮಹಾರ್ಹವೈಡೂರ್ಯಕಿರೀಟಕುಂಡಲತ್ವಿಷಾ ಪರಿಷ್ವಕ್ತಸಹಸ್ರಕುಂತಳಮ್  ಉದ್ದಾಮಕಾಞ್ಚ್ಯಙ್ಗದಕಙ್ಗಣಾದಿಭಿರ್ವಿರೋಚಮಾನಂ ವಸುದೇವ ಐಕ್ಷತ’]

ಸ ಕಞ್ಜಯೋನಿಪ್ರಮುಖೈಃ ಸುರೈಃ ಸ್ತುತಃ ಪಿತ್ರಾ ಚ ಮಾತ್ರಾ ಚ ಜಗಾದ ಶೂರಜಮ್ ।
ನಯಸ್ವ ಮಾಂ ನನ್ದಗೃಹಾನಿತಿ ಸ್ಮ ತತೋ ಬಭೂವ ದ್ವಿಭುಜೋ ಜನಾರ್ದ್ದನಃ ॥೧೨.೬೬

ಹುಟ್ಟಿದಕೂಡಲೇ ಬ್ರಹ್ಮಾದಿ ದೇವತೆಗಳಿಂದಲೂ, ತಂದೆ-ತಾಯಿಯಿಂದಲೂ ಸ್ತೋತ್ರಮಾಡಲ್ಪಟ್ಟವನಾದ ಶ್ರೀಕೃಷ್ಣನು,  ವಸುದೇವನನ್ನು ಕುರಿತು: ‘ನನ್ನನ್ನು ನಂದಗೋಪನ ಮನೆಗೆ ಕೊಂಡೊಯ್ಯಿ’ ಎಂದು ಹೇಳಿದನು. ಹೀಗೆ ಹೇಳಿದ  ಜನಾರ್ದನನು ಎರಡು ಭುಜವುಳ್ಳವನಾದನು.
 
ತದೈವ ಜಾತಾ ಚ ಹರೇರನುಜ್ಞಯಾ ದುರ್ಗ್ಗಾಭಿಧಾ ಶ್ರೀರನು ನನ್ದಪತ್ನ್ಯಾಮ್ ।
ತತಸ್ತಮಾದಾಯ ಹರಿಂ ಯಯೌ ಸ ಶೂರಾತ್ಮಜೋ ನನ್ದಗೃಹಾನ್ ನಿಶೀಥೇ ॥೧೨.೬೭

ಇದೇ ಸಮಯದಲ್ಲಿ ಪರಮಾತ್ಮನ ಅನುಜ್ಞೆಯಿಂದ ದುರ್ಗೆ ಎಂಬ ಹೆಸರುಳ್ಳ ಲಕ್ಷ್ಮೀದೇವಿಯು ನಂದಗೋಪನ ಹೆಂಡತಿಯಾದ ಯಶೋದೆಯಲ್ಲಿ ಹುಟ್ಟಿದಳು. 
ಇತ್ತ ಮಗುವಿನ ರೂಪದಲ್ಲಿರುವ  ಶ್ರೀಹರಿಯನ್ನು ಹಿಡಿದುಕೊಂಡು ವಸುದೇವನು ನಂದಗೋಪನ ಮನೆಯನ್ನು ಕುರಿತು ಅರ್ಧರಾತ್ರಿಯಲ್ಲಿ ತೆರಳಿದನು.

ಸಂಸ್ಥಾಪ್ಯ ತಂ ತತ್ರ ತಥೈವ ಕನ್ಯಕಾಮಾದಾಯ ತಸ್ಮಾತ್ ಸ್ವಗೃಹಂ ಪುನರ್ಯ್ಯಯೌ
ಹತ್ವಾ ಸ್ವಸುರ್ಗ್ಗರ್ಭಷಟ್ಕಂ ಕ್ರಮೇಣ ಮತ್ವಾsಷ್ಟಮಂ ತತ್ರ ಜಗಾಮ ಕಂಸಃ ॥೧೨.೬೮

ಶ್ರೀಕೃಷ್ಣನನ್ನು ನಂದಗೋಪನ ಮನೆಯಲ್ಲಿ ಇಟ್ಟ ವಸುದೇವನು, ಅಲ್ಲಿ ಕನ್ನಿಕೆಯ ರೂಪದಲ್ಲಿದ್ದ ದುರ್ಗಾದೇವಿಯನ್ನು ಹಿಡಿದುಕೊಂಡು ಹಿಂತಿರುಗಿ ಬಂದನು.
ಇತ್ತ ತಂಗಿ ದೇವಕಿಯ  ಆರು ಮಕ್ಕಳನ್ನು ಕ್ರಮವಾಗಿ  ಕೊಂದಿದ್ದ ಕಂಸನು, ಎಂಟನೆಯದು ಹುಟ್ಟಿದೆ ಎಂದು ತಿಳಿದು, ದೇವಕಿ ಇರುವಲ್ಲಿಗೆ  ಧಾವಿಸಿ ಬಂದನು.

Saturday, April 13, 2019

Mahabharata Tatparya Nirnaya Kannada 12.59-12.63

ಸ ನಾಮತೋ ಬಲದೇವೋ ಬಲಾಢ್ಯೋ ಬಭೂವ ತಸ್ಯಾನು ಜನಾರ್ದ್ದನಃ ಪ್ರಭುಃ
ಆವಿರ್ಬಭೂವಾಖಿಲಸದ್ಗುಣೈಕಪೂರ್ಣ್ಣಃ ಸುತಾಯಾಮಿಹ ದೇವಕಸ್ಯ ॥೧೨.೫೯

ಹಾಗೆ ಹುಟ್ಟಿದ ಶೇಷನು ಬಲಾಢ್ಯನಾಗಿ ‘ಬಲದೇವ’ ಎನ್ನುವ ಹೆಸರಿನವನಾದನು. ಬಲದೇವನ ನಂತರ,  ಸರ್ವಸಮರ್ಥನಾದ, ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ನಾರಾಯಣನು ದೇವಕನ ಮಗಳಾದ ದೇವಕಿಯ ಗರ್ಭದಲ್ಲಿ ಆವಿರ್ಭಿವಿಸಿದನು.    

ಯಃ ಸತ್ಸುಖಜ್ಞಾನಬಲೈಕದೇಹಃ ಸಮಸ್ತದೋಷಸ್ಪರ್ಶೋಜ್ಝಿತಃ ಸದಾ ।
ಅವ್ಯಕ್ತತತ್ಕಾರ್ಯ್ಯಮಯೋ ನ ಯಸ್ಯ ದೇಹಃ ಕುತಶ್ಚಿತ್ ಕ್ವಚ ಸ ಹ್ಯಜೋ ಹರಿಃ ॥೧೨.೬೦     

ಯಾರು ಜ್ಞಾನ-ಬಲಗಳೇ ಮೈವೆತ್ತು ಬಂದವನೋ, ಯಾರು ಎಲ್ಲಾ ದೋಷಗಳ ಸ್ಪರ್ಶದಿಂದ ರಹಿತನೋ, ಯಾರ ದೇಹವು ಜಡ ಅಥವಾ ಜಡದ ಕಾರ್ಯವಾಗಿರುವ ಪದಾರ್ಥದಿಂದ ಹುಟ್ಟಿಲ್ಲವೋ, ಯಾರು ಯಾರಿಂದಲೂ ಕೂಡಾ ಹುಟ್ಟಿಲ್ಲವೋ, ಅಂತಹ ನಾರಾಯಣನು ಪ್ರಾಕೃತವಾಗಿ ಹುಟ್ಟುವುದಿಲ್ಲವಷ್ಟೇ.

ನ ಶುಕ್ಲರಕ್ತಪ್ರಭವೋsಸ್ಯ ಕಾಯಸ್ತಥಾsಪಿ ತತ್ಪುತ್ರತಯೋಚ್ಯತೇ ಮೃಷಾ ।
ಜನಸ್ಯ ಮೋಹಾಯ ಶರೀರತೋsಸ್ಯಾ ಯದಾವಿರಾಸೀದಮಲಸ್ವರೂಪಃ ॥೧೨.೬೧

ಈ ನಾರಾಯಣನ ಶರೀರವು ರೇತಸ್ಸು ಹಾಗು ರಕ್ತದ ಸಂಪರ್ಕದಿಂದ ಉಂಟಾದುದ್ದಲ್ಲ. ಆದರೂ, ಆತ ದುರ್ಜನರ ಮೋಹಕ್ಕಾಗಿ ತಂದೆ-ತಾಯಿಯಿಂದ ಹುಟ್ಟಿದವನಂತೆ ತೋರುತ್ತಾನೆ.  ಅಮಲಸ್ವರೂಪನಾಗಿ  ಆವಿರ್ಭವಿಸಿದರೂ, ದೇವಕೀ ಪುತ್ರ ಎಂಬುದಾಗಿ ಸುಮ್ಮನೆ ಹೇಳಲ್ಪಡುತ್ತಾನೆ.

ಆವಿಶ್ಯ ಪೂರ್ವಂ ವಸುದೇವಮೇವ ವಿವೇಶ ತಸ್ಮಾದೃತುಕಾಲ ಏವ ।
ದೇವೀಮುವಾಸಾತ್ರ ಚ ಸಪ್ತ ಮಾಸಾನ್  ಸಾರ್ದ್ಧಾಂಸ್ತತಶ್ಚಾsವಿರಭೂದಜೋsಪಿ ॥೧೨.೬೨

ಮೊದಲು ವಸುದೇವನನ್ನು ಪ್ರವೇಶಮಾಡಿ, ಅವನ ಮೂಲಕವಾಗಿ ಋತುಕಾಲದಲ್ಲಿಯೇ ದೇವಕಿಯನ್ನು ಪ್ರವೇಶಿಸಿ, ಅಲ್ಲಿ ಅರ್ಧದಿಂದ ಕೂಡಿದ ಏಳು ತಿಂಗಳುಗಳ ಕಾಲ (ಏಳುವರೆ ತಿಂಗಳುಗಳ ಕಾಲ) ವಾಸ ಮಾಡಿ, ಹುಟ್ಟಿಲ್ಲದವನಾದರೂ ಕೂಡಾ ಹುಟ್ಟಿದವನಂತೆ ಪ್ರಕಟಗೊಂಡನು.

ಯಥಾ ಪುರಾ ಸ್ತಮ್ಭತ ಆವಿರಾಸೀದಶುಕ್ಲರಕ್ತೋsಪಿ ನೃಸಿಂಹರೂಪಃ ।
ತಥೈವ ಕೃಷ್ಣೋsಪಿ ತಥಾsಪಿ ಮಾತಾಪಿತೃಕ್ರಮಾದೇವ ವಿಮೋಹಯತ್ಯಜಃ ೧೨.೬೩      

ಹೇಗೆ ಹಿಂದೆ ರೇತಸ್ಸು ಹಾಗು ರಕ್ತವಿಲ್ಲದೇ ಹೋದರೂ  ನೃಸಿಂಹನಾಗಿ ಕಂಬದಿಂದ ಆವಿರ್ಭವಿಸಿದನೋ, ಹಾಗೆಯೇ ಕೃಷ್ಣನೂ ಕೂಡಾ. ಆದರೂ ಕೂಡಾ ನಾರಾಯಣನು ತಂದೆತಾಯಿಗಳ ಕ್ರಮಾನುಸರಣ  ಎಲ್ಲರನ್ನೂ ಮೋಹಗೊಳಿಸುತ್ತಾನೆ.