ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, April 5, 2019

Mahabharata Tatparya Nirnaya Kannada 12.55-12.58


ತಜ್ಜನ್ಮಮಾತ್ರೇಣ ಧರಾ ವಿದಾರಿತಾ ಶಾರ್ದೂಲಭೀತಾಜ್ಜನನೀಕರಾದ್ ಯದಾ
ಪಪಾತ ಸಞ್ಚೂರ್ಣ್ಣಿತ ಏವ ಪರ್ವತಸ್ತೇನಾಖಿಲೋsಸೌ ಶತಶೃಙ್ಗನಾಮಾ ॥೧೨.೫೫

ಭೀಮಸೇನ ಹುಟ್ಟಿದೊಡನೆಯೇ ಭೂಮಿ ಸೀಳಿತು. ಹುಲಿಯಿಂದ ಭಯಗೊಂಡು ನಡುಗಿದ ಕೈಯಿಂದ ಯಾವಾಗ ಆ ಮಗುವು ಕೆಳಗೆ ಬಿತ್ತೋ, ಆಗ ಶತಶೃಂಗ ಪರ್ವತವೇ ಪುಡಿಯಾಯಿತು.

[ಸ್ನಾತ್ವಾ  ಚ ಸುತಮಾದಾಯ ದಶಮೇ sಹನಿ ಯಾದವೀ ದೈವತಾನ್ಯರ್ಚಯಿಷ್ಯಂತೀ ನಿರ್ಜಗಮಾsಶ್ರಮಾತ್ ಪೃಥಾ। ಶೈಲಾಭ್ಯಾಶೇನ ಗಚ್ಛಂತ್ಯಾಸ್ತದಾ ಭರತಸತ್ತಮ ನಿಶ್ಚಕ್ರಾಮ ಮಹಾವ್ಯಾಘ್ರೋ ಜಿಘಾಂಸುರ್ಗಿರಿಗಹ್ವರಾತ್। ತಮಾಪತನ್ತಂ ಶಾರ್ದೂಲಂ ನಿಕೃಷ್ಯ ಧನುರುತ್ತಮಂ। ನಿರ್ಬಿಭೇದ ಶರೈಃ  ಪಾಂಡುಸ್ತ್ರಿಭಿಸ್ತ್ರಿದಶವಿಕ್ರಮಃ । ನಾದೇನ ಮಹತಾ ತಾಂ ತು ಪೂರಯಂತಂ ಗಿರೇರ್ಗುಹಾಂ ದೃಷ್ಟ್ವಾ ಶೈಲಮುಪಾರೋಢುಮೈಚ್ಛತ್ ಕುಂತೀ ಭಯಾತ್ ತದಾ। ತ್ರಾಸಾತ್ ತಸ್ಯಾಃ ಸುತಸ್ತ್ವಞ್ಕಾತ್ ಪಪಾತ ಭರತರ್ಷಭ ಸ ಶಿಲಾಂ ಚೂರ್ಣಯಾಮಾಸ ವಜ್ರವದ್ ವಜ್ರಿಚೋದಿತಃ (ಆದಿಪರ್ವ ೧೨೯.೫೭-೬೩).
ಭೀಮ ಹುಟ್ಟಿದ ಹತ್ತನೇ ದಿನ, ಸ್ನಾನಪೂರೈಸಿ, ದೇವತೆಗಳನ್ನು ಅರ್ಚನೆ ಮಾಡುತ್ತಾ ಕುಂತಿ ಆಶ್ರಮದಿಂದ ನಡೆದುಕೊಂಡು ಬರುತ್ತಿದ್ದಳು.  ಆಗ ಅಲ್ಲಿ ಒಂದು ದೊಡ್ಡ ಹುಲಿ  ಮನುಷ್ಯರ ವಾಸನೆಯನ್ನು ಗ್ರಹಿಸಿ, ತಿನ್ನಬೇಕೆಂದು ಗುಹೆಯಿಂದ ಹೊರಗೆ ಬಂತು. ಹೀಗೆ ಬಂದ ಹುಲಿಯನ್ನು ಮೂರು ಬಾಣಗಳಿಂದ ಪಾಂಡು  ಕೊಲ್ಲಬೇಕಾಗಿ ಬಂತು. (ಈ ಮಾತಿನಿಂದ ನಮಗೆ ಅಂದು ಹಿಮಾಚ್ಛಾದಿತವಾದ  ಹಿಮಾಲಯದಲ್ಲಿ ಅತಿ ಬಲಿಷ್ಠವಾದ ಹುಲಿಗಳಿದ್ದವು ಎನ್ನುವ ಮಾಹಿತಿ ತಿಳಿಯುತ್ತದೆ. ಇಂದು ಭಾರತದಲ್ಲಿ ಹಿಮ-ಹುಲಿಗಳು ಕಾಣಸಿಗುವುದಿಲ್ಲ. ಸೈಬೀರಿಯಾದಲ್ಲಿ ಇಂತಹ ಹುಲಿಗಳು ಇಂದಿಗೂ ಇವೆ). ಈ ರೀತಿ ಆಕಸ್ಮಿಕವಾಗಿ ಹುಲಿ ಎದುರಾದಾಗ ಭಯದಿಂದ ನಡುಗಿದ ಕುಂತಿಯ ಕೈಯಿಂದ ಮಗು ಕೆಳಗೆ ಬೀಳುತ್ತದೆ. ಹೀಗೆ ಬಿದ್ದಾಗ ಪರ್ವತವೇ ಪುಡಿಪುಡಿಯಾಯಿತು ಎನ್ನುತ್ತದೆ ಮಹಾಭಾರತ. ಈ ಘಟನೆಯಿಂದ ಆ ಪರ್ವತದ ಹೆಸರೂ ಸಾರ್ಥಕವಾಯಿತು(ನೂರಾರು ಶೃಂಗಗಳಿರುವ ಪರ್ವತವಾಗಿ ಮಾರ್ಪಟ್ಟು, ಶತಶೃಂಗ ಎನ್ನುವ ಹೆಸರೂ ಸಾರ್ಥಕವಾಯಿತು).
ಈ ಘಟನೆ ಕುಂತಿಯ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ಘಟನೆ. ಪ್ರಾಯಃ ಕರುಣಾಸಾಗರನಾದ ವಾಯು ತಾಯಿ ಕುಂತಿಗೆ ಭರವಸೆ ತುಂಬುವುದಕ್ಕಾಗಿಯೇ ಈ ಲೀಲಾನಾಟಕವನ್ನಾಡಿ ತೋರಿದನೋ ಏನೋ. ಏಕೆಂದರೆ ಆಕೆ ಮುಂದೆ ಗಂಡನನ್ನು ಕಳೆದುಕೊಂಡಮೇಲೆ, ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆಕೆಯ ಇಡೀ ಜೀವನ ಇಂದಿನ ಯಾವ ಮಹಿಳೆಯಿಂದಲೂ ಸಹಿಸಲಾಗದಷ್ಟು ಹಿಂಸೆಯ ಜೀವನವಾಗುತ್ತದೆ. ಆದರೆ ಅವಳಿಗೆ ಕೊನೆತನಕವೂ ಭರವಸೆಯನ್ನು ತುಂಬಿರುವ ಘಟನೆ ಇದು. ಮಹಾಭಾರತದಲ್ಲಿ ಎಷ್ಟೋ ಕಡೆ ಕುಂತಿ ಈ ಘಟನೆಯನ್ನು ನೆನಪಿಸಿಕೊಳ್ಳುವ ಪ್ರಸಂಗಗಳನ್ನು ಹೇಳುತ್ತಾರೆ. ಬಕಾಸುರ ವಧೆಯ ಸಂದರ್ಭದಲ್ಲಿ ಬ್ರಾಹ್ಮಣಪುತ್ರನ ಬದಲು ಧೈರ್ಯವಾಗಿ ಆಕೆ ಭೀಮನನ್ನು ಕಳುಹಿಸುತ್ತಾಳೆ. ಆಗ ಇತರ ಪಾಂಡವರು ಗಾಭರಿಗೊಂಡಾಗ, ಆಕೆ ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾಳೆ. ಭೀಮ ಬಿದ್ದ ಜಾಗ ಒಡೆಯುತ್ತದೇ ಹೊರತು, ಭೀಮನಿಗೆ ಏನೂ ಆಗುವುದಿಲ್ಲ ಎಂದು ಹೇಳಿ ಆಕೆ ಭೀಮನನ್ನು ಕಳುಹಿಸುತ್ತಾಳೆ. ಹೀಗೆ ಆಕೆಗೆ ಕೊನೆತನಕವೂ ಜೀವನೋತ್ಸಾಹ ಕೊಟ್ಟ ಘಟನೆ ಇದು.  ಸಾತ್ವಿಕ ಲೋಕಕ್ಕೆ ಮಾಹಾತ್ಮ್ಯಜ್ಞಾನವನ್ನು ನೀಡಿದ, ಭರವಸೆ ನೀಡುವ  ಘಟನೆ ಇದು. . ‘ಭೀಮೋ ನ ಶೃಂಗಾ ದವಿಧಾವ ದುರ್ಗೃಭಿಃ’ ಎಂದು ವೇದಪುರುಷನೂ ಕೊಂಡಾಡಿದ ಘಟನೆ ಇದು. ನಮಗೆಲ್ಲರಿಗೂ ಸಿಗಬೇಕಾದ ನಿಜವಾದ ದಾರ್ಢ್ಯ ಇದು. ಇವನ ಅಪ್ಪ (ಸರ್ವೋತ್ತಮ) ಇಡೀ ಬೆಟ್ಟವನ್ನು ಕಿರುಬೆರಳಿನಿಂದ ಎತ್ತಿ ನಿಂತ. ಈತ (ಜೀವೋತ್ತಮ) ಬೆಟ್ಟವನ್ನು ವಜ್ರದಂತೆ ಪುಡಿಮಾಡಿದ.  ಭಗವಂತ ಜಗತ್ತಿಗೆ ಬಿಟ್ಟ, ಸಾತ್ವಿಕರಿಗೆ ಅಮೂಲ್ಯವಾದ, ದೈತ್ಯರನ್ನು ಪುಡಿಮಾಡುವ ವಜ್ರ ಈ ಭೀಮ. ಇದನ್ನು ಅರ್ಥಮಾಡಿಕೊಂಡಾಗ ಸಾಧನೆಯಲ್ಲಿ ಭರವಸೆ ಮೂಡುತ್ತದೆ]


ತಸ್ಮಿನ್ ಪ್ರಜಾತೇ ರುಧಿರಂ ಪ್ರಸುಸ್ರುವುರ್ಮ್ಮಹಾಸುರಾ ವಾಹನಸೈನ್ಯಸಂಯುತಾಃ ।
ನೃಪಾಶ್ಚ ತತ್ ಪಕ್ಷಭವಾಃ ಸಮಸ್ತಾಸ್ತದಾ ಭೀತಾ ಅಸುರಾ ರಾಕ್ಷಸಾಶ್ಚ ॥೧೨.೫೬

ಭೀಮ ಹುಟ್ಟುತ್ತಿರಲು ಕುದುರೆ ಮೊದಲಾದವುಗಳನ್ನೊಳಗೊಂಡ ವಾಹನ  ಹಾಗು  ಸೈನ್ಯವನ್ನು ಹೊಂದಿರುವ ಮಹಾಸುರರು ರಕ್ತವನ್ನು ಸುರಿಸಿಕೊಂಡರು.  ಅವರ ಪಕ್ಷೀಯರಾಗಿ ಹುಟ್ಟಿದ್ದ ಎಲ್ಲಾ ರಾಜರೂ ಕೂಡಾ ಭಯಭೀತರಾದರು.

[ಇಲ್ಲಿ ಆಚಾರ್ಯರು ‘ರುಧಿರಂ ಪ್ರಸುಸ್ರುವು’ ಎಂದು ಹೇಳಿದ್ದಾರೆ. ಆದರೆ ಮಹಾಭಾರತದಲ್ಲಿ(ಆದಿಪರ್ವ ೧೨೯.೫೪) ‘ಮೂತ್ರಂ ಪ್ರಸುಸ್ರುವುಃ ಸರ್ವೇ’ ಎಂದಿದ್ದಾರೆ.  ಈ ಎರಡು ಮಾತುಗಳನ್ನು ಸೇರಿಸಿಕೊಂಡು ನೋಡಿದರೆ, ಮೂತ್ರದ ಜೊತೆಗೆ ರಕ್ತವನ್ನು ಸುರಿಸಿಕೊಂಡರು ಎಂದರ್ಥವಾಗುತ್ತದೆ.  ಇನ್ನು  ಸರ್ವಲೋಕಸ್ಯ ಪಾರ್ಥಿವಾಃ (ಆದಿಪರ್ವ ೧೨೯.೫೩) ಅಂದರೆ, ಭೀಮನ ಜನನದಿಂದ  ಸಜ್ಜನರಿಗೆ ಸಂತೋಷವಾಯಿತು ಎಂದರ್ಥ ]

ಅವರ್ದ್ಧತಾತ್ರೈವ ವೃಕೋದರೋ ವನೇ ಮುದಂ ಸುರಾಣಾಮಭಿತಃ ಪ್ರವರ್ದ್ಧಯನ್
ತದೈವ ಶೇಷೋ ಹರಿಣೋದಿತೋsವಿಷದ್ ಗರ್ಭಂ ಸುತಾಯಾ ಅಪಿ ದೇವಕಸ್ಯ ॥೧೨.೫೭

ಭೀಮಸೇನನು ದೇವತೆಗಳಿಗೆ ಎಲ್ಲರೀತಿಯಿಂದ ಸಂತೋಷವನ್ನು ಹೆಚ್ಚಿಸುವವನಾಗಿ  ಕಾಡಿನಲ್ಲಿಯೇ ಬೆಳೆದನು. ಆಗಲೇ ಶೇಷದೇವನು ನಾರಾಯಣನಿಂದ ಪ್ರಚೋದಿತನಾಗಿ ದೇವಕನ ಮಗಳಾದ ದೇವಕಿಯ ಗರ್ಭವನ್ನು ಪ್ರವೇಶಮಾಡಿದನು. 

ಸ ತತ್ರ ಮಾಸತ್ರಯಮುಷ್ಯ ದುರ್ಗ್ಗಯಾsಪವಾಹಿತೋ ರೋಹಿಣೀಗರ್ಭಮಾಶು ।
ನಿಯುಕ್ತಯಾ ಕೇಶವೇನಾಥ ತತ್ರ ಸ್ಥಿತ್ವಾ ಮಾಸಾನ್ ಸಪ್ತ ಜಾತಃ ಪೃಥಿವ್ಯಾಮ್ ॥೧೨.೫೮॥  

ಆ ಶೇಷನು ದೇವಕಿಯ ಗರ್ಭದಲ್ಲಿ ಮೂರು ತಿಂಗಳುಗಳ ಕಾಲ ವಾಸಮಾಡಿ, ಭಗವಂತನ ಆಜ್ಞೆಯಂತೆ ದುರ್ಗೆಯಿಂದ ರೋಹಿಣಿಯ ಬಸಿರನ್ನು ಕುರಿತು ಕೂಡಲೇ ವರ್ಗಾವಣೆಮಾಡಲ್ಪಟ್ಟವನಾಗಿ, ಆ ರೋಹಿಣಿಯ ಗರ್ಭದಲ್ಲಿ ಏಳು ತಿಂಗಳುಗಳ ಕಾಲ ಇದ್ದು, ಭೂಮಿಯಲ್ಲಿ ಹುಟ್ಟಿದನು.

No comments:

Post a Comment