ಯಾಹ್ಯುತ್ಪಾತಾಃ ಸನ್ತಿ ತತ್ರೇತ್ಯುದೀರಿತೋ ಜಗಾಮ ಶೀಘ್ರಂ
ಯಮುನಾಂ ಸ ನನ್ದಃ ।
ರಾತ್ರಾವೇವಾsಗಚ್ಛಮಾನೇ ತು ನನ್ದೇ
ಕಂಸಸ್ಯ ಧಾತ್ರೀ ತು ಜಗಾಮ ಗೋಷ್ಠಮ್ ॥೧೨.೮೨॥
‘ನಿನ್ನ ಹೆಂಡತಿ ಇರುವ
ದಿಕ್ಕಿನಲ್ಲಿ ನಾನಾ ರೀತಿಯ ಉತ್ಪಾತಗಳು ಕಾಣುತ್ತಿವೆ’ ಎಂದು ವಸುದೇವನಿಂದ ಹೇಳಲ್ಪಟ್ಟ ನಂದನು,
ಯಮುನಾನದಿಯನ್ನು ಕುರಿತು ಬೇಗನೇ ಹೊರಟನು. (ಹೀಗೆ ಹೋಗುತ್ತಿರುವಾಗ ರಾತ್ರಿಯಾಯಿತು) ರಾತ್ರಿಯಲ್ಲಿಯೇ ನಂದಗೋಪ ಬರುತ್ತಿರಲು,
ಕಂಸನ ಸಾಕುತಾಯಿಯಾದ ಪೂತನೆ (ನಂದಗೋಪ ತಲಪುವ ಮೊದಲೇ) ಯಶೋದೆಯಿರುವ ಸ್ಥಳವನ್ನು ಕುರಿತು
ತೆರಳಿದಳು.
ಸಾ ಪೂತನಾ ನಾಮ ನಿಜಸ್ವರೂಪಮಾಚ್ಛಾಧ್ಯ ರಾತ್ರೌ ಶುಭರೂಪವಚ್ಚ ।
ವಿವೇಶ ನನ್ದಸ್ಯ ಗೃಹಂ ಬೃಹದ್ವನಪ್ರಾನ್ತೇ ಹಿ ಮಾರ್ಗ್ಗೇ
ರಚಿತಂ ಪ್ರಯಾಣೇ ॥೧೨.೮೩॥
ತೀರೇ ಭಗಿನ್ಯಾಸ್ತು ಯಮಸ್ಯ ವಸ್ತ್ರಗೃಹೇ ಶಯಾನಂ ಪುರುಷೋತ್ತಮಂ
ತಮ್ ।
ಜಗ್ರಾಹ ಮಾತ್ರಾ ತು ಯಶೋದಯಾ ತಯಾ ನಿದ್ರಾಯುಜಾ
ಪ್ರೇಕ್ಷ್ಯಮಾಣಾ ಶುಭೇವ ॥೧೨.೮೪॥
ಆ ಪೂತನೆಯೆಂಬ ರಾಕ್ಷಸಿ
ತನ್ನ ನಿಜರೂಪವನ್ನು ಮುಚ್ಚಿ, ರಾತ್ರಿಯಲ್ಲಿ ಸುಂದರವಾದ ರೂಪವನ್ನು ಹೊಂದಿ, ನಂದಗೋಪನ ಮನೆಯನ್ನು ಪ್ರವೇಶಿಸಿದಳು.
ಆಕೆ ಬೃಹದ್ವನಪ್ರಾಂತ್ಯ ಹಾಗು ಮಧುರಾ ಪಟ್ಟಣದ ಮಧ್ಯದಲ್ಲಿ, ಪ್ರಯಾಣಿಸುವ ದಾರಿಯಲ್ಲಿ, ಯಮನ ತಂಗಿಯಾದ ಯಮುನಾನದಿಯ ತೀರದಲ್ಲಿ
ನಿರ್ಮಿಸಲ್ಪಟ್ಟ ಶಿಬಿರದಲ್ಲಿ(ವಸ್ತ್ರಗೃಹದಲ್ಲಿ) ಮಲಗಿರುವ, ಪುರುಷೋತ್ತಮನಾದ ಕೃಷ್ಣನನ್ನು ಕಂಡಳು. ಬಹಳ ನಿದ್ರೆಯಿಂದ ಕೂಡಿರುವ ಯಶೋದೆಯ ಮುಂದೆ ಬಹಳ
ಯೋಗ್ಯಳಂತೆ ತನ್ನನ್ನು ತೋರಿಸಿಕೊಂಡ ಪೂತನೆ, ಅವಳಿಂದ ಮಗುವನ್ನು(ಶ್ರೀಕೃಷ್ಣನನ್ನು) ತೆಗೆದುಕೊಂಡಳು.
ತನ್ಮಾಯಯಾ ಧರ್ಷಿತಾ ನಿದ್ರಯಾ ಚ ನ್ಯವಾರಯನ್ನೈವ ಹಿ ನನ್ದಜಾಯಾ ।
ತಯಾ ಪ್ರದತ್ತಂ ಸ್ತನಮೀಶಿತಾsಸುಭಿಃ ಪಪೌ ಸಹೈವಾsಶು ಜನಾರ್ದ್ದನಃ ಪ್ರಭುಃ ॥೧೨.೮೫॥
ಪೂತನೆಯ ಮಾಯೆಯಿಂದ
ಮೊಸಗೊಳಿಸಲ್ಪಟ್ಟು, ನಿದ್ರೆಯಿಂದ ಕೂಡಿದ ನಂದಗೋಪನ ಹೆಂಡತಿಯಾದ ಯಶೋದೆಯು ಆಕೆಯನ್ನು ತಡೆಯಲಿಲ್ಲ.
ಸರ್ವೋತ್ತಮನಾದ ಜನಾರ್ದನನು ಅವಳಿಂದ ಕೊಡಲ್ಪಟ್ಟ ಮೊಲೆಯನ್ನು ಅವಳ ಪ್ರಾಣದೊಂದಿಗೇ ಕುಡಿದುಬಿಟ್ಟ.
ಮೃತಾ ಸ್ವರೂಪೇಣ ಸುಭೀಷಣೇನ ಪಪಾತ ಸಾ ವ್ಯಾಪ್ಯ ವನಂ ಸಮಸ್ತಮ್
।
ತದಾssಗಮನ್ನನ್ದಗೋಪೋsಪಿ ತತ್ರ ದೃಷ್ಟ್ವಾ ಚ
ಸರ್ವೇsಪ್ಯಭವನ್ ಸುವಿಸ್ಮಿತಾಃ ॥೧೨.೮೬॥
ಆಗ ಅವಳು ಭಯಂಕರವಾದ
ಸ್ವರೂಪದಿಂದ ಕೂಡಿ, ಇಡೀ ಕಾಡನ್ನು ವ್ಯಾಪಿಸಿ ಸತ್ತು ಬಿದ್ದಳು. ಆಗಲೇ ನಂದಗೊಪನೂ ಕೂಡಾ ತನ್ನ
ಶಿಬಿರಕ್ಕೆ ಬಂದು ತಲುಪಿದನು. ಅಲ್ಲಿ ಸೇರಿದ ಎಲ್ಲರೂ ಪೂತನೆಯ ಭೀಕರವಾದ ರೂಪವನ್ನು ಕಂಡು
ಅಚ್ಚರಿಗೊಂಡರು.
ಸ ತಾಟಕಾ ಚೋರ್ವಶಿಸಮ್ಪ್ರವಿಷ್ಟಾ ಕೃಷ್ಣಾವದ್ಧ್ಯಾನಾನ್ನಿರಯಂ
ಜಗಾಮ ।
ಸಾ ತೂರ್ವಶೀ ಕೃಷ್ಣಭುಕ್ತಸ್ತನೇನ ಪೂತಾ ಸ್ವರ್ಗ್ಗಂ ಪ್ರಯಯೌ
ತತ್ಕ್ಷಣೇನ ॥೧೨.೮೭॥
ಊರ್ವಶಿಯಿಂದ ಆವಿಷ್ಠಳಾದ ಆ
ತಾಟಕೆಯು ಕೃಷ್ಣನ ತಿರಸ್ಕಾರದಿಂದ ತಮಸ್ಸನ್ನು ಸೇರಿದಳು. ಊರ್ವಶಿಯು ಕೃಷ್ಣ ಮೊಲೆಯನ್ನು
ಉಂಡದ್ದರಿಂದ ಪವಿತ್ರಳಾಗಿ ಆ ಕ್ಷಣದಲ್ಲಿಯೇ ಸ್ವರ್ಗವನ್ನು ಕುರಿತು ತೆರಳಿದಳು.
[ಭಾಗವತದಲ್ಲಿ(೧೦.೭.೩೬) ಹೇಳುವಂತೆ: ‘ಪೂತನಾ ಲೋಕಬಾಲಘ್ನೀ ರಾಕ್ಷಸೀ ರುಧಿರಾಶನಾ । ಜಿಘಾಮ್ಸಯಾsಪಿ ಹರಯೇ
ಸ್ತನಂ ದತ್ವಾssಪ ಸದ್ಗತಿಮ್’. ಪೂತನೆ ಒಬ್ಬ ರಾಕ್ಷಸಿ. ಜನರನ್ನು ಹಾಗು ಮಕ್ಕಳನ್ನು
ಕೊಲ್ಲುವುದು, ರಕ್ತ-ಮಾಂಸವನ್ನು ತಿನ್ನುವುದು ಅವಳ ಕೆಲಸವಾಗಿತ್ತು. ಕೊಲ್ಲುವ ಬಯಕೆಯಿಂದಲೇ ಆಕೆ ಕೃಷ್ಣನಿಗೆ ಮೊಲೆಯನ್ನು ಕೊಟ್ಟಿದ್ದರೂ, ಭಗವಂತನಿಗೆ ಮೊಲೆಯುಣಿಸಿದ್ದರಿಂದ ಸದ್ಗತಿಯನ್ನು ಹೊಂದಿದಳು! ‘ಯಾತುಧಾನ್ಯಪಿ ಸಾ ಸ್ವರ್ಗಮವಾಪ ಜನನೀಗತಿಮ್’
(೩೯) ‘ಯಾತುಧಾನಿಯೂ ಕೂಡಾ ಕೃಷ್ಣನ ತಾಯಿಗೆ ಸಿಗಬಹುದಾದ ಉತ್ತಮ ಗತಿಯನ್ನು ಹೊಂದಿದಳು!’. ಭಾಗವತದ ಈ ಮಾತು ಸ್ವಲ್ಪಗೊಂದಲವನ್ನುಂಟು ಮಾಡುತ್ತದೆ.
ಆದರೆ ಈ ಮೇಲಿನ ಮಾತುಗಳ ಎಲ್ಲಾ ಅರ್ಥವನ್ನು ಆಚಾರ್ಯರು ಮೇಲಿನ ಶ್ಲೋಕದಲ್ಲಿ ಸಂಗ್ರಹರೂಪದಲ್ಲಿ
ವ್ಯಾಖ್ಯಾನಿಸಿ, ನಿರ್ಣಯ ನೀಡಿ ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಪೂತನಾ ಅಂದರೆ ಪೂತನೆಯಲ್ಲಿ
ಆವಿಷ್ಠಳಾಗಿರುವ ಊರ್ವಶಿ ಎಂದರ್ಥ. ‘ಯಾತುಧಾನಿ’ ಎಂದರೆ ಪೂತನೆಯ ಸಹವರ್ತಮಾನ ಊರ್ವಶೀ ಎಂದರ್ಥ. ಒಟ್ಟಿನಲ್ಲಿ
ಹೇಳಬೇಕೆಂದರೆ: ರಾಮಾವತಾರದ ತಾಟಕೆಯೇ ಈ ಪೂತನ. ಪೂತನೆಯಲ್ಲಿ ವಿಶೇಷ ಏನೆಂದರೆ, ಆಕೆಯ ಶರೀರದಲ್ಲಿ
ಶಾಪಗ್ರಸ್ತವಾದ ಪುಣ್ಯಜೀವ ಊರ್ವಶಿ ಆವಿಷ್ಠಳಾಗಿದ್ದಳು. ಅಂದರೆ ಎರಡು ಜೀವ ಒಂದು ದೇಹ. ಶ್ರೀಕೃಷ್ಣನನ್ನು ಕೊಲ್ಲಬೇಕು ಎನ್ನುವ ಕೆಟ್ಟ ಉದ್ದೇಶ
ಹೊಂದಿದ ತಾಟಕೆ ನರಕವನ್ನು ಸೇರಿದರೆ, ಅದೇ ದೇಹದಲ್ಲಿದ್ದು ಭಕ್ತಿಯಿಂದ ಕೃಷ್ಣನಿಗೆ ಹಾಲನ್ನುಣಿಸಬೇಕು
ಎಂದು ಬಯಸಿದ ಊರ್ವಶಿಗೆ ಸ್ವರ್ಗ ಪ್ರಾಪ್ತಿಯಾಯಿತು.
ಇದನ್ನೇ
ಭಾಗವತದಲ್ಲಿ(೨.೯.೨೭) ‘ತೋಕೇನ ಜೀವಹರಣಂ ಯದುಲೂಪಿಕಾ...’ ಎಂದು ವರ್ಣಿಸಿದ್ದಾರೆ. ಇಲ್ಲಿ
ಪೂತನಿಯ ಸಂಹಾರವನ್ನು ವಿವರಿಸುವಾಗ ‘ಉಲೂಪಿಕಾ’ ಎನ್ನುವ ಪದ ಪ್ರಯೋಗ
ಮಾಡಲಾಗಿದೆ. (ಇತ್ತೀಚೆಗೆ ಮುದ್ರಣಗೊಂಡ ಹಲವು ಪುಸ್ತಕಗಳಲ್ಲಿ ಈ ಪದವನ್ನು ಪಕ್ಷಿ/ಗೂಬೆ ಎನ್ನುವ
ಅರ್ಥದಲ್ಲಿ ‘ಉಲೂಕಿಕಾ’ ಎಂದು ತಪ್ಪಾಗಿ
ಮುದ್ರಿಸಿರುವುದನ್ನು ಕಾಣುತ್ತೇವೆ. ಆದರೆ ಪ್ರಾಚೀನ ಪಾಠದಲ್ಲಿ ಆ ರೀತಿ ಪದ
ಪ್ರಯೋಗವಿರುವುದಿಲ್ಲ. ಉಲೂಪಿಕಾ
ಎನ್ನುವುದು ಅನೇಕ ಆಯಾಮಗಳಲ್ಲಿ ಅರ್ಥವನ್ನು
ಕೊಡುವ, ಭಾಗವತದ ಪ್ರಕ್ರಿಯೆಗೆ ಪೂರಕವಾದ ಪದಪ್ರಯೋಗ). ರ-ಲಯೋಃ ಅಭೇಧಃ ಎನ್ನುವಂತೆ ಇಲ್ಲಿ ಲೂಪ
ಎಂದರೆ ರೂಪ. ಹಾಗಾಗಿ ಉಲೂಪ ಎಂದರೆ ಉತ್ಕೃಷ್ಟವಾದ ರೂಪ ಎಂದರ್ಥ. ಪೂತನಿ ಕೃಷ್ಣನಿಗೆ ವಿಷದ
ಹಾಲನ್ನು ಉಣಿಸಿ ಸಾಯಿಸಬೇಕು ಎನ್ನುವ ಇಚ್ಛೆಯಿಂದ ಸುಂದರ ಸ್ತ್ರೀರೂಪ ತೊಟ್ಟು ಬಂದಿದ್ದಳು. ಅವಳು
ಉಲೂಪ. ಆದರೂ ಉಲೂಪಿಕ. ಏಕೆಂದರೆ ಸಂಸ್ಕೃತದಲ್ಲಿ ‘ಕನ್’ ಪ್ರತ್ಯಯವನ್ನು ನಿಂದನೀಯ
ಎನ್ನುವ ಅರ್ಥದಲ್ಲಿ ಬಳಕೆ ಮಾಡುತ್ತಾರೆ. ವಸ್ತುತಃ ಪೂತನಿ ಸುಂದರ ಸ್ತ್ರೀ ಅಲ್ಲ; ಅವಳು ರಾಕ್ಷಸೀ
ಎನ್ನುವುದನ್ನು ಉಲೂಪಿಕಾ ಪದ ವಿವರಿಸುತ್ತದೆ. ಇಷ್ಟೇ ಅಲ್ಲದೆ, ಇದೇ ಪದದಲ್ಲಿ ಇನ್ನೊಂದು ದೇವ
ಗುಹ್ಯ ಅಡಗಿದೆ. ಪೂತನಿಯ ಒಳಗೆ ರಾಕ್ಷಸೀ ಜೀವದ ಜೊತೆಗೆ ಇನ್ನೊಂದು ಶಾಪಗ್ರಸ್ತವಾದ ಪುಣ್ಯ ಜೀವ
ಕೂಡಾ ಶ್ರೀಕೃಷ್ಣನಿಗೆ ಹಾಲು ಉಣಿಸಿ ತನ್ನ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಕಾದು
ಕುಳಿತಿತ್ತು. ಆ ಜೀವ ಇನ್ನಾರೂ ಅಲ್ಲ. ಆಕೆ ಉತ್ಕೃಷ್ಟವಾದ ರೂಪವುಳ್ಳ ಊರ್ವಶಿ. ಹೀಗೆ ಎರಡು ಜೀವಗಳು ಒಂದೇ ದೇಹದಲ್ಲಿ ಸೇರಿಕೊಂಡು
ಕೃಷ್ಣನನ್ನು ಬಯಸುತ್ತಿದ್ದವು. ರಾಕ್ಷಸೀಜೀವ ಕೃಷ್ಣನಿಗೆ ವಿಷ ಉಣಿಸಿ ಸಾಯಿಸಬೇಕು ಎಂದು ಬಯಸಿದರೆ, ಪುಣ್ಯಜೀವಿ ಊರ್ವಶಿ
ಕೃಷ್ಣನಿಗೆ ತನ್ನ ಎದೆ ಹಾಲನ್ನು ಉಣಿಸಿ ತನ್ನ ಜನ್ಮ ಉದ್ಧಾರ ಮಾಡಿಕೊಳ್ಳಬೇಕು ಎನ್ನುವ
ತುಡಿತದಿಂದ ಕಾದು ಕುಳಿತಿದ್ದಳು. ಒಂದೇ ದೇಹ, ಒಂದೇ ಕ್ರಿಯೆ ಆದರೆ ಎರಡು
ಬಯಕೆ. ಇವೆಲ್ಲವನ್ನೂ ಇಲ್ಲಿ ಉಲೂಪಿಕ ಎನ್ನುವ ಏಕಪದ ಎರಡು ಆಯಾಮದಲ್ಲಿ ವಿವರಿಸುತ್ತದೆ. ಇದು
ಸಂಸ್ಕೃತ ಭಾಷೆಯ ಸೊಬಗು. ವಿಷದ ಹಾಲು ಕುಡಿಸಿ ಸಾಯಿಸಬೇಕು ಎಂದು ಬಂದ ಪೂತನಿಯ ಪ್ರಾಣ ಹರಣ ಮಾಡಿದ
ಶ್ರೀಕೃಷ್ಣ, ಉತ್ಕೃಷ್ಟವಾದ ರೂಪವಿರುವ ಪುಣ್ಯಜೀವಿ ಊರ್ವಶಿಯನ್ನು
ಶಾಪಮುಕ್ತಗೊಳಿಸಿ ಉದ್ಧಾರ ಮಾಡಿದ. ಈ ರೀತಿ
ಶ್ರೀಕೃಷ್ಣ ಧರ್ಮ ಸಂಸ್ಥಾಪನೆಯ ಕಾರ್ಯ ಪ್ರಾರಂಭ ಮಾಡಿರುವುದೇ ದುಷ್ಟ ಪೂತನಿಯ ಜೀವ ಹರಣದೊಂದಿಗೆ].
ಸಾ ತುಮ್ಬುರೋಃ ಸಙ್ಗತ ಆವಿವೇಶ ರಕ್ಷಸ್ತನುಂ ಶಾಪತೋ
ವಿತ್ತಪಸ್ಯ ।
ಕೃಷ್ಣಸ್ಪರ್ಶಾಚ್ಛುದ್ಧರೂಪಾ ಪುನರ್ದ್ದಿವಂ ಯಯೌ ತುಷ್ಟೇ
ಕಿಮಲಭ್ಯಂ ರಮೇಶೇ ॥೧೨.೮೮॥
ಊರ್ವಶಿಯು ತುಮ್ಬುರು
ಎನ್ನುವ ಗಂಧರ್ವನ ಸಂಗಮವನ್ನು ಹೊಂದಲು, ಕುಬೇರನ ಶಾಪಕ್ಕೊಳಗಾಗಿ ರಾಕ್ಷಸಿ ಶರೀರವನ್ನು ಪ್ರವೇಶಿಸುವಂತಾಯಿತು. ಅವಳು ಶ್ರೀಕೃಷ್ಣನ ಸ್ಪರ್ಶದಿಂದ ಶುದ್ಧವಾದ
ಸ್ವರೂಪವುಳ್ಳವಳಾಗಿ ಸ್ವರ್ಗಕ್ಕೆ ತೆರಳಿದಳು. ರಮಾಪತಿ ಭಗವಂತ ಸಂತುಷ್ಟನಾದರೆ ಏನು ತಾನೇ ಅಸಾಧ್ಯ?
No comments:
Post a Comment