ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, April 18, 2019

Mahabharata Tatparya Nirnaya Kannada 12.73-12.75


ಶ್ರುತ್ವಾ ತಯೋಕ್ತಂ ತು ತದೈವ ಕಂಸಃ ಪಶ್ಚಾತ್ತಾಪಾದ್ ವಸುದೇವಂ ಸಭಾರ್ಯ್ಯಮ್
ಪ್ರಸಾದಯಾಮಾಸ ಪುನಃಪುನಶ್ಚ ವಿಹಾಯ ಕೋಪಂ ಚ ತಮೂಚತುಸ್ತೌ ।
ಸುಖಸ್ಯ ದುಃಖಸ್ಯ ಚ ರಾಜಸಿಂಹ ನಾನ್ಯಃ ಕರ್ತ್ತಾ ವಾಸುದೇವಾದಿತಿ ಸ್ಮ ॥೧೨.೭೩॥    

ದುರ್ಗೆ ಹೇಳಿದ ಮಾತನ್ನು ಕೇಳಿದ ಕಂಸನು ‘ನಾನು  ತಪ್ಪು ಮಾಡಿಬಿಟ್ಟೆ’ ಎಂಬ ಪಶ್ಚಾತ್ತಾಪದಿಂದ,  ವಸುದೇವ-ದೇವಕಿಯನ್ನು ಮತ್ತೆ-ಮತ್ತೆ ಸಾಂತ್ವಾನಗೊಳಿಸುತ್ತಾನೆ. ಅವರೂ ಕೂಡಾ ಅವನ ಮೇಲಿನ ಕೋಪವನ್ನು  ಬಿಟ್ಟು, “ರಾಜಶ್ರೇಷ್ಠನೇ, ಸುಖಕ್ಕೂ ದುಃಖಕ್ಕೂ ಕೂಡಾ ಕಾರಣನಾದವನು ನಾರಾಯಣನೇ ಹೊರತು ಬೇರೆ  ಅಲ್ಲಾ” ಎನ್ನುವ ತಿಳುವಳಿಕೆಯ ಮಾತನ್ನಾಡುತ್ತಾರೆ.

ಆನೀಯ ಕಂಸೋsಥ ಗೃಹೇ ಸ್ವಮನ್ತ್ರಿಣಃ ಪ್ರೋವಾಚ ಕನ್ಯಾವಚನಂ ಸಮಸ್ತಮ್ ।
ಶ್ರುತ್ವಾ ಚ ತೇ ಪ್ರೋಚುರತ್ಯನ್ತಪಾಪಾಃ ಕಾರ್ಯ್ಯಂ ಬಾಲಾನಾಂ ನಿಧನಂ ಸರ್ವಶೋsಪಿ॥೧೨.೭೪    

ಅನಂತರ ಕಂಸನು ತನ್ನ ಮನೆಯಲ್ಲಿ ಮಂತ್ರಿಗಳನ್ನು ಕರೆಸಿ, ಆ ಕನ್ನಿಕೆ  ಹೇಳಿದ ಎಲ್ಲಾ ಮಾತುಗಳನ್ನೂ ಕೂಡಾ ಅವರಿಗೆ ಹೇಳುತ್ತಾನೆ. ಅತ್ಯಂತ ಪಾಪಿಷ್ಠರಾದ ಆ ಮಂತ್ರಿಗಳು ಕಂಸನ ಮಾತನ್ನು ಕೇಳಿ, ‘ಎಲ್ಲಾ ಕಡೆಯಲ್ಲಿರುವ ಬಾಲಕರ ಸಂಹಾರ ಮಾಡಲ್ಪಡಬೇಕು’ ಎನ್ನುವ ಸಲಹೆ ನೀಡುತ್ತಾರೆ.

ತಥೇತಿ ತಾಂಸ್ತತ್ರ ನಿಯುಜ್ಯ ಕಂಸೋ ಗೃಹಂ ಸ್ವಕೀಯಂ ಪ್ರವಿವೇಶ ಪಾಪಃ ।
ಚೇರುಶ್ಚ ತೇ ಬಾಲವಧೇ ಸದೋಧ್ಯತಾ ಹಿಂಸಾವಿಹಾರಾಃ ಸತತಂ ಸ್ವಭಾವತಃ ೧೨.೭೫

ಪಾಪಿಷ್ಠನಾದ ಕಂಸನು ‘ಹಾಗೆಯೇ ಆಗಲಿ’ ಎಂದು ಹೇಳಿ, ಮಂತ್ರಿಗಳನ್ನು ಬಾಲಕರ ಸಂಹಾರಕ್ಕೆ ನೇಮಿಸಿ, ತನ್ನ ಒಳಮನೆಯನ್ನು ಪ್ರವೇಶ ಮಾಡಿದನು. ಸ್ವಾಭಾವಿಕವಾಗಿ (ಸ್ವಭಾವದಿಂದಲೇ) ನಿರಂತರ  ಹಿಂಸೆಯೇ ಕ್ರೀಡೆಯಾಗಿ ಹೊಂದಿರುವ ಅವನ ಮಂತ್ರಿಗಳು ಬಾಲಕರ ವದದಲ್ಲಿ ಸದಾ ಉತ್ಸಾಹದಿಂದ ಕೂಡಿದವರಾಗಿ ತಿರುಗಾಡಿದರು.

[ಕಂಸ ತನ್ನ ಮಂತ್ರಿಗಳಿಗೆ ಎಲ್ಲಾ ಬಾಲಕರನ್ನೂ ಕೊಲ್ಲುವುದಕ್ಕೆ ಆಜ್ಞೆ ನೀಡಿದನೇ ಎನ್ನುವ ಪ್ರಶ್ನೆಗೆ  ಬ್ರಹ್ಮಾಂಡಪುರಾಣದಲ್ಲಿ(೧೮೩.೭) ಉತ್ತರವನ್ನು ಕಾಣಬಹುದು.  ಯತ್ರೋದ್ರಿಕ್ತಂ ಬಲಂ ಬಾಲೇ ಸ ಹಂತವ್ಯಃ ಪ್ರಯತ್ನತಃ’.  ‘ಎಲ್ಲಿ ಹೆಚ್ಚಿನ ಬಲವಿದೆಯೋ ಅಲ್ಲಿ ಪ್ರಯತ್ನಪಟ್ಟು ಕೊಲ್ಲಬೇಕು’  ಎನ್ನವ ಆಜ್ಞೆಯನ್ನು ಕಂಸ ನೀಡಿದನು. (ಆದರೆ ಆತನ ದುಷ್ಟಮಂತ್ರಿಗಳು ತಮಗಿಷ್ಟಬಂದಂತೆ ಬಾಲಕರ ಸಂಹಾರ ಮಾಡಿದರು)]

No comments:

Post a Comment