ಗರ್ಭಂ ದೇವಕ್ಯಾಃ ಸಪ್ತಮಂ ಮೇನಿರೇ ಹಿ ಲೋಕಾಃ ಸೃತಂ ತ್ವಷ್ಟಮಂ
ತಾಂ ತತಃ ಸಃ ।
ಮತ್ವಾ ಹನ್ತುಂ ಪಾದಯೋಃ ಸಮ್ಪ್ರಗೃಹ್ಯ ಸಮ್ಪೋಥಯಾಮಾಸ ಶಿಲಾತಳೇ
ಚ ॥೧೨.೬೯॥
ಸಾ ತದ್ಧಸ್ತಾತ್ ಕ್ಷಿಪ್ರಮುತ್ಪತ್ಯ ದೇವೀ ಖೇsದೃಶ್ಯತೈವಾಷ್ಟಭುಜಾ
ಸಮಗ್ರಾ ।
ಬ್ರಹ್ಮಾದಿಭಿಃ ಪೂಜ್ಯಮಾನಾ ಸಮಗ್ರೈರತ್ಯದ್ಭುಥಾಕಾರವತೀ
ಹರಿಪ್ರಿಯಾ ॥೧೨.೭೦॥
ಕಂಸನೂ ಸೇರಿದಂತೆ ಎಲ್ಲರೂ ದೇವಕಿಯ
ಏಳನೇ ಮಗುವು ಗರ್ಭಸ್ತ್ರಾವಕ್ಕೆ ಒಳಗಾಗಿ ಸತ್ತಿದೆ ಎಂದು ತಿಳಿದಿದ್ದರು. ಆ ಕಾರಣದಿಂದ ಕಂಸನು
ದುರ್ಗೆಯನ್ನೇ ಎಂಟನೇ ಮಗು ಎಂದು ತಿಳಿದು ಕೊಲ್ಲುವುದಕ್ಕಾಗಿ, ಮಗುವನ್ನು ತನ್ನ ಕಾಲಿನಿಂದ ಹಿಡಿದು ಬಂಡೆಗಲ್ಲಿಗೆ ಚಚ್ಚಲೆಂದು ಹೋದನು.
ಆದರೆ ದುರ್ಗೆಯು ಆತನ
ಹಿಡಿತದಿಂದ ಬಿಡಿಸಿಕೊಂಡು ತಕ್ಷಣ ಮೇಲಕ್ಕೆರಗಿ, ಆಕಾಶದಲ್ಲಿ ಎಂಟು ತೋಳ್ಗಳುಳ್ಳ ದೇವಿಯಾಗಿ ಕಂಡಳು.
ಬ್ರಹ್ಮಾದಿ ಸಮಗ್ರ ದೇವತೆಗಳಿಂದ ಪೂಜಿಸಲ್ಪಡತಕ್ಕ ಹರಿಪ್ರಿಯಳು ಅತ್ಯದ್ಭುತಾಕಾರವುಳ್ಳವಳಾಗಿ ಆಕಾಶದಲ್ಲಿ
ಕಾಣಿಸಿಕೊಂಡಳು.
[ಹೀಗೆ ಆಕಾಶದಲ್ಲಿ ಅಷ್ಟ
ತೋಳ್ಗಳುಳ್ಳವಳಾಗಿ ಪ್ರಕಟಗೊಂಡ ದುರ್ಗೆಯ ವರ್ಣನೆಯನ್ನು ಭಾಗವತದಲ್ಲಿ(೧೦.೫.೧೧) ಕಾಣುತ್ತೇವೆ: ದಿವ್ಯಸ್ರಗಂಬರಾಲೇಪರತ್ನಾಭರಣಭೂಷಿತಾ
। ಧನುಃಶೂಲೇಷುಚರ್ಮಾಸಿಶಙ್ಖಚಕ್ರಗದಾಧರಾ
। ಸಿದ್ಧಚಾರಣಗಂಧರ್ವೈರಪ್ಸರಃಕಿನ್ನರೋರಗೈಃ
। ಉಪಾಹೃತೋರುಬಲಿಭಿಃ ಸ್ತೂಯಮಾನೇದಮಬ್ರವೀತ್]
ಉವಾಚ ಚಾSರ್ಯ್ಯಾ ತವ ಮೃತ್ಯುರತ್ರ
ಕ್ವಚಿತ್ ಪ್ರಜಾತೋ ಹಿ ವೃಥೈವ ಪಾಪ ।
ಅನಾಗಸೀಂ ಮಾಂ ವಿನಿಹನ್ತುಮಿಚ್ಛಸ್ಯಶಕ್ಯಕಾರ್ಯ್ಯೇ ತವ ಚೋಧ್ಯಮೋSಯಮ್ ॥೧೨.೭೧॥
ಆಕಾಶದಲ್ಲಿ ದಿವ್ಯರೂಪದಿಂದ
ಕಾಣಿಸಿಕೊಂಡ ದುರ್ಗಾದೇವಿಯು ಕಂಸನನ್ನು ಕುರಿತು ಹೇಳಿದಳೂ ಕೂಡಾ: ‘ನಿನ್ನ ಮೃತ್ಯುವು
ಇನ್ನೆಲ್ಲಿಯೋ ಹುಟ್ಟಿದ್ದಾನೆ. ಪಾಪಿಷ್ಠನೇ, ಸುಮ್ಮನೇ ಯಾವುದೇ ತಪ್ಪುಮಾಡಿಲ್ಲದ ನನ್ನನ್ನು
ಕೊಲ್ಲಲು ಬಯಸುತ್ತಿದ್ದೀಯೇ. ಶಕ್ಯವಿಲ್ಲದ ಕಾರ್ಯದಲ್ಲಿ ನಿನ್ನ ಈ ಕೆಲಸವೂ ವ್ಯರ್ಥವಾಗಿದೆ’.
ಉಕ್ತ್ವೇತಿ
ಕಂಸಂ ಪುನರೇವ ದೇವಕೀತಲ್ಪೇsಶಯದ್ ಬಾಲರೂಪೈವ ದುರ್ಗ್ಗಾ ।
ನಾಜ್ಞಾಸಿಷುಸ್ತಾಮಥ ಕೇಚನಾತ್ರ ಋತೇ ಹಿ ಮಾತಾಪಿತರೌ
ಗುಣಾಢ್ಯಾಮ್ ॥೧೨.೭೨॥
ಈರೀತಿಯಾಗಿ ಕಂಸನನ್ನು
ಕುರಿತು ಮಾತನಾಡಿದ, ಗುಣಗಳಿಂದ ತುಂಬಿದ ದುರ್ಗೆಯು,
ಮತ್ತೆ ಬಾಲರೂಪವನ್ನು ಧರಿಸಿ ದೇವಕಿಯ
ಮಂಚದಲ್ಲಿಯೇ ಬಂದು ಮಲಗಿದಳು. ಅವಳನ್ನು ತಂದೆ-ತಾಯಿಗಳ ಹೊರತುಪಡಿಸಿ, ಇನ್ಯಾರೂ ತಿಳಿಯಲಿಲ್ಲ(ಮಗು
ಇನ್ಯಾರಿಗೂ ಕಾಣಿಸುತ್ತಿರಲಿಲ್ಲ).
[ಈ ಮಗುವನ್ನು ಮುಂದೆ
ರೋಹಿಣಿ ತನ್ನ ಮಗುವಂತೇ ಬೆಳೆಸುತ್ತಾಳೆ. ಈ ವಿಷಯ ಅತ್ಯಂತ ರಹಸ್ಯವಾಗಿಯೇ ಉಳಿಯುತ್ತದೆ.
ವೇದವ್ಯಾಸರೂ ಕೂಡಾ ಈ ವಿಷಯವನ್ನು ರಹಸ್ಯವಾಗಿಯೇ ವಿವರಿಸಿರುವುದನ್ನು ನಾವು ಕಾಣುತ್ತೇವೆ.
ಹಾಗಾಗಿ ಒಂದೇ ಗ್ರಂಥದಲ್ಲಿ ನಮಗೆ ಇದರ ಸ್ಪಷ್ಟವಿವರ ಕಾಣಸಿಗುವುದಿಲ್ಲ. ಆದರೆ ಬೇರೆಬೇರೆ
ಗ್ರಂಥಗಳಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ. ಎಲ್ಲವನ್ನೂ ಕೂಡಿಸಿ ನೋಡಿದಾಗ ವಿಷಯ
ಸ್ಪಷ್ಟವಾಗುತ್ತದೆ.
ಆಚಾರ್ಯರು ಮೇಲಿನ
ಶ್ಲೋಕದಲ್ಲಿ ನೀಡಿರುವ ನಿರ್ಣಯಕ್ಕೆ ಸಂಬಂಧಿಸಿದ ಪ್ರಮಾಣ ನಮಗೆ ಹರಿವಂಶದ
ವಿಷ್ಣುಪರ್ವದಲ್ಲಿ(೪.೪೬.೭) ಕಾಣಸಿಗುತ್ತದೆ. ‘ಸಾ ಕನ್ಯಾ ವವೃಧೇ ತತ್ರ ವೃಷ್ಣೀಸಙ್ಫಸುಪೂಜಿತಾ । ಪುತ್ರವತ್ ಪಾಲ್ಯಮಾನಾ
ಸಾ ವಸುದೇವಾಜ್ಞಯಾ ತದಾ । ವಿದ್ಧಿ ಚೈನಾಮಥೋತ್ಪನ್ನಾಮಂಶಾದ್ ದೇವಿಂ ಪ್ರಜಾಪತೇಃ । ಏಕಾನಙ್ಗಾಂ
ಯೋಗಕನ್ಯಾಂ ರಕ್ಷಾರ್ಥಂ ಕೇಶವಸ್ಯ ತು’.
ಸೃಷ್ಟಿಕರ್ತ(ಜಗತ್ಪಿತ) ಭಗವಂತನ ಮಡದಿಯಾದ ಜಗನ್ಮಾತೆ ಶ್ರೀಲಕ್ಷ್ಮಿಯ ದುರ್ಗಾರೂಪದ
ಅವತಾರವಾದ ಈ ಕನ್ನಿಕೆ ಮುಂದೆ ವೃಷ್ಣೀ ವಂಶದ ಜನರ ನಡುವೆಯೇ ಬೆಳೆಯುತ್ತಾಳೆ. ವಸುದೇವನ
ಆಜ್ಞೆಯಂತೆ ರೋಹಿಣಿ ಆಕೆಯನ್ನು ತನ್ನ ಮಗುವಂತೆ ಬೆಳೆಸುತ್ತಾಳೆ. ಇವಳಿಗೆ ಏಕಾನಙ್ಗಾ ಎಂದು
ಹೆಸರು.
‘ಏಕಾನಙ್ಗೇತಿ ಯಾಮಾಹುರ್ನರಾ ವೈ ಕಾಮಾರೂಪಿಣೀಂ । ತಥಾ ಕ್ಷಣಮುಹೂರ್ತಾಭ್ಯಾಂ
ಯಯಾ ಜಜ್ಞೇ ಸಹೇಶ್ವರಃ । ಯತ್ಕೃತೇ ಸಗಣಂ ಕಂಸಂ
ಜಘಾನ ಪುರುಷೋತ್ತಮಃ । ಸಾ ಕನ್ಯಾ ವವೃಧೇ ತತ್ರ ವೃಷ್ಣಿಸದ್ಮನಿ ಪೂಜಿತಾ । ಪುತ್ರವತ್ ಪಾಲ್ಯಮಾನಂ ವೈ
ವಸುದೇವಾಜ್ಞಯಾ ತದಾ । ಏಕಾನಙ್ಗೇತಿ
ಯಾಮಾಹುರುತ್ಪನ್ನಾಂ ಮಾನವಾ ಭುವಿ । ಯೋಗಕನ್ಯಾಂ ದುರಾಧರ್ಷಾಂ ರಕ್ಷಾರ್ಥಂ ಕೇಶವಸ್ಯ ಹ । ಯಾಂ ವೈ ಸರ್ವೇ
ಸುಮನಸಃ ಪೂಜಯಂತಿ ಸ್ಮ ಯಾದವಾಃ । ದೇವವತ್ ದಿವ್ಯವಪುಷಾ ಕೃಷ್ಣಾಃ ಸಂರಕ್ಷಿತೋ ಯಯಾ’ (ಹರಿವಂಶ, ವಿಷ್ಣು ಪರ್ವ ೧೦೧.೧೧-೧೫).
ಅವಳು ಕೃಷ್ಣ ಹುಟ್ಟಿದ ಒಂದು ಕ್ಷಣ ಹಾಗು ಮಹೂರ್ತದ ನಂತರ ಹುಟ್ಟಿದವಳು. (ಹೀಗಾಗಿ ಕೃಷ್ಣಜಯಂತಿ ದಿನದಂದು ದುರ್ಗಾ
ಜಯಂತಿ ಕೂಡಾ ಹೌದು!). ಹೀಗೆ ಅವತರಿಸಿದ ದುರ್ಗೆ ವೃಷ್ಣೀ
ವಂಶದಲ್ಲಿ ಆರಾಧಿತಳಾಗಿ ಬೆಳೆದಳು. ಈಕೆ
ಸಾಕ್ಷಾತ್ ಲಕ್ಷ್ಮೀ ಎನ್ನುವ ಅರಿವಿದ್ದ ಜನರು
ಅವಳನ್ನು ಆರಾಧನೆ ಮಾಡಿ ಬೆಳೆಸಿದರು.
‘ದದೃಶುಸ್ತಾಂ
ಪ್ರಿಯಾಂ ಮಧ್ಯೇ ಭಗಿನೀಂ ರಾಮಕೃಷ್ಣಯೋಃ । ರುಗ್ಮಪದ್ಮವ್ಯಗ್ರಕರಾಂ
ಶ್ರಿಯಂ ಪದ್ಮಾಲಯಾಮಿವ’(೧೮). ರಾಮ ಹಾಗು ಕೃಷ್ಣರ ಮದ್ಯದಲ್ಲೇ, ಅವರ
ತಂಗಿಯಂತೆ ಇವಳೂ ಕೂಡಾ ಬೆಳೆದದ್ದನ್ನು ಜನರು ನೋಡಿದರು. ಆಕೆ ಸಾಕ್ಷಾತ್ ಲಕ್ಷ್ಮೀ ಎನ್ನುವ ಅರಿವೂ
ಸಜ್ಜನರಿಗಿತ್ತು.
ಮಹಾಭಾರತದಲ್ಲೂ(ಸಭಾಪರ್ವ: ೫೯.೮-೯)
ಕೂಡಾ ಈ ಕುರಿತಾದ ವಿವರ ಕಾಣಸಿಗುತ್ತದೆ: ‘ತತಃ
ಪ್ರಾಪ್ತಾ ಯಶೋದಾಯಾ ದುಹಿತಾ ವೈ ಕ್ಷಣೇನ ಹಿ । ಜಾಜ್ವಲ್ಯಮಾನಾ ವಪುಷಾ ಪ್ರಭಯಾsತೀವ ಭಾರತ । ಏಕಾನಙ್ಗೇತಿ ಯಾಮಾಹುಃ
ಕನ್ಯಾಂ ವೈ ಕಾಮರೂಪಿಣೀಮ್’. ‘ಈಕೆಯನ್ನು ಏಕಾನಙ್ಗಾ ಎಂದು ಕರೆಯುತ್ತಿದ್ದರು. ಯಶೋದೆಯಲ್ಲಿ ಹುಟ್ಟಿದ ಈಕೆ,
ಹುಟ್ಟಿದಾಗ ಬೆಳಕಿನ ಮೊತ್ತವೇ ಮಗುವಾಗಿ ಬಂದಿದೆ ಎನ್ನುವನ್ತಿದ್ದಳು’ ಎಂದಿದೆ ಭಾರತ.
ಇನ್ನು ಬ್ರಹ್ಮವೈವರ್ತ ಪುರಾಣದಲ್ಲೂ(೮.೫೧)
ಕೂಡಾ ಈ ಕುರಿತಾದ ವಿವರ ಕಾಣಸಿಗುತ್ತದೆ: ‘ವಸುದೇವೋ
ದೇವಕೀ ಚ ತಾಮಾದಾಯ ಮುದಾsನ್ವಿತೌ । ಜಗ್ಮತುಃ ಸ್ವಗೃಹಂ ಚೈವ ಕನ್ಯಾಂ ಕೃತ್ವಾ ಸ್ವವಕ್ಷಸಿ । ಮೃತಾಮಿವಪುನಃ ಪ್ರಾಪ್ಯ
ಬ್ರಾಹ್ಮಣೇಭ್ಯೋ ದದೌ ಧನಮ್ । ಸಾ ಪರಾ ಭಗಿನೀ ವಿಪ್ರ ಕೃಷ್ಣಸ್ಯ ಪರಮಾತ್ಮನಃ । ಏಕಾನಙ್ಗೇತಿ ವಿಖ್ಯಾತಾ ಪಾರ್ವತ್ಯಂಶಸಮುದ್ಭವಾ । ವಸುಸ್ತಂ ದ್ವಾರಕಾಯಾಂ ತು ರುಗ್ಮಿಣ್ಯುದ್ವಾಹಕರ್ಮಣಿ । ದದೌ ದುರ್ವಾಸಸೇ ಭಕ್ತ್ಯಾ
ಶಙ್ಕರಾಂಶಾಯ ಭಕ್ತಿತಃ’.
ಸಾಮಾನ್ಯವಾಗಿ ಲೋಕದದೃಷ್ಟಿಯಲ್ಲಿ
ದುರ್ಗೆ ಎಂದರೆ ಪಾರ್ವತಿ. ಆದರೆ ಪಾರ್ವತಿಯ ಅಂತರ್ಯಾಮಿಯಾಗಿ ಕೇಶವನ ಪತ್ನಿಯಾದ ದುರ್ಗೆ[1]
ಇರುವುದರಿಂದಲೇ ಆಕೆಗೂ ಕೂಡಾ ದುರ್ಗಾ ಎನ್ನುವ ಹೆಸರು ಬಂದಿದೆ. ಮೇಲಿನ ಶ್ಲೋಕದಲ್ಲಿ ‘ಪಾರ್ವತಿ’
ಎಂದರೆ ಪಾರ್ವತಿ ಅಂತರ್ಗತ ತಮೋಭಿಮಾನಿನಿಯಾದ ಶ್ರಿದುರ್ಗೆ ಎಂದೇ ತೆಗೆದುಕೊಳ್ಳಬೇಕು. ಈ ರೀತಿ
ಭಕ್ತಿಯಿಂದ ಕೊಡಲ್ಪಟ್ಟ ಪಾರ್ವತಿಯ ಅಂತರ್ಯಾಮಿಯಾದ ದುರ್ಗೆಯ ರೂಪವಾದ ಏಕಾನಙ್ಗಾಳನ್ನು ದುರ್ವಾಸರು ಭಕ್ತಿಯಿಂದ ಪೂಜಿಸಿದರು ಎನ್ನುತ್ತದೆ ಪುರಾಣ.
ಒಟ್ಟಿನಲ್ಲಿ
ಹೇಳಬೇಕೆಂದರೆ: ಅಷ್ಟ ತೊಳುಗಳುಳ್ಳವಳಾಗಿ ಆಕಾಶದಲ್ಲಿ ಕಾಣಿಸಿಕೊಂಡ ದುರ್ಗಾರೂಪಿ ಶ್ರೀಲಕ್ಷ್ಮಿ,
ಮತ್ತೆ ಮಗುವಿನ ರೂಪದಲ್ಲಿ ದೇವಕಿಯ ಪಕ್ಕದಲ್ಲೇ ಬಂದು ಮಲಗಿದಳು. ಜಗತ್ತಿನ ಕಣ್ಣಿಗೆ ಅದೃಶ್ಯಳಾಗಿ
ಕೇವಲ ಮಾತಾ-ಪಿತೃಗಳಿಗೆ ಮತ್ತು ಶ್ರೀಕೃಷ್ಣನ ಪ್ರೀತಿಗೆ ಪಾತ್ರರಾದವರಿಗೆ ಮಾತ್ರ ಕಾಣಿಸುತ್ತಿದ್ದಳು.
‘ಏಕಾನಙ್ಗಾ’ ಎನ್ನುವ ಹೆಸರಿನಿಂದ ಜಗತ್ಪ್ರಸಿದ್ಧಳಾಗಿದ್ದಳು. ದುರ್ವಾಸರೂ ಸೇರಿದಂತೆ, ಯಾದವರು,
ದೇವತೆಗಳು ಈಕೆ ಸಾಕ್ಷಾತ್ ಲಕ್ಷ್ಮೀ ಎಂದು ತಿಳಿದು ಆರಾಧನೆ ಮಾಡಿದರು. ಏಕಾನಙ್ಗಾ ರಾಮ-ಕೃಷ್ಣರ
ಜೊತೆ ತಂಗಿಯಂತೆ ಓಡಾಡಿಕೊಂಡಿದ್ದಳು. ಹುಟ್ಟಿದಾಗ ಈಕೆಗೆ ಕಂಸ ಅವಿಧೇಯತೆಯನ್ನು ತೋರಿಸಿದ ಎನ್ನುವ
ಮುಖ್ಯವಾದ ಕಾರಣದಿಂದ ಕಂಸನನ್ನು ಭಗವಂತ ಸಂಹಾರ
ಮಾಡಿದ].
[1] ಶ್ರೀ-ಭೂ-ದುರ್ಗಾ ಇವು ಮಹಾಲಕ್ಷ್ಮೀಯ
ಮೂರು ಆವೇಶ ರೂಪಗಳು. ಈ ಮೂರು ರೂಪಗಳು ಕ್ರಮವಾಗಿ
ಸತ್ವ-ರಜಸ್ಸು ಹಾಗು ತಮೋಗುಣಗಳ ಅಭಿಮಾನಿ ರೂಪಗಳಾಗಿವೆ.
No comments:
Post a Comment