ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, April 13, 2019

Mahabharata Tatparya Nirnaya Kannada 12.59-12.63

ಸ ನಾಮತೋ ಬಲದೇವೋ ಬಲಾಢ್ಯೋ ಬಭೂವ ತಸ್ಯಾನು ಜನಾರ್ದ್ದನಃ ಪ್ರಭುಃ
ಆವಿರ್ಬಭೂವಾಖಿಲಸದ್ಗುಣೈಕಪೂರ್ಣ್ಣಃ ಸುತಾಯಾಮಿಹ ದೇವಕಸ್ಯ ॥೧೨.೫೯

ಹಾಗೆ ಹುಟ್ಟಿದ ಶೇಷನು ಬಲಾಢ್ಯನಾಗಿ ‘ಬಲದೇವ’ ಎನ್ನುವ ಹೆಸರಿನವನಾದನು. ಬಲದೇವನ ನಂತರ,  ಸರ್ವಸಮರ್ಥನಾದ, ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ನಾರಾಯಣನು ದೇವಕನ ಮಗಳಾದ ದೇವಕಿಯ ಗರ್ಭದಲ್ಲಿ ಆವಿರ್ಭಿವಿಸಿದನು.    

ಯಃ ಸತ್ಸುಖಜ್ಞಾನಬಲೈಕದೇಹಃ ಸಮಸ್ತದೋಷಸ್ಪರ್ಶೋಜ್ಝಿತಃ ಸದಾ ।
ಅವ್ಯಕ್ತತತ್ಕಾರ್ಯ್ಯಮಯೋ ನ ಯಸ್ಯ ದೇಹಃ ಕುತಶ್ಚಿತ್ ಕ್ವಚ ಸ ಹ್ಯಜೋ ಹರಿಃ ॥೧೨.೬೦     

ಯಾರು ಜ್ಞಾನ-ಬಲಗಳೇ ಮೈವೆತ್ತು ಬಂದವನೋ, ಯಾರು ಎಲ್ಲಾ ದೋಷಗಳ ಸ್ಪರ್ಶದಿಂದ ರಹಿತನೋ, ಯಾರ ದೇಹವು ಜಡ ಅಥವಾ ಜಡದ ಕಾರ್ಯವಾಗಿರುವ ಪದಾರ್ಥದಿಂದ ಹುಟ್ಟಿಲ್ಲವೋ, ಯಾರು ಯಾರಿಂದಲೂ ಕೂಡಾ ಹುಟ್ಟಿಲ್ಲವೋ, ಅಂತಹ ನಾರಾಯಣನು ಪ್ರಾಕೃತವಾಗಿ ಹುಟ್ಟುವುದಿಲ್ಲವಷ್ಟೇ.

ನ ಶುಕ್ಲರಕ್ತಪ್ರಭವೋsಸ್ಯ ಕಾಯಸ್ತಥಾsಪಿ ತತ್ಪುತ್ರತಯೋಚ್ಯತೇ ಮೃಷಾ ।
ಜನಸ್ಯ ಮೋಹಾಯ ಶರೀರತೋsಸ್ಯಾ ಯದಾವಿರಾಸೀದಮಲಸ್ವರೂಪಃ ॥೧೨.೬೧

ಈ ನಾರಾಯಣನ ಶರೀರವು ರೇತಸ್ಸು ಹಾಗು ರಕ್ತದ ಸಂಪರ್ಕದಿಂದ ಉಂಟಾದುದ್ದಲ್ಲ. ಆದರೂ, ಆತ ದುರ್ಜನರ ಮೋಹಕ್ಕಾಗಿ ತಂದೆ-ತಾಯಿಯಿಂದ ಹುಟ್ಟಿದವನಂತೆ ತೋರುತ್ತಾನೆ.  ಅಮಲಸ್ವರೂಪನಾಗಿ  ಆವಿರ್ಭವಿಸಿದರೂ, ದೇವಕೀ ಪುತ್ರ ಎಂಬುದಾಗಿ ಸುಮ್ಮನೆ ಹೇಳಲ್ಪಡುತ್ತಾನೆ.

ಆವಿಶ್ಯ ಪೂರ್ವಂ ವಸುದೇವಮೇವ ವಿವೇಶ ತಸ್ಮಾದೃತುಕಾಲ ಏವ ।
ದೇವೀಮುವಾಸಾತ್ರ ಚ ಸಪ್ತ ಮಾಸಾನ್  ಸಾರ್ದ್ಧಾಂಸ್ತತಶ್ಚಾsವಿರಭೂದಜೋsಪಿ ॥೧೨.೬೨

ಮೊದಲು ವಸುದೇವನನ್ನು ಪ್ರವೇಶಮಾಡಿ, ಅವನ ಮೂಲಕವಾಗಿ ಋತುಕಾಲದಲ್ಲಿಯೇ ದೇವಕಿಯನ್ನು ಪ್ರವೇಶಿಸಿ, ಅಲ್ಲಿ ಅರ್ಧದಿಂದ ಕೂಡಿದ ಏಳು ತಿಂಗಳುಗಳ ಕಾಲ (ಏಳುವರೆ ತಿಂಗಳುಗಳ ಕಾಲ) ವಾಸ ಮಾಡಿ, ಹುಟ್ಟಿಲ್ಲದವನಾದರೂ ಕೂಡಾ ಹುಟ್ಟಿದವನಂತೆ ಪ್ರಕಟಗೊಂಡನು.

ಯಥಾ ಪುರಾ ಸ್ತಮ್ಭತ ಆವಿರಾಸೀದಶುಕ್ಲರಕ್ತೋsಪಿ ನೃಸಿಂಹರೂಪಃ ।
ತಥೈವ ಕೃಷ್ಣೋsಪಿ ತಥಾsಪಿ ಮಾತಾಪಿತೃಕ್ರಮಾದೇವ ವಿಮೋಹಯತ್ಯಜಃ ೧೨.೬೩      

ಹೇಗೆ ಹಿಂದೆ ರೇತಸ್ಸು ಹಾಗು ರಕ್ತವಿಲ್ಲದೇ ಹೋದರೂ  ನೃಸಿಂಹನಾಗಿ ಕಂಬದಿಂದ ಆವಿರ್ಭವಿಸಿದನೋ, ಹಾಗೆಯೇ ಕೃಷ್ಣನೂ ಕೂಡಾ. ಆದರೂ ಕೂಡಾ ನಾರಾಯಣನು ತಂದೆತಾಯಿಗಳ ಕ್ರಮಾನುಸರಣ  ಎಲ್ಲರನ್ನೂ ಮೋಹಗೊಳಿಸುತ್ತಾನೆ.  

No comments:

Post a Comment