ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 30, 2022

Mahabharata Tatparya Nirnaya Kannada 22: 124-133

 

ಕೃತಕೃತ್ಯೇ ತಥಾ ಭೀಮೇ ಸ್ಥಿತೇ ಧರ್ಮ್ಮಾತ್ಮಜೋ ಹಿ ಸಃ ।

ಭೀಷ್ಮದ್ರೋಣಾದಿವಿಜಯಃ ಕಥಂ ಸ್ಯಾದಿತ್ಯಚಿನ್ತಯತ್ ॥೨೨.೧೨೪॥

 

ತದನಂತರ ಕೃತಕೃತ್ಯನಾದ ಭೀಮಸೇನನು ಸುಮ್ಮನೆ ಇರುತ್ತಿರಲು, ಧರ್ಮರಾಜನು- ಭೀಷ್ಮ-ದ್ರೋಣಾದಿಗಳನ್ನು ಹೇಗೆ ಗೆಲ್ಲಬಹುದು ಎನ್ನುವುದನ್ನು ಚಿಂತಿಸಿದ.

 

ನಿವಾರಣಂ ಗುರೂಣಾಂ ಹಿ ಭೀಮ ಇಚ್ಛತಿ ನ ಕ್ವಚಿತ್ ।

ತಸ್ಮಾತ್ ತೇ ಹ್ಯರ್ಜ್ಜುನೇನೈವ ನಿವಾರ್ಯ್ಯಾ ಇತ್ಯಚಿನ್ತಯತ್ ॥೨೨.೧೨೫॥

 

ಭೀಮಸೇನನು ಗುರು-ಹಿರಿಯರ ತಡೆಯುವಿಕೆಯನ್ನು ಬಯಸುವುದಿಲ್ಲ. ಆಕಾರಣದಿಂದ ಭೀಷ್ಮಾಚಾರ್ಯರಾಗಲೀ, ದ್ರೋಣಾಚಾರ್ಯರಾಗಲೀ, ಅವರು ಅರ್ಜುನನಿಂದಲೇ ಯುದ್ಧಮಾಡಲು ಯೋಗ್ಯರಾದವರು(ಅರ್ಜುನನೇ ಅವರನ್ನು ಎದುರಿಸಬೇಕು) ಎಂದು ಧರ್ಮರಾಜ ಚಿಂತಿಸಿದ.

 

ಆಪದ್ಯೇವ ಹಿ ಭೀಮಸ್ತಾನ್ ನಿವಾರಯತಿ ನಾನ್ಯಥಾ ।

ಏವಂ ಚಿನ್ತಾಸಮಾವಿಷ್ಟಂ ವಿಜ್ಞಾಯೈವ ಯುಧಿಷ್ಠಿರಮ್ ॥೨೨.೧೨೬॥

 

ಸರ್ವಜ್ಞಃ ಸರ್ವಶಕ್ತಿಶ್ಚ ಕೃಷ್ಣದ್ವೈಪಾಯನೋSಗಮತ್ ।

ನೃಪತಿಂ ಬೋಧಯಾಮಾಸ ಚಿನ್ತಾವ್ಯಾಕುಲಮಾನಸಮ್ ॥೨೨.೧೨೭॥

 

ಭೀಮಸೇನನು ಆಪತ್ಕಾಲದಲ್ಲಿಯೇ ಭೀಷ್ಮಾದಿಗಳನ್ನು ತಡೆಯುತ್ತಾನೆ ಮತ್ತು ಅವರೊಂದಿಗೆ ಕಾದಾಡುತ್ತಾನೆ. ಆದರೆ ಆಪತ್ತು ಇಲ್ಲದಿದ್ದರೆ ಕಾದಾಡುವುದಿಲ್ಲ. ಈ ವಿಷಯವಾಗಿ ಚಿಂತೆಯಿಂದ ಕುಗ್ಗಿರುವ ಯುಧಿಷ್ಠಿರನನ್ನು ತಿಳಿದು, ಎಲ್ಲವನ್ನೂ ಬಲ್ಲ, ಸರ್ವಶಕ್ತನಾಗಿರುವ ವೇದವ್ಯಾಸರು ಅಲ್ಲಿಗೆ ಆಗಮಿಸಿದರು. ಅವರು ಚಿಂತೆಯಿಂದ ಕಂಗೆಟ್ಟ ಧರ್ಮರಾಜನಿಗೆ ಉಪದೇಶಿಸಿದರು ಕೂಡಾ.

 

ಇಮಂ ಮನ್ತ್ರಂ ವದಿಷ್ಯಾಮಿ ಯೇನ ಜೇಷ್ಯತಿ ಫಲ್ಗುನಃ ।

ಭೀಷ್ಮದ್ರೋಣಾದಿಕಾನ್ ಸರ್ವಾನ್ ತಂ ತ್ವಂ ವದ ಧನಞ್ಜಯೇ ॥೨೨.೧೨೮॥

 

ಇತ್ಯುಕ್ತ್ವೈವಾವದನ್ಮನ್ತ್ರಂ ಸರ್ವದೈವತದೃಷ್ಟಿದಮ್ ।

ನ ಸ್ವಯಂ ಹ್ಯವದತ್ ಪಾರ್ತ್ಥೇ ಫಲಾಧಿಕ್ಯಂ ಯತೋ ಭವೇತ್ ॥೨೨.೧೨೯॥

 

‘ಯಾವ ಮಂತ್ರದಿಂದ ಅರ್ಜುನನು ಭೀಷ್ಮ-ದ್ರೋಣಾದಿಗಳನ್ನು ಗೆಲ್ಲಬಲ್ಲನೋ, ಅಂತಹ ಮಂತ್ರವನ್ನು  ನಿನಗೆ ಹೇಳುತ್ತೇನೆ. ನೀನು ಅದನ್ನು ಅರ್ಜುನನಿಗೆ ಉಪದೇಶ ಮಾಡು’ ಎಂದು ಹೇಳಿದ ವೇದವ್ಯಾಸರು, ಎಲ್ಲಾ ದೇವತೆಗಳ ಪ್ರತ್ಯಕ್ಷವನ್ನು ನೀಡಬಲ್ಲ ಮಂತ್ರವನ್ನು ಯುಧಿಷ್ಠಿರನಿಗೆ ಉಪದೇಶಿಸಿದರು. ಫಲಾಧಿಕ್ಯವಾಗಬಾರದು ಎನ್ನುವ ಕಾರಣಕ್ಕಾಗಿ ತಾನೇ ನೇರವಾಗಿ ಅರ್ಜುನನಿಗೆ ಉಪದೇಶಿಸಲಿಲ್ಲ.

 

ಭೀಷ್ಮದ್ರೋಣಾದಿವಿಜಯ ಏತಾವದ್ ವೀರ್ಯ್ಯಮೇವ ಹಿ ।

ಅಲಂ ನಾತೋSಧಿಕಂ ಕಾರ್ಯ್ಯಮೇತಾವದ್ ಯೋಗ್ಯಮಸ್ಯ ಚ ॥೨೨.೧೩೦॥

 

ಭೀಷ್ಮಾಚಾರ್ಯರನ್ನಾಗಲೀ, ದ್ರೋಣಾಚಾರ್ಯರನ್ನಾಗಲೀ ಗೆಲ್ಲಬೇಕಾದರೆ ಇಷ್ಟು ಸಾಕು. ಇವನಿಗೆ ಭೀಷ್ಮದ್ರೋಣಾದಿಗಳ ವಿಜಯಕ್ಕಿಂತ ಅಧಿಕವಾದ ಕಾರ್ಯವು  ಇಲ್ಲ.

 

ಫಲ್ಗುನಸ್ಯೇತಿ ಭಗವಾನ್ ನ ಸ್ವಯಂ ಹ್ಯವದನ್ಮನುಮ್ ।

ಗತೇ ವ್ಯಾಸೇ ಭಗವತಿ ಸರ್ವಜ್ಞೇ ಸರ್ವಕರ್ತ್ತರಿ ॥೨೨.೧೩೧॥

 

ಧರ್ಮ್ಮರಾಜೋSದಿಶನ್ಮನ್ತ್ರಂ ಫಲ್ಗುನಾಯ ರಹಸ್ಯಮುಮ್ ।

ತಮಾಪ್ಯ ಫಲ್ಗುನೋ ಮನ್ತ್ರಂ ಯಯೌ ಜ್ಯೇಷ್ಠೌ ಪ್ರಣಮ್ಯ ಚ  ॥೨೨.೧೩೨॥

 

ಯಮಜೌ ಚ ಸಮಾಶ್ಲಿಷ್ಯ ಗಿರಿಮೇವೇನ್ದ್ರಕೀಲಕಮ್ ।

ತಪಶ್ಚಚಾರ ತತ್ರಸ್ಥಃ ಶಙ್ಕರಸ್ಥಂ ಹರಿಂ ಸ್ಮರನ್ ॥೨೨.೧೩೩॥

 

ಈರೀತಿಯಾಗಿ ಯಾರಿಗೆ ಎಷ್ಟು ಫಲವನ್ನು ಕೊಡಬೇಕು ಎಂದು ತಿಳಿದಿರುವ ಸರ್ವಜ್ಞರಾದ ವೇದವ್ಯಾಸರು ಅರ್ಜುನನಿಗೆ ತಾವೇ ಮಂತ್ರವನ್ನು ಉಪದೇಶ ಮಾಡಲಿಲ್ಲ. ಎಲ್ಲಾ ಜಗದ ಕಜ್ಜವನ್ನು ನಡೆಸುವ, ಎಲ್ಲವನ್ನೂ ಬಲ್ಲ  ವೇದವ್ಯಾಸರು ತೆರಳಲು, ಧರ್ಮರಾಜನು ರಹಸ್ಯವಾಗಿ ಅರ್ಜುನನಿಗೆ ಮಂತ್ರವನ್ನು ಉಪದೇಶ ಮಾಡಿದ. ಆ ಮಂತ್ರವನ್ನು ಪಡೆದ ಅರ್ಜುನನು ಹಿರಿಯರಿಬ್ಬರಿಗೆ ನಮಸ್ಕರಿಸಿ, ನಕುಲ ಸಹದೇವರನ್ನು ಆಲಿಂಗಿಸಿ, ಇಂದ್ರಕೀಲಕವೆಂಬ ಪರ್ವತವನ್ನು ಕುರಿತು ತೆರಳಿದನು. ಅಲ್ಲಿ ರುದ್ರನ ಅಂತರ್ಯಾಮಿ ಹರಿಯನ್ನು ಸ್ಮರಣೆ ಮಾಡುತ್ತಾ ತಪಸ್ಸನ್ನು ಮಾಡಿದನು.

[ಮಹಾಭಾರತದಲ್ಲಿ ಈ ವಿವರ ಕಾಣಸಿಗುತ್ತದೆ.  ಹಿಮವನ್ತಮತಿಕ್ರಮ್ಯ ಗನ್ಧಮಾದನಮೇವ ಚ । ಅತ್ಯಕ್ರಾಮತ್ ಸ ದುರ್ಗಾಣಿ ದಿವಾರಾತ್ರಮತನ್ದ್ರಿತಃ । ಇಂದ್ರಕೀಲಂ ಸಮಾಸಾಧ್ಯ ತತೋSತಿಷ್ಠದ್ ಧನಞ್ಜಯಃ’ (ವನಪರ್ವ ೩೭.೪೧-೪೨)  ಶುಶುಭೇ ಹಿಮವತ್ಪೃಷ್ಠೇ ವಸಮಾನೋSರ್ಜುನಸ್ತದಾ’ (೩೮.೧೮) ‘ತೋಶಿತವ್ಯಸ್ತ್ವಯಾ ರುದ್ರೋ ವಿಷ್ಣುರ್ಲೋಕನಮಸ್ಕೃತಃ’ ಎಂದು ಪುರಾಣ ವಚನ. ಮಹಾಭಾರತದಲ್ಲಿ ಅರ್ಜುನನನ್ನು ತಪಸ್ಸುಮಾಡುವಾಗ ಯಾವ ಮಂತ್ರದಿಂದ ಸ್ತುತಿಸಿದ ಎನ್ನುವುದನ್ನೂ ಹೇಳಿದ್ದಾರೆ: ‘ಶಿವಾಯ ವಿಷ್ಣುರೂಪಾಯ  ವಿಷ್ಣವೇ ಶಿವರೂಪಿಣೇ । ದಕ್ಷಯಜ್ಞವಿನಾಶಾಯ ಹರಿರೂಪಾಯ ತೇ ನಮಃ’(ವನಪರ್ವ ೩೯.೭೬).  ವಿಷ್ಣುವಿನ ರೂಪವನ್ನು ಪಡೆದ ಶಿವನಿಗೆ, ಶಿವನ ರೂಪವನ್ನು ಪಡೆದ ವಿಷ್ಣುವಿಗೆ, ದಕ್ಷನ ಯಜ್ಞವನ್ನು ನಾಶ ಮಾಡಿದ ನಿನಗೆ ನಮಸ್ಕಾರ. ಇಲ್ಲಿ ಅರ್ಜುನ ರುದ್ರನ ಅಂತರ್ಯಾಮಿ ನರಸಿಂಹನನ್ನು  ಸ್ಮರಣೆ ಮಾಡುತ್ತಿದ್ದ ಎನ್ನುವುದು ನಿರ್ಣಯ. ವರಹಾಪುರಾಣ ಹೀಗೆ ಹೇಳುತ್ತದೆ: ‘ನಾರಾಯಣಃ ಶಿವೋ ವಿಷ್ಣುಃ ಶಙ್ಕರಃ ಪುರುಷೋತ್ತಮಃ । ಏತೈಸ್ತು ನಾಮಭಿರ್ಬ್ರಹ್ಮ ಪರಂ ಪ್ರೋಕ್ತಂ ಸನಾತನಮ್’ (೭೨.೧೨) ]


Sunday, May 29, 2022

Mahabharata Tatparya Nirnaya Kannada 22: 113-123

ಸ್ವತನ್ತ್ರತ್ವಂ ವಾಸುದೇವಸ್ಯ ಸಮ್ಯಕ್  ಪ್ರತ್ಯಕ್ಷತೋ ದೃಶ್ಯತೇ ಹ್ಯದ್ಯ ರಾಜನ್ ।

ಯಸ್ಮಾತ್ ಕೃಷ್ಣೋ ವ್ಯಜಯಚ್ಛಙ್ಕರಾದೀನ್ ಜರಾಸುತಾದೀನ್ ಕಾದಿವರೈರಜೇಯಾನ್ ॥೨೨.೧೧೩॥

 

ಯಾವ ಕಾರಣದಿಂದ ನಾರಾಯಣನ ಅವತಾರವಾಗಿರುವ ಶ್ರೀಕೃಷ್ಣನು ರುದ್ರಾದಿಗಳನ್ನು(ಬಾಣಾಸುರನ ಪ್ರಸಂಗದಲ್ಲಿ) ಗೆದ್ದಿರುವನೋ, ಬ್ರಹ್ಮ ಮೊದಲಾದವರ ವರಗಳಿಂದ ಅಜೇಯರಾಗಿರುವ ಜರಾಸಂಧ ಮೊದಲಾದವರನ್ನು ಗೆದ್ದಿರುವನೋ, ಆ ಕಾರಣದಿಂದ ಶ್ರೀಕೃಷ್ಣನ ಸ್ವಾತಂತ್ರ್ಯವು(ಸರ್ವಸ್ವಾಮಿತ್ವವು) ಪ್ರತ್ಯಕ್ಷವಾಗಿ ತೋರುತ್ತದಷ್ಟೇ.

 

ಬ್ರಹ್ಮಾದೀನಾಂ ಪ್ರಕೃತೇಸ್ತದ್ವಶತ್ವಂ ದೃಷ್ಟಂ ಹಿ ನೋ ಬಹುಶೋ ವ್ಯಾಸದೇಹೇ ।

ಪಾರಾಶರ್ಯ್ಯೋ ದಿವ್ಯದೃಷ್ಟಿಂ ಪ್ರದಾಯ ಸ್ವಾತನ್ತ್ರ್ಯಂ ನೋSದರ್ಶಯತ್ ಸರ್ವಲೋಕೇ ॥೨೨.೧೧೪॥

 

ಬ್ರಹ್ಮರುದ್ರಾದಿ ದೇವತೆಗಳು ಶ್ರೀಲಕ್ಷ್ಮೀದೇವಿಯ ಅಧೀನ. ಮಾತೆ ಶ್ರೀಲಕ್ಷ್ಮಿ ಪರಮಾತ್ಮನಿಗೆ ಅಧೀನ. ಇದನ್ನು ನಾವು ಬಹಳ ಬಾರಿ ವೇದವ್ಯಾಸರ ದೇಹದಲ್ಲಿ ಕಂಡಿದ್ದೇವೆ. ವೇದವ್ಯಾಸರು ನಮಗೆ ದಿವ್ಯದೃಷ್ಟಿಯನ್ನಿತ್ತು(ಅಲೌಕಿಕ ಜ್ಞಾನವನ್ನು ನೀಡಿ), ಸಮಸ್ತ ಲೋಕದಲ್ಲಿರುವ ತನ್ನ ಸ್ವಾತಂತ್ರ್ಯವನ್ನು ತೋರಿದರಷ್ಟೇ.

[ಪಾಂಡವರಿಗೆ ಈ ಹಿಂದೆ ಅನೇಕ ಬಾರಿ ಪರಮಾತ್ಮನ ವಿಶ್ವರೂಪದರ್ಶನ ವೇದವ್ಯಾಸರ ದೇಹದಲ್ಲಾಗಿದೆ. ಅಲ್ಲಿ ಕಂಡಿರುವುದನ್ನು ಭೀಮಸೇನ ಇಲ್ಲಿ ಯುಧಿಷ್ಟಿರನಿಗೆ ನನಪಿಸುತ್ತಿದ್ದಾನೆ.

ಭಗವಂತ ಯುದ್ಧಕಾಲದಲ್ಲಿ ತನ್ನ ವಿಶ್ವರೂಪ ದರ್ಶನ ಮಾಡಿ ಅರ್ಜುನನಿಗೆ ಗೀತೋಪದೇಶ ಮಾಡಿದ. ಮೇಲ್ನೋಟಕ್ಕೆ ನಮಗೆ ಗೀತೆ ಯುದ್ಧದ ಹಿನ್ನೆಲೆಯಲ್ಲಿ ಬಂದಂತೆ ಕಾಣುತ್ತದೆ. ಆದರೆ ಗೀತೆಗೆ ಇನ್ನೂ ವಿಸ್ತಾರವಾದ ಹಿನ್ನೆಲೆ ಇದೆ. ಗೀತೆಯನ್ನು ಕೇವಲ ಯುದ್ಧಭೂಮಿಯಲ್ಲಿ ಮಾತ್ರ ಉಪದೇಶ ಮಾಡಿರುವುದಲ್ಲ. ಹಿಂದೆ ಅನೇಕ ಬಾರಿ ಗೀತೋಪದೇಶವಾಗಿದೆ. ಅದಕ್ಕಾಗಿ ಅಲ್ಲಿ ಅರ್ಜುನ -  ‘ನಷ್ಟೋ ಮೋಹಃ ಸ್ಮೃತಿರ್ಲಬ್ಧಾ... – ಹಿಂದೆ ಕೇಳಿ ಮರೆತಿದ್ದು ನೆನಪಿಗೆ ಬಂದಿತು’ ಎಂದು ಹೇಳಿರುವುದು. ಪಾಂಡವರಿಗೆ ವೇದವ್ಯಾಸರ ದೇಹದಲ್ಲಿ ಬಹಳ ಬಾರಿ ವಿಶ್ವರೂಪ ದರ್ಶನವಾಗಿದೆ.  ಪರಮಾತ್ಮ ಎಲ್ಲವನ್ನೂ ನಿಯಂತ್ರಣ ಮಾಡುತ್ತಿದ್ದಾನೆ, ಅವನು ಸ್ವತಂತ್ರನಾಗಿದ್ದಾನೆ. ಎಲ್ಲೆಡೆ ಅವನ ನಿಯಮನವಿದೆ ಎನ್ನುವುದು ಮೊದಲೇ ತಿಳಿದಿರುವ ವಿಷಯ. ಅದನ್ನು ಸಂಕ್ಷಿಪ್ತವಾಗಿ ಭಗವಂತ ರಣಭೂಮಿಯಲ್ಲಿ ತೋರಿರುವುದು ಅಷ್ಟೇ].

 

ತಸ್ಮಾದ್ ರಾಜನ್ನಭಿನಿರ್ಯ್ಯಾಹಿ ಶತ್ರೂನ್ ಹನ್ತುಂ ಸರ್ವಾನ್ ಭೋಕ್ತುಮೇವಾಧಿರಾಜ್ಯಮ್ ।

ಏವಞ್ಚ ತೇ ಕೀರ್ತ್ತಿಧರ್ಮ್ಮೌ ಮಹಾನ್ತೌ ಪ್ರಾಪ್ಯೌ ರಾಜನ್ ವಾಸುದೇವಪ್ರಸಾದಾತ್ ॥೨೨.೧೧೫॥

 

ಆಕಾರಣದಿಂದ, ಎಲೈ ಧರ್ಮರಾಜನೇ, ರಾಜ್ಯವನ್ನು ಭೋಗಿಸಲು, ಶತ್ರುಗಳನ್ನು ಕೊಲ್ಲಲು ಈಗಲೇ ಹೊರಡು.(ಶಾಸ್ತ್ರೀಯವಾದ ಭೋಗ ಅನುಭವಿಸುವುದು ತಪ್ಪಲ್ಲ, ಅದನ್ನೇ ಭೀಮಸೇನ ಇಲ್ಲಿ ಹೇಳಿರುವುದು). ಹೀಗೆ ಮಾಡುವುದರಿಂದ ಪರಮಾತ್ಮನ ಅನುಗ್ರಹದಿಂದ ಪುಣ್ಯವೂ, ಕೀರ್ತಿಯೂ ನಿನ್ನದಾಗುತ್ತದೆ.    

 

ಏವಮುಕ್ತೋSಬ್ರವೀದ್ ಭೀಮಂ ಧರ್ಮ್ಮಪುತ್ರೋ ಯುಧಿಷ್ಠಿರಃ ।

ತ್ರಯೋದಶಾಬ್ದಸ್ಯಾನ್ತೇSಹಂ ಕುರ್ಯ್ಯಾಮೇವ ತ್ವದೀರಿತಮ್ ॥೨೨.೧೧೬॥

 

ಸತ್ಯಮೇತನ್ನ ಸನ್ದೇಹಃ ಸತ್ಯೇನಾSತ್ಮಾನಮಾಲಭೇ ।

ಲೋಕಾಪವಾದಭೀರುಂ ಮಾಂ ನಾತೋSನ್ಯದ್ ವಕ್ತುಮರ್ಹಸಿ ॥೨೨.೧೧೭॥

 

ಈರೀತಿಯಾಗಿ ಹೇಳಿದಾಗ, ಯುಧಿಷ್ಠಿರನು ಭೀಮಸೇನನನ್ನು ಕುರಿತು ಮಾತನಾಡಿದ: ಹದಿಮೂರು ವರ್ಷಗಳಾದ ಮೇಲೆ ನೀನು ಹೇಳಿದ್ದನ್ನು ಮಾಡಿಯೇ ಮಾಡುತ್ತೇನೆ.

ಇದು ಸತ್ಯಾ, ಇದರಲ್ಲಿ ಸಂದೇಹವೇ ಬೇಡ. ನಾನು ಖಂಡಿತ, ನನ್ನ ಆಣೆಯಾಗಿಯೂ ನೀನು ಹೇಳಿದ್ದನ್ನು ಮಾಡುತ್ತೇನೆ. ಲೋಕಾಪವಾದ ಬಾರದಿರಲಿ ಎಂದು ಈಗ ಅದನ್ನು ನಾನು ಮಾಡುವುದಿಲ್ಲ. ಹಾಗಾಗಿ ಇದಕ್ಕೆ ಹೊರತಾಗಿ ಇನ್ನು ನನ್ನನ್ನು ನೀನು ಪ್ರಚೋದನೆ ಮಾಡಬೇಡ.

 

ತುದಸೇ ಚಾತಿವಾಚಾ ಮಾಂ ಯದ್ಯೇವಂ ಭೀಮ ಮಾಂ ವದೇಃ ।

ತದೈವ ಮೇSತ್ಯಯಃ ಕಾರ್ಯ್ಯೋ ಹನ್ತವ್ಯಾಶ್ಚೈವ ಶತ್ರವಃ ॥೨೨.೧೧೮॥

 

ನೈತಾದೃಶೈರಿದಾನೀಂ ತು ವಾಕ್ಯೈರ್ಬಾಧಿತುಮರ್ಹಸಿ ।

ಭೀಷ್ಮದ್ರೋಣಾದಯೋSಸ್ತ್ರಜ್ಞಾ ನಿವಾರ್ಯ್ಯಾಶ್ಚ ಕಥಂ ಯುಧಿ ॥೨೨.೧೧೯॥

 

ಅತ್ಯಂತ ತೀಕ್ಷ್ಣವಾದ ಮಾತುಗಳಿಂದ ನೀನು ನನ್ನ ಮನಸ್ಸನ್ನು ಚುಚ್ಚಿ ಹೇಳುತ್ತಿರುವೆ. ಹದಿಮೂರು ವರ್ಷ ಕಳೆದಮೇಲೆ ಅವರು ತಮ್ಮ ಮಾತನ್ನು ಉಳಿಸಿಕೊಳ್ಳದಿದ್ದಲ್ಲಿ ಮತ್ತು ನಾನು ಅವರ ವಿರುದ್ಧ ಮೃದುವಾಗಿದ್ದರೆ, ಆಗ ನೀನು ನನ್ನನ್ನು ಅತಿಕ್ರಮಿಸಿ ಹೋಗತಕ್ಕದ್ದು. ಶತ್ರುಗಳೂ ಸಂಹರಿಸಲ್ಪಡತಕ್ಕದ್ದು. ಆದರೆ ಈಗ ಪ್ರತಿಜ್ಞಾವಧಿಗಿಂತ ಮೊದಲೇ, ತಿಂಗಳುಗಳನ್ನು ವರ್ಷವೆಂದು ಎಣಿಸಿ ಯುದ್ಧ ಮಾಡಬೇಕು ಎನ್ನುವ ನಿಷ್ಠುರವಾದ ಮಾತುಗಳಿಂದ ನನ್ನನ್ನು ಪೀಡಿಸಬೇಡ. ಶತ್ರುಗಳನ್ನು ಕೊಲ್ಲಬೇಕು ಎನ್ನುವುದು ನನಗೂ ತಿಳಿದಿದೆ. ಆದರೆ ಅಸ್ತ್ರವನ್ನು ಬಲ್ಲ ಭೀಷ್ಮ-ದ್ರೋಣಾಚಾರ್ಯ ಮೊದಲಾದವರನ್ನು ಹೇಗೆ ತಡೆಯಲು ಸಾಧ್ಯ?

 

ಪೂಜ್ಯಾಸ್ತೇ ಬಾಹುಯುದ್ಧೇನ ನ ನಿವಾರ್ಯ್ಯಾಃ ಕಥಞ್ಚನ ।

ಅಸ್ತ್ರಾಣಿ ಜಾನನ್ನಪಿ ಹಿ ನ ಪ್ರಯೋಜಯಸಿ ಕ್ವಚಿತ್ ॥೨೨.೧೨೦॥

 

ತಸ್ಮಾದ್ ತದೈವ ಗನ್ತವ್ಯಂ ವಿಜ್ಞಾತಾಸ್ತ್ರೇ ಧನಞ್ಜಯೇ ।

ಇತ್ಯುಕ್ತೋ ಭೀಮಸೇನಸ್ತು ಸ್ನೇಹಭಙ್ಗಭಯಾತ್ ತತಃ ॥೨೨.೧೨೧॥

 

ನೋವಾಚ ಕಿಞ್ಚಿದ್ ವಚನಂ ಸ್ವಾಭಿಪ್ರೇತಮವಾಪ್ಯ ಚ ।

ಅಭಿಪ್ರಾಯೋ ಹಿ ಭೀಮಸ್ಯ ನಿಶ್ಚಯೇನ ತ್ರಯೋದಶೇ ॥೨೨.೧೨೨॥

 

ಯುಧಿಷ್ಠಿರಸ್ಯ ರಾಜ್ಯಾರ್ತ್ಥಂ ಗಮನಾರ್ತ್ಥೇ ಪ್ರತಿಶ್ರವಃ ।

ಅನ್ಯಥಾSತಿಮೃದುತ್ವಾತ್ ಸ ನ ಗಚ್ಛೇದ್ ಭಿನ್ನಧೀಃ ಪರೈಃ ॥೨೨.೧೨೩॥

 

ಪೂಜ್ಯರಾದ ಅವರನ್ನು ಬಾಹುಯುದ್ಧಕ್ಕೆ ಕರೆಯಲು ಸಾಧ್ಯವಿಲ್ಲ. ನೀನು ಅಸ್ತ್ರಗಳನ್ನು ಬಲ್ಲವನಾದರೂ ಕೂಡ ಅದನ್ನು  ನೀನು ಪ್ರಯೋಗಿಸುವುದಿಲ್ಲ.

ಅದರಿಂದ ಅರ್ಜುನ ಅಸ್ತ್ರಗಳನ್ನೆಲ್ಲ ಬಲ್ಲವನಾದ ಮೇಲೆ, ಹದಿಮೂರು ವರ್ಷ ಕಳೆದಮೇಲೆ ನಾವು ಯುದ್ಧಕ್ಕೆ ತೆರಳಬೇಕು. ಈರೀತಿಯಾಗಿ ಹೇಳಲ್ಪಟ್ಟ ಭೀಮಸೇನನು ಯುಧಿಷ್ಠಿರನಿಗಿರುವ ಸ್ನೇಹ ನಾಶವಾಗಬಾರದು ಎನ್ನುವ ಕಾರಣಕ್ಕಾಗಿ ಮತ್ತೇನನ್ನೂ ಹೇಳಲಿಲ್ಲ.

ಭೀಮನ ಅಭಿಪ್ರಾಯವೂ ಕೂಡಾ ಯುಧಿಷ್ಠಿರ ಹದಿಮೂರನೇ ವರ್ಷದಲ್ಲಿಯಾದರೂ ಯುದ್ಧಮಾಡಲೀ ಎನ್ನುವುದೇ ಆಗಿತ್ತು. ಆದರೆ ಅತ್ಯಂತ ಮೃದುವಾಗಿರುವ ಧರ್ಮರಾಜ ಬೇರೊಬ್ಬರಿಂದ ಕೆಡಿಸಲ್ಪಟ್ಟ ಬುದ್ಧಿಯುಳ್ಳವನಾಗಿ ಯುದ್ಧ ಮಾಡದೇ ಇರುವ ಸಾಧ್ಯತೆಯೂ ಇತ್ತು.

[ಧರ್ಮರಾಜನ ಮೃದುತ್ವದ ದುರುಪಯೋಗ ಪಡೆದುಕೊಳ್ಳುವ ಪ್ರಯತ್ನ ಮುಂದೆ ಯುದ್ಧ ಕಾಲದಲ್ಲಿ ನಡೆಯುವುದನ್ನು ನಾವು ಕಾಣಬಹುದು. ಧೃತರಾಷ್ಟ್ರ ಸಂಜಯನ ಮೂಲಕ ಯುಧಿಷ್ಠಿರನ ಮನಸ್ಸನ್ನು ಬದಲಿಸುವ ಪ್ರಯತ್ನವನ್ನು ಮಾಡುತ್ತಾನೆ. ಆಗ ಅಲ್ಲಿ ಯುಧಿಷ್ಠಿರ ಭೀಮಸೇನ ಹೇಳಿದ ಮೇಲಿನ ಮಾತುಗಳನ್ನೇ ನಿಷ್ಟುರವಾಗಿ ಸಂಜಯನಿಗೆ ಹೇಳಿ ಅವನನ್ನು ಹಿಂದೆ ಕಳುಹಿಸುವುದನ್ನು ನಾವು ಕಾಣಬಹುದು]. 

Friday, May 27, 2022

Mahabharata Tatparya Nirnaya Kannada 22: 107-112

 

ಅಕ್ಷದ್ಯೂತಂ ನಿಕೃತಿಃ ಪಾಪಾಮೇವ ಕೃತಂ ತ್ವಯಾ ಗರ್ಹಿತಂ ಸೌಬಲೇನ ।

ನ ಕುತ್ರಚಿದ್ ವಿಧಿರಸ್ಯಾಸ್ತಿ ತೇನ ನ ತದ್ ದತ್ತಂ ದ್ಯೂತಹೃತಂ ವದನ್ತಿ ॥೨೨.೧೦೭॥

 

ಪಗಡೆಯಾಟ ಅಥವಾ ಆರೀತಿಯಾಗಿರುವ ಯಾವುದೇ ಜೂಜೂ ಪಾಪವೇ. ಅದು ಅತ್ಯಂತ ನಿಂದ್ಯವಾದದ್ದು. ಅಂತಹ ಜೂಜನ್ನು ನೀನು ಶಕುನಿಯ ಜೊತೆಗೆ ಆಡಿದ್ದೀಯ. ಎಲ್ಲಿಯೂ ಕೂಡಾ ಜೂಜಿನ ಕುರಿತು ವೇದದಲ್ಲಿ ವಿಧಿ ಇಲ್ಲ. ಅದರಿಂದಾಗಿ ಅಂದು ಜೂಜಿನಿಂದ ಅಪಹರಿಸಿದ್ದನ್ನು ‘ಕೊಟ್ಟದ್ದು’ ಎಂದು ಯಾರೂ ಕೂಡಾ ಹೇಳುವುದಿಲ್ಲ.

[ಶತಪಥ ಬ್ರಾಹ್ಮಣದಲ್ಲಿ ಯಾಗ ಮುಗಿದ ಕೂಡಲೇ ಅದೇ ಜಾಗದಲ್ಲಿ ಬಯಸಿದರೆ ಜೂಜಾಡಬಹುದು ಎಂದಿದೆ. ಆದರೆ ಅದು ಪಣವಿಟ್ಟು ಆಡುವ ಜೂಜಲ್ಲ. ಪಣವಿಟ್ಟು ಆಡುವ ಜೂಜನ್ನು ಎಲ್ಲೂ ಯಾವ ವೇದದ ವಿಧಿಯಲ್ಲೂ ಹೇಳಿಲ್ಲ].

 

ಭೀತೇನ ದತ್ತಂ ದ್ಯೂತದತ್ತಂ ತಥೈವ ದತ್ತಂ ಕಾಮಿನ್ಯೈ ಪುನರಾಹಾರ್ಯ್ಯಮೇವ ।

ಏವಂ ಧರ್ಮ್ಮಃ ಶಾಶ್ವತೋ ವೈದಿಕೋ ಹಿ ದ್ಯೂತೇ ಸ್ತ್ರಿಯಾಂ ನಾಲ್ಪಮಾಹಾರ್ಯ್ಯಮಾಹುಃ ॥೨೨.೧೦೮॥

 

ಭಯಗೊಂಡು ಕೊಟ್ಟಿರುವುದನ್ನು, ಜೂಜಿನಲ್ಲಿ ಕೊಟ್ಟದ್ದನ್ನು, ಯಾವುದೋ ಒಂದು ಕೆಟ್ಟ ಹೆಣ್ಣಿಗಾಗಿ ಒಬ್ಬ ಕೊಟ್ಟಿದ್ದನ್ನು ಮತ್ತೆ ಹಿಂದೆ ಪಡೆಯಬಹುದು. ಅದನ್ನು ಶಾಸ್ತ್ರೀಯವಾಗಿ ‘ಕೊಟ್ಟಿದ್ದು’ ಎಂದು ಯಾರೂ ಹೇಳುವುದಿಲ್ಲ. ದ್ಯೂತದಲ್ಲಿ ಕೊಟ್ಟಾಗ, ಹೆಣ್ಣಿಗೆ ಕೊಟ್ಟಾಗ, ಅದು ಅಲ್ಪವಾಗಿದ್ದರೆ ಅದನ್ನು ಬಿಟ್ಟುಬಿಡಬೇಕು.

 

ಯದ್ಯೇಷಾಂ ವೈ ಭೋಗ್ಯಮಲ್ಪಂ ತದೀಯಂ ಭೋಗೇನ ತದ್ಬನ್ಧುಭಿಸ್ತಚ್ಚ ಹಾರ್ಯ್ಯಮ್ ।

ನಿವಾರಣೇ ಪುರುಷಸ್ಯ ತ್ವಶಕ್ತೈಸ್ತದ್   ರಾಜ್ಯಂ ನಃ ಪುನರಾಹಾರ್ಯ್ಯಮೇವ ॥೨೨.೧೦೯॥

 

ಒಂದುವೇಳೆ ಸ್ವಲ್ಪ ಭೋಗ್ಯವೇ ಇದ್ದು, ಅದು ಪಡೆದವನ ಮಟ್ಟಿಗೆ ಜಾಸ್ತಿಯಾಗಿದ್ದರೆ (ಏಕೆಂದರೆ ಸ್ವಲ್ಪ ಮತ್ತು ಜಾಸ್ತಿ ಎನ್ನುವುದು ಸಾಪೇಕ್ಷ) ಅದನ್ನೂ ಕೂಡಾ ಹಿಂದೆ ಪಡೆಯಬೇಕು. ಇದು ವೈದಿಕ ಧರ್ಮ. ಆ ಕಾರಣದಿಂದ ನಾವು ನಮ್ಮ ರಾಜ್ಯವನ್ನು ಮತ್ತೆ ಹಿಂದೆ ಪಡೆಯಬೇಕು.

 

ತ್ವಂ ಧರ್ಮ್ಮನಿತ್ಯಶ್ಚಾಗ್ರಜಶ್ಚೇತಿ ರಾಜನ್ ಋತೇSನುಜ್ಞಾಂ ನ ಮಯಾ ತತ್ ಕೃತಂ ಚ ।

ದಾತಾಸ್ಯನುಜ್ಞಾಂ ಯದಿ ತಾನ್ ನಿಹತ್ಯ ತ್ವಯ್ಯೇವ ರಾಜ್ಯಂ ಸ್ಥಾಪಯಾಮ್ಯದ್ಯ ಸಮ್ಯಕ್ ॥೨೨.೧೧೦॥

 

ಧರ್ಮರಥನಾಗಿರುವ ನೀನು ನಮ್ಮ ಅಣ್ಣನಾಗಿರುವೆ. ಅದರಿಂದ ನಿನ್ನ ಅನುಜ್ಞೆಯನ್ನು ಬಿಟ್ಟು ರಾಜ್ಯವನ್ನು ಹಿಂದೆ ಪಡೆಯುವ ಕೆಲಸವನ್ನು ನಾನು ಮಾಡಲಿಲ್ಲ. ಒಂದು ವೇಳೆ ಅನುಜ್ಞೆಯನ್ನು ಕೊಡುವೆಯಾದರೆ ಅವರೆಲ್ಲರನ್ನೂ ಕೊಂದು ನಿನ್ನಲ್ಲಿಯೇ ರಾಜ್ಯವನ್ನು ಇಡುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ.

 

ಸತ್ಯಂ ಪಾಪೇಷ್ವಪಿ ಕರ್ತ್ತುಂ ಯದೀಚ್ಛಾ ತಥಾSಪಿ ಮಾಸಾ ದ್ವಾದಶ ನಃ ಪ್ರಯಾತಾಃ ।

ವೇದಪ್ರಾಮಾಣ್ಯಾದ್ ವತ್ಸರಾಸ್ತೇ ಹಿ ಮಾಸೈಃ ಸಹಸ್ರಾಬ್ದಂ  ಸತ್ರಮುಕ್ತಂ ನರಾಣಾಮ್ ।

ಅಜ್ಞಾತಮೇಕಂ ಮಾಸಮುಷ್ಯಾಥ ಶತ್ರೂನ್  ನಿಹತ್ಯ ರಾಜ್ಯಂ ಪ್ರತಿಪಾಲಯಾಮಃ ॥೨೨.೧೧೧॥

 

ಒಂದು ವೇಳೆ ಪಾಪಿಷ್ಠರಲ್ಲಿಯೂ ಕೂಡಾ ನಿನ್ನ ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಲು ನಿನಗೆ ಇಚ್ಛೆಯಿದ್ದರೆ, ಆಗಲೂ ಕೂಡಾ, ನಮ್ಮ ಪಾಲಿಗೆ ಈಗಾಗಲೇ ೧೨ ತಿಂಗಳು ವನವಾಸ ಕಳೆದು ಹೋಗಿದೆ.  ವೇದದ ಪ್ರಮಾಣದ ಅನುಸಾರವಾಗಿ ಹೋಗುವುದಾದರೆ, ಆ ಪ್ರತೀ ತಿಂಗಳುಗಳು ಒಂದು ವರ್ಷದಂತೆ(ಅಂದರೆ ಹನ್ನೆರಡು ತಿಂಗಳು ಹನ್ನೆರಡು ವರ್ಷದಂತೆ). ಏಕೆಂದರೆ ವೇದದಲ್ಲಿ ಒಂದು ತಿಂಗಳನ್ನು ಒಂದು ವರ್ಷ ಎಂದು ಪರಿಗಣಿಸುವ ಸಂಪ್ರದಾಯವನ್ನು ಮನುಷ್ಯರಿಗೆ ಹೇಳಲ್ಪಟ್ಟಿದೆ. ಇನ್ನು ಒಂದು ವರ್ಷದ ಅಜ್ಞಾತವಾಸ ಏನಿದೆ, ಅದನ್ನು ಒಂದು ತಿಂಗಳು ಕಾಲ ಯಾರಿಗೂ ತಿಳಿಯದಂತೆ ವಾಸಮಾಡಿ, ಶತ್ರುಗಳನ್ನು ಕೊಂದು, ರಾಜ್ಯವನ್ನು ಆಳೋಣ.

 

ಮಾ ಮಿತ್ರಾಣಾಂ ತಾಪಕಸ್ತ್ವಂ ಭವೇಥಾಸ್ತಥಾSಮಿತ್ರಾಣಾಂ ನನ್ದಕಶ್ಚೈವ ರಾಜನ್ ।

ಜ್ವಲಸ್ವಾರೀಣಾಂ ಮೂರ್ಧ್ನಿ ಮಿತ್ರಾಣಿ ನಿತ್ಯಮಾಹ್ಲಾದಯನ್ ವಾಸುದೇವಂ ಭಜಸ್ವ ॥೨೨.೧೧೨॥

 

ನಿನ್ನ ಮಿತ್ರರಿಗೆ ಕಷ್ಟ ಕೊಡಬೇಡ.(ನಿನ್ನ ಗೆಳೆಯರಿಗೆ, ನಿನ್ನ ಹಿತೈಷಿಗಳಿಗೆ, ನಿನ್ನ ಅಣ್ಣ-ತಮ್ಮಂದಿರರಿಗೆ ನೀನು ಬಹಳ ಕಷ್ಟ ಕೊಡುತ್ತಿದ್ದೀಯ-ಅದನ್ನು ಬಿಟ್ಟುಬಿಡು).  ನಿನ್ನ ಶತ್ರುಗಳಿಗೆ ನೀನು ಆನಂದವನ್ನು ಕೊಡುತ್ತಿದ್ದೀಯ. (ಕ್ಷಮೆಯನ್ನು ಕೊಡುವ ಮೂಲಕ ಮಿತ್ರರಿಗೆ ದುಃಖ, ಶತ್ರುಗಳಿಗೆ ಸಂತೋಷವನ್ನುಂಟು ಮಾಡುತ್ತಿದ್ದೀಯ). ನೀನು ಆರೀತಿ ಮಾಡದೇ,  ಶತ್ರುಗಳ ತಲೆಯ ಮೇಲೆ ಉರಿದುಬಿಡು. ನಿನ್ನ ಹಿತೈಷಿಗಳನ್ನು ಸಂತಸಗೊಳಿಸುತ್ತಾ ವಾಸುದೇವನನ್ನು ಹೊಂದು.

Wednesday, May 25, 2022

Mahabharata Tatparya Nirnaya Kannada 22: 96-106

 

ಪ್ರಾಧಾನ್ಯತೋ ಧರ್ಮ್ಮವಿಶೇಷ ಏಷ ಸಾಮಾನ್ಯತಃ ಸರ್ವಮೇವಾಖಿಲಾನಾಮ್ ।

ವಯಂ ಹಿ ದೇವಾಸ್ತೇನ ಸರ್ವಂ ಹಿ ಕರ್ಮ್ಮ ಪ್ರಾಯೇಣ ನೋ ಧರ್ಮ್ಮತಾಮೇತಿ ಶಶ್ವತ್ ॥೨೨.೯೬॥

 

ಪ್ರಧಾನವಾದ ಧರ್ಮಗಳು ಇವು. ಸಾಮಾನ್ಯವಾದ ಧರ್ಮ ಅವರವರ ಯೋಗ್ಯತೆಗೆ ಅನುಗುಣವಾಗಿ ಎಲ್ಲವೂ ಎಲ್ಲರಿಗೂ ಇದೆ. (ಬ್ರಾಹ್ಮಣನಿಗೆ ಜ್ಞಾನ ಪ್ರಧಾನ ಧರ್ಮವಾದರೆ ಶುಶ್ರೂಷೆ ಸಾಮಾನ್ಯ ಧರ್ಮ. ಶೂದ್ರನಿಗೆ ಶುಶ್ರೂಷೆ ಪ್ರಧಾನ ಧರ್ಮವಾದರೆ ಜ್ಞಾನವನ್ನು ಪಡೆಯುವುದು ಸಾಮಾನ್ಯ ಧರ್ಮ, ಇತ್ಯಾದಿ). ವಿಶೇಷತಃ ದೇವತೆಗಳಾದ ನಮಗೆ ಎಲ್ಲಾ ಧರ್ಮವೂ ಇದೇ. (ಅದರಿಂದಾಗಿ ನಾವು ಈ ಯುದ್ಧ ಎನ್ನುವ ಕರ್ಮವನ್ನು ಮಾಡಬೇಕು. ಯುದ್ಧದ ಮೂಲಕ ಧರ್ಮದ ಸ್ಥಾಪನೆಯನ್ನು ಮಾಡಬೇಕು. ಇದರಲ್ಲಿ ಯಾವುದೇ ಪಲಾಯನವಾದವಿಲ್ಲ ಎನ್ನುವ ಧ್ವನಿ).

 

ಏತೈರ್ದ್ಧರ್ಮ್ಮೈರ್ವಿಷ್ಣುನಾ ಪೂರ್ವಕ್ಲ್ ಪ್ತೈಃ ಸರ್ವೈರ್ವರ್ಣ್ಣೈರ್ವಿಷ್ಣುರೇವಾಭಿಪೂಜ್ಯಃ ।

ತದ್ಭಕ್ತಿರೇವಾಖಿಲಾನಾಂ ಚ ಧರ್ಮ್ಮೋ ಯಥಾಯೋಗ್ಯಂ ಜ್ಞಾನಮಸ್ಯಾಪಿ ಪೂಜಾ ॥೨೨.೯೭॥

 

ಎಲ್ಲರಿಗೂ ಅವರವರ ಕರ್ಮವೆಂದು ನಿಯಮಿಸಲ್ಪಟ್ಟ ಈ ಎಲ್ಲಾ ಕ್ರಿಯೆಗಳಿಂದ, ಎಲ್ಲಾ ವರ್ಣಗಳಿಂದ ನಾರಾಯಣನೇ ಪೂಜ್ಯನಾಗಿದ್ದಾನೆ. (ಬ್ರಾಹ್ಮಣನೊಬ್ಬ ವೇದಾದಿಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಏಕೆಂದರೆ ಅದು ದೇವರ ಪ್ರೀತಿಗಾಗಿ. ಹಾಗೆಯೇ, ಕ್ಷತ್ರಿಯ ಧರ್ಮಪಾಲನೆ ಮಾಡಬೇಕು, ವೈಶ್ಯ ವ್ಯಾಪಾರವನ್ನು ಯಥಾವತ್ತಾಗಿ ಮಾಡಬೇಕು, ಶೂದ್ರನೊಬ್ಬ ಶೋಶ್ರೂಷೆಯನ್ನು ಚೆನ್ನಾಗಿ ಮಾಡಬೇಕು. ಇವೆಲ್ಲವೂ ಭಗವಂತನ ಪ್ರೀತ್ಯರ್ಥವಾಗಿ ಮಾಡುವ ಪೂಜೆ. ಎಲ್ಲರೂ ಅವರವರ ಕರ್ಮಗಳಿಂದ, ಅವರವರ ಧರ್ಮಗಳಿಂದ ಪೂಜೆಯನ್ನು ಸಲ್ಲಿಸಬೇಕು). ಮುಖ್ಯವಾಗಿ ಹೇಳಬೇಕೆಂದರೆ- ಭಗವಂತನ ಭಕ್ತಿಯೇ ಎಲ್ಲರ ಧರ್ಮ. ಅವರವರ ಯೋಗ್ಯತೆಗೆ ಅನುಗುಣವಾಗಿ ದೇವರನ್ನು ತಿಳಿದುಕೊಳ್ಳುವುದೂ ಕೂಡಾ ದೇವರ ಪೂಜೆಯೇ.   

 

ಪಿತಾ ಗುರುಃ ಪರಮಂ ದೈವತಂ ಚ ವಿಷ್ಣುಃ ಸರ್ವೇಷಾಂ ತೇನ ಪೂಜ್ಯಃ ಸ ಏವ ।

ತದ್ಭಕ್ತತ್ವಾದ್ ದೇವತಾಶ್ಚಾಭಿಪೂಜ್ಯಾ ವಿಶೇಷತಸ್ತೇಷು ಯೇSತ್ಯನ್ತಭಕ್ತಾಃ ॥೨೨.೯೮॥

 

ದೇವರು ಎಲ್ಲರಿಗೂ ತಂದೆಯೂ, ಉಪದೇಶಕನೂ, ಜ್ಞಾನಪ್ರದನೂ, ಉತ್ಕೃಷ್ಟನಾದ ದೈವವೂ ಆಗಿದ್ದಾನೆ. ಅದರಿಂದ ಅವನನ್ನೇ ಪೂಜಿಸಬೇಕು. ದೇವತೆಗಳು ಅವನ ಭಕ್ತರಾದ್ದರಿಂದ ಅವರನ್ನು ಪೂಜಿಸಬೇಕು. ಪರಮಾತ್ಮನಲ್ಲಿ ಅತ್ಯಂತ ಭಕ್ತರು ಯಾರೋ, ಅವರನ್ನು ವಿಶೇಷವಾಗಿ ಪೂಜಿಸಬೇಕು. (ದೇವತೆಗಳ ಭಕ್ತಿಯ ಮಟ್ಟಕೆ ಅನುಗುಣವಾಗಿ ಅವರವರ ತಾರತಮ್ಯ. ತಾರತಮ್ಯಕ್ಕೆ ಅನುಗುಣವಾಗಿ ನಾವು ಅವರ ಭಕ್ತಿಯನ್ನು ಮಾಡಬೇಕು. ಭಗವಂತನ ಭಕ್ತಿ ಎನ್ನುವುದೇ ಕೇಂದ್ರ. ಅದಕ್ಕನುಕೂಲವಾಗಿಯೇ ದೈವೀ ಮೀಮಾಂಸ, ದೇವತಾ ಪೂಜೆ, ಇವೆಲ್ಲವೂ ಇರುತ್ತದೆ).  

 

ಸಮ್ಪೂಜಿತೋ ವಾಸುದೇವಃ ಸ ಮುಕ್ತಿಂ ದದ್ಯಾದೇವಾಪೂಜಿತೋ ದುಃಖಮೇವ ।

ಸ್ವತನ್ತ್ರತ್ವಾತ್ ಸುಖದುಃಖಪ್ರದೋSಸೌ ನಾನ್ಯಃ ಸ್ವತಸ್ತದ್ವಶಾ ಯತ್ ಸಮಸ್ತಾಃ ॥೨೨.೯೯॥

 

ಪೂಜೆಗೊಂಡ ವಾಸುದೇವನು ಮುಕ್ತಿಯನ್ನೀಯುತ್ತಾನೆ. ಪೂಜಿಸದಿದ್ದರೆ ದುಃಖವನ್ನೇ ನೀಡುತ್ತಾನೆ. ದೇವನೊಬ್ಬನೇ ಸ್ವತಂತ್ರನಾದ್ದರಿಂದ ಸುಖ ಹಾಗೂ ದುಃಖವನ್ನು ಅವನು ನೀಡುತ್ತಾನೆ, ಹೊರತು ಬೇರೆ ಅಲ್ಲ. ಎಲ್ಲರೂ ಕೂಡಾ ಆ ಭಗವಂತನ ವಶರಾಗಿದ್ದಾರೆ.

 

ಸ್ವತನ್ತ್ರತ್ವಾತ್ ಸುಖಸಜ್ಜ್ಞಾನಶಕ್ತಿಪೂರ್ವೈರ್ಗ್ಗುಣೈಃ ಪೂರ್ಣ್ಣ ಏಷೋSಖಿಲೈಶ್ಚ ।

ಸ್ವತನ್ತ್ರತ್ವಾತ್  ಸರ್ವದೋಷೋಜ್ಜ್ಞಿತಶ್ಚ ನಿಸ್ಸೀಮಶಕ್ತಿರ್ಹಿ ಯತಃ ಸ್ವತನ್ತ್ರಃ ॥೨೨.೧೦೦॥

 

ದೇವರು ಸ್ವತಂತ್ರನಾಗಿರುವುದರಿಂದಲೇ ಸುಖ. ಜ್ಞಾನ, ಶಕ್ತಿ, ಈ ಮೊದಲಾದ ಗುಣಗಳಿಂದ ಪೂರ್ಣನಾಗಿದ್ದಾನೆ. ಸ್ವತಂತ್ರನಾಗಿರುವುದರಿಂದಲೇ ಸರ್ವ ದೋಷ ವಿವರ್ಜಿತನಾಗಿದ್ದಾನೆ. ಸ್ವತಂತ್ರನಾಗಿರುವುದರಿಂದಲೇ ಎಣೆಯಿರದ ಶಕ್ತಿಯನ್ನು ಹೊಂದಿದ್ದಾನೆ. [ಸ್ವಾತಂತ್ರ್ಯ ಎನ್ನುವುದೇ ಎಲ್ಲಾ ಗುಣಗಳ ಮೂಲಾಧಾರ].

 

ದೋಷಾಸ್ಪೃಷ್ಟೌ ಗುಣಪೂರ್ತ್ತೌ ಚ ಶಕ್ತಿರ್ನ್ನಿಸ್ಸೀಮತ್ವಾದ್ ವಿದ್ಯತೇ ತಸ್ಯ ಯಸ್ಮಾತ್ ।

ಏವಂ ಗುಣೈರಖಿಲೈಶ್ಚಾಪಿ ಪೂರ್ಣ್ಣೋ ನಾರಾಯಣಃ ಪೂಜ್ಯತಮಃ ಸ್ವಧರ್ಮ್ಮೈಃ ॥೨೨.೧೦೧॥

 

ದೋಷಗಳು ಇಲ್ಲದಿರುವಿಕೆಯಲ್ಲಿ, ಗುಣಪೂರ್ಣತೆಯಲ್ಲಿ  ದೇವರ ಶಕ್ತಿ ಇದೆ. ನಾರಾಯಣನು  ಎಲ್ಲಾ ಗುಣಗಳಿಂದಲೂ ಕೂಡಾ ಪೂರ್ಣನಾಗಿದ್ದಾನೆ. ಇಂತಹ ನಾರಾಯಣನು ಅವರವರ ಧರ್ಮಗಳಿಂದ(ಸ್ವಧರ್ಮದಿಂದ) ಪೂಜ್ಯನಾಗಿದ್ದಾನೆ. (ಹೀಗಾಗಿ ನಾವು ನಮ್ಮ ಕರ್ತವ್ಯ ಮಾಡಬೇಕು ಎನ್ನುವುದು ತಾತ್ಪರ್ಯ.ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್........ ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛ̐ ಸಮಾಃ’. ನಿನ್ನ ಕೆಲಸವನ್ನು ನೀನು ಮಾಡು ಎನ್ನುವುದು ಈಶಾವಾಸ್ಯ ಉಪನಿಷತ್ತಿನ ತಾತ್ಪರ್ಯ ಕೂಡಾ ಹೌದು). 

 

ಅಸ್ಮಾಕಂ ಯತ್ ತೇನ ನಾತಿಕ್ಷಮೈವ ಧರ್ಮ್ಮೋ ದುಷ್ಟಾನಾಂ ವಾರಣಂ ಹ್ಯೇವ ಕಾರ್ಯ್ಯಮ್ ।

ಹನ್ಯಾದ್ ದುಷ್ಟಾನ್ ಯಃ ಕ್ಷತ್ರಿಯಃ ಕ್ಷತ್ರಿಯಾಂಶ್ಚ ವಿಶೇಷತೋ ಯುದ್ಧಗತಾನ್ ಸ್ಮರನ್ ಹರಿಮ್ ॥೨೨.೧೦೨॥

 

ನಮ್ಮ ಧರ್ಮವು  ದುರ್ಜನರ ತಡೆ. ಬಹಳ ಕ್ಷಮೆ/ಸಹನೆ ನಾವು ಮಾಡುವಂತಿಲ್ಲ. ಕ್ಷತ್ರಿಯನು ಯುದ್ಧದಲ್ಲಿರುವ ದುಷ್ಟ ಕ್ಷತ್ರಿಯನನ್ನು ಪರಮಾತ್ಮನ ಸ್ಮರಣೆ ಮಾಡುತ್ತಾ ಕೊಲ್ಲಬೇಕು.  

 

ಸ್ವಭಾಹುವೀರ್ಯ್ಯೇಣ ಚ ತಸ್ಯ ಬಾಹೂ ಚೈತನ್ಯಮಾತ್ರೌ ಭವತಃ ಸದೇಹೌ ।

ಪಾಪಾಧಿಕಾಂಶ್ಚೈವ ಬಲಾಧಿಕಾಂಶ್ಚ ಹತ್ವಾ ಮುಕ್ತಾವಧಿಕಾSSನನ್ದವೃದ್ಧಿಃ ॥೨೨.೧೦೩॥

 

ತನ್ನ ಬಾಹುವಿನ ವೀರ್ಯದಿಂದ ಪಾಪಿಷ್ಠರನ್ನೂ, ಬಲಿಷ್ಠರನ್ನೂ ಕೊಂದು, ಯಾರು ತನ್ನ ಸ್ವಧರ್ಮ ಪಾಲನೆ ಮಾಡುತ್ತಾನೆ, ಅವನು ಪರಮಾತ್ಮನಿಂದ ಮುಕ್ತಿಯಲ್ಲಿ ಚೈತನ್ಯಮಾತ್ರವಾಗಿರುವ ಬಾಹುವನ್ನು ಪಡೆಯುತ್ತಾನೆ. (ಮುಕ್ತನಾಗುತ್ತಾನೆ. ಆಗ ಎಲ್ಲವೂ ಕೂಡಾ ಜ್ಞಾನಾನಂದಮಯವಾಗಿರುತ್ತದೆ.) ಯಾರು ಪಾಪಿಷ್ಠನಲ್ಲಿ ಅಗ್ರಗಣ್ಯನೋ, ಅವನನ್ನು ಕೊಂದರೆ ದೇವರಿಗೆ ವಿಶೇಷ ಪ್ರೀತಿ. (ಕ್ಷತ್ರಿಯ ಎಷ್ಟು ಎಷ್ಟು ಪಾಪಾಧಿಕ ಬಲಾಧಿಕರನ್ನು ಕೊಲ್ಲುತ್ತಾನೋ, ಅಷ್ಟುಅಷ್ಟು ಪರಮಾತ್ಮನಿಗೆ ಪ್ರಿಯನಾಗುತ್ತಾನೆ)

 

ಪ್ರೀತಿಶ್ಚ ವಿಷ್ಣೋಃ ಪರಮೈವ ತತ್ರ ತಸ್ಮಾದ್ಧನ್ತವ್ಯಾಃ ಪಾಪಿನಃ ಸರ್ವಥೈವ ।

ಯೇ ತ್ವಕ್ಷಧೂರ್ತ್ತಾ ಗ್ರಹಣಂ ಗತಾ ವಾ ಪಾಪಾಸ್ತೇSನ್ಯೈರ್ಘಾತನೀಯಾಃ ಸ್ವದೋರ್ಭ್ಯಾಮ್ ॥೨೨.೧೦೪॥

 

ಪರಮಾತ್ಮನಿಗೆ ಪಾಪಾಧಿಕರನ್ನೂ, ಬಲಾಧಿಕರನ್ನೂ ಕೊಂದರೆ ಪರಮ ಪ್ರೀತಿ. ಆ ಕಾರಣದಿಂದ ಪಾಪಿಗಳನ್ನು ಕೊಲ್ಲಲೇಬೇಕು. ಜೂಜಿನಲ್ಲಿ ಕಪಟಿಗಳು,  ಸೆರೆಮನೆಗೆ ಸಿಕ್ಕವರು,  ಅಂತವರನ್ನು ಬೇರೊಬ್ಬರಿಂದ ಕೊಲ್ಲಿಸಬೇಕು/ ಶಿಕ್ಷಿಸಬೇಕು. ಯಾರು ಯುದ್ಧದಲ್ಲಿ ಎದುರಾಗುತ್ತಾರೆ ಅವರನ್ನು ತಾವೇ ಸಾಕ್ಷಾತ್ ಕೊಲ್ಲಬೇಕು.

 

ರಾಜಾನಂ ವಾ ರಾಜಪುತ್ರಂ ತಥೈವ ರಾಜಾನುಜಂ ವಾSಭಿಯಾತಂ ನಿಹನ್ಯಾತ್ ।

ರಾಜ್ಞಃ ಪುತ್ರೋSಪ್ಯಕೃತೋದ್ವಾಹಕೋ ಯಃ ಸ ಘಾತನೀಯೋ ನ ಸ್ವಯಂ ವದ್ಧ್ಯ ಏವ ॥೨೨.೧೦೫॥

 

ರಾಜರನ್ನಾಗಲೀ, ರಾಜ ಪುತ್ರರನ್ನಾಗಲೀ, ರಾಜನ ತಮ್ಮನನ್ನಾಗಲೀ, ಎದುರುಗೊಂಡಾಗ ಕೊಲ್ಲಬೇಕು. ಆ ರಾಜನ ಮಗ ಮದುವೆ ಆಗದೇ ಇದ್ದವನಾಗಿದ್ದರೆ ಅವನನ್ನು ಗಾಯಗೊಳಿಸಬೇಕು. ಅವನನ್ನು ಕೊಲ್ಲಬಾರದು. ಇದು ಧರ್ಮ.

 

ಕ್ರೂರಂ ಚಾನ್ಯದ್ ಧರ್ಮ್ಮಯುಕ್ತಂ ಪರೈಸ್ತತ್ ಪ್ರಸಾಧನೀಯಂ ಕ್ಷತ್ರಿಯೈರ್ನ್ನ ಸ್ವಕಾರ್ಯ್ಯಮ್ ।

ಏವಂ ಧರ್ಮ್ಮೋ ವಿಹಿತೋ ವೇದ ಏವ ವಾಕ್ಯಂ ವಿಷ್ಣೋಃ ಪಞ್ಚರಾತ್ರೇಷು ತಾದೃಕ್ ॥೨೨.೧೦೬॥

 

ಧರ್ಮಕ್ಕೆ ಸಮ್ಮತವಾಗಿದೆ ಎಂತಾದರೆ ಇನ್ನೂ ಕ್ರೂರವಾದ ಕೆಲಸವನ್ನು ಬೇರೊಬ್ಬರ ಮೂಲಕ ಮಾಡಿಸಬೇಕು. ಯಾವುದನ್ನು ಕ್ಷತ್ರಿಯರು ಮಾಡಬಾರದೋ ಅದನ್ನು ಅವನು ಮಾಡಬಾರದು. ಆದರೆ  ಬೇರೊಬ್ಬರ ಕೈಯಲ್ಲಿ ಮಾಡಿಸಬಹುದು(ಉದಾಹರಣೆಗೆ ಅಪರಾಧಿಯನ್ನು ನೇಣಿಗೆ ಏರಿಸುವ ಶಿಕ್ಷೆಯನ್ನು ಕ್ಷತ್ರಿಯ ಘೋಷಿಸಬಹುದು. ಆದರೆ ನೇಣಿಗೆ ಏರಿಸುವ ಕೆಲಸವನ್ನು ಆತ ಸ್ವಯಂ ಮಾಡುವುದಿಲ್ಲ. ಅದನ್ನು ಇನ್ನೊಬ್ಬರ ಮುಖೇನ ಮಾಡಿಸುತ್ತಾನೆ). ಇದು ವೇದದಲ್ಲಿಯೇ ವಿಹಿತವಾಗಿರುವ ಧರ್ಮ. ನಾರಾಯಣ ಪಂಚರಾತ್ರದಲ್ಲಿ ಇದನ್ನೆಲ್ಲವನ್ನೂ ಹೇಳಿದ್ದಾನೆ.