ಇತೀರಿತೋ ಧರ್ಮ್ಮಜಃ
ಕೃಷ್ಣಯೈವ ನಿರುತ್ತರತ್ವಂ ಗಮಿತಸ್ತ್ವಭತ್ಸಯತ್ ।
ಕುತರ್ಕ್ಕಮಾಶ್ರಿತ್ಯ
ಹರೇರಪಿ ತ್ವಮಸ್ವಾತನ್ತ್ರ್ಯಂ ಸಾಧಯಸೀತಿ ಚೋಕ್ತ್ವಾ ॥೨೨.೭೫॥
ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ದ್ರೌಪದೀಯಿಂದಲೇ ನಿರುತ್ತರತ್ವವನ್ನು ಹೊಂದಿ(ಅವಳಿಗೆ
ಉತ್ತರ ಕೊಡಲಾಗದೇ) ‘ನೀನು ಕೆಟ್ಟ ತರ್ಕವನ್ನು ಆಶ್ರಯಿಸಿ ನಾರಾಯಣನಿಗೂ ಕೂಡಾ ಅಸ್ವತಂತ್ರವನ್ನು
ಹೇಳುತ್ತಿದ್ದೀಯ’ ಎಂದು ಅವಳನ್ನು ಬೈದನು!
ಛಲೇನ ತೇನ ಪ್ರತಿಭತ್ಸಿತಾ ಸಾ ಕ್ಷಮಾಪಯಾಮಾಸ ನೃಪಂ ಯತಃ ಸ್ತ್ರೀ ।
ವಾಚಾಳತಾ ನಾತಿತರಾಂ ಹಿ
ಶೋಭತೇ ಸ್ತ್ರೀಣಾಂ ತತಃ ಪ್ರಾಹ ವೃಕೋದರಸ್ತಮ್ ॥೨೨.೭೬॥
ಧರ್ಮರಾಜನು ಛಲದಿಂದ (ಕುತರ್ಕ ಬಲದಿಂದ) ಬೈದರೂ ಕೂಡಾ, ದ್ರೌಪದಿಯು ಸ್ತ್ರೀ ಪ್ರಪಂಚದ ಆದರ್ಶಕ್ಕನುಗುಣವಾಗಿ
ಧರ್ಮರಾಜನಲ್ಲಿ ಕ್ಷಮಿಸುವಂತೆ ಕೇಳಿದಳು. ಏಕೆಂದರೆ ವಾಚಾಳತ್ವ ಹೆಣ್ಣುಮಕ್ಕಳಿಗೆ ಹೆಚ್ಚಾಗಿ
ಶೋಭಿಸುವುದಿಲ್ಲ. ಬಳಿಕ ಭೀಮಸೇನನು ಧರ್ಮರಾಜನನ್ನು ಕುರಿತು ಮಾತನಾಡಿದನು:
ರಾಜನ್ ವಿಷ್ಣುಃ ಸರ್ವಕರ್ತ್ತಾ
ನಚಾನ್ಯಸ್ತತ್ತನ್ತ್ರಮೇವಾನ್ಯದಸೌ ಸ್ವತನ್ತ್ರಃ ।
ತಥಾsಪಿ
ಪುಂಸಾ ವಿಹಿತಂ ಸ್ವಕರ್ಮ್ಮ ಕಾರ್ಯ್ಯಂ ತ್ಯಾಜ್ಯಂ ಚಾನ್ಯದತ್ಯನ್ತಯತ್ನಾತ್ ॥೨೨.೭೭॥
ಧರ್ಮರಾಜನೇ, ನಾರಾಯಣನು ಸರ್ವಕರ್ತೃನಾಗಿದ್ದಾನೆ. ಇತರ ಯಾವ ಜೀವನೂ ಕೂಡಾ ಸರ್ವಕರ್ತೃ ಅಲ್ಲ.
ಬೇರೆಯಾದುದೆಲ್ಲವೂ ಭಗವಂತನ ಅಧೀನವಾಗಿವೆ. ನಾರಾಯಣನು ತನ್ನ ಅಧೀನದಲ್ಲಿಯೇ ತಾನಿದ್ದಾನೆ. ಆದರೂ
ಕೂಡಾ ಪುರುಷನಿಂದ (ಒಬ್ಬ ಪ್ರಜ್ಞಾವಂತನಾದ ಜೀವನಿಂದ) ಸ್ವಕರ್ಮವು ಅತ್ಯಂತ ಪ್ರಯತ್ನಪಟ್ಟು ಮಾಡಲ್ಪಡಬೇಕು.
ಹಾಗೇ ಅತ್ಯಂತ ಪ್ರಯತ್ನಪಟ್ಟು ವಿಕರ್ಮಗಳನ್ನೂ(ಕುತ್ಸಿತ ಕರ್ಮಗಳನ್ನು) ಮಾಡದೇ ಇರಬೇಕು.
ಪ್ರತ್ಯಕ್ಷಮೇತತ್
ಪುರುಷಸ್ಯ ಕರ್ಮ್ಮ ತೇನಾನುಮೇಯಾ ಪ್ರೇರಣಾ ಕೇಶವಸ್ಯ ।
ಸ್ವಕರ್ಮ್ಮ ಕೃತ್ವಾ
ವಿಹಿತಂ ಹಿ ವಿಷ್ಣುನಾ ತತ್ಪ್ರೇರಣೇತ್ಯೇವ ಬುಧೋSನುಮನ್ಯತೇ ॥೨೨.೭೮॥
ಒಬ್ಬ ಜೀವನಿಗೆ ಅವನ ಕರ್ಮವು ಪ್ರತ್ಯಕ್ಷ ಸಿದ್ಧ. ಅದರ ಅನುಭವ ಅವನಿಗಾಗುತ್ತದೆ. ವಾಸ್ತವವಾಗಿ ನಾರಾಯಣನ
ಪ್ರೇರಣೆಯಿಂದಲೇ ಕ್ರಿಯೆ ನಡೆದಿರುತ್ತದೆ. (ಜೀವನಿಗೆ ಕರ್ತೃತ್ವವಿದೆ. ಆದರೆ ಸ್ವತಂತ್ರವಾಗಿ ಪರಮಾತ್ಮನ
ಪ್ರೇರಣೆ ಇಲ್ಲದೇ ಯಾವುದನ್ನೂ ಜೀವ ಸಾಧಿಸಲು ಸಾಧ್ಯವಿಲ್ಲ). ಸ್ವಕರ್ಮವನ್ನು (ತನ್ನ ವರ್ಣ ಮತ್ತು
ತನ್ನ ಆಶ್ರಮಕ್ಕೆ ಯೋಗ್ಯವಾಗಿರುವ ಕರ್ಮವನ್ನು) ಮಾಡಿ ಪರಮಾತ್ಮ ಮಾಡಿದ್ದು ಎಂದು ಜ್ಞಾನಿಗಳು
ಸೂಕ್ಷ್ಮ ದೃಷ್ಟಿಯಿಂದ ತಿಳಿಯುತ್ತಾರೆ. (ದೇವರು ನನಗೆ ಬುದ್ಧಿ ಕೊಟ್ಟು ಅವಕಾಶ ಮಾಡಿಕೊಟ್ಟ,
ಅದರಿಂದ ಮುಖ್ಯ ಕರ್ತೃತ್ವ ಪರಮಾತ್ಮ ಎನ್ನುವುದನ್ನು ಅವರು ತಿಳಿಯುತ್ತಾರೆ).
ತೇನೈತಿ ಸಮ್ಯಗ್ಗತಿಮಸ್ಯ ವಿಷ್ಣೋರ್ಜ್ಜನೋSಶುಭೋ ದೈವಮಿತ್ಯೇವ
ಮತ್ವಾ ।
ಹಿತ್ವಾ ಸ್ವಕಂ ಕರ್ಮ್ಮ ಗತಿಂ ಚ ತಾಮಸೀಂ ಪ್ರಯಾತಿ ತಸ್ಮಾತ್ ಕಾರ್ಯ್ಯಮೇವ ಸ್ವಕರ್ಮ್ಮ ॥೨೨.೭೯॥
ಈರೀತಿಯಾಗಿ ಮಾಡುವುದರಿಂದ ಅವರು ಒಳ್ಳೆಯ ಗತಿಯನ್ನು ಹೊಂದುತ್ತಾರೆ. ಆದರೆ ಕೆಟ್ಟ ಬುದ್ಧಿಯ
ಮನುಷ್ಯರು ಎಲ್ಲವನ್ನೂ ದೇವತೆಗಳೇ ಮಾಡಿಸುತ್ತಾರೆ(ದೈವವೇ ಕರ್ತೃ) ಎನ್ನುತ್ತಾ, ‘ಇಲ್ಲಿ ನಮಗೇನು
ಕೆಲಸ’ ಎಂದು ಸ್ವಕರ್ಮವನ್ನು ಬಿಟ್ಟು ಅನ್ಧಂತಮಸ್ಸನ್ನು ಹೊಂದುತ್ತಾರೆ. (ಅಂದರೆ ದೇವರು ಇದ್ದಾನೆ
ಎನ್ನುವ ವಿಶ್ವಾಸಕ್ಕಿಂತ, ಸೋಮಾರಿತನಕ್ಕೆ ಪೋಷಕವಾಗಿ ಸರ್ವಕರ್ತೃತ್ವ ವಾದವನ್ನು ಕೆಲವರು
ಬಳಸುತ್ತಾರೆ. ಅಂತವರು ಅನ್ಧಂತಮಸ್ಸನ್ನು ಹೊಂದುತ್ತಾರೆ). ಹೀಗಾಗಿ ಜೀವರು ಸ್ವಕರ್ಮವನ್ನು
ಮಾಡಲೇಬೇಕು. (ಅದರಿಂದ ರಿಯಾಯಿತಿ ಇಲ್ಲ).
ಜ್ಞಾತವ್ಯಂ ಚೈವಾಸ್ಯ
ವಿಷ್ಣೋರ್ವಶತ್ವಂ ಕರ್ತ್ತವ್ಯಂ ಚೈವಾsತ್ಮನಃ ಕಾರ್ಯ್ಯಕರ್ಮ್ಮ ।
ಪ್ರತ್ಯಕ್ಷೈಷಾ ಕರ್ತ್ತೃತಾ
ಜೀವಸಂಸ್ಥಾ ತಥಾSSಗಮಾದನುಮಾನಾಚ್ಚ ಸರ್ವಮ್ ॥೨೨.೮೦॥
ಪರಮಾತ್ಮನಿಗೆ ಜಗವೆಲ್ಲವೂ ಅಧೀನವಾಗಿದೆ ಎಂದು ತಿಳಿಯಲೇಬೇಕು ಮತ್ತು ತಾನು ಮಾಡಬೇಕಾದ ಕರ್ತವ್ಯಗಳ
ಬಗೆಗೆ ಎಚ್ಚರವಾಗಿದ್ದು ಅದನ್ನು ಮಾಡಬೇಕು. ಜೀವನಲ್ಲಿ ಇರುವ ಕರ್ತೃತ್ವವು
ಪ್ರತ್ಯಕ್ಷಗೋಚರವಾಗಿದೆ. ಅಷ್ಟೇ ಅಲ್ಲ, ಆಗಮ-ಅನುಮಾನ(logic)ದಿಂದಲೂ,
ಪರಮಾತ್ಮನಲ್ಲಿರುವ ಕರ್ತೃತ್ವವು, ಪರಮಾತ್ಮನ ವಶತ್ವವು, ಎಲ್ಲವೂ ಕೂಡಾ ಸಿದ್ಧವಾಗಿದೆ.
ವಿಷ್ಣೋರ್ವಶೇ ತನ್ನ
ಹೇಯಂ ದ್ವಯಂ ಚ ಜಾನನ್ ವಿದ್ವಾನ್ ಕುರುತೇ ಕಾರ್ಯ್ಯಕರ್ಮ್ಮ ।
ತತ್ಪ್ರೇರಕಂ ವಿಷ್ಣುಮೇವಾಭಿಜಾನನ್ ಭವೇತ್ ಪ್ರಮಾಣತ್ರಿತಯಾನುಗಾಮೀ ॥೨೨.೮೧॥
ಪರಮಾತ್ಮನ ಕರ್ತೃತ್ವವನ್ನಾಗಲೀ, ಜೀವನ ಕರ್ತೃತ್ವವನ್ನಾಗಲೀ ತಿರಸ್ಕರಿಸಲು ಬರುವುದಿಲ್ಲ. ಅವೆರಡೂ
ನಾರಾಯಣನ ವಶದಲ್ಲಿಯೇ ಇದೆ. ಅದರಿಂದಾಗಿ ಈ ಎರಡನ್ನೂ ತಿಳಿಯುತ್ತಾ,
ಒಬ್ಬ ಜ್ಞಾನಿಯು ತನ್ನ ಪಾಲಿಗೆ ಬಂದ ಕರ್ಮವನ್ನು ಮಾಡುತ್ತಾನೆ. ನಾರಾಯಣ ‘ಪ್ರೇರಿಸುತ್ತಾನೆ’ ಎನ್ನುವುದಕ್ಕಾಗಿ
ಮೂರು ಪ್ರಮಾಣಗಳನ್ನು ಅವನು ಅನುಸರಿಸುತ್ತಾನೆ. [ಪ್ರತ್ಯಕ್ಷ, ಅನುಮಾನ,
ಆಗಮ-ಇವು ಮೂರನ್ನೂ ಕೂಡಾ ಅನುಸರಿಸಿಕೊಂಡು ಹೋಗುತ್ತಾನೆ. ಜೀವನದಲ್ಲಿ ಈ ಮೂರಕ್ಕೇ ಪ್ರಾಮುಖ್ಯತೆ
ಇರುವುದು. ಯಾವುದೇ ವಸ್ತುವನ್ನು ತಿಳಿಯಬೇಕೆಂದರೆ ಇವು ಮೂರರಿಂದಲೇ ತಿಳಿಯಬೇಕು].
ಪೂರ್ಣ್ಣಂ ಪ್ರಮಾಣಂ ತತ್ತ್ರಯಂ ಚಾವಿರೋಧೇನೈಕತ್ರಸ್ಥಂ ತತ್ ತ್ರಯಂ ಚಾವಿರೋಧಿ ।
ಪೃಥಙ್ ಮದ್ಧ್ಯಂ ಚಾಪ್ರಮಾಣಂ ವಿರೋಧಿ ಸ್ಯಾತ್ ತತ್ ತಸ್ಮಾತ್ ತ್ರಯಮೇಕತ್ರ ಕಾರ್ಯ್ಯಮ್॥೨೨.೮೨॥
ಈ ಮೂರೂ ಕೂಡಾ ವಿರೋಧವಿಲ್ಲದೇ ಒಂದೆಡೆ ಇದ್ದರೆ ಪೂರ್ತಿಯಾಗಿ
ಪ್ರಮಾಣವಾಗುತ್ತದೆ. ಕೇವಲ ಅನುಮಾನ/ಊಹೆ/ತರ್ಕ ಮಾತ್ರ ಇದ್ದರೆ ಅದು ಅಪ್ರಮಾಣ(ಕೇವಲ ತರ್ಕಕ್ಕೆ
ಅರ್ಥವಿಲ್ಲ). ಅದರಿಂದ ಈ ಮೂರನ್ನೂ ಒಂದೆಡೆ ಮಾಡಿಕೊಳ್ಳಬೇಕು. (ಒಂದು ವಿಚಾರದಲ್ಲಿ ಪ್ರತ್ಯಕ್ಷ-ಆಗಮ-ಅನುಮಾನ
ಈ ಮೂರರ ಸಮ್ಮತಿಯನ್ನು ಪಡೆದು ಮುಂದೆ ಹೋಗಬೇಕು. ಈ ಪರಸ್ಪರ ಆಲಂಬನೆ ಜೀವನವನ್ನು ಒಳ್ಳೆಯ
ಹಾದಿಯಲ್ಲಿ ಕೊಂಡೊಯ್ಯುತ್ತದೆ).
No comments:
Post a Comment