ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, May 29, 2022

Mahabharata Tatparya Nirnaya Kannada 22: 113-123

ಸ್ವತನ್ತ್ರತ್ವಂ ವಾಸುದೇವಸ್ಯ ಸಮ್ಯಕ್  ಪ್ರತ್ಯಕ್ಷತೋ ದೃಶ್ಯತೇ ಹ್ಯದ್ಯ ರಾಜನ್ ।

ಯಸ್ಮಾತ್ ಕೃಷ್ಣೋ ವ್ಯಜಯಚ್ಛಙ್ಕರಾದೀನ್ ಜರಾಸುತಾದೀನ್ ಕಾದಿವರೈರಜೇಯಾನ್ ॥೨೨.೧೧೩॥

 

ಯಾವ ಕಾರಣದಿಂದ ನಾರಾಯಣನ ಅವತಾರವಾಗಿರುವ ಶ್ರೀಕೃಷ್ಣನು ರುದ್ರಾದಿಗಳನ್ನು(ಬಾಣಾಸುರನ ಪ್ರಸಂಗದಲ್ಲಿ) ಗೆದ್ದಿರುವನೋ, ಬ್ರಹ್ಮ ಮೊದಲಾದವರ ವರಗಳಿಂದ ಅಜೇಯರಾಗಿರುವ ಜರಾಸಂಧ ಮೊದಲಾದವರನ್ನು ಗೆದ್ದಿರುವನೋ, ಆ ಕಾರಣದಿಂದ ಶ್ರೀಕೃಷ್ಣನ ಸ್ವಾತಂತ್ರ್ಯವು(ಸರ್ವಸ್ವಾಮಿತ್ವವು) ಪ್ರತ್ಯಕ್ಷವಾಗಿ ತೋರುತ್ತದಷ್ಟೇ.

 

ಬ್ರಹ್ಮಾದೀನಾಂ ಪ್ರಕೃತೇಸ್ತದ್ವಶತ್ವಂ ದೃಷ್ಟಂ ಹಿ ನೋ ಬಹುಶೋ ವ್ಯಾಸದೇಹೇ ।

ಪಾರಾಶರ್ಯ್ಯೋ ದಿವ್ಯದೃಷ್ಟಿಂ ಪ್ರದಾಯ ಸ್ವಾತನ್ತ್ರ್ಯಂ ನೋSದರ್ಶಯತ್ ಸರ್ವಲೋಕೇ ॥೨೨.೧೧೪॥

 

ಬ್ರಹ್ಮರುದ್ರಾದಿ ದೇವತೆಗಳು ಶ್ರೀಲಕ್ಷ್ಮೀದೇವಿಯ ಅಧೀನ. ಮಾತೆ ಶ್ರೀಲಕ್ಷ್ಮಿ ಪರಮಾತ್ಮನಿಗೆ ಅಧೀನ. ಇದನ್ನು ನಾವು ಬಹಳ ಬಾರಿ ವೇದವ್ಯಾಸರ ದೇಹದಲ್ಲಿ ಕಂಡಿದ್ದೇವೆ. ವೇದವ್ಯಾಸರು ನಮಗೆ ದಿವ್ಯದೃಷ್ಟಿಯನ್ನಿತ್ತು(ಅಲೌಕಿಕ ಜ್ಞಾನವನ್ನು ನೀಡಿ), ಸಮಸ್ತ ಲೋಕದಲ್ಲಿರುವ ತನ್ನ ಸ್ವಾತಂತ್ರ್ಯವನ್ನು ತೋರಿದರಷ್ಟೇ.

[ಪಾಂಡವರಿಗೆ ಈ ಹಿಂದೆ ಅನೇಕ ಬಾರಿ ಪರಮಾತ್ಮನ ವಿಶ್ವರೂಪದರ್ಶನ ವೇದವ್ಯಾಸರ ದೇಹದಲ್ಲಾಗಿದೆ. ಅಲ್ಲಿ ಕಂಡಿರುವುದನ್ನು ಭೀಮಸೇನ ಇಲ್ಲಿ ಯುಧಿಷ್ಟಿರನಿಗೆ ನನಪಿಸುತ್ತಿದ್ದಾನೆ.

ಭಗವಂತ ಯುದ್ಧಕಾಲದಲ್ಲಿ ತನ್ನ ವಿಶ್ವರೂಪ ದರ್ಶನ ಮಾಡಿ ಅರ್ಜುನನಿಗೆ ಗೀತೋಪದೇಶ ಮಾಡಿದ. ಮೇಲ್ನೋಟಕ್ಕೆ ನಮಗೆ ಗೀತೆ ಯುದ್ಧದ ಹಿನ್ನೆಲೆಯಲ್ಲಿ ಬಂದಂತೆ ಕಾಣುತ್ತದೆ. ಆದರೆ ಗೀತೆಗೆ ಇನ್ನೂ ವಿಸ್ತಾರವಾದ ಹಿನ್ನೆಲೆ ಇದೆ. ಗೀತೆಯನ್ನು ಕೇವಲ ಯುದ್ಧಭೂಮಿಯಲ್ಲಿ ಮಾತ್ರ ಉಪದೇಶ ಮಾಡಿರುವುದಲ್ಲ. ಹಿಂದೆ ಅನೇಕ ಬಾರಿ ಗೀತೋಪದೇಶವಾಗಿದೆ. ಅದಕ್ಕಾಗಿ ಅಲ್ಲಿ ಅರ್ಜುನ -  ‘ನಷ್ಟೋ ಮೋಹಃ ಸ್ಮೃತಿರ್ಲಬ್ಧಾ... – ಹಿಂದೆ ಕೇಳಿ ಮರೆತಿದ್ದು ನೆನಪಿಗೆ ಬಂದಿತು’ ಎಂದು ಹೇಳಿರುವುದು. ಪಾಂಡವರಿಗೆ ವೇದವ್ಯಾಸರ ದೇಹದಲ್ಲಿ ಬಹಳ ಬಾರಿ ವಿಶ್ವರೂಪ ದರ್ಶನವಾಗಿದೆ.  ಪರಮಾತ್ಮ ಎಲ್ಲವನ್ನೂ ನಿಯಂತ್ರಣ ಮಾಡುತ್ತಿದ್ದಾನೆ, ಅವನು ಸ್ವತಂತ್ರನಾಗಿದ್ದಾನೆ. ಎಲ್ಲೆಡೆ ಅವನ ನಿಯಮನವಿದೆ ಎನ್ನುವುದು ಮೊದಲೇ ತಿಳಿದಿರುವ ವಿಷಯ. ಅದನ್ನು ಸಂಕ್ಷಿಪ್ತವಾಗಿ ಭಗವಂತ ರಣಭೂಮಿಯಲ್ಲಿ ತೋರಿರುವುದು ಅಷ್ಟೇ].

 

ತಸ್ಮಾದ್ ರಾಜನ್ನಭಿನಿರ್ಯ್ಯಾಹಿ ಶತ್ರೂನ್ ಹನ್ತುಂ ಸರ್ವಾನ್ ಭೋಕ್ತುಮೇವಾಧಿರಾಜ್ಯಮ್ ।

ಏವಞ್ಚ ತೇ ಕೀರ್ತ್ತಿಧರ್ಮ್ಮೌ ಮಹಾನ್ತೌ ಪ್ರಾಪ್ಯೌ ರಾಜನ್ ವಾಸುದೇವಪ್ರಸಾದಾತ್ ॥೨೨.೧೧೫॥

 

ಆಕಾರಣದಿಂದ, ಎಲೈ ಧರ್ಮರಾಜನೇ, ರಾಜ್ಯವನ್ನು ಭೋಗಿಸಲು, ಶತ್ರುಗಳನ್ನು ಕೊಲ್ಲಲು ಈಗಲೇ ಹೊರಡು.(ಶಾಸ್ತ್ರೀಯವಾದ ಭೋಗ ಅನುಭವಿಸುವುದು ತಪ್ಪಲ್ಲ, ಅದನ್ನೇ ಭೀಮಸೇನ ಇಲ್ಲಿ ಹೇಳಿರುವುದು). ಹೀಗೆ ಮಾಡುವುದರಿಂದ ಪರಮಾತ್ಮನ ಅನುಗ್ರಹದಿಂದ ಪುಣ್ಯವೂ, ಕೀರ್ತಿಯೂ ನಿನ್ನದಾಗುತ್ತದೆ.    

 

ಏವಮುಕ್ತೋSಬ್ರವೀದ್ ಭೀಮಂ ಧರ್ಮ್ಮಪುತ್ರೋ ಯುಧಿಷ್ಠಿರಃ ।

ತ್ರಯೋದಶಾಬ್ದಸ್ಯಾನ್ತೇSಹಂ ಕುರ್ಯ್ಯಾಮೇವ ತ್ವದೀರಿತಮ್ ॥೨೨.೧೧೬॥

 

ಸತ್ಯಮೇತನ್ನ ಸನ್ದೇಹಃ ಸತ್ಯೇನಾSತ್ಮಾನಮಾಲಭೇ ।

ಲೋಕಾಪವಾದಭೀರುಂ ಮಾಂ ನಾತೋSನ್ಯದ್ ವಕ್ತುಮರ್ಹಸಿ ॥೨೨.೧೧೭॥

 

ಈರೀತಿಯಾಗಿ ಹೇಳಿದಾಗ, ಯುಧಿಷ್ಠಿರನು ಭೀಮಸೇನನನ್ನು ಕುರಿತು ಮಾತನಾಡಿದ: ಹದಿಮೂರು ವರ್ಷಗಳಾದ ಮೇಲೆ ನೀನು ಹೇಳಿದ್ದನ್ನು ಮಾಡಿಯೇ ಮಾಡುತ್ತೇನೆ.

ಇದು ಸತ್ಯಾ, ಇದರಲ್ಲಿ ಸಂದೇಹವೇ ಬೇಡ. ನಾನು ಖಂಡಿತ, ನನ್ನ ಆಣೆಯಾಗಿಯೂ ನೀನು ಹೇಳಿದ್ದನ್ನು ಮಾಡುತ್ತೇನೆ. ಲೋಕಾಪವಾದ ಬಾರದಿರಲಿ ಎಂದು ಈಗ ಅದನ್ನು ನಾನು ಮಾಡುವುದಿಲ್ಲ. ಹಾಗಾಗಿ ಇದಕ್ಕೆ ಹೊರತಾಗಿ ಇನ್ನು ನನ್ನನ್ನು ನೀನು ಪ್ರಚೋದನೆ ಮಾಡಬೇಡ.

 

ತುದಸೇ ಚಾತಿವಾಚಾ ಮಾಂ ಯದ್ಯೇವಂ ಭೀಮ ಮಾಂ ವದೇಃ ।

ತದೈವ ಮೇSತ್ಯಯಃ ಕಾರ್ಯ್ಯೋ ಹನ್ತವ್ಯಾಶ್ಚೈವ ಶತ್ರವಃ ॥೨೨.೧೧೮॥

 

ನೈತಾದೃಶೈರಿದಾನೀಂ ತು ವಾಕ್ಯೈರ್ಬಾಧಿತುಮರ್ಹಸಿ ।

ಭೀಷ್ಮದ್ರೋಣಾದಯೋSಸ್ತ್ರಜ್ಞಾ ನಿವಾರ್ಯ್ಯಾಶ್ಚ ಕಥಂ ಯುಧಿ ॥೨೨.೧೧೯॥

 

ಅತ್ಯಂತ ತೀಕ್ಷ್ಣವಾದ ಮಾತುಗಳಿಂದ ನೀನು ನನ್ನ ಮನಸ್ಸನ್ನು ಚುಚ್ಚಿ ಹೇಳುತ್ತಿರುವೆ. ಹದಿಮೂರು ವರ್ಷ ಕಳೆದಮೇಲೆ ಅವರು ತಮ್ಮ ಮಾತನ್ನು ಉಳಿಸಿಕೊಳ್ಳದಿದ್ದಲ್ಲಿ ಮತ್ತು ನಾನು ಅವರ ವಿರುದ್ಧ ಮೃದುವಾಗಿದ್ದರೆ, ಆಗ ನೀನು ನನ್ನನ್ನು ಅತಿಕ್ರಮಿಸಿ ಹೋಗತಕ್ಕದ್ದು. ಶತ್ರುಗಳೂ ಸಂಹರಿಸಲ್ಪಡತಕ್ಕದ್ದು. ಆದರೆ ಈಗ ಪ್ರತಿಜ್ಞಾವಧಿಗಿಂತ ಮೊದಲೇ, ತಿಂಗಳುಗಳನ್ನು ವರ್ಷವೆಂದು ಎಣಿಸಿ ಯುದ್ಧ ಮಾಡಬೇಕು ಎನ್ನುವ ನಿಷ್ಠುರವಾದ ಮಾತುಗಳಿಂದ ನನ್ನನ್ನು ಪೀಡಿಸಬೇಡ. ಶತ್ರುಗಳನ್ನು ಕೊಲ್ಲಬೇಕು ಎನ್ನುವುದು ನನಗೂ ತಿಳಿದಿದೆ. ಆದರೆ ಅಸ್ತ್ರವನ್ನು ಬಲ್ಲ ಭೀಷ್ಮ-ದ್ರೋಣಾಚಾರ್ಯ ಮೊದಲಾದವರನ್ನು ಹೇಗೆ ತಡೆಯಲು ಸಾಧ್ಯ?

 

ಪೂಜ್ಯಾಸ್ತೇ ಬಾಹುಯುದ್ಧೇನ ನ ನಿವಾರ್ಯ್ಯಾಃ ಕಥಞ್ಚನ ।

ಅಸ್ತ್ರಾಣಿ ಜಾನನ್ನಪಿ ಹಿ ನ ಪ್ರಯೋಜಯಸಿ ಕ್ವಚಿತ್ ॥೨೨.೧೨೦॥

 

ತಸ್ಮಾದ್ ತದೈವ ಗನ್ತವ್ಯಂ ವಿಜ್ಞಾತಾಸ್ತ್ರೇ ಧನಞ್ಜಯೇ ।

ಇತ್ಯುಕ್ತೋ ಭೀಮಸೇನಸ್ತು ಸ್ನೇಹಭಙ್ಗಭಯಾತ್ ತತಃ ॥೨೨.೧೨೧॥

 

ನೋವಾಚ ಕಿಞ್ಚಿದ್ ವಚನಂ ಸ್ವಾಭಿಪ್ರೇತಮವಾಪ್ಯ ಚ ।

ಅಭಿಪ್ರಾಯೋ ಹಿ ಭೀಮಸ್ಯ ನಿಶ್ಚಯೇನ ತ್ರಯೋದಶೇ ॥೨೨.೧೨೨॥

 

ಯುಧಿಷ್ಠಿರಸ್ಯ ರಾಜ್ಯಾರ್ತ್ಥಂ ಗಮನಾರ್ತ್ಥೇ ಪ್ರತಿಶ್ರವಃ ।

ಅನ್ಯಥಾSತಿಮೃದುತ್ವಾತ್ ಸ ನ ಗಚ್ಛೇದ್ ಭಿನ್ನಧೀಃ ಪರೈಃ ॥೨೨.೧೨೩॥

 

ಪೂಜ್ಯರಾದ ಅವರನ್ನು ಬಾಹುಯುದ್ಧಕ್ಕೆ ಕರೆಯಲು ಸಾಧ್ಯವಿಲ್ಲ. ನೀನು ಅಸ್ತ್ರಗಳನ್ನು ಬಲ್ಲವನಾದರೂ ಕೂಡ ಅದನ್ನು  ನೀನು ಪ್ರಯೋಗಿಸುವುದಿಲ್ಲ.

ಅದರಿಂದ ಅರ್ಜುನ ಅಸ್ತ್ರಗಳನ್ನೆಲ್ಲ ಬಲ್ಲವನಾದ ಮೇಲೆ, ಹದಿಮೂರು ವರ್ಷ ಕಳೆದಮೇಲೆ ನಾವು ಯುದ್ಧಕ್ಕೆ ತೆರಳಬೇಕು. ಈರೀತಿಯಾಗಿ ಹೇಳಲ್ಪಟ್ಟ ಭೀಮಸೇನನು ಯುಧಿಷ್ಠಿರನಿಗಿರುವ ಸ್ನೇಹ ನಾಶವಾಗಬಾರದು ಎನ್ನುವ ಕಾರಣಕ್ಕಾಗಿ ಮತ್ತೇನನ್ನೂ ಹೇಳಲಿಲ್ಲ.

ಭೀಮನ ಅಭಿಪ್ರಾಯವೂ ಕೂಡಾ ಯುಧಿಷ್ಠಿರ ಹದಿಮೂರನೇ ವರ್ಷದಲ್ಲಿಯಾದರೂ ಯುದ್ಧಮಾಡಲೀ ಎನ್ನುವುದೇ ಆಗಿತ್ತು. ಆದರೆ ಅತ್ಯಂತ ಮೃದುವಾಗಿರುವ ಧರ್ಮರಾಜ ಬೇರೊಬ್ಬರಿಂದ ಕೆಡಿಸಲ್ಪಟ್ಟ ಬುದ್ಧಿಯುಳ್ಳವನಾಗಿ ಯುದ್ಧ ಮಾಡದೇ ಇರುವ ಸಾಧ್ಯತೆಯೂ ಇತ್ತು.

[ಧರ್ಮರಾಜನ ಮೃದುತ್ವದ ದುರುಪಯೋಗ ಪಡೆದುಕೊಳ್ಳುವ ಪ್ರಯತ್ನ ಮುಂದೆ ಯುದ್ಧ ಕಾಲದಲ್ಲಿ ನಡೆಯುವುದನ್ನು ನಾವು ಕಾಣಬಹುದು. ಧೃತರಾಷ್ಟ್ರ ಸಂಜಯನ ಮೂಲಕ ಯುಧಿಷ್ಠಿರನ ಮನಸ್ಸನ್ನು ಬದಲಿಸುವ ಪ್ರಯತ್ನವನ್ನು ಮಾಡುತ್ತಾನೆ. ಆಗ ಅಲ್ಲಿ ಯುಧಿಷ್ಠಿರ ಭೀಮಸೇನ ಹೇಳಿದ ಮೇಲಿನ ಮಾತುಗಳನ್ನೇ ನಿಷ್ಟುರವಾಗಿ ಸಂಜಯನಿಗೆ ಹೇಳಿ ಅವನನ್ನು ಹಿಂದೆ ಕಳುಹಿಸುವುದನ್ನು ನಾವು ಕಾಣಬಹುದು]. 

No comments:

Post a Comment