ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, May 24, 2022

Mahabharata Tatparya Nirnaya Kannada 22: 89-95

 

ತಸ್ಮಾತ್ ಕಾರ್ಯ್ಯಂ ತೇನ  ಕ್ಲ್ ಪ್ತಂ ಸ್ವಕರ್ಮ್ಮ ತತ್ ಪೂಜಾರ್ತ್ಥಂ ತೇನ ತತ್ಪ್ರಾಪ್ತಿರೇವ ।

ಅತೋSನ್ಯಥಾ ನಿರಯಃ ಸರ್ವಥಾ ಸ್ಯಾತ್ ಸ್ವಕರ್ಮ್ಮ ವಿಪ್ರಸ್ಯ ಜಪೋಪದೇಶೌ ॥೨೨.೮೯॥

 

ವಿಷ್ಣೋರ್ಮ್ಮುಖಾದ್ ವಿಪ್ರಜಾತಿಃ ಪ್ರವೃತ್ತಾ ಮುಖೋತ್ಥಿತಂ ಕರ್ಮ್ಮ ತೇನಾಸ್ಯ ಸೋSದಾತ್ ।

ಬಾಹ್ವೋರ್ಜ್ಜಾತಃ ಕ್ಷತ್ರಿಯಸ್ತೇನ ಬಾಹ್ವೋಃ ಕರ್ಮ್ಮಾಸ್ಯ ಪಾಪಪ್ರತಿವಾರಣಂ ಹಿ ॥೨೨.೯೦॥

 

ಪರಮಾತ್ಮ  ಸ್ವತಂತ್ರನಾಗಿರುವುದರಿಂದ ಜೀವಯೋಗ್ಯತೆ ಇದ್ದರೂ ಕೂಡಾ, ಯೋಗ್ಯತೆಗೆ ಪೂರಕವಾಗಿ ಪ್ರಯತ್ನ  ಇರಬೇಕಾಗಿರುವುದರಿಂದ, ‘ಸ್ವಕರ್ಮವನ್ನು ಪರಮಾತ್ಮನ ಪ್ರೀತ್ಯರ್ಥ ಅವರವರು ಮಾಡಲೇಬೇಕು’.  ಕರ್ಮವನ್ನು ದೇವರಪೂಜೆ ಎಂದು ಮಾಡುವುದರಿಂದ ಭಗವಂತನನ್ನು ಹೊಂದುವುದೇ(ಮೋಕ್ಷ ಪಡೆಯುವುದೇ) ಪ್ರಯೋಜನ. ಹೀಗೆ ಮಾಡದೇ ಹೋದರೆ ನರಕ ಕಟ್ಟಿಟ್ಟ ಬುತ್ತಿ.

ಬ್ರಾಹ್ಮಣನಿಗೆ ಸ್ವಕರ್ಮ ಜಪ(ಅಧ್ಯಯನ) ಮತ್ತು ಉಪದೇಶ(ಅಧ್ಯಾಪನ). ವಿಷ್ಣುವಿನ ಮುಖದಿಂದ ಬ್ರಾಹ್ಮಣ ವರ್ಣ ಹುಟ್ಟಿತು. ಆಕಾರಣದಿಂದ ಮುಖದಿಂದ ಮಾಡಬಲ್ಲ ಕರ್ಮವನ್ನು ಬ್ರಾಹ್ಮಣನಿಗಾಗಿ ಭಗವಂತ ಕೊಟ್ಟ. ಕ್ಷತ್ರಿಯನು ಪರಮಾತ್ಮನ ತೊಳ್ಗಳಿಂದ ಹುಟ್ಟಿದ. ಅವನ ಕರ್ಮವು ಪಾಪವನ್ನು(ಪಾಪಿಷ್ಠರನ್ನು) ತಡೆಯುವಿಕೆ.

 

ಪ್ರವರ್ತ್ತನಂ ಸಾಧುಧರ್ಮ್ಮಸ್ಯ ಚೈವ ಮುಖಸ್ಯ ಬಾಹ್ವೋಶ್ಚಾತಿಸಾಮೀಪ್ಯತೋSಸ್ಯ ।

ಜಪೋಪದೇಶೌ ಕ್ಷತ್ರಿಯಸ್ಯಾಪಿ ವಿಷ್ಣುಶ್ಚಕ್ರೇ ಧರ್ಮ್ಮೌ ಯಜ್ಞಕರ್ಮ್ಮಾಪಿ ವಿಪ್ರೇ ॥೨೨.೯೧॥

 

ಧರ್ಮದ ಪ್ರವರ್ತನೆ – ಕ್ಷತ್ರಿಯರ ಕರ್ತವ್ಯ. ಮುಖ ಮತ್ತು ಬಾಹು ಸಮೀಪವಾಗಿವೆ, ಅದರಿಂದಾಗಿ ಭಗವಂತ ಕ್ಷತ್ರಿಯರಿಗೂ ಕೂಡಾ ಜಪ ಹಾಗೂ ಉಪದೇಶಗಳನ್ನು ಧರ್ಮವನ್ನಾಗಿ ಮಾಡಿದನು. ಯಜ್ಞಕರ್ಮವನ್ನು ಬ್ರಾಹ್ಮಣರಿಗೆ ಧರ್ಮವಾಗಿ ಭಗವಂತ ಕಲ್ಪಿಸಿದ.

 

ವೈಶ್ಯೋ ಯಸ್ಮಾದೂರುಜಸ್ತೇನ ತಸ್ಯ ಪ್ರಜಾವೃದ್ಧಿಸ್ತಜ್ಜಕರ್ಮ್ಮೈವ ಧರ್ಮ್ಮಃ ।

ತತ್ಸಾದೃಶ್ಯಾತ್ ಸ್ಥಾವರಾಣಾಂ ಚ ವೃದ್ಧಿಂ ಕರೋರೂರ್ವೋಃ ಸನ್ನಿಕೃಷ್ಟತ್ವಹೇತೋಃ ॥೨೨.೯೨॥

 

ವಾರ್ತ್ತಾತ್ಮಕಂ ಕರ್ಮ್ಮ ಧರ್ಮ್ಮಂ ಚಕಾರ ವಿಷ್ಣುಸ್ತಸ್ಯೈವಾಙ್ಘ್ರಿಜಃ ಶೂದ್ರ ಉಕ್ತಃ ।

ಗತಿಪ್ರಧಾನಂ ಕರ್ಮ್ಮ ಶುಶ್ರೂಷಣಾಖ್ಯಂ ಸಾದೃಶ್ಯತೋ ಹಸ್ತಪದೋಸ್ತಥೈವ ॥೨೨.೯೩॥

 

ಹಸ್ತೋದ್ಭವಂ ಕರ್ಮ್ಮ ತಸ್ಯಾಪಿ ಧರ್ಮ್ಮಃ ಸನ್ತಾನವೃದ್ಧಿಶ್ಚ ಸಮೀಪಗತ್ವಾತ್ ।  

ಭುಜಾವುರೋ ಹೃದಯಂ ಯದ್ ಬಲಸ್ಯ ಜ್ಞಾನಸ್ಯ ಚ ಸ್ಥಾನಮತೋ ನೃಪಾಣಾಮ್ ॥೨೨.೯೪॥

 

ಬಲಂ ಜ್ಞಾನಂ ಚೋಭಯಂ ಧರ್ಮ್ಮ ಉಕ್ತಃ ಪಾಣೌ ಕೃತೀನಾಂ ಕೌಶಲಂ ಕೇವಲಂ ಹಿ ।

ತಸ್ಮಾತ್ ಪಾಣ್ಯೋರೂರುಪದೋರುಪಸ್ಥಿತೇರ್ವಿಟ್ಛೂದ್ರಕೌ ಕರ್ಮ್ಮಣಾಂ ಕೌಶಲೇತೌ ॥೨೨.೯೫॥

 

ವೈಶ್ಯರು ಯಾವ ಕಾರಣದಿಂದ ಭಗವಂತನ ತೊಡೆಯಿಂದ ಹುಟ್ಟಿರುವರೋ, ಅದರಿಂದ ಅವರಿಗೆ ಪ್ರಜೆಗಳ ಅಭಿವೃದ್ಧಿಯೇ ಧರ್ಮವಾಗಿ ಹೇಳಲ್ಪಟ್ಟಿದೆ. ಗಿಡ, ಮರ ಇವುಗಳ ವೃದ್ಧಿಯನ್ನು ಭಗವಂತ ವೈಶ್ಯರ ಧರ್ಮವನ್ನಾಗಿರಿಸಿದ. ಕೈ ಮತ್ತು ತೊಡೆಗಳ ಹತ್ತಿರವಿರುವುದರಿಂದ ನಾರಾಯಣನು ವೈಶ್ಯನಿಗೆ ವ್ಯಾಪಾರ-ವಹಿವಾಟು ಆಯಾತ-ನಿರ್ಯಾತ [ಪ್ರತಿಯೊಬ್ಬರ ಜೀವಿಕೆಗೆ(ವೃತ್ತಿಗೆ) ಅನುಕೂಲವಾದ ಕರ್ಮ-ವಾರ್ತಾ] ಇವುಗಳನ್ನು ಧರ್ಮವನ್ನಾಗಿ ಮಾಡಿದ. ಶೂದ್ರನು ಪರಮಾತ್ಮನ ಕಾಲಿನಿಂದ ಹುಟ್ಟಿದ ಎಂದು ಹೇಳುತ್ತಾರೆ. ಅವನಿಗೆ ಓಡಾಡುವುದೇ ಪ್ರಧಾನ. ನಡಿಗೆಯೇ ಪ್ರಧಾನವಾಗಿರುವ ಕರ್ಮ ಶುಶ್ರೂಷಣ(service). ಅವನೂ ಕೂಡಾ ಹಸ್ತದಿಂದ ಉಂಟಾಗುವ ಕರ್ಮವನ್ನು ಮಾಡಬೇಕು. ಸಂತಾನ ವೃದ್ಧಿಯೂ ಕೂಡಾ  ಶೂದ್ರನ ಮುಖ್ಯ ಕರ್ತವ್ಯ.

ಭುಜ, ತೊಡೆ, ಹೃದಯ ಇದು ಬಲ ಹಾಗೂ ಜ್ಞಾನ ಎಲ್ಲವುದಕ್ಕೂ ಕಾರಣವಾಗಿದೆ. ಕ್ಷತ್ರಿಯರು ಭುಜದ ಸ್ಥಾನದಲ್ಲಿರುವುದರಿಂದಾಗಿ ನಿರಂತರ ರಕ್ಷಣೆ ಮಾಡುವುದು ಅವರ ಕರ್ತವ್ಯ. ತೋಳುಗಳ ನಡುವೆ ಹೃದಯವಿದೆ. ಇದು ಬಲಕ್ಕೂ ಆಸರೆ, ಜ್ಞಾನಕ್ಕೂ ಆಸರೆ. ಹೀಗಾಗಿ ಬಲ ಹಾಗೂ ಜ್ಞಾನ ವಿಶೇಷತಃ ಕ್ಷತ್ರಿಯರಲ್ಲಿ ಇರಬೇಕಾಗಿರುವುದು. (ಎಲ್ಲಾ ಇಂದ್ರಿಯಗಳ ಸಂವೇದನೆ ಆಗುವುದು ಹೃದಯದಲ್ಲಷ್ಟೇ). ಹೀಗಾಗಿ ಬಲ ಹಾಗೂ ಜ್ಞಾನ ಎರಡೂ ಕ್ಷತ್ರಿಯನ ಧರ್ಮವಾಗಿದೆ. ಜಾಣ್ಮೆಯ ಕೆಲಸ ಕೈಯದ್ದು. ಕೈಗಳಿಗೂ, ತೊಡೆ ಮತ್ತು ಕಾಲುಗಳಿಗೂ ಸಾಮಿಪ್ಯವಿರುವುದರಿಂದ ವೈಶ್ಯ ಹಾಗೂ ಶೂದ್ರರನ್ನು  ಹಸ್ತಯೋಗ್ಯವಾದ ಕರ್ಮದಲ್ಲಿ ನಿಪುಣರನ್ನಾಗಿ ಭಗವಂತ ಮಾಡಿದ.

No comments:

Post a Comment