ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, May 14, 2022

Mahabharata Tatparya Nirnaya Kannada 22: 83-88

 

ಅಜ್ಞಃ ಪ್ರತ್ಯಕ್ಷಂ ತ್ವಪಹಾಯೈವ ದೈವಂ ಮತ್ವಾ ಕರ್ತ್ತೃ ಸ್ವಾತ್ಮಕರ್ಮ್ಮ ಪ್ರಜಹ್ಯಾತ್ ।

ವಿದ್ವಾನ್ ಜೀವಂ ವಿಷ್ಣುವಶಂ ವಿದಿತ್ವಾ ಕರೋತಿ ಕರ್ತ್ತವ್ಯಮಜಸ್ರಮೇವ ॥೨೨.೮೩॥

 

ಒಬ್ಬ ಮೂಢನು ತನ್ನ ಅನುಭವವನ್ನು ಬದಿಗಿಟ್ಟು ದೈವವನ್ನೇ ಕರ್ತೃ ಎಂದು ತಿಳಿದು ತಾನು ಮಾಡಬೇಕಾದ ಕರ್ತವ್ಯವನ್ನು ಬಿಡುತ್ತಾನೆ. ಆದರೆ ಜ್ಞಾನಿಯೊಬ್ಬನು ಜೀವನು ವಿಷ್ಣುವಶನಾಗಿದ್ದಾನೆ ಎಂದು ತಾನು ಮಾಡಬೇಕಾದ ಕರ್ತವ್ಯವನ್ನು ನಿರಂತರವಾಗಿ ಮಾಡುತ್ತಾನೆ.  

 

ಸ್ವಭಾವಾಖ್ಯಾ ಯೋಗ್ಯತಾ ಯಾ ಹಠಾಖ್ಯಾ ಯಾSನಾದಿಸಿದ್ಧಾ ಸರ್ವಜೀವೇಷು ನಿತ್ಯಾ ।

ಸಾ ಕಾರಣಂ ತತ್ ಪ್ರಥಮಂ ತು ದ್ವಿತೀಯಮನಾದಿ ಕರ್ಮ್ಮೈವ ತಥಾ ತೃತೀಯಃ ॥೨೨.೮೪॥

 

ಜೀವಪ್ರಯತ್ನಃ ಪೌರುಷಾಖ್ಯಸ್ತದೇತತ್ ತ್ರಯಂ ವಿಷ್ಣೋರ್ವಶಗಂ ಸರ್ವದೈವ ।

ಸ ಕಸ್ಯಚಿನ್ನ ವಶೇ ವಾಸುದೇವಃ ಪರಾತ್ ಪರಃ ಪರಮೋSಸೌ ಸ್ವತನ್ತ್ರಃ             ॥೨೨.೮೫॥

 

ಸ್ವಭಾವವನ್ನು ‘ಯೋಗ್ಯತಾ ಎಂದು ಕರೆಯುತ್ತಾರೆ. ಅದು ‘ಹಠ’ ಎನ್ನುವ ಹೆಸರನ್ನೂ ಪಡೆದುಕೊಂಡಿದೆ. ಅದು ಅನಾದಿಕಾಲದಿಂದ ಸಿದ್ಧವಾಗಿದೆ ಮತ್ತು  ಎಲ್ಲಾ ಜೀವರಲ್ಲಿ ನಿತ್ಯವಾಗಿದೆ. ಅದು ಮೊದಲ ಕಾರಣ. ಎರಡನೆಯದ್ದು ಅನಾದಿಕರ್ಮ. [ಒಬ್ಬ ಪುರುಷನ ಬೆಳವಣಿಗೆಯಲ್ಲಿ ಹಠ(ಜೀವಯೋಗ್ಯತೆ/ಸ್ವಭಾವ) ಎನ್ನುವುದು ಮೊದಲನೇ ಕಾರಣ. ಎರಡನೆಯದು ಅನಾದಿಕಾಲದಿಂದ ನಡೆದುಕೊಂಡು ಬಂದ ಮಾನಸಿಕ ಕರ್ಮ. ಈ ಕರ್ಮದಿಂದ  ಜೀವನಿಗೆ ಜನ್ಮ ಬರುತ್ತದೆ. ಆ ಜನ್ಮದಲ್ಲಿ ಮಾಡಿದ ಪುಣ್ಯ-ಪಾಪಗಳು ಇನ್ನೊಂದು ಜನ್ಮಕ್ಕೆ ಕಾರಣವಾಗುತ್ತಾ ಹೋಗುತ್ತಿರುತ್ತದೆ] ಮೂರನೆಯದು ಜೀವರ ಪ್ರಯತ್ನ. ಅದನ್ನು ಪೌರುಷ(ಪುರುಷ ಪ್ರಯತ್ನ) ಎಂದು ಕರೆಯುತ್ತಾರೆ. ಇವು ಮೂರೂ ಕೂಡಾ (ಜೀವಸ್ವಭಾವ,  ಅನಾದಿಕರ್ಮ ಮತ್ತು ಜೀವ ಪ್ರಯತ್ನ) ವಿಷ್ಣುವಿನ ವಶದಲ್ಲಿದೆ ಮತ್ತು ಯಾವಾಗಲೂ ಇರುತ್ತದೆ. ಆದರೆ ಪರಮಾತ್ಮನು ಯಾರ ವಶದಲ್ಲಿಯೂ ಇಲ್ಲ.

[ಈಕುರಿತು ಮಹಾಭಾರತದಲ್ಲಿಯೂ ವಿವರಣೆ ಕಾಣಸಿಗುತ್ತದೆ: ‘ಯಶ್ಚ ದಿಷ್ಟಪರೋ ಲೋಕೇ ಯಶ್ಚಾಪಿ ಹಠವಾದಿಕಃ । ಉಭಾವಪಿ ಶಠಾವೇತೌ ಕರ್ಮಬುದ್ಧಿಃ ಪ್ರಶಸ್ಯತೇ’ (ವನಪರ್ವ ೩೨-೧೩). ಯಾರು ದೈವಮಾತ್ರ ಕ್ರಿಯೆಯನ್ನು ಮಾಡುತ್ತದೆ ಎಂದು ನಂಬಿಕೊಂಡಿರುತ್ತಾನೋ, ಯಾರು ಜೀವ ಮಾತ್ರ ಕರ್ತೃ ಎಂದು ತಿಳಿದಿರುತ್ತಾನೋ, ಅವರಿಬ್ಬರೂ ಕೂಡಾ ಮೂರ್ಖರು.  ಇವರಿಬ್ಬರ ನಡುವೆ ಯಾರಿಗೆ ತಾನೂ ಕರ್ತವ್ಯ ನಿರ್ವಹಿಸಬೇಕು ಎನ್ನುವ ಬುದ್ಧಿಯಿದೆ, ಅವನು ಒಳ್ಳೆಯ ಗತಿಯನ್ನು ಪಡೆಯುತ್ತಾನೆ. ‘ಅಕಸ್ಮಾದಿಹ  ಯಃ  ಕಶ್ಚಿದರ್ಥಂ ಪ್ರಾಪ್ನೋತಿ ಪೂರುಷಃ । ತಂ ಹಠೇನೇತಿ ಮನ್ಯನ್ತೇ ಸ ಹಿ ಯತ್ನೋ ನ  ಕಸ್ಯಚಿತ್ (೧೬), ‘ಸರ್ವಮೇವ ಹಠೇನೈಕೇ ದೈವೇನೈಕೇ ವದನ್ತ್ಯುತ ।  ಪುಂಸಃ ಪ್ರಯತ್ನಜಂ ಕೇಚಿದ್ ದೈವಮೇವ ವಿಶಿಷ್ಯತೇ’ (೩೨). ಕೆಲವರು ಹಠದಿಂದಲೇ ಎಲ್ಲವೂ ಸಿಗುವುದು ಎಂದು ಹೇಳುತ್ತಾರೆ(ಪುರುಷ ಪ್ರಯತ್ನದಿಂದ ಏನುಬೇಕಾದರೂ ಆಗುತ್ತದೆ ಎಂದು ತಿಳಿಯುತ್ತಾರೆ). ಕೆಲವರೂ ಎಲ್ಲವೂ ಕೇವಲ ದೇವರು ಮಾಡುವುದು ಎಂದು ಹೇಳುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿರುವುದು ದೈವವೇ. ‘ಏವಂ  ಹಠಾಚ್ಚ ದೈವಾಚ್ಚ ಸ್ವಭಾವಾತ್ ಕರ್ಮಣಸ್ತಥಾ । ಯಾನಿ ಪ್ರಾಪ್ನೋತಿ ಪುರುಷಸ್ತತ್ಫಲಂ ಪೂರ್ವಕರ್ಮಣಾಮ್’(೨೦) ದೈವ, ಹಠ, ಕರ್ಮ -ಇವು ಮೂರೂ ವಿಷ್ಣು ವಶ. ಒಂದು ಜೀವನ ಸಂಪನ್ನವಾಗಬೇಕಾದರೆ ಅಲ್ಲಿ ಈ ಮೂರೂ ಇರುತ್ತದೆ.]

ಜೀವನ ಪ್ರಯತ್ನವನ್ನು ಪೌರುಷ ಎಂದು ಕರೆಯುತ್ತಾರೆ. ಜೀವ ಯೋಗ್ಯತೆಯನ್ನು ಹಠ ಎಂದು ಕರೆಯುತ್ತಾರೆ. ಮನಸ್ಸು ಅನಾಧಿ. ಈ ಅನಾಧಿಯಾಗಿರುವ ಮನಸ್ಸಿನ ಚರ್ಯೆಗಳೂ ಕೂಡಾ ಅನಾಧಿಯಾಗಿರುತ್ತವೆ. ಅನಾಧಿಯಾದ ಮನಸ್ಸು, ಜೀವಪ್ರಯತ್ನ ಎಂದು ಕರೆಸಿಕೊಳ್ಳುವ ಪೌರುಷ ಮತ್ತು ಜೀವಯೋಗ್ಯತೆ(ಹಠ) ಈ ಮೂರೂ ಕೂಡಾ ನಾರಾಯಣನಿಗೆ ಯಾವಾಗಲೂ ವಶವಾಗಿವೆ.(ದೇವರು ಇದನ್ನು ಸೃಷ್ಟಿ ಮಾಡುವುದಿಲ್ಲ, ಆದರೆ ತನ್ನ ಅಧೀನದಲ್ಲಿಟ್ಟುಕೊಂಡಿರುತ್ತಾನೆ. ಅವನು ಅದನ್ನು ಬದಲಿಸುವುದೂ ಇಲ್ಲ). ಅಂತಹ  ನಾರಾಯಣನು ಯಾರ ವಶದಲ್ಲಿಯೂ ಇಲ್ಲ. ಅವನು ಉತ್ಕೃಷ್ಟರಿಗಿಂತ ಉತ್ಕೃಷ್ಟ. ಎಲ್ಲರಿಗೂ ಮಿಗಿಲು. ಅವನು ತನ್ನ ಅಧೀನದಲ್ಲಿ ತಾನಿರುತ್ತಾನೆ.

 

ಹಠಶ್ಚಾಸೌ ತಾರತಮ್ಯಸ್ಥಿತೋ ಹಿ ಬ್ರಹ್ಮಾಣಮಾರಭ್ಯ ಕಲಿಶ್ಚ ಯಾವತ್ ।

ಹಠಾಚ್ಚ ಕರ್ಮ್ಮಾಣಿ ಭವನ್ತಿ ಕರ್ಮ್ಮಜೋ ಯತ್ನೋ ಯತ್ನೋ ಹಠಕರ್ಮ್ಮಪ್ರಯೋಕ್ತಾ ॥೨೨.೮೬॥

 

ಜೀವಯೋಗ್ಯತೆ ಏನಿದೆ, ಅದು ತರತಮ ಭಾವದಲ್ಲಿದೆ. ಜೀವೊತ್ತಮನಾಗಿರುವ ಬ್ರಹ್ಮನಿಂದ ಆರಂಭಿಸಿ ಕಲಿಯ ತನಕ ಈ ಜೀವ ಯೋಗ್ಯತೆ ಎನ್ನುವುದು ಉತ್ತಮ-ಮಧ್ಯಮ-ಅದಮ ಮೊದಲಾದ ಏರಿಳಿತಗಳಿಂದ ಕೂಡಿದೆ. ಜೀವಯೋಗ್ಯತೆಗೆ ಅನುಗುಣವಾಗಿ ಕರ್ಮಗಳು ಸಾಗುತ್ತವೆ. ಅಂತಹ ಕರ್ಮದಿಂದ ಯತ್ನವು ರೂಪಿತವಾಗುತ್ತದೆ. ಹಠದ ಕ್ರಮಗಳನ್ನು ನಡೆಸಿಕೊಡತಕ್ಕಂಥದ್ದು ಯತ್ನ. (‘ಜೀವಸ್ವಭಾವ’ಕ್ಕೆ ಅನುಗುಣವಾದ ‘ಪ್ರಯತ್ನ’ ಎನ್ನುವುದು  ಜೀವಕರ್ಮದ ವಿಕಾಸಕ್ಕೆ ಕಾರಣವಾಗುತ್ತದೆ. ಹಾಗಾಗಿ ಇವೆರಡರ ನಡುವೆ ಅವಲಂಬನೆ ಎನ್ನುವುದಿದೆ.)

 

ವಿನಾ ಯತ್ನಂ ನ ಹಠೋ ನಾಪಿ ಕರ್ಮ್ಮ ಫಲಪ್ರದೌ ವಾಸುದೇವೋSಖಿಲಸ್ಯ ।

ಸ್ವಾತನ್ತ್ರ್ಯಶಕ್ತೇರ್ವಿನಿಯಾಮಕೋ ಹಿ ತಥಾSಪ್ಯೇತಾನ್ ಸೋSಪ್ಯಪೇಕ್ಷೈವ ಯುಞ್ಜೇತ್ ॥೨೨.೮೭॥

 

ಪ್ರಯತ್ನ ಇಲ್ಲದೇ ಜೀವಯೋಗ್ಯತೆಯಾಗಲೀ, ಅನಾಧಿಕರ್ಮವಾಗಲೀ ಫಲವನ್ನು ಕೊಡುವುದಿಲ್ಲ. (ಹೀಗಾಗಿ ಜೀವಯೋಗ್ಯತೆಗೆ ಅನುಗುಣವಾಗಿ ಎಲ್ಲವೂ ನಡೆಯುತ್ತದೆ ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಪ್ರಯತ್ನಪಡಲೇಬೇಕು). ವಾಸುದೇವನು ಎಲ್ಲಾ ಸ್ವಾತಂತ್ರ್ಯ ಶಕ್ತಿಗೂ ಕೂಡಾ ನಿಯಾಮಕನಷ್ಟೇ. ಆದರೂ ಅವನು ಜೀವಪ್ರಯತ್ನ, ಜೀವಯೋಗ್ಯತೆ, ಅನಾಧಿಕರ್ಮ – ಇವುಗಳನ್ನು ಅಪೇಕ್ಷಿಸಿಕೊಂಡೇ ಆಯಾ ಗತಿಯಲ್ಲಿ ಪ್ರಯುಕ್ತವಾಗುವಂತೆ ಮಾಡುತ್ತಾನೆ.

 

[ಹಾಗಿದ್ದರೆ ಭಗವಂತ ಅಸ್ವತಂತ್ರನೇ-ಎಂದರೆ ಹೇಳುತ್ತಾರೆ: ]

 

ಏತಾನಪೇಕ್ಷ್ಯೈವ ಫಲಂ ದದಾನೀತ್ಯಸ್ಯೈವ ಸಙ್ಕಲ್ಪ ಇತಿ ಸ್ವತನ್ತ್ರತಾ ।

ನಾಸ್ಯಾಪಗಚ್ಛೇತ್ ಸ ಹಿ ಸರ್ವಶಕ್ತಿರ್ನ್ನಾಶಕ್ತತಾ ಕ್ವಚಿದಸ್ಯ ಪ್ರಭುತ್ವಾತ್ ॥೨೨.೮೮॥

 

‘ಇವುಗಳನ್ನು ಅವಲಂಭಿಸಿಯೇ ಫಲವನ್ನು ಕೊಡುತ್ತೇನೆ’ ಎನ್ನುವುದು ಭಗವಂತನದ್ದೇ ಸಂಕಲ್ಪ. ಅದನ್ನೇ ಸ್ವಾತಂತ್ರ್ಯ(self reliant) ಎಂದು ಕರೆಯುತ್ತಾರೆ. ಈರೀತಿಯ ಸ್ವಾತಂತ್ರ್ಯ ಏನಿದೆ, ಅದು ಎಂದೂ ಹೊರಟು ಹೋಗುವುವಂತದ್ದಲ್ಲ. ಭಗವಂತ ಎಲ್ಲವನ್ನೂ ತನ್ನ ಮುಷ್ಟಿಯಲ್ಲಿಟ್ಟುಕೊಂಡಿದ್ದಾನೆ. ಅವನ ಸಾಮರ್ಥ್ಯದಲ್ಲಿ ಅಶಕ್ತತೆ ಎನ್ನುವುದು ಇಲ್ಲವೇ ಇಲ್ಲ.


No comments:

Post a Comment