ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, May 25, 2022

Mahabharata Tatparya Nirnaya Kannada 22: 96-106

 

ಪ್ರಾಧಾನ್ಯತೋ ಧರ್ಮ್ಮವಿಶೇಷ ಏಷ ಸಾಮಾನ್ಯತಃ ಸರ್ವಮೇವಾಖಿಲಾನಾಮ್ ।

ವಯಂ ಹಿ ದೇವಾಸ್ತೇನ ಸರ್ವಂ ಹಿ ಕರ್ಮ್ಮ ಪ್ರಾಯೇಣ ನೋ ಧರ್ಮ್ಮತಾಮೇತಿ ಶಶ್ವತ್ ॥೨೨.೯೬॥

 

ಪ್ರಧಾನವಾದ ಧರ್ಮಗಳು ಇವು. ಸಾಮಾನ್ಯವಾದ ಧರ್ಮ ಅವರವರ ಯೋಗ್ಯತೆಗೆ ಅನುಗುಣವಾಗಿ ಎಲ್ಲವೂ ಎಲ್ಲರಿಗೂ ಇದೆ. (ಬ್ರಾಹ್ಮಣನಿಗೆ ಜ್ಞಾನ ಪ್ರಧಾನ ಧರ್ಮವಾದರೆ ಶುಶ್ರೂಷೆ ಸಾಮಾನ್ಯ ಧರ್ಮ. ಶೂದ್ರನಿಗೆ ಶುಶ್ರೂಷೆ ಪ್ರಧಾನ ಧರ್ಮವಾದರೆ ಜ್ಞಾನವನ್ನು ಪಡೆಯುವುದು ಸಾಮಾನ್ಯ ಧರ್ಮ, ಇತ್ಯಾದಿ). ವಿಶೇಷತಃ ದೇವತೆಗಳಾದ ನಮಗೆ ಎಲ್ಲಾ ಧರ್ಮವೂ ಇದೇ. (ಅದರಿಂದಾಗಿ ನಾವು ಈ ಯುದ್ಧ ಎನ್ನುವ ಕರ್ಮವನ್ನು ಮಾಡಬೇಕು. ಯುದ್ಧದ ಮೂಲಕ ಧರ್ಮದ ಸ್ಥಾಪನೆಯನ್ನು ಮಾಡಬೇಕು. ಇದರಲ್ಲಿ ಯಾವುದೇ ಪಲಾಯನವಾದವಿಲ್ಲ ಎನ್ನುವ ಧ್ವನಿ).

 

ಏತೈರ್ದ್ಧರ್ಮ್ಮೈರ್ವಿಷ್ಣುನಾ ಪೂರ್ವಕ್ಲ್ ಪ್ತೈಃ ಸರ್ವೈರ್ವರ್ಣ್ಣೈರ್ವಿಷ್ಣುರೇವಾಭಿಪೂಜ್ಯಃ ।

ತದ್ಭಕ್ತಿರೇವಾಖಿಲಾನಾಂ ಚ ಧರ್ಮ್ಮೋ ಯಥಾಯೋಗ್ಯಂ ಜ್ಞಾನಮಸ್ಯಾಪಿ ಪೂಜಾ ॥೨೨.೯೭॥

 

ಎಲ್ಲರಿಗೂ ಅವರವರ ಕರ್ಮವೆಂದು ನಿಯಮಿಸಲ್ಪಟ್ಟ ಈ ಎಲ್ಲಾ ಕ್ರಿಯೆಗಳಿಂದ, ಎಲ್ಲಾ ವರ್ಣಗಳಿಂದ ನಾರಾಯಣನೇ ಪೂಜ್ಯನಾಗಿದ್ದಾನೆ. (ಬ್ರಾಹ್ಮಣನೊಬ್ಬ ವೇದಾದಿಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಏಕೆಂದರೆ ಅದು ದೇವರ ಪ್ರೀತಿಗಾಗಿ. ಹಾಗೆಯೇ, ಕ್ಷತ್ರಿಯ ಧರ್ಮಪಾಲನೆ ಮಾಡಬೇಕು, ವೈಶ್ಯ ವ್ಯಾಪಾರವನ್ನು ಯಥಾವತ್ತಾಗಿ ಮಾಡಬೇಕು, ಶೂದ್ರನೊಬ್ಬ ಶೋಶ್ರೂಷೆಯನ್ನು ಚೆನ್ನಾಗಿ ಮಾಡಬೇಕು. ಇವೆಲ್ಲವೂ ಭಗವಂತನ ಪ್ರೀತ್ಯರ್ಥವಾಗಿ ಮಾಡುವ ಪೂಜೆ. ಎಲ್ಲರೂ ಅವರವರ ಕರ್ಮಗಳಿಂದ, ಅವರವರ ಧರ್ಮಗಳಿಂದ ಪೂಜೆಯನ್ನು ಸಲ್ಲಿಸಬೇಕು). ಮುಖ್ಯವಾಗಿ ಹೇಳಬೇಕೆಂದರೆ- ಭಗವಂತನ ಭಕ್ತಿಯೇ ಎಲ್ಲರ ಧರ್ಮ. ಅವರವರ ಯೋಗ್ಯತೆಗೆ ಅನುಗುಣವಾಗಿ ದೇವರನ್ನು ತಿಳಿದುಕೊಳ್ಳುವುದೂ ಕೂಡಾ ದೇವರ ಪೂಜೆಯೇ.   

 

ಪಿತಾ ಗುರುಃ ಪರಮಂ ದೈವತಂ ಚ ವಿಷ್ಣುಃ ಸರ್ವೇಷಾಂ ತೇನ ಪೂಜ್ಯಃ ಸ ಏವ ।

ತದ್ಭಕ್ತತ್ವಾದ್ ದೇವತಾಶ್ಚಾಭಿಪೂಜ್ಯಾ ವಿಶೇಷತಸ್ತೇಷು ಯೇSತ್ಯನ್ತಭಕ್ತಾಃ ॥೨೨.೯೮॥

 

ದೇವರು ಎಲ್ಲರಿಗೂ ತಂದೆಯೂ, ಉಪದೇಶಕನೂ, ಜ್ಞಾನಪ್ರದನೂ, ಉತ್ಕೃಷ್ಟನಾದ ದೈವವೂ ಆಗಿದ್ದಾನೆ. ಅದರಿಂದ ಅವನನ್ನೇ ಪೂಜಿಸಬೇಕು. ದೇವತೆಗಳು ಅವನ ಭಕ್ತರಾದ್ದರಿಂದ ಅವರನ್ನು ಪೂಜಿಸಬೇಕು. ಪರಮಾತ್ಮನಲ್ಲಿ ಅತ್ಯಂತ ಭಕ್ತರು ಯಾರೋ, ಅವರನ್ನು ವಿಶೇಷವಾಗಿ ಪೂಜಿಸಬೇಕು. (ದೇವತೆಗಳ ಭಕ್ತಿಯ ಮಟ್ಟಕೆ ಅನುಗುಣವಾಗಿ ಅವರವರ ತಾರತಮ್ಯ. ತಾರತಮ್ಯಕ್ಕೆ ಅನುಗುಣವಾಗಿ ನಾವು ಅವರ ಭಕ್ತಿಯನ್ನು ಮಾಡಬೇಕು. ಭಗವಂತನ ಭಕ್ತಿ ಎನ್ನುವುದೇ ಕೇಂದ್ರ. ಅದಕ್ಕನುಕೂಲವಾಗಿಯೇ ದೈವೀ ಮೀಮಾಂಸ, ದೇವತಾ ಪೂಜೆ, ಇವೆಲ್ಲವೂ ಇರುತ್ತದೆ).  

 

ಸಮ್ಪೂಜಿತೋ ವಾಸುದೇವಃ ಸ ಮುಕ್ತಿಂ ದದ್ಯಾದೇವಾಪೂಜಿತೋ ದುಃಖಮೇವ ।

ಸ್ವತನ್ತ್ರತ್ವಾತ್ ಸುಖದುಃಖಪ್ರದೋSಸೌ ನಾನ್ಯಃ ಸ್ವತಸ್ತದ್ವಶಾ ಯತ್ ಸಮಸ್ತಾಃ ॥೨೨.೯೯॥

 

ಪೂಜೆಗೊಂಡ ವಾಸುದೇವನು ಮುಕ್ತಿಯನ್ನೀಯುತ್ತಾನೆ. ಪೂಜಿಸದಿದ್ದರೆ ದುಃಖವನ್ನೇ ನೀಡುತ್ತಾನೆ. ದೇವನೊಬ್ಬನೇ ಸ್ವತಂತ್ರನಾದ್ದರಿಂದ ಸುಖ ಹಾಗೂ ದುಃಖವನ್ನು ಅವನು ನೀಡುತ್ತಾನೆ, ಹೊರತು ಬೇರೆ ಅಲ್ಲ. ಎಲ್ಲರೂ ಕೂಡಾ ಆ ಭಗವಂತನ ವಶರಾಗಿದ್ದಾರೆ.

 

ಸ್ವತನ್ತ್ರತ್ವಾತ್ ಸುಖಸಜ್ಜ್ಞಾನಶಕ್ತಿಪೂರ್ವೈರ್ಗ್ಗುಣೈಃ ಪೂರ್ಣ್ಣ ಏಷೋSಖಿಲೈಶ್ಚ ।

ಸ್ವತನ್ತ್ರತ್ವಾತ್  ಸರ್ವದೋಷೋಜ್ಜ್ಞಿತಶ್ಚ ನಿಸ್ಸೀಮಶಕ್ತಿರ್ಹಿ ಯತಃ ಸ್ವತನ್ತ್ರಃ ॥೨೨.೧೦೦॥

 

ದೇವರು ಸ್ವತಂತ್ರನಾಗಿರುವುದರಿಂದಲೇ ಸುಖ. ಜ್ಞಾನ, ಶಕ್ತಿ, ಈ ಮೊದಲಾದ ಗುಣಗಳಿಂದ ಪೂರ್ಣನಾಗಿದ್ದಾನೆ. ಸ್ವತಂತ್ರನಾಗಿರುವುದರಿಂದಲೇ ಸರ್ವ ದೋಷ ವಿವರ್ಜಿತನಾಗಿದ್ದಾನೆ. ಸ್ವತಂತ್ರನಾಗಿರುವುದರಿಂದಲೇ ಎಣೆಯಿರದ ಶಕ್ತಿಯನ್ನು ಹೊಂದಿದ್ದಾನೆ. [ಸ್ವಾತಂತ್ರ್ಯ ಎನ್ನುವುದೇ ಎಲ್ಲಾ ಗುಣಗಳ ಮೂಲಾಧಾರ].

 

ದೋಷಾಸ್ಪೃಷ್ಟೌ ಗುಣಪೂರ್ತ್ತೌ ಚ ಶಕ್ತಿರ್ನ್ನಿಸ್ಸೀಮತ್ವಾದ್ ವಿದ್ಯತೇ ತಸ್ಯ ಯಸ್ಮಾತ್ ।

ಏವಂ ಗುಣೈರಖಿಲೈಶ್ಚಾಪಿ ಪೂರ್ಣ್ಣೋ ನಾರಾಯಣಃ ಪೂಜ್ಯತಮಃ ಸ್ವಧರ್ಮ್ಮೈಃ ॥೨೨.೧೦೧॥

 

ದೋಷಗಳು ಇಲ್ಲದಿರುವಿಕೆಯಲ್ಲಿ, ಗುಣಪೂರ್ಣತೆಯಲ್ಲಿ  ದೇವರ ಶಕ್ತಿ ಇದೆ. ನಾರಾಯಣನು  ಎಲ್ಲಾ ಗುಣಗಳಿಂದಲೂ ಕೂಡಾ ಪೂರ್ಣನಾಗಿದ್ದಾನೆ. ಇಂತಹ ನಾರಾಯಣನು ಅವರವರ ಧರ್ಮಗಳಿಂದ(ಸ್ವಧರ್ಮದಿಂದ) ಪೂಜ್ಯನಾಗಿದ್ದಾನೆ. (ಹೀಗಾಗಿ ನಾವು ನಮ್ಮ ಕರ್ತವ್ಯ ಮಾಡಬೇಕು ಎನ್ನುವುದು ತಾತ್ಪರ್ಯ.ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್........ ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛ̐ ಸಮಾಃ’. ನಿನ್ನ ಕೆಲಸವನ್ನು ನೀನು ಮಾಡು ಎನ್ನುವುದು ಈಶಾವಾಸ್ಯ ಉಪನಿಷತ್ತಿನ ತಾತ್ಪರ್ಯ ಕೂಡಾ ಹೌದು). 

 

ಅಸ್ಮಾಕಂ ಯತ್ ತೇನ ನಾತಿಕ್ಷಮೈವ ಧರ್ಮ್ಮೋ ದುಷ್ಟಾನಾಂ ವಾರಣಂ ಹ್ಯೇವ ಕಾರ್ಯ್ಯಮ್ ।

ಹನ್ಯಾದ್ ದುಷ್ಟಾನ್ ಯಃ ಕ್ಷತ್ರಿಯಃ ಕ್ಷತ್ರಿಯಾಂಶ್ಚ ವಿಶೇಷತೋ ಯುದ್ಧಗತಾನ್ ಸ್ಮರನ್ ಹರಿಮ್ ॥೨೨.೧೦೨॥

 

ನಮ್ಮ ಧರ್ಮವು  ದುರ್ಜನರ ತಡೆ. ಬಹಳ ಕ್ಷಮೆ/ಸಹನೆ ನಾವು ಮಾಡುವಂತಿಲ್ಲ. ಕ್ಷತ್ರಿಯನು ಯುದ್ಧದಲ್ಲಿರುವ ದುಷ್ಟ ಕ್ಷತ್ರಿಯನನ್ನು ಪರಮಾತ್ಮನ ಸ್ಮರಣೆ ಮಾಡುತ್ತಾ ಕೊಲ್ಲಬೇಕು.  

 

ಸ್ವಭಾಹುವೀರ್ಯ್ಯೇಣ ಚ ತಸ್ಯ ಬಾಹೂ ಚೈತನ್ಯಮಾತ್ರೌ ಭವತಃ ಸದೇಹೌ ।

ಪಾಪಾಧಿಕಾಂಶ್ಚೈವ ಬಲಾಧಿಕಾಂಶ್ಚ ಹತ್ವಾ ಮುಕ್ತಾವಧಿಕಾSSನನ್ದವೃದ್ಧಿಃ ॥೨೨.೧೦೩॥

 

ತನ್ನ ಬಾಹುವಿನ ವೀರ್ಯದಿಂದ ಪಾಪಿಷ್ಠರನ್ನೂ, ಬಲಿಷ್ಠರನ್ನೂ ಕೊಂದು, ಯಾರು ತನ್ನ ಸ್ವಧರ್ಮ ಪಾಲನೆ ಮಾಡುತ್ತಾನೆ, ಅವನು ಪರಮಾತ್ಮನಿಂದ ಮುಕ್ತಿಯಲ್ಲಿ ಚೈತನ್ಯಮಾತ್ರವಾಗಿರುವ ಬಾಹುವನ್ನು ಪಡೆಯುತ್ತಾನೆ. (ಮುಕ್ತನಾಗುತ್ತಾನೆ. ಆಗ ಎಲ್ಲವೂ ಕೂಡಾ ಜ್ಞಾನಾನಂದಮಯವಾಗಿರುತ್ತದೆ.) ಯಾರು ಪಾಪಿಷ್ಠನಲ್ಲಿ ಅಗ್ರಗಣ್ಯನೋ, ಅವನನ್ನು ಕೊಂದರೆ ದೇವರಿಗೆ ವಿಶೇಷ ಪ್ರೀತಿ. (ಕ್ಷತ್ರಿಯ ಎಷ್ಟು ಎಷ್ಟು ಪಾಪಾಧಿಕ ಬಲಾಧಿಕರನ್ನು ಕೊಲ್ಲುತ್ತಾನೋ, ಅಷ್ಟುಅಷ್ಟು ಪರಮಾತ್ಮನಿಗೆ ಪ್ರಿಯನಾಗುತ್ತಾನೆ)

 

ಪ್ರೀತಿಶ್ಚ ವಿಷ್ಣೋಃ ಪರಮೈವ ತತ್ರ ತಸ್ಮಾದ್ಧನ್ತವ್ಯಾಃ ಪಾಪಿನಃ ಸರ್ವಥೈವ ।

ಯೇ ತ್ವಕ್ಷಧೂರ್ತ್ತಾ ಗ್ರಹಣಂ ಗತಾ ವಾ ಪಾಪಾಸ್ತೇSನ್ಯೈರ್ಘಾತನೀಯಾಃ ಸ್ವದೋರ್ಭ್ಯಾಮ್ ॥೨೨.೧೦೪॥

 

ಪರಮಾತ್ಮನಿಗೆ ಪಾಪಾಧಿಕರನ್ನೂ, ಬಲಾಧಿಕರನ್ನೂ ಕೊಂದರೆ ಪರಮ ಪ್ರೀತಿ. ಆ ಕಾರಣದಿಂದ ಪಾಪಿಗಳನ್ನು ಕೊಲ್ಲಲೇಬೇಕು. ಜೂಜಿನಲ್ಲಿ ಕಪಟಿಗಳು,  ಸೆರೆಮನೆಗೆ ಸಿಕ್ಕವರು,  ಅಂತವರನ್ನು ಬೇರೊಬ್ಬರಿಂದ ಕೊಲ್ಲಿಸಬೇಕು/ ಶಿಕ್ಷಿಸಬೇಕು. ಯಾರು ಯುದ್ಧದಲ್ಲಿ ಎದುರಾಗುತ್ತಾರೆ ಅವರನ್ನು ತಾವೇ ಸಾಕ್ಷಾತ್ ಕೊಲ್ಲಬೇಕು.

 

ರಾಜಾನಂ ವಾ ರಾಜಪುತ್ರಂ ತಥೈವ ರಾಜಾನುಜಂ ವಾSಭಿಯಾತಂ ನಿಹನ್ಯಾತ್ ।

ರಾಜ್ಞಃ ಪುತ್ರೋSಪ್ಯಕೃತೋದ್ವಾಹಕೋ ಯಃ ಸ ಘಾತನೀಯೋ ನ ಸ್ವಯಂ ವದ್ಧ್ಯ ಏವ ॥೨೨.೧೦೫॥

 

ರಾಜರನ್ನಾಗಲೀ, ರಾಜ ಪುತ್ರರನ್ನಾಗಲೀ, ರಾಜನ ತಮ್ಮನನ್ನಾಗಲೀ, ಎದುರುಗೊಂಡಾಗ ಕೊಲ್ಲಬೇಕು. ಆ ರಾಜನ ಮಗ ಮದುವೆ ಆಗದೇ ಇದ್ದವನಾಗಿದ್ದರೆ ಅವನನ್ನು ಗಾಯಗೊಳಿಸಬೇಕು. ಅವನನ್ನು ಕೊಲ್ಲಬಾರದು. ಇದು ಧರ್ಮ.

 

ಕ್ರೂರಂ ಚಾನ್ಯದ್ ಧರ್ಮ್ಮಯುಕ್ತಂ ಪರೈಸ್ತತ್ ಪ್ರಸಾಧನೀಯಂ ಕ್ಷತ್ರಿಯೈರ್ನ್ನ ಸ್ವಕಾರ್ಯ್ಯಮ್ ।

ಏವಂ ಧರ್ಮ್ಮೋ ವಿಹಿತೋ ವೇದ ಏವ ವಾಕ್ಯಂ ವಿಷ್ಣೋಃ ಪಞ್ಚರಾತ್ರೇಷು ತಾದೃಕ್ ॥೨೨.೧೦೬॥

 

ಧರ್ಮಕ್ಕೆ ಸಮ್ಮತವಾಗಿದೆ ಎಂತಾದರೆ ಇನ್ನೂ ಕ್ರೂರವಾದ ಕೆಲಸವನ್ನು ಬೇರೊಬ್ಬರ ಮೂಲಕ ಮಾಡಿಸಬೇಕು. ಯಾವುದನ್ನು ಕ್ಷತ್ರಿಯರು ಮಾಡಬಾರದೋ ಅದನ್ನು ಅವನು ಮಾಡಬಾರದು. ಆದರೆ  ಬೇರೊಬ್ಬರ ಕೈಯಲ್ಲಿ ಮಾಡಿಸಬಹುದು(ಉದಾಹರಣೆಗೆ ಅಪರಾಧಿಯನ್ನು ನೇಣಿಗೆ ಏರಿಸುವ ಶಿಕ್ಷೆಯನ್ನು ಕ್ಷತ್ರಿಯ ಘೋಷಿಸಬಹುದು. ಆದರೆ ನೇಣಿಗೆ ಏರಿಸುವ ಕೆಲಸವನ್ನು ಆತ ಸ್ವಯಂ ಮಾಡುವುದಿಲ್ಲ. ಅದನ್ನು ಇನ್ನೊಬ್ಬರ ಮುಖೇನ ಮಾಡಿಸುತ್ತಾನೆ). ಇದು ವೇದದಲ್ಲಿಯೇ ವಿಹಿತವಾಗಿರುವ ಧರ್ಮ. ನಾರಾಯಣ ಪಂಚರಾತ್ರದಲ್ಲಿ ಇದನ್ನೆಲ್ಲವನ್ನೂ ಹೇಳಿದ್ದಾನೆ.


No comments:

Post a Comment