ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, May 27, 2022

Mahabharata Tatparya Nirnaya Kannada 22: 107-112

 

ಅಕ್ಷದ್ಯೂತಂ ನಿಕೃತಿಃ ಪಾಪಾಮೇವ ಕೃತಂ ತ್ವಯಾ ಗರ್ಹಿತಂ ಸೌಬಲೇನ ।

ನ ಕುತ್ರಚಿದ್ ವಿಧಿರಸ್ಯಾಸ್ತಿ ತೇನ ನ ತದ್ ದತ್ತಂ ದ್ಯೂತಹೃತಂ ವದನ್ತಿ ॥೨೨.೧೦೭॥

 

ಪಗಡೆಯಾಟ ಅಥವಾ ಆರೀತಿಯಾಗಿರುವ ಯಾವುದೇ ಜೂಜೂ ಪಾಪವೇ. ಅದು ಅತ್ಯಂತ ನಿಂದ್ಯವಾದದ್ದು. ಅಂತಹ ಜೂಜನ್ನು ನೀನು ಶಕುನಿಯ ಜೊತೆಗೆ ಆಡಿದ್ದೀಯ. ಎಲ್ಲಿಯೂ ಕೂಡಾ ಜೂಜಿನ ಕುರಿತು ವೇದದಲ್ಲಿ ವಿಧಿ ಇಲ್ಲ. ಅದರಿಂದಾಗಿ ಅಂದು ಜೂಜಿನಿಂದ ಅಪಹರಿಸಿದ್ದನ್ನು ‘ಕೊಟ್ಟದ್ದು’ ಎಂದು ಯಾರೂ ಕೂಡಾ ಹೇಳುವುದಿಲ್ಲ.

[ಶತಪಥ ಬ್ರಾಹ್ಮಣದಲ್ಲಿ ಯಾಗ ಮುಗಿದ ಕೂಡಲೇ ಅದೇ ಜಾಗದಲ್ಲಿ ಬಯಸಿದರೆ ಜೂಜಾಡಬಹುದು ಎಂದಿದೆ. ಆದರೆ ಅದು ಪಣವಿಟ್ಟು ಆಡುವ ಜೂಜಲ್ಲ. ಪಣವಿಟ್ಟು ಆಡುವ ಜೂಜನ್ನು ಎಲ್ಲೂ ಯಾವ ವೇದದ ವಿಧಿಯಲ್ಲೂ ಹೇಳಿಲ್ಲ].

 

ಭೀತೇನ ದತ್ತಂ ದ್ಯೂತದತ್ತಂ ತಥೈವ ದತ್ತಂ ಕಾಮಿನ್ಯೈ ಪುನರಾಹಾರ್ಯ್ಯಮೇವ ।

ಏವಂ ಧರ್ಮ್ಮಃ ಶಾಶ್ವತೋ ವೈದಿಕೋ ಹಿ ದ್ಯೂತೇ ಸ್ತ್ರಿಯಾಂ ನಾಲ್ಪಮಾಹಾರ್ಯ್ಯಮಾಹುಃ ॥೨೨.೧೦೮॥

 

ಭಯಗೊಂಡು ಕೊಟ್ಟಿರುವುದನ್ನು, ಜೂಜಿನಲ್ಲಿ ಕೊಟ್ಟದ್ದನ್ನು, ಯಾವುದೋ ಒಂದು ಕೆಟ್ಟ ಹೆಣ್ಣಿಗಾಗಿ ಒಬ್ಬ ಕೊಟ್ಟಿದ್ದನ್ನು ಮತ್ತೆ ಹಿಂದೆ ಪಡೆಯಬಹುದು. ಅದನ್ನು ಶಾಸ್ತ್ರೀಯವಾಗಿ ‘ಕೊಟ್ಟಿದ್ದು’ ಎಂದು ಯಾರೂ ಹೇಳುವುದಿಲ್ಲ. ದ್ಯೂತದಲ್ಲಿ ಕೊಟ್ಟಾಗ, ಹೆಣ್ಣಿಗೆ ಕೊಟ್ಟಾಗ, ಅದು ಅಲ್ಪವಾಗಿದ್ದರೆ ಅದನ್ನು ಬಿಟ್ಟುಬಿಡಬೇಕು.

 

ಯದ್ಯೇಷಾಂ ವೈ ಭೋಗ್ಯಮಲ್ಪಂ ತದೀಯಂ ಭೋಗೇನ ತದ್ಬನ್ಧುಭಿಸ್ತಚ್ಚ ಹಾರ್ಯ್ಯಮ್ ।

ನಿವಾರಣೇ ಪುರುಷಸ್ಯ ತ್ವಶಕ್ತೈಸ್ತದ್   ರಾಜ್ಯಂ ನಃ ಪುನರಾಹಾರ್ಯ್ಯಮೇವ ॥೨೨.೧೦೯॥

 

ಒಂದುವೇಳೆ ಸ್ವಲ್ಪ ಭೋಗ್ಯವೇ ಇದ್ದು, ಅದು ಪಡೆದವನ ಮಟ್ಟಿಗೆ ಜಾಸ್ತಿಯಾಗಿದ್ದರೆ (ಏಕೆಂದರೆ ಸ್ವಲ್ಪ ಮತ್ತು ಜಾಸ್ತಿ ಎನ್ನುವುದು ಸಾಪೇಕ್ಷ) ಅದನ್ನೂ ಕೂಡಾ ಹಿಂದೆ ಪಡೆಯಬೇಕು. ಇದು ವೈದಿಕ ಧರ್ಮ. ಆ ಕಾರಣದಿಂದ ನಾವು ನಮ್ಮ ರಾಜ್ಯವನ್ನು ಮತ್ತೆ ಹಿಂದೆ ಪಡೆಯಬೇಕು.

 

ತ್ವಂ ಧರ್ಮ್ಮನಿತ್ಯಶ್ಚಾಗ್ರಜಶ್ಚೇತಿ ರಾಜನ್ ಋತೇSನುಜ್ಞಾಂ ನ ಮಯಾ ತತ್ ಕೃತಂ ಚ ।

ದಾತಾಸ್ಯನುಜ್ಞಾಂ ಯದಿ ತಾನ್ ನಿಹತ್ಯ ತ್ವಯ್ಯೇವ ರಾಜ್ಯಂ ಸ್ಥಾಪಯಾಮ್ಯದ್ಯ ಸಮ್ಯಕ್ ॥೨೨.೧೧೦॥

 

ಧರ್ಮರಥನಾಗಿರುವ ನೀನು ನಮ್ಮ ಅಣ್ಣನಾಗಿರುವೆ. ಅದರಿಂದ ನಿನ್ನ ಅನುಜ್ಞೆಯನ್ನು ಬಿಟ್ಟು ರಾಜ್ಯವನ್ನು ಹಿಂದೆ ಪಡೆಯುವ ಕೆಲಸವನ್ನು ನಾನು ಮಾಡಲಿಲ್ಲ. ಒಂದು ವೇಳೆ ಅನುಜ್ಞೆಯನ್ನು ಕೊಡುವೆಯಾದರೆ ಅವರೆಲ್ಲರನ್ನೂ ಕೊಂದು ನಿನ್ನಲ್ಲಿಯೇ ರಾಜ್ಯವನ್ನು ಇಡುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ.

 

ಸತ್ಯಂ ಪಾಪೇಷ್ವಪಿ ಕರ್ತ್ತುಂ ಯದೀಚ್ಛಾ ತಥಾSಪಿ ಮಾಸಾ ದ್ವಾದಶ ನಃ ಪ್ರಯಾತಾಃ ।

ವೇದಪ್ರಾಮಾಣ್ಯಾದ್ ವತ್ಸರಾಸ್ತೇ ಹಿ ಮಾಸೈಃ ಸಹಸ್ರಾಬ್ದಂ  ಸತ್ರಮುಕ್ತಂ ನರಾಣಾಮ್ ।

ಅಜ್ಞಾತಮೇಕಂ ಮಾಸಮುಷ್ಯಾಥ ಶತ್ರೂನ್  ನಿಹತ್ಯ ರಾಜ್ಯಂ ಪ್ರತಿಪಾಲಯಾಮಃ ॥೨೨.೧೧೧॥

 

ಒಂದು ವೇಳೆ ಪಾಪಿಷ್ಠರಲ್ಲಿಯೂ ಕೂಡಾ ನಿನ್ನ ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಲು ನಿನಗೆ ಇಚ್ಛೆಯಿದ್ದರೆ, ಆಗಲೂ ಕೂಡಾ, ನಮ್ಮ ಪಾಲಿಗೆ ಈಗಾಗಲೇ ೧೨ ತಿಂಗಳು ವನವಾಸ ಕಳೆದು ಹೋಗಿದೆ.  ವೇದದ ಪ್ರಮಾಣದ ಅನುಸಾರವಾಗಿ ಹೋಗುವುದಾದರೆ, ಆ ಪ್ರತೀ ತಿಂಗಳುಗಳು ಒಂದು ವರ್ಷದಂತೆ(ಅಂದರೆ ಹನ್ನೆರಡು ತಿಂಗಳು ಹನ್ನೆರಡು ವರ್ಷದಂತೆ). ಏಕೆಂದರೆ ವೇದದಲ್ಲಿ ಒಂದು ತಿಂಗಳನ್ನು ಒಂದು ವರ್ಷ ಎಂದು ಪರಿಗಣಿಸುವ ಸಂಪ್ರದಾಯವನ್ನು ಮನುಷ್ಯರಿಗೆ ಹೇಳಲ್ಪಟ್ಟಿದೆ. ಇನ್ನು ಒಂದು ವರ್ಷದ ಅಜ್ಞಾತವಾಸ ಏನಿದೆ, ಅದನ್ನು ಒಂದು ತಿಂಗಳು ಕಾಲ ಯಾರಿಗೂ ತಿಳಿಯದಂತೆ ವಾಸಮಾಡಿ, ಶತ್ರುಗಳನ್ನು ಕೊಂದು, ರಾಜ್ಯವನ್ನು ಆಳೋಣ.

 

ಮಾ ಮಿತ್ರಾಣಾಂ ತಾಪಕಸ್ತ್ವಂ ಭವೇಥಾಸ್ತಥಾSಮಿತ್ರಾಣಾಂ ನನ್ದಕಶ್ಚೈವ ರಾಜನ್ ।

ಜ್ವಲಸ್ವಾರೀಣಾಂ ಮೂರ್ಧ್ನಿ ಮಿತ್ರಾಣಿ ನಿತ್ಯಮಾಹ್ಲಾದಯನ್ ವಾಸುದೇವಂ ಭಜಸ್ವ ॥೨೨.೧೧೨॥

 

ನಿನ್ನ ಮಿತ್ರರಿಗೆ ಕಷ್ಟ ಕೊಡಬೇಡ.(ನಿನ್ನ ಗೆಳೆಯರಿಗೆ, ನಿನ್ನ ಹಿತೈಷಿಗಳಿಗೆ, ನಿನ್ನ ಅಣ್ಣ-ತಮ್ಮಂದಿರರಿಗೆ ನೀನು ಬಹಳ ಕಷ್ಟ ಕೊಡುತ್ತಿದ್ದೀಯ-ಅದನ್ನು ಬಿಟ್ಟುಬಿಡು).  ನಿನ್ನ ಶತ್ರುಗಳಿಗೆ ನೀನು ಆನಂದವನ್ನು ಕೊಡುತ್ತಿದ್ದೀಯ. (ಕ್ಷಮೆಯನ್ನು ಕೊಡುವ ಮೂಲಕ ಮಿತ್ರರಿಗೆ ದುಃಖ, ಶತ್ರುಗಳಿಗೆ ಸಂತೋಷವನ್ನುಂಟು ಮಾಡುತ್ತಿದ್ದೀಯ). ನೀನು ಆರೀತಿ ಮಾಡದೇ,  ಶತ್ರುಗಳ ತಲೆಯ ಮೇಲೆ ಉರಿದುಬಿಡು. ನಿನ್ನ ಹಿತೈಷಿಗಳನ್ನು ಸಂತಸಗೊಳಿಸುತ್ತಾ ವಾಸುದೇವನನ್ನು ಹೊಂದು.

No comments:

Post a Comment