ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 14, 2022

Mahabharata Tatparya Nirnaya Kannada 24-31-37

 

ಗತ್ವಾ ದುರ್ಯ್ಯೋಧನಾಹೂತೋ ಭಗದತ್ತೋsಪಿ ತಂ ಯಯೌ ।

ಸಪುತ್ರಪೌತ್ರೋ ಬಾಹ್ಲೀಕೋ ಭೀಷ್ಮದ್ರೋಣಕೃಪಾ ಅಪಿ ॥೨೪.೩೧॥

 

ಪ್ರೀತ್ಯರ್ತ್ಥಂ ಧೃತರಾಷ್ಟ್ರಸ್ಯ ಬಭೂವುಸ್ತತ್ಸುತಾನುಗಾಃ ।

ಪಾಣ್ಡ್ಯಶ್ಚ ವೀರಸೇನಾಖ್ಯಃ ಪಾಣ್ಡವಾನೇವ ಸಂಶ್ರಿತಃ ॥೨೪.೩೨॥

 

ಶಲ್ಯಂ ಚ ಪಾಣ್ಡವಾನೇವ ಯಾನ್ತಂ ಜ್ಞಾತ್ವಾ ಸುಯೋಧನಃ ।

ಸುಸಭಾಃ ಕಾರಯಾಮಾಸ ಸರ್ವಭೋಗಸಮನ್ವಿತಾಃ ॥೨೪.೩೩॥

 

ದುರ್ಯೋಧನನಿಂದ ಆಹ್ವಾನಕ್ಕೆ ಒಳಪಟ್ಟ ಭಗದತ್ತನೂ ಕೂಡಾ ದುರ್ಯೋಧನನನ್ನು ಹೊಂದಿದನು. ಸೋಮದತ್ತ, ಭೂರಿಶ್ರವಸ್ಸು, ಮೊದಲಾದ ಮಕ್ಕಳು, ಮೊಮ್ಮಕ್ಕಳಿಂದ ಕೂಡಿಕೊಂಡ ಬಾಹ್ಲೀಕ; ಭೀಷ್ಮ- ದ್ರೋಣ, ಕೃಪ ಇವರೆಲ್ಲರೂ, ಧೃತರಾಷ್ಟ್ರನ ಪ್ರೀತಿಗಾಗಿ ದುರ್ಯೋಧನನನ್ನು ಅನುಸರಿಸಿದವರಾದರು.

ಅರ್ಜುನನ ಮಾವ, ಚಿತ್ರಾನ್ಗದೆಯ ಅಪ್ಪ, ಪಾಂಡ್ಯ ದೇಶದ ರಾಜ ವೀರಸೇನ ಪಾಂಡವರನ್ನು ಅನುಸರಿಸಿದನು. ಪಾಂಡವರನ್ನು ಕುರಿತು ತೆರಳುತ್ತಿರುವ ಶಲ್ಯನನ್ನು ತಿಳಿದ ದುರ್ಯೋಧನನು ಎಲ್ಲಾ ಭೋಗಗಳಿಂದ ಕೂಡಿದ ಶಿಬಿರಗಳನ್ನು ಅವನಿಗಾಗಿ ಮಾಡಿಸಿದನು.

 

ತಾ ಯುಧಿಷ್ಠಿರಕ್ಲೃಪ್ತಾಃ ಸ ಮತ್ವಾ ಶಲ್ಯೋSಬ್ರವೀದಿದಮ್ ।

ಯ ಏತಾಃ ಕಾರಯಾಮಾಸ ತದಭೀಷ್ಟಂ ಕರೋಮ್ಯಹಮ್ ॥೨೪.೩೪॥

 

ಶಲ್ಯನು ತನಗೆ ಶಿಬಿರಗಳ ವ್ಯವಸ್ಥೆ ಮಾಡಿಸಿದವನು ಯುಧಿಷ್ಠಿರ ಎಂದು ತಿಳಿದು, ‘ಯಾರು ಈ ಸಭೆಗಳನ್ನು  ಮಾಡಿಸಿದನೋ ಅವನ ಅಭೀಷ್ಟವನ್ನು ಈಡೇರಿಸುತ್ತೇನೆ’ ಎನ್ನುವ ವಚನವನ್ನು ಹೇಳಿದನು.

 

ಲೀನಃ ಶ್ರುತ್ವಾ ಧಾರ್ತ್ತರಾಷ್ರಃ ಸತ್ಯಂ ಕುರ್ವಿತ್ಯಭಾಷತ ।

ದೇಹಿ ಮೇ ಯುದ್ಧಸಾಹಾಯ್ಯಮಿತಿ ಸೋSಪಿ ಯಶೋSರ್ತ್ಥಯನ್ ॥೨೪.೩೫॥

 

ರಕ್ಷಾರ್ತ್ಥಮಾತ್ಮವಾಕ್ಯಸ್ಯ ತಥೇತ್ಯೇವಾಭ್ಯಭಾಷತ ।

ಸ ಪಾಣ್ಡವಾಂಸ್ತತೋ ಗತ್ವಾ ತೈರನುಜ್ಞಾತ ಏವ ಚ ॥೨೪.೩೬॥

 

ತೇಜೋವಧಾರ್ತ್ಥಂ ಕರ್ಣ್ಣಸ್ಯ ಧನಞ್ಜಯಕೃತೇSರ್ತ್ಥಿತಃ ।

ತಥೇತ್ಯುಕ್ತ್ವಾ ಯಯೌ ಧರ್ಮ್ಮನನ್ದನಂ ಕೌರವಾನ್ ಪ್ರತಿ ॥೨೪.೩೭॥

 

ಅಡಗಿಕೊಂಡಿದ್ದು ಶಲ್ಯನ ವಚನವನ್ನು ಕೇಳಿದ ದುರ್ಯೋಧನನು, ‘ಹಾಗಾದರೆ ಇದನ್ನು(ನಿನ್ನ ವಚನವನ್ನು) ಸತ್ಯಮಾಡು, ಯುದ್ಧದಲ್ಲಿ ನಿನ್ನ ಸಹಾಯವನ್ನು ನನಗೆ ಕೊಡು   ಎಂದು ಕೇಳಿದ. ಯಶಸ್ಸನ್ನು ಇಚ್ಛಿಸುವವನಾದ ಶಲ್ಯ, ಆಡಿದ ಮಾತಿನಂತೆ ‘ಹಾಗೆಯೇ ಆಗಲಿ’ ಎಂದ.  

ತದನಂತರ ಶಲ್ಯನು ಪಾಂಡವರ ಬಳಿಗೆ ತೆರಳಿ, ಅವರಿಂದ ಅನುಜ್ಞೆಗೆ ಒಳಗಾಗಿ, ಯುಧಿಷ್ಠಿರನಿಂದ  ಅರ್ಜುನನ ಜಯಕ್ಕಾಗಿ ಕರ್ಣನ ತೇಜೋವದೆ ಮಾಡುವುದಕ್ಕಾಗಿ ಪ್ರಾರ್ಥಿಸಲ್ಪಟ್ಟನು. ‘ಹಾಗೆಯೇ ಆಗಲಿ ಎಂದ ಶಲ್ಯನು ಕೌರವರ ಬಳಿ ತೆರಳಿದನು.

Tuesday, December 13, 2022

Mahabharata Tatparya Nirnaya Kannada 24-23-30

 

ದುರ್ಯ್ಯೋಧನೋ ಯಯೌ ರಾಮಂ ಸ ಭಯಾತ್ ಕೇಶವಸ್ಯ ತಮ್ ।

ನ ಸಾಹಾಯ್ಯಂ ಕರೋಮೀತಿ ಪ್ರಾಹ ತತ್ಸ್ನೇಹವಾನಪಿ ॥೨೪.೨೩॥

 

ಉಪಪ್ಲಾವ್ಯೇ ಸಭಾಯಾಂ ಹಿ ತ್ವತ್ಪಕ್ಷೀಯಂ ವಚೋ ಬ್ರುವನ್ ।

ನಿರಾಕೃತಃ ಸಾತ್ಯಕಿನಾ ಸಮಕ್ಷಂ ಕೇಶವಸ್ಯ ಚ ॥೨೪.೨೪॥

 

ದುರ್ಯೋಧನನು ಬಲರಾಮನ ಬಳಿಗೆ ತೆರಳಿದ. ಬಲರಾಮನಾದರೋ, ದುರ್ಯೋಧನನ ಮೇಲೆ ಪ್ರೀತಿ ಇದ್ದರೂ, ಶ್ರೀಕೃಷ್ಣಪರಮಾತ್ಮನ ಭಯದಿಂದ ‘ನಾನು ನಿನಗೆ ಸಹಾಯ ಮಾಡುವುದಿಲ್ಲ ಎಂದು ಹೇಳಿದನು.  

ಈ ಹಿಂದೆ ಉಪಪ್ಲಾವ್ಯದಲ್ಲಿ ನಡೆದ ಮಂತ್ರಾಲೋಚನಾ ಸಭೆಯಲ್ಲಿ ದುರ್ಯೋಧನನ ಪರವಾಗಿ ಬಲರಾಮ ಮಾತನಾಡಿದಾಗ, ಶ್ರೀಕೃಷ್ಣನ ಎದುರಲ್ಲೇ  ಸಾತ್ಯಕಿಯಿಂದ ನಿರಾಕರಿಸಲ್ಪಟ್ಟನು(ಆಗ ಕೃಷ್ಣ ಏನೂ ಹೇಳದೇ ಸುಮ್ಮನಿದ್ದ).

 

ತತೋ ದುರ್ಯ್ಯೋಧನಂ ನಾಯಾತ್ ಸ ಚ ಹಾರ್ದ್ದಿಕ್ಯಸಂಯುತಃ ।

ಜಗಾಮ ಹಸ್ತಿನಪುರಮಕ್ಷೋಹಿಣ್ಯೋ ದಶಾಭವನ್ ॥೨೪.೨೫॥

 

ಏಕಾ ಚ ಧಾರ್ತ್ತರಾಷ್ಟ್ರಸ್ಯ ನಾನಾದೇಶ್ಯೈರ್ನ್ನೃಪೈರ್ಯ್ಯುತಾಃ ।

ಸಪ್ತ ಪಾಣ್ಡುಸುತಾನಾಂ ಚ ಮಾತ್ಸ್ಯದ್ರುಪದಕೇಕಯೈಃ ॥೨೪.೨೬॥

 

ದೃಷ್ಟಕೇತುಜರಾಸನ್ಧಸುತಕಾಶೀನೃಪೈರ್ಯ್ಯುತಾಃ ।

ಪುರುಜಿತ್ ಕುನ್ತಿಭೋಜಶ್ಚ ಚೇಕಿತಾನಶ್ಚ ಸಾತ್ಯಕಿಃ ॥೨೪.೨೭॥

 

ಪಾಣ್ಡವಾನ್ ಸೇನಯಾ ಯುಕ್ತಾಃ ಸಮೀಯುರ್ದ್ದೇವಪಕ್ಷಿಣಃ ।

ವಿನ್ದಾನುವಿನ್ದಾವಾವನ್ತ್ಯೌ ಜಯತ್ಸೇನೋSನ್ಯಕೇಕಯಾಃ ॥೨೪.೨೮॥

 

ಕ್ಷೇಮಧೂರ್ತ್ತಿರ್ದ್ದಣ್ಡಧಾರಃ ಕಲಿಙ್ಗೋSಮ್ಬಷ್ಠ ಏವ ಚ ।

ಶ್ರುತಾಯುರಚ್ಯುತಾಯುಶ್ಚ ಬೃಹದ್ಬಲಸುದಕ್ಷಿಣೌ ॥೨೪.೨೯॥

 

ಶ್ರುತಾಯುಧಃ ಸೈನ್ಧವಶ್ಚ ರಾಕ್ಷಸೋSಲಮ್ಬುಸಸ್ತಥಾ ।

ಅಲಾಯುಧೋSಲಮ್ಬಲಶ್ಚ ದೈತ್ಯಾ ದುರ್ಯ್ಯೋಧನಂ ಯಯುಃ ॥೨೪.೩೦॥

 

ಹೀಗೆ ಪರಮಾತ್ಮನ ಮೇಲಿನ ಭಯದಿಂದ ಬಲರಾಮ ದುರ್ಯೋಧನನನ್ನು ಅನುಸರಿಸಿ ಹೋಗಲಿಲ್ಲ. ದುರ್ಯೋಧನನು ಕೃತವರ್ಮನ ಜೊತೆಗೂಡಿ ಹಸ್ತಿನಪುರಕ್ಕೆ ತೆರಳಿದ.

ಬೇರೆಬೇರೆ ರಾಜರ ಹತ್ತು ಅಕ್ಷೋಹಿಣಿ ಸೇನೆ ಮತ್ತು ಹಸ್ತಿನಪುರದ ಒಂದು ಅಕ್ಷೋಹಿಣಿ ಸೇನೆಯೊಂದಿಗೆ ಒಟ್ಟು ಹನ್ನೊಂದು ಅಕ್ಷೋಹಿಣಿ ಸೇನೆ ದುರ್ಯೋಧನದ್ದಾಯಿತು.

ದೇವತೆಗಳ ಪಕ್ಷದಲ್ಲಿ ಇರುವ ವಿರಾಟರಾಜ, ದ್ರುಪದ, ಕೇಕಯ, ದೃಷ್ಟಕೇತು, ಜರಾಸಂಧನ ಮಗ ಸಹದೇವ, ಭೀಮಸೇನನ ಮಾವನಾದ ಕಾಶೀರಾಜ, ಪುರುಜಿತ್, ಕುಂತಿಭೋಜ, ಚೇಕಿತಾನ ಮತ್ತು ಸಾತ್ಯಕಿ ಇವರು ಸೇನೆಯಿಂದೊಡಗೂಡಿ ಪಾಂಡವರನ್ನು ಹೊಂದಿದರು. ಇವರೆಲ್ಲರೂ ಸೇರಿದಾಗ  ಪಾಂಡವರ ಕಡೆ ಏಳು ಅಕ್ಷೋಹಿಣಿಯಾಯಿತು.  

ಅವಂತಿ ದೇಶದವರಾದ ವಿಂದಾ-ಅನುವಿಂದರು,  ಜಯತ್ಸೇನ ಹಾಗೂ ಪಾಂಡವರ ಕಡೆ ಹೋಗದೇ ಇರುವ ಅನ್ಯ ಕೇಕಯರು,  ಕ್ಷೇಮಧೂರ್ತಿ, ದಂಡಧರ, ಕಲಿಂಗ, ಅಮ್ಬಷ್ಠ, ಶ್ರುತಾಯು, ಅಚ್ಯುತಾಯು, ಬೃಹದ್ಬಲ, ಸುದಕ್ಷಿಣ, ಶ್ರುತಾಯುಧ, ಸೈನ್ಧವ(ಜಯದ್ರಥ), ಅಲಮ್ಬುಸ ರಾಕ್ಷಸ, ಅಲಾಯುಧ ಮತ್ತು  ಅಲಮ್ಬಲ ಎನ್ನುವ ದೈತ್ಯರು-ಇವರೆಲ್ಲರೂ ತಮ್ಮ ಸ್ವಭಾವಕ್ಕೆ ಅನುಗುಣವಾಗಿ ದುರ್ಯೋಧನನನ್ನು ಹೊಂದಿದರು.

Monday, December 12, 2022

Mahabharata Tatparya Nirnaya Kannada 24-13-22

 

ತತಃ ಸಹೈವ ಯದುಭಿಃ ಕೃಷ್ಣಂ ದ್ವಾರವತೀಂ ಗತಮ್ ।

ಯುದ್ಧಸಾಹಾಯ್ಯಮಿಚ್ಛನ್ತೌ ಧಾರ್ತ್ತರಾಷ್ಟ್ರಧನಞ್ಜಯೌ ॥೨೪.೧೩॥

 

ಯುಗಪದ್ ಯಯತುಸ್ತತ್ರ ವೇಗೇನಾಜಯದರ್ಜ್ಜುನಮ್ ।

ದುರ್ಯ್ಯೋಧನಃ ಶಿರಸ್ಥಾನ ಆಸೀನೋSಭೂದ್ಧರೇಸ್ತದಾ ॥೨೪.೧೪॥

 

ದರ್ಪ್ಪಾನ್ನಾಹಂ ರಾಜರಾಜ ಉಪಾಸ್ಯೇ ಪಾದಯೋರಿತಿ ।

ತಯೋರಾಗಮನಂ ಪೂರ್ವಂ ಜ್ಞಾತ್ವೈವ ಹಿ ಹರಿಃ ಪ್ರಭುಃ ॥೨೪.೧೫॥

 

ಅಸುಪ್ತಃ ಸುಪ್ತವಚ್ಛಿಶ್ಯೇ ತತ್ರಾತಿಷ್ಠದ್ ಧನಞ್ಜಯಃ ।

ಪ್ರಣಮ್ಯ ಪಾದಯೋಃ ಪ್ರಹ್ವೋ ಭಕ್ತ್ಯುದ್ರೇಕಾತ್ ಕೃತಾಞ್ಜಲಿಃ ॥೨೪.೧೬॥

 

ತದನಂತರ, ಯಾದವರಿಂದ ಕೂಡಿಕೊಂಡು ದ್ವಾರಕಾ ನಗರವನ್ನು ಹೊಂದಿದ ಶ್ರೀಕೃಷ್ಣನನ್ನು ಕುರಿತು, ಏಕಕಾಲದಲ್ಲಿ ದುರ್ಯೋಧನಾರ್ಜುನರು ಯುದ್ಧದ ಸಹಾಯವನ್ನು ಬಯಸಿ ತೆರಳಿದರು. ಅರ್ಜುನನನ್ನು ವೇಗದಿಂದ ದುರ್ಯೋಧನ ಮೀರಿದ(ಅರ್ಜುನನಿಗಿಂತ ಮೊದಲು ಶ್ರೀಕೃಷ್ಣನಲ್ಲಿಗೆ ದುರ್ಯೋಧನ ತಲುಪಿದ). ದುರ್ಯೋಧನನಾದರೋ, ದರ್ಪದಿಂದ, ‘ಚಕ್ರವರ್ತಿಯಾಗಿರುವ ನಾನು ಕಾಲಿನ ಬಳಿಯಿರುವ ಆಸನದಲ್ಲಿ ಕೂಡಲಾರೆ’ ಎಂದು ಶ್ರೀಕೃಷ್ಣನ ತಲೆಯ ಕಡೆ ಇರುವ ಆಸನದಲ್ಲಿ ಕುಳಿತ.

ಅರ್ಜುನ ಹಾಗೂ ದುರ್ಯೋಧನರ ಬರುವಿಕೆಯನ್ನು ಮೊದಲೇ ತಿಳಿದ, ನಿದ್ರೆಯೇ ಇಲ್ಲದ ಸರ್ವಸಮರ್ಥನಾದ ಶ್ರೀಕೃಷ್ಣಪರಮಾತ್ಮನು, ನಿದ್ರೆಮಾಡಿದಂತೆ ಮಲಗಿದ. ಅಲ್ಲಿ ಅರ್ಜುನನು ಭಗವಂತನ ಎರಡೂ ಕಾಲುಗಳಿಗೆ ವಿನಯದಿಂದ ಬಾಗಿ ನಮಸ್ಕರಿಸಿ, ಭಕ್ತಿಯ ಉದ್ರೇಕದಿಂದ ಕೈಗಳನ್ನು ಜೋಡಿಸಿಕೊಂಡು ಭಗವಂತನ ಕಾಲಬಳಿಯೇ ನಿಂತುಕೊಂಡ.

 

ತಮೈಕ್ಷತ್ ಪ್ರಥಮಂ ದೇವೋ ಜಾನನ್ನಪಿ ಸುಯೋಧನಮ್ ।

ಸ್ವಾಗತಂ ಫಲ್ಗುನೇತ್ಯುಕ್ತೇ ಪೂರ್ವಮಾಗಾಮಹಂ ತ್ವಿತಿ ॥೨೪.೧೭॥

 

ಆಹ ದುರ್ಯ್ಯೋಧನಸ್ತಂ ಚ ಸ್ವಾಗತೇನಾಭ್ಯಪೂಜಯತ್ ।

ತಯೋರಾಗಮನೇ ಹೇತುಂ ಶ್ರುತ್ವಾ ಪ್ರಾಹ ಜನಾರ್ದ್ದನಃ ॥೨೪.೧೮॥

 

ಕ್ರೀಡಾದಿ ಗುಣವಿಶಿಷ್ಟನಾದ ಶ್ರೀಕೃಷ್ಣಪರಮಾತ್ಮನು ದುರ್ಯೋಧನನನ್ನು ತಿಳಿದೂ, ಮೊದಲು ಅರ್ಜುನನನ್ನೇ ಕಂಡ. ‘ಅರ್ಜುನ, ನಿನಗೆ ಸ್ವಾಗತ ಎಂದು ಶ್ರೀಕೃಷ್ಣ ಹೇಳಲು, ದುರ್ಯೋಧನ ‘ನಾನು ಮೊದಲು ಬಂದಿದ್ದು’ ಎಂದು ಹೇಳಿದ. ಆಗ ಕೃಷ್ಣ ‘ಸ್ವಾಗತ’ ಎಂದು ಹೇಳಿ ಸತ್ಕಾರವನ್ನು ಮಾಡಿದ. ಅವರಿಬ್ಬರ  ಬರುವಿಕೆಗೆ ಕಾರಣವನ್ನು ಕೇಳಿದ ಶ್ರೀಕೃಷ್ಣ ಹೀಗೆ ಹೇಳಿದ-

 

ಏಕಃ ಪೂರ್ವಾಗತೋSತ್ರಾನ್ಯಃ ಪೂರ್ವದೃಷ್ಟೋ ಮಯಾ ಯತಃ ।

ಸಮಂ ಕರಿಷ್ಯೇ ಯುವಯೋರೇಕತ್ರಾಹಂ ನಿರಾಯುಧಃ ॥೨೪.೧೯॥

 

ಅನ್ಯತ್ರ ದಶಲಕ್ಷಂ ಮೇ ಪುತ್ರಾಃ ಶೂರಾಃ ಪದಾತಯಃ ।

ಇತ್ಯುಕ್ತೇ ಫಲ್ಗುನಃ ಕೃಷ್ಣಂ ವವ್ರೇ ತದ್ಭಕ್ತಿಮಾನ್ ಯತಃ ॥೨೪.೨೦॥

 

‘ಒಬ್ಬ(ದುರ್ಯೋಧನ) ಮೊದಲು ಬಂದಿದ್ದಾನೆ, ಒಬ್ಬನನ್ನು(ಅರ್ಜುನನನ್ನು) ನಾನು ಮೊದಲು ನೋಡಿದ್ದೇನೆ. ಅದರಿಂದಾಗಿ ನಿಮ್ಮಬ್ಬರಿಗೂ ಸಮವಾಗಿ ನನ್ನನ್ನು ಹಂಚುತ್ತೇನೆ.  ಒಂದೆಡೆ ನಿರಾಯುಧನಾಗಿರುವ  ನಾನಿದ್ದೇನೆ. ಇನ್ನೊಂದು ಕಡೆ ನನ್ನ ಹತ್ತುಲಕ್ಷ ಜನ ಶೂರರಾಗಿರುವ ಮಕ್ಕಳಿದ್ದಾರೆ’ ಎಂದು ಶ್ರೀಕೃಷ್ಣ ನುಡಿಯಲು, ಕೃಷ್ಣನಲ್ಲಿ ಆತ್ಯಂತಿಕವಾದ ಭಕ್ತಿಯುಳ್ಳವನಾಗಿರುವ ಅರ್ಜುನನು ಶ್ರೀಕೃಷ್ಣನನ್ನು ಆರಿಸಿಕೊಂಡ.

 

ಅನ್ಯಸ್ತತ್ರಾಭಕ್ತಿಮತ್ತ್ವಾದ್ ವವ್ರೇ ಗೋಪಾನ್ ಪ್ರಯುದ್ಧ್ಯತಃ ।

ಪಾರ್ತ್ಥನಾಮೇವ ಸಾಹಾಯ್ಯಂ ಕರಿಷ್ಯನ್ನಪಿ ಕೇಶವಃ ॥೨೪.೨೧॥

 

ತಸ್ಯಾಭಕ್ತಿಂ ದರ್ಶಯಿತುಂ ಚಕ್ರೇ ಸಮವದೀಶ್ವರಃ ।

ತತಃ ಪಾರ್ತ್ಥೇನ ಸಹಿತಃ ಪಾಣ್ಡವಾನ್ ಕೇಶವೋ ಯಯೌ ॥೨೪.೨೨॥

 

ಇನ್ನೊಬ್ಬನು(ದುರ್ಯೋಧನನು) ಶ್ರೀಕೃಷ್ಣನಲ್ಲಿ ಭಕ್ತಿ ಇಲ್ಲದೇ ಇರುವುದರಿಂದ ಯುದ್ಧಮಾಡುವ ಗೋಪಾಲಕರನ್ನು ಬೇಡಿದ. ಶ್ರೀಕೃಷ್ಣಪರಮಾತ್ಮನು ಪಾಂಡವರಿಗೇ ಸಹಾಯವನ್ನು ಮಾಡುವವನಾದರೂ, ದುರ್ಯೋಧನನ ಭಕ್ತಿ ಹೀನತೆಯನ್ನು ಜಗತ್ತಿಗೆ ತೋರಿಸಲು ತನ್ನನ್ನು ಗೋಪಾಲಕರ ಸೈನ್ಯಕ್ಕೆ ಸಮವೆಂಬಂತೆ ಮಾತನಾಡಿದ. ತದನಂತರ ಅರ್ಜುನನಿಂದ ಕೂಡಿಕೊಂಡ ಶ್ರೀಕೃಷ್ಣ  ಪಾಂಡವರಬಳಿ ತೆರಳಿದ.

Thursday, December 8, 2022

Mahabharata Tatparya Nirnaya Kannada 24-01-12

 

೨೪. ಯುದ್ಧೋದ್ಯೋಗಃ

 

̐

ತತಃ ಸಮ್ಮನ್ತ್ರ್ಯಾನುಮತೇ ಕೃಷ್ಣಸ್ಯ ಸ್ವಪುರೋಹಿತಮ್ ।

ದ್ರುಪದಃ ಪ್ರೇಷಯಾಮಾಸ ಧೃತರಾಷ್ಟ್ರಾಯ ಶಾನ್ತಯೇ ॥೨೪.೦೧॥

 

ತದನಂತರ ಶ್ರೀಕೃಷ್ಣಪರಮಾತ್ಮನ ಸನ್ನಿಧಿಯಲ್ಲಿ ದ್ರುಪದನು ಚೆನ್ನಾಗಿ ಆಲೋಚನೆ ಮಾಡಿ, ಶಾಂತಿಗಾಗಿ ಧೃತರಾಷ್ಟ್ರನನ್ನು ಕುರಿತು ತನ್ನ ಪುರೋಹಿತನನ್ನು ಕಳುಹಿಸಿಕೊಟ್ಟನು.

 

ಸ ಗತ್ವಾ ಧೃತರಾಷ್ಟ್ರಂ ತಂ ಭೀಷ್ಮದ್ರೋಣಾದಿಭಿರ್ಯ್ಯುತಮ್ ।

ಉವಾಚ ನ ವಿರೋಧಸ್ತ ಉತ್ಪಾದ್ಯೋ ಧರ್ಮ್ಮಸೂನುನಾ ॥೨೪.೦೨॥

 

ದ್ರುಪದನಿಂದ ಕಳುಹಿಸಲ್ಪಟ್ಟ ಆ ಪುರೋಹಿತನು ಭೀಷ್ಮ-ದ್ರೋಣರಿಂದ ಕೂಡಿರುವ ಧೃತರಾಷ್ಟ್ರನ ಬಳಿ ತೆರಳಿ ‘ನೀನು ಧರ್ಮರಾಜ ಮೊದಲಾದವರಿಗೆ ವಿರೋಧವನ್ನು ಮಾಡಬಾರದು’ ಎಂದು ಹೇಳಿದ.   

 

ಯಸ್ಯ ಭೀಮಾರ್ಜ್ಜುನೌ ಯೌಧೌ ನೇತಾ ಯಸ್ಯ ಜನಾರ್ದ್ದನಃ ।

ಶ್ರುತಾಸ್ತೇ ಭೀಮನಿಹತಾ ಜರಾಸನ್ಧಾದಯೋSಖಿಲಾಃ ॥೨೪.೦೩॥

 

'ಯಾರಿಗಾಗಿ ಭೀಮಾರ್ಜುನರು ಯುದ್ಧ ಮಾಡುವರೋ, ಯಾರಿಗೆ ಶ್ರೀಕೃಷ್ಣಪರಮಾತ್ಮನು ಪ್ರೇರಕನಾಗಿದ್ದಾನೋ, ಅಂಥಹ ಧರ್ಮರಾಜನೊಡನೆ ವಿರೋಧಕಟ್ಟಿಕೊಳ್ಳುವುದು ಸರಿಯಲ್ಲ. ಜರಾಸಂಧಾದಿಗಳು ಭೀಮನಿಂದ ಕೊಲ್ಲಲ್ಪಟ್ಟಿದ್ದಾರೆ ಎನ್ನುವುದು ನಿನಗೆ ತಿಳಿದೇ ಇದೆ.

 

ಯಥಾ ಚ ರುದ್ರವಚನಾದವದ್ಧ್ಯಾ ರಾಕ್ಷಸಾಧಿಪಾಃ ।

ತೀರ್ತ್ಥವಿಘ್ನಕರಾಃ ಸರ್ವತೀರ್ತ್ಥಾನ್ಯಾಚ್ಛಾದ್ಯ ಸಂಸ್ಥಿತಾಃ ॥೨೪.೦೪॥

 

ತಿಸ್ರಃ ಕೋಟ್ಯೋ ಮಹಾವೀರ್ಯ್ಯಾ ಭೀಮೇನೈವ ನಿಸೂದಿತಾಃ ।

ಭ್ರಾತೄಣಾಂ ಬ್ರಾಹ್ಮಣಾನಾಂ ಚ ಲೋಕಾನಾಂ ಚ ಹಿತೈಷಿಣಾ ॥೨೪.೦೫॥

 

ತತೋ ಹಿ ಸರ್ವತೀರ್ತ್ಥಾನಿ ಗಮ್ಯಾನ್ಯಾಸನ್ ನೃಣಾಂ ಕ್ಷಿತೌ ।

ಯಥಾ ಜಟಾಸುರಃ ಪಾಪಃ ಶರ್ವಾಣೀವರಸಂಶ್ರಯಾತ್ ॥೨೪.೦೬॥

 

ಅವದ್ಧ್ಯೋ ವಿಪ್ರರೂಪೇಣ ವಞ್ಚಯನ್ನೇವ ಪಾಣ್ಡವಾನ್ ।

ಜ್ಞಾತ್ವಾSಪಿ ಭೀಮಸೇನೇನ ವಿಪ್ರರೂಪಸ್ಯ ನೋ ವಧಃ ॥೨೪.೦೭॥

 

ಯೋಗ್ಯ ಇತ್ಯಹತೋ ಭೀಮೇ ಮೃಗಯಾರ್ತ್ಥಂ ಗತೇ ಕ್ವಚಿತ್ ।

ಯಮೌ ಯುಧಿಷ್ಠಿರಂ ಕೃಷ್ಣಾಂ ಚಾSದಾಯೈವ ಪರಾದ್ರವತ್  ॥೨೪.೦೮॥

 

ಹೇಗೆ ರುದ್ರನ ಮಾತಿನಿಂದ(ವರದಿಂದ) ಅವಧ್ಯರಾಗಿರುವ, ತೀರ್ಥಕ್ಷೇತ್ರದಲ್ಲಿದ್ದು ವಿಘ್ನವನ್ನುಂಟುಮಾಡುವ, ಎಲ್ಲಾ ತೀರ್ಥಕ್ಷೇತ್ರಗಳನ್ನೂ ವ್ಯಾಪಿಸಿರುವ, ಮಹಾವೀರ್ಯರಾದ ರಾಕ್ಷಸಾದಿಪರು ಭೀಮಸೇನನಿಂದ ಕೊಲ್ಲಲ್ಪಟ್ಟರು ಎನ್ನುವುದು ತಿಳಿದಿದೆ.

ಅಣ್ಣ-ತಮ್ಮಂದಿರಿಗಾಗಿ, ಬ್ರಾಹ್ಮಣರಿಗಾಗಿ, ತೀರ್ಥಕ್ಷೇತ್ರಯಾತ್ರೆ ಬಯಕೆಯಿರುವ ಎಲ್ಲರ ಹಿತವನ್ನು ಬಯಸುವ ಭೀಮಸೇನನಿಂದ ಮೂರುಕೋಟಿ ಜನ ರಾಕ್ಷಸರು ಕೊಲ್ಲಲ್ಪಟ್ಟಿದ್ದಾರೆ. ಆ ನಂತರವೇ ಎಲ್ಲಾ ತೀರ್ಥಕ್ಷೇತ್ರಗಳು ಮನುಷ್ಯರಿಗೆ ಗಮ್ಯವಾಗಿವೆ.

ಪಾಪಿಷ್ಠನಾದ ಜಾಟಾಸುರನು ಪಾರ್ವತೀದೇವಿ ವರದಿಂದ ಅವಧ್ಯನಾಗಿದ್ದ. ಅವನು ಬ್ರಾಹ್ಮಣನ ವೇಷದಲ್ಲಿ ಪಾಂಡವರನ್ನು ಮೋಸಮಾಡುತ್ತಲೇ ಇದ್ದ. ಇದು ಭೀಮಸೇನನಿಂದ ತಿಳಿಯಲ್ಪಟ್ಟರೂ ಕೂಡಾ, ಬ್ರಾಹ್ಮಣನ ವೇಷವನ್ನು ಧರಿಸಿರುವುದರಿಂದ ಅವನ ಸಂಹಾರವು ಯೋಗ್ಯವಲ್ಲ ಎಂದು ಅವನನ್ನು ಭೀಮಸೇನ ಕೊಂದಿರಲಿಲ್ಲ.   

ಒಮ್ಮೆ ಭೀಮಸೇನನು ಭೇಟೆಗಾಗಿ ಹೋಗಿರಲು, ಜಾಟಾಸುರನು ನಕುಲ-ಸಹದೇವರನ್ನೂ, ಧರ್ಮರಾಜನನ್ನೂ, ದ್ರೌಪದಿಯನ್ನೂ ಹಿಡಿದುಕೊಂಡು ಓಡಿದ.

[ಈ ಕುರಿತ ವಿವರವನ್ನು ಮಹಾಭಾರತದ ವನಪರ್ವದಲ್ಲಿ (೧೫೮.೩೯-೪೦)  ಕಾಣಬಹುದು: ‘ವಿಜ್ಞಾತೋSಸಿ ಮಯಾ ಪೂರ್ವಂ ಚೇಷ್ಟನ್ ಶಸ್ತ್ರಪರೀಕ್ಷಣೇ । ಆಸ್ಥಾ ತು ತ್ವಯಿ ಮೇ ನಾಸ್ತಿ ಯತೋSಸಿ ನ ಹತಸ್ತದಾ । ಬ್ರಹ್ಮರೂಪಪ್ರತಿಚ್ಛನ್ನೋ ನ ನೋ ವದಸಿ ಚಾಪ್ರಿಯಮ್ ।  ಪ್ರಿಯೇಷು ರಮಮಾಣಂ ತ್ವಾಂ ನ ಚೈವಾಪ್ರಿಯಕಾರಿಣಮ್ । ಬ್ರಹ್ಮರೂಪೇಣ ಪಿಹಿತಂ ನೈವ ಹನ್ಯಾಮನಾಗಸಮ್’ ]  

 

ದೃಷ್ಟೋ ಭೀಮೇನ ತಾಂಸ್ತ್ಯಕ್ತ್ವಾ ಸಂಸಕ್ತಸ್ತೇನ ಸಙ್ಗರೇ ।

ನಿಪಾತ್ಯ ಭೂಮೌ ಪಾದೇನ ಸಞ್ಚೂರ್ಣ್ಣಿತಶಿರಾಸ್ತಮಃ ॥೨೪.೦೯॥

 

ಭೀಮಸೇನನಿಂದ ವೀಕ್ಷಿತನಾದ ಜಟಾಸುರನು ಅವರೆಲ್ಲರನ್ನೂ ಬಿಟ್ಟು, ಭೀಮನೊಂದಿಗೆ ಯುದ್ಧದಲ್ಲಿ ತೊಡಗಿದನು. ಆ ಜಟಾಸುರನು ಭೂಮಿಯಲ್ಲಿ ಕೆಡವಲ್ಪಟ್ಟು, ಭೀಮಸೇನನ ಪಾದದಿಂದಲೇ ಪುಡಿಪುಡಿಯಾದ ತಲೆಯುಳ್ಳವನಾಗಿ ಅನ್ಧಂತಮಸ್ಸಿಗೆ ಹೋದ.

 

ಜಗಾಮ ಕಿಮು ತೇ ಪುತ್ರಾಃ ಶಕ್ಯಾ ಹನ್ತುಮಿತಿ ಸ್ಮ ಹ ।

ನಿವಾತಕವಚಾಶ್ಚೈವ ಹತಾಃ ಪಾರ್ತ್ಥೇನ ತೇ ಶ್ರುತಾಃ ॥೨೪.೧೦॥

 

ಇನ್ನು ನಿನ್ನ ಮಕ್ಕಳಾದ ದುರ್ಯೋಧನಾದಿಗಳನ್ನು ಕೊಲ್ಲಲು ಸಾಧ್ಯವಿಲ್ಲವೇ ? ನಿವಾತಕವಚರೆಂಬ ರಾಕ್ಷಸರೂ ಕೂಡಾ ಅರ್ಜುನನಿಂದ ಸತ್ತಿದ್ದಾರೆ.

 

ಜಾನಾಸಿ ಚ ಹರೇರ್ವೀರ್ಯ್ಯಂ ಯಸ್ಯೇದಮಖಿಲಂ ವಶೇ ।

ಸಬ್ರಹ್ಮರುದ್ರಶಕ್ರಾದ್ಯಂ ಚೇತನಾಚೇತನಾತ್ಮಕಮ್ ॥೨೪.೧೧॥

 

ಪರಮಾತ್ಮನ ಪರಾಕ್ರಮವನ್ನು ನೀನು ತಿಳಿದಿದ್ದೀಯ. ಬ್ರಹ್ಮ-ರುದ್ರ-ಇಂದ್ರ ಮೊದಲಾಗಿರುವ ಚೇತನ-ಅಚೇತನ, ಹೀಗೆ ಇಡೀ ಪ್ರಪಂಚ ಅವನ ವಶದಲ್ಲಿದೆ. 

 

ತಸ್ಮಾದೇತೈಃ ಪಾಲಿತಸ್ಯ ಧರ್ಮ್ಮಜಸ್ಯ ಸ್ವಕಂ ವಸು ।

ದೀಯತಾಮಿತಿ ತೇನೋಕ್ತೋ ಧೃತರಾಷ್ಟ್ರೋ ನಚಾಕರೋತ್ ॥೨೪.೧೨॥

 

ಅದರಿಂದ ಭೀಮ-ಅರ್ಜುನ-ಕೃಷ್ಣರಿಂದ ರಕ್ಷಿತನಾಗಿರುವ ಧರ್ಮರಾಜನಿಗೆ ಅವನ ಧನ ಕೊಡಲ್ಪಡಲಿ’ ಎಂದು ದ್ರುಪದರಾಜನ ಪುರೋಹಿತನಿಂದ ಹೇಳಲ್ಪಟ್ಟರೂ ಧೃತರಾಷ್ಟ್ರ ಮಾತ್ರ ಆ ಕೆಲಸವನ್ನು ಮಾಡಲಿಲ್ಲ.

Sunday, December 4, 2022

Mahabharata Tatparya Nirnaya Kannada 23-49-59

 

ಏವಂ ವಿರಾಟಂ ಮೋಚಯಿತ್ವೈವ ಗಾಶ್ಚ ತಮಸ್ಯನ್ಧೇ ಕೀಚಕಾನ್ ಪಾತಯಿತ್ವಾ ।

ಪ್ರಾಪ್ತೋ ಧರ್ಮ್ಮಃ ಸುಮಹಾನ್ ವಾಯುಜೇನ ತಸ್ಯಾನು ಪಾರ್ತ್ಥೇನ ಚ ಗೋವಿಮೋಕ್ಷಣಾತ್ ॥೨೩.೪೯॥

 

ಈ ಪ್ರಕಾರವಾಗಿ ವಿರಾಟನನ್ನೂ, ಅವನ ಹಸುಗಳನ್ನೂ ಬಿಡಿಸಿ, ಕೀಚಕರನ್ನು ಅನ್ಧಂತಮಸ್ಸಿನಲ್ಲಿ ಬೀಳಿಸಿ, ಭೀಮಸೇನನಿಂದ ಮಹಾಪುಣ್ಯವು ಹೊಂದಲ್ಪಟ್ಟಿತು. ಭೀಮನ ನಂತರ ಅರ್ಜುನನಿಂದ ಗೋವುಗಳನ್ನು ಬಿಡಿಸಿದ್ದರಿಂದ ಪುಣ್ಯವು ಹೊಂದಲ್ಪಟ್ಟಿತು.

 

ಅಯಾತಯನ್ ಕೇಶವಾಯಾಥ ದೂತಾನ್ ಸಹಾಭಿಮನ್ಯುಃ ಸೋSಪಿ ರಾಮೇಣ ಸಾರ್ದ್ಧಮ್ ।

ಆಗಾದನನ್ತಾನನ್ದಚಿದ್ ವಾಸುದೇವೋ ವಿವಾಹಯಾಮಾಸುರಥಾಭಿಮನ್ಯುಮ್ ॥೨೩.೫೦॥

 

ತದನಂತರ ಶ್ರೀಕೃಷ್ಣನಲ್ಲಿಗೆ ಪಾಂಡವರು ಧೂತನನ್ನು ಕಳುಹಿಸಿದರು. ಬಲರಾಮನಿಂದ, ಅಭಿಮನ್ಯುವಿನಿಂದ ಕೂಡಿಕೊಂಡು, ಎಣೆಯಿರದ ಅರಿವಿನ ಶ್ರೀಕೃಷ್ಣ ಪರಮಾತ್ಮನು ವಿರಾಟನಗರಕ್ಕೆ ಬಂದ. ಬಂದಮೇಲೆ ಅಭಿಮನ್ಯುವಿಗೆ ಮದುವೆ ಮಾಡಿಸಿದರು.  

 

ಆಸೀನ್ಮಹಾನುತ್ಸವಸ್ತತ್ರ ತೇಷಾಂ ದಶಾರ್ಹವೀರೈಃ ಸಹ ಪಾಣ್ಡವಾನಾಮ್ ।

ಸಪಾಞ್ಚಲಾನಾಂ ವಾಸುದೇವೇನ ಸಾರ್ದ್ಧಮಜ್ಞಾತವಾಸಂ ಸಮತೀತ್ಯ ಮೋದತಾಮ್ ॥೨೩.೫೧॥

 

ಆ ಸಂದರ್ಭದಲ್ಲಿ ಯಾದವ ವೀರರಿಂದ ಕೂಡಿಕೊಂಡು ಆ ಪಾಂಡವರಿಗೆ ದೊಡ್ಡ ಸಂಭ್ರಮದ ಹಬ್ಬ ನಡೆಯಿತು. ಪಂಚಾಲರೂ ಕೂಡಾ ಬಂದು ಸೇರಿದ್ದರು. ಹೀಗೆ ಅಜ್ಞಾತವಾಸವನ್ನು ಯಶಸ್ವಿಯಾಗಿ ಮುಗಿಸಿ, ಸಂತೋಷಪಡುವ ಪಾಂಡವರಿಗೆ ಎಲ್ಲಾ ರೀತಿಯಿಂದ ಹಬ್ಬವಾಯಿತು.

 

ದುರ್ಯ್ಯೋಧನಾದ್ಯಾಃ ಸೂತಪುತ್ರೇಣ ಸಾರ್ದ್ಧಂ ಸಸೌಬಲೇಯಾ ಯುಧಿ ಪಾರ್ತ್ಥಪೀಡಿತಾಃ ।

ಭೀಷ್ಮಾದಿಭಿಃ ಸಾರ್ದ್ಧಮುಪೇತ್ಯ ನಾಗಪುರಂ ಮನ್ತ್ರಂ ಮನ್ತ್ರಯಾಮಾಸುರತ್ರ ॥೨೩.೫೨॥

 

ಇತ್ತ ಯುದ್ಧದಲ್ಲಿ ಅರ್ಜುನನಿಂದ ಸೋತ ದುರ್ಯೋಧನಾದಿಗಳು ಕರ್ಣ, ಶಕುನಿ, ಭೀಷ್ಮಾದಿಗಳಿಂದ ಕೂಡಿಕೊಂಡು ಹಸ್ತಿನಾವತಿಗೆ ತೆರಳಿ, ಎಲ್ಲರೂ ಕೂಡಾ ಮಂತ್ರಾಲೋಚನೆಗೆಂದು ಸೇರಿದರು.

 

ಅಜ್ಞಾತವಾಸೇ ಫಲ್ಗುನೋ ನೋSದ್ಯ ದೃಷ್ಟಸ್ತಸ್ಮಾತ್ ಪುನರ್ಯ್ಯಾನ್ತು ಪಾರ್ತ್ಥಾ ವನಾಯ ।

ಇತಿ ಬ್ರುವಾಣಾನಾಹ ಭೀಷ್ಮೋSಭ್ಯತೀತಮಜ್ಞಾತವಾಸಂ ದ್ರೋಣ ಆಹೈವಮೇವ ॥೨೩.೫೩॥

 

ಅಜ್ಞಾತವಾಸದಲ್ಲಿ ಅರ್ಜುನನು ನಮ್ಮಿಂದ ಕಾಣಲ್ಪಟ್ಟಿದ್ದಾನೆ. ಅದರಿಂದ ಪಾಂಡವರು ಮತ್ತೆ ಕಾಡಿಗೆ ತೆರಳಲಿ ಎಂದು ಹೇಳುತ್ತಿರುವ ದುರ್ಯೋಧನಾದಿಗಳನ್ನೂ ಭೀಷ್ಮನು ತಡೆದು, ಅಜ್ಞಾತವಾಸ ಕಳೆದುಹೋಯಿತು ಎಂದು ಹೇಳಿದ. ದ್ರೋಣಾಚಾರ್ಯರೂ ಹೀಗೆಯೇ ಹೇಳಿದರು.

 

ತಯೋರ್ವಾಕ್ಯಂ ತೇ ತ್ವನಾದೃತ್ಯ ಪಾಪಾ ವನಂ ಪಾರ್ತ್ಥಾಃ ಪುನರೇವ ಪ್ರಯಾನ್ತು ।

ಇತಿ ದೂತಂ ಪ್ರೇಷಯಾಮಾಸುರತ್ರ ಜಾನನ್ತಿ ವಿಪ್ರಾ ಇತಿ ಧರ್ಮ್ಮಜೋSವದತ್ ॥೨೩.೫೪॥

 

ಈರೀತಿಯಾಗಿ ಹೇಳಿದ ಅವರಿಬ್ಬರ ಮಾತನ್ನು ಅನಾದರಿಸಿದ ಪಾಪಿಷ್ಠರಾಗಿರುವ ದುರ್ಯೋಧನಾದಿಗಳು, ಪಾಂಡವರು ಮತ್ತೆ ಕಾಡಿಗೆ ತೆರಳಲಿ ಎಂದು ಹೇಳಿ ದೂತನನ್ನು ಕಳುಹಿಸಿದರು. ಆಗ ಧರ್ಮರಾಜ ‘ಬ್ರಾಹ್ಮಣರಿಗೆ ತಿಳಿದಿದೆ’ ಎಂದು ಹೇಳಿದ.

 

[ಯಾವ ಕಾಲಮಾನದ ಪ್ರಕಾರ ಯುಧಿಷ್ಠಿರ, ಭೀಷ್ಮ-ದ್ರೋಣಾದಿಗಳು ಅಜ್ಞಾತವಾಸ ಪೂರ್ಣವಾಗಿದೆ ಎಂದು ಹೇಳಿದರು ಹಾಗೂ ಯಾವ ಕಾಲಮಾನದ ಪ್ರಕಾರ ದುರ್ಯೋಧನಾದಿಗಳು ಅಜ್ಞಾತವಾಸ ಅಪೂರ್ಣವಾಗಿದೆ  ಎಂದರು ಎನ್ನುವುದನ್ನು ವಿವರಿಸುತ್ತಾರೆ-]   

 

ಸೌರಮಾಸಾನುಸಾರೇಣ ಧಾರ್ತ್ತರಾಷ್ಟ್ರಾ ಅಪೂರ್ಣ್ಣತಾಮ್ ।

ಆಹುಶ್ಚಾನ್ದ್ರೇಣ ಮಾಸೇನ ಪೂರ್ಣ್ಣಃ ಕಾಲೋSಖಿಲೋSಪ್ಯಸೌ ॥೨೩.೫೫॥

 

ಸೌರಮಾನದ ಪ್ರಕಾರ (೩೦ ದಿನಕ್ಕೆ ಒಂದು ತಿಂಗಳು ಎಂದು ಲೆಕ್ಕ ಇಟ್ಟುಕೊಂಡರೆ) ಪಾಂಡವರ ಅಜ್ಞಾತವಾಸಕ್ಕೆ ೧ ವರ್ಷ ಕಳೆದಿರಲಿಲ್ಲ. ಹಾಗಾಗಿ ದುರ್ಯೋಧನಾದಿಗಳು ಅಪೂರ್ಣ ಎಂದರೆ,   ಚಾಂದ್ರಮಾನ ಪ್ರಕಾರ (೨೭ದಿನಗಳಿಗೆ ಒಂದು ತಿಂಗಳು) ಒಂದು ವರ್ಷ ಪೂರ್ಣವಾಗಿತ್ತು ಮತ್ತು ಅದು ಆ ಕಾಲದ ವರ್ಷ ಮಾಪನವಾಗಿತ್ತು ಕೂಡಾ.

 

 

ದಿನಾನಾಮಧಿಪಃ ಸೂರ್ಯ್ಯಃ ಪಕ್ಷಮಾಸಾಬ್ದಪಃ ಶಶೀ ।

ತಸ್ಮಾತ್ ಸೌಮ್ಯಾಬ್ದಮೇವಾತ್ರ ಮುಖ್ಯಮಾಹುರ್ಮ್ಮನೀಷಿಣಃ ॥೨೩.೫೬॥

 

ದಿನಗಳ ಅಧಿಪತಿ ಸೂರ್ಯ. ಆದರೆ ಪಕ್ಷ ಹಾಗೂ ತಿಂಗಳಿಗೆ ಚಂದ್ರನೇ ಅಧಿಪತಿ. ಆಕಾರಣದಿಂದ ಜ್ಞಾನಿಗಳು ಚಾಂದ್ರಮಾನದ ವರ್ಷವನ್ನು ಮುಖ್ಯವಾಗಿ ಹೇಳುತ್ತಾರೆ.

 

ಸೌಮ್ಯಂ ಕಾಲಂ ತತೋ ಯಜ್ಞೇ ಗೃಹ್ಣನ್ತಿ ನತು ಸೂರ್ಯ್ಯಜಮ್ ।

ತದೇತದವಿಚಾರ್ಯ್ಯೈವ ಲೋಭಾಚ್ಚ ಧೃತರಾಷ್ಟ್ರಜೈಃ ॥೨೩.೫೭॥

 

ಇದು ವೈದಿಕ  ಸಂಪ್ರದಾಯ ಸಿದ್ಧವೂ ಆಗಿದೆ. ಯಜ್ಞದಲ್ಲಿ ಚಾಂದ್ರಮಾನವನ್ನೇ ತೆಗೆದುಕೊಳ್ಳುತ್ತಾರೆ ಹೊರತು ಸೌರಮಾನವನ್ನಲ್ಲ. ಇವುಗಳೆಲ್ಲವನ್ನು ವಿಚಾರವೇ ಮಾಡದೇ ಅತಿಲೋಭದಿಂದ ದುರ್ಯೋಧನಾದಿಗಳಿಂದ ಪಾಂಡವರಿಗೆ ರಾಜ್ಯವು ಕೊಡಲ್ಪಡಲಿಲ್ಲ.

 

ರಾಜ್ಯಂ ನ ದತ್ತಂ ಪಾರ್ತ್ಥೇಭ್ಯಃ ಪಾರ್ತ್ಥಾಃ ಕಾಲಸ್ಯ ಪೂರ್ಣ್ಣತಾಮ್ ।

ಖ್ಯಾಪಯನ್ತೋ ವಿಪ್ರವರೈರುಪಪ್ಲಾವ್ಯಮುಪಾಯಯುಃ ॥೨೩.೫೮॥

 

ಪಾಂಡವರು ಕಾಲ ಪೂರ್ಣವಾಯಿತು ಎಂದು ಜಗತ್ತಿಗೇ ಹೇಳುತ್ತಾ, ಬ್ರಾಹ್ಮಣರಿಂದ ಕೂಡಿಕೊಂಡು ಉಪಪ್ಲಾವ್ಯನಗರವನ್ನು ಕುರಿತು ಬಂದರು. (ಉಪಪ್ಲಾವ್ಯ ವಿರಾಟನಗರಕ್ಕೂ ಹಸ್ತಿನಪುರಕ್ಕೂ ಗಡಿಯಲ್ಲಿರುವ  ಹಸ್ತಿನಪುರಕ್ಕೆ ಸೇರಿರುವ ಸ್ಥಳ)

 

ಸವಾಸುದೇವಾ ಅಖಿಲೈಶ್ಚ ಯಾದವೈಃ ಪಾಞ್ಚಾಲಮತ್ಸೈಶ್ಚ ಯುತಾಃ ಸಭಾರ್ಯ್ಯಾಃ

ಉಪಪ್ಲಾವ್ಯೇ ತೇ ಕತಿಚಿದ್ ದಿನಾನಿ ವಾಸಂ ಚಕ್ರುಃ ಕೃಷ್ಣಸಂಶಿಕ್ಷಿತಾರ್ತ್ಥಾಃ ॥೨೩.೫೯॥

 

ಕೃಷ್ಣನೇ ಮೊದಲಾದ ಎಲ್ಲಾ ಯಾದವರಿಂದ, ಪಾಂಚಾಲ-ಮತ್ಸ್ಯ ದೇಶದವರಿಂದ ಕೂಡಿ, ಪತ್ನಿಯರಿಂದ ಒಡಗೂಡಿ, ಶ್ರೀಕೃಷ್ಣನಿಂದ ಬೋಧಿಸಲ್ಪಟ್ಟವರಾಗಿ, ಅವರು ಉಪಪ್ಲಾವ್ಯದಲ್ಲಿ ಕೆಲವು ದಿವಸಗಳ ಕಾಲ ವಾಸಮಾಡಿದರು.

[ಆದಿತಃ ಶ್ಲೋಕಾಃ :  ೩೬೩೯+೫೯=೩೬೯೮]

॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಅಜ್ಞಾತವಾಸಸಮಾಪ್ತಿರ್ನ್ನಾಮ ತ್ರಯೋವಿಂಶೋSದ್ಧ್ಯಾಯಃ

*********