ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, December 12, 2022

Mahabharata Tatparya Nirnaya Kannada 24-13-22

 

ತತಃ ಸಹೈವ ಯದುಭಿಃ ಕೃಷ್ಣಂ ದ್ವಾರವತೀಂ ಗತಮ್ ।

ಯುದ್ಧಸಾಹಾಯ್ಯಮಿಚ್ಛನ್ತೌ ಧಾರ್ತ್ತರಾಷ್ಟ್ರಧನಞ್ಜಯೌ ॥೨೪.೧೩॥

 

ಯುಗಪದ್ ಯಯತುಸ್ತತ್ರ ವೇಗೇನಾಜಯದರ್ಜ್ಜುನಮ್ ।

ದುರ್ಯ್ಯೋಧನಃ ಶಿರಸ್ಥಾನ ಆಸೀನೋSಭೂದ್ಧರೇಸ್ತದಾ ॥೨೪.೧೪॥

 

ದರ್ಪ್ಪಾನ್ನಾಹಂ ರಾಜರಾಜ ಉಪಾಸ್ಯೇ ಪಾದಯೋರಿತಿ ।

ತಯೋರಾಗಮನಂ ಪೂರ್ವಂ ಜ್ಞಾತ್ವೈವ ಹಿ ಹರಿಃ ಪ್ರಭುಃ ॥೨೪.೧೫॥

 

ಅಸುಪ್ತಃ ಸುಪ್ತವಚ್ಛಿಶ್ಯೇ ತತ್ರಾತಿಷ್ಠದ್ ಧನಞ್ಜಯಃ ।

ಪ್ರಣಮ್ಯ ಪಾದಯೋಃ ಪ್ರಹ್ವೋ ಭಕ್ತ್ಯುದ್ರೇಕಾತ್ ಕೃತಾಞ್ಜಲಿಃ ॥೨೪.೧೬॥

 

ತದನಂತರ, ಯಾದವರಿಂದ ಕೂಡಿಕೊಂಡು ದ್ವಾರಕಾ ನಗರವನ್ನು ಹೊಂದಿದ ಶ್ರೀಕೃಷ್ಣನನ್ನು ಕುರಿತು, ಏಕಕಾಲದಲ್ಲಿ ದುರ್ಯೋಧನಾರ್ಜುನರು ಯುದ್ಧದ ಸಹಾಯವನ್ನು ಬಯಸಿ ತೆರಳಿದರು. ಅರ್ಜುನನನ್ನು ವೇಗದಿಂದ ದುರ್ಯೋಧನ ಮೀರಿದ(ಅರ್ಜುನನಿಗಿಂತ ಮೊದಲು ಶ್ರೀಕೃಷ್ಣನಲ್ಲಿಗೆ ದುರ್ಯೋಧನ ತಲುಪಿದ). ದುರ್ಯೋಧನನಾದರೋ, ದರ್ಪದಿಂದ, ‘ಚಕ್ರವರ್ತಿಯಾಗಿರುವ ನಾನು ಕಾಲಿನ ಬಳಿಯಿರುವ ಆಸನದಲ್ಲಿ ಕೂಡಲಾರೆ’ ಎಂದು ಶ್ರೀಕೃಷ್ಣನ ತಲೆಯ ಕಡೆ ಇರುವ ಆಸನದಲ್ಲಿ ಕುಳಿತ.

ಅರ್ಜುನ ಹಾಗೂ ದುರ್ಯೋಧನರ ಬರುವಿಕೆಯನ್ನು ಮೊದಲೇ ತಿಳಿದ, ನಿದ್ರೆಯೇ ಇಲ್ಲದ ಸರ್ವಸಮರ್ಥನಾದ ಶ್ರೀಕೃಷ್ಣಪರಮಾತ್ಮನು, ನಿದ್ರೆಮಾಡಿದಂತೆ ಮಲಗಿದ. ಅಲ್ಲಿ ಅರ್ಜುನನು ಭಗವಂತನ ಎರಡೂ ಕಾಲುಗಳಿಗೆ ವಿನಯದಿಂದ ಬಾಗಿ ನಮಸ್ಕರಿಸಿ, ಭಕ್ತಿಯ ಉದ್ರೇಕದಿಂದ ಕೈಗಳನ್ನು ಜೋಡಿಸಿಕೊಂಡು ಭಗವಂತನ ಕಾಲಬಳಿಯೇ ನಿಂತುಕೊಂಡ.

 

ತಮೈಕ್ಷತ್ ಪ್ರಥಮಂ ದೇವೋ ಜಾನನ್ನಪಿ ಸುಯೋಧನಮ್ ।

ಸ್ವಾಗತಂ ಫಲ್ಗುನೇತ್ಯುಕ್ತೇ ಪೂರ್ವಮಾಗಾಮಹಂ ತ್ವಿತಿ ॥೨೪.೧೭॥

 

ಆಹ ದುರ್ಯ್ಯೋಧನಸ್ತಂ ಚ ಸ್ವಾಗತೇನಾಭ್ಯಪೂಜಯತ್ ।

ತಯೋರಾಗಮನೇ ಹೇತುಂ ಶ್ರುತ್ವಾ ಪ್ರಾಹ ಜನಾರ್ದ್ದನಃ ॥೨೪.೧೮॥

 

ಕ್ರೀಡಾದಿ ಗುಣವಿಶಿಷ್ಟನಾದ ಶ್ರೀಕೃಷ್ಣಪರಮಾತ್ಮನು ದುರ್ಯೋಧನನನ್ನು ತಿಳಿದೂ, ಮೊದಲು ಅರ್ಜುನನನ್ನೇ ಕಂಡ. ‘ಅರ್ಜುನ, ನಿನಗೆ ಸ್ವಾಗತ ಎಂದು ಶ್ರೀಕೃಷ್ಣ ಹೇಳಲು, ದುರ್ಯೋಧನ ‘ನಾನು ಮೊದಲು ಬಂದಿದ್ದು’ ಎಂದು ಹೇಳಿದ. ಆಗ ಕೃಷ್ಣ ‘ಸ್ವಾಗತ’ ಎಂದು ಹೇಳಿ ಸತ್ಕಾರವನ್ನು ಮಾಡಿದ. ಅವರಿಬ್ಬರ  ಬರುವಿಕೆಗೆ ಕಾರಣವನ್ನು ಕೇಳಿದ ಶ್ರೀಕೃಷ್ಣ ಹೀಗೆ ಹೇಳಿದ-

 

ಏಕಃ ಪೂರ್ವಾಗತೋSತ್ರಾನ್ಯಃ ಪೂರ್ವದೃಷ್ಟೋ ಮಯಾ ಯತಃ ।

ಸಮಂ ಕರಿಷ್ಯೇ ಯುವಯೋರೇಕತ್ರಾಹಂ ನಿರಾಯುಧಃ ॥೨೪.೧೯॥

 

ಅನ್ಯತ್ರ ದಶಲಕ್ಷಂ ಮೇ ಪುತ್ರಾಃ ಶೂರಾಃ ಪದಾತಯಃ ।

ಇತ್ಯುಕ್ತೇ ಫಲ್ಗುನಃ ಕೃಷ್ಣಂ ವವ್ರೇ ತದ್ಭಕ್ತಿಮಾನ್ ಯತಃ ॥೨೪.೨೦॥

 

‘ಒಬ್ಬ(ದುರ್ಯೋಧನ) ಮೊದಲು ಬಂದಿದ್ದಾನೆ, ಒಬ್ಬನನ್ನು(ಅರ್ಜುನನನ್ನು) ನಾನು ಮೊದಲು ನೋಡಿದ್ದೇನೆ. ಅದರಿಂದಾಗಿ ನಿಮ್ಮಬ್ಬರಿಗೂ ಸಮವಾಗಿ ನನ್ನನ್ನು ಹಂಚುತ್ತೇನೆ.  ಒಂದೆಡೆ ನಿರಾಯುಧನಾಗಿರುವ  ನಾನಿದ್ದೇನೆ. ಇನ್ನೊಂದು ಕಡೆ ನನ್ನ ಹತ್ತುಲಕ್ಷ ಜನ ಶೂರರಾಗಿರುವ ಮಕ್ಕಳಿದ್ದಾರೆ’ ಎಂದು ಶ್ರೀಕೃಷ್ಣ ನುಡಿಯಲು, ಕೃಷ್ಣನಲ್ಲಿ ಆತ್ಯಂತಿಕವಾದ ಭಕ್ತಿಯುಳ್ಳವನಾಗಿರುವ ಅರ್ಜುನನು ಶ್ರೀಕೃಷ್ಣನನ್ನು ಆರಿಸಿಕೊಂಡ.

 

ಅನ್ಯಸ್ತತ್ರಾಭಕ್ತಿಮತ್ತ್ವಾದ್ ವವ್ರೇ ಗೋಪಾನ್ ಪ್ರಯುದ್ಧ್ಯತಃ ।

ಪಾರ್ತ್ಥನಾಮೇವ ಸಾಹಾಯ್ಯಂ ಕರಿಷ್ಯನ್ನಪಿ ಕೇಶವಃ ॥೨೪.೨೧॥

 

ತಸ್ಯಾಭಕ್ತಿಂ ದರ್ಶಯಿತುಂ ಚಕ್ರೇ ಸಮವದೀಶ್ವರಃ ।

ತತಃ ಪಾರ್ತ್ಥೇನ ಸಹಿತಃ ಪಾಣ್ಡವಾನ್ ಕೇಶವೋ ಯಯೌ ॥೨೪.೨೨॥

 

ಇನ್ನೊಬ್ಬನು(ದುರ್ಯೋಧನನು) ಶ್ರೀಕೃಷ್ಣನಲ್ಲಿ ಭಕ್ತಿ ಇಲ್ಲದೇ ಇರುವುದರಿಂದ ಯುದ್ಧಮಾಡುವ ಗೋಪಾಲಕರನ್ನು ಬೇಡಿದ. ಶ್ರೀಕೃಷ್ಣಪರಮಾತ್ಮನು ಪಾಂಡವರಿಗೇ ಸಹಾಯವನ್ನು ಮಾಡುವವನಾದರೂ, ದುರ್ಯೋಧನನ ಭಕ್ತಿ ಹೀನತೆಯನ್ನು ಜಗತ್ತಿಗೆ ತೋರಿಸಲು ತನ್ನನ್ನು ಗೋಪಾಲಕರ ಸೈನ್ಯಕ್ಕೆ ಸಮವೆಂಬಂತೆ ಮಾತನಾಡಿದ. ತದನಂತರ ಅರ್ಜುನನಿಂದ ಕೂಡಿಕೊಂಡ ಶ್ರೀಕೃಷ್ಣ  ಪಾಂಡವರಬಳಿ ತೆರಳಿದ.

No comments:

Post a Comment