ತತೋSಪರದಿನೇ ಸರ್ವೇ ಭೀಷ್ಮದ್ರೋಣಪುರಸ್ಸರಾಃ ।
ರಹಿತಂ ಕೀಚಕೈರ್ಮ್ಮಾತ್ಸ್ಯಂ ಶಕ್ಯಂ ಮತ್ವಾSಭಿನಿರ್ಯ್ಯಯುಃ
॥೨೩.೩೬॥
ಮಾರನೇದಿನ ಕೀಚಕರಿಂದ ರಹಿತವಾಗಿರುವ ಮತ್ಸ್ಯದೇಶವನ್ನು ‘ಸುಲಭತುತ್ತು’ ಎಂದು ತಿಳಿದು ಭೀಷ್ಮ-ದ್ರೋಣಾದಿಗಳು
ವಿರಾಟನಗರದತ್ತ ಯುದ್ಧಕ್ಕಾಗಿ ತೆರಳಿದರು.
[ಹಾಗಿದ್ದರೆ ಈ ಹಿಂದೆ ಏಕೆ ಈ ಭೀಷ್ಮಾದಿಗಳು ವಿರಾಟನನ್ನು ಗೆಲ್ಲುವ ಪ್ರಯತ್ನ
ಮಾಡಿರಲಿಲ್ಲ ಎಂದರೆ ಹೇಳುತ್ತಾರೆ-]
ಕೀಚಕಸ್ಯ ಹಿಡಿಮ್ಬಸ್ಯ ಬಕಕಿರ್ಮ್ಮೀರಯೋರಪಿ ।
ಜರಾಸನ್ಧಸ್ಯ ನೃಪತೇಃ ಕಂಸಾದೀನಾಂ ಚ ಸರ್ವಶಃ ॥೨೩.೩೭॥
ನ ಬಾಧನಾಯ ಭೀಷ್ಮಾದ್ಯಾ ಅಪಿ ಶೇಕುಃ ಕಥಞ್ಚನ ।
ತಸ್ಮಾತ್ ತೇ ಕೀಚಕಂ ಶಾನ್ತಂ ಶ್ರುತ್ವಾ ಮಾತ್ಸ್ಯಂ ಯಯುರ್ಯ್ಯುಧೇ ॥೨೩.೩೮॥
ಕೀಚಕ, ಹಿಡಿಂಬ, ಬಕ, ಕಿರ್ಮೀರ, ಜರಾಸಂಧ, ಕಂಸ ಮೊದಲಾದವರನ್ನು ಗೆಲ್ಲಲು ಭೀಷ್ಮಾದಿಗಳೂ
ಕೂಡಾ ಶಕ್ತರಾಗಿರಲಿಲ್ಲ. ಆ ಕಾರಣದಿಂದ ಅವರು ಕೀಚಕನು ಸತ್ತಿದ್ದಾನೆ ಎನ್ನುವುದನ್ನು ತಿಳಿದು, ವಿರಾಟನಗರವನ್ನು
ಕುರಿತು ಯುದ್ಧಕ್ಕಾಗಿ ತೆರಳಿದರು.
[ದ್ರೋಣಾಚಾರ್ಯರು ಈ ಯುದ್ಧದಲ್ಲಿ ಪಾಲ್ಗೊಂಡಿರುವುದಕ್ಕೆ ಕಾರಣವನ್ನು ಹೇಳುತ್ತಾರೆ-]
ಯತಿಷ್ಯೇ ರಕ್ಷಿತುಂ ಭೀಮಾದ್ ಧಾರ್ತ್ತರಾಷ್ಟ್ರಾನಿತಿ ಸ್ವಕಾಮ್ ।
ಸತ್ಯಾಂ ಕರ್ತ್ತುಂ ಪ್ರತಿಜ್ಞಾಂ ತು ಯಯೌ ದ್ರೋಣಃ ಸಪುತ್ರಕಃ ॥೨೩.೩೯॥
‘ಭೀಮಸೇನನಿಂದ ದುರ್ಯೋಧನಾದಿಗಳನ್ನು ರಕ್ಷಿಸಲು ಪ್ರಯತ್ನಪಡುತ್ತೇನೆ’ ಎನ್ನುವ ತನ್ನ
ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಲು ದ್ರೋಣಾಚಾರ್ಯರು ಅಶ್ವತ್ಥಾಮನಿಂದ ಕೂಡಿಕೊಂಡು ತೆರಳಿದರು.
[ಯುದ್ಧಕ್ಕೆಂದು ಬರುತ್ತಿರುವ ಕೌರವಾದಿಗಳ ಯೋಚನೆ ಏನಿತ್ತು? ಅವರಿಗೆ
ನಿಖರವಾಗಿ ಪಾಂಡವರು ವಿರಾಟನಗರದಲ್ಲಿದ್ದಾರೆ ಎಂದು ಗೊತ್ತಿತ್ತೇ? - ]
ಯದಿ ಯುದ್ಧಾಯ ನಿರ್ಯ್ಯಾನ್ತಿ ಜ್ಞಾತಾಃ ಸ್ಯುಃ ಪಾಣ್ಡವಾಸ್ತದಾ ।
ನ ಚೇದ್ ವಿರಾಟಮನತಂ ನಮಯಿಷ್ಯಾಮಹೇ ವಯಮ್ ।
ಇತಿ ಮತ್ವಾ ವಿರಾಟಸ್ಯ ಜಗೃಹುರ್ಗ್ಗಾಃ ಸಮನ್ತತಃ ॥೨೩.೪೦॥
ಒಂದು ವೇಳೆ ಪಾಂಡವರು ಯುದ್ಧಕ್ಕೆಂದು ಬಂದರೆ ಆಗ ತಿಳಿಯಲ್ಪಡುತ್ತಾರೆ, ಇಲ್ಲದಿದ್ದರೆ ಈತನಕ ತಮಗೆ ಬಾಗದ ವಿರಾಟನನ್ನು ನಾವು
ಬಗ್ಗಿಸುತ್ತೇವೆ ಎಂದುಕೊಂಡು ಅವರು ವಿರಾಟರಾಜನ ಗೋವುಗಳನ್ನು ಅಪಹರಿಸಿದರು.
ತದೋತ್ತರಃ ಸಾರಥಿತ್ವೇ ಪ್ರಕಲ್ಪ್ಯ ಪಾರ್ತ್ಥಂ ಯಯೌ ತಾನ್ ನಿಶಾಮ್ಯೈವ ಭೀತಃ ।
ತತೋSರ್ಜ್ಜುನಃ ಸಾರಥಿಂ ತಂ ವಿಧಾಯ ಕೃಚ್ಛ್ರೇಣ ಸಂಸ್ಥಾಪ್ಯ ಚ ತಂ ಯಯೌ
ಕುರೂನ್ ॥೨೩.೪೧॥
ಆಗ ವಿರಾಟರಾಜನ ಮಗನಾದ ಉತ್ತರಕುಮಾರನು (ಭೂಮಿನ್ಜಯನು) ಅರ್ಜುನನನ್ನು ಸಾರಥಿಯನ್ನಾಗಿ
ಮಾಡಿಕೊಂಡು ಕೌರವರ ವಿರುದ್ಧ ಯುದ್ಧಕ್ಕೆಂದು ತೆರಳಿದನು. ಅಲ್ಲಿ ಅವನು ಕೌರವರನ್ನು ನೋಡಿಯೇ ಭಯಗ್ರಸ್ತನಾದನು.
ತದನಂತರ ಅರ್ಜುನನು ಓಡುತ್ತಿರುವ ಅವನನ್ನು ಕಷ್ಟಪಟ್ಟು ಹಿಡಿದು, ಅವನನ್ನೇ ಸಾರಥಿಯನ್ನಾಗಿ
ಮಾಡಿಕೊಂಡು ಕೌರವರನ್ನು ಕುರಿತು ಯುದ್ಧಕ್ಕೆ ತೆರಳಿದನು.
ಆದಾಯ ಗಾಣ್ಡೀವಮಥ ಧ್ವಜಂ ಚ ಹನೂಮದಙ್ಕಂ ಸದರೋSಗ್ರತೋ ಗಾಃ ।
ನಿವರ್ತ್ತ್ಯ ಯುದ್ಧಾಯ ಯಯೌ ಕುರೂಂಸ್ತಾನ್ ಜಿಗ್ಯೇ ಸರ್ವಾನ್ ದ್ವೈರಥೇನೈವ ಸಕ್ತಾನ್ ॥೨೩.೪೨॥
ಅರ್ಜುನ ತನ್ನ ಗಾಣ್ಡೀವ ಧನುಸ್ಸನ್ನೂ, ಹನುಮಂತನ ಚಿಹ್ನೆಯಿರುವ ಧ್ವಜವನ್ನೂ ತೆಗೆದುಕೊಂಡು,
ಶಂಖ ಸಹಿತನಾಗಿ, ಮೊದಲು ಹಸುಗಳನ್ನೆಲ್ಲ ವಿರಾಟ ನಗರದ ಕಡೆ ತಿರುಗಿಸಿ, ತದನಂತರ ಯುದ್ಧಕ್ಕೆ ತೆರಳಿದ. ದ್ವಂದಯುದ್ಧಕ್ಕೆಂದು ಬಂದ ಎಲ್ಲಾ ಕುರುವೀರರನ್ನು ಅರ್ಜುನ
ಗೆದ್ದ.(ಮೊದಲು ಕೌರವರ ಕಡೆಯಿಂದ ಒಬ್ಬೊಬ್ಬರೇ ಯುದ್ಧಕ್ಕೆಂದು ಬಂದಿದ್ದರು. ಹಾಗಾಗಿ ದ್ವೈರಥ-ಯುದ್ಧ)
ಏಕೀಭೂತಾನ್ ಪುನರೇವಾನುಯಾತಾನ್ ಸಮ್ಮೋಹನಾಸ್ತ್ರೇಣ ವಿಮೋಹಯಿತ್ವಾ ।
ಜಗ್ರಾಹ ತೇಷಾಮುತ್ತರೀಯಾಣ್ಯೃತೇ ತು ಭೀಷ್ಮಸ್ಯ ವೇದಾಸ್ತ್ರಘಾತಂ ಸ ಏವ ॥೨೩.೪೩॥
ನಂತರ ಎಲ್ಲರೂ ಒಟ್ಟಿಗೆ ಸೇರಿ ಯುದ್ಧಕ್ಕೆ ಬಂದಾಗ ಅರ್ಜುನ ಅವರನ್ನು
ಸಮ್ಮೊಹನಾಸ್ತ್ರದಿಂದ ಮೂರ್ಛೆಗೊಳಿಸಿದ ಮತ್ತು ಭೀಷ್ಮಾಚಾರ್ಯರೊಬ್ಬರನ್ನು ಬಿಟ್ಟು, ಇತರ ಎಲ್ಲರ ಉತ್ತರೀಯವನ್ನು
ತೆಗೆದುಕೊಂಡ. (ಏಕೆ ಭೀಷ್ಮಾಚಾರ್ಯರ ಉತ್ತರೀಯವನ್ನು
ಅರ್ಜುನ ತೆಗೆದುಕೊಳ್ಳಲಿಲ್ಲ ಎಂದರೆ-) ಅಲ್ಲಿ ಸಮ್ಮೊಹನಾಸ್ತ್ರದಿಂದ
ಪ್ರಭಾವಿತರಾಗದೇ ಇರುವ ತಾಕತ್ತು ಕೇವಲ ಭೀಷ್ಮಾಚಾರ್ಯರಿಗಿತ್ತು.
ವಿಧಾಯ ಭೀಷ್ಮಂ ವಿರಥಂ ಜಗಾಮ ತದಾ ಶ್ರುತ್ವಾ ಮತ್ಸ್ಯಪತಿರ್ಜ್ಜಿತಾನ್ ಕುರೂನ್ ।
ಮುಮೋದ ಪುತ್ರೇಣ ಜಿತಾ ಇತಿ ಸ್ಮ ತದಾSSಹ ಷಣ್ಢೇನ ಜಿತಾನ್ ಯುಧಿಷ್ಠಿರಃ ॥೨೩.೪೪॥
ಭೀಷ್ಮಾಚಾರ್ಯರನ್ನು ರಥಹೀನರನ್ನಾಗಿ ಮಾಡಿ ಅರ್ಜುನ ಅಲ್ಲಿಂದ ಹಿಂತಿರುಗಿದ. ಕೌರವರು ಸೋತ
ವಿಷಯವನ್ನು ಕೇಳಿ ವಿರಾಟ, ತನ್ನ ಮಗನಿಂದ ಅವರು ಸೋಲಿಸಲ್ಪಟ್ಟರು ಎಂದು ಬಹಳ ಆನಂದಗೊಂಡ. ಆಗ
ಯುಧಿಷ್ಠಿರ ‘ಬ್ರಹನ್ನಳೆಯಿಂದಲೇ ಈ ವಿಜಯ’ ಎಂದ.
ತದಾ ಕ್ರುದ್ಧಃ ಪ್ರಾಹರತ್ ತಂ ವಿರಾಟಃ ಸೋSಕ್ಷೇಣ
ತದ್ ಭೀಮಧನಞ್ಜಯಾಭ್ಯಾಮ್ ।
ಶ್ರುತಂ ತದಾ ಕುಪಿತೌ ತೌ ನಿಶಾಮ್ಯ ನ್ಯವಾರಯತ್ ತಾವಪಿ ಧರ್ಮ್ಮಸೂನುಃ ॥೨೩.೪೫॥
(ಯುಧಿಷ್ಠಿರನಿಂದ ಅನೇಕ ಬಾರಿ ‘ಬೃಹನ್ನಳೆಯಿಂದಲೇ ವಿಜಯಪ್ರಾಪ್ತಿಯಾಯಿತು’ ಎನ್ನುವ
ಮಾತನ್ನು ಕೇಳಿ) ಮುನಿದ ವಿರಾಟನು ದಾಳದಿಂದ
ಧರ್ಮರಾಜನಿಗೆ ಹೊಡೆದ. ಆ ತಾಡನವು ಭೀಮಾರ್ಜುನರಿಂದ ಕೇಳಲ್ಪಟ್ಟಿತು. ಆಗ ಅತಿಕೋಪಗೊಂಡ
ಅವರಿಬ್ಬರನ್ನು ಕಂಡ ಧರ್ಮರಾಜ ಇಬ್ಬರನ್ನೂ ತಡೆದ.
ನಿಜಸ್ವರೂಪೇಣ ಸಮಾಸ್ಥಿತಾನ್ ನೋ ಯದಿ ಸ್ಮ ನಾಸೌ ಪ್ರಣಿಪಾತಪೂರ್ವಕಮ್ ।
ಕ್ಷಮಾಪಯೇದ್ ವದ್ಧ್ಯ ಇತ್ಯಾತ್ಮರೂಪಂ ಸಮಾಸ್ಥಿತಾಸ್ತಸ್ಥುರಥಾಪರೇ ದಿನೇ ॥೨೩.೪೬॥
ನಮ್ಮ ನಿಜರೂಪವನ್ನು ಕಂಡ ಬಳಿಕ ಕಾಲಿಗೆ ಬಿದ್ದು ಕ್ಷೆಮೆ ಕೇಳಲಿಲ್ಲವೆಂದರೆ ಆಗ ಅವನನ್ನು
ಸಾಯಿಸೋಣ ಎಂದುಕೊಂಡ ಅವರು ಮರುದಿನ ತಮ್ಮ ನಿಜರೂಪವನ್ನು ಹೊತ್ತು ನಿಂತರು.
(ತಾತ್ಪರ್ಯ: ಭೀಮಾರ್ಜುನರು ವಿರಾಟನನ್ನು ಕೊಲ್ಲಬೇಕು ಎಂದು ಬಂದಾಗ ಯುಧಿಷ್ಠಿರ- ‘ನಾವು
ಯಾರು ಎಂದು ತಿಳಿಯದೇ ವಿರಾಟ ಹೀಗೆ ಮಾಡಿದ್ದಾನೆ. ಅವನಿಗೆ ನಮ್ಮ ನಿಜರೂಪ ತಿಳಿದಮೇಲೂ ಗೌರವಿಸಿಲ್ಲ
ಎಂದರೆ ಆಗ ಅವನನ್ನು ಕೊಲ್ಲೋಣ’ ಎಂದು ಹೇಳಿ ಭೀಮಾರ್ಜುನರನ್ನು ತಡೆದ. ಅದೇ ರೀತಿ ಪಾಂಡವರು ಮರುದಿನ
ವಿರಾಟ ಬರುವ ಮೊದಲೇ ಅವನ ಆಸ್ಥಾನದಲ್ಲಿ ತಮ್ಮ ನಿಜರೂಪದೊಂದಿಗೆ ಬಂದು ಕುಳಿತರು)
ತದಾ ವಿರಾಟಾಸನಮಾಸ್ಥಿತಂ ನೃಪಂ ಯುಧಿಷ್ಠಿರಂ ವೀಕ್ಷ್ಯ ವಿರಾಟ ಆಹ ।
ಕಿಮೇತದಿತ್ಯೂಚಿವಾನುತ್ತರೋSಸ್ಮೈ ತಾನ್ ಪಾಣ್ಡವಾನ್ ಗೋಗ್ರಹಣೇ ಚ
ವೃತ್ತಮ್ ॥೨೩.೪೭॥
ವಿರಾಟನ ಸಿಂಹಾಸನವನ್ನು ಅಲಂಕರಿಸಿರುವ ಯುಧಿಷ್ಠಿರನನ್ನು ನೋಡಿ ಅಚ್ಚರಿಗೊಂಡ ವಿರಾಟ ‘ಇದೇನು’
ಎಂದು ಕೇಳಿದ. ಆಗ ಉತ್ತರಕುಮಾರ ‘ಇವರು ಪಾಂಡವರು’ ಎಂದು ಹೇಳಿ,
ಗೋಗ್ರಹಣ ಸಮಯದಲ್ಲಿ ನಡೆದ ಎಲ್ಲಾ ಘಟನೆಗಳನ್ನು ತಂದೆಗೆ ವಿವರಿಸಿದ.
ತತೋ ವಿರಾಟೋ ಭಯಕಮ್ಪಿತಾಙ್ಗಃ ಪ್ರಣಮ್ಯ ಪಾರ್ತ್ಥಾಞ್ಛರಣಂ
ಜಗಾಮ ।
ದದೌ ಚ ಕನ್ಯಾಮುತ್ತರಾಂ ಫಲ್ಗುನಾಯ ಪುತ್ರಾರ್ತ್ಥಮೇವ ಪ್ರತಿಜಗ್ರಾಹ ಸೋsಪಿ ॥೨೩.೪೮॥
ಆಗ ವಿರಾಟರಾಜ ಭಯದಿಂದ ನಡುಗಿ, ಅವರಿಗೆ ನಮಸ್ಕರಿಸಿ, ಪಾಂಡವರನ್ನು ರಕ್ಷಕರನ್ನಾಗಿ
ಹೊಂದಿದ. ತನ್ನ ಮಗಳಾಗಿರುವ ಉತ್ತರೆಯನ್ನು ವಿರಾಟ ಅರ್ಜುನನಿಗಾಗಿ ಕೊಟ್ಟ. ಅರ್ಜುನನಾದರೋ ಮಗನಿಗೆಂದೇ
ಅವಳನ್ನು ಸ್ವೀಕರಿಸಿದ.
No comments:
Post a Comment