ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 8, 2022

Mahabharata Tatparya Nirnaya Kannada 24-01-12

 

೨೪. ಯುದ್ಧೋದ್ಯೋಗಃ

 

̐

ತತಃ ಸಮ್ಮನ್ತ್ರ್ಯಾನುಮತೇ ಕೃಷ್ಣಸ್ಯ ಸ್ವಪುರೋಹಿತಮ್ ।

ದ್ರುಪದಃ ಪ್ರೇಷಯಾಮಾಸ ಧೃತರಾಷ್ಟ್ರಾಯ ಶಾನ್ತಯೇ ॥೨೪.೦೧॥

 

ತದನಂತರ ಶ್ರೀಕೃಷ್ಣಪರಮಾತ್ಮನ ಸನ್ನಿಧಿಯಲ್ಲಿ ದ್ರುಪದನು ಚೆನ್ನಾಗಿ ಆಲೋಚನೆ ಮಾಡಿ, ಶಾಂತಿಗಾಗಿ ಧೃತರಾಷ್ಟ್ರನನ್ನು ಕುರಿತು ತನ್ನ ಪುರೋಹಿತನನ್ನು ಕಳುಹಿಸಿಕೊಟ್ಟನು.

 

ಸ ಗತ್ವಾ ಧೃತರಾಷ್ಟ್ರಂ ತಂ ಭೀಷ್ಮದ್ರೋಣಾದಿಭಿರ್ಯ್ಯುತಮ್ ।

ಉವಾಚ ನ ವಿರೋಧಸ್ತ ಉತ್ಪಾದ್ಯೋ ಧರ್ಮ್ಮಸೂನುನಾ ॥೨೪.೦೨॥

 

ದ್ರುಪದನಿಂದ ಕಳುಹಿಸಲ್ಪಟ್ಟ ಆ ಪುರೋಹಿತನು ಭೀಷ್ಮ-ದ್ರೋಣರಿಂದ ಕೂಡಿರುವ ಧೃತರಾಷ್ಟ್ರನ ಬಳಿ ತೆರಳಿ ‘ನೀನು ಧರ್ಮರಾಜ ಮೊದಲಾದವರಿಗೆ ವಿರೋಧವನ್ನು ಮಾಡಬಾರದು’ ಎಂದು ಹೇಳಿದ.   

 

ಯಸ್ಯ ಭೀಮಾರ್ಜ್ಜುನೌ ಯೌಧೌ ನೇತಾ ಯಸ್ಯ ಜನಾರ್ದ್ದನಃ ।

ಶ್ರುತಾಸ್ತೇ ಭೀಮನಿಹತಾ ಜರಾಸನ್ಧಾದಯೋSಖಿಲಾಃ ॥೨೪.೦೩॥

 

'ಯಾರಿಗಾಗಿ ಭೀಮಾರ್ಜುನರು ಯುದ್ಧ ಮಾಡುವರೋ, ಯಾರಿಗೆ ಶ್ರೀಕೃಷ್ಣಪರಮಾತ್ಮನು ಪ್ರೇರಕನಾಗಿದ್ದಾನೋ, ಅಂಥಹ ಧರ್ಮರಾಜನೊಡನೆ ವಿರೋಧಕಟ್ಟಿಕೊಳ್ಳುವುದು ಸರಿಯಲ್ಲ. ಜರಾಸಂಧಾದಿಗಳು ಭೀಮನಿಂದ ಕೊಲ್ಲಲ್ಪಟ್ಟಿದ್ದಾರೆ ಎನ್ನುವುದು ನಿನಗೆ ತಿಳಿದೇ ಇದೆ.

 

ಯಥಾ ಚ ರುದ್ರವಚನಾದವದ್ಧ್ಯಾ ರಾಕ್ಷಸಾಧಿಪಾಃ ।

ತೀರ್ತ್ಥವಿಘ್ನಕರಾಃ ಸರ್ವತೀರ್ತ್ಥಾನ್ಯಾಚ್ಛಾದ್ಯ ಸಂಸ್ಥಿತಾಃ ॥೨೪.೦೪॥

 

ತಿಸ್ರಃ ಕೋಟ್ಯೋ ಮಹಾವೀರ್ಯ್ಯಾ ಭೀಮೇನೈವ ನಿಸೂದಿತಾಃ ।

ಭ್ರಾತೄಣಾಂ ಬ್ರಾಹ್ಮಣಾನಾಂ ಚ ಲೋಕಾನಾಂ ಚ ಹಿತೈಷಿಣಾ ॥೨೪.೦೫॥

 

ತತೋ ಹಿ ಸರ್ವತೀರ್ತ್ಥಾನಿ ಗಮ್ಯಾನ್ಯಾಸನ್ ನೃಣಾಂ ಕ್ಷಿತೌ ।

ಯಥಾ ಜಟಾಸುರಃ ಪಾಪಃ ಶರ್ವಾಣೀವರಸಂಶ್ರಯಾತ್ ॥೨೪.೦೬॥

 

ಅವದ್ಧ್ಯೋ ವಿಪ್ರರೂಪೇಣ ವಞ್ಚಯನ್ನೇವ ಪಾಣ್ಡವಾನ್ ।

ಜ್ಞಾತ್ವಾSಪಿ ಭೀಮಸೇನೇನ ವಿಪ್ರರೂಪಸ್ಯ ನೋ ವಧಃ ॥೨೪.೦೭॥

 

ಯೋಗ್ಯ ಇತ್ಯಹತೋ ಭೀಮೇ ಮೃಗಯಾರ್ತ್ಥಂ ಗತೇ ಕ್ವಚಿತ್ ।

ಯಮೌ ಯುಧಿಷ್ಠಿರಂ ಕೃಷ್ಣಾಂ ಚಾSದಾಯೈವ ಪರಾದ್ರವತ್  ॥೨೪.೦೮॥

 

ಹೇಗೆ ರುದ್ರನ ಮಾತಿನಿಂದ(ವರದಿಂದ) ಅವಧ್ಯರಾಗಿರುವ, ತೀರ್ಥಕ್ಷೇತ್ರದಲ್ಲಿದ್ದು ವಿಘ್ನವನ್ನುಂಟುಮಾಡುವ, ಎಲ್ಲಾ ತೀರ್ಥಕ್ಷೇತ್ರಗಳನ್ನೂ ವ್ಯಾಪಿಸಿರುವ, ಮಹಾವೀರ್ಯರಾದ ರಾಕ್ಷಸಾದಿಪರು ಭೀಮಸೇನನಿಂದ ಕೊಲ್ಲಲ್ಪಟ್ಟರು ಎನ್ನುವುದು ತಿಳಿದಿದೆ.

ಅಣ್ಣ-ತಮ್ಮಂದಿರಿಗಾಗಿ, ಬ್ರಾಹ್ಮಣರಿಗಾಗಿ, ತೀರ್ಥಕ್ಷೇತ್ರಯಾತ್ರೆ ಬಯಕೆಯಿರುವ ಎಲ್ಲರ ಹಿತವನ್ನು ಬಯಸುವ ಭೀಮಸೇನನಿಂದ ಮೂರುಕೋಟಿ ಜನ ರಾಕ್ಷಸರು ಕೊಲ್ಲಲ್ಪಟ್ಟಿದ್ದಾರೆ. ಆ ನಂತರವೇ ಎಲ್ಲಾ ತೀರ್ಥಕ್ಷೇತ್ರಗಳು ಮನುಷ್ಯರಿಗೆ ಗಮ್ಯವಾಗಿವೆ.

ಪಾಪಿಷ್ಠನಾದ ಜಾಟಾಸುರನು ಪಾರ್ವತೀದೇವಿ ವರದಿಂದ ಅವಧ್ಯನಾಗಿದ್ದ. ಅವನು ಬ್ರಾಹ್ಮಣನ ವೇಷದಲ್ಲಿ ಪಾಂಡವರನ್ನು ಮೋಸಮಾಡುತ್ತಲೇ ಇದ್ದ. ಇದು ಭೀಮಸೇನನಿಂದ ತಿಳಿಯಲ್ಪಟ್ಟರೂ ಕೂಡಾ, ಬ್ರಾಹ್ಮಣನ ವೇಷವನ್ನು ಧರಿಸಿರುವುದರಿಂದ ಅವನ ಸಂಹಾರವು ಯೋಗ್ಯವಲ್ಲ ಎಂದು ಅವನನ್ನು ಭೀಮಸೇನ ಕೊಂದಿರಲಿಲ್ಲ.   

ಒಮ್ಮೆ ಭೀಮಸೇನನು ಭೇಟೆಗಾಗಿ ಹೋಗಿರಲು, ಜಾಟಾಸುರನು ನಕುಲ-ಸಹದೇವರನ್ನೂ, ಧರ್ಮರಾಜನನ್ನೂ, ದ್ರೌಪದಿಯನ್ನೂ ಹಿಡಿದುಕೊಂಡು ಓಡಿದ.

[ಈ ಕುರಿತ ವಿವರವನ್ನು ಮಹಾಭಾರತದ ವನಪರ್ವದಲ್ಲಿ (೧೫೮.೩೯-೪೦)  ಕಾಣಬಹುದು: ‘ವಿಜ್ಞಾತೋSಸಿ ಮಯಾ ಪೂರ್ವಂ ಚೇಷ್ಟನ್ ಶಸ್ತ್ರಪರೀಕ್ಷಣೇ । ಆಸ್ಥಾ ತು ತ್ವಯಿ ಮೇ ನಾಸ್ತಿ ಯತೋSಸಿ ನ ಹತಸ್ತದಾ । ಬ್ರಹ್ಮರೂಪಪ್ರತಿಚ್ಛನ್ನೋ ನ ನೋ ವದಸಿ ಚಾಪ್ರಿಯಮ್ ।  ಪ್ರಿಯೇಷು ರಮಮಾಣಂ ತ್ವಾಂ ನ ಚೈವಾಪ್ರಿಯಕಾರಿಣಮ್ । ಬ್ರಹ್ಮರೂಪೇಣ ಪಿಹಿತಂ ನೈವ ಹನ್ಯಾಮನಾಗಸಮ್’ ]  

 

ದೃಷ್ಟೋ ಭೀಮೇನ ತಾಂಸ್ತ್ಯಕ್ತ್ವಾ ಸಂಸಕ್ತಸ್ತೇನ ಸಙ್ಗರೇ ।

ನಿಪಾತ್ಯ ಭೂಮೌ ಪಾದೇನ ಸಞ್ಚೂರ್ಣ್ಣಿತಶಿರಾಸ್ತಮಃ ॥೨೪.೦೯॥

 

ಭೀಮಸೇನನಿಂದ ವೀಕ್ಷಿತನಾದ ಜಟಾಸುರನು ಅವರೆಲ್ಲರನ್ನೂ ಬಿಟ್ಟು, ಭೀಮನೊಂದಿಗೆ ಯುದ್ಧದಲ್ಲಿ ತೊಡಗಿದನು. ಆ ಜಟಾಸುರನು ಭೂಮಿಯಲ್ಲಿ ಕೆಡವಲ್ಪಟ್ಟು, ಭೀಮಸೇನನ ಪಾದದಿಂದಲೇ ಪುಡಿಪುಡಿಯಾದ ತಲೆಯುಳ್ಳವನಾಗಿ ಅನ್ಧಂತಮಸ್ಸಿಗೆ ಹೋದ.

 

ಜಗಾಮ ಕಿಮು ತೇ ಪುತ್ರಾಃ ಶಕ್ಯಾ ಹನ್ತುಮಿತಿ ಸ್ಮ ಹ ।

ನಿವಾತಕವಚಾಶ್ಚೈವ ಹತಾಃ ಪಾರ್ತ್ಥೇನ ತೇ ಶ್ರುತಾಃ ॥೨೪.೧೦॥

 

ಇನ್ನು ನಿನ್ನ ಮಕ್ಕಳಾದ ದುರ್ಯೋಧನಾದಿಗಳನ್ನು ಕೊಲ್ಲಲು ಸಾಧ್ಯವಿಲ್ಲವೇ ? ನಿವಾತಕವಚರೆಂಬ ರಾಕ್ಷಸರೂ ಕೂಡಾ ಅರ್ಜುನನಿಂದ ಸತ್ತಿದ್ದಾರೆ.

 

ಜಾನಾಸಿ ಚ ಹರೇರ್ವೀರ್ಯ್ಯಂ ಯಸ್ಯೇದಮಖಿಲಂ ವಶೇ ।

ಸಬ್ರಹ್ಮರುದ್ರಶಕ್ರಾದ್ಯಂ ಚೇತನಾಚೇತನಾತ್ಮಕಮ್ ॥೨೪.೧೧॥

 

ಪರಮಾತ್ಮನ ಪರಾಕ್ರಮವನ್ನು ನೀನು ತಿಳಿದಿದ್ದೀಯ. ಬ್ರಹ್ಮ-ರುದ್ರ-ಇಂದ್ರ ಮೊದಲಾಗಿರುವ ಚೇತನ-ಅಚೇತನ, ಹೀಗೆ ಇಡೀ ಪ್ರಪಂಚ ಅವನ ವಶದಲ್ಲಿದೆ. 

 

ತಸ್ಮಾದೇತೈಃ ಪಾಲಿತಸ್ಯ ಧರ್ಮ್ಮಜಸ್ಯ ಸ್ವಕಂ ವಸು ।

ದೀಯತಾಮಿತಿ ತೇನೋಕ್ತೋ ಧೃತರಾಷ್ಟ್ರೋ ನಚಾಕರೋತ್ ॥೨೪.೧೨॥

 

ಅದರಿಂದ ಭೀಮ-ಅರ್ಜುನ-ಕೃಷ್ಣರಿಂದ ರಕ್ಷಿತನಾಗಿರುವ ಧರ್ಮರಾಜನಿಗೆ ಅವನ ಧನ ಕೊಡಲ್ಪಡಲಿ’ ಎಂದು ದ್ರುಪದರಾಜನ ಪುರೋಹಿತನಿಂದ ಹೇಳಲ್ಪಟ್ಟರೂ ಧೃತರಾಷ್ಟ್ರ ಮಾತ್ರ ಆ ಕೆಲಸವನ್ನು ಮಾಡಲಿಲ್ಲ.

No comments:

Post a Comment