ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, December 3, 2022

Mahabharata Tatparya Nirnaya Kannada 23-19-26

 

ಏವಂ ನಿವಸತಾಂ ತತ್ರ ಪಾಣ್ಡವಾನಾಂ ಮಹಾತ್ಮನಾಮ್ ।

ಸಂವತ್ಸರೇ ದ್ವಿಮಾಸೋನೇ ವಿಜಿತ್ಯ ದಿಶ ಆಗತಃ ।

ಕೀಚಕೋ ಮತ್ಸ್ಯನೃಪತೇಃ ಸ್ಯಾಲೋ ಬಲವತಾಂ ವರಃ ॥೨೩.೧೯॥

 

ಈರೀತಿಯಾಗಿ ವಿರಾಟನಗರದಲ್ಲಿ ವಾಸಮಾಡುತ್ತಿರುವ ಶ್ರೇಷ್ಠರಾದ ಪಾಂಡವರು ಅಲ್ಲಿ ಹತ್ತು ತಿಂಗಳು ಕಳೆದಿರಲು, ಆ ಸಮಯದಲ್ಲಿ, ಮತ್ಸ್ಯರಾಜನ ಹೆಂಡತಿಯ ತಮ್ಮ, ಅತ್ಯಂತ ಬಲಿಷ್ಠನಾದ ಕೀಚಕ  ದಿಕ್ಕುಗಳನ್ನು ಗೆದ್ದು  ವಿರಾಟನಗರಕ್ಕೆ ಬಂದನು.

 

ಸ ದ್ರೌಪದೀಮೀಕ್ಷ್ಯ ಮಾನೋಭವಾರ್ತ್ತಃ ಸಮ್ಪ್ರಾರ್ತ್ಥಯಾಮಾಸ ತಯಾ ನಿರಸ್ತಃ ।

ಮಾಸೇ ಗತೇ ಭಗನೀಂ ಸ್ವಾಂ ಸುದೇಷ್ಣಾಂ ಸಮ್ಪ್ರಾರ್ತ್ಥಯಾಮಾಸ ತದರ್ತ್ಥಮೇವ ॥೨೩.೨೦॥

 

ಕೀಚಕನು ದ್ರೌಪದಿಯನ್ನು ಕಂಡು ಕಾಮದಿಂದ ಪೀಡಿತನಾಗಿ ಅವಳನ್ನು ಬೇಡಿದ. ದ್ರೌಪದಿಯಿಂದ  ತಿರಸ್ಕೃತನಾಗಿ ಒಂದು ತಿಂಗಳು ಕಳೆದಮೇಲೆ ಅಕ್ಕನಾಗಿರುವ ಸುದೇಷ್ಣಾಳಲ್ಲಿ ದ್ರೌಪದಿಯನ್ನು ತನ್ನಲ್ಲಿಗೆ ಕಳುಹಿಸಿಕೊಡುವಂತೆ ಬಹಳವಾಗಿ ಬೇಡಿಕೊಂಡ.

[‘ಸ ತು ಮೂರ್ಧ್ನ್ಯಞ್ಜಲಿಂ ಕೃತ್ವಾ ಭಗಿನ್ಯಾಶ್ಚರಣಾವುಭೌ । ಸಮ್ಮೋಹಾಭಿಹತಸ್ತೂರ್ಣಂ ವಾತೋದ್ಧೂತ ಇವಾರ್ಣವಃ’ (ವಿರಾಟಪರ್ವ ೧೮.೩) – ಕೈಕಾಲು ಹಿಡಿಯುವುದು, ತಲೆಮೇಲೆ ಕೈಇಟ್ಟು ಪ್ರಾರ್ಥನೆ ಮಾಡುವುದು, ಇತ್ಯಾದಿಯಾಗಿ ಅಕ್ಕನಲ್ಲಿ ಕೀಚಕ ಬೇಡುತ್ತಿದ್ದ ಎನ್ನುತ್ತದೆ ಮಹಾಭಾರತ]  

 

ತಯಾ ನಿಷಿದ್ಧೋSಪಿ ಪುನಃಪುನಸ್ತಾಂ ಯದಾ ಯಯಾಚೇSಥ ಚ ಸಾSSಹ ಕೃಷ್ಣಾಮ್ ।

ಸಮಾನಯಾSಶ್ವೇವ ಸುರಾಂ ಮದರ್ತ್ಥಮಿತೀರಿತಾ ನೇತಿ ಭೀತಾSವದತ್ ಸಾ॥೨೩.೨೧॥

 

ಸುದೇಷ್ಣಾಳಿಂದ ನಿಷಿದ್ಧನಾದರೂ, ಮತ್ತೆ ಮತ್ತೆ ಅವಳಲ್ಲಿ ಕೀಚಕ ಬೇಡಿಕೊಂಡ. ಆಗ ಅವಳು ‘ವೇಗದಲ್ಲಿಯೇ ನನಗಾಗಿ (ಕೀಚಕನ ಮನೆಯಿಂದ)ಮದ್ಯವನ್ನು ತೆಗೆದುಕೊಂಡು ಬಾ’ ಎಂದು ದ್ರೌಪದಿಗೆ ಹೇಳಿದಳು. ದ್ರೌಪದಿ ಅಳುಕಿದವಳಾಗಿ ‘ನಾನು ಹೋಗುವುದಿಲ್ಲ’ ಎನ್ನುತ್ತಾಳೆ.

 

ಬಲಾತ್ ತಯಾ ಪ್ರೇಷಿತಾ ತದ್ಗೃಹಾಯ ಯದಾSಗಮತ್ ತೇನ ಹಸ್ತೇ ಗೃಹೀತಾ ।

ವಿಧೂಯ ತಂ ಪ್ರಾದ್ರವತ್ ಸಾ ಸಭಾಯೈ ಸ್ಮೃತ್ವಾSSದಿತ್ಯಸ್ಥಂ ವಾಸುದೇವಂ ಪರೇಶಮ್ ॥೨೩.೨೨॥

 

ಸುದೇಷ್ಣಾಳಿಂದ ಬಲಾತ್ಕಾರವಾಗಿ ಕಳುಹಿಸಲ್ಪಟ್ಟ ದ್ರೌಪದಿಯು ಕೀಚಕನ ಮನೆಗೆ ಯಾವಾಗ ತೆರಳಿದಳೋ, ಆಗ ಅವನ ಕೈಯಲ್ಲಿ ಹಿಡಿಯಲ್ಪಟ್ಟವಳಾದಳು. ಅವನನ್ನು ಕೊಡವಿ, ಸೂರ್ಯನ ಅಂತರ್ಯಾಮಿಯಾದ ನಾರಾಯಣನನ್ನು ಸ್ಮರಿಸಿ,    ಸಭೆ ನಡೆಯುತ್ತಿರುವಲ್ಲಿಗೆ ದ್ರೌಪದಿ ಓಡಿದಳು. 

 

ಅನುದ್ರುತ್ಯೈತಾಂ ಪಾತಯಿತ್ವಾ ಪದಾ ಸ ಸನ್ತಾಡಯಾಮಾಸ ತದಾ ರವಿಸ್ಥಿತಃ ।

ನಾರಾಯಣೋ ಹೇತಿನಾಮೈವ ರಕ್ಷೋ ನ್ಯಯೋಜಯತ್ ತದದೃಶ್ಯಂ ಸಮಾಗಾತ್ ॥೨೩.೨೩॥

 

ಕೀಚಕನಾದರೋ, ದ್ರೌಪದಿಯನ್ನು ಹಿಂಬಾಲಿಸಿಕೊಂಡು ಬಂದು, ಅವಳನ್ನು ಬೀಳಿಸಿ, ಕಾಲಿನಿಂದ ಒದ್ದ. ಆಗ ಸೂರ್ಯಾಂತರ್ಯಾಮಿ ನಾರಾಯಣನು ‘ಹೇತಿ’ ಎನ್ನುವ ಹೆಸರಿನ ರಾಕ್ಷಸನನ್ನು ನಿಯೋಜಿಸಿದನು. ಹೇತಿ ಯಾರಿಗೂ ಕಾಣದಂತೆ ಅಲ್ಲಿಗೆ ಬಂದ.

[ಹೇತಿ ಒಬ್ಬ ಸಾತ್ವಿಕ. ಆದರೆ ರಾಕ್ಷಸ ಶರೀರವುಳ್ಳವನು. ಅವನು ಸೂರ್ಯನ ಸೇವಕ. ಇದೇ ಹೇತಿ ಕರ್ಣನ ತೊಡೆಯನ್ನು ಕೊರೆದು ರಕ್ತಬರುವಂತೆ ಮಾಡಿ, ಪರಶುರಾಮನಿಂದ ಕರ್ಣನಿಗೆ ಶಾಪ ಬರುವಂತೆ ಮಾಡಿರುವುದು].

 

ವಾಯುಸ್ತಮಾವಿಶ್ಯ ತು ಕೀಚಕಂ ತಂ ನ್ಯಪಾತಯತ್ ತಾಂ ಸಮೀಕ್ಷ್ಯೈವ ಭೀಮಃ ।

ಚುಕೋಪ ವೃಕ್ಷಂ ಚ ಸಮೀಕ್ಷಮಾಣಂ ತಂ ವಾರಯಾಮಾಸ ಯುಧಿಷ್ಠಿರೋsಗ್ರಜಃ ॥೨೩.೨೪॥

 

ಮುಖ್ಯಪ್ರಾಣನು ಆ ಹೇತಿ ಎನ್ನುವ ರಾಕ್ಷಸನನ್ನು ಹೊಕ್ಕು ಕೀಚಕನನ್ನು ಬೀಳಿಸಿದನು. ದ್ರೌಪದಿ ಸಭೆಗೆ ಬಂದಾಗ ಅಲ್ಲಿದ್ದ ಭೀಮಸೇನ ದ್ರೌಪದಿಯ ಆ ಸ್ಥಿತಿಯನ್ನು ಕಂಡು ಸಿಟ್ಟುಗೊಂಡು ಅಲ್ಲಿರುವ ದೊಡ್ಡ ಮರವೊಂದನ್ನು ನೋಡುತ್ತಿರಲು, ಅಣ್ಣನಾದ ಯುಧಿಷ್ಠಿರ ಅವನನ್ನು ತಡೆದ.

[‘ವಾಯುಸ್ತಮಾವಿಶ್ಯ ತು ಕೀಚಕಂ ತಂ ನ್ಯಪಾತಯತ್’ ಎನ್ನುವುದಕ್ಕೆ ಪ್ರಮಾಣ ಮೂಲ ಭಾರತದಲ್ಲೇ ಇದೆ: ‘ಉಪಾತಿಷ್ಠತ ಸಾ ಸೂರ್ಯಂ ಮುಹೂರ್ತಮಬಲಾ ತದಾ । ತದಸ್ಯಾಸ್ತನುಮಧ್ಯಾಯಾಃ ಸರ್ವಂ ಸೂರ್ಯೋSವಬುದ್ಧವಾನ್ ।  ಅಂತರ್ಹಿತಂ ತತಸ್ತಸ್ಯಾ ರಕ್ಷೋ ರಕ್ಷಾರ್ಥಮಾದಿಶತ್’ (ವಿರಾಟಪರ್ವ ೧೯.೩-೪) ‘ತತೋ ದಿವಾಕರೇಣಾSಶು ರಾಕ್ಷಸಃ ಸನ್ನಿಯೋಜಿತಃ । ಸ ಕೀಚಕಮಪೋವಾಹ ವಾತವೇಗೇನ ಭಾರತ (೧೯.೨೫) ದ್ರೌಪದಿ ಸೂರ್ಯನನ್ನು ನಮಸ್ಕರಿಸಿದಳು. ಅವನು ರಾಕ್ಷಸನನ್ನು ಆದೇಶಿಸಿದ. ಸೂರ್ಯನಿಂದ ಪ್ರಚೋದಿತನಾದ ರಾಕ್ಷಸನು ಕೀಚಕನನ್ನು ವಾಯುವೇಗದಲ್ಲಿ ಎಳೆದುಕೊಂಡು ಹೋದ. ಇಲ್ಲಿ ‘ವಾತವೇಗೇನ’ ಎನ್ನುವ ವಿಶೇಷಣ ಬಳಕೆಯಾಗಿದೆ. ಇದನ್ನು  ವಾತಸ್ಯ-ಮುಖ್ಯಪ್ರಾಣಸ್ಯ-ವೇಗಃ-ಬಲಮ್ ಎಂದು ವ್ಯಾಖ್ಯಾನ ಮಾಡಿದಂತಾಗುತ್ತದೆ. ಮುಖ್ಯಪ್ರಾಣನ ಆವೇಶವಿದ್ದುದರಿಂದ ಹೇತು ಕೀಚಕನನ್ನು ಆರೀತಿ ಬೀಳಿಸಲು ಸಾಧ್ಯವಾಯಿತು.

 

ಕೃಷ್ಣಾ ರಾತ್ರೌ ಭೀಮಸಕಾಶಮೇತ್ಯ ಹನ್ತುಂ ಪಾಪಂ ಕೀಚಕಂ ಪ್ರೈರಯತ್ ತಮ್ ।

ಭೀಮಸ್ಯ ಬುದ್ಧ್ಯಾ ನಿಶಿ ಸಾ ಕೀಚಕಂ ಚ ಜಗಾದ ಗನ್ತುಂ ಶೂನ್ಯಗೃಹಂ ಸ ಚಾಗಾತ್ ॥೨೫.೨೫॥

 

ದ್ರೌಪದಿಯು ಆರಾತ್ರಿ ಭೀಮನ ಬಳಿಗೆ ತೆರಳಿ, ಪಾಪಿಷ್ಠನಾದ ಕೀಚಕನನ್ನು ಕೊಲ್ಲಲು ಅವನನ್ನು ಪ್ರೇರಿಸಿದಳು. ಭೀಮಸೇನನ ಸಲಹೆಯಂತೆ ಅವಳು ಕೀಚಕನನ್ನು ರಾತ್ರಿಯಲ್ಲಿ ಯಾರೂ ಇಲ್ಲದ ಮನೆಗೆ(ನೃತ್ಯಗೃಹಕ್ಕೆ ) ಬರಲು ಹೇಳಿದಳು ಮತ್ತು ಕೀಚಕನು ಅಲ್ಲಿಗೆ ಬಂದ ಕೂಡಾ.

 

ತತ್ರೈನಮಾಸಾದ್ಯ ತು ಭೀಮಸೇನೋ ವಿಜಿತ್ಯ ತಂ ಬಾಹುಯುದ್ಧೇ ನಿಹತ್ಯ ।

ಶಿರೋ ಗುದೇ ಪಾಣಿಪಾದೌ ಚ ತಸ್ಯ ಪ್ರವೇಶಯಾಮಸ ವಿಮೃದ್ಯ ವೀರಃ ॥೨೩.೨೬॥

 

ಶೂನ್ಯಗೃಹದಲ್ಲಿದ್ದ ಕೀಚಕನ ಬಳಿ ಬಂದ ಭೀಮಸೇನನು ಮಲ್ಲಯುದ್ಧದಲ್ಲಿ ಅವನನ್ನು ಸೋಲಿಸಿದ. ಕೈಯಿಂದ ಗುದ್ದಿ, ತಲೆಯನ್ನೂ, ಪೃಷ್ಟಭಾಗವನ್ನೂ, ಕೈ-ಕಾಲುಗಳನ್ನು ಒಂದರ ಒಳಗೆ ಒಂದನ್ನು ಹೊಗಿಸಿ ಭೀಕರವಾಗಿ ಕೀಚಕನನ್ನು ಭೀಮಸೇನ ಕೊಂದುಹಾಕಿದ.

[ಮಹಾಭಾರತ: ‘ಅಥ ಪಾಣೀ ಚ ಪಾದೌ ಚ ಶಿರೋ ಗ್ರೀವಾಂ ಸಕುಣ್ಡಲಾಮ್ । ಗುದೇ ಪ್ರವೇಶಯಾಮಾಸ ಮೃದಿತ್ವಾSಙ್ಗಾನಿ ಸರ್ವಶಃ’ (ವಿರಾಟಪರ್ವ ೨೬.೪೦). ಇಷ್ಟು ಭೀಕರವಾಗಿ ಕೀಚಕ ಭೀಮನಿಂದ ಕೊಲ್ಲಲ್ಪಟ್ಟ].   

No comments:

Post a Comment