ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 13, 2022

Mahabharata Tatparya Nirnaya Kannada 24-23-30

 

ದುರ್ಯ್ಯೋಧನೋ ಯಯೌ ರಾಮಂ ಸ ಭಯಾತ್ ಕೇಶವಸ್ಯ ತಮ್ ।

ನ ಸಾಹಾಯ್ಯಂ ಕರೋಮೀತಿ ಪ್ರಾಹ ತತ್ಸ್ನೇಹವಾನಪಿ ॥೨೪.೨೩॥

 

ಉಪಪ್ಲಾವ್ಯೇ ಸಭಾಯಾಂ ಹಿ ತ್ವತ್ಪಕ್ಷೀಯಂ ವಚೋ ಬ್ರುವನ್ ।

ನಿರಾಕೃತಃ ಸಾತ್ಯಕಿನಾ ಸಮಕ್ಷಂ ಕೇಶವಸ್ಯ ಚ ॥೨೪.೨೪॥

 

ದುರ್ಯೋಧನನು ಬಲರಾಮನ ಬಳಿಗೆ ತೆರಳಿದ. ಬಲರಾಮನಾದರೋ, ದುರ್ಯೋಧನನ ಮೇಲೆ ಪ್ರೀತಿ ಇದ್ದರೂ, ಶ್ರೀಕೃಷ್ಣಪರಮಾತ್ಮನ ಭಯದಿಂದ ‘ನಾನು ನಿನಗೆ ಸಹಾಯ ಮಾಡುವುದಿಲ್ಲ ಎಂದು ಹೇಳಿದನು.  

ಈ ಹಿಂದೆ ಉಪಪ್ಲಾವ್ಯದಲ್ಲಿ ನಡೆದ ಮಂತ್ರಾಲೋಚನಾ ಸಭೆಯಲ್ಲಿ ದುರ್ಯೋಧನನ ಪರವಾಗಿ ಬಲರಾಮ ಮಾತನಾಡಿದಾಗ, ಶ್ರೀಕೃಷ್ಣನ ಎದುರಲ್ಲೇ  ಸಾತ್ಯಕಿಯಿಂದ ನಿರಾಕರಿಸಲ್ಪಟ್ಟನು(ಆಗ ಕೃಷ್ಣ ಏನೂ ಹೇಳದೇ ಸುಮ್ಮನಿದ್ದ).

 

ತತೋ ದುರ್ಯ್ಯೋಧನಂ ನಾಯಾತ್ ಸ ಚ ಹಾರ್ದ್ದಿಕ್ಯಸಂಯುತಃ ।

ಜಗಾಮ ಹಸ್ತಿನಪುರಮಕ್ಷೋಹಿಣ್ಯೋ ದಶಾಭವನ್ ॥೨೪.೨೫॥

 

ಏಕಾ ಚ ಧಾರ್ತ್ತರಾಷ್ಟ್ರಸ್ಯ ನಾನಾದೇಶ್ಯೈರ್ನ್ನೃಪೈರ್ಯ್ಯುತಾಃ ।

ಸಪ್ತ ಪಾಣ್ಡುಸುತಾನಾಂ ಚ ಮಾತ್ಸ್ಯದ್ರುಪದಕೇಕಯೈಃ ॥೨೪.೨೬॥

 

ದೃಷ್ಟಕೇತುಜರಾಸನ್ಧಸುತಕಾಶೀನೃಪೈರ್ಯ್ಯುತಾಃ ।

ಪುರುಜಿತ್ ಕುನ್ತಿಭೋಜಶ್ಚ ಚೇಕಿತಾನಶ್ಚ ಸಾತ್ಯಕಿಃ ॥೨೪.೨೭॥

 

ಪಾಣ್ಡವಾನ್ ಸೇನಯಾ ಯುಕ್ತಾಃ ಸಮೀಯುರ್ದ್ದೇವಪಕ್ಷಿಣಃ ।

ವಿನ್ದಾನುವಿನ್ದಾವಾವನ್ತ್ಯೌ ಜಯತ್ಸೇನೋSನ್ಯಕೇಕಯಾಃ ॥೨೪.೨೮॥

 

ಕ್ಷೇಮಧೂರ್ತ್ತಿರ್ದ್ದಣ್ಡಧಾರಃ ಕಲಿಙ್ಗೋSಮ್ಬಷ್ಠ ಏವ ಚ ।

ಶ್ರುತಾಯುರಚ್ಯುತಾಯುಶ್ಚ ಬೃಹದ್ಬಲಸುದಕ್ಷಿಣೌ ॥೨೪.೨೯॥

 

ಶ್ರುತಾಯುಧಃ ಸೈನ್ಧವಶ್ಚ ರಾಕ್ಷಸೋSಲಮ್ಬುಸಸ್ತಥಾ ।

ಅಲಾಯುಧೋSಲಮ್ಬಲಶ್ಚ ದೈತ್ಯಾ ದುರ್ಯ್ಯೋಧನಂ ಯಯುಃ ॥೨೪.೩೦॥

 

ಹೀಗೆ ಪರಮಾತ್ಮನ ಮೇಲಿನ ಭಯದಿಂದ ಬಲರಾಮ ದುರ್ಯೋಧನನನ್ನು ಅನುಸರಿಸಿ ಹೋಗಲಿಲ್ಲ. ದುರ್ಯೋಧನನು ಕೃತವರ್ಮನ ಜೊತೆಗೂಡಿ ಹಸ್ತಿನಪುರಕ್ಕೆ ತೆರಳಿದ.

ಬೇರೆಬೇರೆ ರಾಜರ ಹತ್ತು ಅಕ್ಷೋಹಿಣಿ ಸೇನೆ ಮತ್ತು ಹಸ್ತಿನಪುರದ ಒಂದು ಅಕ್ಷೋಹಿಣಿ ಸೇನೆಯೊಂದಿಗೆ ಒಟ್ಟು ಹನ್ನೊಂದು ಅಕ್ಷೋಹಿಣಿ ಸೇನೆ ದುರ್ಯೋಧನದ್ದಾಯಿತು.

ದೇವತೆಗಳ ಪಕ್ಷದಲ್ಲಿ ಇರುವ ವಿರಾಟರಾಜ, ದ್ರುಪದ, ಕೇಕಯ, ದೃಷ್ಟಕೇತು, ಜರಾಸಂಧನ ಮಗ ಸಹದೇವ, ಭೀಮಸೇನನ ಮಾವನಾದ ಕಾಶೀರಾಜ, ಪುರುಜಿತ್, ಕುಂತಿಭೋಜ, ಚೇಕಿತಾನ ಮತ್ತು ಸಾತ್ಯಕಿ ಇವರು ಸೇನೆಯಿಂದೊಡಗೂಡಿ ಪಾಂಡವರನ್ನು ಹೊಂದಿದರು. ಇವರೆಲ್ಲರೂ ಸೇರಿದಾಗ  ಪಾಂಡವರ ಕಡೆ ಏಳು ಅಕ್ಷೋಹಿಣಿಯಾಯಿತು.  

ಅವಂತಿ ದೇಶದವರಾದ ವಿಂದಾ-ಅನುವಿಂದರು,  ಜಯತ್ಸೇನ ಹಾಗೂ ಪಾಂಡವರ ಕಡೆ ಹೋಗದೇ ಇರುವ ಅನ್ಯ ಕೇಕಯರು,  ಕ್ಷೇಮಧೂರ್ತಿ, ದಂಡಧರ, ಕಲಿಂಗ, ಅಮ್ಬಷ್ಠ, ಶ್ರುತಾಯು, ಅಚ್ಯುತಾಯು, ಬೃಹದ್ಬಲ, ಸುದಕ್ಷಿಣ, ಶ್ರುತಾಯುಧ, ಸೈನ್ಧವ(ಜಯದ್ರಥ), ಅಲಮ್ಬುಸ ರಾಕ್ಷಸ, ಅಲಾಯುಧ ಮತ್ತು  ಅಲಮ್ಬಲ ಎನ್ನುವ ದೈತ್ಯರು-ಇವರೆಲ್ಲರೂ ತಮ್ಮ ಸ್ವಭಾವಕ್ಕೆ ಅನುಗುಣವಾಗಿ ದುರ್ಯೋಧನನನ್ನು ಹೊಂದಿದರು.

No comments:

Post a Comment