ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 4, 2022

Mahabharata Tatparya Nirnaya Kannada 23-49-59

 

ಏವಂ ವಿರಾಟಂ ಮೋಚಯಿತ್ವೈವ ಗಾಶ್ಚ ತಮಸ್ಯನ್ಧೇ ಕೀಚಕಾನ್ ಪಾತಯಿತ್ವಾ ।

ಪ್ರಾಪ್ತೋ ಧರ್ಮ್ಮಃ ಸುಮಹಾನ್ ವಾಯುಜೇನ ತಸ್ಯಾನು ಪಾರ್ತ್ಥೇನ ಚ ಗೋವಿಮೋಕ್ಷಣಾತ್ ॥೨೩.೪೯॥

 

ಈ ಪ್ರಕಾರವಾಗಿ ವಿರಾಟನನ್ನೂ, ಅವನ ಹಸುಗಳನ್ನೂ ಬಿಡಿಸಿ, ಕೀಚಕರನ್ನು ಅನ್ಧಂತಮಸ್ಸಿನಲ್ಲಿ ಬೀಳಿಸಿ, ಭೀಮಸೇನನಿಂದ ಮಹಾಪುಣ್ಯವು ಹೊಂದಲ್ಪಟ್ಟಿತು. ಭೀಮನ ನಂತರ ಅರ್ಜುನನಿಂದ ಗೋವುಗಳನ್ನು ಬಿಡಿಸಿದ್ದರಿಂದ ಪುಣ್ಯವು ಹೊಂದಲ್ಪಟ್ಟಿತು.

 

ಅಯಾತಯನ್ ಕೇಶವಾಯಾಥ ದೂತಾನ್ ಸಹಾಭಿಮನ್ಯುಃ ಸೋSಪಿ ರಾಮೇಣ ಸಾರ್ದ್ಧಮ್ ।

ಆಗಾದನನ್ತಾನನ್ದಚಿದ್ ವಾಸುದೇವೋ ವಿವಾಹಯಾಮಾಸುರಥಾಭಿಮನ್ಯುಮ್ ॥೨೩.೫೦॥

 

ತದನಂತರ ಶ್ರೀಕೃಷ್ಣನಲ್ಲಿಗೆ ಪಾಂಡವರು ಧೂತನನ್ನು ಕಳುಹಿಸಿದರು. ಬಲರಾಮನಿಂದ, ಅಭಿಮನ್ಯುವಿನಿಂದ ಕೂಡಿಕೊಂಡು, ಎಣೆಯಿರದ ಅರಿವಿನ ಶ್ರೀಕೃಷ್ಣ ಪರಮಾತ್ಮನು ವಿರಾಟನಗರಕ್ಕೆ ಬಂದ. ಬಂದಮೇಲೆ ಅಭಿಮನ್ಯುವಿಗೆ ಮದುವೆ ಮಾಡಿಸಿದರು.  

 

ಆಸೀನ್ಮಹಾನುತ್ಸವಸ್ತತ್ರ ತೇಷಾಂ ದಶಾರ್ಹವೀರೈಃ ಸಹ ಪಾಣ್ಡವಾನಾಮ್ ।

ಸಪಾಞ್ಚಲಾನಾಂ ವಾಸುದೇವೇನ ಸಾರ್ದ್ಧಮಜ್ಞಾತವಾಸಂ ಸಮತೀತ್ಯ ಮೋದತಾಮ್ ॥೨೩.೫೧॥

 

ಆ ಸಂದರ್ಭದಲ್ಲಿ ಯಾದವ ವೀರರಿಂದ ಕೂಡಿಕೊಂಡು ಆ ಪಾಂಡವರಿಗೆ ದೊಡ್ಡ ಸಂಭ್ರಮದ ಹಬ್ಬ ನಡೆಯಿತು. ಪಂಚಾಲರೂ ಕೂಡಾ ಬಂದು ಸೇರಿದ್ದರು. ಹೀಗೆ ಅಜ್ಞಾತವಾಸವನ್ನು ಯಶಸ್ವಿಯಾಗಿ ಮುಗಿಸಿ, ಸಂತೋಷಪಡುವ ಪಾಂಡವರಿಗೆ ಎಲ್ಲಾ ರೀತಿಯಿಂದ ಹಬ್ಬವಾಯಿತು.

 

ದುರ್ಯ್ಯೋಧನಾದ್ಯಾಃ ಸೂತಪುತ್ರೇಣ ಸಾರ್ದ್ಧಂ ಸಸೌಬಲೇಯಾ ಯುಧಿ ಪಾರ್ತ್ಥಪೀಡಿತಾಃ ।

ಭೀಷ್ಮಾದಿಭಿಃ ಸಾರ್ದ್ಧಮುಪೇತ್ಯ ನಾಗಪುರಂ ಮನ್ತ್ರಂ ಮನ್ತ್ರಯಾಮಾಸುರತ್ರ ॥೨೩.೫೨॥

 

ಇತ್ತ ಯುದ್ಧದಲ್ಲಿ ಅರ್ಜುನನಿಂದ ಸೋತ ದುರ್ಯೋಧನಾದಿಗಳು ಕರ್ಣ, ಶಕುನಿ, ಭೀಷ್ಮಾದಿಗಳಿಂದ ಕೂಡಿಕೊಂಡು ಹಸ್ತಿನಾವತಿಗೆ ತೆರಳಿ, ಎಲ್ಲರೂ ಕೂಡಾ ಮಂತ್ರಾಲೋಚನೆಗೆಂದು ಸೇರಿದರು.

 

ಅಜ್ಞಾತವಾಸೇ ಫಲ್ಗುನೋ ನೋSದ್ಯ ದೃಷ್ಟಸ್ತಸ್ಮಾತ್ ಪುನರ್ಯ್ಯಾನ್ತು ಪಾರ್ತ್ಥಾ ವನಾಯ ।

ಇತಿ ಬ್ರುವಾಣಾನಾಹ ಭೀಷ್ಮೋSಭ್ಯತೀತಮಜ್ಞಾತವಾಸಂ ದ್ರೋಣ ಆಹೈವಮೇವ ॥೨೩.೫೩॥

 

ಅಜ್ಞಾತವಾಸದಲ್ಲಿ ಅರ್ಜುನನು ನಮ್ಮಿಂದ ಕಾಣಲ್ಪಟ್ಟಿದ್ದಾನೆ. ಅದರಿಂದ ಪಾಂಡವರು ಮತ್ತೆ ಕಾಡಿಗೆ ತೆರಳಲಿ ಎಂದು ಹೇಳುತ್ತಿರುವ ದುರ್ಯೋಧನಾದಿಗಳನ್ನೂ ಭೀಷ್ಮನು ತಡೆದು, ಅಜ್ಞಾತವಾಸ ಕಳೆದುಹೋಯಿತು ಎಂದು ಹೇಳಿದ. ದ್ರೋಣಾಚಾರ್ಯರೂ ಹೀಗೆಯೇ ಹೇಳಿದರು.

 

ತಯೋರ್ವಾಕ್ಯಂ ತೇ ತ್ವನಾದೃತ್ಯ ಪಾಪಾ ವನಂ ಪಾರ್ತ್ಥಾಃ ಪುನರೇವ ಪ್ರಯಾನ್ತು ।

ಇತಿ ದೂತಂ ಪ್ರೇಷಯಾಮಾಸುರತ್ರ ಜಾನನ್ತಿ ವಿಪ್ರಾ ಇತಿ ಧರ್ಮ್ಮಜೋSವದತ್ ॥೨೩.೫೪॥

 

ಈರೀತಿಯಾಗಿ ಹೇಳಿದ ಅವರಿಬ್ಬರ ಮಾತನ್ನು ಅನಾದರಿಸಿದ ಪಾಪಿಷ್ಠರಾಗಿರುವ ದುರ್ಯೋಧನಾದಿಗಳು, ಪಾಂಡವರು ಮತ್ತೆ ಕಾಡಿಗೆ ತೆರಳಲಿ ಎಂದು ಹೇಳಿ ದೂತನನ್ನು ಕಳುಹಿಸಿದರು. ಆಗ ಧರ್ಮರಾಜ ‘ಬ್ರಾಹ್ಮಣರಿಗೆ ತಿಳಿದಿದೆ’ ಎಂದು ಹೇಳಿದ.

 

[ಯಾವ ಕಾಲಮಾನದ ಪ್ರಕಾರ ಯುಧಿಷ್ಠಿರ, ಭೀಷ್ಮ-ದ್ರೋಣಾದಿಗಳು ಅಜ್ಞಾತವಾಸ ಪೂರ್ಣವಾಗಿದೆ ಎಂದು ಹೇಳಿದರು ಹಾಗೂ ಯಾವ ಕಾಲಮಾನದ ಪ್ರಕಾರ ದುರ್ಯೋಧನಾದಿಗಳು ಅಜ್ಞಾತವಾಸ ಅಪೂರ್ಣವಾಗಿದೆ  ಎಂದರು ಎನ್ನುವುದನ್ನು ವಿವರಿಸುತ್ತಾರೆ-]   

 

ಸೌರಮಾಸಾನುಸಾರೇಣ ಧಾರ್ತ್ತರಾಷ್ಟ್ರಾ ಅಪೂರ್ಣ್ಣತಾಮ್ ।

ಆಹುಶ್ಚಾನ್ದ್ರೇಣ ಮಾಸೇನ ಪೂರ್ಣ್ಣಃ ಕಾಲೋSಖಿಲೋSಪ್ಯಸೌ ॥೨೩.೫೫॥

 

ಸೌರಮಾನದ ಪ್ರಕಾರ (೩೦ ದಿನಕ್ಕೆ ಒಂದು ತಿಂಗಳು ಎಂದು ಲೆಕ್ಕ ಇಟ್ಟುಕೊಂಡರೆ) ಪಾಂಡವರ ಅಜ್ಞಾತವಾಸಕ್ಕೆ ೧ ವರ್ಷ ಕಳೆದಿರಲಿಲ್ಲ. ಹಾಗಾಗಿ ದುರ್ಯೋಧನಾದಿಗಳು ಅಪೂರ್ಣ ಎಂದರೆ,   ಚಾಂದ್ರಮಾನ ಪ್ರಕಾರ (೨೭ದಿನಗಳಿಗೆ ಒಂದು ತಿಂಗಳು) ಒಂದು ವರ್ಷ ಪೂರ್ಣವಾಗಿತ್ತು ಮತ್ತು ಅದು ಆ ಕಾಲದ ವರ್ಷ ಮಾಪನವಾಗಿತ್ತು ಕೂಡಾ.

 

 

ದಿನಾನಾಮಧಿಪಃ ಸೂರ್ಯ್ಯಃ ಪಕ್ಷಮಾಸಾಬ್ದಪಃ ಶಶೀ ।

ತಸ್ಮಾತ್ ಸೌಮ್ಯಾಬ್ದಮೇವಾತ್ರ ಮುಖ್ಯಮಾಹುರ್ಮ್ಮನೀಷಿಣಃ ॥೨೩.೫೬॥

 

ದಿನಗಳ ಅಧಿಪತಿ ಸೂರ್ಯ. ಆದರೆ ಪಕ್ಷ ಹಾಗೂ ತಿಂಗಳಿಗೆ ಚಂದ್ರನೇ ಅಧಿಪತಿ. ಆಕಾರಣದಿಂದ ಜ್ಞಾನಿಗಳು ಚಾಂದ್ರಮಾನದ ವರ್ಷವನ್ನು ಮುಖ್ಯವಾಗಿ ಹೇಳುತ್ತಾರೆ.

 

ಸೌಮ್ಯಂ ಕಾಲಂ ತತೋ ಯಜ್ಞೇ ಗೃಹ್ಣನ್ತಿ ನತು ಸೂರ್ಯ್ಯಜಮ್ ।

ತದೇತದವಿಚಾರ್ಯ್ಯೈವ ಲೋಭಾಚ್ಚ ಧೃತರಾಷ್ಟ್ರಜೈಃ ॥೨೩.೫೭॥

 

ಇದು ವೈದಿಕ  ಸಂಪ್ರದಾಯ ಸಿದ್ಧವೂ ಆಗಿದೆ. ಯಜ್ಞದಲ್ಲಿ ಚಾಂದ್ರಮಾನವನ್ನೇ ತೆಗೆದುಕೊಳ್ಳುತ್ತಾರೆ ಹೊರತು ಸೌರಮಾನವನ್ನಲ್ಲ. ಇವುಗಳೆಲ್ಲವನ್ನು ವಿಚಾರವೇ ಮಾಡದೇ ಅತಿಲೋಭದಿಂದ ದುರ್ಯೋಧನಾದಿಗಳಿಂದ ಪಾಂಡವರಿಗೆ ರಾಜ್ಯವು ಕೊಡಲ್ಪಡಲಿಲ್ಲ.

 

ರಾಜ್ಯಂ ನ ದತ್ತಂ ಪಾರ್ತ್ಥೇಭ್ಯಃ ಪಾರ್ತ್ಥಾಃ ಕಾಲಸ್ಯ ಪೂರ್ಣ್ಣತಾಮ್ ।

ಖ್ಯಾಪಯನ್ತೋ ವಿಪ್ರವರೈರುಪಪ್ಲಾವ್ಯಮುಪಾಯಯುಃ ॥೨೩.೫೮॥

 

ಪಾಂಡವರು ಕಾಲ ಪೂರ್ಣವಾಯಿತು ಎಂದು ಜಗತ್ತಿಗೇ ಹೇಳುತ್ತಾ, ಬ್ರಾಹ್ಮಣರಿಂದ ಕೂಡಿಕೊಂಡು ಉಪಪ್ಲಾವ್ಯನಗರವನ್ನು ಕುರಿತು ಬಂದರು. (ಉಪಪ್ಲಾವ್ಯ ವಿರಾಟನಗರಕ್ಕೂ ಹಸ್ತಿನಪುರಕ್ಕೂ ಗಡಿಯಲ್ಲಿರುವ  ಹಸ್ತಿನಪುರಕ್ಕೆ ಸೇರಿರುವ ಸ್ಥಳ)

 

ಸವಾಸುದೇವಾ ಅಖಿಲೈಶ್ಚ ಯಾದವೈಃ ಪಾಞ್ಚಾಲಮತ್ಸೈಶ್ಚ ಯುತಾಃ ಸಭಾರ್ಯ್ಯಾಃ

ಉಪಪ್ಲಾವ್ಯೇ ತೇ ಕತಿಚಿದ್ ದಿನಾನಿ ವಾಸಂ ಚಕ್ರುಃ ಕೃಷ್ಣಸಂಶಿಕ್ಷಿತಾರ್ತ್ಥಾಃ ॥೨೩.೫೯॥

 

ಕೃಷ್ಣನೇ ಮೊದಲಾದ ಎಲ್ಲಾ ಯಾದವರಿಂದ, ಪಾಂಚಾಲ-ಮತ್ಸ್ಯ ದೇಶದವರಿಂದ ಕೂಡಿ, ಪತ್ನಿಯರಿಂದ ಒಡಗೂಡಿ, ಶ್ರೀಕೃಷ್ಣನಿಂದ ಬೋಧಿಸಲ್ಪಟ್ಟವರಾಗಿ, ಅವರು ಉಪಪ್ಲಾವ್ಯದಲ್ಲಿ ಕೆಲವು ದಿವಸಗಳ ಕಾಲ ವಾಸಮಾಡಿದರು.

[ಆದಿತಃ ಶ್ಲೋಕಾಃ :  ೩೬೩೯+೫೯=೩೬೯೮]

॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಅಜ್ಞಾತವಾಸಸಮಾಪ್ತಿರ್ನ್ನಾಮ ತ್ರಯೋವಿಂಶೋSದ್ಧ್ಯಾಯಃ

*********

No comments:

Post a Comment