ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, December 3, 2022

Mahabharata Tatparya Nirnaya Kannada 23-27-35

 

ಅವದ್ಧ್ಯಂ ತಂ ನಿಹತಂ ವೀಕ್ಷ್ಯ ತಸ್ಯ ಪಞ್ಚೋತ್ತರಂ ಶತಮೇವಾನುಜಾನಾಮ್ ।

ಸರ್ವಂ ವರಾಚ್ಛಙ್ಕರಸ್ಯ ಹ್ಯವದ್ಧ್ಯಂ ಸಹೈವ ಕೃಷ್ಣಾಂ ತೇನ ದಗ್ಧುಂ ಬಬನ್ಧ ॥೨೩.೨೭॥

 

ಯಾರಿಂದಲೂ ಸಾಯಿಸಲಾಗದ ಕೀಚಕನನ್ನು ಸತ್ತವನನ್ನಾಗಿ ಕಂಡು, ರುದ್ರನ ವರದಿಂದ ಅವಧ್ಯರಾಗಿದ್ದ ಕೀಚಕನ ನೂರಐದು ಜನ ಉಪಕೀಚಕರು ದ್ರೌಪದಿಯನ್ನು ಕೀಚಕನ ಜೊತೆಗೇ ಸುಡಲೆಂದು ಕಟ್ಟಿಹಾಕಿದರು.  

 

ಸಾ ನೀಯಮಾನಾ ಕೀಚಕೈಃ ಸಂರುರಾವ ಶ್ರುತ್ವೈವ ತಂ ಭೀಮಸೇನೋ ಮಹಾನ್ತಮ್ ।

ಉದ್ಧೃತ್ಯ ವೃಕ್ಷಂ  ತೇನ ಜಘಾನ ಸರ್ವಾನಾದಾಯ ಕೃಷ್ಣಾಂ ಪುನರಾಗಾತ್ ಪುರಂ ಚ ॥೨೩.೨೮॥

 

ಉಪಕೀಚಕರಿಂದ ಕೊಂಡೊಯ್ಯಲ್ಪಡುತ್ತಿರುವ ಅವಳು ಗಟ್ಟಿಯಾಗಿ ಕಿರುಚಿದಳು. ಆ ಕೂಗನ್ನು ಕೇಳಿ ಭೀಮಸೇನನು ದೊಡ್ಡ ಮರವೊಂದನ್ನು ಕಿತ್ತು ಅದರಿಂದ ಎಲ್ಲರನ್ನೂ ಕೂಡಾ ಕೊಂದು, ದ್ರೌಪದಿಯನ್ನು ಕರೆದುಕೊಂಡು ಮತ್ತೆ ಪಟ್ಟಣಕ್ಕೆ ಬಂದ.

 

ಏವಂ ಯತ್ನಾತ್ ತಪಸಾ ತೈರವಾಪ್ತೋ ವರಃ ಶಿವಾದಜಯತ್ವಂ ರಣೇಷು ।

ಅವದ್ಧ್ಯತಾ ಚೈವ ಷಡುತ್ತರಾಸ್ತೇ ಶತಂ ಹತಾ ಭೀಮಸೇನೇನ ಸಙ್ಖೇ ॥೨೩.೨೯॥

 

ಈರೀತಿಯಾಗಿ, ಕೀಚಕನಂತೆಯೇ ಪ್ರಯತ್ನಪಟ್ಟು ತಪಸ್ಸನ್ನಾಚರಿಸಿ ಶಿವನಿಂದ ಯುದ್ಧದಲ್ಲಿ ಅಜೇಯತ್ವ ಮತ್ತು ಅವಧ್ಯತ್ವವನ್ನು ಪಡೆದಿದ್ದ ಆ ನೂರಾ ಐದು ಮಂದಿ ಉಪಕೀಚಕರು ಮುಖ್ಯಕೀಚಕನಿಂದ ಕೂಡಿಕೊಂಡು(ಒಟ್ಟು ೧೦೬ ಮಂದಿ) ಭೀಮಸೇನನಿಂದ ಸಂಹರಿಸಲ್ಪಟ್ಟರು.

 

ಗನ್ಧರ್ವ ಇತ್ಯೇವ ನಿಹತ್ಯ ಸರ್ವಾನ್ ಮುಮೋದ ಭೀಮೋ ದ್ರೌಪದೀ ಚಾsಥ ಕೃಷ್ಣಾಮ್ ।

ಯಾಹೀತ್ಯೂಚೇ ತಾಂ ಸುದೇಷ್ಣಾ ಭಯೇನ ತ್ರಯೋದಶಾಹಂ ಪಾಲಯೇತ್ಯಾಹ ತಾಂ ಸಾ ॥೨೩.೩೦॥

 

ಅವರೆಲ್ಲರನ್ನೂ ಕೂಡಾ ಕೊಂದ ಭೀಮಸೇನ  ‘ಗಂಧರ್ವ ಕೊಂದ’ ಎಂದು ಹೇಳುತ್ತಾ ಆನಂದದಿಂದಿದ್ದ.  ದ್ರೌಪದಿಯೂ ಸಂತೋಷಗೊಂಡಳು. ಇಷ್ಟೆಲ್ಲಾ ಆದಮೇಲೆ ಭಯಗೊಂಡ ಸುದೇಷ್ಣೆಯು ದ್ರೌಪದಿಯನ್ನು  ‘ಹೋಗು’ ಎಂದು ಹೇಳಿದಳು. ಆಗ ದ್ರೌಪದಿ ‘ಇನ್ನು ಹದಿಮೂರು ದಿನ ತಡೆದುಕೋ’ ಎಂದಳು.

 

ಅಸ್ತ್ವೀತ್ಯೇನಾಮಾಹ ಭಯಾತ್ ಸುದೇಷ್ಣಾ ತಥಾSವಸನ್ ಪೂರ್ಣಮಬ್ದಂ ಚ ತೇSತ್ರ ।

ತದಾ ಪಾರ್ತ್ಥಾನ್ ಪ್ರವಿಚಿತ್ಯಾಖಿಲಾಯಾಂ ಪೃಥ್ವ್ಯಾಂ ಛನ್ನಾನ್ ಧಾರ್ತ್ತರಾಷ್ಟ್ರಸ್ಯ ದೂತಾಃ ॥೨೩.೩೧॥

 

 

ಅವಿಜ್ಞಾಯ ಪ್ರಯಯುರ್ದ್ಧಾರ್ತ್ತರಾಷ್ಟ್ರಮೂಚುರ್ಹತಂ ಕೀಚಕಂ ಯೋಷಿದರ್ತ್ಥೇ ।

ತೇನಾವದದ್ ದ್ರೌಪದೀಕಾರಣೇನ ದುರ್ಯ್ಯೋಧನೋ ನಿಹತಂ ಕೀಚಕಂ ತಮ್ ॥೨೩.೩೨॥

 

ದ್ರೌಪದಿಯ ಮಾತಿಗೆ ಭಯದಿಂದ ಸುದೇಷ್ಣಾ ಒಪ್ಪಿಕೊಂಡಳು. ಹೀಗೆ ಪಾಂಡವರು ವಿರಾಟನಗರಿಯಲ್ಲಿ ಒಂದು ವರ್ಷ ಪೂರ್ತಿ ವಾಸಮಾಡಿದರು.

ಇತ್ತ ದುರ್ಯೋಧನನ ದೂತರು ಇಡೀ ಭೂಮಿಯಲ್ಲಿ ಹುಡುಕಿದರೂ  ಪಾಂಡವರು ಎಲ್ಲಿದ್ದಾರೆ ಎಂದು ತಿಳಿಯದೇ, ದುರ್ಯೋಧನನಲ್ಲಿಗೆ ತೆರಳಿ ‘ಪಾಂಡವರು ಸಿಗಲಿಲ್ಲ, ಆದರೆ ಒಂದು ಹೆಣ್ಣಿಗಾಗಿ ಕೀಚಕನು ಕೊಲ್ಲಲ್ಪಟ್ಟಿದ್ದಾನೆ’  ಎಂದು ಹೇಳಿದರು. ಆಗ ದುರ್ಯೋಧನನು  ದ್ರೌಪದಿಗಾಗಿಯೇ ಕೀಚಕ ಸತ್ತಿದ್ದು ಎಂದು ಹೇಳಿದ.

 

ಭೀಮೇನಾಗುಸ್ತತ್ರ ದುರ್ಯ್ಯೋಧನಾದ್ಯಾ ಭೀಷ್ಮಾದಿಭಿಃ ಸಹ ಕರ್ಣ್ಣೇನ ಚೈವ ।

ಅಗ್ರೇ ಯಯೌ ತತ್ರ ಯೋದ್ಧುಂ ಸುಶರ್ಮ್ಮಾ ಸ ಗಾ ವಿರಾಟಸ್ಯ ಸಮಾಜಹಾರ ॥೨೩.೩೩॥

 

‘ಭೀಮಸೇನನೇ ಕೀಚಕನನ್ನು ಕೊಂದಿರುವುದು’ ಎಂದು ಹೇಳಿದ ದುರ್ಯೋಧನ, ಭೀಷ್ಮಾಚಾರ್ಯ, ಕರ್ಣ, ಮೊದಲಾದವರೊಂದಿಗೆ ಕೂಡಿಕೊಂಡು ವಿರಾಟನಗರಿಗೆ ತೆರಳಿದ. ಅವರಿಗೂ ಮೊದಲು ಸುಶರ್ಮ ಎನ್ನುವ ರಾಜನು ಯುದ್ಧಮಾಡಲೆಂದು ಎರಡು ದಿನ ಮೊದಲೇ ತೆರಳಿದ ಮತ್ತು ವಿರಾಟನ ಗೋವುಗಳನ್ನು ಆಕ್ರಮಿಸಿದ.   

 

ಶ್ರುತ್ವಾ ವಿರಾಟೋSನುಯಯೌ ಸಸೇನಸ್ತಂ ಪಾಣ್ಡವಾಶ್ಚಾನುಯಯುರ್ವಿನಾSರ್ಜ್ಜುನಮ್ ।

ವಿಜಿತ್ಯ ಸಙ್ಖೇ ಜಗೃಹೇ ವಿರಾಟಂ ತದಾ ಸುಶರ್ಮ್ಮಾ ತಮಯಾದ್ ವೃಕೋದರಃ ॥೨೩.೩೪॥

 

ತ್ರಿಗರ್ತದೇಶದ ರಾಜ ಸುಶರ್ಮ ಆಕ್ರಮಣ ಮಾಡಿದ್ದಾನೆ ಎಂದು ಕೇಳಿದ ವಿರಾಟರಾಜನು ಸೇನೆಯಿಂದ ಕೂಡಿಕೊಂಡು ಸುಶರ್ಮನ ಬೆನ್ನಟ್ಟಿದನು. ಅವನನ್ನು ಅರ್ಜುನನನ್ನು ಬಿಟ್ಟು ಉಳಿದ ಪಾಂಡವರು ಅನುಸರಿಸಿದರು. ಯುದ್ಧದಲ್ಲಿ ಸುಶರ್ಮ ವಿರಾಟನನ್ನು ಗೆದ್ದು ಸೆರೆಹಿಡಿದ. ಆಗ ಭೀಮಸೇನ ಸುಶರ್ಮನನ್ನು ಕುರಿತು ತೆರಳಿದ.

 

ಸ ತಸ್ಯ ಸೇನಾಂ ವಿನಿಹತ್ಯ ಮಾತ್ಸ್ಯಂ ವಿಮೋಚ್ಯ ಜಗ್ರಾಹ ಸುಶರ್ಮ್ಮರಾಜಮ್ ।

ಯುಧಿಷ್ಠಿರೋ ಮೋಚಯಮಾಸ ತಂ ಚ ತತೋ ರಾತ್ರೌ ನ್ಯವಸನ್ ಬಾಹ್ಯತಸ್ತೇ ॥೨೩.೩೫॥

 

ಭೀಮಸೇನನು ಸುಶರ್ಮನ ಸೇನೆಯನ್ನು ಕೊಂದು, ವಿರಾಟರಾಜನನ್ನು ಬಿಡಿಸಿ, ಸುಶರ್ಮನನ್ನು ಹಿಡಿದುಕೊಂಡ. ಯುಧಿಷ್ಠಿರನು ಸುಶರ್ಮನನ್ನು ಬಿಡಿಸಿದನು. ಅಂದು ಅವರೆಲ್ಲರೂ ನಗರದ ಆಚೆ ಭಾಗದಲ್ಲಿ ರಾತ್ರಿಯನ್ನು ಕಳೆದರು(ಯುದ್ಧದಲ್ಲಿ ಗೆದ್ದ ಅವರು ಆ ರಾತ್ರಿ ಪಟ್ಟಣದಿಂದ ಹೊರಭಾಗದಲ್ಲೇ ವಾಸಮಾಡಿದರು).

No comments:

Post a Comment