ಪಾರ್ತ್ಥಾನಾಂ ಗದಿತಂ ತಚ್ಚ ಶ್ರುತ್ವಾ ಧರ್ಮ್ಮಸುತೋSನುಜಾನ್ ।
ಪಪ್ರಚ್ಛ ವಿದುರಂ ಚೈವ
ಸಾರಂ ಧರ್ಮ್ಮಾದಿಷು ತ್ರಿಷು ॥ ೨೯.೪೮ ॥
ಭೀಷ್ಮಾಚಾರ್ಯರ ಮುಖೇನ
ಉಪದೇಶ ಪಡೆದ ಧರ್ಮರಾಜನು ತನ್ನ ತಮ್ಮಂದಿರನ್ನು, ವಿದುರನನ್ನೂ, ಕುರಿತು- ‘ಪುರುಷಾರ್ಥಗಳಲ್ಲಿ(ಧರ್ಮ, ಅರ್ಥ, ಕಾಮ ಇವುಗಳಲ್ಲಿ)
ಯಾವುದು ಶ್ರೇಷ್ಠ’ ಎಂದು ಕೇಳಿದನು.
ಆಹ ಕ್ಷತ್ತಾ ಧರ್ಮ್ಮಮೇವ
ಸಾರಮರ್ತ್ಥಂ ಚ ಮದ್ಧ್ಯಮಮ್ ।
ನೀಚಂ ಕಾಮಂ
ನಿಷ್ಫಲತ್ವಾದರ್ತ್ಥಮೇವಾರ್ಜ್ಜುನೋSಬ್ರವೀತ್ ॥ ೨೯.೪೯ ॥
ವಿದುರನು ಪುರುಷಾರ್ಥಗಳಲ್ಲಿ
ಧರ್ಮವೇ ಶ್ರೇಷ್ಠ ಎಂದೂ, ಅರ್ಥವನ್ನು ಮಧ್ಯಮ ಎಂದೂ, ಫಲವಿಲ್ಲದ ಕಾಮವನ್ನು ನೀಚ ಎಂದೂ
ಹೇಳಿದನು. ಆದರೆ ಅರ್ಜುನ ಅರ್ಥವೇ ಶ್ರೇಷ್ಠ ಎಂದನು.
[ಅರ್ಥವೇ ಶ್ರೇಷ್ಠ
ಎನ್ನುವ ತನ್ನ ಅಭಿಪ್ರಾಯವನ್ನು ಅರ್ಜುನ ವಿವರಿಸುತ್ತಾನೆ-]
ಸಾರಂ ಸ ದ್ವಿವಿಧೋ
ಜ್ಞೇಯೋ ದೈವೋ ಮಾನುಷ ಏವ ಚ ।
ದೈವೋ ವಿದ್ಯಾ
ಹಿರಣ್ಯಾದಿರ್ಮ್ಮಾನುಷಃ ಪರಿಕೀರ್ತ್ತಿತಃ ॥ ೨೯.೫೦ ॥
ಅರ್ಥ ಎನ್ನುವುದು ಎರಡು
ರೀತಿ. ಒಂದು ದೈವ ಹಾಗೂ ಇನ್ನೊಂದು ಮಾನುಷ. ದೈವಸಂಪತ್ತು
ವಿದ್ಯೆ. ಮಾನುಷ ಸಂಪತ್ತು ಎಂದರೆ ಬಂಗಾರ ಮೊದಲಾದವುಗಳು ಎಂದು ಹೇಳಲ್ಪಟ್ಟಿದೆ.
ಮದ್ಧ್ಯಮೋ ಧರ್ಮ್ಮ
ಏವಾತ್ರ ಸಾದ್ಧ್ಯಂ ಸಾಧನಮೇವ ಚ ।
ವಿದ್ಯಾಹ್ವಯೋSರ್ತ್ಥೋ ಧರ್ಮ್ಮಸ್ಯ ವಿದ್ಯಯೈವ
ಚ ಮುಚ್ಯತೇ ॥ ೨೯.೫೧ ॥
ಧರ್ಮ ಎನ್ನುವುದು
ಮಧ್ಯಮ. ಏಕೆಂದರೆ
ವಿದ್ಯೆ ಎನ್ನುವ ದೈವಸಂಪತ್ತಿನ ಗುರಿ ಧರ್ಮ. ವಿದ್ಯೆ ಎನ್ನುವುದು ಸಾಧ್ಯವೂ ಹೌದು, ಸಾಧನವೂ
ಹೌದು. ವಿದ್ಯೆಯೇ ಮೋಕ್ಷಸಾಧನವು.
ಮಾನುಷೋSರ್ತ್ಥೋSಪಿ ವಿದ್ಯಾಯಾಃ ಕಾರಣಂ ಸುಪ್ರಯೋಜಿತಃ ।
ತುಷ್ಟೋSರ್ತ್ಥೇನ ಗುರುರ್ಯ್ಯಸ್ಮಾತ್
ಕೈವಲ್ಯಂ ದಾತುಮಪ್ಯಲಮ್ ॥ ೨೯.೫೨ ॥
ಧರ್ಮ್ಮಾರ್ತ್ಥತಾಂ
ವಿನಾSಪ್ಯರ್ತ್ಥೈಸ್ತುಷ್ಯೇಯುರ್ಗ್ಗುರುದೇವತಾಃ
।
ಯದ್ಯನುದ್ದೇಶಿತೋ ಧರ್ಮ್ಮೋSಪ್ಯರ್ತ್ಥಮೇವಾನು ಸಂವ್ರಜೇತ್ ॥
೨೯.೫೩ ॥
ಗುರುತಾSರ್ತ್ಥಗತೈವ ಸ್ಯಾತ್ ಕಾಮೋSಸ್ತಾದ್ಧಿ ನಿಷ್ಪಲಃ ।
ಯಮಾವತ್ರ ವಿದಾಂ ಶ್ರೇಷ್ಠಾವರ್ಜ್ಜುನೋಕ್ತಮನೂಚತುಃ
॥ ೨೯.೫೪ ॥
ಮಾನುಷ ಸಂಪತ್ತನ್ನು ಸರಿಯಾಗಿ ಬಳಸಿದರೆ ಅದೂ ಕೂಡಾ ವಿದ್ಯೆಗೆ ಕಾರಣವಾಗುತ್ತದೆ. ಈರೀತಿ
ಮಾಡುವುದರಿಂದ (ಸಂಪತ್ತನ್ನು ವಿದ್ಯೆಗಾಗಿ ಬಳಸುವುದರಿಂದ) ಗುರುಪ್ರೀತಿಯನ್ನು ಹೊಂದಬಹುದು ಮತ್ತು ಪ್ರೀತನಾದ ಗುರುವು ಮೊಕ್ಷವನ್ನೂ ಕೊಡಬಲ್ಲ. ಧರ್ಮಕ್ಕಾಗಿ
ಬಳಸಲ್ಪಟ್ಟ ಅರ್ಥವೂ ಕೂಡಾ ಗುರು ಹಾಗೂ ದೇವತೆಗಳನ್ನು
ಪ್ರೀತರನ್ನಾಗಿ ಮಾಡಬಲ್ಲದು.
ಧರ್ಮದ ಪ್ರಯೋಜನವನ್ನು ಬಿಟ್ಟು, ಕೇವಲ ಅರ್ಥದಿಂದಲೂ ಗುರು-ದೇವತೆಗಳು
ಸಂತುಷ್ಟರಾಗಬಲ್ಲರು. ಫಲಾಪೇಕ್ಷೆ ಇಲ್ಲದೇ ಮಾಡುವ (ಜ್ಞಾನ, ಮೋಕ್ಷ
ಇತ್ಯಾದಿ ಫಲವನ್ನು ಉದ್ದೇಶಿಸಿ ಮಾಡಲ್ಪಡದ) ಧರ್ಮವೂ
ಕೂಡಾ ಅರ್ಥವನ್ನೇ ತಂದುಕೊಡುತ್ತದೆ. ಈರೀತಿಯಾಗಿ ಅರ್ಥವೇ ಶ್ರೇಷ್ಠವಾದದ್ದು. ಹೀಗೆ ಹೇಳಿದ
ಅರ್ಜುನನು ಮುಂದುವರಿದು ಕಾಮ ಎನ್ನುವುದು ನಿಷ್ಪಲ ಎಂದು ಪ್ರಬಲವಾಗಿ ಪ್ರತಿಪಾದನೆ ಮಾಡಿ, ನಕುಲ
ಸಹದೇವರನ್ನು ಕೇಳುತ್ತಾನೆ. ಅವರೂ ಕೂಡಾ ಅರ್ಜುನನ
ಅಭಿಪ್ರಾಯವನ್ನೇ ತಮ್ಮ ಅಭಿಪ್ರಾಯ ಎನ್ನುತ್ತಾರೆ.
No comments:
Post a Comment