೧. ಸರ್ವಶಾಸ್ತ್ರತಾತ್ಪರ್ಯ್ಯನಿರ್ಣ್ಣಯಃ
ಓ̐ ॥
ನಾರಾಯಣಾಯ ಪರಿಪೂರ್ಣ್ಣಗುಣಾರ್ಣ್ಣವಾಯ ವಿಶ್ವೋದಯಸ್ಥಿತಿಲಯೋನ್ನಿಯತಿಪ್ರದಾಯ
।
ಜ್ಞಾನಪ್ರದಾಯ ವಿಬುಧಾಸುರಸೌಖ್ಯದುಃಖಸತ್ಕಾರಣಾಯ ವಿತತಾಯ ನಮೋನಮಸ್ತೇ ॥೧.೦೧॥
ತುಂಬಿದ ಗುಣಗಳಿಗೆ ಕಡಲಿನಂತಿರುವ, ಈ
ಜಗಕೆ ಸೃಷ್ಟಿ-ಸ್ಥಿತಿ-ಪ್ರಳಯ, ನಿಯಮ
ಇತ್ಯಾದಿಗಳೆಲ್ಲವನ್ನೂ ಕೊಡುತ್ತಿರುವ , ಜಗತ್ತಿನಲ್ಲಿ ಎಲ್ಲರಿಗೂ
ಜ್ಞಾನವನ್ನು ನೀಡುತ್ತಿರುವ, ದೇವತೆಗಳ ಸುಖಕ್ಕೂ ಮತ್ತು ದೈತ್ಯರ
ದುಃಖಕ್ಕೂ ಕಾರಣನಾದ, ಎಲ್ಲೆಡೆ ವ್ಯಾಪಿಸಿರುವಂತಹ, ನಾರಾಯಣ ಎನಿಸಿಕೊಂಡ ನಿನಗೆ ನಮಸ್ಕಾರವಿರಲಿ
ಆಸೀದುದಾರಗುಣವಾರಿಧಿರಪ್ರಮೇಯೋ ನಾರಾಯಣಃ ಪರತಮಃ ಪರಮಾತ್ ಸ
ಏಕಃ ।
ಸಂಶಾನ್ತಸಂವಿದಖಿಲಂ ಜಠರೇ ನಿಧಾಯ ಲಕ್ಷ್ಮೀಭುಜಾನ್ತರಗತಃ
ಸ್ವರತೋsಪಿ ಚಾSಗ್ರೇ ॥೧.೦೨॥
ಉತ್ಕೃಷ್ಟವಾದ ಗುಣಗಳನ್ನು ಹೊಂದಿರುವ, ಸಂಪೂರ್ಣವಾಗಿ ತಿಳಿಯಲು
ಅಸಾಧ್ಯನಾದ, ಅತ್ಯಂತ ಉತ್ಕೃಷ್ಟನಾದ,
ಜಗತ್ತಿನಲ್ಲಿ ಅತ್ಯಂತ ಉತ್ಕೃಷ್ಟವಾದ ಜೀವಿಗಳ
ವರ್ಗಕ್ಕಿಂತಲೂ ಮಿಗಿಲಾಗಿರುವ, ಒಬ್ಬನೇ ಆಗಿರುವ ನಾರಾಯಣನು, ಈ ಸೃಷ್ಟಿಯ ಮೊದಲು, ತನ್ನಿಂದ ತಾನೇ
ಸಂತೋಷಪಡುವ ಯೋಗ್ಯತೆ ಉಳ್ಳವನಾಗಿದ್ದರೂ, ತನ್ನಿಂದ ತಾನೇ ಸಂತೋಷ ಪಡುವವನಾಗಿದ್ದರೂ, ಇಡೀ
ಬ್ರಹ್ಮಾಂಡವನ್ನು ತನ್ನ ಹೊಟ್ಟೆಯಲ್ಲಿಟ್ಟು, ಲಕ್ಷ್ಮಿಯ ತೋಳಿನಲ್ಲಿ ತಲೆ ಇಟ್ಟು,
ಜ್ಞಾನಾನಂದಮಯವಾದ ದೇಹವುಳ್ಳವನಾಗಿದ್ದನು.
ತಸ್ಯೋದರಸ್ಥಜಗತಃ ಸದಮನ್ದಸಾನ್ದ್ರಸ್ವಾನನ್ದತುಷ್ಟವಪುಷೋsಪಿ ರಮಾರಮಸ್ಯ ।
ಭೂತ್ಯೈ ನಿಜಾಶ್ರಿತಜನಸ್ಯ ಹಿ ಸೃಜ್ಯಸೃಷ್ಟಾವೀಕ್ಷಾ ಬಭೂವ
ಪರನಾಮನಿಮೇಷಕಾನ್ತೇ ॥೧.೦೩॥
ಸಮಸ್ತ ಜಗತ್ತನ್ನು ತನ್ನ ಉದರದಲ್ಲಿ ಧರಿಸಿಕೊಂಡಿರುವ,
ನಿರ್ದುಷ್ಟನಾದ(ಯಾವುದೇ ದೋಷದ ಲೇಪ ಇಲ್ಲದ), ಸ್ವರೂಪಭೂತವಾದ, ಆನಂದವೇ ಮೈವೆತ್ತು ಬಂದಿರುವ ಶರೀರವುಳ್ಳವನಾದ, ಲಕ್ಷ್ಮೀದೇವಿಯಿಂದಲೂ ಸಂತೋಷಪಡದ,
ತನ್ನಿಂದಲೇ ಸಂತೋಷಪಡುವ, ಆ ನಾರಾಯಣ, ಪರಕಾಲದ* ಕಡೆಯಲ್ಲಿ(ಪ್ರಳಯಕಾಲದ ಕೊನೆಯಲ್ಲಿ), ತನ್ನ
ಭಕ್ತರ ಆನಂದಕ್ಕಾಗಿ, ಸೃಷ್ಟಿ ಮಾಡಬೇಕು ಎನ್ನುವ
ಬಯಕೆ ಹೊಂದಿದನು. (*ಪರಕಾಲ = ಬ್ರಹ್ಮನ
ಆಯಸ್ಸು= ಬ್ರಹ್ಮನ ನೂರು ವರ್ಷಗಳು=ಮಹಾಪ್ರಳಯ ಕಾಲ= ೩೧,೧೦೪ ಸಾವಿರ ಕೋಟಿ ಮಾನವ ವರ್ಷಗಳು. ಇದು ಭಗವಂತನಿಗೆ ಆತನ ಕಣ್ಣು ಮಿಟುಕಿಸುವ ಸಮಯ!)
ದೃಷ್ಟ್ವಾ ಸ ಚೇತನಗಣಾನ್ ಜಠರೇ ಶಯಾನಾನಾನನ್ದಮಾತ್ರವಪುಷಃ
ಸೃತಿವಿಪ್ರಮುಕ್ತಾನ್ ।
ದ್ಧ್ಯಾನಂ ಗತಾನ್ತ್ಸೃತಿಗತಾಂಶ್ಚ ಸುಷುಪ್ತಿಸಂಸ್ಥಾನ್
ಬ್ರಹ್ಮಾದಿಕಾನ್ ಕಲಿಪರಾನ್ ಮನುಜಾಂಸ್ತಥೈಕ್ಷತ್ ॥೧.೦೪॥
ಆ ನಾರಾಯಣನು ತನ್ನ ಹೊಟ್ಟೆಯಲ್ಲಿ ಇರುವ, ಆನಂದವೇ ಮೈವೆತ್ತು
ಬಂದಿರುವ ಮುಕ್ತರನ್ನೂ, ಆನಂದವೇ ಮೈವೆತ್ತು ಬಂದ ಸಂಸಾರದಿಂದ ಮುಕ್ತರಾದವರನ್ನೂ, ಧ್ಯಾನದಲ್ಲಿ
ಇರುವವರನ್ನೂ, ಸಂಸಾರದಲ್ಲಿದ್ದು ಹೀಗಿರುವವರನ್ನೂ, ಸುಷುಪ್ತಿಯಲ್ಲಿಯೇ ಇರುವ, ಬ್ರಹ್ಮನಿಂದ ಆರಂಭಿಸಿ ಕಲಿಯ ತನಕ ಇರುವವರನ್ನೂ
ಹಾಗೂ ಮಧ್ಯದಲ್ಲಿರುವವರನ್ನೂ ಕಂಡು (ತನ್ನ ಅಧೀನದಲ್ಲಿರುವ ಎಲ್ಲಾ
ಯೋಗ್ಯತೆಯ ಜೀವರನ್ನು ಕಂಡು) ಈ ರೀತಿ ಯೋಚನೆ ಮಾಡಿದನು:
ಸ್ರಕ್ಷ್ಯೇ ಹಿ ಚೇತನಗಣಾನ್ತ್ಸುಖದುಃಖಮಧ್ಯಸಮ್ಪ್ರಾಪ್ತಯೇ
ತನುಭೃತಾಂ ವಿಹೃತಂ ಮಮೇಚ್ಛನ್ ।
ಸೋsಯಂ ವಿಹಾರ ಇಹ ಮೇ ತನುಭೃತ್ಸ್ವಭಾವಸಮ್ಭೂತಯೇ
ಭವತಿ ಭೂತಿಕೃದೇವ ಭೂತ್ಯಾಃ ॥೧.೦೫॥
ಬಹಳ ತರಹದ ಜೀವಗಣಗಳಿಗೆ
ಸುಖ, ದುಃಖ ಹಾಗೂ ಸುಖದುಃಖಗಳೆರಡರ
ಪ್ರಾಪ್ತಿಗಾಗಿ ನನ್ನ ಆಟವನ್ನು
ಬಯಸುವವನಾಗಿ ಸೃಷ್ಟಿ ಮಾಡುತ್ತೇನೆ. ಈ ಸೃಷ್ಟಿ, ಬ್ರಹ್ಮಾಂಡದಲ್ಲಿ ನನಗೊಂದು ಆಟ. ಇದು
ಜೀವರ ಸ್ವಭಾವದ ವಿಶಿಷ್ಟವಾದ ಆವಿಷ್ಕಾರಕ್ಕೂ ಕೂಡಾ
ಸಹಾಯಕವಾಗಿದೆ. ಇದು ಲಕ್ಷ್ಮಿಗೂ ಆನಂದವನ್ನು ಉಂಟುಮಾಡುವುದೇ ಆಗಿದೆ.
[ಸೃಷ್ಟಿ ಎನ್ನುವುದು ಭಗವಂತನಿಗೊಂದು ಕ್ರೀಡೆ. ಆನಂದದಿಂದಾಡುವ
ಈ ಆಟಕ್ಕೆ ಆನಂದವೇ ಪ್ರಯೋಜನ. ತೈತ್ತಿರೀಯ ಉಪನಿಷತ್ತಿನ ಈ ಮಾತು ಇದಕ್ಕೆ ಪೂರಕವಾಗಿದೆ: ‘ಕೋ ಹ್ಯೇವಾನ್ಯಾತ್ ಕಃ ಪ್ರಾಣ್ಯಾತ್, ಯದೇಷ ಆಕಾಶ ಆನಂದೋ ನ ಸ್ಯಾತ್’. ಆದ್ದರಿಂದ ಆನಂದದಿಂದ ಆಡುವ ಈ ಆಟದಿಂದ ಭಗವಂತನಿಗೆ ಇತರ ಯಾವುದೇ ಪ್ರಯೋಜನವಿಲ್ಲ. ಆಟವೇ ಪ್ರಯೋಜನ. ಆದರೆ
ಸೃಷ್ಟಿಯಿಂದ ಜೀವರಿಗೆ ಪ್ರಯೋಜನವಿದೆ. ಸೃಷ್ಟಿಯಿಂದಾಗಿ ಸಾತ್ವಿಕರು ಸುಖವನ್ನೂ, ತಾಮಸರು
ದುಃಖವನ್ನೂ , ರಾಜಸರು ಸುಖ ಹಾಗೂ ದುಃಖ ಇವೆರಡನ್ನೂ ಹೊಂದುತ್ತಾರೆ. ಈ ಸೃಷ್ಟಿ
ದೇವರು ಮತ್ತು ಬ್ರಹ್ಮಾದಿ ಜೀವರ ಮಧ್ಯೆ ಇರುವ ಶ್ರೀಲಕ್ಷ್ಮಿಗೂ ಕೂಡಾ ಆನಂದವನ್ನು
ನೀಡುವಂತಹದ್ದಾಗಿದೆ. ಅದಕ್ಕಾಗಿ
ಭಗವಂತ ಸೃಷ್ಟಿ ಮಾಡುತ್ತಾನೆ]
ಇತ್ಥಂ ವಿಚಿಂತ್ಯ ಪರಮಃ ಸ ತು ವಾಸುದೇವನಾಮಾ ಬಭೂವ
ನಿಜಮುಕ್ತಿಪದಪ್ರದಾತಾ ।
ತಸ್ಯಾsಜ್ಞಯೈವ ನಿಯತಾsಥ ರಮಾsಪಿ ರೂಪಂ ಬಭ್ರೇ ದ್ವಿತೀಯಮಪಿ ಯತ್ ಪ್ರವದಂತಿ ಮಾಯಾಮ್ ॥೧.೦೬॥
ಈ ರೀತಿಯಾಗಿ ಉತ್ಕೃಷ್ಟನಾದ ನಾರಾಯಣನು ಚಿಂತಿಸಿ, ತನ್ನವರಿಗೆ
ಮುಕ್ತಿಯ ಪದವಿಯನ್ನು ಕೊಡುವ ವಾಸುದೇವ ಎನ್ನುವ ಹೆಸರಿನವನಾದನು. ಅವನ ಆಜ್ಞೆಯಿಂದ ಪ್ರವೃತ್ತಳಾದ ಲಕ್ಷ್ಮೀದೇವಿಯು ಯಾವ
ರೂಪವನ್ನು ‘ಮಾಯಾ’ ಎನ್ನುತ್ತಾರೋ, ಅಂತಹ ಎರಡನೆಯ ರೂಪವನ್ನು ಧರಿಸಿದಳು. [ಅಂದರೆ:
ಪುರುಷ-ಪ್ರಕೃತಿ ಇದ್ದವರು ವಾಸುದೇವ-ಮಾಯಾ ಎನ್ನುವ ಎರಡನೇ ರೂಪವನ್ನು ಧರಿಸಿದರು]
ಸಙ್ಕರ್ಷಣಶ್ಚ ಸ ಬಭೂವ ಪುನಃ ಸುನಿತ್ಯಃ
ಸಂಹಾರಕಾರಣವಪುಸ್ತದನುಜ್ಞಯೈವ ।
ದೇವೀ ಜಯೇತ್ಯನು ಬಭೂವ ಸ ಸೃಷ್ಟಿಹೇತೋಃ
ಪ್ರದ್ಯುಮ್ನತಾಮುಪಗತಃ ಕೃತಿತಾಂ ಚ ದೇವೀ ॥೧.೦೭॥
ಯಾವಾಗಲೂ ಇರುವ ನಾರಾಯಣನು ಸಂಸಾರಕ್ಕೆ ಕಾರಣವಾಗಿರುವ
ದೇಹವನ್ನು ಧರಿಸಿ ಸಂಕರ್ಷಣ ಎನ್ನುವ ಹೆಸರಿನವನಾದನು. [ಈ ಸಂಕರ್ಷಣ ರೂಪಿ ಭಗವಂತನೇ ಪ್ರಳಯವನ್ನು
ಮಾಡುವುದು]. ಅವನ ಅನುಜ್ಞೆಯಿಂದ ಲಕ್ಷ್ಮೀದೇವಿಯು ‘ಜಯಾ’ ಎನ್ನುವವಳಾಗಿ ಮತ್ತೆ ಹುಟ್ಟಿದಳು.
ನಾರಾಯಣನು ಜಗತ್ತಿನ ಸೃಷ್ಟಿಗಾಗಿ
ಪ್ರದ್ಯುಮ್ನನಾದ. ಲಕ್ಷ್ಮೀ ದೇವಿಯು ‘ಕೃತಿ’ ಎನ್ನುವ ಹೆಸರುಳ್ಳವಳಾದಳು. [ಸಂಕರ್ಷಣ ಎನ್ನುವ ಪರಮಾತ್ಮನ
ರೂಪಕ್ಕೆ ನಿಯತವಾಗಿರುವ ಪತ್ನಿ ರೂಪವನ್ನು ‘ಜಯಾ’ ಎಂದು ಕರೆಯುತ್ತಾರೆ. ಪ್ರದ್ಯುಮ್ನ ಎನ್ನುವ ಹೆಸರಿನ ಪರಮಾತ್ಮನ ರೂಪಕ್ಕೆ ನಿಯತವಾಗಿರುವ ರಮಾ
ರೂಪವನ್ನ ‘ಕೃತಿ’ ಎಂದು ಕರೆಯುತ್ತಾರೆ].
ಸ್ಥಿತ್ಯೈ ಪುನಃ ಸ ಭಗವಾನನಿರುದ್ಧನಾಮಾ
ದೇವೀ ಚ ಶಾನ್ತಿರಭವಚ್ಛರದಾಂ ಸಹಸ್ರಮ್ ।
ಸ್ಥಿತ್ವಾ ಸ್ವಮೂರ್ತ್ತಿಭಿರಮೂಭಿರಚಿನ್ತ್ಯಶಕ್ತಿಃ
ಪ್ರದ್ಯುಮ್ನರೂಪಕ ಇಮಾಂಶ್ಚರಮಾತ್ಮನೇsದಾತ್ ॥೧.೦೮॥
ಆ ನಾರಾಯಣನು ಈ ಜಗತ್ತಿನ ಪಾಲನೆಗಾಗಿ ಅನಿರುದ್ಧ ಎಂಬ
ಹೆಸರಿನವನಾದನು. ಲಕ್ಷ್ಮೀದೇವಿಯು ‘ಶಾಂತಿ’ ಎನ್ನುವ ಹೆಸರುಳ್ಳವಳಾದಳು. [ವಾಸುದೇವ-ಮಾಯಾ;
ಸಂಕರ್ಷಣ-ಜಯಾ; ಪ್ರದ್ಯುಮ್ನ-ಕೃತಿ ಮತ್ತು
ಅನಿರುದ್ಧ-ಶಾಂತಿ ಇವು ಲಕ್ಷ್ಮೀ ನಾರಾಯಣರ ನಾಲ್ಕು ರೂಪಗಳು. ಇದನ್ನು ಚತುರ್ವ್ಯೂಹಃ
ಎಂದು ವಿಷ್ಣುಸಹಸ್ರನಾಮದಲ್ಲಿ ಕರೆದಿದ್ದಾರೆ. ‘ಚತುರ್ವ್ಯೂಹಾತ್ಮಕ ಸೃಷ್ಟಿ’ ಎಂದು
ಪಂಚರಾತ್ರದಲ್ಲಿ ಹೇಳಿದ್ದಾರೆ].
ಎಣೆಯಿರದ ಶಕ್ತಿ ಇರುವ ನಾರಾಯಣನು ಈ ತನ್ನ ಮೂರ್ತಿಗಳಿಂದ
ಸಾವಿರ ವರ್ಷಗಳ ಕಾಲ ಇದ್ದು, ತದನಂತರ ಪ್ರದ್ಯುಮ್ನರೂಪಿಯಾದ ನಾರಾಯಣನು ತನ್ನ ಹೊಟ್ಟೆಯೊಳಗಡೆ
ಇರುವ ಈ ಎಲ್ಲಾ ಜೀವರನ್ನು ಅನಿರುದ್ಧನಿಗಾಗಿ ಕೊಟ್ಟನು.
ನಿರ್ದ್ದೇಹಕಾನ್ತ್ಸ ಭಗವಾನನಿರುದ್ಧನಾಮಾ ಜೀವಾನ್ತ್ಸ್ವಕರ್ಮ್ಮಸಹಿತಾನುದರೇ ನಿವೇಶ್ಯ ।
ಚಕ್ರೇsಥ ದೇಹಸಹಿತಾನ್
ಕ್ರಮಶಃ ಸ್ವಯಮ್ಭುಪ್ರಾಣಾತ್ಮಶೇಷಗರುಡೇಶಮುಖಾನ್ ಸಮಗ್ರಾನ್ ॥೧.೦೯॥
ಈ ಅನಿರುದ್ಧ ಎಂಬ ಹೆಸರಿನ ನಾರಾಯಣನು ಅನಾದಿಕಾಲದಿಂದ
ಕರ್ಮದಿಂದ ಕೂಡಿರುವ, ದೇಹವಿಲ್ಲದ ಜೀವರನ್ನು ತನ್ನ ಹೊಟ್ಟೆಯೊಳಗೆ ಇಟ್ಟುಕೊಂಡು,
ಇವರೆಲ್ಲರನ್ನೂ ಕ್ರಮವಾಗಿ: ಬ್ರಹ್ಮ, ಪ್ರಾಣ,
ಶೇಷ-ಗರುಡ-ರುದ್ರ, ಇವೇ ಮೊದಲಾದ ಯೋಗ್ಯತೆ ಇರುವ ಜೀವರನ್ನು ದೇಹದಿಂದ ಸಹಿತರನ್ನಾಗಿ ಮಾಡಿದನು.
[ಹೀಗೆ ಮೊದಲ ಹಂತದ ಸೂಕ್ಷ್ಮವಾದ ದೇಹದ ಸೃಷ್ಟಿಯಾಯಿತು. ಇನ್ನೂ
ಸ್ಥೂಲ ದೇಹದ ಸೃಷ್ಟಿ ಆಗಿಲ್ಲ].
ಪಞ್ಚಾತ್ಮಕಃ ಸ ಭಗವಾನ್ ದ್ವಿಷಡಾತ್ಮಕೋsಭೂತ್ ಪಞ್ಚದ್ವಯೀ ಶತಸಹಸ್ರಪರೋsಮಿತಶ್ಚ ।
ಏಕಃ ಸಮೋsಪ್ಯಖಿಲದೋಷಸಮುಜ್ಝಿತೋsಪಿ ಸರ್ವತ್ರ ಪೂರ್ಣ್ಣಗುಣಕೋsಪಿ ಬಹೂಪಮೋsಭೂತ್ ॥೧೦ ॥
ನಾರಾಯಣ, ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ,
ಎನ್ನುವ ಐದು ರೂಪವುಳ್ಳ ಪರಮಾತ್ಮನು ಕೇಶವಾದಿ
ಹನ್ನೆರಡು ರೂಪವುಳ್ಳವನಾದನು. ಹತ್ತು ರೂಪವುಳ್ಳವನಾದನು.
ವಿಶ್ವ ಮೊದಲಾದ ಸಾವಿರಾರು ರೂಪವುಳ್ಳವನಾದನು. ಆದರೆ ವಸ್ತುತಃ ಅವನು ಒಬ್ಬನೆ(ಏಕಃ). ತನ್ನ ಎಲ್ಲಾ
ರೂಪಗಳಲ್ಲಿಯೂ ಸಮಾನವಾದ ಗುಣ, ಸಮಾನವಾದ ಪ್ರಜ್ಞೆ ಇರುವವನು. ಯಾವ ದೋಷವೂ ಇಲ್ಲದೇ ಹೋದರೂ, ಪೂರ್ಣಗುಣವುಳ್ಳವನಾದರೂ, ಎಲ್ಲೆಡೆ ಬಹಳ ರೂಪವನ್ನು ಆ
ಭಗವಂತ ತೆಗೆದುಕೊಂಡನು.
ನಿರ್ದ್ದೋಷಪೂರ್ಣ್ಣಗುಣವಿಗ್ರಹ ಆತ್ಮತನ್ತ್ರೋ
ನಿಶ್ಚೇತನಾತ್ಮಕಶರೀರಗುಣೈಶ್ಚ ಹೀನಃ ।
ಆನನ್ದಮಾತ್ರಕರಪಾದಮುಖೋದರಾದಿಃ ಸರ್ವತ್ರ ಚ
ಸ್ವಗತಭೇದವಿವರ್ಜ್ಜಿತಾತ್ಮಾ ॥೧.೧೧॥
ದೋಷವೇ ಇಲ್ಲದ, ಗುಣಗಳೇ
ಮೈವೆತ್ತು ಬಂದಂತಿರುವವನು.
ಸ್ವತಂತ್ರನು. ಜಡವಾಗಿರುವ ಶರೀರಗುಣಹೀನನಾದವನು. [ಅವನಿಗೆ ಜಡ ಶರೀರವಿಲ್ಲ. ಅದರಿಂದಾಗಿ
ಆತನಿಗೆ ಜಡ ಶರೀರದ ದೌರ್ಬಲ್ಯವಿಲ್ಲ]. ಆನಂದವೇ ಅವನ
ಕೈ, ಕಾಲು, ಮುಖ, ಹೊಟ್ಟೆ, ಮೊದಲಾದವುಗಳು. ಅವತಾರ ರೂಪದಲ್ಲೇ ಆಗಿರಬಹುದು, ಮೂಲ ರೂಪದಲ್ಲೇ ಆಗಿರಬಹುದು, ಅವನಲ್ಲಿ
ಭೇದವೇ ಇಲ್ಲ.
ಕಾಲಾಚ್ಚ ದೇಶಗುಣತೋsಸ್ಯ ನಚಾSದಿರನ್ತೋ ವೃದ್ಧಿಕ್ಷಯೌ ನತು ಪರಸ್ಯ ಸದಾತನಸ್ಯ ।
ನೈತಾದೃಶಃ ಕ್ವಚ ಬಭೂವ ನಚೈವ ಭಾವ್ಯೋ ನಾಸ್ತ್ಯುತ್ತರಃ ಕಿಮು
ಪರಾತ್ ಪರಮಸ್ಯ ವಿಷ್ಣೋಃ ॥೧.೧೨॥
ಕಾಲದಿಂದ ಇವನಿಗೆ ಆದಿ ಇಲ್ಲ. ಅವನು ದೇಶದಿಂದಲೂ
ಗುಣದಿಂದಲೂ ಕೊನೆ ಇಲ್ಲದವನು. [ಎಲ್ಲೆಡೆ ವ್ಯಾಪ್ತನಾಗಿದ್ದಾನೆ .
ಎಲ್ಲಾ ಕಾಲದಲ್ಲೂ ಇದ್ದಾನೆ. ಎಲ್ಲಾ ಗುಣಗಳೂ ಅವನಿಗಿದೆ]
ಉತ್ಕೃಷ್ಟನಾದ, ಯಾವಾಗಲೂ ಇರುವ ನಾರಾಯಣನಿಗೆ ಬೆಳವಣಿಗೆಯೂ ಇಲ್ಲ. ಕುಗ್ಗುವಿಕೆಯೂ ಇಲ್ಲ. ಈತನಿಗೆ
ಸಮನಾದವನು ಹಿಂದೆ ಆಗಲಿಲ್ಲ, ಮುಂದಾಗುವುದಿಲ್ಲ, ಮುಂದೆಯೂ ಇರುವುದಿಲ್ಲ. [ಇದು ಪರಮಾತ್ಮನ
ಅಸಾಧಾರಣವಾದ ಮಹಿಮೆ].
ಸರ್ವಜ್ಞ ಈಶ್ವರತಮಃ ಸ ಚ ಸರ್ವಶಕ್ತಿಃ
ಪೂರ್ಣ್ಣಾವ್ಯಯಾತ್ಮಬಲಚಿತ್ಸುಖವೀರ್ಯ್ಯಸಾರಃ ।
ಯಸ್ಯಾsಜ್ಞಯಾ
ರಹಿತಮಿನ್ದಿರಯಾ ಸಮೇತಂ ಬ್ರಹ್ಮೇಶಪೂರ್ವಕಮಿದಂ ನತು ಕಸ್ಯ ಚೇಶಮ್ ॥೧.೧೩॥
ಎಲ್ಲವನ್ನೂ ಬಲ್ಲವನು, ಸರ್ವ ಸಮರ್ಥನು, ಎಲ್ಲವನ್ನೂ
ನಡೆಸಬಲ್ಲವನು. ತುಂಬಿರುವ, ನಾಶವಾಗದ,
ಆತ್ಮಬಲವಿರುವವನು. ಜ್ಞಾನಾತ್ಮಕನು, ಸುಖಾತ್ಮಕನು, ವೀರ್ಯಾತ್ಮಕನಾದವನು . ಪರಮಾತ್ಮನ ಆಣತಿ
ರಹಿತವಾದಲ್ಲಿ ಲಕ್ಷ್ಮಿಯನ್ನು ಒಳಗೊಂಡಿರುವ, ಬ್ರಹ್ಮ-ರುದ್ರ ಮೊದಲಾದವರನ್ನು ಒಳಗೊಂಡ
ಈ ಬ್ರಹ್ಮಾಂಡವು ಯಾವುದಕ್ಕೂ ಕೂಡಾ ಸಮರ್ಥವಾಗುವುದಿಲ್ಲ. [ಇದು ಪರಮಾತ್ಮನ ವಿಶಿಷ್ಟವಾದ ಗುಣ.
ಇಂತಹ ಪರಮಾತ್ಮನಿಂದ ಸೃಷ್ಟಿ ನಿರ್ಮಾಣ ನಡೆಯುತ್ತಿದೆ. ಆದ್ದರಿಂದ ಗುಣಪೂರ್ಣನಾದ ಭಗವಂತನ ಸೃಷ್ಟಿಯಲ್ಲಿ ಲೋಪ-ದೋಷಗಳಿವೆ
ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಲೋಪ-ದೋಷಗಳೇನೇ ಇದ್ದರೂ ಅದು ಜೀವರದ್ದೇ ಹೊರತು ಭಗವಂತನಿಂದಲ್ಲ. ]
ಆಭಾಸಕೋsಸ್ಯ ಪವನಃ ಪವನಸ್ಯ
ರುದ್ರಃ ಶೇಷಾತ್ಮಕೋ ಗರುಡ ಏವ ಚ ಶಕ್ರಕಾಮೌ ।
ವೀನ್ದ್ರೇಶಯೋಸ್ತದಪರೇ ತ್ವನಯೋಶ್ಚ ತೇಷಾಮೃಷ್ಯಾದಯಃ ಕ್ರಮಶ
ಊನಗುಣಾಃ ಶತಾಂಶಾಃ ॥೧.೧೪॥
ಈ ನಾರಾಯಣನಿಗೆ ಮುಖ್ಯಪ್ರಾಣನು ಪ್ರತಿಬಿಂಬನು^. ಮುಖ್ಯಪ್ರಾಣನಿಗೆ ಪ್ರತಿಬಿಂಬ
ಶೇಷಾತ್ಮಕ ರುದ್ರ ಮತ್ತು ಗರುಡ. ಗರುಡ ಮತ್ತು ರುದ್ರ ಇವರಿಬ್ಬರಿಗೂ ದೇವೇಂದ್ರ ಮತ್ತು ಕಾಮ
ಪ್ರತಿಬಿಂಬ. ಉಳಿದ ಎಲ್ಲಾ ದೇವತೆಗಳೂ ಇಂದ್ರ ಹಾಗೂ ಕಾಮರ ಪ್ರತಿಬಿಂಬ.
ತದನಂತರ ಋಷಿಗಳೂ ಮೊದಲಾದವರೂ ಹುಟ್ಟಿದರು. ಕ್ರಮೇಣ ನೂರಾರು ಪಟ್ಟು ಗುಣಗಳಿಂದ ಕಡಿಮೆಯಾದವರೇ
ಇದ್ದಾರೆ. ಈ ತಾರತಮ್ಯ (hierarchy)ಕ್ಕೆ ಬಿಂಬ-ಪ್ರತಿಬಿಂಬ ಭಾವವೇ
ಕಾರಣ.
[^ಬಿಂಬ-ಪ್ರತಿಬಿಂಬ ಭಾವ ಅಂದರೆ ಸದೃಶ ಎಂದರ್ಥ. ಜೀವನು ಪರಮಾತ್ಮನ ಪ್ರತಿಬಿಂಬ ಎಂದರೆ ಪರಮಾತ್ಮನ
ಕಿಂಚಿತ್ ಗುಣಗಳಿಂದ ಸದೃಶ ಎಂದರ್ಥ. ಆಕಾರ,
ಗುಣ, ಎಲ್ಲವೂ ಯೋಗ್ಯತಾನುಸಾರ ಇಳಿದು ಬರುತ್ತದೆ. ಸದೃಶ ಎಂದಾಗ ಗರುಡ-ಶೇಷರ ರೂಪಕ್ಕೆ ಸಂಬಂಧಿಸಿದಂತೆ ಪ್ರಶ್ನೆ
ಎದುರಾಗುತ್ತದೆ. ಗರುಡ ಪಕ್ಷಿರೂಪನಾದರೆ , ಶೇಷ
ಹಾವು. ಹೀಗಿರುವಾಗ ಇವರ ಪ್ರತಿಬಿಂಬರು(ಇಂದ್ರ-ಕಾಮ) ಪುರುಷಾಕಾರರು ಹೇಗೆ? ಉತ್ತರ ಸರಳ!
ಗರುಡ-ಶೇಷರಿಗೆ ಅನೇಕ ರೂಪಗಳಿದ್ದು, ಅದರಲ್ಲಿ ಒಂದು ರೂಪ ಪುರುಷಾಕಾರ. ಈ ರೂಪವೇ ತಾರತಮ್ಯದಲ್ಲಿ
ಇಳಿದು ಬಂದಿದೆ ಎಂದು ತಿಳಿಯಬೇಕು].
ಆಭಾಸಕಾ ತ್ವಥ ರಮಾsಸ್ಯ ಮರುತ್ಸ್ವರೂಪಾಚ್ಛ್ರೇಷ್ಠಾsಪ್ಯಜಾತ್ ತದನು ಗೀಃ ಶಿವತೋ ವರಿಷ್ಠಾ ।
ತಸ್ಯಾ ಉಮಾ ವಿಪತಿನೀ ಚ ಗಿರಸ್ತಯೋಸ್ತು ಶಚ್ಯಾದಿಕಾಃ ಕ್ರಮಶ
ಏವ ಯಥಾ ಪುಮಾಂಸಃ ॥೧.೧೫॥
ಪರಮಾತ್ಮನ
ಸ್ತ್ರೀರೂಪದ ಪ್ರತಿಬಿಂಬವು ಲಕ್ಷ್ಮೀ ದೇವಿಯು. ಈ ಲಕ್ಷ್ಮೀ ದೇವಿಯು ಬ್ರಹ್ಮ (ಮತ್ತು ಮುಖ್ಯಪ್ರಾಣ) ದೇವರಿಗಿಂತಲೂ
ಮಿಗಿಲಾದವಳು. ಅವಳಾದ ಮೇಲೆ ಶಿವನಿಗಿಂತಲೂ
ಮಿಗಿಲಾಗಿರುವ ಸರಸ್ವತಿ (ಮತ್ತು ಭಾರತೀ)ದೇವಿ
ಶ್ರೀಲಕ್ಷ್ಮಿಯ ಪ್ರತಿಬಿಂಬ. ಪಾರ್ವತೀದೇವಿಯು ಸರಸ್ವತಿಯ ಪ್ರತಿಬಿಂಬಳು. ಹಾಗೆಯೇ ಸುಪರ್ಣಿ
ಮತ್ತು ವಾರುಣಿಯೂ ಕೂಡಾ. ಸುಪರ್ಣಿ-ವಾರುಣಿ-ಪಾರ್ವತಿಯರಿಗೆ ಶಚಿ ಮೊದಲಾದವರೇ
ಪ್ರತಿಬಿಂಬರಾಗಿದ್ದಾರೆ. [ಅದರಿಂದಾಗಿ ಅಲ್ಲಿಯೂ ಸೌಂದರ್ಯ-ಗುಣ-ಲಾವಣ್ಯಗಳಲ್ಲಿ ವ್ಯತ್ಯಾಸವಿದೆ].
ಹೀಗೆ ಯಾವ ರೀತಿ ಪುರುಷ ದೇವತೆಗಳಲ್ಲಿ ತಾರತಮ್ಯಾದಿಗಳಿವೆಯೋ ಹಾಗೇ ಸ್ತ್ರೀ ದೇವತೆಗಳಲ್ಲೂ ಕೂಡಾ ತಾರತಮ್ಯವಿದೆ.
No comments:
Post a Comment