ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, November 19, 2017

Mahabharata Tatparya Nirnaya Kannada 1.26-1.36

ಆಭಾಸಕಾಭಾಸಪರಾವಭಾಸರೂಪಾಣ್ಯಜಸ್ರಾಣಿ ಚ ಚೇತನಾನಾಮ್ ।

ವಿಷ್ಣೋಃ ಸದೈವಾತಿ ವಶಾತ್ ಕದಾsಪಿ  ಗಚ್ಛನ್ತಿ ಕೇಶಾದಿಗಣಾ ನ ಮುಕ್ತೌ ೧.೨೬

 

ಯಸ್ಮಿನ್ ಪರೇsನ್ಯೇsಪ್ಯಜಜೀವಕೋಶಾ ನಾಹಂ ಪರಾಯುರ್ನ್ನಮರೀಚಿಮುಖ್ಯಾಃ

ಜಾನನ್ತಿ ಯದ್ ಗುಣಗಣಾನ್ ನ ರಮಾದಯೋsಪಿ ನಿತ್ಯಸ್ವತನ್ತ್ರ ಉತ ಕೋsಸ್ತಿ ತದನ್ಯ ಈಶಃ ೧.೨೭

                            

ಈ ಭೂಮಿಯಲ್ಲಿರುವ ಗುಣ, ರೂಪ,  ಸೌಭಾಗ್ಯ, ಆನಂದ,  ಸೌಂದರ್ಯ, ಜ್ಞಾನ,  ಹೀಗೆ ಸಮಸ್ತ  ಶ್ರೇಷ್ಠ ಗುಣಗಳೆಲ್ಲವೂ ಮೂಲತಃ ಪರಮಾತ್ಮನಿಂದ ಬಂದಿರುವುದು. ತಾರತಮ್ಯದಲ್ಲಿ ನಮಗಿಂತ ಮೇಲಿನವರು ಹೆಚ್ಚು  ಗುಣಗಳನ್ನು ಹೊಂದಿರುತ್ತಾರೆ.  ಅವರಿಗಿಂತ ಹಿರಿಯರು ಅವರಿಗಿಂತ ಇನ್ನೂ ಹೆಚ್ಚಿನ ಗುಣಗಳನ್ನು ಹೊಂದಿರುತ್ತಾರೆ. ಹೀಗೆ  ಎಲ್ಲಾ ಗುಣಗಳ ಮೂಲವನ್ನು ಹುಡುಕಿಕೊಂಡು ಹೋದರೆ ಇದೆಲ್ಲವೂ ಪರಮಾತ್ಮನಿಂದ ಬಂದಿದ್ದು ಎನ್ನುವುದು ತಿಳಿಯುತ್ತದೆ. 

 ‘ಆಭಾಸಕ’  ಅಂದರೆ ಪರಮಾತ್ಮನ ಪ್ರತಿಬಿಂಬ ,  ಅವನ ಪ್ರತಿಬಿಂಬ, ಅವನ ಪ್ರತಿಬಿಂಬದ ಪ್ರತಿಬಿಂಬ,  ಅವನ ಪ್ರತಿಬಿಂಬದ ಪ್ರತಿಬಿಂಬ ಲೋಕದಲ್ಲಿ ನಮಗೆ  ಕಾಣುತ್ತಿರುವುದು. ಅದು ಈ ರೀತಿಯಾಗಿದೆ:   ಪರಮಾತ್ಮನ ಗುಣಗಳ ಪ್ರತಿಬಿಂಬ ಬ್ರಹ್ಮದೇವರದ್ದು. ಬ್ರಹ್ಮದೇವರ ಪ್ರತಿಬಿಂಬ ರುದ್ರದೇವರದ್ದು, ರುದ್ರದೇವರ ಗುಣಾದಿಗಳ ಪ್ರತಿಬಿಂಬ ಇಂದ್ರ-ಕಾಮರು. ಇಂದ್ರ ಕಾಮರ-ಪ್ರತಿಬಿಂಬ ದೇವತೆಗಳು. ದೇವತೆಗಳ ಪ್ರತಿಬಿಂಬ ಗಂಧರ್ವರೂ, ಋಷಿಗಳೂ ಮತ್ತು ಇತರರು. ಅವರೆಲ್ಲರ ಪ್ರತಿಬಿಂಬತ್ವವನ್ನು ಹೊಂದಿರುವವರು ರಾಜರು. ರಾಜರ ಪ್ರತಿಬಿಂಬವನ್ನು ಹೊಂದಿರುವುದು ಉಳಿದ ಮನುಷ್ಯರು. [ಈ  ವಲಯದಲ್ಲೇ  ನಾವೆಲ್ಲಾ ಬರುತ್ತೇವೆ]. ಹೀಗಾಗಿ, ಗುಣಗಳ ನಿದಾನ(ಮೂಲ) ದೇವರು. ನಿರಂತರವಾದ ಜೀವ ಪ್ರವಾಹ ಏನಿದೆ, ಅದು ನಾರಾಯಣನ ವಶದಲ್ಲಿಯೇ ಇರುವುದರಿಂದ,  ಯಾವಾಗಲೂ, ಮುಕ್ತಿಯಲ್ಲೂ ಕೂಡಾ ಯಾರೂ ಪರಮಾತ್ಮನನ್ನು ಮೀರಿ ಹೋಗುವುದಿಲ್ಲ. ಇದನ್ನು ಭಾಗವತದಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು: 

‘ವಯಂ ನ  ತಾತ ಪ್ರಭವಾಮ ಭೂಮ್ನೋ  ಭವಂತಿ  ಕಾಲೇ ನ ಭವಂತಿ ಹೀದೃಶಾಃ   ಯಸ್ಮಿನ್  ಪರೇsನ್ಯೇsಪ್ಯಜಜೀವಕೋಶಾಃ ಸಹಸ್ರಶೋ ಯತ್ರ ವಯಂ ಭ್ರಮಾಮಃ’ (ಭಾಗವತ ೯.೬.೪೪) ಅಂಬರೀಷನ ಪ್ರಸಂಗದಲ್ಲಿ ದುರ್ವಾಸ ಮುನಿಗಳು  ಪರಮಾತ್ಮನ ಸುದರ್ಶನಕ್ಕೆ ಹೆದರಿ ಓಡಿ ರುದ್ರದೇವರ ಬಳಿ ಬರುತ್ತಾರೆ. ಆಗ ರುದ್ರ ದೇವರು ದುರ್ವಾಸರಿಗೆ ಒಂದು ಮಾತನ್ನು ಹೇಳುತ್ತಾರೆ. ಅದನ್ನೇ ಇಲ್ಲಿ  ಆಚಾರ್ಯರು ಉಲ್ಲೇಖ  ಮಾಡಿದ್ದಾರೆ: ಜಾನನ್ತಿ ಯದ್ ಗುಣಗಣಾನ್ ನ ರಮಾದಯೋsಪಿ ನಿತ್ಯಸ್ವತನ್ತ್ರ ಉತ ಕೋsಸ್ತಿ ತದನ್ಯ ಈಶಃ “ನನಗಾಗಲೀ, ಬ್ರಹ್ಮದೇವರಿಗಾಗಲೀ, ಮರೀಚಿ ಮೊದಲಾದವರಿಗಾಗಲೀ  ಭಗವಂತನ ಪೂರ್ಣಗುಣವೇನೆನ್ನುವುದು  ತಿಳಿದಿಲ್ಲ . ಅಷ್ಟೇ ಏಕೆ,  ಲಕ್ಷ್ಮೀ ದೇವಿ ಮೊದಲಾದವರಿಗೂ ಕೂಡಾ ತಿಳಿದಿಲ್ಲ” ಎಂದು.  ಪರಮಾತ್ಮ ಗುಣಗಣಗಳಿಂದ ಮಿಗಿಲು. ಇವನಿಗೆ ಯಾರೂ ಸಾಟಿ ಇಲ್ಲ. ಅದರಿಂದಾಗಿಯೇ ಇವನು ಯಾವಾಗಲೂ ಉತ್ತಮನಾಗಿರುತ್ತಾನೆ ಎನ್ನುವ ವಿವರಣೆಯನ್ನು ವಾಮನ ಪುರಾಣ ಮತ್ತು ಪಾದ್ಮಾಪುರಾಣದ ಉತ್ತರಖಂಡದಲ್ಲೂ ನಾವು ಕಾಣಬಹುದು.

[ಲೋಕದಲ್ಲಿ ಗುಣ  ಪಲ್ಲಟ ಆಗುತ್ತಿರುತ್ತದೆ.  ಒಬ್ಬ ಯುವಕ ಇಂದು ಬಲಶಾಲಿಯಾಗಿರಬಹುದು.  ಆದರೆ ಆತನಿಗಿಂತ ಚಿಕ್ಕವನಿರುವ ಇನ್ನೊಬ್ಬ  ಹುಡುಗ ಮುಂದೆ ಇವನಿಗಿಂತ ಬಲಶಾಲಿಯಾಗಿ ಬೆಳೆಯುತ್ತಾನೆ  ಮತ್ತು ಇವನು ಮುದುಕನಾಗಿ ಶಕ್ತಿ ಹೀನನಾಗುತ್ತಾನೆ. ಹೀಗೆ ಪ್ರಪಂಚದಲ್ಲಿ ಇಂದು ಶ್ರೇಷ್ಠನೆನಿಸಿಕೊಂಡವನು ಎಂದೆಂದೂ ಶ್ರೇಷ್ಠನಾಗಿರಲಾರ. ಆದರೆ ಪರಮಾತ್ಮನ ವಿಚಾರದಲ್ಲಿ ಈ ರೀತಿ ಆಗುವುದಿಲ್ಲ.  ಅನಾದಿ-ಅನಂತ ಕಾಲದಲ್ಲಿ ಪರಮಾತ್ಮನೇ ಸರ್ವಶ್ರೇಷ್ಠ ಮತ್ತು ಶ್ರೀಲಕ್ಷ್ಮಿಸಮೇತ ಮುಕ್ತರನ್ನೊಳಗೊಂಡು ಸಮಸ್ತ ಜೀವರೂ ಆತನ ಅಧೀನ].

 

 

ನೈವೈಕ ಏವ ಪುರುಷಃ ಪುರುಷೋತ್ತಮೋsಸಾವೇಕಃ ಕುತಃ ಸ ಪುರುಷೋ ಯತ ಏವ ಜಾತ್ಯಾ ।

ಅರ್ತ್ಥಾಚ್ಛ್ರುತೇಶ್ಚ ಗುಣತೋ ನಿಜರೂಪತಶ್ಚ ನಿತ್ಯಾನ್ಯ  ಏವ ಕಥಮಸ್ಮಿ ಸ ಇತ್ಯಪಿ ಸ್ಯಾತ್ ೧.೨೮

 

ಇಲ್ಲಿ ಆಚಾರ್ಯರು ನೇರವಾಗಿ  ಮಹಾಭಾರತವನ್ನೇ  ಉಲ್ಲೇಖಿಸಿದ್ದಾರೆ.  ಇಲ್ಲಿ ಹೇಳುತ್ತಾರೆ: “ನಾರಾಯಣನು ಮತ್ತು ಜೀವರು ಒಂದೇ ಅಲ್ಲ ,  ನಾರಾಯಣನೇ ಪುರುಷರಲ್ಲಿ ಉತ್ತಮನಾಗಿದ್ದಾನೆ” ಎಂದು.  ಆ ಪುರುಷನು ಹೇಗೆ ಒಬ್ಬನೇ ಆಗುತ್ತಾನೆ? ಯಾವ ಕಾರಣದಿಂದ?  ಜಾತಿಯಿಂದಲೋ? ಗುಣದಿಂದಲೋ? ವೇದ ಪ್ರತಿಪಾದ್ಯನಾಗಿರುವುದರಿಂದಲೋ? ತನ್ನ ಸ್ವರೂಪದಿಂದಲೋ?  ಇತ್ಯಾದಿಯಾಗಿ  ಇಲ್ಲಿ  ಪ್ರಶ್ನೆ ಮಾಡಿದ್ದಾರೆ.  “ಇದು ಅಸಾಧ್ಯ.  ಜೀವ ಮತ್ತು ಪರಮಾತ್ಮ ಒಂದೇ ಅಲ್ಲ” ಎಂದಿದ್ದಾರೆ.

ಈ ಮೇಲಿನ ಮಾತು ಅರ್ಥವಾಗಬೇಕಿದ್ದರೆ ನಾವು ಇದನ್ನು ಕಟಾಕ್ಷೀಕರಿಸಿರುವ ಮಹಾಭಾರತದ ಪ್ರಸಂಗವನ್ನು ನೋಡಬೇಕಾಗುತ್ತದೆ. ಮಹಾಭಾರತದ ಶಾಂತಿಪರ್ವದಲ್ಲಿ ಜನಮೇಜಯ ಮತ್ತು ವೈಶಂಪಾಯನರ ನಡುವಿನ ಸಂಭಾಷಣೆಯ ಭಾಗವಿದು. ಬಹವಃ ಪುರುಷಾ ಬ್ರಹ್ಮನ್ನುತಾಹೋ ಏಕ ಏವ ತು ೩೬೦.೧ ಎನ್ನುವ ಜನಮೇಜಯನ ಪ್ರಶ್ನೆಗೆ ವೈಶಂಪಾಯನರು ಕೊಟ್ಟ ಉತ್ತರ ಇಂತಿದೆ:  ನೈತದಿಚ್ಛಂತಿ ಪುರುಷಮೇಕಂ ಕುರುಕುಲೋದ್ವಹ I ಬಹೂನಾಂ ಪುರುಷಾಣಾಂ ಹಿ ಯಥೈಕಾ  ಯೋನಿರುಚ್ಯತೇ।  ತಥಾ ತಂ ಪುರುಷಂ  ವಿಶ್ವಮಾಖ್ಯಾಸ್ಯಾಮಿ  ಗುಣಾಧಿಕಮ್ ೩೬೦.೨- ೩  ಈ ಸಂಭಾಷಣೆಯನ್ನು ಇಲ್ಲಿ ಆಚಾರ್ಯರು ಸಂಗ್ರಹಿಸಿ ನೀಡಿದ್ದಾರೆ.

“ಜೀವರು ಬಹಳ ಜನ ಇದ್ದಾರೋ ಅಥವಾ ಒಬ್ಬನೇ ಜೀವ ಇದ್ದಾನೋ ಎನ್ನುವುದನ್ನು ತಿಳಿಯಬಯಸಿ ಪ್ರಶ್ನಿಸಿದ  ಜನಮೇಜಯನಿಗೆ  ವೈಶಂಪಾಯನರು ಉತ್ತರಿಸುತ್ತಾ ಹೇಳುತ್ತಾರೆ:  “ಜೀವರು ಬಹಳ. ಒಬ್ಬನೇ ಜೀವನಿರಲು ಸಾಧ್ಯವಿಲ್ಲ” ಎಂದು.  ಇದು ಹೇಗೆ ಎನ್ನುವುದನ್ನು ನಮ್ಮ ಅನುಭವಕ್ಕೆ ಬರುವ ಕಾರಣಗಳಿಂದ ಅವರು ವಿವರಿಸಿದ್ದಾರೆ.

ವೇದಕ್ಕೆ ಒಂದು ಅರ್ಥ ಇರಬೇಕು. ವೇದದ ಅರ್ಥವನ್ನು ನೋಡಬೇಕು ಅಂತಾದರೆ ಭೇದ ಇರಲೇಬೇಕು. ಇಲ್ಲವೆಂದರೆ  ಇಡೀ ವೇದಕ್ಕೇ ಅರ್ಥವಿಲ್ಲವೆಂದಾಗುತ್ತದೆ.

[ಗುಣ ಅನ್ನುವುದು ಒಂದು ದೊಡ್ಡ  ಪ್ರಮಾಣ. ಭೇದ ಇದೆ ಎನ್ನಲು ಗುಣವೇ ಆಧಾರ. ಪರಮಾತ್ಮ ಮಹತೋಮಹೀಯಾನ್-ಅಣೋರಣೀಯಾನ್  ಎಂದು ಸ್ಪಷ್ಟವಾಗಿ ಹೇಳುತ್ತಾರೆ.  ಆದರೆ  ಜೀವ ಹಾಗಲ್ಲ ಎನ್ನುವುದು  ಜೀವನಿಗೇ ಗೊತ್ತಿದೆ.  ನಮಗೆ ನಾವು ಸರ್ವಜ್ಞ  ಅಲ್ಲ ಎನ್ನುವುದು ಗೊತ್ತಿಲ್ಲವೇ?  ನಾನು ಸರ್ವಜ್ಞನಲ್ಲ- ಅಲ್ಪಜ್ಞ,  ಸರ್ವಶಕ್ತನಲ್ಲ-ಅಲ್ಪಶಕ್ತಾ, ಇತ್ಯಾದಿಗಳು ನಮಗೇ ತಿಳಿದಿರುವ ಸಂಗತಿಗಳು. ವೇದಗಳು  ಭಗವಂತ  ಸರ್ವಜ್ಞ- ಸರ್ವಶಕ್ತ ಎಂದು ಸಾರಿ ಹೇಳುತ್ತವೆ.  ಹೀಗಾಗಿ ಅಂತಹ ದೇವರೊಂದಿಗೆ  ಐಕ್ಯವಿಲ್ಲ ಎನ್ನುವುದು ಪ್ರತ್ಯಕ್ಷ.  ಇನ್ನು ದೇವರು ಅಂತ ಒಬ್ಬ ಇದ್ದಾನೋ ಇಲ್ಲವೋ ಎಂದು ಅನುಮಾನಿಸುವವರಿಗೂ ವೇದವೇ ಉತ್ತರ.  ಜೀವ ಮತ್ತು  ಪರಮಾತ್ಮ ಎನ್ನುವ ವರ್ಗೀಕರಣವನ್ನೂ (ಜಾತಿ/ವಿಂಗಡಣೆಯನ್ನು)  ವೇದದಲ್ಲಿಯೇ ಕಾಣಬಹುದು.  ಹೀಗಿರುವಾಗ ‘ನಾನೇ ಭಗವಂತ’ ಎಂದು ಯಾವ ರೀತಿ ಹೇಳುವುದು?  ಅದು ಪ್ರತ್ಯಕ್ಷಕ್ಕೇ ವಿರುದ್ಧ ಎನ್ನುವುದನ್ನು ಮಹಾಭಾರತದ ಪ್ರಮಾಣದ ಮೂಲಕ ಆಚಾರ್ಯರು ಇಲ್ಲಿ ಸಂಗ್ರಹಿಸಿ ನೀಡಿದ್ದಾರೆ].

 

ಸರ್ವೋತ್ತಮೋ ಹರಿರಿದಂ ತು ತದಾಜ್ಞಯೈವ ಚೇತ್ತುಂ ಕ್ಷಮಂ ಸ ತು ಹರಿಃ ಪರಮಸ್ವತನ್ತ್ರಃ ।

ಪೂರ್ಣ್ಣಾವ್ಯಯಾಗಣಿತನಿತ್ಯಗುಣಾರ್ಣ್ಣವೋsಸಾವಿತ್ಯೇವ ವೇದವಚನಾನಿ ಪರೋಕ್ತಯಶ್ಚ  ॥೧.೨೯

 

ನಾರಾಯಣನು ಎಲ್ಲರಿಗಿಂತ ಮಿಗಿಲು. ಈ ಪ್ರಪಂಚವು ಅವನ ಆಣತಿಯಂತೆ ತಿಳಿಯಲು ಸಮರ್ಥವಾಗಿದೆ.  ಪರಮಾತ್ಮನಾದರೋ  ಅತ್ಯಂತ ಸ್ವತಂತ್ರನಾಗಿದ್ದಾನೆ. ಈ ಪರಮಾತ್ಮನು  ನಾಶವಾಗದ, ಎಣಿಸಲಾರದ, ತುಂಬಿದ, ಯಾವಾಗಲೂ ಇರುವ,  ಜ್ಞಾನ-ಆನಂದ ಮೊದಲಾದ ಗುಣಗಳಿಗೆ ಕಡಲಿನಂತೆ ಇದ್ದಾನೆ. ವೇದ-ಪುರಾಣಗಳೂ ಇದನ್ನೇ ಹೇಳುತ್ತವೆ.

 

[ಈ ಮೇಲಿನ  ಮಾತುಗಳಿಗೆ  ವೇದ-ಪುರಾಣ-ಬ್ರಹ್ಮಸೂತ್ರ ಇತ್ಯಾದಿ ಗ್ರಂಥಗಳೇ  ಪ್ರಮಾಣ ಎಂದು ಹೇಳಿದಾಗ,  ಕೇವಲ ಈ ಗ್ರಂಥಗಳನಷ್ಟೇ ಪ್ರಮಾಣವೆಂದು ಏಕೆ ಒಪ್ಪಬೇಕು? ವ್ಯತಿರಿಕ್ತವನ್ನು ಹೇಳುವ ಇತರ ಗ್ರಂಥಗಳು ಏಕೆ ಪ್ರಮಾಣ ಅಲ್ಲ ಎನ್ನುವ ಪ್ರಶ್ನೆ ಸ್ವಾಭಾವಿಕ. ಏಕೆಂದರೆ   ಒಬ್ಬರು ಒಪ್ಪುವ ಪ್ರಮಾಣ ಒಂದಾದರೆ, ಇನ್ನೊಬ್ಬರು ಒಪ್ಪುವ ಪ್ರಮಾಣ ಇನ್ನೊಂದಾಗಿರಬಹುದು. ಹೀಗಿರುವಾಗ ಯಾವುದನ್ನು ಜಗತ್ತಿನಲ್ಲಿ ಪ್ರಮಾಣವೆಂದು ಅಂಗೀಕಾರ ಮಾಡಬೇಕು? ಈ ಪ್ರಶ್ನೆಗೆ ಆಚಾರ್ಯರು ಶಾಸ್ತ್ರದ ಮಾತಿನ ಮೂಲಕವೇ ಉತ್ತರಿಸಿರುವುದನ್ನು ನಾವು ಮುಂದಿನ ಶ್ಲೋಕಗಳಲ್ಲಿ ಕಾಣುತ್ತೇವೆ].

 

ಋಗಾದಯಶ್ಚ ಚತ್ವಾರಃ ಪಞ್ಚರಾತ್ರಂ ಚ ಭಾರತಮ್ ।

ಮೂಲರಾಮಾಯಣಂ  ಬ್ರಹ್ಮಸೂತ್ರಂ ಮಾನಂ ಸ್ವತಃ ಸ್ಮೃತಮ್ ॥೧.೩೦

 

ಅವಿರುದ್ಧಂ ಚ ಯತ್ತ್ವಸ್ಯ ಪ್ರಮಾಣಂ ತಚ್ಚ ನಾನ್ಯಥಾ ।

ಏತದ್ವಿರುದ್ಧಂ ಯತ್ತು ಸ್ಯಾನ್ನ ತನ್ಮಾನಂ ಕಥಞ್ಚನ ॥೧.೩೧

 

ಋಗ್ವೇದ ಮೊದಲಾದ ನಾಲ್ಕು ವೇದಗಳೂ, ಪಂಚರಾತ್ರವೂ , ಮಹಾಭಾರತವೂ, ಹಯಗ್ರೀವ ಬರೆದ ಮೂಲ ರಾಮಾಯಣವೂ ಮತ್ತು ವೇದವ್ಯಾಸರು ರಚಿಸಿದ  ಬ್ರಹ್ಮಸೂತ್ರ  ಇವೆಲ್ಲವೂ  ‘ಸ್ವತಃಪ್ರಮಾಣ^’ . 

[^ಯಾವುದರ  ಪ್ರಾಮಾಣ್ಯವನ್ನ ತಿಳಿಯಲು ಇನ್ನೊಂದು ಪ್ರಮಾಣದ  ಅವಶ್ಯಕತೆ ಇಲ್ಲವೋ, ಅದು ಸ್ವತಃ ಪ್ರಮಾಣ. ಉದಾಹರಣೆಗೆ: ನನಗೆ ಬಾಯಾರಿಕೆ ನೀಗಿದೆ ಎನ್ನಲು ಯಾರು ಪ್ರಮಾಣ? ನಾನೇ ಪ್ರಮಾಣ.   ಸುಖ-ದುಖಃ  ಮೊದಲಾದುವುಗಳನ್ನು ಹೊಂದುವುದರಲ್ಲಿ ನಾವು ಸ್ವತಃ ಪ್ರಮಾಣರು. ಅದಕ್ಕೆ ಬೇರೊಂದು ಪ್ರಮಾಣ ಬೇಡ. ಇದೇ ರೀತಿ ಮಹಾಭಾರತ ಪ್ರಮಾಣ ಏಕೆಂದರೆ ಮಹಾಭಾರತವೇ ಹೇಳುತ್ತಿರುವುದರಿಂದಾಗಿ.  ಯಾವ ರೀತಿ ಬೆಳಕನ್ನು ಹುಡುಕಲು ಇನ್ನೊಂದು ಬೆಳಕು ಬೇಡವೋ ಹಾಗೇ, ಮಹಾಭಾರತ ಸರಿಯೋ ಇಲ್ಲವೋ ಎಂದು ಇನ್ನೊಂದರಿಂದ ಪರೀಕ್ಷೆ ಮಾಡಬೇಕಾಗಿಲ್ಲ. ಈ ಸ್ವತಃ ಪ್ರಾಮಾಣ್ಯದ  ಕಲ್ಪನೆಯೇ ವಿದೇಶಿಯರಿಗೆ ಇಲ್ಲ. ಅದರಿಂದಾಗಿ ಅವರು ಮಹಾಭಾರತವನ್ನೇ ತಮ್ಮ ಊಹೆಯಿಂದ ಪರೀಕ್ಷಿಸುವ ಪ್ರಯತ್ನ ಮಾಡುತ್ತಿರುತ್ತಾರೆ.

ನಮ್ಮಲ್ಲಿ ಸ್ವತಃ-ಪ್ರಮಾಣ ಮತ್ತು ಪರತ-ಪ್ರಮಾಣ ಎಂಬ ಎರಡು ಬಗೆಯ ಪ್ರಮಾಣಗಳಿವೆ. ಪರತ-ಪ್ರಮಾಣವಾದುವುಗಳು ಸ್ವತಃ ಪ್ರಮಾಣದ  ಆಧಾರದ ಮೇಲೆ ತಮ್ಮ ಪ್ರಾಮಣ್ಯವನ್ನ ಸಾಧನೆ ಮಾಡಿಕೊಳ್ಳುತ್ತವೆ. ಆದರೆ ಪಾಶ್ಚಿಮಾತ್ಯರದ್ದು ಕೇವಲ ಪರತಪ್ರಮಾಣ. ಪರತಪ್ರಾಮಾಣ್ಯವೊಂದೇ ಇದ್ದಾಗ ಯಾವ ವಿಷಯವನ್ನೂ ಕೂಡಾ  ನಿರ್ಣಯ ಮಾಡಲು ಸಾಧ್ಯವಾಗುವುದಿಲ್ಲ. ಆಗ ಎಲ್ಲವೂ ಕೇವಲ ತರ್ಕದ ವಿಷಯವಾಗುತ್ತದೆ. ಉದಾಹರಣೆಗೆ:  ಬಾಯಾರಿಕೆ ನೀಗಿಸಿಕೊಂಡಿರುವ ವ್ಯಕ್ತಿಯಲ್ಲಿ, ಅವನ ಅನುಭವವನ್ನು(ಸ್ವತಃ ಪ್ರಮಾಣವನ್ನು)ಬಿಟ್ಟುಹಾಕಿ,   ನಿನಗೆ ನೀರಡಿಕೆ ನೀಗಿಲ್ಲ,  ಏಕೆಂದರೆ...... ಎಂದು ಎಷ್ಟು ಬೇಕಾದರೂ ತರ್ಕವನ್ನು  ಮಂಡಿಸಬಹುದು.

ನಮ್ಮ ಅನುಭವದಲ್ಲಿ ನಾವು ಪ್ರಮಾಣ ಆಗಿರುವಾಗ ಮಹಾಭಾರತ  ವೇದವ್ಯಾಸರ ಅನುಭವದಲ್ಲಿ ಏಕೆ ಪ್ರಮಾಣ ಆಗುವುದಿಲ್ಲ?  ವೇದ ಋಷಿಗಳ ಅನುಭವದಲ್ಲಿ ಋಷಿಗೆ ಏಕೆ ಪ್ರಮಾಣ ಆಗುವುದಿಲ್ಲ?  ಈ ಎಲ್ಲಾ ಪ್ರಮಾಣವನ್ನು   ಸಮರ್ಥನೆ ಮಾಡಲು ಇನ್ನೊಂದು ಕಡೆ  ಏಕೆ ಹೋಗಬೇಕು? ಹೀಗಾಗಿ ವೇದ-ಭಾರತ-ಮೂಲ ರಾಮಾಯಣ-ಪಂಚರಾತ್ರ-ಬ್ರಹ್ಮಸೂತ್ರ ಇತ್ಯಾದಿಗಳೆಲ್ಲವೂ ಸ್ವತಃ ಪ್ರಮಾಣ. ಈ ಕುರಿತಾದ ಹೆಚ್ಚಿನ ವಿವರಣೆಯನ್ನು ಆಚಾರ್ಯರ ವಿಷ್ಣುತತ್ತ್ವನಿರ್ಣಯದಲ್ಲಿ ಕಾಣಬಹುದು].

ಈ ಶಾಸ್ತ್ರ ಸಮೂಹಗಳಿಗೆ  ಯಾವುದು ವಿರುದ್ಧವಾಗಿಲ್ಲವೋ ಅದೂ ಕೂಡಾ ಪ್ರಮಾಣವೆನಿಸುತ್ತದೆ ಹೊರತು  ಬೇರೆ ರೀತಿಯಾಗಿ ಅಲ್ಲ.  [ಉದಾಹರಣೆಗೆ ರಾಘವೇಂದ್ರ ಸ್ವಾಮಿಗಳ ಗ್ರಂಥವು ಪ್ರಮಾಣವಾಗಿದೆ, ಏಕೆಂದರೆ ವೇದಾದಿಗಳಿಗೆ ಅನುಗುಣವಾಗಿ ಇರುವುದರಿಂದ]. ಹೀಗೆ  ಯಾವುದು ಈ ಮೇಲೆ ಹೇಳಿರುವ ಶಾಸ್ತ್ರಗಳಿಗೆ ಅವಿರುದ್ಧವಾಗಿದೆಯೋ  ಅದೂ ಕೂಡಾ  ಪ್ರಮಾಣವಾಗುತ್ತದೆ.  ಯಾವುದು ಇವುಗಳಿಗೆ ವಿರುದ್ಧವಾಗಿದೆಯೋ ಅದು ಪ್ರಮಾಣವೇ ಅಲ್ಲಾ.

[ಈ ಮೇಲಿನ ಟಿಪ್ಪಣಿಯಲ್ಲಿ ‘ಪುರಾಣದ’ ಪ್ರಸ್ತಾಪವಿಲ್ಲ. ಹಾಗಿದ್ದರೆ ಪುರಾಣ ಅಪ್ರಮಾಣವೋ? ಈ ಪ್ರಶ್ನೆಗೆ ಆಚಾರ್ಯರು ತಮ್ಮ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾರೆ]

 

ವೈಷ್ಣವಾನಿ ಪುರಾಣಾನಿ ಪಞ್ಚರಾತ್ರಾತ್ಮಕತ್ವತಃ ।

ಪ್ರಮಾಣಾನ್ಯೇವ ಮನ್ವಾದ್ಯಾಃ ಸ್ಮೃತಯೋsಪ್ಯನುಕೂಲತಃ ॥೧.೩೨

ಪುರಾಣಗಳೆಲ್ಲವೂ  ನಾರಾಯಣನಿಗೆ ಸಂಬಂಧಪಟ್ಟವುಗಳು. ಅಂದರೆ ನಾರಾಯಣನಿಂದ ರಚಿತವಾಗಿ ನಾರಾಯಣನನ್ನೇ  ಪ್ರತಿಪಾದಿಸುವಂತವುಗಳು.  ಕೆಲವೊಮ್ಮೆ ಪುರಾಣವನ್ನೂ ಸೇರಿಸಿಕೊಂಡೇ ಪಂಚರಾತ್ರ ಎಂದು ಹೇಳುವುದಿದೆ.  ಹೀಗಾಗಿ ಹದಿನೆಂಟು ಪುರಾಣಗಳೂ  ಕೂಡಾ ಶಾಸ್ತ್ರಪ್ರಮಾಣ. [ಕೆಲವೊಮ್ಮೆ ಪಂಚರಾತ್ರ ಮತ್ತು ಮಹಾಭಾರತವನ್ನು ಸೇರಿಸಿ ಇತಿಹಾಸವೆಂದು ಹೇಳುತ್ತಾರೆ. ಇನ್ನು ಕೆಲವೊಮ್ಮೆ ಇತಿಹಾಸ ಎಂದರೆ ಕೇವಲ ಮಹಾಭಾರತ ಮಾತ್ರ ಮತ್ತು  ಪಂಚರಾತ್ರ ಎಂದರೆ ಪುರಾಣಗಳನ್ನೊಳಗೊಂಡ ಪಂಚರಾತ್ರ].

[ವೇದದಲ್ಲಿ ಬಲಸ್ವರೂಪನಾದ ಮುಖ್ಯಪ್ರಾಣನನ್ನು     ಸಪ್ತಶಿವಾಸು ಮಾತೃಶು  ಎಂದು ಕರೆಯುತ್ತಾರೆ. ಅಂದರೆ  ಏಳು ಜನ ತಾಯಿಯಂದಿರಲ್ಲಿ ಮಲಗಿರುವವನು ಎಂದರ್ಥ.   ಆ ಏಳು ಜನ ತಾಯಂದಿರು ಯಾರು ಅಂದರೆ ಈ  ಏಳು ಶಾಸ್ತ್ರಗಳು: ನಾಲ್ಕುವೇದಗಳು,  ಇತಿಹಾಸ, ಪುರಾಣಗಳನ್ನೊಳಗೊಂಡ ಪಂಚರಾತ್ರ ಮತ್ತು  ಮೂಲ ರಾಮಾಯಣ].

ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ  ಇತ್ಯಾದಿ ಗ್ರಂಥಗಳು  ಯಾವುದೋ ಒಂದು ಕಾಲಕ್ಕೆ  ಸೀಮಿತವಾಗಿ ಅಲ್ಲಿ ಪ್ರಮಾಣವಾಗಿ ಬಳಕೆಯಾಗುತ್ತವೆ. ಅವುಗಳು  ಕಾನೂನಿದ್ದಂತೆ.  ಎಲ್ಲಾ ಕಾಲದಲ್ಲೂ ಏಕರೂಪವಾದ ಕಾನೂನನ್ನು ತರಲು ಸಾಧ್ಯವಿಲ್ಲ . ಕೇವಲ ಧರ್ಮಕ್ಕೆ ಪೋಷಕವಾಗಿ, ನ್ಯಾಯರಕ್ಷಣೆಗಾಗಿ, ಕಾಲಕ್ಕನುಗುಣವಾಗಿ  ಕಾನೂನುಗಳ ರಚನೆಯಾಗುತ್ತದೆ. ಅದರಿಂದಾಗಿ ಮನುಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ ಮೊದಲಾದ  ಗ್ರಂಥಗಳು ವೇದಕ್ಕೆ ಅವಿರುದ್ಧವಾಗಿದ್ದಲ್ಲಿ ಮಾತ್ರ ಪ್ರಮಾಣವಾಗುತ್ತವೆ.   

 

ಏತೇಷು ವಿಷ್ಣೋರಾಧಿಕ್ಯಮುಚ್ಯತೇsನ್ಯಸ್ಯ ನ ಕ್ವಚಿತ್ ।

ಅತಸ್ತದೇವ ಮನ್ತವ್ಯಂ ನಾನ್ಯಥಾ ತು ಕಥಞ್ಚನ ॥೧.೩೩

 

ಈ ಎಲ್ಲಾ ಗ್ರಂಥಗಳಲ್ಲಿ ನಾರಾಯಣನ ಹೆಚ್ಚುಗಾರಿಕೆಯು  ಹೇಳಲ್ಪಟ್ಟಿದೆ. ಉಳಿದ ದೇವತೆಗಳ  ಆಧಿಕ್ಯವನ್ನು ಹೇಳಿಲ್ಲ.  ಆ ಕಾರಣದಿಂದ ಈ ಗ್ರಂಥಗಳನ್ನೇ ಪ್ರಮಾಣ ಎಂದು ತಿಳಿಯತಕ್ಕದ್ದು,  ಬೇರೆ ರೀತಿಯಾಗಿ ಅಲ್ಲ. ಯಾವುದೇ ಒಂದು ಶಾಸ್ತ್ರವನ್ನು  ಪ್ರಮಾಣವೆಂದು ನಿರ್ಧರಿಸುವ ಮೊದಲು ತಿಳಿಯಬೇಕಾಗಿರುವುದು : ಅದು ವೇದಾದಿಗಳಿಗೆ ಅವಿರುದ್ಧವಾಗಿದೆಯೋ  ಇಲ್ಲವೋ ಎನ್ನುವುದನ್ನು. ಆದರೆ ವೇದಾದಿಗಳನ್ನು ಪರೀಕ್ಷೆ ಮಾಡಲು ಹೋಗಬಾರದು. ಏಕೆಂದರೆ ನಮ್ಮದು ಪೌರುಷೇಯ ಮನಸ್ಸು.  ಆದರೆ ವೇದ ಅಪೌರುಷೇಯವಾದದ್ದು. 

 

ಮೋಹಾರ್ತ್ಥಾನ್ಯನ್ಯಶಾಸ್ತ್ರಾಣಿ ಕೃತಾನ್ಯೇವಾsಜ್ಞಯಾ ಹರೇಃ ।

ಅತಸ್ತೇಷೂಕ್ತಮಗ್ರಾಹ್ಯಮಸುರಾಣಾಂ ತಮೋಗತೇಃ ॥೧.೩೪

 

ಯಸ್ಮಾತ್ ಕೃತಾನಿ ತಾನೀಹ ವಿಷ್ಣುನೋಕ್ತೈಃ ಶಿವಾದಿಭಿಃ

ಏಷಾಂ ಯನ್ನ ವಿರೋಧಿ ಸ್ಯಾತ್ ತತ್ರೋಕ್ತಂ ತನ್ನ ವಾರ್ಯ್ಯತೇ ॥೧.೩೫

 

ವೇದದಲ್ಲಿ ಹೇಳಲಾದ ದೇವತೆಗಳ ಗುಂಪಿನಲ್ಲಿ ರುದ್ರ ದೇವರೂ  ಬರುತ್ತಾರೆ.  ಹೀಗಿರುವಾಗ ಅವರು ಹೇಳಿರುವುದನ್ನು ಏಕೆ ಪ್ರಮಾಣವಾಗಿ ತೆಗೆದುಕೊಳ್ಳಬಾರದು? ರುದ್ರ ದೇವರು ಹೇಳಿರುವ ಪಾಶುಪತಾಗಮನದಲ್ಲಿ ನಾರಾಯಣ ಸರ್ವೋತ್ತಮ ಅಲ್ಲ, ಶಿವನೇ ಸರ್ವೋತ್ತಮ ಎಂದಿದೆ.  ಹೀಗಿರುವಾಗ ಯಾವ ರೀತಿ ಮುಂದುವರಿಯಬೇಕು?  ಈ ಎಲ್ಲಾ ಪ್ರಶ್ನೆಗಳಿಗೆ  ಉತ್ತರರೂಪವಾಗಿ  ಇಲ್ಲಿ ಹೇಳುತ್ತಾರೆ: ‘ಪುರಾಣಾದಿಗಳನ್ನು ಬಿಟ್ಟು, ಮೋಹಕ್ಕಾಗಿಯೇ,  ಪರಮಾತ್ಮನ ಆಜ್ಞೆಯಂತೆಯೇ,  ಶಿವಾದಿಗಳಿಂದ  ರಚಿಸಲ್ಪಟ್ಟ ಗ್ರಂಥಗಳು (ಪಾಶುಪತಸ್ಮೃತಿ, ಲಕುಲೀಶ ಪಾಶುಪತ ಸ್ಮೃತಿ, ಚಾರ್ವಾಕಶಾಸ್ತ್ರ, ಭೌದ್ಧಶಾಸ್ತ್ರ, ಮೊದಲಾದ ಗ್ರಂಥಗಳು) ದೈತ್ಯರ ಅಂಧತಮಸ್ಸಿಗೆ ಕಾರಣವಾಗಿ ಹೇಳಲ್ಪಟ್ಟಿದೆ. ಹೀಗಾಗಿ  ಅವುಗಳಲ್ಲಿ ಹೇಳಿದ್ದು ಗ್ರಾಹ್ಯವಲ್ಲ. ಆದರೆ ವೇದಕ್ಕೆ ವಿರುದ್ಧವಲ್ಲದ ವಿಷಯ  ಎಲ್ಲೇ ಇದ್ದರೂ ಕೂಡಾ ಅದನ್ನು ಸ್ವೀಕರಿಸಬಹುದು’ ಎಂದು.  ಇದು ನಮ್ಮ ಪ್ರಜ್ಞೆ ಯಾವ ರೀತಿ ಸಾಗಿದರೆ ಸತ್ಯವನ್ನ ಗ್ರಹಿಸಬಹುದು ಎನ್ನುವುದರ  ಮಾರ್ಗದರ್ಶಿಕೆ.

 

ವಿಷ್ಣ್ವಾಧಿಕ್ಯವಿರೋಧೀನಿ ಯಾನಿ ವೇದವಚಾಂಸ್ಯಪಿ ।

ತಾನಿ ಯೋಜ್ಯಾನ್ಯಾನುಕೂಲ್ಯಾದ್ ವಿಷ್ಣ್ವಾಧಿಕ್ಯಸ್ಯ ಸರ್ವಶಃ ॥೧.೩೬

 

ವಿಷ್ಣುವಿನ ಹೆಚ್ಚುಗಾರಿಕೆಗೆ ವಿರೋಧವಾಗಿ ಇರುವ ವೇದದ ಮಾತುಗಳನ್ನೂ ಕೂಡಾ ಅದಕ್ಕೆ ಅನುಕೂಲ ಆಗುವ ಹಾಗೆ ಕಾಣಬೇಕು.  ಅಂದರೆ:  ವಿಷ್ಣುವಿಗೆ ವಿರುದ್ಧವಾಗಿ ಯಾವುದಾದರೂ ವೇದವಾಕ್ಯ ನಿಮಗೆ ಕಂಡರೂ, ಅದನ್ನು ವಿಷ್ಣು ಸರ್ವೋತ್ತಮತ್ವಕ್ಕೆ ಅನುಕೂಲವಾಗಿಯೇ ಚಿಂತನೆ ಮಾಡಬೇಕು ಎಂದರ್ಥ.  ಉದಾಹರಣೆಗೆ:  ಜನಿತಾಃ ವಿಷ್ಣೋಃ  ಅಂತ ವೇದದಲ್ಲಿ ಒಂದು ಪ್ರಸಂಗ ಬರುತ್ತದೆ.  ಈ ರೀತಿ ಹೇಳಿದಾಗ ಯಾರು ವಿಷ್ಣುವಿನ ಜನಕ ಎನ್ನುವ ಪ್ರಶ್ನೆ ಬರುತ್ತದೆ.  ಇದು ಅರ್ಥವಾಗಬೇಕಾದರೆ ಅಲ್ಲಿನ ಇಡೀ  ಪ್ರಸಂಗವನ್ನುನಾವು  ಕಾಣಬೇಕಾಗುತ್ತದೆ.  ಯಾಗ ಮಾಡುವಾಗ  ‘ವಿಷ್ಣುವಿನ ತಂದೆಯ ಹತ್ತಿರ ಆಶೀರ್ವಾದ ತೆಗೆದುಕೊಳ್ಳಬೇಕು’ ಎಂದು ಅಲ್ಲಿ ಹೇಳಿದ್ದಾರೆ. ಹೀಗಾಗಿ ಇದರ ಅರ್ಥ:  ‘ನಿಮ್ಮ ತಂದೆಗೆ ನಮಸ್ಕಾರ ಮಾಡು’ ಎನ್ನುವುದಾಗಿದೆ.  ಕ್ರಿಯಾ-ಕಲಾಪದಲ್ಲಿ ತೊಡಗುವನಾದ್ದರಿಂದ ಯಜ್ಞಕರ್ತೃವನ್ನು ಅಲ್ಲಿ ‘ವಿಷ್ಣು’  ಎಂದು ಸಂಬೋಧಿಸಿದ್ದಾರೆ.  ಹೀಗೆ ಇಡೀ ಪ್ರಸಂಗವನ್ನು, ಸನ್ನಿವೇಶವನ್ನು ಕಂಡಾಗ ವಿಷ್ಣು ಅನ್ನುವ ಶಬ್ದಕ್ಕೆ ಯಜ್ಞಕರ್ತೃ ಎನ್ನುವ ಅರ್ಥ ಎನ್ನುವುದು ತಿಳಿಯುತ್ತದೆ.  ಇದು ಆ ಸನ್ನಿವೇಶದಿಂದಲೇ ಉಪಲಬ್ಧವಾಗುವಂತಹದ್ದು. ಅದರಿಂದಾಗಿ ‘ವಿಷ್ಣೋಃ ಜನಿತಾಃ’  ಅಂದರೆ ನಾರಾಯಣನನ್ನು ಹುಟ್ಟಿಸಿದವನಲ್ಲ,  ಯಜ್ಞಕರ್ತೃವನ್ನು ಹುಟ್ಟಿಸಿದವ ಎಂದರ್ಥ. ಅವನು ತಂದೆಗೆ ನಮಸ್ಕಾರ ಮಾಡಿ, ಅವರಿಂದ ಅನುಜ್ಞೆಯನ್ನು ಪಡೆದು, ‘ಯಾಗ ಮಾಡುತ್ತೇನೆ’  ಎಂದು ದೀಕ್ಷಿತನಾಗಬೇಕು ಎನ್ನುವುದು ತಾತ್ಪರ್ಯ. ಇವಿಷ್ಟು ನಾವು ನಮ್ಮ ಪ್ರಜ್ಞೆಯನ್ನು ಸತ್ಯದ ಹಾದಿಯಲ್ಲಿ ಹೇಗೆ ಕೊಂಡೊಯ್ಯಬೇಕು ಎನ್ನುವುದರ ನಿದರ್ಶನ. ಗ್ರಂಥವನ್ನು ಓದುವಾಗ ನಾವು ಎಷ್ಟು ಜಾಗರೂಕರಾಗಿರಬೇಕು ಎನ್ನುವುದರ ಒಂದು ಹೇಳಿಕೆ.

No comments:

Post a Comment