‘ಏಷ ಮೋಹಂ
ಸೃಜಾಮ್ಯಾಶು ಯೋ ಜನಾನ್ ಮೋಹಯಿಷ್ಯತಿ ।
‘ತ್ವಂ ಚ ರುದ್ರ
ಮಹಾಬಾಹೋ ಮೋಹಶಾಸ್ತ್ರಾಣಿ ಕಾರಯ ॥೧.೪೮॥
‘ಅತತ್ಥ್ಯಾನಿ ವಿತತ್ಥ್ಯಾನಿ ದರ್ಶಯಸ್ವ ಮಹಾಭುಜ ।
‘ಪ್ರಕಾಶಂ ಕುರು ಚಾsತ್ಮಾನಮಪ್ರಕಾಶಂ ಚ ಮಾಂ ಕುರು’ ॥೧.೪೯॥
ಇತಿ ವಾರಾಹವಚನಂ ಬ್ರಹ್ಮಾಣ್ಡೋಕ್ತಂ ತಥಾsಪರಮ್ ।
‘ಅಮೋಹಾಯ ಗುಣಾ
ವಿಷ್ಣೋರಾಕಾರಶ್ಚಿಚ್ಛರೀರತಾ ॥೧.೫೦॥
‘ನಿರ್ದ್ದೋಷತ್ವಂ
ತಾರತಮ್ಯಂ ಮುಕ್ತಾನಾಮಪಿ ಚೋಚ್ಯತೇ ।
‘ಏತದ್ವಿರುದ್ಧಂ
ಯತ್ ಸರ್ವಂ ತನ್ಮೋಹಾಯೇತಿ ನಿರ್ಣ್ಣಯಃ’ ॥೧.೫೧॥
“ನಾನು ಜನರಿಗೆ
ಮೋಹವನ್ನು ಸೃಷ್ಟಿಸುತ್ತೇನೆ. ಯಾವ ನನ್ನ ನಡವಳಿಕೆಯು ಎಲ್ಲಾ
ಜನರನ್ನು ದಾರಿ ತಪ್ಪಿಸುತ್ತದೋ, ಆ ರೀತಿಯಾದ
ನಡವಳಿಕೆಯನ್ನು ನಾನು ಮಾಡುತ್ತೇನೆ. ಎಲೈ ಮಹಾಬಾಹುವಾದ ರುದ್ರನೇ, ನೀನೂ
ಕೂಡಾ ಮೋಹಶಾಸ್ತ್ರಗಳನ್ನು ಮಾಡಿಸು ಮತ್ತು ಮಾಡು. [ಭಗವಂತನ ಇಚ್ಛೆಯಂತೆ ಸದಾಶಿವ
ಪಾಶುಪತಾಗಮನಕ್ಕೆ ಮೂಲಪ್ರೇರಕನಾದ. ಅವನ ಶಿಷ್ಯರಾದ
ದಧೀಚಿ, ವಾಮದೇವ ಮೊದಲಾದವರೆಲ್ಲರೂ ಕೂಡಾ ರುದ್ರನ ಆಜ್ಞೆಯನ್ನು ಶಿರಸಾ ವಹಿಸಿ ಆ ರೀತಿಯ
ಮೋಹಶಾಸ್ತ್ರಗಳನ್ನು ಜಗತ್ತಿನಲ್ಲಿ ಹರಡಿದರು]. ಎಲೈ ಮಹಾಭುಜ, ಸತ್ಯವನ್ನು ಹೇಳದ, ಸತ್ಯವನ್ನು
ವಿರೋಧಿಸುವ ಮಾತುಗಳನ್ನು ತೋರಿಸು. ನಿನ್ನನ್ನು ಜನರೆದುರು
ಸರ್ವೋತ್ತಮನೆಂದೂ, ವಿಷ್ಣುವಿಗಿಂತ ಉತ್ತಮನೆಂದೂ ತೋರಿಸಿಕೋ. ನನ್ನನ್ನು ನಿರ್ಗುಣನೆಂದೂ,
ಗುಣಪೂರ್ಣನಲ್ಲವೆಂದೂ ಹೇಳು”. ಈ ರೀತಿಯಾದ ಭಗವಂತನ ಮಾತು
ವರಾಹ ಪುರಾಣದಲ್ಲಿದೆ. [ಇಂದು ಲಭ್ಯವಿರುವ ವರಾಹ ಪುರಾಣದಲ್ಲಿ ಈ ಮೇಲಿನ ಒಂದು ಶ್ಲೋಕ
ಮಾತ್ರ ಕಾಣಸಿಗುತ್ತದೆ. ೭೦ನೇ ಅಧ್ಯಾಯ ೩೬ನೇ ಶ್ಲೋಕದಲ್ಲಿ “ಏಷ ಮೋಹಂ ಸೃಜಾಮ್ಯಾಶು....” ಎನ್ನುವ ಶ್ಲೋಕ ಕಾಣಸಿಗುತ್ತದೆ. ಇನ್ನು “ಅತತ್ಥ್ಯಾನಿ
ವಿತತ್ಥ್ಯಾನಿ ದರ್ಶಯಸ್ವ...” ಎನ್ನುವ ಶ್ಲೋಕ ಪದ್ಮಪುರಾಣದ ಉತ್ತರಖಂಡದ ೭೧ನೆಯ ಅಧ್ಯಾಯ ೧೦೮ ಮತ್ತು
೧೦೯ ನೆಯ ಶ್ಲೋಕಗಳ ನಡುವೆ ಕಾಣಸಿಗುತ್ತದೆ].
“ನಾರಾಯಣನ
ಗುಣಗಳು ಮೋಹಕ್ಕಾಗಿ ಹೇಳಲ್ಪಟ್ಟಿರುವುದಲ್ಲ. ನಾರಾಯಣನಿಗೆ ರೂಪವಿದೆ. ಭಗವಂತ ಜ್ಞಾನವೇ ಮೈವೆತ್ತು
ಬಂದಿದ್ದಾನೆ. ಆತನಿಗೆ ದೋಷವಿಲ್ಲ.
ಮುಕ್ತರಲ್ಲಿಯೂ ತಾರತಮ್ಯವಿದೆ. ಇದಕ್ಕೆ ವಿರುದ್ಧವಾಗಿ ಯಾವುದಿದೆಯೋ, ಅದೆಲ್ಲವೂ
ಮೋಹಕ್ಕಾಗಿ ನಿರ್ಣಯವಾಗಿದೆ” ಎಂದು ಸ್ವಯಂ
ಬ್ರಹ್ಮಾಂಡಪುರಾಣದಲ್ಲಿ ಹೇಳಿದ್ದಾರೆ.
ಸ್ಕಾನ್ದೇsಪ್ಯುಕ್ತಂ ಶಿವೇನೈವ ಷಣ್ಮುಖಾಯೈವ
ಸಾದರಮ್ ।
ಶಿವಶಾಸ್ತ್ರೇsಪಿ ತದ್ ಗ್ರಾಹ್ಯಂ
ಭಗವಚ್ಛಾಸ್ತ್ರಯೋಗಿ ಯತ್ ॥೧.೫೨॥
‘ಪರಮೋ ವಿಷ್ಣುರೇವೈಕಸ್ತಜ್ಜ್ಞಾನಂ
ಮೋಕ್ಷಸಾಧನಮ್ ।
‘ಶಾಸ್ತ್ರಾಣಾಂ ನಿರ್ಣ್ಣಯಸ್ತ್ವೇಷ
ತದನ್ಯನ್ಮೋಹನಾಯ ಹಿ ॥೧.೫೩॥
‘ಜ್ಞಾನಂ ವಿನಾ ತು ಯಾ ಮುಕ್ತಿಃ
ಸಾಮ್ಯಂ ಚ ಮಮ ವಿಷ್ಣುನಾ ।
‘ತೀರ್ತ್ಥಾದಿಮಾತ್ರತೋ ಜ್ಞಾನಂ ಮಮಾsಧಿಕ್ಯಂ ಚ ವಿಷ್ಣುತಃ ॥೧.೫೪॥
‘ಅಭೇದಶ್ಚಾಸ್ಮದಾದೀನಾಂ ಮುಕ್ತಾನಾಂ
ಹರಿಣಾ ತಥಾ ।
‘ಇತ್ಯಾದಿ ಸರ್ವಂ ಮೋಹಾಯ ಕತ್ಥ್ಯತೇ
ಪುತ್ರ ನಾನ್ಯಥಾ’ ॥೧.೫೫॥
ಸ್ಕಂದ ಪುರಾಣದಲ್ಲಿಯೂ ಕೂಡಾ ತಂದೆಯಾದ ಶಿವನಿಂದಲೇ, ಮಗನಾದ
ಷಣ್ಮುಖನಿಗೇನೇ ಆದರಪೂರ್ವಕವಾಗಿ ಹೇಳಲ್ಪಟ್ಟಿರುವ
ಮಾತನ್ನು ಆಚಾರ್ಯರು ಇಲ್ಲಿ ಉಲ್ಲೇಖಿಸಿದ್ದಾರೆ. [ ‘ಇಲ್ಲಿ ‘ಶಿವೇನೈವ’ ಎನ್ನುವಲ್ಲಿ ತಂದೆ ವಿಪ್ರಲಮ್ಬಕನಲ್ಲ ಮತ್ತು ಈ ಮಾತನ್ನು ಆತ
ಮೋಹಕ್ಕಾಗಿ ಹೇಳಿರುವುದಲ್ಲ ಎನ್ನುವ ಧ್ವನಿ ಇದೆ. ಅದೇ ರೀತಿ ‘ಷಣ್ಮುಖಾಯೈವ’
ಎನ್ನುವಲ್ಲಿ ಕೇಳುವವರನ್ನು ದಾರಿತಪ್ಪಿಸಲು
ಹೇಳಿರುವುದಲ್ಲ, ಏಕೆಂದರೆ ತನ್ನ ಮಗನಾದ ಸ್ಕಂದನಿಗಾಗಿಯೇ ಹೇಳಿರುವುದು ಎನ್ನುವ ಧ್ವನಿ ಇದೆ. ಇನ್ನು ಪ್ರಸಂಗ: ಒಳ್ಳೆಯ ವಿಷಯ ಹೇಳಬೇಕು ಅಂತಲೇ
ಕುಳಿತಿರುವುದು. ಹಾಗಾಗಿ ಇದು ಹಾಸ್ಯಕಥೆ
ಮೊದಲಾದವುಗಳಲ್ಲ ಎನ್ನುವುದೂ ತಿಳಿಯುತ್ತದೆ].
ಸ್ಕಾಂಧ ಪುರಾಣ
ಶಿವನನ್ನು ಪ್ರತಿಪಾದನೆ ಮಾಡುವ ಶಾಸ್ತ್ರ. ಶಿವ ಶಾಸ್ತ್ರದಲ್ಲಿಯೂ ಕೂಡಾ ಯಾವುದು ವಿಷ್ಣು
ಶಾಸ್ತ್ರಕ್ಕೆ ಸಮ್ಮತವಾಗಿರುತ್ತದೋ ಅದನ್ನು ಸ್ವೀಕರಿಸಬೇಕು.
ಶಿವ ಹೇಳುತ್ತಾನೆ: “ನಾರಾಯಣ ಒಬ್ಬನೇ ಸರ್ವೋತ್ತಮನು. ಆ ಪರಮಾತ್ಮನ ಜ್ಞಾನವೇ ಮೋಕ್ಷಕ್ಕೆ ಸಾಧನವಾಗಿದೆ. ಇದು ಶಾಸ್ತ್ರಗಳ
ನಿರ್ಣಯವಾಗಿದೆ. ಇದನ್ನು ಬಿಟ್ಟು ಉಳಿದದ್ದೆಲ್ಲವೂ
ಮೋಹಕ್ಕಾಗಿಯೇ ಇದೆಯಷ್ಟೇ” ಎಂದು.
ಮೋಹಕ್ಕಾಗಿ ಏನೆಲ್ಲಾ ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ ಎನ್ನುವ
ಒಂದು ಪಟ್ಟಿಯನ್ನೇ ಶಿವ ನೀಡಿದ್ದಾನೆ. ಅದರ ಪ್ರಕಾರ (೧). ಜ್ಞಾನವನ್ನು
ಹೊರತುಪಡಿಸಿ ಮುಕ್ತಿ ಇದೆ ಎಂದು ಎಲ್ಲಾದರೂ
ಹೇಳಿದ್ದರೆ ಅದು ಆ ಶಾಸ್ತ್ರದ ಮೋಹನ. (೨). ನನಗೆ(ಸದಾಶಿವನಿಗೆ) ನಾರಾಯಣನಿಂದ ಸಮತ್ವವನ್ನು ಎಲ್ಲಾದರೂ ಹೇಳಿದರೆ ಅದು ಮೋಹಕ್ಕಾಗಿ. (೩). ಪುಣ್ಯತೀರ್ಥದಲ್ಲಿ ಸ್ನಾನ
ಮಾಡಿದರೆ ಜ್ಞಾನ ಬರುತ್ತದೆ ಎನ್ನುವ ಕೆಲವೊಂದು ಮಾತುಗಳಿವೆ. ಅದೆಲ್ಲವೂ ಮೋಹಕ್ಕಾಗಿ. [ಗುರು
ಮುಖೇನವೇ ಜ್ಞಾನ ಪಡೆಯಬೇಕು]. (೪). ನನಗೆ(ಶಿವನಿಗೆ) ನಾರಾಯಣನಿಂದ ಆಧಿಕ್ಯವನ್ನು ಎಲ್ಲಾದರೂ
ಹೇಳಿದ್ದರೆ ಅದೆಲ್ಲವೂ ಮೋಹಕ್ಕಾಗಿ. (೫). ನಾನು-ಬ್ರಹ್ಮ-ವಿಷ್ಣು ಈ ಮೂರರಲ್ಲಿ ಅಭೇದವನ್ನು
ಹೇಳಿದರೆ, (೬) ಪರಮಾತ್ಮನಿಂದ ಮುಕ್ತರಿಗೆ ಅಭೇದ ಹೇಳಿದರೆ, ಇವೇ ಮೊದಲಾದ
ಎಲ್ಲವೂ ದುರ್ಜನರು ದಾರಿ ತಪ್ಪಲೆಂದೇ ಹೇಳಲ್ಪಡುತ್ತದೆ. ಮೋಹ ಬಿಟ್ಟು ಬೇರೆ ಉದ್ದೇಶವೇ
ಇದಕ್ಕಿರುವುದಿಲ್ಲ ಎನ್ನುತ್ತಾನೆ ಶಿವ. ಇಲ್ಲಿ
ಸದಾಶಿವ ಸ್ಕಂದನನ್ನು ‘ಪುತ್ರಾ’ ಎಂದು ಸಂಬೋಧನೆ
ಮಾಡುತ್ತಿರುವುದನ್ನು ಕಾಣುತ್ತೇವೆ. ಆ ಪುತ್ರಾ’ ಎನ್ನುವ ಸಂಬೋಧನೆಯಲ್ಲಿ ದಾರಿ ತಪ್ಪಬೇಡ
ಎಂದು ಕಾಳಜಿಯಿಂದ ಹೇಳುತ್ತಿರುವುದು ಎದ್ದು
ಕಾಣುತ್ತದೆ. ಅದರಿಂದಾಗಿ, ಪುರಾಣದಲ್ಲಿರುವ ಈ ಮಾತನ್ನು ತೆಗೆದುಕೊಂಡರೆ ಇದು ಪ್ರಬಲ. ಇದು
ಉಳಿದದ್ದೆಲ್ಲವನ್ನೂ ಕೂಡಾ ಮೀರಿ ನಿಲ್ಲುತ್ತದೆ.
ಉಕ್ತಂ ಪಾದ್ಮಪುರಾಣೇ ಚ ಶೈವ ಏವ ಶಿವೇನ ತು ।
ಯದುಕ್ತಂ ಹರಿಣಾ ಪೂರ್ವಮುಮಾಯೈ ಪ್ರಾಹ ತದ್ಧರಃ ॥೧.೫೬॥
‘ತ್ವಾಮಾರಾದ್ಧ್ಯ ತಥಾ ಶಮ್ಭೋ ಗ್ರಹೀಷ್ಯಾಮಿ ವರಂ ಸದಾ ।
‘ದ್ವಾಪರಾದೌ ಯುಗೇ ಭೂತ್ವಾ ಕಲಯಾ ಮಾನುಷಾದಿಷು
॥೧.೫೭॥
‘ಸ್ವಾಗಮೈಃ ಕಲ್ಪಿತೈಸ್ತ್ವಂ ಚ ಜನಾನ್ ಮದ್ವಿಮುಖಾನ್
ಕುರು ।
‘ಮಾಂ ಚ ಗೋಪಾಯ ಯೇನ ಸ್ಯಾತ್ ಸೃಷ್ಟಿರೇಷೋತ್ತರಾಧರಾ’
॥೧.೫೮॥
ಸದಾಶಿವನನ್ನು ಪ್ರತಿಪಾದನೆ ಮಾಡುವ ಪದ್ಮಪುರಾಣದಲ್ಲಿ
ಸದಾಶಿವನಿಂದಲೇ ಈ ಮಾತು ಹೇಳಲ್ಪಟ್ಟಿದೆ. ಮೊದಲು ತನಗೆ
ದೇವರು ಏನನ್ನು ಉಪದೇಶಿಸಿದ್ದ ಎನ್ನುವುದನ್ನು ಸದಾಶಿವ ಪಾರ್ವತಿಗಾಗಿ ಹೇಳುತ್ತಾನೆ. [ಮೇಲಿನದು ಮಗನಿಗೆ ಮಾಡಿದ
ಉಪದೇಶವಾದರೆ , ಇದು ಹೆಂಡತಿಗೆ ಮಾಡಿದ ಉಪದೇಶ . ಎರಡರಲ್ಲಿಯೂ ವಿಪ್ರಲಂಬಕತ್ವ ಎನ್ನುವುದು ಇಲ್ಲ. ಪ್ರೀತಿ ಇದೆ. ಉದ್ಧಾರ ಆಗಲಿ ಎನ್ನುವ ಕಾಳಜಿಯಿಂದ ನುಡಿದ ಮಾತುಗಳಿವೆ].
“ರುದ್ರನೇ,
ದ್ವಾಪರ ಯುಗದಲ್ಲಿ ಮನುಷ್ಯರ ನಡುವೆ ನನ್ನ ರೂಪದಿಂದ ಹುಟ್ಟಿ , ನಿನ್ನನ್ನು ಉಪಾಸನೆ ಮಾಡಿ
ವರವನ್ನು ಸ್ವೀಕರಿಸುತ್ತೇನೆ” [ ಇದನ್ನು ಶ್ರೀಕೃಷ್ಣ ಹೇಗೆ ಮಾಡಿ ತೋರಿದ ಎನ್ನುವುದನ್ನು ನಾವು ಕೃಷ್ಣಾವತಾರದಲ್ಲಿ
ಕಾಣುತ್ತೇವೆ]. “ನೀನೇ ಕಲ್ಪನೆ ಮಾಡಿದ ರಚನೆಯಿಂದ [ಪಾಶುಪಥಾಗಮನದಿಂದ] ಜನರನ್ನು ನನ್ನಿಂದ
ವಿಮುಖರನ್ನಾಗಿಸಿ ಅವರಿಗೆ ಕಾಣದಂತೆ ನನ್ನನ್ನು ಮುಚ್ಚಿಡುವಂತೆ ಮಾಡು. ಈ ರೀತಿಯ ಕ್ರಿಯೆಯಿಂದ ಜನ ಸೃಷ್ಟಿಯನ್ನು ತಪ್ಪಾಗಿ
ತಿಳಿದುಕೊಳ್ಳುವಂತಾಗುತ್ತದೆ” [ಅಯೋಗ್ಯರಿಗೆ ಭಗವಂತ ಸರ್ವೋತ್ತಮ ಎನ್ನುವುದು ತಿಳಿಯುವುದಿಲ್ಲ]
ಎಂದು ಪೂರ್ವದಲ್ಲಿ ಭಗವಂತ ತನಗೆ ಹೇಳಿದ್ದಾನೆ
ಎಂದು ಸದಾಶಿವ ಉಮೆಗೆ ಹೇಳುತ್ತಾನೆ.
ಮೊದಲು ಸೃಷ್ಟಿಯಾಗಿದ್ದು ಬ್ರಹ್ಮ, ಆಮೇಲೆ ಸದಾಶಿವ. ಹೀಗೆ
ಪದ್ಮ ಪುರಾಣದಲ್ಲಿ ಸ್ಫುಟವಾಗಿ ಹೇಳಲಾಗಿದೆ. ಇದನ್ನು ಪಾತಾಳ ಖಂಡ ೯೭ನೆಯ ಅಧ್ಯಾಯ ೨೭ನೆಯ
ಶ್ಲೋಕದಲ್ಲಿ ನಾವು ನೋಡಬಹುದು.
[ಶೈವ ಪುರಾಣದಲ್ಲಿ ಪರಮಾತ್ಮ ಸರ್ವೋತ್ತಮ ಎಂದೇನೋ ಇದೆ,
ಆದರೆ ವಿಷ್ಣು ಪುರಾಣದಲ್ಲಿ ಶಿವ ಶ್ರೇಷ್ಠ ಅಂತೇನಾದರೂ ಹೇಳಿದ್ದಿದ್ದರೆ? ಈ ಪ್ರಶ್ನೆಗೆ ಆಚಾರ್ಯರು ಮುಂದಿನ ಶ್ಲೋಕದಲ್ಲಿ ಉತ್ತರ ನೀಡಿದ್ದಾರೆ].
No comments:
Post a Comment