ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, November 8, 2017

ಅಧ್ಯಯನಕ್ಕೆ ತೊಡಗುವ ಮೊದಲು

ಶ್ರೀಮಹಾಭಾರತತಾತ್ಪರ್ಯನಿರ್ಣಯಃ

ಅಧ್ಯಯನಕ್ಕೆ ತೊಡಗುವ ಮೊದಲು


ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ ಶ್ರೀಮಹಾಭಾರತತಾತ್ಪರ್ಯನಿರ್ಣಯ.

ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ
.
ಈ ಮಾತನ್ನು ನಾರಾಯಣಪಂಡಿತಾಚಾರ್ಯರು ಮಧ್ವವಿಜಯದಲ್ಲಿ ದಾಖಲಿಸಿದ್ದಾರೆ.

ಇತಿಹಾಸ-ಪುರಾಣಾಬ್ಧೇರ್ಭವಚ್ಚಿತ್ತಾದ್ರಿ-ಲೋಳಿತಾತ್
ಜಾತಂ ಭಾರತ-ತಾತ್ಪರ್ಯ-ಸುಧಾಂ ಕಃ ಸನ್ನ ಸೇವತೇ  

[ಇತಿಹಾಸ-ಪುರಾಣಗಳೆಂಬ  ಕಡಲನ್ನು ತಮ್ಮ ಚಿತ್ತದ ಕಡಗೋಲಿನಿಂದ ಕಡೆದಾಗ ಮೂಡಿಬಂದ ಭಾರತತಾತ್ಪರ್ಯ (ನಿರ್ಣಯ)ವೆಂಬ ಸೊದೆಯನ್ನು ಯಾವ ಜ್ಞಾನಿ ಸೇವಿಸದೆ ಬಿಟ್ಟಾನು? ]

ರಾಮಾಯಣದ ಕಥೆ ಎಂದಾಗ ಮೂಲರಾಮಾಯಣ, ವಾಲ್ಮೀಕಿ ರಾಮಾಯಣ ಮತ್ತು ಪುರಾಣಗಳಲ್ಲಿ ಬೇರೆಬೇರೆ ಕಡೆ ಬಂದ ರಾಮಕಥೆ. ಜೊತೆಗೆ ಮಹಾಭಾರತದಲ್ಲಿ ಬಂದ ರಾಮಕಥೆ ಕೂಡ. ಈ ಎಲ್ಲದರ ಸಮನ್ವಯದ ಅರ್ಥವನ್ನು, ಮೇಲುನೋಟಕ್ಕೆ ಒಂದಕ್ಕೊಂದು ಹೊಂದಿಕೆಯಾಗದ ಸಂಗತಿಗಳನ್ನು ಏಕರೀತಿಯಲ್ಲಿ ಸಮನ್ವಯಗೊಳಿಸುವ ಬಗೆಯನ್ನು ಆಚಾರ್ಯರು ಇಲ್ಲಿ ತೋರಿಸಿಕೊಟ್ಟಿದ್ದಾರೆ.

ಮಹಾಭಾರತ ಎಂದಾಗ ಎಲ್ಲವೂ ಬಂತು. ರಾಮನ ಕಥೆ, ಕೃಷ್ಣನ ಕಥೆ, ಪಾಂಡವರ ಕಥೆ, ಎಲ್ಲವೂ ಅಲ್ಲಿ ಬಂದಿದೆ. ಅಲ್ಲಿ ಇಲ್ಲದ್ದು ಇನ್ನೆಲ್ಲೂ ಬಂದಿಲ್ಲ. ಅದಕೆಂದೇ ಎಲ್ಲವನ್ನೂ ವಿಶ್ಲೇಷಿಸುವ ಈ ಗ್ರಂಥದ ಹೆಸರು –ಮಹಾಭಾರತತಾತ್ಪರ್ಯನಿರ್ಣಯ.

ಮಹಾಭಾರತ ಸಮಸ್ತಶಾಸ್ತ್ರಗಳ ಸಾರ.ಮಹಾಭಾರತತಾತ್ಪರ್ಯನಿರ್ಣಯ ಸಮಸ್ತಶಾಸ್ತ್ರಗಳ ನಿರ್ಣಯದ ಸಾರ. ಆಚಾರ್ಯರೇ ಗ್ರಂಥದ ಕೊನೆಯಲ್ಲಿ ಈ ಮಾತನ್ನು ಹೇಳಿದ್ದಾರೆ:

ಸಮಸ್ತಶಾಸ್ತ್ರಾರ್ಥವಿನಿರ್ಣಯೋsಯಂ ವಿಶೇಷತೋ ಭಾರತವರ್ತ್ಮಚಾರೀ [೩೨.೧೫೯]

 [ಇದು ಎಲ್ಲ ಶಾಸ್ತ್ರಗಳ ಅರ್ಥವನ್ನು ನಿರ್ಣಯಿಸುವಂಥದು. ವಿಶೇಷವಾಗಿ ಭಾರತದ ಮೇಲೆ ಬೆಳಕು ಬೀರುವಂಥದು]

ತಸ್ಮಾದಯಂ ಗ್ರನ್ಥವರೋsಖಿಲೋರುಧರ್ಮಾದಿಮೋಕ್ಷಾನ್ತಪುಮರ್ಥಹೇತುಃ
ಕಿಂ ವೋದಿತೈರಸ್ಯ ಗುಣೈಸ್ತತೋsನ್ಯೈರ್ನಾರಾಯಣಃ ಪ್ರೀತಿಮುಪೈತ್ಯತೋsಲಮ್ ೩೨.೧೬೫

[ಈ ಹಿರಿಯ ಗ್ರಂಥ ಎಲ್ಲಕ್ಕಿಂತ ಮಿಗಿಲಾದ, ಧರ್ಮದಿಂದ ಮೋಕ್ಷದ ತನಕದ ಎಲ್ಲ ಪುರುಷಾರ್ಥಗಳನ್ನೂ ತಂದೀಯುತ್ತದೆ. ಸುಮ್ಮನೆ ಬೇರೆಬೇರೆ ಗುಣಗಳನ್ನು ಹೇಳಿ ಏನುಪಯೋಗ? ಸ್ವಯಂ ನಾರಾಯಣನೇ ಪ್ರೀತನಾಗುತ್ತಾನೆ. ಇಷ್ಟು ಸಾಕು]

ಅತ್ರೋದಿತಾ ಯಾಶ್ಚ ಕಥಾಃ ಸಮಸ್ತಾ ವೇದೇತಿಹಾಸಾದಿವಿನಿರ್ಣಯೋಕ್ತಾಃ ೩೨.೧೬೪

[ಇಲ್ಲಿ ಹೇಳಲಾದ ಎಲ್ಲ ಕಥೆಗಳೂ ವೇದ-ಇತಿಹಾಸ-ಪುರಾಣಗಳ ನಿರ್ಣಯದಿಂದ ರೂಪುಗೊಂಡಂಥವು]
ರಾಮಚರಿತೆಯ ಕೊನೆಯಲ್ಲೂ ಈ ಮಾತು ಬಂದಿದೆ.

ಇತ್ಯಶೇಷಪುರಾಣೇಭ್ಯಃ ಪಞ್ಚರಾತ್ರೇಭ್ಯ ಏವ ಚ
ಭಾರತಾಚ್ಚೈವ ವೇದೇಭ್ಯೋ ಮಹಾರಾಮಾಯಣಾದಪಿ ೯.೧೨೨

ಪರಸ್ಪರವಿರೋಧಸ್ಯ ಹಾನಾನ್ನಿರ್ಣೀಯ ತತ್ತ್ವತಃ
ಯುಕ್ತ್ಯಾ ಬುದ್ಧಿಬಲಾಚ್ಚೈವ ವಿಷ್ಣೋರೇವ ಪ್ರಸಾದತಃ ೯-೧೨೩

ಬಹುಕಲ್ಪಾನುಸಾರೇಣ ಮಯೇಯಂ ಸತ್ಕಥೋದಿತಾ
ನೈಕಗ್ರನ್ಥಾಶ್ರಯಾತ್ ತಸ್ಮಾನ್ನಾSಶಙ್ಕ್ಯಾSತ್ರ ವಿರುದ್ಧತಾ ೯-೧೨೪

[ಎಲ್ಲ ಪುರಾಣಗಳು, ಪಂಚರಾತ್ರದ ಸಂಹಿತೆಗಳು, ಮಹಾಭಾರತ, ವೇದಗಳು, ಮತ್ತು ಮಹಾರಾಮಾಯಣ – ಈ ಎಲ್ಲಮೂಲಗ್ರಂಥಗಳ ಆಧಾರದಿಂದ ಪರಸ್ಪರ ವಿರೋಧವನ್ನು ಪರಿಹರಿಸಿ, ಯುಕ್ತಿ-ಬುದ್ಧಿಶಕ್ತಿ ಮತ್ತು ಭಗವಂತನ ಅನುಗ್ರಹಬಲದಿಂದ ತಾತ್ವಿಕವಾಗಿ ಅರ್ಥವನ್ನು ನಿರ್ಧರಿಸಿ, ಅನೇಕ ಗ್ರಂಥಗಳ ಆಸರೆಯಿಂದ, ಅನೇಕ ಕಲ್ಪಗಳಿಗೆ ಅನುಗುಣವಾಗಿ ನಾನು ಈ ಪುಣ್ಯಕಥೆಯನ್ನು ನಿರೂಪಿಸಿದ್ದೇನೆ. ಅದರಿಂದ ಇಲ್ಲಿ ವಿರೋಧದ ಕುಶಂಕೆ ಮಾಡುವಂತಿಲ್ಲ.]

ಅದಕೆಂದೆ ಇಡಿಯ ಗ್ರಂಥದ ಒಟ್ಟು ಶಿಲ್ಪಿದ ಪಂಚಾಂಗವಾದ  ಮೊದಲನೆಯ ಅಧ್ಯಾಯದ ಹೆಸರೇ ‘ಸರ್ವಶಾಸ್ತ್ರಾತಾತ್ಪರ್ಯನಿರ್ಣಯ’ ಎಂದು.

ಯಾವ ಗ್ರಂಥಕಾರನೂ ಹೇಳಿಕೊಳ್ಳದ ಒಂದು ಹೆಗ್ಗಳಿಕೆಯ ಸಂಗತಿಯನ್ನು ಆಚಾರ್ಯರು ಇಲ್ಲಿ ಹೇಳುತ್ತಾರೆ.

ಇತ್ಯೃಗ್ಯಜುಃಸಾಮಾಥರ್ವಪಞ್ಚರಾತ್ರೇತಿಹಾಸತಃ
ಪುರಾಣೇಭ್ಯಃಸ್ತಥಾsನ್ಯೇಭ್ಯಃ ಶಾಸ್ತ್ರೇಭ್ಯೋ ನಿರ್ಣಯಃ ಕೃತಃ ೧.೧೩೫

ವಿಷ್ಣ್ವಾಜ್ಞಯೈವ ವಿದುಷಾ ತತ್ ಪ್ರಸಾದಬಲೋನ್ನತೇಃ
ಆನನ್ದತೀರ್ಥಮುನಿನಾ ಪೂರ್ಣಪ್ರಜ್ಞಾಭಿದಾಯುಜಾ ೧.೧೩೬

ತಾತ್ಪರ್ಯಂ ಶಾಸ್ತ್ರಾಣಾಂ ಸರ್ವೇಷಾಮುತ್ತಮಂ ಮಯಾ ಪ್ರೋಕ್ತಮ್
ಪ್ರಾಪ್ಯಾನುಜ್ಞಾಂ ವಿಷ್ಣೋರೇತಜ್ಜ್ಞಾತ್ವೈವ ವಿಷ್ಣುರಾಪ್ಯೋsಸೌ ೧.೧೩೭

[ಹೀಗೆ ಋಕ್-ಯಜಸ್ಸು-ಸಾಮ-ಅಥರ್ವವೇದಗಳಿಂದ, ಪಂಚರಾತ್ರದಿಂದ, ಇತಿಹಾಸಗಳಿಂದ, ಪುರಾಣಗಳಿಂದ, ಹಾಗೆಯೇ ಇತರ  ಶಾಸ್ತ್ರಗಳ ಆಧಾರದಿಂದ ಈ ನಿರ್ಣಯವನ್ನು ಮಾಡಿದೆನು ನಾನು, ಪೂರ್ಣಪ್ರಜ್ಞನೆಂದು ಹೆಸರು ಪಡೆದ ವಿದ್ವಾಂಸನಾದ ಆನಂದತೀರ್ಥಮುನಿ, ಭಗವಂತನ ಅಪ್ಪಣೆಯಿಂದಲೇ ಮತ್ತು ಅವನ ಅನುಗ್ರಹದ ಬಲವಂತಿಕೆಯಿಂದಲೇ ಎಲ್ಲ ಶಾಸ್ತ್ರಗಳ ಉತ್ತಮವಾದ ತಾತ್ಪರ್ಯವನ್ನು ವಿಷ್ಣುವಿನ ಅಣತಿ ಪಡದೇ ನಾನು ಹೇಳಿದೆ. ಇದನ್ನು ಅರಿತೇ ವಿಷ್ಣುವನ್ನು ಪಡೆಯುವುದು ಸಾಧ್ಯ]

ಗ್ರಂಥದ ಕೊನೆಯಲ್ಲೂ ಆಚಾರ್ಯರು ಮತ್ತೊಮ್ಮೆ ಈ ಮಾತನ್ನು ಒತ್ತಿಹೇಳುತ್ತಾರೆ: 

ಆನನ್ದತೀರ್ಥಾಖ್ಯಮುನಿಃ ಸುಪೂರ್ಣಪ್ರಜ್ಞಾಭಿಧೋ ಗ್ರನ್ಥಮಿಮಂ ಚಕಾರ
ನಾರಾಯಣೇನಾಭಿಹಿತೋ ಬದರ್ಯಾಂ ತಸ್ಯೈವ ಶಿಷ್ಯೋ ಜಗದೇಕಭರ್ತುಃ ೩೨.೧೫೭

[ಪೂರ್ಣಪ್ರಜ್ಞ ಎಂಬ ಚೆಲುಹೆಸರಿನ (ಅಚ್ಯುತಪ್ರಜ್ಞರು ಆಚಾರ್ಯರಿಗೆ ಆಶ್ರಮದೀಕ್ಷೆ ನೀಡಿದಾಗ ಇಟ್ಟ ಹೆಸರು) ಆನಂದತೀರ್ಥ(ಆಚಾರ್ಯರಿಗೆ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದಾಗ ಅಚ್ಯುತಪ್ರಜ್ಞರು ನೀಡಿದ ಹೆಸರು) ಎಂಬ ಮುನಿ, ಜಗತ್ತಿಗೆಲ್ಲ  ಒಡೆಯನಾದ ನಾರಾಯಣನ ಅಂತರಂಗಶಿಷ್ಯ, ಬದರಿಯಲ್ಲಿ ಅವನಿಂದಲೇ ನೇರ ಅಣತಿ ಪಡೆದು ಈ ಗ್ರಂಥವನ್ನು ರಚಿಸಿದನು]



[ಗ್ರಂಥ ಋಣ:  ಆಚಾರ್ಯ ಬನ್ನಂಜೆಯವರಿಂದ ಪ್ರಕಾಶಿತವಾದ ಶ್ರೀ ಹೃಷೀಕೇಶತೀರ್ಥರ ಮೂಲಪಾಠಾನುಸಾರಿ ಶ್ರೀಮಹಾಭಾರತತಾತ್ಪರ್ಯನಿರ್ಣಯ]

*********

No comments:

Post a Comment