ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, November 20, 2017

Mahabharata Tatparya Nirnaya Kannada 1.37-1.47

ಅವತಾರೇಷು ಯತ್ ಕಿಞ್ಚಿದ್ ದರ್ಶಯೇನ್ನರವದ್ಧರಿಃ ।

ತಚ್ಚಾಸುರಾಣಾಂ ಮೋಹಾಯ ದೋಷಾ ವಿಷ್ಣೋರ್ನ್ನಹಿ ಕ್ವಚಿತ್ ॥೧.೩೭

 

ಅಜ್ಞತ್ವಂ ಪಾರವಶ್ಯಂ ವಾ ವೇಧಭೇದಾದಿಕಂ ತಥಾ ।

ತಥಾ ಪ್ರಾಕೃತದೇಹತ್ವಂ ದೇಹತ್ಯಾಗಾದಿಕಂ ತಥಾ                 ೧.೩೮

 

ಅನೀಶತ್ವಂ ಚ ದುಃಖಿತ್ವಂ ಸಾಮ್ಯಮನ್ಯೈಶ್ಚ ಹೀನತಾಮ್ ।

ಪ್ರದರ್ಶಯತಿ ಮೋಹಾಯ ದೈತ್ಯಾದೀನಾಂ ಹರಿಃ ಸ್ವಯಮ್    ೧.೩೯

 

ನಮಗೆ  ಪುರಾಣ ಮಹಾಭಾರತ ಇತ್ಯಾದಿ ಗ್ರಂಥಗಳಲ್ಲೂ ಕೂಡಾ  ಭಗವಂತನ ಅವತಾರದ ವಿವರಣೆಯಲ್ಲಿ ದೋಷ ಇದ್ದಂತೆ ಕಂಡು ಬರುತ್ತದೆ. ಅಂತಹ ಸಂದರ್ಭದಲ್ಲಿ  ಏನನ್ನು ಗ್ರಹಿಸಬೇಕು ? ಪುರಾಣಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಇತ್ಯಾದಿ ಪ್ರಶ್ನೆಗಳಿಗೆ ಆಚಾರ್ಯರು ಇಲ್ಲಿ ಉತ್ತರ ನೀಡಿದ್ದಾರೆ.

ನಾರಾಯಣನು ತನ್ನ ಅವತಾರ ರೂಪದಲ್ಲಿ[ರಾಮಾವತಾರ ಮೊದಲಾದ ಅವತಾರಗಳಲ್ಲಿ] ಮನುಷ್ಯರಂತೆ ನಟಿಸಿ ಏನನ್ನು  ತೋರಿಸುತ್ತಾನೋ, ಅದೂ ಕೂಡಾ ದೈತ್ಯರ ಮೋಹಕ್ಕಾಗಿ.  ಯಾವ ಕಾರಣದಿಂದಲೂ ಕೂಡಾ ನಾರಾಯಣನಿಗೆ ದೋಷವೆಂಬುದು ಇಲ್ಲ.

ಯಾವ-ಯಾವ  ರೀತಿ ಭಗವಂತ ದೈತ್ಯರನ್ನು ಮೋಹಗೊಳಿಸುತ್ತಾನೆ  ಎನ್ನುವುದನ್ನು ಆಚಾರ್ಯರು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ: 

ಅಜ್ಞಾನಿಯಂತೆ ಕಾಣಿಸುವುದು [ಉದಾಹರಣೆಗೆ : ಶ್ರೀರಾಮಚಂದ್ರ  ‘ನಾನ್ಯಾರು’ ಎಂದು ದೇವತೆಗಳನ್ನು ಕೇಳಿರುವುದು],  ಪ್ರಮಾದದಿಂದ  ತಿಳಿಯದೇ  ಏನೋ ಮಾಡಿಬಿಟ್ಟೆ ಅನ್ನುವ ರೀತಿಯಲ್ಲಿ ತೋರಿಸಿಕೊಳ್ಳುವುದು,   ಯುದ್ಧದಲ್ಲಿ ಪೆಟ್ಟುಬಿದ್ದಂತೆ ತೋರಿಸಿಕೊಳ್ಳುವುದು, [ಉದಾಹರಣೆಗೆ: ಮಹಾಭಾರತಯುದ್ಧದಲ್ಲಿ ಭೀಷ್ಮಾಚಾರ್ಯರ ಬಾಣದಿಂದ ಭಗವಂತನ ಮೈಯಲ್ಲಿ ರಕ್ತ ಬಂದಂತೆ  ಕಾಣುವುದು],  ತಂದೆ-ತಾಯಿಯರ  ಸಂಸರ್ಗದಲ್ಲಿ ಒಂಬತ್ತು ತಿಂಗಳು ಗರ್ಭವಾಸ ಮಾಡಿ  ಹುಟ್ಟಿದಂತೆ ತೋರುವುದು[ಉದಾಹರಣೆಗೆ: ಶ್ರೀರಾಮ-ಶ್ರೀಕೃಷ್ಣಾವತಾರ] ದೇಹತ್ಯಾಗ ಮಾಡಿದಂತೆ ತೋರುವುದು[ಉದಾಹರಣೆಗೆ: ಶ್ರೀಕೃಷ್ಣ],  ನನ್ನ ಕೈಯಲ್ಲಿ ಏನೂ ಮಾಡಲಾಗಲಿಲ್ಲ ಎಂದು ಹೇಳುವುದು [ಪಾಂಡವರ ವನವಾಸ ಪ್ರಸಂಗದಲ್ಲಿ ಶ್ರೀಕೃಷ್ಣ ಹೇಳುತ್ತಾನೆ: “ಒಂದು ವೇಳೆ, ನಾನು ಅಲ್ಲಿದ್ದಿದ್ದರೆ ಜೂಜನ್ನು ತಡೆಯುತ್ತಿದ್ದೆ.  ಈಗ ಏನೂ ಮಾಡಲಾಗದು. ನೀವು ಕಾಡು ಪಾಲಾದಿರಿ, ಬಹಳ ದುಃಖ ಆಗುತ್ತಿದೆ” ಎಂದು.  ಭಗವಂತ ಅಸಮರ್ಥ ಎನ್ನುವುದಿದೆಯೇ?  ಇಲ್ಲಾ, ಆದರೂ ತೋರಿಸುತ್ತಾನೆ],  ಅಳುವುದು/ ದುಃಖಿಸುವುದು[ಸೀತಾಪಹರಣ ಕಾಲದಲ್ಲಿ  “ಓ ಸೀತೆ, ನೀನು  ಎಲ್ಲಿದ್ದೀಯಾ”  ಎಂದು ಶ್ರೀರಾಮ ದುಃಖಿಸಿರುವುದು], ಯುದ್ಧದಲ್ಲಿ ಸಮನಾಗಿ ತೋರಿಸಿಕೊಳ್ಳುವುದು,  ಏನು ಮಾಡಿದರೂ ಗೆಲ್ಲಲಾಗಲಿಲ್ಲ ಅನ್ನುವಂತೆ ತೋರುವುದು [ಪರಶುರಾಮ ಭೀಷ್ಮಾಚಾರ್ಯರೊಡನೆ ಹಲವಾರು ದಿವಸಗಳ ತನಕ ಹೋರಾಡಿ, ನಿನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದುದು],  ಕೆಲವೊಮ್ಮೆ ತಾನು ಸೋತಂತೆ ತೋರಿಸಿಕೊಳ್ಳುವುದು, ಇತ್ಯಾದಿ ಲೀಲೆಗಳೆಲ್ಲವನ್ನೂ ಭಗವಂತ ದೈತ್ಯರೇ ಮೊದಲಾದವರಿಗೆ ಮೋಹಕ್ಕಾಗಿ ತೋರಿಸುತ್ತಾನೆ. ವಸ್ತುತಃ ಇದ್ಯಾವುದೂ ಅವನಿಗಿಲ್ಲ.   

 

ನ ತಸ್ಯ ಕಶ್ಚಿದ್ ದೋಷೋsಸ್ತಿ ಪೂರ್ಣ್ಣಾಖಿಲಗುಣೋ ಹ್ಯಸೌ ।

ಸರ್ವದೇಹಸ್ಥರೂಪೇಷು ಪ್ರಾದುರ್ಭಾವೇಷು ಚೇಶ್ವರಃ ॥೧.೪೦

 

ಅವನಿಗೆ ಯಾವ ದೋಷವೂ ಕೂಡಾ ಇಲ್ಲ. ಈ ನಾರಾಯಣನು ಎಲ್ಲಾ ಗುಣಗಳಿಂದ ತುಂಬಿದ್ದಾನಷ್ಟೆ.  ಎಲ್ಲಾ ಜೀವರ ದೇಹದಲ್ಲಿ ಅಂತರ್ಯಾಮಿಯಾಗಿರುವ  ರೂಪದಲ್ಲಿಯೂ, ಪ್ರಾದುರ್ಭಾವದಲ್ಲಿಯೂ ಪರಮಾತ್ಮನಿಗೆ ಭೇದವಿಲ್ಲ.

 

ಅತ್ಯಂತ ಅಧಮನಾದ ಒಬ್ಬ ಜೀವನೊಳಗಿರುವ ಭಗವಂತ ಮತ್ತು   ಅತ್ಯಂತ ಉತ್ಕೃಷ್ಟನಾದ ಜೀವನೊಳಗಿರುವ ಭಗವಂತನಲ್ಲಿ ವ್ಯೆತ್ಯಾಸವಿಲ್ಲ. ಭಗವಂತ ಅಲ್ಲಿಯೂ, ಇಲ್ಲಿಯೂ ಒಂದೇ. ಇದನ್ನು ಗೀತೆಯಲ್ಲಿ ಶ್ರೀಕೃಷ್ಣ ಸ್ಪಷ್ಟವಾಗಿ “ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ(೫.೧೮)” ಎಂದು ಹೇಳಿದ್ದಾನೆ.  ಹೀಗಾಗಿ ಎಲ್ಲರ  ಅಂತರ್ಯಾಮಿಯಾಗಿರುವ ನಾರಾಯಣನು ಒಂದೇ ತರಹದ ಗುಣವುಳ್ಳವನಾಗಿದ್ದಾನೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.    

 

 

ಬ್ರಹ್ಮಾದ್ಯಭೇದಃ ಸಾಮ್ಯಂ ವಾ ಕುತಸ್ತಸ್ಯ ಮಹಾತ್ಮನಃ ।

ಯದೇವಂವಾಚಕಂ ಶಾಸ್ತ್ರಂ ತದ್ಧಿ ಶಾಸ್ತ್ರಂ ಪರಂ ಮತಮ್ ॥೧.೪೧

 

ನಿರ್ಣ್ಣಯಾಯೈವ ಯತ್ ಪ್ರೋಕ್ತಂ ಬ್ರಹ್ಮಸೂತ್ರಂ ತು ವಿಷ್ಣುನಾ ।

ವ್ಯಾಸರೂಪೇಣ ತದ್ ಗ್ರಾಹ್ಯಂ ತತ್ರೋಕ್ತಾಃ ಸರ್ವನಿರ್ಣ್ಣಯಾಃ ॥೧.೪೨

 

ಬ್ರಹ್ಮಾದಿಗಳೊಂದಿಗೆ ಅಭೇದವಾಗಲೀ, ಸಾಮ್ಯವಾಗಲೀ  ಆ ಸರ್ವೋತ್ಕೃಷ್ಟ ಭಗವಂತನಿಗೆ ಎಲ್ಲಿಂದ?  ಈ ರೀತಿಯಾಗಿ ಸ್ಫುಟವಾಗಿ ಹೇಳುವ ಶಾಸ್ತ್ರ ಏನಿದೆಯೋ, ಆ ಶಾಸ್ತ್ರವೇ ಉತ್ಕೃಷ್ಟಶಾಸ್ತ್ರ.

ಈ ಎಲ್ಲಾ  ಸಂಗತಿಗಳ ನಿರ್ಣಯಕ್ಕಾಗಿಯೇ ವೇದವ್ಯಾಸರಿಂದ ಬ್ರಹ್ಮಸೂತ್ರವು ಹೇಳಲ್ಪಟ್ಟಿದೆ. ಆ ಬ್ರಹ್ಮಸೂತ್ರವು  ಗ್ರಹಣೀಯವಾಗಿದೆ.  ಎಲ್ಲಾ ಶಾಸ್ತ್ರದ ವಾಕ್ಯಗಳ ನಿರ್ಣಯವು ಅಲ್ಲಿಯೇ ಹೇಳಲ್ಪಟ್ಟಿದೆ.  ಅದರಿಂದಾಗಿ ಬ್ರಹ್ಮಸೂತ್ರ ಎನ್ನುವುದು ಪರವಿದ್ಯೆ, ಪರಶಾಸ್ತ್ರ. ಇಂತಹ  ಬ್ರಹ್ಮಸೂತ್ರವನ್ನು ಇಟ್ಟುಕೊಂಡು ವೇದಗಳ, ಇತಿಹಾಸ-ಪುರಾಣಗಳ ಮಾತನ್ನು ನಿರ್ಣಯ ಮಾಡಬೇಕು.

 

 ಯಥಾರ್ತ್ಥವಚನಾನಾಂ ಚ ಮೋಹಾರ್ತ್ಥಾನಾಂ ಚ ಸಂಶಯಮ್ ।

ಅಪನೇತುಂ ಹಿ ಭಗವಾನ್ ಬ್ರಹ್ಮಸೂತ್ರಮಚೀಕ್ಲ್ಪತ್ ॥೧.೪೩

 

ತಸ್ಮಾತ್ ಸೂತ್ರಾರ್ತ್ಥಮಾಗೃಹ್ಯ ಕರ್ತ್ತವ್ಯಃ ಸರ್ವನಿರ್ಣ್ಣಯಃ ।

ಸರ್ವದೋಷವಿಹೀನತ್ವಂ ಗುಣೈಃ ಸರ್ವೈರುದೀರ್ಣ್ಣತಾ ॥೧.೪೪

 

ಅಭೇದಃ ಸರ್ವರೂಪೇಷು ಜೀವಭೇದಃ ಸದೈವ ಚ ।

ವಿಷ್ಣೋರುಕ್ತಾನಿ ಸೂತ್ರೇಷು ಸರ್ವವೇದೇಡ್ಯತಾ ತಥಾ ೧.೪೫

 

ತಾರತಮ್ಯಂ ಚ ಮುಕ್ತಾನಾಂ ವಿಮುಕ್ತಿರ್ವಿದ್ಯಯಾ ತಥಾ ।

ತಸ್ಮಾದೇತದ್ವಿರುದ್ಧಂ ಯನ್ಮೋಹಾರ್ತ್ಥಂ ತದುದಾಹೃತಮ್ ॥೧.೪೬

 

ತಸ್ಮಾದ್ ಯೇಯೇ ಗುಣಾ ವಿಷ್ಣೋರ್ಗ್ಗ್ರಾಹ್ಯಾಸ್ತೇ ಸರ್ವ ಏವ ಹಿ’ ।

ಇತ್ಯಾದ್ಯುಕ್ತಂ ಭಗವತಾ ಭವಿಷ್ಯತ್ಪರ್ವಣಿ ಸ್ಫುಟಮ್ ॥೧.೪೭

 

ಕೆಲವೊಂದು ವೇದದ ಮಾತುಗಳು ಯಥಾರ್ಥ  ವಚನಗಳಾಗಿರುತ್ತವೆ. ಅಂದರೆ ಅಲ್ಲಿ ಇದ್ದಂತೆ ಹೇಳಿರುತ್ತಾರೆ. ಇನ್ನು  ಕೆಲವೊಂದು ಮಾತುಗಳು  ಮೋಹಕ್ಕಾಗಿಯೇ ಇರುತ್ತವೆ. ಹೀಗಿರುವುದರಿಂದ , ಈ ಎಲ್ಲಾ ಮಾತುಗಳ ಸಂಶಯವನ್ನು ನಾಶ ಮಾಡಲು ವೇದವ್ಯಾಸರು ಬ್ರಹ್ಮಸೂತ್ರವನ್ನು ರಚಿಸಿದರು. ಈ ಕಾರಣದಿಂದ ಸೂತ್ರದ ಅರ್ಥವನ್ನು ಸ್ವೀಕರಿಸಿ, ಎಲ್ಲಾ ಪ್ರಮೇಯಗಳ ನಿರ್ಣಯವನ್ನು ಮಾಡಬೇಕು. ಯಾವುದೇ  ದೋಷಗಳು ದೇವರಿಗೆ ಇಲ್ಲ ಎಂದೂ, ಎಲ್ಲಾ ಗುಣಗಳಿಂದಲೂ ದೇವರು ಸಂಪನ್ನನಾಗಿದ್ದಾನೆ ಎಂದೂ,  ಪರಮಾತ್ಮನ ಅವತಾರ ರೂಪ ಮತ್ತು ಜೀವರೊಳಗಣ ಅಂತರ್ಯಾಮಿರೂಪ ಮೊದಲಾದ ಎಲ್ಲಾ ರೂಪಗಳಲ್ಲಿಯೂ ಭೇದವಿಲ್ಲವೆಂದೂ,  ಯಾವಾಗಲೂ ಜೀವರಲ್ಲಿ ಭೇದವಿದೆ ಎಂದೂ,  ಎಲ್ಲಾ ವೇದಗಳಿಂದ ನಾರಾಯಣನೇ ಪ್ರತಿಪಾದ್ಯನೆಂದೂ ಬ್ರಹ್ಮಸೂತ್ರದಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ಮುಕ್ತರಲ್ಲಿಯೂ ತಾರತಮ್ಯವಿದೆ ಎಂದೂ, ಪರಮಾತ್ಮನ ಅಪರೋಕ್ಷ ಜ್ಞಾನದಿಂದ ವಿಮುಕ್ತಿ ಎಂದೂ ಸೂತ್ರದಲ್ಲಿ ಸ್ಫುಟವಾಗಿ ಹೇಳಿದ್ದಾರೆ.  ಆ ಕಾರಣದಿಂದ ಇದಕ್ಕೆ ವಿರುದ್ಧವಾದುದು ಯಾವುದೋ ಅದು ಮೋಹಕ್ಕಾಗಿ  ಹೇಳಲಾಗಿದೆ ಎಂದೂ ಹೇಳಲ್ಪಟ್ಟಿದೆ. ಆ ಕಾರಣದಿಂದ ಯಾವ್ಯಾವ ಒಳ್ಳೆಯಗುಣಗಳು ಎಂದಿವೆಯೋ, ಅವೆಲ್ಲವೂ ಸ್ವೀಕರಿಸಲ್ಪಡಬೇಕಾದವುಗಳು. ಇವೇ ಮೊದಲಾದವುಗಳನ್ನು ವೇದವ್ಯಾಸರಿಂದ ಭವಿಷ್ಯತ್ಪರ್ವದಲ್ಲಿ (ಹರಿವಂಶದ ಒಂದು ಗ್ರಂಥ) ಸ್ಪಷ್ಟವಾಗಿ ಹೇಳಲ್ಪಟ್ಟಿದೆ. 

No comments:

Post a Comment