ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 11, 2017

Mahabharata Tatparya Nirnaya Kannada 1.16-1.25

ತಾಭ್ಯಶ್ಚ ತೇ ಶತಗುಣೈರ್ದ್ದಶತೋ ವರಿಷ್ಠಾಃ ಪಞ್ಚೋತ್ತರೈರಪಿ ಯಥಾ ಕ್ರಮತಃ ಶ್ರುತಿಸ್ಥಾಃ

ಶಬ್ದೋ ಬಹುತ್ವವಚನಃ ಶತಮಿತ್ಯತಶ್ಚ ಶ್ರುತ್ಯನ್ತರೇಷು ಬಹುಧೋಕ್ತಿವಿರುದ್ಧತಾ ನ ೧.೧೬

 

ಆ ಪುರುಷರು ಸ್ತ್ರೀಯರಿಗಿಂತ  ನೂರರಿಂದ ಹಿಡಿದು ಹತ್ತು ಪಟ್ಟು ಗುಣಗಳವರೆಗೆ ಮಿಗಿಲು. ಐದುಪಟ್ಟು ಗುಣಗಳಿಂದಲೂ ಮಿಗಿಲಾದವರಿದ್ದಾರೆ.  ಬೇರೆಬೇರೆ ಶ್ರುತಿಗಳಲ್ಲಿ ಬೇರೆಬೇರೆ  ಪಟ್ಟು ಗುಣಗಳ  ತಾರತಮ್ಯವನ್ನು ಹೇಳಿದ್ದಾರೆ.  ‘ಶಬ್ದೋ ಬಹುತ್ವವಚನಃ’ ಎನ್ನುವಂತೆ  ಅಲ್ಲಿ ಬಳಕೆಯಾದ  ಬೇರೆಬೇರೆ ಪದಗಳು ಬಹುತ್ವವನ್ನು ಹೇಳುವ ಶಬ್ದಗಳು ಅಷ್ಟೇ .  ಅದರಿಂದಾಗಿ ಬೇರೆಬೇರೆ  ವೇದಾದಿಗಳಲ್ಲಿ ಅನೇಕ ರೀತಿಯಾಗಿ  ಗುಣಗಳನ್ನು ಹೇಳಿದ್ದುದರಲ್ಲಿ ಯಾವ ವಿರೋಧವೂ ಇಲ್ಲ.

 

ತೇಷಾಂ ಸ್ವರೂಪಮಿದಮೇವ ಯತೋsಥ ಮುಕ್ತಾ ಅಪ್ಯೇವಮೇವ ಸತತೋಚ್ಚವಿನೀಚರೂಪಾಃ

ಶಬ್ದಃ ಶತಂ ದಶ ಸಹಸ್ರಮಿತಿ ಸ್ಮ ಯಸ್ಮಾತ್ ತಸ್ಮಾನ್ನ ಹೀನವಚನೋsಥ ತತೋsಗ್ರ್ಯರೂಪಾಃ ೧.೧೭

 

ಈ ಜೀವರ ಸ್ವರೂಪವು ಇದೇ ಆಗಿದೆ.  ಯಾವ ಕಾರಣದೆಸೆಯಿಂದ ಮುಕ್ತಿಯನ್ನು ಪಡೆದರೂ ಕೂಡಾ, ಮೋಕ್ಷದಲ್ಲಿಯೂ   ಕೂಡಾ ಜೀವರು ಈ ರೀತಿ  *ತಾರತಮ್ಯದಲ್ಲೇ ಇರುತ್ತಾರೆ.

ನೂರು-ಹತ್ತು-ಸಾವಿರ ಇತ್ಯಾದಿ ಎಲ್ಲಾ ಶಬ್ದಗಳೂ ಕೂಡಾ ‘ಬಹಳ’ ಎನ್ನುವ  ಅರ್ಥವನ್ನು ಹೇಳುತ್ತವೆ. ಇನ್ನೂ ಹೇಳಬೇಕು ಅಂದರೆ ಅವು ಆ ಸಂಖ್ಯೆಗಿಂತ ಕಡಿಮೆಯನ್ನಂತೂ ಹೇಳುವುದಿಲ್ಲ.  [ಉದಾಹರಣೆಗೆ ನಾವು ‘ನೂರಾರು’ ಎನ್ನುವ ಪದವನ್ನು ಉಪಯೋಗಿಸುತ್ತೇವೆ. ಇದರ ಅರ್ಥ ನೂರಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ಆಗಬಹುದು.  ಆದರೆ ನೂರಕ್ಕಿಂತ ಕೆಳಗಿನ ಸಂಖ್ಯೆಗೆ ಈ ಪದ ಬಳಕೆಯಾಗುವುದಿಲ್ಲ]

[*ತಾರತಮ್ಯ= ಪಕ್ಷಪಾತ(partiality) ಎನ್ನುವ ತಪ್ಪು ಅರ್ಥ ಇಂದು ಬಳಕೆಯಲ್ಲಿದೆ. ಆದರೆ ತಾರತಮ್ಯ ಎಂದರೆ hierarchy ಎಂದಷ್ಟೇ ಅರ್ಥ].

 

ಏವಂ ನರೋತ್ತಮಪರಾಸ್ತು ವಿಮುಕ್ತಿಯೋಗ್ಯಾ ಅನ್ಯೇ ಚ ಸಂಸೃತಿಪರಾ ಅಸುರಾಸ್ತಮೋಗಾಃ

ಏವಂ ಸದೈವ ನಿಯಮಃ ಕ್ವಚಿದನ್ಯಥಾ ನ ಯಾವನ್ನ ಪೂರ್ತ್ತಿರುತ ಸಂಸೃತಿಗಾಃ ಸಮಸ್ತಾಃ ೧.೧೮   

 

ಹೀಗೆ ಸಾತ್ತ್ವಿಕರೇ ಮೊದಲಾದ  ವಿಮುಕ್ತಿಯೋಗ್ಯರು, ಸಂಸಾರದಲ್ಲಿರುವವರು, ತಮಸ್ಸಿಗೆ ತೆರಳುವ ಅಸುರರು, ಇವರೆಲ್ಲರೂ ಕೂಡಾ  ತಾರತಮ್ಯದಿಂದಲೇ ಕೂಡಿರುತ್ತಾರೆ. ಈ ತಾರತಮ್ಯ ಎನ್ನುವುದು ನಿಯಮ. ಇದನ್ನು ಬಿಟ್ಟು ಬೇರೆ ರೀತಿಯಾಗಿ ಆಗುವುದೇ ಇಲ್ಲ. ಎಲ್ಲಿಯ ತನಕ ಸಂಸಾರದಲ್ಲಿರುವವರು ಮುಗಿಯುವುದಿಲ್ಲವೋ ಅಲ್ಲಿಯ ತನಕ ಈ ನಿಯಮ ಇರುತ್ತದೆ. 

 

ಪೂರ್ತ್ತಿಶ್ಚ ನೈವ ನಿಯಮಾದ್ ಭವಿತಾ ಹಿ ಯಸ್ಮಾತ್ ತಸ್ಮಾತ್ ಸಮಾಪ್ತಿಮಪಿ ಯಾನ್ತಿ ನ ಜೀವಸಙ್ಘಾಃ

ಆನನ್ತ್ಯಮೇವ ಗಣಶೋsಸ್ತಿ ಯತೋ ಹಿ ತೇಷಾಮಿತ್ಥಂ ತತಃ ಸಕಲಕಾಲಗತಾ ಪ್ರವೃತ್ತಿಃ ೧.೧೯

 

ಜೀವರು ಆಗಿ-ಮುಗಿಯುವುದು ಎಂಬುವುದು  ಇಲ್ಲವೇ ಇಲ್ಲ. ಆ ಕಾರಣದಿಂದ ಜೀವರು ಅನಂತವಾಗಿಯೇ ಇರುತ್ತಾರೆ. ಅಂತಹ ಜೀವರ ಆನಂತ್ಯವು ಗುಂಪು-ಗುಂಪಾಗಿಯೂ ಇರುತ್ತದೆ. [ಉದಾಹರಣೆಗೆ ಬ್ರಹ್ಮದೇವರ ಪದವಿಗೆ ಬರುವ ಯೋಗ್ಯತೆಯುಳ್ಳ ಜೀವರು ಅನಂತವಾಗಿದ್ದಾರೆ, ಗರುಡ ದೇವನ ಪದವಿಗೆ ಬರಲು ಯೋಗ್ಯರಾದ ಜೀವರೂ ಅನಂತವಾಗಿದ್ದಾರೆ. ಹಾಗೇ ಒಂದೊಂದು ಗಣದಲ್ಲಿಯೂ ಅನಂತ ಜೀವರಿರುತ್ತಾರೆ]. ಎಲ್ಲಾ ಕಾಲದಲ್ಲಿಯೂ ಇಂಥವರು ಇದ್ದೇ ಇರುತ್ತಾರೆ.  ಇದೇ ರೀತಿಯ ಪ್ರವೃತ್ತಿ ಇರುತ್ತದೆ.  ಅದರಿಂದಾಗಿ ಅದು ಮುಗಿಯುವುದೇ ಇಲ್ಲ. 

 

ಏತೈಃ ಸುರಾದಿಭಿರತಿಪ್ರತಿಭಾದಿಯುಕ್ತೈರ್ಯ್ಯಕ್ತೈಃ ಸಹೈವ ಸತತಂ ಪ್ರವಿಚಿನ್ತಯದ್ಭಿಃ

ಪೂರ್ತ್ತೇರಚಿನ್ತ್ಯಮಹಿಮಃ ಪರಮಃ ಪರಾತ್ಮಾ ನಾರಾಯಣೋsಸ್ಯ ಗುಣವಿಸ್ತೃತಿರನ್ಯಗಾ ಕ್ವ ೧.೨೦

 

ಅತ್ಯಂತ ಪ್ರತಿಭೆ ಮೊದಲಾದವುಗಳಿಂದ ಕೂಡಿರುವ ದೇವತೆಗಳೆಲ್ಲರೂ ಒಟ್ಟಿಗೆ ಸೇರಿ ಯಾವಾಗಲೂ ಚಿಂತನೆ ಮಾಡಿದರೂ, ಪರಮಾತ್ಮನ ಗುಣಗಳು ಪೂರ್ತಿಯಾಗುವುದಿಲ್ಲ. ಹೀಗಾಗಿ ಜೀವರೂ ಅನಂತ, ದೇಶವೂ ಅನಂತ, ಜೀವರ ಕ್ರಿಯೆ ಮತ್ತು ಪರಮಾತ್ಮನ ಕ್ರಿಯೆಗಳಿಂದ ಉಂಟಾಗುವ ಕಾಲವೂ ಅನಂತ. ಪರಮಾತ್ಮನ ಗುಣವೂ ಅನಂತ. ಅದರಿಂದಾಗಿ, ಉತ್ಕೃಷ್ಟನಾಗಿರುವ ನಾರಾಯಣನ ಗುಣಗಳನ್ನು ಪೂರ್ತಿಯಾಗಿ ಎಣಿಸಲು ಸಾಧ್ಯವಿಲ್ಲ.

 

ಸಾಮ್ಯಂ ನಚಾಸ್ಯ ಪರಮಸ್ಯ ಚ ಕೇನ ಚಾsಪ್ಯಂ ಮುಕ್ತೇನ ಚ ಕ್ವಚಿದತಸ್ತ್ವಭಿದಾ ಕುತೋsಸ್ಯ

ಪ್ರಾಪ್ಯೇತ ಚೇತನಗಣೈಃ ಸತತಾಸ್ವತನ್ತ್ರೈರ್ನ್ನಿತ್ಯಸ್ವತನ್ತ್ರವಪುಷಃ ಪರಮಾತ್ ಪರಸ್ಯ ೧.೨೧

 

ಈ ನಾರಾಯಣನಿಗೆ ಯಾರೂ ಕೂಡಾ ಸಮರಿಲ್ಲ. ಮುಕ್ತನೂ ಕೂಡಾ.  ಸಮವೇ ಆಗುವುದಿಲ್ಲ  ಅಂದಮೇಲೆ ಅವನಿಂದ ಅಭೇದ ಎಲ್ಲಿ?  ಯಾರೂ ಕೂಡಾ ಅವನ ಸಮಕ್ಕೆ ಬರಲು ಸಾಧ್ಯವೇ ಇಲ್ಲ. ಎಲ್ಲರೂ ಯಾವಾಗಲೂ ಕೂಡಾ ಅಸ್ವತಂತ್ರರಾಗಿರುತ್ತಾರೆ. ಪರಮಾತ್ಮ ಮಾತ್ರ  ನಿತ್ಯವಾಗಿಯೂ ಸ್ವತಂತ್ರ. ಆತ ನಿತ್ಯವಾಗಿಯೂ ಗುಣಗಳಿಂದ ತುಂಬಿರುತ್ತಾನೆ.  ಜೀವ ನಿತ್ಯವಾಗಿಯೂ ಅಸ್ವತಂತ್ರ ಮತ್ತು ಅವನ ಗುಣಗಳಿಗೆ ಮಿತಿ ಇದೆ.  [ಹೀಗಿರುವಾಗ ಇಬ್ಬರು ಹೇಗೆ ಒಂದೇ ಆಗುತ್ತಾರೆ?]

 

ಅರ್ತ್ಥೋsಯಮೇವ ನಿಖಿಲೈರಪಿ ವೇದವಾಕ್ಯೈ ರಾಮಾಯಣೈಃ ಸಹಿತಭಾರತಪಞ್ಚರಾತ್ರೈಃ

ಅನ್ಯೈಶ್ಚ ಶಾಸ್ತ್ರವಚನೈಃ ಸಹ ತತ್ವಸೂತ್ರೈರ್ನ್ನಿರ್ಣ್ಣೀಯತೇ ಸಹೃದಯಂ ಹರಿಣಾ ಸದೈವ ೧.೨೨

 

ಇದೇ ಅರ್ಥವು ಎಲ್ಲಾ ವೇದದ ಮಾತುಗಳಿಂದಲೂ, ರಾಮಾಯಣದಿಂದಲೂ,  ಭಾರತ ಪಂಚರಾತ್ರ ವಾಕ್ಯಗಳಿಂದಲೂ, ಬೇರೆಬೇರೆ ಶಾಸ್ತ್ರದ ಮಾತುಗಳಿಂದಲೂ, ಬ್ರಹ್ಮಸೂತ್ರಾದಿಗಳಿಂದಲೂ ವಿವಕ್ಷಾ- ಪೂರ್ವಕವಾಗಿ ಪರಮಾತ್ಮನಿಂದ ನಿರ್ಣಯಿಸಲ್ಪಟ್ಟಿದೆ.  ಅದನ್ನು ನಾನೀಗ ಹೇಳುತ್ತೇನೆ:

[ಬ್ರಹ್ಮಸೂತ್ರ ಮೊದಲಾದ ಗ್ರಂಥಗಳು  ಹೇಗೆ ಈ ಮುಖ್ಯವಾದ ಸಿದ್ಧಾಂತವನ್ನು ಪ್ರತಿಪಾದನೆ ಮಾಡುತ್ತದೆ ಎನ್ನುವುದನ್ನು ನಾನು ಹೇಳುತ್ತೇನೆ ಎಂದು ತಮ್ಮ ವಿವರಣೆಯನ್ನು ಆಚಾರ್ಯರು ಪ್ರಾರಂಭಿಸಿದ್ದಾರೆ] 

 

[ಇಲ್ಲಿಂದ ಮುಂದಕ್ಕೆ ಬೇರೆಬೇರೆ ಗ್ರಂಥಗಳ ಉಲ್ಲೇಖದ ಮುಖೇನ ಪ್ರತಿಯೊಂದು ವಿಷಯವನ್ನು ಪ್ರಮಾಣಸಹಿತ ಆಚಾರ್ಯರು  ಸ್ಪಷ್ಟಪಡಿಸುವುದನ್ನು ಕಾಣುತ್ತೇವೆ. ಹೀಗಾಗಿ ಮುಂದಿನ ಶ್ಲೋಕಗಳಲ್ಲಿ ಬೇರೆಬೇರೆ ಗ್ರಂಥಗಳಲ್ಲಿ ಹೇಳಲ್ಪಟ್ಟ ಮಾತುಗಳೇ ಕಾಣಸಿಗುತ್ತದೆ].

 

ನಾರಾಯಣಸ್ಯ ನ ಸಮಃ ಪುರುಷೋತ್ತಮೋsಹಂ ಜೀವಾಕ್ಷರೇ ಹ್ಯತಿಗತೋsಸ್ಮಿ ತತೋsನ್ಯದಾರ್ತ್ತಮ್

ಮುಕ್ತೋಪಸೃಪ್ಯ  ಇಹ ನಾಸ್ತಿ ಕುತಶ್ಚ ಕಶ್ಚಿನ್ನಾನೇವ ಧರ್ಮ್ಮಪೃಥಗಾತ್ಮದೃಗೇತ್ಯಧೋ ಹಿ ೧.೨೩

 

ನಾರಾಯಣಸ್ಯ ನ ಸಮಃ   ಅಂದರೆ ‘ನಾರಾಯಣನಿಗೆ ಸಮನಾದವನು ಇನ್ನೊಬ್ಬನಿಲ್ಲ’ ಎಂದರ್ಥ.   ‘ನಾಸ್ತಿ ನಾರಾಯಣ ಸಮಂ ನ ಭೂತಂ ನ ಭವಿಷ್ಯತಿ’ ಅನ್ನುವ ಮಹಾಭಾರತದ  ಮಾತನ್ನು(ಆದಿಪರ್ವ ೧.೩೪) ಇಲ್ಲಿ  ಆಚಾರ್ಯರು ಕಟಾಕ್ಷೀಕರಿಸಿದ್ದಾರೆ.

ಪುರುಷೋತ್ತಮೋsಹಂ  ಜೀವಾಕ್ಷರೇ ಹ್ಯತಿಗತೋsಸ್ಮಿ :  ಇದು ‘ಯಸ್ಮಾತ್ ಕ್ಷರಮತೀತೋSಹಮಕ್ಷರಾದಪಿ ಚೋತ್ತಮಃ । ಅತೋSಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ  ಎನ್ನುವ ಗೀತೆಯ(೧೫.೧೮) ಮಾತಿನ ಸಂಗ್ರಹ ರೂಪ.  ‘ನಾನು ಪುರುಷರಲ್ಲಿಯೇ ಉತ್ತಮನಾಗಿದ್ದೇನೆ . ಅಕ್ಷರ ಪ್ರಕೃತಿಯನ್ನೂ, ಬ್ರಹ್ಮಾದಿ  ಕ್ಷರ ಪ್ರಕೃತಿಯನ್ನೂ ದಾಟಿ ನಿಂತಿದ್ದೇನೆ’  ಎಂದು ಗೀತಾಚಾರ್ಯನಾದ ಶ್ರೀಕೃಷ್ಣನೇ ಹೇಳಿದ್ದಾನೆ.

ತತೋsನ್ಯದಾರ್ತಮ್ : ಇದು *ಉಪನಿಷತ್ತಿನ ಮಾತು.  “ಆ ಪರಮಾತ್ಮನಿಗಿಂತ ವಿಲಕ್ಷಣವಾಗಿರುವ ಪ್ರಪಂಚವೆಲ್ಲವೂ ಕೂಡಾ ದುಃಖ ಪೀಡಿತವಾಗಿದೆ” ಎನ್ನುವುದು ಈ ಮಾತಿನ ಅರ್ಥ. ಅಂದರೆ ಪರಮಾತ್ಮನಿಗೆ ಸುಖವೇ ಇದೆ.  ಅವನಿಗಿಂತ ವಿಲಕ್ಷಣವಾದ ಈ ಜೀವರು ದುಃಖವನ್ನು ಹೊಂದಿದ್ದಾರೆ ಎಂದರ್ಥ.

ಮುಕ್ತೋಪಸೃಪ್ಯ   ಇದು ‘ಮುಕ್ತಾನಾಂ ಪರಮಾಗತಿಃ’ ಅನ್ನುವ ವಿಷ್ಣು ಸಹಸ್ರನಾಮವನ್ನ ವಿಶೀಕರಿಸುತ್ತದೆ.

 ಇಹ ನಾಸ್ತಿ ಕುತಶ್ಚ ಕಶ್ಚಿತ್:  ಇದು ‘ನೇಹ ನಾನಾಸ್ತಿ ಕಿಂಚನ’  ಎನ್ನುವ ವೇದ ವಾಕ್ಯವನ್ನು ಕಟಾಕ್ಷೀಕರಿಸುತ್ತದೆ. ಪರಮಾತ್ಮನಲ್ಲಿ(ಆತನ ಯಾವುದೇ ರೂಪದಲ್ಲಿ ) ಯಾವುದೇ ರೀತಿಯಾದ ಭೇದವೂ ಇಲ್ಲ ಎನ್ನುವುದು ಈ ಮಾತಿನ ಅರ್ಥ. 

ಶ್ರುತಿಗಳಲ್ಲಿ ಹೇಳುವಂತೆ: ಯಾರು ಪರಮಾತ್ಮನಲ್ಲಿ ಭೇದವನ್ನು ಕಾಣುತ್ತಾನೋ, ಅವನು ಕೆಳಗಡೆ ಸಾಗುತ್ತಾನೆ(ಅಧೋಗತಿಯನ್ನೇ ಹೊಂದುತ್ತಾನೆ).

ಇವೆಲ್ಲವೂ  ಪರಮಾತ್ಮನ  ವೈಲಕ್ಷಣ್ಯ,  ಪೂರ್ಣಗುಣತ್ವ, ಮೊದಲಾದ ಸಂಗತಿಗಳನ್ನು ಸ್ಪಷ್ಟವಾಗಿ ಪ್ರತಿಪಾದನೆ ಮಾಡುತ್ತದೆ. 

[*ಬ್ರಹದಾರಣ್ಯಕ ಉಪನಿಷತ್ತಿನಲ್ಲಿ  ಅತೋsನ್ಯದಾರ್ತಮ್ ಎಂದಿದೆ.  ಆಚಾರ್ಯರು ಇಲ್ಲಿ ತತೋsನ್ಯದಾರ್ತಮ್  ಎಂದು ಹೇಳಿದ್ದಾರೆ. ತತೋsನ್ಯದಾರ್ತಮ್ ಅಂತ ಹೇಳುವ ಇನ್ನೊಂದು ವೇದ ಇದೆ ಎಂದು ತ್ರಿವಿಕ್ರಮ ಪಂಡಿತರು ತತ್ವಪ್ರದೀಪದಲ್ಲಿ ಹೇಳಿದ್ದಾರೆ]. 

 

ಆಭಾಸ ಏವ  ಪೃಥಗೀಶತ ಏಷ ಜೀವೋ  ಮುಕ್ತಸ್ಯ ನಾಸ್ತಿ ಜಗತೋ ವಿಷಯೇ ತು ಶಕ್ತಿಃ

ಮಾತ್ರಾಪರೋsಸಿ ನತು ತೇsಶ್ನುವತೇ ಮಹಿತ್ವಮ್  ಷಾಡ್ಗುಣ್ಯವಿಗ್ರಹ ಸುಪೂರ್ಣ್ಣಗುಣೈಕದೇಹಃ ೧.೨೪

 

ಇಲ್ಲಿ ಎಲ್ಲಾ ಶಾಸ್ತ್ರಗಳ ಮಾತನ್ನೂ ಕೂಡಾ ಆಚಾರ್ಯರು ಚಿಂತಿಸುವಂತೆ  ಮಾಡಿದ್ದಾರೆ. ‘ಓಂ ಆಭಾಸ ಏವ ಚ  ಓಂ’  (ಬ್ರಹ್ಮಸೂತ್ರ ೨.೩.೫೦). ಬ್ರಹ್ಮಸೂತ್ರದ ಈ ಸಾಲು  ಜೀವನು ಪರಮಾತ್ಮನ ಪ್ರತಿಬಿಂಬ  ಎನ್ನುವ ಮಾತನ್ನು ಹೇಳಿದರೆ,  ಓಂ ಪೃಥಗುಪದೇಶಾತ್ ಓಂ (೨.೩.೨೮)  ಎನ್ನುವ ಬ್ರಹ್ಮಸೂತ್ರದ ಮಾತು ಜೀವನು ಪರಮಾತ್ಮನಿಂದ ಭಿನ್ನನಾಗಿದ್ದಾನೆ ಎಂದು ಎಲ್ಲಾ ಉಪನಿಷತ್ತುಗಳು ಅನುಶಾಸನ ಮಾಡಿವೆ ಎನ್ನುತ್ತದೆ.

ಓಂ ಜಗದ್ವ್ಯಾಪಾರವರ್ಜಮ್ ಓಂ (ಬ್ರಹ್ಮಸೂತ್ರ ೪.೪.೧೭).  ಮುಕ್ತರಿಗೆ ಜಗತ್ತಿನ ವ್ಯವಹಾರ ವರ್ಜ್ಯ. ಅವರು ಸೃಷ್ಟಿ-ಸ್ಥಿತಿ-ಪ್ರಳಯ ಇತ್ಯಾದಿ ಜಗದ್ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಿಲ್ಲ. ವೇದವ್ಯಾಸರ  ಬ್ರಹ್ಮಸೂತ್ರದ  ಈ ಮಾತನ್ನು ಆಚಾರ್ಯರು  ಅರ್ಥತಃ ವ್ಯಾಖ್ಯಾನ ಮಾಡಿ   ಮುಕ್ತಸ್ಯ ನಾಸ್ತಿ ಜಗತೋ ವಿಷಯೇ ತು ಶಕ್ತಿಃ  ಎಂದು ವಿವರಿಸಿದ್ದಾರೆ.

‘ಮಾತ್ರಾಪರೋsಸಿ ನತು ತೇsಶ್ನುವತೇ ಮಹಿತ್ವಮ್   ಎನ್ನುವ ಆಚಾರ್ಯರ ಮಾತಿನ  ಭಾವ ‘ಪರೋ ಮಾತ್ರಯಾ ತನ್ವಾ ವೃಧಾನ ನ  ತೇ ಮಹಿತ್ವಮನ್ವಶ್ನುವಂತಿ  ಎನ್ನುವ  ಋಗ್ವೇದವಾಣಿಯನ್ನು (೭.೯೯.೧)  ನೆನಪಿಸುತ್ತದೆ. ಇದು ಏನನ್ನು ಹೇಳುತ್ತದೆ ಅಂದರೆ: ‘ದೇವರು ನಮ್ಮ ಪ್ರಜ್ಞೆಯಿಂದಲೂ ಮುಟ್ಟಲಾಗದವನು ಮತ್ತು ನಮ್ಮ  ದೇಹದಿಂದಲೂ ಮುಟ್ಟಲಾಗದವನು’ ಎಂದು.  ಈ ಎರಡರಿಂದಲೂ ಆಚೆ ಇರುವ ಭಗವಂತನ  ಮಹಿಮೆಯನ್ನು ಯಾರೂ ಕೂಡಾ ವ್ಯಾಪಿಸಲಾರರು ಎಂದು ಆಚಾರ್ಯರು ಅನುವಾದಿಸಿದ್ದಾರೆ.

‘ಷಾಡ್ಗುಣ್ಯವಿಗ್ರಹ’ ‘ಸುಪೂರ್ಣಗುಣೈಕದೇಹಃ . ಇದು ಪಂಚರಾತ್ರದ ‘ಜಿತಂ ತೇ ಪುಂಡರೀಕಾಕ್ಷ ಪೂರ್ಣಷಾಡ್ಗುಣ್ಯವಿಗ್ರಹ’  ಎನ್ನುವ ಮಾತನ್ನು ಹೇಳುತ್ತದೆ.  ಆರು ವಿಗ್ರಹವೇ ಮೈವೆತ್ತು ಬಂದವನು ಆ ಭಗವಂತ.  ಗುಣಗಳೇ ದೇವರು ಹೊರತು  ಗುಣ ಬೇರೆ  ದೇವರು ಬೇರೆ ಅಲ್ಲ.  ಅದರಿಂದಾಗಿಯೇ ಅನಾದಿ-ಅನಂತ ಕಾಲದಲ್ಲಿಯೂ ಕೂಡಾ  ದೇವರು ಗುಣಪೂರ್ಣ, ಆನಂದಪೂರ್ಣ.  ಈ ರೀತಿ  ಯಾರು ಉಪಾಸನೆ ಮಾಡುತ್ತಾರೆ ಅವರಿಗೆ ಆನಂದಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ  ಶಾಸ್ತ್ರಕಾರರು.  ಗುಣಗಳೇ ಭಗವಂತನಾಗಿರುವುದರಿಂದ ಜೀವರಂತೆ ಅವನ ಗುಣ ಇಲ್ಲಿಯ ತನಕ ಇರುತ್ತದೆ, ಆನಂತರ ಇರುವುದಿಲ್ಲ ಅನ್ನುವ  ಪ್ರಶ್ನೆ ಮೂಡುವುದಿಲ್ಲ.  ಅದು ಅನಾದಿ-ಅನಂತ.

 

ಮಾಹಾತ್ಮ್ಯದೇಹ  ಸೃತಿಮುಕ್ತಿಗತೇ ಶಿವಶ್ಚ ಬ್ರಹ್ಮಾ ಚ ತದ್ಗುಣಗತೌ ನ ಕಥಞ್ಚನೇಶೌ

ನ ಶ್ರೀಃ ಕುತಸ್ತದಪರೇsಸ್ಯ ಸುಖಸ್ಯ ಮಾತ್ರಾಮಶ್ನನ್ತಿ ಮುಕ್ತಸುಗಣಾಶ್ಚ ಶತಾವರೇಣ ೧.೨೫

 

ಮಾಹಾತ್ಮ್ಯದೇಹ  ಎನ್ನುವ ಈ  ಮಾತನ್ನು ‘ಮಾಹಾತ್ಮ್ಯಶರೀರ’ ಎಂದು  ಮಹಾಭಾರತದ ಶಾಂತಿ ಪರ್ವದಲ್ಲಿ (೩೩೮.೧೭೫) ಹೇಳಲಾಗಿದೆ.  ಅಲ್ಲಿ ನಾರದರು ಪರಮಾತ್ಮನನ್ನು ಕುರಿತು ಸ್ತೋತ್ರ ಮಾಡುವಾಗ ‘ಮಾಹಾತ್ಮ್ಯಶರೀರ’ ಎಂದು  ಸ್ತೋತ್ರ ಮಾಡಿದ್ದಾರೆ.  ಮಧ್ವಾಚಾರ್ಯರು ಆ ಸ್ತೋತ್ರವನ್ನೇ   ‘ಮಾಹಾತ್ಮ್ಯದೇಹ’ ಎಂದು ಇಲ್ಲಿ ಅನುವಾದ ಮಾಡಿಕೊಟ್ಟಿದ್ದಾರೆ.  ಭಗವಂತ ಮಾಹಾತ್ಮ್ಯವೇ ದೇಹವಾಗಿ ಉಳ್ಳವನು ಎನ್ನುವುದು ಈ ಮಾತಿನ ಭಾವಾರ್ಥ.

‘ಸೃತಿ’ ಅಂದರೆ ಸಂಸಾರ. ಸಂಸಾರದಲ್ಲಿಯೂ ದೇವರೇ ಗತಿ,  ಮುಕ್ತಿಯಲ್ಲೂ ಕೂಡಾ ಆ ದೇವರೇ ಗತಿ. ಎರಡೂ ಕಡೆ ಆನಂದವನ್ನೂ, ಜ್ಞಾನವನ್ನೂ ಕೊಡುವವನು ಆ ಭಗವಂತ. ಸಂಸಾರದಲ್ಲಿ ಬರತಕ್ಕಂತಹ ಕಷ್ಟ-ನಷ್ಟ ಇತ್ಯಾದಿಗಳೆಲ್ಲವೂ ಕೂಡಾ ಅವನ ಸಂಕಲ್ಪದಿಂದ ಜೀವರ ಕರ್ಮಕ್ಕನುಗುಣವಾಗಿ ಸಲ್ಲುತ್ತದೆ. ಅದೇ ರೀತಿ ಜೀವಯೋಗ್ಯತೆಗನುಗುಣವಾಗಿರುವ ತಾರತಮ್ಯದಂತೆ   ಮುಕ್ತಿಯಲ್ಲಿಯೂ ಕೂಡಾ ಏನು ಸಲ್ಲಬೇಕೋ  ಅದೇ  ಸಲ್ಲುತ್ತದೆ.  ಈ ಮಾತನ್ನು ವೇದವ್ಯಾಸರು ವಿಷ್ಣುಸಹಸ್ರನಾಮದಲ್ಲಿ  ‘ಮುಕ್ತಾನಾಂ ಪರಮಾಗತಿಃ’ ಎಂದೂ,  ಸ್ಕಾಂದಪುರಾಣದಲ್ಲಿ ‘ಜಯಜಯ ನಾರಾಯಣ ಅಪಾರಭವಸಾಗರೋತ್ತಾರಪರಾಯಣ(ವೈಷ್ಣವ ಖಂಡ, ಪುರುಷೋತ್ತಮ ಕ್ಷೇತ್ರಮಹಾತ್ಮ್ಯೇ’  ೨೦.೨೬) ಎಂದೂ ವಿವರಿಸಿದ್ದಾರೆ. ಇದನ್ನೇ ಆಚಾರ್ಯರು  ‘ಸೃತಿಮುಕ್ತಿಗತೇ’ ಎಂದು ಇಲ್ಲಿ ಸಂಗ್ರಹಿಸಿ ನಮಗೆ ನೀಡಿದ್ದಾರೆ.

ತ್ರಿಮೂರ್ತಿಗಳು ಒಂದೇ ಎನ್ನುವ ವಾದವೊಂದಿದೆ.  ಆದರೆ  ಅದು ಸಾಧುವಲ್ಲ.  ಅದನ್ನ ನಿರಾಕರಣೆ ಮಾಡಲು ಅನೇಕ ಶಾಸ್ತ್ರ ಪ್ರಮಾಣಗಳು ಸಿಗುತ್ತವೆ.  ಅದರಲ್ಲಿ ಒಂದು ಪ್ರಮಾಣ ಹೀಗಿದೆ: ಭಾಗವತದಲ್ಲಿ ಹೇಳುವಂತೆ: ‘ನಾಂತಂ ಗುಣನಾಮಗುಣಸ್ಯ ಜಗ್ಮುರ್ಲೋಕೇಶ್ವರಾ ಯೇ ಭವಪಾದ್ಮ ಮುಖ್ಯಾಃ’ (೧.೧೮. ೧೪).  ಇಲ್ಲಿ ರುದ್ರ-ಬ್ರಹ್ಮಾದಿಗಳೇ  ತ್ರಿಗುಣಗಳಿಲ್ಲದ  ಪರಮಾತ್ಮನ  ಗುಣವನ್ನು ಪೂರ್ತಿಯಾಗಿ  ತಿಳಿಯಲಿಲ್ಲ ಎಂದಿದ್ದಾರೆ. ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ,  ಪರಮಾತ್ಮನಿಗಿಂತ ರುದ್ರ-ಬ್ರಹ್ಮಾದಿಗಳು ಕೆಳಗಿನವರು ಮತ್ತು  ಪರಮಾತ್ಮ ಎಲ್ಲರಿಗಿಂತ ಹಿರಿಯ ಎಂದು.  ಇದು  ಪರಮಾತ್ಮ ಮತ್ತು ಜೀವಾತ್ಮರ ನಡುವಿನ ಭೇದವನ್ನು ಸ್ಪಷ್ಟಪಡಿಸುತ್ತದೆ.

ಯಾವುದೇ ಇಬ್ಬರು ವ್ಯಕ್ತಿಗಳಿಗೆ ಭೇದ ಬರುವುದು ಗುಣಗಳಿರುವುದರಿಂದ.  ನಮ್ಮ ಅನುಭವದ ಮಿತಿಯಲ್ಲೇ  ಇರುವ ಆ ಗುಣಗಳನ್ನೇ ಸುಳ್ಳು ಎಂದು ಕಲ್ಪನೆ ಮಾಡಲು ಸಾಧ್ಯವಿಲ್ಲ. ಯಾವಾಗ  ಗುಣಗಳು ಸುಳ್ಳಲ್ಲವೋ, ಆಗ ಅಭೇದ ಅಸಾಧ್ಯ.

ಶ್ರೀಲಕ್ಷ್ಮಿಯೂ ಕೂಡಾ ಅನೇಕ ಗುಣಗಳಲ್ಲಿ  ಪರಮಾತ್ಮನಿಗಿಂತ ನ್ಯೂನಳಾಗಿರುವುದರಿಂದ ಪರಮಾತ್ಮನಷ್ಟು ಸುಖವನ್ನು ಆಕೆ ಹೊಂದಿರುವುದಿಲ್ಲ. ಹೀಗಿರುವಾಗ ಉಳಿದ ಜೀವಾತ್ಮರ ಮಾತೇನು ಎಂದು ಆಚಾರ್ಯರು ಪ್ರಶ್ನಿಸುತ್ತಾರೆ. ಈ ಮಾತಿಗೆ ಮೂಲಭೂತವಾದ ಪ್ರಮಾಣವನ್ನು ಭಾಗವತದಲ್ಲಿ ಕಾಣಬಹುದು. ‘ನ ಯಸ್ಯ ಸಾಕ್ಷಾದ್ಭವಪದ್ಮಜಾದಿಭೀ ರೂಪಂ ಧಿಯಾ ವಸ್ತುತಯಾsನುವರ್ಣಿತಂ (೭.೧೦. ೫೧) ;  ಶ್ರೀರ್ನ ಶರ್ವಃ ಕಿಮುತಾಪರೇ ತೇ’(ಭಾಗವತ ೮.೨೨.೬)  ಲಕ್ಷೀ ದೇವಿಯೇ ಪರಮಾತ್ಮನ ಗುಣಗಳನ್ನೆಲ್ಲಾ ತಿಳಿದಿಲ್ಲ. ಇನ್ನು ರುದ್ರ ಎಲ್ಲಿಂದ ತಿಳಿದಾನು?  ಬ್ರಹ್ಮ ಎಲ್ಲಿಂದ ತಿಳಿದಾನು?

ಮುಕ್ತರೂ ಕೂಡಾ ಪರಮಾತ್ಮನ ಸುಖ ಎಷ್ಟೋ ಅಷ್ಟನ್ನೂ ತೆಗೆದುಕೊಳ್ಳಲು ಆಗುವುದಿಲ್ಲ. ಅವರು ಪರಮಾತ್ಮನ  ಸುಖಕ್ಕಿಂತ ಕಡಿಮೆಯಾದ ಪರಮಾತ್ಮನ ಸ್ವರೂಪಸುಖದಂತೆ ಇರುವ ಸುಖವನ್ನು ಅನುಭವಿಸುತ್ತಾರೆ. ಈ ಮಾತಿಗೆ ಪ್ರಮಾಣವನ್ನು ಶ್ರುತಿಗಳಲ್ಲಿ ಕಾಣಬಹುದು.  ಏತಸ್ಯೈವಾSನಂದಸ್ಯಾನ್ಯಾನಿ  ಭೂತಾನಿ ಮಾತ್ರಾಮುಪಜೀವಂತಿ[೬.೩.೩೨]  ಎನ್ನುವ ಬೃಹದಾರಣ್ಯಕ ಉಪನಿಷತ್ತಿನ ಮಾತು, ತೇ ಯೇ ಶತಂ ಮಾನುಷಾಣಾಮಾನಂದಾಃ ಸ ಏಕೋ ಮನುಷ್ಯಗಂಧರ್ವಾಣಾಮಾನಂದಃ (೨.೧೩)  ಎನ್ನುವ ತೈತ್ತಿರೀಯ ಉಪನಿಷತ್ತಿನ ಮಾತು ಇದಕ್ಕೆ ನೆಲೆಯಾಗಿ ನಿಂತಿದೆ.

No comments:

Post a Comment