ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, November 23, 2017

Mahabharata Tatparya Nirnaya Kannada 1.59-1.75

ನಚ ವೈಷ್ಣವಶಾಸ್ತ್ರೇಷು ವೇದೇಷ್ವಪಿ ಹರೇಃ ಪರಃ ।

ಕ್ವಚಿದುಕ್ತೋsನ್ಯಶಾಸ್ತ್ರೇಷು ಪರಮೋ ವಿಷ್ಣುರೀರಿತಃ ॥೧.೫೯

 

ವೈಷ್ಣವ ಪುರಾಣಗಳಲ್ಲಿ, ಪಂಚರಾತ್ರಗಳಲ್ಲಿ , ವೇದಗಳಲ್ಲಿಯೂ ಕೂಡಾ, ಪರಮಾತ್ಮನಿಗಿಂತ ಮಿಗಿಲಾದುದನ್ನು ಎಲ್ಲಿಯೂ ಹೇಳಲ್ಪಟ್ಟಿಲ್ಲ. ಇತರ ಶಾಸ್ತ್ರಗಳೆಲ್ಲವುದರಲ್ಲಿ[ಉದಾಹರಣೆಗೆ: ಚಾರ್ವಾಕರ ಶಾಸ್ತ್ರವಾಗಿರಬಹುದು, ಶಿವಶಾಸ್ತ್ರವಾಗಿರಬಹುದು, ಬ್ರಹ್ಮನನ್ನು ಮೇಲ್ನೋಟಕ್ಕೆ ಪ್ರತಿಪಾದನೆ ಮಾಡುವ ಶಾಸ್ತ್ರವಾಗಿರಬಹುದು, ಶಕ್ತಿಯನ್ನು ಪ್ರತಿಪಾದನೆ ಮಾಡುವ ಶಾಕ್ತಶಾಸ್ತ್ರ ಆಗಿರಬಹುದು], ಎಲ್ಲವುದರಲ್ಲಿ ನಾರಾಯಣನು ಸರ್ವೋತ್ತಮನೆಂದು ಹೇಳಲ್ಪಟ್ಟಿದ್ದಾನೆ.

 

ನಿರ್ದ್ದೋಷತ್ವಾಚ್ಚ ವೇದಾನಾಂ ವೇದೋಕ್ತಂ ಗ್ರಾಹ್ಯಮೇವ ಹಿ ।

ವೇದೇಷು ಚ ಪರೋ ವಿಷ್ಣುಃ ಸರ್ವಸ್ಮಾದುಚ್ಯತೇ ಸದಾ ॥೧.೬೦

 

ವೇದಗಳು ನಿರ್ದುಷ್ಟವಾಗಿರುವುದರಿಂದ ವೇದಗಳಲ್ಲಿ ಹೇಳಿದ ಪ್ರಮೇಯವನ್ನು ಸ್ವೀಕರಿಸಲೇಬೇಕು. ವೇದದಲ್ಲಿಯಾದರೋ ನಾರಾಯಣನು ಎಲ್ಲರಿಗಿಂತ ಮಿಗಿಲು ಎಂದು ಯಾವಾಗಲೂ ಹೇಳಲ್ಪಡುತ್ತಾನೆ. [ವೇದ ಎನ್ನುವುದು ಅಪೌರುಷೇಯ, ವೇದದಲ್ಲಿ ಯಾವ ಪುರುಷರ ದೋಷವೂ ಇರುವುದಿಲ್ಲ. ಅಲ್ಲಿ ನಾರಾಯಣ ಸರ್ವೋತ್ತಮ ಎಂದು ಹೇಳಿದ್ದಾರೆ].

 

ಮುಂದಿನ ಏಳು ಶ್ಲೋಕಗಳಲ್ಲಿ ಆಚಾರ್ಯರು ವೇದಗಳಲ್ಲಿ ಸ್ಪಷ್ಟವಾಗಿ ಹೇಳಿರುವ  ಭಗವಂತನ ಸರ್ವೋತ್ತಮತ್ವ,  ಜೀವಾತ್ಮ-ಪರಮಾತ್ಮ ವ್ಯತ್ಯಾಸ, ತಾರತಮ್ಯ, ಜಗತ್ತುಅಸತ್ಯ  ಅಲ್ಲ ಎನ್ನುವ ಸತ್ಯ, ಇತ್ಯಾದಿ ವಿಷಯಗಳನ್ನು ವೇದಮಂತ್ರಗಳ ಪ್ರಮಾಣ ಸಮೇತ ನಮ್ಮ ಮುಂದಿಟ್ಟಿದ್ದಾರೆ:    

 

 

ಅಸ್ಯ ದೇವಸ್ಯ ಮೀಳ್ಢುಷೋ ವಯಾ ವಿಷ್ಣೋರೇಷಸ್ಯ ಪ್ರಭೃಥೇ ಹವಿರ್ಭಿಃ ।

ವಿದೇ ಹಿ ರುದ್ರೋ ರುದ್ರೀಯಂ ಮಹಿತ್ವಂ ಯಾಸಿಷ್ಟಂ ವರ್ತ್ತಿರಶ್ವಿನಾವಿರಾವತ್೧.೬೧

 

ಇದು ಋಗ್ವೇದದ ೭ನೇ ಮಂಡಲದ ೪೭ನೆಯ ಸೂಕ್ತದ ಐದನೆಯ ಋಕ್. ಈ  ವೇದವಾಕ್ಯದ ಸಂಕ್ಷಿಪ್ತ ಅರ್ಥ ಹೀಗಿದೆ:  “ಬೇಡಿದ್ದನ್ನು ನೀಡುವ, ಎಲ್ಲರ ಅಂತರ್ಯಾಮಿಯಾಗಿರುವ, ಎಲ್ಲರಿಗೂ ಇಷ್ಟನಾಗಿರುವ ನಾರಾಯಣನನ್ನು,  ಹವಿಸ್ಸಿನಿಂದ ಒಡಗೂಡಿ ಪೂಜಿಸಿದ  ರುದ್ರನು,  ರುದ್ರ ಪದವಿಯ ವೈಭವವನ್ನು ಪಡೆದನು. ಹೀಗೆಯೇ ಅಶ್ವಿನೀ ದೇವತೆಗಳೂ ಕೂಡಾ  ಸಮೃದ್ಧವಾಗಿರುವ  ತಮ್ಮ ಪದವಿಯನ್ನು ಪಡೆದರು”. 

ಇಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ:  ಸದಾಶಿವನು  ಪರಮಾತ್ಮನ ಅನುಗ್ರಹದಿಂದ ತನ್ನ ರುದ್ರಪದವಿಯನ್ನು ಪಡೆದ ಎಂದು.

 

ಸ್ತುಹಿ ಶ್ರುತಂ ಗರ್ತ್ತಸದಂ ಯುವಾನಂ ಮೃಗಂ ನ ಭೀಮಮುಪಹತ್ನುಮುಗ್ರಮ್

ಯಂ ಕಾಮಯೇ ತನ್ತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್೧.೬೨

 

ಸ್ತುಹಿ ಶ್ರುತಂ ಗರ್ತಸದಂ ...ಎನ್ನುವುದು ಋಗ್ವೇದದ ಎರಡನೇ ಮಂಡಲದ, ೩೩ನೆಯ ಸೂಕ್ತದ, ೧೧ನೆಯ ಋಕ್.  ಅದು ರುದ್ರಾಂತರ್ಯಾಮಿಯಾಗಿರುವ ನರಸಿಂಹನನ್ನು ಸ್ತೋತ್ರ ಮಾಡತಕ್ಕಂತಹ ಮಂತ್ರ.  “ಆ ನರಸಿಂಹನನ್ನು ಸ್ತೋತ್ರ ಮಾಡು” ಎಂದು  ರುದ್ರದೇವ ತನಗೆ ತಾನೇ ಹೇಳಿಕೊಳ್ಳುತ್ತಿರುವ ಮಾತಿದು. “ಎಲ್ಲಾ ವೇದಗಳಲ್ಲಿ ಪ್ರಸಿದ್ಧನಾದ, ಯಾವಾಗಲೂ ಯುವಕನಾಗಿಯೇ ಇರುವ, ವಯಸ್ಸಾಗದ,  ರುದ್ರನ ಅಂತರ್ಯಾಮಿಯಾಗಿರುವ, ಪ್ರಳಯ ಕಾಲದಲ್ಲಿ ಎಲ್ಲರನ್ನೂ ಕೂಡಾ ಸಂಹರಿಸುವ, ಮೃಗರೂಪಿಯಾಗಿರುವ(ಸಿಂಹದ ಮೋರೆಯುಳ್ಳ), ಅಂತರ್ಯಾಮಿಯಾಗಿರುವವನನ್ನು ಓ ರುದ್ರನೇ,  ಸ್ತೋತ್ರ ಮಾಡು” ಎಂದು ರುದ್ರದೇವರು ಹೇಳಿಕೊಂಡಿದ್ದಾರೆ.

ಇದರಿಂದ ನಾರಾಯಣನ ಸರ್ವೋತ್ತಮತ್ವ ಸ್ಪಷ್ಟವಾಗಿ ತಿಳಿಯುತ್ತದೆ ಮತ್ತು ನರಸಿಂಹ ಅಂತರ್ಗತ ಶಿವನ ಮೇಲಿನ ಭಕ್ತಿಯೂ ಹೆಚ್ಚುತ್ತದೆ .

ಯಂ ಕಾಮಯೇ... ಎನ್ನುವುದು ಅಂಭೃಣೀ ಸೂಕ್ತ(೫).  ಋಗ್ವೇದದಲ್ಲಿ ಹತ್ತನೇ ಮಂಡಲ, ೧೨೫ನೆಯ ಸೂಕ್ತ, ೫ನೆಯ ಋಕ್.  ಅಥರ್ವವೇದದಲ್ಲಿ ನಾಲ್ಕನೆಯ ಕಾಂಡ, ೩೦ನೆಯ ಸೂಕ್ತ, ೩ನೆಯ ಋಕ್. ಇದರ ಅರ್ಥ ಹೀಗಿದೆ: ಯಾರನ್ನು ಬಯಸುತ್ತೇನೋ ಅವನನ್ನು ರುದ್ರನನ್ನಾಗಿ ಮಾಡುತ್ತೇನೆ. ಯಾರನ್ನು ಬಯಸುತ್ತೇನೋ ಅವನನ್ನು ಬ್ರಹ್ಮನನ್ನಾಗಿ ಮಾಡುತ್ತೇನೆ. ಯಾರನ್ನು ಋಷಿಯನ್ನಾಗಿ ಮಾಡಲು ಬಯಸುತ್ತೇನೋ  ಅವನನ್ನು ಋಷಿಯನ್ನಾಗಿ, ಯಾರನ್ನು ಜ್ಞಾನಿಯನ್ನಾಗಿ ಮಾಡಲು ಬಯಸುತ್ತೇನೋ ಅವನನ್ನು ಜ್ಞಾನಿಯನ್ನಾಗಿ ಮಾಡುತ್ತೇನೆ. ಎಂದು ಲಕ್ಷ್ಮೀದೇವಿ ಹೇಳಿಕೊಳ್ಳುತ್ತಾಳೆ. ಇದರಿಂದ  ಶ್ರೀಲಕ್ಷ್ಮಿ ಬ್ರಹ್ಮ-ರುದ್ರಾದಿ ಸಮಸ್ತ ಜೀವರಿಗಿಂತ ತಾರತಮ್ಯದಲ್ಲಿ ಹಿರಿಯಳಾಗಿದ್ದಾಳೆ ಎನ್ನುವುದು  ಸ್ಪಷ್ಟವಾಗಿ ತಿಳಿಯುತ್ತದೆ.

 

ಏಕೋ ನಾರಾಯಣ ಆಸೀನ್ನ ಬ್ರಹ್ಮಾ ನಚ ಶಙ್ಕರಃ

ವಾಸುದೇವೋ ವಾ ಇದಮಗ್ರ ಆಸೀನ್ನ ಬ್ರಹ್ಮಾ ನಚ ಶಙ್ಕರಃ೧.೬೩

 

 “ನಾರಾಯಣನು ಒಬ್ಬನೇ ಇದ್ದನು. ಬ್ರಹ್ಮನಾಗಲೀ, ರುದ್ರನಾಗಲೀ ಇರಲಿಲ್ಲ” ಎನ್ನುವುದು ಒಂದು ವೇದದ ವಾಣಿಯಾದರೆ,  ಇನ್ನೊಂದು ವೇದದ ವಾಣಿ  ಸ್ಫುಟವಾಗಿ  “ಇದರ ಮೊದಲು ವಾಸುದೇವನೇ ಇದ್ದನು.  ಬ್ರಹ್ಮನಾಗಲೀ, ರುದ್ರನಾಗಲೀ, ಇರಲಿಲ್ಲಾ” ಎಂದು ಹೇಳುತ್ತದೆ.

 

ಯದಾ ಪಶ್ಯಃ ಪಶ್ಯತೇ ರುಗ್ಮವರ್ಣ್ಣಂ ಕರ್ತ್ತಾರಮೀಶಂ ಪುರುಷಂ ಬ್ರಹ್ಮಯೋನಿಮ್ ।

ತದಾ ವಿದ್ವಾನ್ ಪುಣ್ಯಪಾಪೇ ವಿಧೂಯ ನಿರಞ್ಜನಃ ಪರಮಂ ಸಾಮ್ಯಮುಪೈತಿ೧.೬೪

 

ಅಥರ್ವಣ ಉಪನಿಷತ್ತಿನಲ್ಲಿ ನಾವು ಈ ಮಂತ್ರವನ್ನು ಕಾಣುತ್ತೇವೆ: “ಯಾವಾಗ ಜ್ಞಾನಿಯು ಬಂಗಾರದ ಬಣ್ಣವುಳ್ಳ, ಜಗದೊಡೆಯನಾದ, ಸಮರ್ಥನಾದ, ಅಂತರ್ಯಾಮಿಯಾದ,  ವೇದಗಳಿಂದ ತಿಳಿಯಲ್ಪಡುವ ನಾರಾಯಣನನ್ನು ಕಾಣುತ್ತಾನೋ, ಆಗ ಆ ಜ್ಞಾನಿಯು ಅನಿಷ್ಟಪುಣ್ಯ* ಮತ್ತು ಪಾಪವನ್ನು ಕಳೆದುಕೊಂಡು ಯಾವುದೇ ದುಃಖವಿಲ್ಲದೇ ಪರಮಾತ್ಮನ ಸಾಮ್ಯವನ್ನು ಹೊಂದುತ್ತಾನೆ”.

[*ಪುಣ್ಯದಲ್ಲಿ ಇಷ್ಟಪುಣ್ಯ ಮತ್ತು ಅನಿಷ್ಟಪುಣ್ಯ ಎನ್ನುವ ಎರಡು ವಿಧವಿದೆ. ಉದಾಹರಣೆಗೆ: ಪೂರ್ವಜನ್ಮದ ಯಾವುದೋ ಒಂದು ಸುಕೃತದಿಂದ(ಇಷ್ಟಪುಣ್ಯದಿಂದ) ಈ ಜನ್ಮದಲ್ಲಿ ತನ್ನ  ಯೋಗ್ಯತೆಗಿಂತ ದೊಡ್ದಪದವಿಯನ್ನು ಗಳಿಸಿ, ಆ ಪದವಿಗೆ ತಕ್ಕನಾದ ಕೆಲಸವನ್ನು ಮಾಡಲಾಗದೇ, ಅಧಃಪಾತ ಹೊಂದುವುದು ಅನಿಷ್ಟಪುಣ್ಯ ಎನಿಸುತ್ತದೆ.]

 

ಯೋ ವೇದ ನಿಹಿತಂ ಗುಹಾಯಾಂ ಪರಮೇ ವ್ಯೋಮನ್ ।

ಸೋsಶ್ನುತೇ ಸರ್ವಾನ್ ಕಾಮಾನ್ತ್ಸಹ ಬ್ರಹ್ಮಣಾ ವಿಪಶ್ಚಿತಾ೧.೬೫

 

ಇದು ತೈತ್ತಿರೇಯ ಉಪನಿಷತ್ತಿನ ಮಾತಾಗಿದೆ[೨.೧.೧.]. “ಯಾರು ಹೃದಯದ ಒಳಗಡೆ ಇರುವ, ದೊಡ್ಡ ಆಕಾಶದಲ್ಲಿರುವ ತತ್ತ್ವವನ್ನು ತಿಳಿದಿದ್ದಾರೋ,  ಅವರು ತಮ್ಮೆಲ್ಲಾ ಬಯಕೆಗಳನ್ನು ಸರ್ವಜ್ಞನಾದ ನಾರಾಯಣನ ಜೊತೆ ಭೋಗಿಸುತ್ತಾರೆ”.  ಉಪನಿಷತ್ತಿನ ಈ ಮಾತು ಮುಕ್ತಿಯಲ್ಲಿಯೂ ಇರುವ  ಭೇದವನ್ನು ಸೂಚಿಸುತ್ತದೆ. [ಜೀವ ಭಗವಂತನೇ ಆಗುವುದಿಲ್ಲ ಆದರೆ ಆತ ತನ್ನ ಯೋಗ್ಯತೆಗನುಗುಣವಾದ ತಾರತಮ್ಯದಲ್ಲಿ ಭಗವಂತನ ಜೊತೆಗಿರುತ್ತಾನೆ]

 

ಈ ಜಗತ್ತು ಸುಳ್ಳು ಎಂದು ಹೇಳುವವರಿದ್ದಾರೆ.  ಆ ರೀತಿ ಏಕೆ ಹೇಳುತ್ತಾರೆ ಎಂದರೆ:  ಜೀವ ಮತ್ತು ಪರಮಾತ್ಮ ಏಕ ಎಂದಾಗ ಇಬ್ಬರೂ ಕೂಡಾ ಗುಣಹೀನರಾಗಬೇಕು. ಭೇದ ಎನ್ನುವುದು ಹುಟ್ಟುವುದು ಗುಣಭೇದದಿಂದಲೇ. ಹೀಗಾಗಿ   ಗುಣವೇ ಸುಳ್ಳು ಎಂದಾದಾಗ ಮಾತ್ರ ಇಬ್ಬರ ನಡುವೆ ಅಭೇದ ಸಾಧ್ಯ. ಈ ಅಭಿಪ್ರಾಯ ಇಟ್ಟುಕೊಂಡು ಜಗತ್ತಿನಲ್ಲಿರುವ ಎಲ್ಲಾ ಗುಣಗಳನ್ನೂ ಸುಳ್ಳು  ಎಂದು ಹೇಳಿ, ಇಡೀ ಜಗತ್ತೇ ಸುಳ್ಳು ಎಂದು ಹೇಳುತ್ತಾರೆ.  ಆದರೆ ಇದು ವೇದಕ್ಕೆ ಸಮ್ಮತವಾದುದಲ್ಲ ಎನ್ನುವುದನ್ನು  ವೇದದಲ್ಲೇ ಸ್ಪಷ್ಟವಾಗಿ ಹೀಗೆ ಹೇಳಿದ್ದಾರೆ:

 

ಪ್ರ ಘಾ ನ್ವಸ್ಯ ಮಹತೋ ಮಹಾನಿ ಸತ್ಯಾ ಸತ್ಯಸ್ಯ ಕರಣಾನಿ ವೋಚಮ್

ಸತ್ಯಮೇನಮನು ವಿಶ್ವೇ ಮದನ್ತಿ ರಾತಿಂ ದೇವಸ್ಯ ಗೃಣತೋ ಮಘೋನಃ೧.೬೬

 

ಪ್ರ ಘಾ ನ್ವಸ್ಯ ಮಹತೋ..... ಎನ್ನುವ  ಈ ಮಾತು  ಋಗ್ವೇದದ ಎರಡನೇ ಮಂಡಲದ ಹದಿನೈದನೇ ಸೂಕ್ತ (ಗೃತ್ಸಮದ ಮಂಡಲ). ಇಲ್ಲಿ ಪರಮಾತ್ಮನನ್ನು ಕುರಿತಾಗಿ ಹೇಳುವಾಗ “ಈ ಗುಣಪೂರ್ಣನಾದ ಭಗವಂತನ ಉತ್ಕೃಷ್ಟವಾದ, ಸತ್ಯಭೂತವಾಗಿರುವ ಕೆಲಸಗಳನ್ನು ಹೇಳುತ್ತೇನೆ” ಎಂದಿದೆ. 

ಸತ್ಯಮೇನಮನು... ಎನ್ನುವ ಸಾಲು ಋಗ್ವೇದದಲ್ಲಿ ನಾಲ್ಕನೆಯ ಮಂಡಲದಲ್ಲಿ ಹದಿನೇಳನೆಯ ಸೂಕ್ತದಲ್ಲಿ ಐದನೆಯ ಋಕ್. ಇಲ್ಲಿ ಹೇಳುವಂತೆ:  “ಈ ನಾರಾಯಣನನ್ನು ಪ್ರಪಂಚದಲ್ಲಿ ಸತ್ಯ ಎಂದು ಹೇಳುತ್ತಾರೆ.  ಈ ಜಗತ್ತು ಸ್ತೋತ್ರ ಮಾಡುವ, ಕ್ರೀಡಾದಿ ಗುಣ ವಿಶಿಷ್ಟನಾದ  ನಾರಾಯಣನ ಕಾಣಿಕೆ ಎಂದು ತಿಳಿಯುವ ಸಜ್ಜನರು, ಈ ಜಗತ್ತಿನಲ್ಲಿ ತಮ್ಮ  ಕರ್ತವ್ಯಕ್ಕೆ ಅನುಕೂಲವಾಗಿ ಇದ್ದು ಸತ್ಯತ್ವವನ್ನು ಅನುಭವಿಸುತ್ತಾರೆ”.

ಇದು ಪ್ರಪಂಚ ಮಿಥ್ಯ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

 

ಯಚ್ಚಿಕೇತ ಸತ್ಯಮಿತ್ ತನ್ನ ಮೋಘಂ  ವಸು ಸ್ಪಾರ್ಹಮುತ ಜೇತೋತ ದಾತಾ’ ।

ಸತ್ಯಃ ಸೋ ಅಸ್ಯ ಮಹಿಮಾ ಗೃಣೇ  ಶವೋ ಯಜ್ಞೇಷು ವಿಪ್ರರಾಜ್ಯೇ೧.೬೭

 

ಯಚ್ಚಿಕೇತ ಸತ್ಯಮಿತ್ ......ಇದು ಋಗ್ವೇದದ ಹತ್ತನೇ ಮಂಡಲದ ೫೫ನೆಯ ಸೂಕ್ತ, ೬ನೆಯ ಋಕ್. ಅಲ್ಲಿ ಈ ರೀತಿ ಇದೆ: ಪರಮಾತ್ಮನು ಯಾವುದನ್ನು ಸೃಷ್ಟಿಮಾಡಿದನೋ ಅದು ಸತ್ಯವೇ ಆಗಿದೆ. ಅದು ವ್ಯರ್ಥ ಅಲ್ಲ. [ದೇವರು ಮಾಡಿದ ಈ ಪ್ರಪಂಚ ವ್ಯರ್ಥ ಅಲ್ಲ.  ದೇವರು ಮಾಡಿದ್ದು ಸುಳ್ಳು ಅಂತಾದರೆ ಇದು ವ್ಯರ್ಥವಾಗುತ್ತದೆ.]

ಅತ್ಯಂತ ಬಯಸಬೇಕಾದ ಸಂಪತ್ತಿದು. [ಸಂಪತ್ತಿನ ಮೂಲ ಎನಿಸಿಕೊಂಡಿರುವ ಭೂಮಿ, ಬಂಗಾರ ಇವುಗಳೆಲ್ಲವುದರ ಮೇಲೆ  ಎಲ್ಲರಿಗೂ ಆಸೆ ಇರುತ್ತದೆ. ಅದರಿಂದಾಗಿ ಈ ಜಗತ್ತು ಎಲ್ಲರ ಬಯಕೆಗೆ ವಿಷಯವಾಗಿರುವ ಸಂಪತ್ತು]. “ಅದನ್ನು ಗೆದ್ದಿದ್ದಾನೆ ಮತ್ತು ಇಂದ್ರನಿಗೆ ಕೊಟ್ಟಿದ್ದಾನೆ” ಎಂದು ವಾಮನ ಅವತಾರದ ಚಿಂತನೆಯೊಂದಿಗೆ ಇಲ್ಲಿ ಹೇಳಲಾಗಿದೆ. [ಬಲಿಯಿಂದ ವಾಮನ ಭೂಮಿಯನ್ನು ದಾನವಾಗಿ ಸ್ವೀಕರಿಸಿದ. ಸತ್ಯವಲ್ಲದ್ದನ್ನು ದಾನವಾಗಿ ಪಡೆಯಲಾಗದು]

ಸತ್ಯಃ ಸೋ ಅಸ್ಯ ಮಹಿಮಾ .....ಋಗ್ವೇದದ ಮೂರನೇ ಮಂಡಲ ೩ನೆಯ ಸೂಕ್ತ ೪ನೆಯ ಋಕ್. “ಈ ಪರಮಾತ್ಮನ ಮಹಿಮೆಯು ಸತ್ಯವೇ ಆಗಿದೆ. ಬ್ರಾಹ್ಮಣರೆಲ್ಲ ಸೇರಿದಾಗ ಯಜ್ಞಗಳಲ್ಲಿ ಆನಂದಕರವಾದ ಪರಮಾತ್ಮನ ಮಹಿಮೆಯನ್ನು ಹೇಳುತ್ತೇನೆ” ಎನ್ನುವ ಮಾತು ಇಲ್ಲಿ ಬಂದಿದೆ. ಇದು ಒಬ್ಬ ಋಷಿ ತನ್ನನ್ನೇ ಕುರಿತು ಮಾಡಿಕೊಳ್ಳುವ ‘ಸ್ವಗತ’. (ಭಾವವೃತ್ತ ಸೂಕ್ತ).  ವೇದಗಳಲ್ಲಿ ಇಂತಹ ಎಷ್ಟೋ ಸ್ವಗತಗಳಿವೆ.  ಋಷಿ ತನ್ನನ್ನು ಕುರಿತು ತಾನೇ ಹೇಳಿಕೊಳ್ಳುತ್ತಾನೆ. ತನ್ನ ಒಳಗಡೆ ಇರುವ  ಪರಮಾತ್ಮನನ್ನು ಕುರಿತು ತಾನು ಸ್ತೋತ್ರ ಮಾಡಿಕೊಳ್ಳುತ್ತಾನೆ. ಎಲೈ ವಿರೂಪನೇ,  ನಿತ್ಯವಾದ ಮಾತುಗಳಿಂದ ಸ್ತೋತ್ರ ಮಾಡು(ವಾಚಾ ವಿರೂಪ ನಿತ್ಯಃ) ಎಂದು ಋಷಿ  ಹೇಳಿಕೊಂಡಿದ್ದಾನೆ.

ಇಲ್ಲಿ ಹರಿಯ ಗುಣಗಳೂ ಸತ್ಯ, ಈ ಪ್ರಪಂಚವೂ ಸತ್ಯ ಎನ್ನುವ ಮಾತನ್ನು ದೃಢವಾಗಿ ಹೇಳಲಾಗಿದೆ.

 

ಸತ್ಯಾ ವಿಷ್ಣೋರ್ಗ್ಗುಣಾಃ ಸರ್ವೇ ಸತ್ಯಾ ಜೀವೇಶಯೋರ್ಭಿದಾ ।

ಸತ್ಯೋ ಮಿಥೋ ಜೀವಭೇದಃ ಸತ್ಯಂ ಚ ಜಗದೀದೃಶಮ್ ॥೧.೬೮ 

 

ಪರಮಾತ್ಮನ ಗುಣಗಳು ಸತ್ಯವೇ ಆಗಿದೆ. ಜೀವ ಹಾಗೂ ಈಶ್ವರರ ಭೇದವು ನಿತ್ಯವಾಗಿದೆ. ಜೀವರಲ್ಲಿರುವ ಪರಸ್ಪರ ಭೇದವೂ ನಿತ್ಯವಾಗಿದೆ. ನಾವು ಕಾಣುತ್ತಿರುವ ಮಣ್ಣು-ನೀರು-ಬೆಂಕಿ- ಗಾಳಿ-ಆಕಾಶಗಳಿಂದ ತುಂಬಿರುವ ಜಗತ್ತು ಸತ್ಯವೇ ಆಗಿದೆ.

 

ಅಸತ್ಯಃ ಸ್ವಗತೋ ಭೇದೋ ವಿಷ್ಣೋರ್ನ್ನಾನ್ಯದಸತ್ಯಕಮ್ ।

ಜಗತ್ ಪ್ರವಾಹಃ ಸತ್ಯೋsಯಂ ಪಞ್ಚಭೇದಸಮನ್ವಿತಃ ॥೧.೬೯

 

ಜೀವೇಶಯೋರ್ಭಿದಾ ಚೈವ ಜೀವಭೇದಃ ಪರಸ್ಪರಮ್ ।

ಜಡೇಶಯೋರ್ಜ್ಜಡಾನಾಂ ಚ ಜಡಜೀವಭಿದಾ ತಥಾ ॥೧.೭೦

 

ಪಞ್ಚಭೇದಾ ಇಮೇ ನಿತ್ಯಾಃ ಸರ್ವಾವಸ್ಥಾಸು ಸರ್ವಶಃ ।

ಮುಕ್ತಾನಾಂ ಚ ನ ಹೀಯನ್ತೇ ತಾರತಮ್ಯಂ ಚ ಸರ್ವದಾ ॥೧.೭೧

 

ನಾರಾಯಣನ ರೂಪಗಳಲ್ಲಿ ಇರುವ ಭೇದವು ಸತ್ಯವಲ್ಲ. ಉಳಿದ ಯಾವುದೂ ಕೂಡಾ ಅಸತ್ಯವಲ್ಲ, ಅದು ಸತ್ಯವೇ. ಈ ಕೆಳಗಿನ ಐದು ಭೇದಗಳಿಂದ ಕೂಡಿರುವ ಜಗತ್ತಿನ ಪ್ರವಾಹ ಏನಿದೆಯೋ, ಅದು ಸತ್ಯವಾಗಿದೆ.

(೧). ಜೀವ ಹಾಗೂ ಪರಮಾತ್ಮರಿಗೆ   ಭೇದವಿದೆ. (೨). ಜೀವರಲ್ಲಿ ಪರಸ್ಪರ ಭೇದವಿದೆ. (೩). ಜಡ ಹಾಗೂ ನಾರಾಯಣನಿಗೆ ಭೇದವಿದೆ. (೪). ಜಡ-ಜಡಗಳಲ್ಲಿ ಭೇದವಿದೆ. (೫). ಜಡ ಹಾಗೂ ಜೀವರಲ್ಲಿ ಭೇದವಿದೆ.  ಇವೇ ಆ  ಐದು ಭೇದಗಳು. ಈ  ಭೇದಗಳು   ನಿತ್ಯವಾದವುಗಳು. ಇಂದು-ನಿನ್ನೆ-ನಾಳೆ ಎಂದಿಲ್ಲದೆ,  ಎಲ್ಲಾ ಅವಸ್ಥೆಗಳಲ್ಲಿಯೂ ಇದು ನಿತ್ಯವೇ.  ಮುಕ್ತರಾದಾಗಲೂ ಕೂಡಾ ಈ ಐದು ಭೇದಗಳು ನಾಶವಾಗುವುದಿಲ್ಲ. ತಾರತಮ್ಯವೂ ಕೂಡಾ ನಾಶವಾಗುವುದಿಲ್ಲ.  

 

ಕ್ಷಿತಿಪಾ ಮನುಷ್ಯಗನ್ಧರ್ವಾ ದೈವಾಶ್ಚ ಪಿತರಶ್ಚಿರಾಃ ।

ಆಜಾನಜಾಃ ಕರ್ಮ್ಮಜಾಶ್ಚ ದೇವಾ ಇನ್ದ್ರಃ ಪುರನ್ದರಃ ॥೧.೭೨

 

ರುದ್ರಃ ಸರಸ್ವತೀ ವಾಯುರ್ಮ್ಮುಕ್ತಾಃ ಶತಗುಣೋತ್ತರಾಃ ।

ಏಕೋ ಬ್ರಹ್ಮಾ ಚ ವಾಯುಶ್ಚ ವೀನ್ದ್ರೋ ರುದ್ರಸಮಸ್ತಥಾ ॥೧.೭೩

 

ಏಕೋ ರುದ್ರಸ್ತಥಾ ಶೇಷೋ ನ ಕಶ್ಚಿದ್ ವಾಯುನಾ ಸಮಃ ।

ಮುಕ್ತೇಷು ಶ್ರೀಸ್ತಥಾ ವಾಯೋಃ ಸಹಸ್ರಗುಣಿತಾ ಗುಣೈಃ ।

ತತೋsನನ್ತಗುಣೋ ವಿಷ್ಣುರ್ನ್ನ ಕಶ್ಚಿತ್ ತತ್ಸಮಃ ಸದಾ೧.೭೪

 

ಈ ಮೇಲಿನ ಶ್ಲೋಕಗಳಲ್ಲಿ ತಾರತಮ್ಯದ ವಿವರವನ್ನು ನೀಡಲಾಗಿದೆ. ಚಕ್ರವರ್ತಿಗಳು, ಅವರಾದ ಮೇಲೆ ಮನುಷ್ಯ ಗಂಧರ್ವರು,  ದೇವ ಗಂಧರ್ವರು, ಚಿರ ಪಿತೃಗಳು, ಆಜಾನಜ ದೇವತೆಗಳು, ತಮ್ಮ ಕರ್ಮದಿಂದ ದೇವತೆಗಳಾದವರು, [ಬಲಿ ಮೊದಲಾದ ಉಪಾಸನೆಯಿಂದ ದೇವತೆಗಳಾದವರು], ಮನೋಭಿಮಾನಿ ಇಂದ್ರ  ಆಮೇಲೆ ರುದ್ರ ತದನಂತರ ಸರಸ್ವತಿ(ಮತ್ತು ಭಾರತಿ) ಮತ್ತೆ ಮುಖ್ಯಪ್ರಾಣ (ಮತ್ತು ಚತುರ್ಮುಖ). ಇವರು ಮುಕ್ತರಾದಾಗಲೂ ಕೂಡಾ ಇದೇ ತಾರತಮ್ಯದಲ್ಲಿರುತ್ತಾರೆ.

ಶಾಸ್ತ್ರದಲ್ಲಿ ಬ್ರಹ್ಮದೇವರಿಗೆ ಏನು ಗುಣ-ಸ್ಥಾನವನ್ನು ಹೇಳುತ್ತೇವೋ, ಆ ಸ್ಥಾನ ಮುಖ್ಯಪ್ರಾಣನಿಗೂ ಇದೆ ಎಂದು ತಿಳಿದುಕೊಳ್ಳಬೇಕು. ಮುಖ್ಯಪ್ರಾಣನಿಗೆ ಯಾವ ಗುಣ-ಸ್ಥಾನಗಳನ್ನು ಹೇಳುತ್ತೇವೋ,  ಆ ಅಧಿಕಾರ ಬ್ರಹ್ಮದೇವರಿಗೂ ಇದೆ ಎಂದು ತಿಳಿದುಕೊಳ್ಳಬೇಕು. ಹಾಗೇ, ಗರುಡನಿಗೆ ಹೇಳಿದರೆ, ರುದ್ರನಿಗೆ ಹೇಳಬೇಕು.  ರುದ್ರನಿಗೆ ಏನು ಯೋಗ್ಯತೆಯನ್ನು ಹೇಳುತ್ತೇವೆಯೋ, ಅದನ್ನು ಶೇಷನಿಗೂ ಹೇಳಬೇಕು. ದೇವತಾ ಸಮೂಹದಲ್ಲಿ ಯಾರೂ ಕೂಡಾ ಮುಖ್ಯಪ್ರಾಣನಿಗೆ (ಮತ್ತು ಚತುರ್ಮುಖನಿಗೆ) ಸಮನಾದವನು ಇಲ್ಲ. ಮುಕ್ತರಲ್ಲಿ   ಮುಖ್ಯಪ್ರಾಣನಿಗಿಂತಲೂ ಸಾವಿರ ಪಟ್ಟು ಗುಣಗಳಿಂದ  ಅಧಿಕಳಾಗಿದ್ದಾಳೆ ಶ್ರೀಲಕ್ಷ್ಮಿ.  ಅವಳಿಗಿಂತಲೂ ಅನಂತಪಟ್ಟು ಗುಣಗಳಿಂದ ಕೂಡಿದವನು ನಾರಾಯಣ. ಯಾರೂ ಕೂಡಾ ನಾರಾಯಣನಿಗೆ ಸಮನಾದವನು ಇಲ್ಲ. 

 

ಇತ್ಯಾದಿ ವೇದವಾಕ್ಯಂ ವಿಷ್ಣೋರುತ್ಕರ್ಷಮೇವ ವಕ್ತ್ಯುಚ್ಚೈಃ ।

ತಾತ್ಪರ್ಯ್ಯಂ ಮಹದತ್ರೇತ್ಯುಕ್ತಂ ಯೋ ಮಾಮಿತಿ ಸ್ವಯಂ ತೇನ ॥೧.೭೫

 

ಇವೇ ಮೊದಲಾದ ವೇದ ವಾಕ್ಯವು ನಾರಾಯಣನ ಶ್ರೇಷ್ಠತೆಯನ್ನು ಗಟ್ಟಿಯಾಗಿಯೇ ಹೇಳುತ್ತದೆ. ಈ ವಿಚಾರದಲ್ಲಿ ಮಹಾತಾತ್ಪರ್ಯವಿದೆ ಎಂದು ಹೇಳಲ್ಪಟ್ಟಿದೆ. ಸ್ವಯಂ ಶ್ರೀಕೃಷ್ಣನಿಂದಲೇ ‘ಯೋ ಮಾಮ್’  ಎನ್ನುವ ಗೀತೆಯ ಶ್ಲೋಕದಲ್ಲಿ ಇದು  ಹೇಳಲ್ಪಟ್ಟಿದೆ.  [ಆ ಗೀತಾ ಶ್ಲೋಕ ಹೀಗಿದೆ:   ಯೋ ಮಾಮೇವಮಸಂಮೂಢೋ ಜಾನಾತಿ ಪುರುಷೋತ್ತಮಮ್ ಸ ಸರ್ವವಿದ್ಭಜತಿ ಮಾಂ ಸರ್ವಭಾವೇನ ಭಾರತ ॥೧೫.೧೯]

No comments:

Post a Comment