ಭೂಮ್ನೋ ಜ್ಯಾಯಸ್ತ್ವಮಿತಿ ಹ್ಯುಕ್ತಂ ಸೂತ್ರೇಷು ನಿರ್ಣ್ಣಯಾತ್ ತೇನ ।
ತತ್ಪ್ರೀತ್ಯೈವ ಚ ಮೋಕ್ಷಃ ಪ್ರಾಪ್ಯಸ್ತೇನೈವ ನಾನ್ಯೇನ ॥೧.೭೬॥
‘ಭೂಮ್ನಃ ಕ್ರತುವಜ್ಜ್ಯಾಯಸ್ತ್ವಂ’ ಎನ್ನುವುದು ಬ್ರಹ್ಮಸೂತ್ರ(೩.೩.೫೯). ಈ ಬ್ರಹ್ಮಸೂತ್ರದಲ್ಲಿಪರಮಾತ್ಮನು ಎಲ್ಲರಿಗಿಂತ ಮಿಗಿಲು
ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಪರಮಾತ್ಮನ ಅನುಗ್ರಹ--ಪ್ರೀತಿಯಿಂದಲೇ
ಮೋಕ್ಷವು ಹೊಂದಲ್ಪಡಬೇಕಾದದ್ದು. ಬೇರೆಯದರಿಂದ ಅಲ್ಲ.
ಪರಮಾತ್ಮನ ಅನುಗ್ರಹದಿಂದಲೇ ಮೋಕ್ಷ ಸಾಧ್ಯ ಎಂದು ಹೇಳುವ
ಅನೇಕ ವೇದ ವಾಣಿಗಳಿವೆ. ಅಂತಹ ಕೆಲವು ವೇದ
ವಾಕ್ಯಗಳನ್ನು ಆಚಾರ್ಯರು ಇಲ್ಲಿ ಸಂಗ್ರಹಿಸಿ ನೀಡಿದ್ದಾರೆ:
‘ನಾಯಮಾತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ ಬಹುನಾ ಶ್ರುತೇನ ।
‘ಯಮೇವೈಷ ವೃಣುತೇ ತೇನ ಲಭ್ಯಸ್ತಸ್ಯೈಷ ಆತ್ಮಾ ವಿವೃಣುತೇ ತನುಂ ಸ್ವಾಮ್’ ॥೧.೭೭॥
“ಈ ಅಂತರ್ಯಾಮಿಯು ಸ್ವಾಧ್ಯಾಯ ಪ್ರವಚನಗಳಿಂದ
ತಿಳಿಯಲ್ಪಡುವವನಲ್ಲ. ಬುದ್ಧಿವಂತಿಕೆಯಿಂದಲೋ, ತರ್ಕದಿಂದಲೋ ಸಿಗುವವನಲ್ಲ. ಬಹಳ ಶಾಸ್ತ್ರಗಳನ್ನು
ಓದುವುದರಿಂದಲೂ ಸಿಗುವುದಿಲ್ಲ. ಯಾರನ್ನು ಇವನು
ಹೊಂದುತ್ತಾನೋ, ಅವನಿಂದ ಇವನು ಲಭ್ಯ. ಅವನಿಗೆ ಈ ಅಂತರ್ಯಾಮಿಯು ತನ್ನನ್ನು ತಿಳಿಸುತ್ತಾನೆ”. ಇದು
ಕಠೋಪನಿಷತ್ತಿನ ಮಾತು(೧.೨.೨೩). ಅಥರ್ವಸಂಹಿತೆಯಲ್ಲೂ ಕೂಡಾ ಇದೇ ಮಾತು ಬರುತ್ತದೆ(೩.೨.೩).
ಈ ಮಾತಿನ ಅರ್ಥ
ಏನೆಂದರೆ: ಭಕ್ತಿ ಇಲ್ಲದೆ ಕೇವಲ ಪ್ರವಚನ ಮಾಡುವುದರಿಂದ, ಪ್ರವಚನ ಕೇಳುವುದರಿಂದ, ಅಸಾಧಾರಣ
ಸ್ಮರಣಶಕ್ತಿ ಹೊಂದಿರುವುದರಿಂದ ಭಗವಂತನ
ಸಾಕ್ಷಾತ್ಕಾರವಾಗುವುದಿಲ್ಲ. ಅಧ್ಯಯನದ ಅಹಂಕಾರವಿದ್ದಲ್ಲಿ ಭಗವಂತ ಎಂದೂ ತೆರೆದುಕೊಳ್ಳುವುದಿಲ್ಲ.
ಯಾರನ್ನು ಭಗವಂತ “ಇವನು ನನ್ನ ಭಕ್ತ, ನನ್ನ
ಆತ್ಮೀಯ, ಇವನಿಗೆ ತತ್ವಜ್ಞಾನದ ಅರಿವು ಬರಲಿ” ಎಂದು ಸ್ವೀಕಾರ ಮಾಡುವುದಿಲ್ಲವೋ,
ಅಲ್ಲಿಯ ತನಕ ಭಗವಂತ ಅವರಿಗೆ ತಿಳಿಯಲಾರ. ಯಾವಾಗ ಭಗವಂತ ಪ್ರಸನ್ನನಾಗುತ್ತಾನೋ, ಆಗ ಆತ ನಮ್ಮ ತಲೆಯಲ್ಲಿ ಬಂದು ಕೂರುತ್ತಾನೆ.
ಅಹಂಕಾರವಿಲ್ಲದ ತನ್ಮಯತೆ, ಭಕ್ತಿಗೆ ಭಗವಂತ ತೆರೆದುಕೊಳ್ಳುತ್ತಾನೆ. ಆಗ ಆತನ ಜ್ಞಾನಾನಂದಮಯವಾದ ಸ್ವರೂಪ ದರ್ಶನ ನಮ್ಮ ಆತ್ಮಸ್ವರೂಪಕ್ಕಾಗುತ್ತದೆ.
‘ವಿಷ್ಣುರ್ಹಿ ದಾತಾ
ಮೋಕ್ಷಸ್ಯ ವಾಯುಶ್ಚ ತದನುಜ್ಞಯಾ ।
‘ಮೋಕ್ಷೋ ಜ್ಞಾನಂ ಚ
ಕ್ರಮಶೋ ಮುಕ್ತಿಗೋ ಭೋಗ ಏವಚ ॥೧.೭೮॥
‘ಉತ್ತರೇಷಾಂ ಪ್ರಸಾದೇನ ನೀಚಾನಾಂ ನಾನ್ಯಥಾ ಭವೇತ್ ।
‘ಸರ್ವೇಷಾಂ ಚ ಹರಿರ್ನ್ನಿತ್ಯನಿಯನ್ತಾ ತದ್ವಶಾಃ ಪರೇ
॥೧.೭೯॥
‘ತಾರತಮ್ಯಂ ತತೋ ಜ್ಞೇಯಂ ಸರ್ವೋಚ್ಚತ್ವಂ ಹರೇಸ್ತಥಾ
।
‘ಏತದ್ ವಿನಾ ನ ಕಸ್ಯಾಪಿ ವಿಮುಕ್ತಿಃ ಸ್ಯಾತ್
ಕಥಞ್ಚನ ॥೧.೮೦॥
ಮೋಕ್ಷವನ್ನು ಕೊಡುವವನು ಆ ನಾರಾಯಣ. ಮುಖ್ಯಪ್ರಾಣನು ಭಗವಂತನ ಅನುಜ್ಞೆಯಿಂದ ಮೋಕ್ಷಪ್ರದ ಎನಿಸುತ್ತಾನೆ. ಮೋಕ್ಷ, ಮೋಕ್ಷವನ್ನು ಪಡೆಯಲು ಬೇಕಾದ ಜ್ಞಾನ ಮತ್ತು ಮುಕ್ತಿಯಲ್ಲಿರುವ ಭೋಗ ಇವುಗಳೆಲ್ಲವೂ ಸಾಧನೆಯಲ್ಲಿ ಮತ್ತು ಯೋಗ್ಯತೆಯಲ್ಲಿ ಹಿರಿಯರಾದವರ
ಅನುಗ್ರಹದಿಂದಲೇ ಕೆಳಗಿನವರಿಗೆ ದೊರಕುತ್ತದೆಯೇ ಹೊರತು ಬೇರೆ ರೀತಿಯಾಗಿ ಅಲ್ಲ.
[ಉದಾಹರಣೆಗೆ: ಋಷಿಗಳ ಅನುಗ್ರಹ ಇದ್ದರೆ ನಮಗೆ ಇದು ಸಿಗುತ್ತದೆ. ಋಷಿಗಳಿಗೆ ದೇವತೆಗಳ ಅನುಗ್ರಹ ಇದ್ದರೆ ಸಿಗುತ್ತದೆ. ತತ್ತ್ವಾಭಿಮಾನಿ
ದೇವತೆಗಳಿಗೆ ಬ್ರಹ್ಮಾದಿಗಳ ಅನುಗ್ರಹ ಇದ್ದರೆ ಸಿಗುತ್ತದೆ. ಆ ರೀತಿ ಹಿರಿಯರ ಆಶೀರ್ವಾದದಿಂದ
ಕಿರಿಯರಿಗೆ ಈ ಜ್ಞಾನ-ಮೋಕ್ಷ-ಮುಕ್ತಿಯಲ್ಲಿರತಕ್ಕಂತಹ ಭೋಗ ಇತ್ಯಾದಿ ದೊರಕುತ್ತದೆ.
ನಾರಾಯಣನು ಎಲ್ಲರಿಗೂ ಯಾವಾಗಲೂ ನಿಯಾಮಕನಾಗಿದ್ದಾನೆ. ಉಳಿದವರೆಲ್ಲರೂ ಅವನ
ಅಧೀನವಾಗಿದ್ದಾರೆ].
ಈ ಎಲ್ಲಾ ಕಾರಣದಿಂದ ತಾರತಮ್ಯವು ತಿಳಿಯಲ್ಪಡಬೇಕಾಗಿದೆ.
ಹಾಗೆಯೇ ಪರಮಾತ್ಮನ ಸರ್ವೋತ್ತಮತ್ವವನ್ನೂ
ತಿಳಿದಿರಬೇಕು. ಇವೆರಡನ್ನು ಬಿಟ್ಟು
ಯಾರಿಗೂ ಮುಕ್ತಿ ಪ್ರಾಪ್ತಿಯಾಗುವುದಿಲ್ಲ.
‘ಪಞ್ಚಭೇದಾಂಶ್ಚ
ವಿಜ್ಞಾಯ ವಿಷ್ಣೋಃ ಸ್ವಾಭೇದಮೇವ ಚ ।
‘ನಿರ್ದ್ದೋಷತ್ವಂ
ಗುಣೋದ್ರೇಕಂ ಜ್ಞಾತ್ವಾ ಮುಕ್ತಿರ್ನ್ನಚಾನ್ಯಥಾ ॥೧.೮೧॥
ಐದು ಭೇದಗಳನ್ನು ತಿಳಿದು, ಭಗವಂತನ (ನಾರಾಯಣನ) ಸಮಸ್ತ ರೂಪಗಳಿಗೂ ಮತ್ತು
ಭಗವಂತನ ಸ್ವರೂಪಕ್ಕೂ ಅಭೇದವನ್ನು ತಿಳಿದು, ಪರಮಾತ್ಮನಿಗೆ ದೋಷ ಇಲ್ಲಾ ಎಂದು ತಿಳಿದು ಮತ್ತು ಭಗವಂತ
ಸಮಸ್ತ ಗುಣಗಳಿಂದ ಉತ್ಕೃಷ್ಟನಾಗಿದ್ದಾನೆ ಎಂದು ತಿಳಿದಾಗಲೇ ಮುಕ್ತಿಯು. ಬೇರೆ ರೀತಿಯಾಗಿ ಇಲ್ಲ.
‘ಅವತಾರಾನ್
ಹರೇರ್ಜ್ಞಾತ್ವಾ ನಾವತಾರಾ ಹರೇಶ್ಚ ಯೇ ।
‘ತದಾವೇಶಾಂಸ್ತಥಾ
ಸಮ್ಯಗ್ ಜ್ಞಾತ್ವಾ ಮುಕ್ತಿರ್ನ್ನಚಾನ್ಯಥಾ ॥೧.೮೨॥
ಪರಮಾತ್ಮನ ಅವತಾರಗಳನ್ನು ತಿಳಿದು, ಯಾವುದು ಅವತಾರಗಳಲ್ಲವೋ
ಅದನ್ನೂ ತಿಳಿದು, ಪರಮಾತ್ಮನ ಆವೇಶಾವತಾರ* ಯಾವುದೆಂದು ಚೆನ್ನಾಗಿ ತಿಳಿದಾಗ ಮುಕ್ತಿಯು. ಬೇರೆ ರೀತಿಯಾಗಿ
ಅಲ್ಲ.
[*ಬಲರಾಮನಲ್ಲಿ ಭಗವಂತನ ಆವೇಶಾವತಾರ, ಪೃಥುವಿನಲ್ಲಿ
ಆವೇಶಾವತಾರ, ಇವೆಲ್ಲವೂ ಸ್ಫುಟವಾಗಿ ಅಧ್ಯಯನ ಮಾಡಿದರೆ ಮಾತ್ರ ತಿಳಿಯುವ ವಿಷಯ. ಇಲ್ಲದಿದ್ದರೆ ಭಗವಂತನ
ಗುಣೋದ್ರೇಕದ ಅರಿವೇ ಬರುವುದಿಲ್ಲ! ಉದಾಹರಣೆಗೆ
ಬಲರಾಮ ತಪ್ಪು ಮಾಡುವುದನ್ನು ನಾವು ಕಾಣುತ್ತೇವೆ. ಆತ ದುರ್ಯೋಧನನ ಪಕ್ಷ ವಹಿಸಿ ಅಂತಹ ತತ್ತ್ವವನ್ನು
ಸಮರ್ಥಿಸುವುದನ್ನು ನಾವು ಕಾಣುತ್ತೇವೆ. ಈ ರೀತಿ ಆತ ತಪ್ಪು ಮಾಡುವಾಗ
ಪರಮಾತ್ಮನ ಯಥಾರ್ಥ ಜ್ಞಾನ ಎನ್ನುವ ಗುಣ
ಅಲ್ಲಿರಲಿಲ್ಲಾ ಎಂದಾಗುತ್ತದೆ. ಅದರಿಂದಾಗಿ ಅದು
ಪರಮಾತ್ಮನ ಆವೇಶಾವಾತಾರ. ಹೀಗಾಗಿ ಯಾವಾಗಲೂ ಅದರ ಅಭಿವ್ಯಕ್ತಿ
ಆ ಜೀವದಲ್ಲಿ ಇರುವುದಿಲ್ಲ ಎಂದು ತಿಳಿಯುತ್ತದೆ].
‘ಸೃಷ್ಟಿರಕ್ಷಾಹೃತಿಜ್ಞಾನನಿಯತ್ಯಜ್ಞಾನಬನ್ಧನಾನ್
।
‘ಮೋಕ್ಷಂ ಚ
ವಿಷ್ಣುತಸ್ತ್ವೇವ ಜ್ಞಾತ್ವಾ ಮುಕ್ತಿರ್ನ್ನಚಾನ್ಯಥಾ ॥೧.೮೩॥
ಈ ಪ್ರಪಂಚದ ಸೃಷ್ಟಿ, ಪಾಲನೆ, ಜ್ಞಾನ , ನಿಯಮನ , ಬಂಧನ, ಇವುಗಳೆಲ್ಲವೂ ಕೂಡಾ ಆ
ನಾರಾಯಣನಿಂದ ಎಂದು ತಿಳಿದೇ ಮುಕ್ತಿಯು. ಬೇರೆ ರೀತಿಯಾಗಿ ಇಲ್ಲ.
‘ವೇದಾಂಶ್ಚ
ಪಞ್ಚರಾತ್ರಾಣಿ ಸೇತಿಹಾಸಪುರಾಣಕಾನ್ ।
‘ಜ್ಞಾತ್ವಾ
ವಿಷ್ಣುಪರಾನೇವ ಮುಚ್ಯತೇ ನಾನ್ಯಥಾ ಕ್ವಚಿತ್ ॥೧.೮೪॥
ವೇದಗಳು,
ಪಂಚರಾತ್ರಗಳು, ಇತಿಹಾಸ-ಪುರಾಣ ಇತ್ಯಾದಿಗಳು ನಾರಾಯಣ ಪ್ರತಿಪಾದಕವಾಗಿದೆ ಎಂದು ತಿಳಿದೇ
ಜೀವ ಬಿಡುಗಡೆಯನ್ನು ಹೊಂದುತ್ತಾನೆ. ಬೇರೆ ರೀತಿಯಾಗಿ ಅಲ್ಲ.
ಹೀಗೆ ಮುಕ್ತಿ ಎನ್ನುವುದು ಪರಮಾತ್ಮನ ಗುಣಾಧಿಕ್ಯ ಜ್ಞಾನದಿಂದ ಸಿಗುವಂತಹದ್ದೇ ಹೊರತು ಬೇರೆ ರೀತಿ ಅಲ್ಲ.
[ಮುಂದಿನ ಶ್ಲೋಕಗಳಲ್ಲಿ ಆಚಾರ್ಯರು ಭಕ್ತಿ ಅಂದರೆ ಏನು
ಎನ್ನುವುದನ್ನು ವಿವರಿಸಿದ್ದಾರೆ].
‘ಮಾಹಾತ್ಮ್ಯಜ್ಞಾನಪೂರ್ವಸ್ತು
ಸುದೃಢಃ ಸರ್ವತೋsಧಿಕಃ ।
‘ಸ್ನೇಹೋ
ಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನ್ನಚಾನ್ಯಥಾ
॥೧.೮೫॥
ಪರಮಾತ್ಮನು ದೊಡ್ಡವನು ಎನ್ನುವ ಜ್ಞಾನ ಗಟ್ಟಿಯಾಗಿ ಇರಬೇಕು. ಎಲ್ಲಕ್ಕಿಂತ ಮಿಗಿಲಾಗಿ ದೇವರಲ್ಲಿ ಸ್ನೇಹ-ಪ್ರೀತಿ ಇರಬೇಕು. ಇವೆರಡು ಸೇರಿದರೆ ಅದು ಭಕ್ತಿಯಾಗುತ್ತದೆ. ಭಕ್ತಿಯಿಂದಲೇ ಮುಕ್ತಿಯು. ಬೇರೆ ರೀತಿಯಾಗಿ ಇಲ್ಲ.
[ಭಕ್ತಿ ಇಲ್ಲದೇ ಹೋದರೂ ಕೂಡಾ ದೇವರು ಮುಕ್ತಿ ಕೊಡುತ್ತಾನೆ, ದ್ವೇಷದಿಂದ ಮುಕ್ತಿ,
ಇತ್ಯಾದಿಯಾದ ಅನೇಕ ತಪ್ಪು ವಾದಗಳು ಬಂದಿದ್ದವು.
ಅದಕ್ಕಾಗಿ ಆಚಾರ್ಯರು ಇಲ್ಲಿ ‘ಮೋಕ್ಷಮಾರ್ಗದಲ್ಲಿ ಭಕ್ತಿಯ ಮಹತ್ವ ಏನು’ ಎನ್ನುವುದನ್ನು
ಸ್ಪಷ್ಟಪಡಿಸುತ್ತಾ, ಭಕ್ತಿ ಅಲ್ಲದೇ ಮುಕ್ತಿಗೆ ಇನ್ನ್ಯಾವುದೂ ಸಾಧನ ಅಲ್ಲಾ ಎನ್ನುವ ಮಾತನ್ನು
ಹೇಳಿದ್ದಾರೆ]
[ಮೇಲಿನ ವಿವರಣೆಯನ್ನು ನೋಡಿದಾಗ ಭಕ್ತಿ ಎಲ್ಲರಿಗೂ ಏಕೆ
ಇರುವುದಿಲ್ಲ ಎನ್ನುವ ಪ್ರಶ್ನೆ ಬರುತ್ತದೆ. ಈ
ಪ್ರಶ್ನೆಗೆ ಆಚಾರ್ಯರೇ ಉತ್ತರ ನೀಡಿದ್ದಾರೆ]
‘ತ್ರಿವಿಧಾ
ಜೀವಸಙ್ಘಾಸ್ತು ದೇವಮಾನುಷದಾನವಾಃ ।
‘ತತ್ರ ದೇವಾ
ಮುಕ್ತಿಯೋಗ್ಯಾ ಮಾನುಷೇಷೂತ್ತಮಾಸ್ತಥಾ ॥೧.೮೬॥
‘ಮದ್ಧ್ಯಮಾ ಮಾನುಷಾ ಯೇ ತು ಸೃತಿಯೋಗ್ಯಾಃ ಸದೈವ ಹಿ ।
‘ಅಧಮಾ ನಿರಯಾಯೈವ
ದಾನವಾಸ್ತು ತಮೋಲಯಾಃ ॥೧.೮೭॥
ದೇವತೆಗಳು, ಮನುಷ್ಯರು ಮತ್ತು ದಾನವರು ಎಂದು ಜೀವರಲ್ಲಿ ಮೂರು
ವಿಧ. ದೇವತೆಗಳು ಮತ್ತು ಮನುಷ್ಯರಲ್ಲಿ ಉತ್ತಮರು
ಮುಕ್ತಿ ಯೋಗ್ಯರಾಗಿರುತ್ತಾರೆ. [ಮನುಷ್ಯರಲ್ಲಿ ಉತ್ತಮ ಮನುಷ್ಯ, ಮಧ್ಯಮ ಮನುಷ್ಯ ಮತ್ತು ಅಧಮ
ಮನುಷ್ಯ ಎಂದು ಮೂರು ವಿಧ. ಇವರಲ್ಲಿ ಉತ್ತಮ ಮನುಷ್ಯ
ದೇವತೆಗಳಂತೆ ಮೋಕ್ಷ ಯೋಗ್ಯರಾಗಿರುತ್ತಾರೆ]
ಮಧ್ಯಮ ಮನುಷ್ಯರು ಸಂಸಾರಕ್ಕೆ, ಮನುಷ್ಯಾಧಮರು ನರಕಕ್ಕೆ ಮತ್ತು ದಾನವರು ತಮಸ್ಸಿನಲ್ಲೇ ಇರುತ್ತಾರೆ.
ಇವಿಷ್ಟು ಜೀವನದಲ್ಲಿ ನಾವು ಅನಿವಾರ್ಯವಾಗಿ ತಿಳಿದುಕೊಳ್ಳಬೇಕಾದ ಸಂಗತಿ.
[ಮೂರು ತರಹದ ಜೀವರಲ್ಲಿ ಮುಕ್ತಿಯೋಗ್ಯರು ಭಕ್ತಿ ಮಾಡುತ್ತಾರೆ. ಮುಕ್ತಿಯೋಗ್ಯರಲ್ಲದವರು ಪರಮಾತ್ಮನನ್ನು ದ್ವೇಷ ಮಾಡುತ್ತಾರೆ. ಮಧ್ಯಮರು ಪರಮಾತ್ಮನನ್ನು ಒಮ್ಮೊಮ್ಮೆ ಪ್ರೀತಿಸುತ್ತಾರೆ,
ಒಮ್ಮೊಮ್ಮೆ ದ್ವೇಷಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಹಾಭಾರತವನ್ನು ನಾವು ನೋಡಿದರೆ, ಅಲ್ಲಿ
ಇದಕ್ಕನುಗುಣವಾದ ಪಾತ್ರಗಳನ್ನು ಕಾಣುತ್ತೇವೆ. ಅಲ್ಲಿ ದುರ್ಯೋಧನಾದಿಗಳು ದ್ವೇಷವನ್ನೇ ಮಾಡಿದರೆ, ಪಾಂಡವಾದಿಗಳು
ಭಕ್ತಿಯನ್ನೇ ಮಾಡುತ್ತಾರೆ. ಇದಲ್ಲದೆ ಎರಡೂ ಕಡೆ ಮನಸ್ಸು ತೊಯ್ದಾಡುತ್ತಿರುವವರನ್ನೂ ನಾವಲ್ಲಿ
ನೋಡುತ್ತೇವೆ. ಈ ತ್ರಿವಿಧ ಜೀವ ಸಂಗದ
ಚಿಂತನೆಯನ್ನು ಇಟ್ಟುಕೊಂಡು ನೋಡಿದಾಗ ಮಹಾಭಾರತದ ಓಘ (ನಡೆ), ಅದು ಏಕೆ ಆ ರೀತಿ ಇದೆ
ಎನ್ನುವುದು ತಿಳಿಯುತ್ತದೆ. ಭಗವಂತನ ಭಕ್ತಿ ಎನ್ನುವುದು ಕೇಂದ್ರ.
ಅದನ್ನಿಟ್ಟುಕೊಂಡು ಇಡೀ ಮಹಾಭಾರತದ ಕಥೆ ಹೊರಟಿದೆ ಎನ್ನುವುದು ತಿಳಿಯುತ್ತದೆ. ಅಷ್ಟೇ ಅಲ್ಲ, ಜಗತ್ತಿನ ವೈಚಿತ್ರ್ಯಗಳಿಗೂ ನಮಗಿಲ್ಲಿ ಉತ್ತರ
ಸಿಗುತ್ತದೆ.].
No comments:
Post a Comment